--

ವಾರದ ವ್ಯಕ್ತಿ

ಬಹುರೂಪಿ ಪ್ರಸನ್ನ

‘‘ಮಡಕೆ, ಕುಡಿಕೆ, ಕಂಬಳಿ, ಚಪ್ಪಲಿ, ಬಿದಿರು ಬುಟ್ಟಿ, ಖಾದಿ ಬಟ್ಟೆಗೂ ಸರಕು ಸೇವಾ ತೆರಿಗೆ(ಜಿಎಸ್ಟಿ) ವಿಧಿಸಿ, ಬಡವರನ್ನು ಭಿಕ್ಷುಕರನ್ನಾಗಿ ಮಾಡುವ ಕೇಂದ್ರ ಸರಕಾರದ ಈ ಕ್ರಮ ಅಮಾನವೀಯ’’ ಎನ್ನುವ ರಂಗಕರ್ಮಿ ಪ್ರಸನ್ನ, ಕರಕುಶಲ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಉಪವಾಸ ಸತ್ಯಾಗ್ರಹ ಕೂತಿದ್ದರು. ಪ್ರಸನ್ನರ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದ ಹಲವರು, ‘ಅಹಿಂಸಾವಾದಿಗಳಿಗೇಕೆ ಸ್ವಹಿಂಸಾ ಮಾರ್ಗ’ ಎಂದು ಮನವಿ ಮಾಡಿಕೊಂಡರು. ಮನವಿ ಮನ್ನಿಸಿದ ಪ್ರಸನ್ನ, ಉಪವಾಸ ಕೈಬಿಟ್ಟು ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಪ್ರಧಾನಿ ಮೋದಿ ಬಡವರ ಬಗ್ಗೆ ಮಾತನಾಡುತ್ತಾರೆ. ಆದರೆ ಬಡವರ 28 ರೂ. ಕುಡಿಕೆಗೆ ಶೇ. 28 ತೆರಿಗೆ ವಿಧಿಸುತ್ತಾರೆ. ಪ್ರಶ್ನಿಸಿದರೆ, ಸಹಿಸಿಕೊಂಡರೆ ಸರಿಹೋಗುತ್ತದೆ ಎನ್ನುತ್ತಾರೆ. ಸ್ವಲ್ಪಜೋರು ಮಾಡಿದರೆ, ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ಮೋದಿಯವರು ಚಾ ಮಾರುತ್ತಿದ್ದರಂತೆ. ಕಷ್ಟಪಟ್ಟು ಮೇಲೆ ಬಂದವರಂತೆ. ಶೋಷಿತರ ದುಃಖ-ದುಮ್ಮಾನಗಳನ್ನು ಕಂಡುಂಡವರಂತೆ. ಆದರೆ ಶ್ರೀಮಂತ ಅಂಬಾನಿಗೆ ಅನುಕೂಲ, ಬಡ ನೇಕಾರನಿಗೆ ನೇಣು. ಆಡುವುದೊಂದು, ಮಾಡುವುದೊಂದು. ಇಂತಹ ಐಲು ದೊರೆಯ ಆಳ್ವಿಕೆಯಲ್ಲಿ, ಬಡವರನ್ನು ಬದುಕಿಸಲು ಪ್ರಸನ್ನ ಗಾಂಧಿ ಮಾರ್ಗ ಹಿಡಿದಿದ್ದಾರೆ. ಇದು ಕೆಲವರಿಗೆ ಬಂಡೆಕಲ್ಲಿಗೆ ಬುರುಡೆ ಗುದ್ದಿ ನೀರು ತೆಗೆಯುವ ತಮಾಷೆಯಂತೆ ಕಾಣಿಸಬಹುದು. ಮೊಂಡು ಮೋದಿಯ ಮನಪರಿವರ್ತಿಸಲು ಉಪವಾಸದಿಂದ ಸಾಧ್ಯವೇ ಎನಿಸಬಹುದು. ಆದರೆ ಇದು ಗಾಂಧಿ ಹುಟ್ಟಿದ ದೇಶ. ಅಹಿಂಸಾ ಮಾರ್ಗವನ್ನು ಪ್ರಪಂಚಕ್ಕೆ ಪರಿಚಯಿಸಿದ ದೇಶ. ಬಲಿಷ್ಠ ಬ್ರಿಟಿಷರನ್ನು ಬೆತ್ತಲೆ ಫಕೀರನೊಬ್ಬ ಮಣಿಸಿದ ದೇಶ.

