ಯುವ ಬ್ಯಾಡ್ಮಿಂಟನ್‌ಪಟುಗಳಿಗೆ ವಿಮಲ್ ಕುಮಾರ್ ಸಲಹೆ-ಸೂಚನೆ

ಉಡುಪಿ : ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಭಾರತದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಬೆಂಗಳೂರಿನ ಯು.ವಿಮಲ್ ಕುಮಾರ್ ಅವರು ಇಂದು ಉಡುಪಿಗೆ ಭೇಟಿ ನೀಡಿದ್ದು, ಜಿಲ್ಲೆಯ ಕಿರಿಯ ಬ್ಯಾಡ್ಮಿಂಟನ್ ಆಟಗಾರರು ಹಾಗೂ ಅವರ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಸಲಹೆ- ಸೂಚನೆಗಳನ್ನು ನೀಡಿದರು.
ಪ್ರಕಾಶ್ ಪಡುಕೋಣೆಯವರ ನಂತರ ದೇಶದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರನಾಗಿ ಗುರುತಿಸಿಕೊಂಡಿದ್ದ ಭಾರತೀಯ ಬ್ಯಾಡ್ಮಿಂಟನ್ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಕನ್ನಡಿಗ ವಿಮಲ್‌ಕುಮಾರ್ ಬೆಂಗಳೂರಿನ ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ ಎಕ್ಸಲೆನ್ಸ್‌ನ ಸಹ ಸಂಸ್ಥಾಪಕರು.
ವಿಮಲ್‌ಕುಮಾರ್ ಅವರು ಇಂದು ಶಾಸಕ ಕೆ. ರಘುಪತಿ ಭಟ್ ಅವರೊಂದಿಗೆ ಅಜ್ಜರಕಾಡಿನಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಲ್ಲಿ ತರಬೇತಿಯಲ್ಲಿ ನಿರತರಾಗಿದ್ದ ಬ್ಯಾಡ್ಮಿಂಟನ್ ಆಟಗಾರರನ್ನು ಕಂಡು ಅವರಿಗೆ ಉಪಯುಕ್ತ ಸಲಹೆ, ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಕ್ರೀಡಾಪಟುಗಳ ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅರುಣ್ ಸೇರಿಗಾರ್, ಕೆ.ಆರ್. ಶೆಣೈ, ಅಶೋಕ್ ಪಣಿಯಾಡಿ, ನಿತಿನ್ ಪೈ ಹಾಗೂ ಐ ಸ್ಪೋರ್ಟ್ಸ್ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಬೆಂಗಳೂರು ಇದರ ಚೀಫ್ ಕೋಚ್ ಯಶು ಕುಮಾರ್, ಮಾಜಿ ರಾಷ್ಟ್ರೀಯ ಆಟಗಾರ ಸೊಹೇಲ್ ಅಮೀನ್ ಉಪಸ್ಥಿತರಿದ್ದರು.









