ನ್ಯಾಯವಾದಿ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಕುಂದಾಪುರ ವಕೀಲರಿಂದ ಪ್ರತಿಭಟನೆ

ಕುಂದಾಪುರ: ಮಂಗಳೂರಿನ ಯುವ ವಕೀಲ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆಯ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಕುಂದಾಪುರ ವಕೀಲರ ಸಂಘದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಮಾತನಾಡಿ, ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ದೂರುದಾರರ ವಿರುದ್ದ ಪ್ರತಿಬಂಧ ಕಾಜ್ಞೆ ಇದ್ದರೂ ಕೂಡ ಸುಳ್ಳು ದೂರಿನ ಆಧಾರದ ಮೇಲೆ ಯುವ ವಕೀಲರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ ರಾತೋರಾತ್ರಿ ವಕೀಲರ ಮನೆಗೆ ಪ್ರವೇಶ ಮಾಡಿ ಮನೆಯಿಂದ ಎಳೆದುಕೊಂಡು ಹೋಗಿ ಪೊಲೀಸ್ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದರು.
ಬಂಟ್ವಾಳದ ನ್ಯಾಯಾಲಯ ಕೂಡ ಪೊಲೀಸರ ದೌರ್ಜನ್ಯವನ್ನು ತನಿಖೆ ಮಾಡಿ ವರದಿ ಕೊಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದು ನ್ಯಾಯಾಲಯದ ಆದೇಶದಂತೆ ಈ ಕೂಡಲೇ ತಪ್ಪಿತಸ್ಥ ಪೋಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಾಥ್ ರಾವ್, ಉಪಾಧ್ಯಕ್ಷೆ ಬೀನಾ ಜೊಸೆಫ್, ಜತೆ ಕಾರ್ಯದರ್ಶಿ ರಿತೇಶ್ ಬಿ., ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್, ಸಂಘದ ಪದಾಧಿ ಕಾರಿಗಳು ಉಪಸ್ಥಿತರಿದ್ದರು.