ಅಂದಹಾಗೆ, ಪ್ರಸನ್ನ ಹುಟ್ಟಿದ್ದು(1951) ಹೆಗ್ಗೋಡಿನ ಹತ್ತಿರದ ಆನವಟ್ಟಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ. ಎಂಎಸ್ಸಿ ಮಾಡಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಕೆಮಿಸ್ಟ್ರಿಯಲ್ಲಿ ಪಿಎಚ್.ಡಿ. ಮಾಡಲಿಕ್ಕೆ ಕಾನ್ಪುರಕ್ಕೆ ಹೋದವರು, ಸಂಶೋಧನೆ ನನ್ನ ಮನಸ್ಥಿತಿಗೆ ಒಗ್ಗುವುದಿಲ್ಲವೆಂದು, ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗೆ ಸೇರಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಹಲವು ನಾಟಕಗಳನ್ನು ನಿರ್ದೇಶಿಸಿ, ಪ್ರತಿಭಾವಂತರ ಪಟ್ಟಿಗೆ ಸೇರಿದರು. ಹಲವು ಭಾಷೆಗಳನ್ನು ಕಲಿತು, ರಂಗಭೂಮಿ ಅಧ್ಯಯನಕ್ಕೆ ರಷ್ಯಾ, ಜರ್ಮನಿ ಪ್ರವಾಸ ಮಾಡಿದರು. ಕೆಲಕಾಲ ರಾಷ್ಟ್ರೀಯ ನಾಟಕ ಶಾಲೆಯ ಬೋಧಕರಾಗಿಯೂ ಸೇವೆ ಸಲ್ಲಿಸಿದರು. ಪ್ರಸನ್ನ, ಒಂದು ರೀತಿಯಲ್ಲಿ 70ರ ದಶಕದ ಬೆಳೆ. ಕರ್ನಾಟಕದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಾದ ಚಲನಶೀಲತೆಗೆ ತೆರೆದುಕೊಂಡವರು, ಬದಲಾವಣೆಯಲ್ಲಿ ಭಾಗಿಯಾದವರು. ಆ ಕಾಲದ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತರಾಗಿದ್ದ ಪ್ರಸನ್ನ, ಟೀ-ಬನ್ ತಿಂದು ಕಾರ್ಮಿಕ ಪರ ಹೋರಾಡಿದವರು. ‘‘ನನ್ನ ಬದುಕಿನಲ್ಲಿ ಸರಳತೆ ಮತ್ತು ಶಿಸ್ತನ್ನು ಕಲಿಸಿದ್ದೇ ಕಮ್ಯುನಿಸ್ಟ್ ಪಾರ್ಟಿ’’ ಎನ್ನುವ ಪ್ರಸನ್ನ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಡಪಂಥೀಯ ವಿಚಾರ ಧಾರೆಗೆ ಒಲಿದು ‘ಸಮುದಾಯ’ ತಂಡ ಕಟ್ಟಿದರು.

