ಕಾಶ್ಮೀರಿಗಳು ಹೊತ್ತಿರುವ ಶಿಲುಬೆ
-

ಈಹಿಂದೆ ಕಾಶ್ಮೀರದಲ್ಲಿ ತಪ್ಪುಸುದ್ದಿಗಳು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಕೆಲವು ಬಾರಿ ಸುದ್ದಿಗಳ ಸಾರವನ್ನು ಮತ್ತು ಕೆಲವೊಮ್ಮೆ ಕೆಲವು ಸುದ್ದಿತಾಣಗಳನ್ನೇ ನಿಷೇಧಿಸಿರುವುದುಂಟು. ಆದರೆ ಈಗ ಹೇರಲಾಗಿರುವ ನಿಷೇಧ ಹಿಂದಿನ ನಿಷೇಧಗಳ ತರದ್ದಲ್ಲ. ಕಾಶ್ಮೀರಿ ಹೋರಾಟಗಾರರು ಪರಸ್ಪರ ಸಂಪರ್ಕವಿಟ್ಟುಕೊಂಡು ಸಂಘಟಿತರಾಗ ಬಾರದೆಂಬುದು ಮತ್ತು ಹಲವು ಮಾನವ ಹಕ್ಕು ಉಲ್ಲಂಘನೆಗಳನ್ನು ಬಟಾಬಯಲು ಮಾಡುವ ಪ್ರತಿಭಟನೆಗಳ ವೀಡಿಯೊಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ತಡೆಗಟ್ಟುವುದೇ ಈ ಬಾರಿ ಸಾಮಾಜಿಕ ಮಾಧ್ಯಮಗಳ ಮೇಲೆ ಒಂದು ತಿಂಗಳ ಕಾಲ ವಿಧಿಸಿರುವ ನಿಷೇಧದ ಉದ್ದೇಶ ಎಂಬುದು ಸ್ಪಷ್ಟ.
ಹಾಗೆ ನೋಡಿದರೆ ಕಾಶ್ಮೀರದ ಒಂದು ಇಡೀ ಪೀಳಿಗೆಯೇ ಸರಕಾರದ ಪಶ್ಚಾತ್ತಾಪ ರಹಿತ ಹಿಂಸೆ ಮತ್ತು ಸೆನ್ಸಾರ್‌ಶಿಪ್‌ಗಳ ಜೊತೆಜೊತೆಗೆ ಬೆಳೆದಿದ್ದಾರೆ. ಹಾಗಿದ್ದರೂ ಭಾರತದ ಪ್ರಭುತ್ವವನ್ನು ಕಾಶ್ಮೀರಿಗಳು ಹೇಗೆ ಪರಿಭಾವಿಸುತ್ತಾರೆ ಎಂಬುದಕ್ಕೆ ನಿದರ್ಶನಗಳಂತಿರುವ ಈ ಕಥನಗಳು ಹರಡುವುದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವ ಮಟ್ಟಕ್ಕೆ ಇಳಿಯಬಲ್ಲವೆಂಬುದಕ್ಕೆ ಈ ಬೆಳವಣಿಗೆಯು ಮತ್ತೊಂದು ಪುರಾವೆಯನ್ನು ಒದಗಿಸಿದೆ. ಕಾಶ್ಮೀರದಲ್ಲಿರುವ ಅತ್ಯಧಿಕ ಪ್ರಮಾಣದ ಸೈನಿಕ ಗಸ್ತಿನ ಜೊತೆಜೊತೆಗೆ ಇದೂ ಸಹ ಸೇರಿಕೊಂಡಿದೆ. ಏಕೆಂದರೆ ಇದು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಮತ್ತು ತಪ್ಪು ಸುದ್ದಿ ಹರಡುವಿಕೆಯ ನಿಷೇಧವೆಂಬ ಭಾಷೆಯಲ್ಲಿ ನೇಯ್ದಿದ್ದರೂ ಸಾರಾಂಶದಲ್ಲಿ ಕಾಶ್ಮೀರಿಗಳ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಆದೇಶವೇ ಆಗಿದೆ. ಈ ಆದೇಶವನ್ನು ‘‘ಸತ್ಯಾಸತ್ಯತೆಯನ್ನು ಪರಿಶೀಲಿಸದ, ಆಕ್ಷೇಪಾರ್ಹ ಮತ್ತು ಪ್ರಚೋದನಾತ್ಮಕ ಸುದ್ದಿಸಾರಗಳಿಂದ ಕಾಶ್ಮೀರಿಗಳನ್ನು ಬಚಾವು ಮಾಡುವ ಉದ್ದೇಶದಿಂದಲೇ ತರಲಾಗಿದೆ’’ ಎಂದು ಹೇಳಲಾಗಿದೆ. ಆದರೆ ಈ ಕಲ್ಲು ತೂರುವ ಹೋರಾಟಗಳು ಮತ್ತು ಪ್ರತಿಭಟನೆಯ ದೃಶ್ಯಾವಳಿಗಳು ಸರಕಾರದ ವಿರೋಧಿಯಾದದ್ದೇ ವಿನಃ ‘‘ಸಮಾಜದ ವಿರೋಧಿಯೂ’’ ಅಲ್ಲ ಅಥವಾ ‘‘ಸಾರ್ವಜನಿಕ ವಿರೋಧಿಯೂ’’ ಅಲ್ಲವೆಂಬುದನ್ನು ಸರಕಾರವು ಮರೆಮಾಚುತ್ತಿದೆ.
ಮೇಲಾಗಿ ಸರಕಾರವು ಕಾಶ್ಮೀರದ ಯಾವ ‘‘ಸತ್ಯಾಸತ್ಯತೆಯನ್ನು ಪರಿಶೀಲಿಸದ’’ ಸುದ್ದಿಗಳನ್ನು ಉದ್ದೇಶಿಸಿ ಈ ಕ್ರಮವನ್ನು ತೆಗೆದುಕೊಂಡಿದೆ? ಎಪ್ರಿಲ್ 9 ರಂದು ನಡೆದ ಲೋಕಸಭಾ ಉಪಚುನಾವಣೆಯ ವೇಳೆಯಲ್ಲಿ ನೂರಾರು ವೀಡಿಯೊಗಳು ವೈರಲ್ ಆದವು. ಅದರಲ್ಲಿನ ಚಿತ್ರಗಳು ಸ್ಪಷ್ಟವಾಗಿರುತ್ತಿರಲಿಲ್ಲ, ಸ್ಥಿರವಾಗಿರುತ್ತಿರಲಿಲ್ಲ ಮತ್ತು ಅದರಲ್ಲಿ ಗುಂಡುಗಳ ಸದ್ದುಗಳು ಮತ್ತು ಜನರ ಆಕ್ರಂದನಗಳ ಸದ್ದುಗಳೂ ಕೇಳುತ್ತಿದ್ದವು. ಇವು ಕಾಶ್ಮೀರಿಗಳ ಮತ್ತು ಅಲ್ಲಿ ನಿಯೋಜಿಸಲಾದ ಸೈನಿಕರ ನಡುವಿನ ‘ಒಡನಾಟಗಳು’ ಹೇಗಿರುತ್ತವೆಂಬುದರ ಚಿತ್ರಣವನ್ನು ನಮಗೆ ಕೊಡುತ್ತವೆ. ಇದರಲ್ಲಿ ಒಂದು ತನ್ನ ಮೃತ ಸಹೋದರನ ದೇಹವನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ವಾಹನವನ್ನು ಪೊಲೀಸರು ತಡೆಗಟ್ಟಿದಾಗ 17 ವರ್ಷದ ತರುಣನೊಬ್ಬ ಪೇಸ್‌ಬುಕ್ ಲೈವ್‌ನ ಮೂಲಕ ಹೊರ ಜಗತ್ತಿಗೆ ನೇರವಾಗಿ ಬಿತ್ತರಿಸಿದ ಚಿತ್ರಗಳಾಗಿದ್ದವು. ಮತ್ತೊಂದು ದೃಶ್ಯಾವಳಿ, ಮಿಲಿಟೆಂಟ್‌ಗಳ ಜೊತೆ ಗುಂಡಿನ ಚಕಮಕಿಯಲ್ಲಿ ತೊಡಗಿದ್ದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರುತ್ತಾ ಗುಂಡಿನ ಪೆಟ್ಟಿಗೆ ಗುರಿಯಾದ ಯುವಕನೊಬ್ಬ ತೆಗೆದ ದೃಶ್ಯಗಳ ನೇರಪ್ರಸಾರವಾಗಿತ್ತು. ಭಾರತದ ಭದ್ರತಾ ಪಡೆಗಳ ಸಹನೆ ಮತ್ತು ನಿಗ್ರಹದ ಪೊಳ್ಳುತನವನ್ನು ಬಯಲುಗೊಳಿಸಲು ಕಾಶ್ಮೀರದ ಯುವ ಸಮುದಾಯ ಈ ವೀಡಿಯೊವನ್ನು ವಿಸ್ತೃತವಾಗಿ ಬಳಸಿದರು. ಮತ್ತೊಂದೆಡೆ ಭಾರತದ ಜನತೆಯ ಮನಸ್ಸಿನಲ್ಲಿ ಕ್ರಾಲ್‌ಪೋರಾದಲ್ಲಿ ಕಾಶ್ಮೀರಿ ಯುವಕನೊಬ್ಬ ಸಿಆರ್‌ಪಿಎಫ್‌ನ ಯೋಧನೊಬ್ಬನನ್ನು ಕೆಣಕುತ್ತಿದ್ದ ವೀಡಿಯೊ ದೃಶ್ಯ ಮಾತ್ರ ಉಳಿದುಕೊಂಡಿತು.
ಸಾಮಾಜಿಕ ಮಾಧ್ಯಮಗಳಲ್ಲಿ ಸರ್ವರಿಗೂ ಸಮಾನ ಅವಕಾಶಗಳಿವೆಯೆಂದು ಹೇಳಲಾಗುತ್ತಿದ್ದರೂ ಅಲ್ಲಿಯೂ ಸಹ ದೇಹಬಲದ ರೀತಿಯಲ್ಲಿ ಸಂಖ್ಯೆಗಳ ಮೇಲಾಟವೇ ಮೇಲುಗೈ ಪಡೆಯುತ್ತದೆ. ಹಲವಾರು ಬಾರಿ ಅಂತಹ ಖಾತೆಗಳನ್ನು ಸರಕಾರದ ಐಟಿ ಕೋಶಗಳು (ಸೆಲ್) ದುಡ್ಡು ಕೊಟ್ಟು ನಡೆಸುತ್ತವೆ. ಆದರೂ ಸಿಆರ್‌ಪಿಎಫ್‌ನ ಇನ್‌ಸ್ಪೆಕ್ಟರ್, ‘‘ತನಿಖೆಯಲ್ಲಿ ಈ ವೀಡಿಯೊ ಅಧಿಕೃತವಾದದ್ದು ಎಂದು ತಿಳಿದು ಬಂದಿತು’’ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. ಆದರೆ ಸೈನಿಕರು ನಡೆಸಿರುವ ಅತ್ಯಾಚಾರಗಳ ಇತರ ದೃಶ್ಯಾವಳಿಗಳ ಅಧಿಕೃತತೆಯ ಬಗ್ಗೆ ಏಕೆ ಇಂತಹ ತನಿಖೆಗಳನ್ನು ನಡೆಸುವುದಿಲ್ಲ? ಕೆಲವು ವಿಶ್ಲೇಷಕರು ಗುರುತಿಸಿರುವಂತೆ ಸಿಆರ್‌ಪಿಎಫ್ ಯೋಧರ ಬಗ್ಗೆ ಇರುವ ವೀಡಿಯೊ ದೃಶ್ಯಾವಳಿಗಳಲ್ಲಿ ಕನಿಷ್ಠ ನಾಲ್ಕು ಜನರು ‘‘ಯೋಧರಿಗೆ ಹಾನಿ ಮಾಡಬೇಡಿ’’ ಎಂದು ಹೇಳುತ್ತಿರುವ ಧ್ವನಿಗಳಿವೆ. ಒಂದು ಚಲನ ಚಿತ್ರದ ದೃಶ್ಯಾವಳಿಗಳನ್ನು ಚಿತ್ರಿಸಿದಾಗ ಈ ಎಲ್ಲಾ ಪದರಗಳೂ ದಾಖಲಾಗುತ್ತವೆ. ಆದರೆ ವೀಡಿಯೊಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಾ ಹೋದಂತೆ ಈ ಪದರುಗಳು ಇಲ್ಲವಾಗುತ್ತಾ ಹೋಗುತ್ತವೆ.
