ಮಲ್ಪೆ ಬೀಚ್ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯ
ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮರುಟೆಂಡರ್‌ಗೆ ನಿರ್ಣಯ

ಉಡುಪಿ: ಪ್ರಮುಖ ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪದಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸುತ್ತಿವೆ. ಆದರೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಮಲ್ಪೆ ಬೀಚ್‌ನ ಗುತ್ತಿಗೆದಾರ ರನ್ನು ಕಪ್ಪು ಪಟ್ಟಿಗೆ ಸೇರಿಸಿ ಮರುಟೆಂಡರ್ ಕರೆಯಬೇಕು ಎಂದು ಉಡುಪಿ ನಗರಸಭೆ ಸದಸ್ಯರು ಒತ್ತಾಯಿಸಿದ್ದಾರೆ.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಮಲ್ಪೆ ಬೀಚ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ನಾಲ್ಕು ಭಜನಾ ಮಂದಿರಗಳಿಗೆ ವಹಿಸಿ ಕೊಡಲಾಗಿದೆ. ಆದರೆ ಅವರು ಅದನ್ನು ಯಾರಿಗೆ ವಹಿಸಿಕೊಟ್ಟಿದ್ದಾರೆ ಎಂಬು ದನ್ನು ವಿಚಾರಿಸಬೇಕು. ಪ್ರವಾಸೋದ್ಯಮ ಉತ್ತೇಜನದ ಹೆಸರಿನಲ್ಲಿ ಪ್ರವಾಸಿಗ ರನ್ನು ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ಆಡಳಿತ ಪಕ್ಷದ ಸದಸ್ಯ ಯೋಗೀಶ್ ಸಾಲ್ಯಾನ್ ಮಾತನಾಡಿ, ಮಲ್ಪೆ ಬೀಚ್ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುದಾಗಿ ಪ್ರವಾಸೋದ್ಯಮ ಇಲಾಖೆ 2018ರಲ್ಲಿ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಮತ್ತೆ ಅವರಿಗೆ ಟೆಂಡರ್ ನೀಡಲಾಗಿದೆ. ನೀರಿಗೆ ಬಿದ್ದು ಸತ್ತವರ ಬಗ್ಗೆ ಇವರು ಕೇವಲವಾಗಿ ಮಾತನಾಡುತ್ತಾರೆ. ಇವರ ಟೆಂಡರ್ ರದ್ದುಗೊಳಿಸಿ, ಕಪ್ಪು ಪಟ್ಟಿಗೆ ಸೇರಿಸುವ ನಿರ್ಣಯ ಮಾಡಬೇಕು. ಮರು ಟೆಂಡರ್ ಕರೆಯುವ ಮೊದಲು 35ವಾರ್ಡ್ ಗಳ ಸದಸ್ಯರ ಸಭೆ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ರಘುಪತಿ ಭಟ್, ಸೈಂಟ್ ಮೇರಿಸ್‌ನಲ್ಲಿನ ಕ್ಯಾಮೆರಾ ಶುಲ್ಕವನ್ನು ರದ್ದುಗೊಳಿಸಿದ್ದೇವೆ. ಎರಡೆರಡು ಕಡೆ ಪಾರ್ಕಿಂಗ್ ಶುಲ್ಕ ಸೇರಿದಂತೆ ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆ ಹಿನ್ನೆಲೆಯಲ್ಲಿ ಆ ಟೆಂಡರ್ ರದ್ದು ಗೊಳಿಸಿ ಮರು ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಎಸ್‌ಟಿಪಿ ಮೇಲ್ದರ್ಜೆಗೇರಿಕೆ
ಕಲ್ಮಾಡಿ ಹೊಳೆ ಕಪ್ಪು ಬಣ್ಣಕ್ಕೆ ತಿರುಗಿದ್ದು ಈ ನೀರಿನಲ್ಲಿ ಯಾವುದೇ ಜಲಚರ ಗಳು ಬದುಕುತ್ತಿಲ್ಲ. ಒಳಚರಂಡಿ ಸಂಸ್ಕರಣಾ ಘಟಕ(ಎಸ್‌ಟಿಪಿ)ದಲ್ಲಿ ತ್ಯಾಜ್ಯ ನೀರನ್ನು ನೇರವಾಗಿ ಹೊಳೆಗೆ ಬಿಡಲಾಗುತ್ತಿದೆ. ಹೊಳೆ ತೀರದ ಜನ ಬದುಕಲು ಸಾಧ್ಯವಿಲ್ಲ. ನಮಗೆ ಕೆಟ್ಟದಾಗಿ ಬೈಯುತ್ತಾರೆ. ಇದನ್ನು ಸರಿ ಮಾಡಿ, ಇಲ್ಲವೇ ನಮಗೆ ವಿಷ ಕೊಡಿ ಎಂದು ನಗರಸಭಾ ಸದಸ್ಯ ಸುಂದರ್ ಕಲ್ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಎಸ್‌ಟಿಪಿಯನ್ನು ಮೇಲ್ದರ್ಜೆಗೆ ಏರಿಸ ಬೇಕಾಗಿದೆ. ಇದರಲ್ಲಿ ತುಂಬಿರುವ ರಾಡಿಯನ್ನು ತೆಗೆಯಲು 95ಲಕ್ಷ ರೂ. ಅಂದಾಜು ಮೊತ್ತ ತಯಾರಿಸಲಾಗಿದೆ. ದುರಸ್ತಿಗಾಗಿ 17ಕೋಟಿ ಅನುದಾನಕ್ಕಾಗಿ ರಾಜ್ಯ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಹಂತಹಂತವಾಗಿ ಎಸ್‌ಟಿಪಿಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಶಾಸಕ ರಘುಪತಿ ಭಟ್, ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿದೆ. ಅಲ್ಲಿಯವರೆಗೆ ಈ ಕಾಮಗಾರಿ ಮಾಡಲು ಆಗುವುದಿಲ್ಲ ಎಂದರು. ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಯ ವೆಚ್ಚ ಶೇ.36ರಷ್ಟು ಏರಿಕೆಯಾಗಿರುವುದರಿಂದ ಅನುದಾನದ ಕೊರತೆಯಾಗಿದೆ. ಈ ಕುರಿತು ನಿತೀನ್ ಗಡ್ಕರಿಗೆ ಮನವಿ ಸಲ್ಲಿಸ ಲಾಗಿದೆ. ಈ ತಿಂಗಳಲ್ಲಿ ಈ ಸಮಸ್ಯೆ ಪರಿಹಾರ ಆಗಬಹುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ನಗರ ಭೂಸಾರಿಗೆ ಇಲಾಖೆಯ ಡೆಲ್ಟ್ ಯೋಜನೆಯಡಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಿಂದ ಸಿಂಡಿಕೇಟ್ ಸರ್ಕಲ್‌ವರೆಗಿನ ಡಾ.ವಿ.ಎಸ್. ಆಚಾರ್ಯ ರಸ್ತೆಯನ್ನು ನಗರಾಭಿವೃದ್ಧಿ ಕೋಶದಿಂದ ಆಧುನಿಕ ಸೌಲಭ್ಯ ಗಳೊಂದಿಗೆ ಪಾದಾಚಾರಿ ಸ್ನೇಹಿ ಹಾಗೂ ಮಾದರಿ ರಸ್ತೆಯನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ಸಭೆಯಲ್ಲಿ ಕೋಶದ ಇಂಜಿನಿಯರ್ ಮೋಹನ್‌ರಾಜ್ ಹಾಗೂ ಯೋಜನೆ ತಾಂತ್ರಿಕ ಅಧಿಕಾರಿ ನಿಕಿತಾ ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು ಉಪಸ್ಥಿತರಿದ್ದರು.
ಸರಕಾರಿ ಜಾಗದಲ್ಲಿ ಅಕ್ರಮ ರೆಸಾರ್ಟ್: ಭಟ್
ಮಲ್ಪೆ ಬೀಚ್ ಗುತ್ತಿಗೆ ವಹಿಸಿಕೊಂಡವರು ತೊಟ್ಟಂವರೆಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ತೊಟ್ಟಂನಲ್ಲಿ ರೆಸಾರ್ಟ್ ಮಾಡಲಾಗಿದೆ. ಇದರ ವಿರುದ್ಧ ಸ್ಥಳೀಯರು ದೂರು ನೀಡುತ್ತಿದ್ದಾರೆ. ಇದರಲ್ಲಿ ಶಾಸಕರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ. ಈ ಗುತ್ತಿಗೆದಾರರಿಗೆ ಕಡಿವಾಣ ಹಾಕದಿದ್ದರೆ ಶಾಸಕರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ವಿಪಕ್ಷ ನಾಯಕ ರಮೇಶ್ ಕಾಂಚನ್ ಸಭೆಯಲ್ಲಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ತೊಟ್ಟಂನಲ್ಲಿ ಮಾಡಿರುವ ರೆಸಾರ್ಟ್ ಅಕ್ರಮ. ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ರೆಸಾರ್ಟ್ ಕಟ್ಟಿ ಕೊಂಡು ವ್ಯವಹಾರ ಮಾಡುತ್ತಿರುವುದು ಗೊತ್ತಿದೆ. ಅದನ್ನು ಬಂದ್ ಮಾಡಲು ಹೋದರೆ ಪ್ರತಿಭಟನೆ ಮಾಡುತ್ತಾರೆ. ಅದನ್ನು ನಾವು ವ್ಯವಸ್ಥಿತವಾಗಿ ಮಾಡ ಬೇಕಾಗಿದೆ ಎಂದು ಹೇಳಿದರು.
ಮಲ್ಪೆ ಬೀಚ್‌ನಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿತ್ತು. ಒಂದು ಕೌಂಟರ್ ಒಂದು ಪಾವತಿ ಆಗಬೇಕು ಮತ್ತು ಜಿಎಸ್‌ಟಿ ಅಧೀನಕ್ಕೆ ಬರಬೇಕು ಎಂಬುದಾಗಿ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಅದರಲ್ಲಿ ಏಳು ತಂಡಗಳನ್ನು ಮಾಡಿ ಸ್ಥಳೀಯರು ಭಾಗಿಯನ್ನಾಗಿ ಮಾಡುತ್ತೇವೆ. ನಾವು ಯಾರಿಗೂ ಬೆಂಬಲ ನೀಡುತ್ತಿಲ್ಲ. ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಟೆಂಡರ್ ರದ್ದು ಮಾಡಿ ಮರು ಟೆಂಡರ್ ಕರೆಯಲಾಗುವುದು ಎಂದರು.