ಗಿರೀಶ್ ಕಾರ್ನಾಡ್, ಲಂಕೇಶ್, ಬೀಷ್ಮ ಸಾಹ್ನಿಯಂಥವರ ನಾಟಕಗಳನ್ನು ನಿರ್ದೇಶಿಸಿದರು. ತಾವೇ ಕೆಲವು ನಾಟಕಗಳನ್ನು ರಚಿಸಿ ರಂಗರೂಪಕ್ಕಿಳಿಸಿದರು. ಅಷ್ಟಕ್ಕೇ ಸುಮ್ಮನಾಗದ ಸಂಘಟನಾ ಚತುರ ಪ್ರಸನ್ನ, ರಾಜ್ಯಾದ್ಯಂತ ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಜನಾಂದೋಲನಕ್ಕೆ ಮುಂದಾದರು. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು ವೇದಿಕೆ ಹುಟ್ಟುಹಾಕಿದರು. ಪ್ರಸನ್ನರ ಚಿಂತನೆ ಮತ್ತು ಚತುರತೆಯ ಮೂಸೆಯಲ್ಲಿ ಭೂಮಿಗೀತ, ವನರಂಗ, ಶ್ರೀರಂಗ ಸ್ಟುಡಿಯೋ, ಬಹುರೂಪಿ, ಗ್ರೀಷ್ಮ ರಂಗೋತ್ಸವ ಹೊಸಹುಟ್ಟು ಪಡೆದವು. ಆ ಮೂಲಕ ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.

ಆ ನಿಟ್ಟಿನಲ್ಲಿ ದೇಶದ ಹಲವಾರು ರಾಜ್ಯಗಳ ಪ್ರವಾಸ ಕೈಗೊಂಡರು. ಈ ನಡುವೆ ಮಾಲತಿಯವರನ್ನು ಮದುವೆಯಾಗಿ, ಸಂಸಾರ ಸಾಧ್ಯವಿಲ್ಲ ವೆನಿಸಿದಾಗ ಬೇರೆಯಾದರು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಅದಕ್ಕೆ ಹೊಸ ಆಯಾಮ ಕಲ್ಪಿಸಿಕೊಟ್ಟರು. ಇವತ್ತು ಭಾರತದ ಪ್ರಮುಖ ರಂಗಕರ್ಮಿಗಳಲ್ಲಿ ಪ್ರಸನ್ನ ಕೂಡ ಒಬ್ಬರು. ಪ್ರಸನ್ನರ ಬಳಿ ನಟನೆ ಕಲಿತ ಅನೇಕ ಕಲಾವಿದರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಾಟಕ, ನೋಟ, ಸುತ್ತಾಟ ಸಾಕಾಯಿತು ಎನಿಸಿದಾಗ, ಮನಸ್ಸು ಮಾಗಿದಾಗ ಹುಟ್ಟೂರು ಹೆಗ್ಗೋಡಿಗೆ ಮರಳಿದರು. ಕವಿ-ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಡಾ. ಯು.ಆರ್. ಅನಂತ ಮೂರ್ತಿ ಅವರ ‘ಋಜುವಾತು’ ಸಾಹಿತ್ಯಕ ಪತ್ರಿಕೆಗೆ ಮರುಜೀವ ನೀಡಿದರು. ಮೊದಲಿನಿಂದಲೂ ಗಾಂಧಿ ಬಗ್ಗೆ ಒಲವಿದ್ದ ಪ್ರಸನ್ನರಿಗೆ, ಹೆಗ್ಗೋಡಿಗೆ ಮರಳಿದ ನಂತರ ದೇಶದ ಸದ್ಯದ ಸಂದಿಗ್ಧ ಸ್ಥಿತಿಗೆ ಗಾಂಧಿಮಾರ್ಗವೇ ಉತ್ತರವೆನಿಸಿತು. ದೇಶವನ್ನು ಆಪೋಶನ ತೆಗೆದುಕೊಂಡಿರುವ ಜಾಗತೀಕರಣದ ಕೊಳ್ಳುಬಾಕ ಸಂಸ್ಕೃತಿಗೆ ಗಾಂಧಿಯ ಚರಕ, ಖಾದಿ, ಸರಳ ಬದುಕು ಮತ್ತು ಗ್ರಾಮಭಾರತದ ಪರಿಕಲ್ಪನೆಯೇ ಸಮರ್ಥ ಸವಾಲು ಎನಿಸಿತು. ಆ ಚಿಂತನೆಯಲ್ಲಿ ಹುಟ್ಟಿದ್ದೇ ‘ಚರಕ’ ಸಂಸ್ಥೆ. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಚರಕ ಇಂದು ನೂರಾರು ಹೆಣ್ಣುಮಕ್ಕಳಿಗೆ ಉದ್ಯೋಗ ನೀಡಿದೆ. ಬದುಕಿಗೆ ಭರವಸೆಯ ಬೆಳಕಾಗಿದೆ. ದೇಸಿ ಮಾದರಿಯಲ್ಲಿ ಇಲ್ಲಿ ತಯಾರಾಗುವ ಖಾದಿ ವಸ್ತ್ರಗಳು ದೇಶಾದ್ಯಂತ ಹೆಸರುವಾಸಿಯಾಗಿವೆ.

ಇವತ್ತು ಯುವಜನತೆ ಕೆಲಸ ಹುಡುಕಿಕೊಂಡು ನಗರ ಪ್ರದೇಶಗಳತ್ತ ಗುಳೆ ಹೋಗಿ, ಹಳ್ಳಿಗಳು ವೃದ್ಧಾಶ್ರಮಗಳಾಗಿರುವ ಸಂದರ್ಭದಲ್ಲಿ, ಹೆಗ್ಗೋಡಿನಂತಹ ಹಳ್ಳಿಯಲ್ಲಿ ಪೇಟೆ ಮಂದಿಗೆ ಕೆಲಸ ಕೊಡಲಾಗಿದೆ. ಕಾಲಚಕ್ರವನ್ನು ಹಿಂದಿರುಗಿಸುವ ಕೆಲಸ ಹೆಗ್ಗೋಡಿನ ಚರಕ ಸಂಸ್ಥೆಯಲ್ಲಿ ಸದ್ದಿಲ್ಲದೆ ಚಾಲ್ತಿಗೆ ಬಂದಿದೆ. ಗಾಂಧಿ ಕನಸು ನನಸಾಗುತ್ತಿದೆ. ಚರಕ ಸಂಸ್ಥೆ ಇಂದು ಬಣ್ಣಗಾರಿಕೆ, ನೇಯ್ಗೆ, ಬಾಬಿಂಗ್, ಟೈಲರಿಂಗ್, ಶ್ರಮಜೀವಿ ಆಶ್ರಮ ಮತ್ತಿತರ ಘಟಕಗಳಾಗಿ ವಿಸ್ತಾರಗೊಂಡಿದೆ.

