43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ಉದ್ಘಾಟನೆ

ಉಡುಪಿ, ನ.23: ಉಡುಪಿ ರಂಗಭೂಮಿ ವತಿಯಿಂದ ದಿ.ಡಾ.ಟಿಎಂಎ ಪೈ, ದಿ.ಎಸ್.ಎಲ್. ನಾರಾಯಣ ಭಟ್ ಮತ್ತು ದಿ.ಮಲ್ಪೆಮಧ್ವರಾಜ ಸ್ಮಾರಕ 43ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ-2022 ಉದ್ಘಾಟನೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.
12 ದಿನಗಳ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿದ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ಮಾತನಾಡಿ, ಕರಾವಳಿಯಲ್ಲಿ ಯಕ್ಷಗಾನಕ್ಕೆ ಇದ್ದ ಪ್ರೇರಣೆ ನಾಟಕಗಳಿಗೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ನಾಟಕಗಳಿಗೆ ಪ್ರೇರಣೆ ನೀಡುವ ಕಾರ್ಯವನ್ನು ರಂಗಭೂಮಿ ಮಾಡಿದೆ. ಇದರಿಂದ ಸಾಕಷ್ಟು ಕಲಾವಿದರು ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು.
ಉದ್ಯಮಿ ಸತ್ಯಾನಂದ ನಾಯಕ್, ವಿಶ್ವನಾಥ್ ಶೆಣೈ, ರವೀಂದ್ರ ಪೂಜಾರಿ, ಕೇರಳ ಸಮಾಜ ಸಂಘಟನೆಯ ಅಧ್ಯಕ್ಷ ಸುಗುಣ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ವಹಿಸಿದ್ದರು. ರಂಗಭೂಮಿ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಕಿದಿ ಯೂರು, ಎನ್. ರಾಜಗೋಪಾಲ್ ಬಲ್ಲಾಳ್ ಉಪಸ್ಥಿತರಿದ್ದರು.
ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿವಮೊಗ್ಗ ಶಿಕಾರಿಪುರ ರಂಗಜೀವಿಗಳು ತಂಡದಿಂದ ರಾಜೇಶ್ ಕುಂದರ್ ಬೈಕಾಡಿ ನಿರ್ದೇಶನದ ‘ಮಹಾಮಾಯಿ’ (ಜನಪದ) ನಾಟಕ ಪ್ರದರ್ಶನಗೊಂಡಿತು.