ಒಂದೋ ಇಂತಹ ದೃಶ್ಯಾವಳಿಗಳ ಸತ್ಯಾಸತ್ಯೆಗಳ ಇಡಿಯಾದ ಪರಿಶೀಲನೆ ಸಾಧ್ಯ ಅಥವಾ ಯಾವ ಪರಿಶೀಲನೆಯೂ ಸಾಧ್ಯವಿಲ್ಲವೆಂಬ ನಂಬಿಕೆ ಚಾಲ್ತಿಯಲ್ಲಿದೆ. ಆದರೆ ವಾಸ್ತವ ಹಾಗೇನೂ ಇಲ್ಲ. ಜಗತ್ತಿನ ಹಲವಾರು ಕಡೆಗಳಲ್ಲಿ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡುವ ಮಾರ್ಗಗಳನ್ನು ಅನುಸರಿಸುತ್ತಾರೆ. ‘‘ವಾಟ್ಸ್ ಆ್ಯಪ್ ವೀಡಿಯೊ’’ಗಳು ನೀಡುವ ತತ್‌ತಕ್ಷಣದ ಅಧಿಕೃತತೆಯನ್ನು ಜನ ಸತ್ಯದ ಪುರಾವೆಯೆಂದು ಭಾವಿಸುತ್ತಾರೆ. ಇಂತಹ ವೀಡಿಯೊಗಳನ್ನು ಹಂಚಿಕೊಳ್ಳಲು ವ್ಯಕ್ತವಾಗುವ ಪ್ರೇರಣೆಯೊಂದೇ. ಮುಖ್ಯವಾಹಿನಿ ಮಾಧ್ಯಮಗಳು ನಿಜವೆಂದು ಬಿತ್ತರಿಸುವ ಸತ್ಯಗಳನ್ನು ಬುಡಮೇಲು ಮಾಡುತ್ತೇವೆಂಬ ಕಥನ. ರಾಜಕೀಯ ಭಿತ್ತಿಯ ಯಾವ ಕಡೆಗೆ ಸೇರಿದವರಾಗಿದ್ದರೂ, ಅವರ ಪ್ರಕಾರ ಮುಖ್ಯವಾಹಿನಿ ಎಂಬುದರ ಅರ್ಥ ಏನೇ ಆಗಿದ್ದರೂ ದೃಶ್ಯಾವಳಿಗಳ ಹಂಚಿಕೆಯ ಹಿಂದಿನ ಕಥನ ಮಾತ್ರ ಇದೇ ಆಗಿರುತ್ತದೆ. ಆದರೆ ಅದರ ಅಧಿಕೃತತೆಯ ಧಿರಿಸಿನಿಂದಾಗಿಯೇ ಅವನ್ನು ಮತ್ತಷ್ಟು ಪ್ರಚಾರಗಳಿಗಾಗಿ ಬಳಸಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ.