ಬೆಂಗಳೂರಿನ ಹಲವು ಪ್ರತಿಷ್ಠಿತ ಪ್ರದೇಶಗಳಲ್ಲಿ ‘ದೇಸಿ’ ಮಳಿಗೆಗಳನ್ನು ತೆರೆದು, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸಲಾಗಿದೆ. ಇಂದು ಚರಕದಲ್ಲಿ ಸುಮಾರು 400ಕ್ಕೂ ಹೆಚ್ಚು ಹೆಣ್ಣುಮಕ್ಕಳು ಜೀವನೋಪಾಯ ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸುತ್ತಮುತ್ತಲಿನ ಹಳ್ಳಿಯ ನೂರಾರು ಮಹಿಳೆಯರು, ತಮ್ಮ ಮನೆಯಲ್ಲಿಯೇ ಕೈಯಿಂದ ತಯಾರಿಸಿದ ಉಪ ಉತ್ಪನ್ನಗಳನ್ನು ಚರಕಕ್ಕೆ ಒದಗಿಸುತ್ತ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ವಾರ್ಷಿಕ ಒಂದು ಕೋಟಿ ಆದಾಯವಿರುವ ಚರಕ ಸಹಕಾರ ಸಂಘ ನಡೆಯುತ್ತಿರುವುದು, ಅಲ್ಲಿ ಕೆಲಸ ಮಾಡುವ ಸ್ಥಳೀಯ ಹೆಣ್ಣು ಮಕ್ಕಳ ಆಡಳಿತ ಮಂಡಳಿಯಿಂದಲೆ. ಅಲ್ಲಿ ಕೆಲಸ ಮಾಡುವ ಯಾರು ಬೇಕಾದರೂ ಆಡಳಿತ ಮಂಡಳಿಯ ಸದಸ್ಯರಾಗಿ, ಪದಾಧಿಕಾರಿಗಳಾಗಬಹುದು, ಆರಿಸಿಕೊಳ್ಳಬಹುದು. ಪ್ರಸನ್ನರ ಚರಕ ಇಂದು ಕೇವಲ ಕೆಲಸ ಕೊಡುವ ಸಂಸ್ಥೆಯಾಗಿ ಉಳಿದಿಲ್ಲ, ಸಾಂಸ್ಕೃತಿಕ ಸಂಘಟನೆಯಾಗಿ ಪರಿವರ್ತನೆ ಹೊಂದಿದೆ. ಅಲ್ಲಿ ವರ್ಷಕ್ಕೊಮ್ಮೆ ಚರಕ ಉತ್ಸವ ನಡೆಯುತ್ತದೆ. ಹೆಣ್ಣುಮಕ್ಕಳೇ ಮುಂದೆ ನಿಂತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಗ್ರಾಮೀಣ ಜನತೆಯನ್ನು ಹೀಗೆ ಸ್ವಾವಲಂಬಿಗಳಾಗಿ ಬೆಳೆಸುತ್ತಲೇ, ಅವರ ಬದುಕಿನ ಭದ್ರತೆಗಾಗಿ ಕಲ್ಯಾಣನಿಧಿ ಕೂಡ ಸ್ಥಾಪಿಸಿ ಮಾದರಿ ಸಂಸ್ಥೆಯಾಗಿದೆ. ‘‘70ರ ದಶಕದಲ್ಲಿ ನಾವು ನಾಟಕ ಮಾಡೋಕೆ ಶುರು ಮಾಡಿದಾಗ, ನಾಟಕ ಮತ್ತು ಚಳವಳಿ, ರಾಜಕೀಯ ಮತ್ತು ಸಾಹಿತ್ಯ, ಬದುಕು ಮತ್ತು ವಿಚಾರ ಇವುಗಳ ನಡುವೆ ಯಾವ ಅಂತರವೂ ಇರಲಿಲ್ಲ; ಆಡೋದಕ್ಕೂ ಮಾಡೋ ದಕ್ಕೂ ಪೂರ್ತಿ ತಾಳೆ ಆಗುತ್ತಿತ್ತು. ಆದರೆ ಇವತ್ತು ವಿಚಾರ ಒಂದು ಆಚಾರ ಒಂದು, ಇರೋದು ಒಂದು ಮಾಡೋದು ಒಂದು’’ ಎನ್ನುವ ಪ್ರಸನ್ನ, ಚರಕ ಸಂಸ್ಥೆಯನ್ನು ಜನರಿಂದ, ಜನರಿಗಾಗಿ ಸ್ಥಾಪಿಸಿ, ಜನರ ಕೈಗೆ ಒಪ್ಪಿಸಿ ಹೆಗ್ಗೋಡಿನ ಗಾಂಧಿ ಎನಿಸಿಕೊಂಡಿದ್ದಾರೆ. ಆದರೆ ಉತ್ಪಾದನೆ, ವ್ಯಾಪಾರ, ಮಾರು ಕಟ್ಟೆಯ ಮಾಯಾಜಾಲಕ್ಕೆ ಸಿಕ್ಕಿ ಕಲಾವಿದನನ್ನು ಹಾಗೂ ಕ್ರಿಯಾ ಶೀಲತೆಯನ್ನು ಕಳೆದುಕೊಂಡಿದ್ದಾರೆ.

ಕಮ್ಯುನಿಸ್ಟ್ ಕಾರ್ಮಿಕ ಉದ್ಯಮಿಯಾಗಿ ಬದಲಾಗಿದ್ದಾರೆ. ಇದು ರಂಗಭೂಮಿಗಾದ ಬಹುದೊಡ್ಡ ನಷ್ಟ ಎನ್ನುವ ವಾದವೂ ