ಶಿರ್ವ: ದೇವಸ್ಥಾನಕ್ಕೆ ಹೋಗುತ್ತಿದ್ದ ಮಹಿಳೆ ಬೈಕಿನಿಂದ ಬಿದ್ದು ಮೃತ್ಯು
ಶಿರ್ವ, ಆ.2: ನಾಗರಪಂಚಮಿ ಪ್ರಯುಕ್ತ ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಬೈಕಿನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಳ್ಳಿ- ಸೂಡಾ ರಸ್ತೆಯ ಮಕ್ಕೇರಿಬೈಲು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕಣಂಜಾರು ಗುಂಡಳಿಕೆ ನಿವಾಸಿ ತುಕ್ರ ಪೂಜಾರಿ ಎಂಬವರ ಮಗಳು ಪುಷ್ಪ(49) ಎಂದು ಗುರುತಿಸಲಾಗಿದೆ. ಇವರು ತನ್ನ ತಮ್ಮ ರಾಜೇಶ್ ಜೊತೆ ಮನೆಯಿಂದ ಬೈಕಿನಲ್ಲಿ ನಾಗರಪಂಚಮಿಯ ಪ್ರಯುಕ್ತ ಸೂಡಾ ದೇವಸ್ಥಾನಕ್ಕೆ ಹೋಗುತ್ತಿದ್ದರೆನ್ನಲಾಗಿದೆ.
ರಾಜೇಶ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿದ ಪರಿಣಾಮ ಹಿಂಬದಿ ಸವಾರಳಾಗಿ ಕುಳಿತಿದ್ದ ಪುಷ್ಪಾ ಆಯತಪ್ಪಿ ಬೈಕ್ನಿಂದ ರಸ್ತೆಗೆ ಮಗುಚಿ ಬಿದ್ದರು. ಇದರಿಂದ ತಲೆಗೆ ತೀವ್ರವಾಗಿ ಗಾಯಗೊಂಡು ಅವರು ಉಡುಪಿ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ದೂರಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story