ಆದರೆ ಸರಕಾರವೊಂದು ವದಂತಿಗಳನ್ನು ಹಬ್ಬಿಸುವ ವಾಟ್ಸ್ ಆ್ಯಪ್ ಬಳಕೆದಾರನಂತೆ ವರ್ತಿಸುತ್ತಾ ತನ್ನ ಸೈದ್ಧಾಂತಿಕ ನಿಲುವುಗಳಿಗೆ ಸರಿಹೊಂದುವ ದೃಶ್ಯಗಳ ಸತ್ಯಾಸತ್ಯತೆಗಳನ್ನು ಮಾತ್ರ ಪರಿಶೀಲಿಸುತ್ತಾ ಉಳಿದವುಗಳ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ಸುಳ್ಳುಸುದ್ದಿಗಳನ್ನು ಹರಡುವುದನ್ನು ತಡೆಗಟ್ಟುವುದರ ಬಗ್ಗೆ ಗಂಭೀರವಾಗಿರುವ ಸರಕಾರವೊಂದು, ಸುಳ್ಳು ಸುದ್ದಿಗಳನ್ನು ನಿಗ್ರಹಿಸಲು ಐರೋಪ್ಯ ಒಕ್ಕೂಟವು ಮಾಡುತ್ತಿರುವಂತೆ, ದೃಶ್ಯಾವಳಿಗಳ ಸಂದರ್ಭವನ್ನು ಮತ್ತು ಅದರಲ್ಲಿ ಅಡಕವಾಗಿರುವ ಪದರಗಳನ್ನು ಗುರುತಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತದೆ. ಕಾಶ್ಮೀರಿ ಪ್ರತಿಭಟನೆಗಳ ಬಗ್ಗೆ ವೈರಲ್ ಆಗಿರುವ ವೀಡಿಯೊದಲ್ಲಿ ಸುಳ್ಳು ಸುದ್ದಿಯಿದೆಯೆಂದು ಸರಕಾರವು ಅನುಮಾನಿಸುತ್ತಿದ್ದರೆ ಆ ವೀಡಿಯೊದಲ್ಲಿ ತಪ್ಪಾಗಿ ತೋರಿಸಲ್ಪಟ್ಟಿರುವ ಸಂಗತಿಗಳು ಯಾವುವು- ದೃಶ್ಯಾವಳಿಗಳನ್ನು ತಿದ್ದಲಾಗಿದೆಯೇ ಅಥವಾ ಅವು ಬೇರೆ ಪ್ರದೇಶದ ದೃಶ್ಯಗಳೇ ಅಥವಾ ಹಳೆಯ ದೃಶ್ಯಗಳೇ ಎಂಬಿತ್ಯಾದಿಗಳ ಬಗ್ಗೆ ಜನರಿಗೆ ಹೇಳಬೇಕಾಗುತ್ತದೆ.
ಹಲವಾರು ಸಾರಿ ಮುಖ್ಯವಾಹಿನಿ ಪ್ರಕಾಶನ ಸಂಸ್ಥೆಗಳು ಸಹ ವೈರಲ್ ಆದ ವೀಡಿಯೊಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಆದರೆ ಅದು ಆ ಘಟನೆ ಸಂಭವಿಸಿದ ಜಾಗ ದುರ್ಗಮವಾಗಿರುವ ಕಾರಣದಿಂದಲೋ ಅಥವಾ ಅವುಗಳ ಸತ್ಯಾಸತ್ಯತೆಯನ್ನು ಒರೆಹಚ್ಚಲು ಬೇಕಾದ ವ್ಯವಸ್ಥೆ ಇಲ್ಲದಿದ್ದುದರಿಂದಲೋ ಸಂಭವಿಸುವುದಿಲ್ಲ. ಬದಲಿಗೆ ಸತ್ಯಾಸತ್ಯತೆಗಳನ್ನು ಒರೆಹಚ್ಚಿ ನೋಡಲು ಇರುವ ತಾಳ್ಮೆಯ ಕೊರತೆ ಮತ್ತು ಉತ್ತರದಾಯಿತ್ವದ ಕೊರತೆಗಳೇ ಬಹಳಷ್ಟು ಬಾರಿ ಇದಕ್ಕೆ ಕಾರಣವಾಗಿರುತ್ತವೆ. ಆದರೆ ಇಂತಹ ಸುಳ್ಳು ಸುದ್ದಿಗಳನ್ನು ಪತೆಹಚ್ಚುವುದರಲ್ಲಿ ತೊಡಗಿಕೊಂಡಿರುವ ಸ್ವತಂತ್ರ ಪತ್ತೆದಾರಿಗಳು ಬಹಳಷ್ಟು ಪೊಳ್ಳು ಫೋಟೊಗಳನ್ನು ಕೇವಲ ‘‘ರಿವರ್ಸ್ ಇಮೇಜ್ ಸರ್ಚ್’’ (ಹಿಮ್ಮುಗ ಚಿತ್ರ ಪರೀಕ್ಷೆ)ಯಿಂದಲೇ ಪತ್ತೆ ಹಚ್ಚಬಹುದೆಂದು ತೋರಿಸಿಕೊಟ್ಟಿದ್ದಾರೆ. ಬಹಳಷ್ಟು ಪಾಶ್ಚಿಮಾತ್ಯ ದೇಶಗಳು ಇಂತಹ ಪರೀಕ್ಷಾ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಒಂದು ಸಂದೇಶವನ್ನು ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿಕೊಳ್ಳಬೇಕೆಂಬ ಸಂಸ್ಕೃತಿಯು ಹರಡಬೇಕೆಂದರೆ ಮೊದಲು ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ವೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಆದರೆ ಇದು ಅಸಂಭವ. ಉದಾಹರಣೆಗೆ ಭಾರತೀಯ ಜನತಾ ಪಕ್ಷದ ಸದಸ್ಯನಾದ ಸಂಗೀತ್ ಸೋಮ್ ಅವರು 2013ರಲ್ಲಿ ಮುಝಫ್ಫರ್‌ನಗರದ ಗಲಭೆಗೆ ಮೂಲ ಕಾರಣವಾದ ಸುಳ್ಳು ವೀಡಿಯೊ ಒಂದನ್ನು ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತನ್ನ ಫೇಸ್‌ಬುಕ್ ಪೇಜಿನಲ್ಲಿ ಹಂಚಿಕೊಂಡ ಆರೋಪವನ್ನು ಎದುರಿಸುತ್ತಿದ್ದಾರೆ.
ಸರಕಾರದ ಐಟಿ ಸೆಲ್ ಮತ್ತು ಕೆಲವು ಮುಖ್ಯ ಅಧಿಕಾರಿಗಳು ಉತ್ತರದಾಯಿತ್ವವಿಲ್ಲದ ಪ್ರಚಾರ ಮತ್ತು ಅಧಿಕೃತ ವೌನಗಳ ಮೂಲಕ ಸುಳ್ಳು ಸುದ್ದಿಗಳ ಪ್ರಚಾರಕ್ಕೆ ಇಂಬುಗೊಟ್ಟಿದ್ದಾರೆ. ಆದರೆ ಅವರು ಸಾಮಾಜಿಕ ಮಾಧ್ಯಮಗಳ ಅಸ್ಥಿರ (ಪಜ್ಜಿ) ಸ್ವರೂಪವನ್ನು ಮುಂದುಮಾಡಿ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ಆಗಕೂಡದು. ಸರಕಾರವು ಮಾಡಿರುವ ಅಧಿಕಾರದ ದುರುಪಯೋಗವನ್ನು ಸಾಬೀತು ಮಾಡುವ ದೃಶ್ಯಾವಳಿಗಳನ್ನು ಹೊಂದಿರುವ ವೀಡಿಯೊಗಳನ್ನು ಕಾಶ್ಮೀರಿಗಳು ದೇಶದ ಮುಂದಿಟ್ಟಿದ್ದಾರೆ. ಆದರೆ ಸರಕಾರವು ಅವುಗಳ ಸತ್ಯಾಸತ್ಯತೆಗಳನ್ನು ನಿಖರವಾಗಿ ಪತ್ತೆಹಚ್ಚಲು ಅಸಾಧ್ಯವೆಂಬ ಕಥನವನ್ನು ಮುಂದಿಡುವುದರ ಮೂಲಕ ತನಗೆ ಸತ್ಯವನ್ನು ಅರಿತುಕೊಳ್ಳಲು ಯಾವುದೇ ಆಸಕ್ತಿಯಿಲ್ಲವೆಂದು ಮತ್ತೊಮ್ಮೆ ರುಜುವಾತು ಮಾಡಿದೆ.
Economic and Political Weekly
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.