ನದಿಯಲ್ಲಿ ಮುಳುಗಿ ಮೂವರು ಯುವಕರು ಮೃತ್ಯು; ಓರ್ವ ನಾಪತ್ತೆ
► ಕುಕ್ಕುಡೆಯಲ್ಲಿ ದುರಂತ ► ಮರುವಾಯಿ ಹೆಕ್ಕಲು ಹೋದಾಗ ಘಟನೆ

ಉಡುಪಿ: ನದಿಯಲ್ಲಿ ಮರುವಾಯಿ ಹೆಕ್ಕಲು ಹೋಗಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೂವರು ಯುವಕರು ಮೃತಪಟ್ಟು ಓರ್ವ ನಾಪತೆಯಾಗಿರುವ ಘಟನೆ ಇಂದು ಸಂಜೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಸಮೀಪದಿಂದ ವರದಿಯಾಗಿದೆ.
ಹೂಡೆ ನಿವಾಸಿಗಳಾದ ಫೈಝಾನ್, ಇಬಾದ್, ಸುಫಾನ್ ಮತ್ತು ಫರ್ಹಾನ್ ನೀರುಪಾಲಾದ ನಾಲ್ವರು. ಈ ಪೈಕಿ ಓರ್ವ ನಾಪತ್ತೆಯಾಗಿದ್ದರೆ, ಉಳಿದ ಮೂವರು ಮೃತಪಟ್ಟಿದ್ದು, ಮೃತದೇಹಗಳನ್ನು ನದಿಯಿಂದ ಮೇಲೆತ್ತಲಾಗಿದೆ. ಘಟನೆಯ ವೇಳೆ ದೋಣಿಯಲ್ಲಿದ್ದ ಇತರ ಮೂವರು ಯುವಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈದ್ ಹಿನ್ನೆಲೆಯಲ್ಲಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಇಂದು ಸಂಜೆ ಒಟ್ಟು ಏಳು ಮಂದಿ ನದಿಯಿಂದ ಮರುವಾಯಿ ಸಂಗ್ರಹಿಸುವ ಉದ್ದೇಶದಿಂದ ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳಿದ್ದರು. ಈ ಸಂದರ್ಭ ನಾಲ್ವರು ನೀರಿನಲ್ಲಿ ಮುಳುಗಿ ಪತ್ತೆಯಾಗಿದರೆನ್ನಲಾಗಿದೆ. ಈ ಪೈಕಿ ಮೂವರು ಈಜಿ ಕುದ್ರು ಸೇರಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆದಾಗ ಮೂವರ ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿರುವ ಯುವಕನಿಗಾಗಿ ಹುಡುಕಾಟ ಮುಂದುವರಿದಿದೆ.
ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಹಾಗೂ ಅಧಿಕಾರಿಗಳು ಆಗಮಿಸಿದ್ದಾರೆ.











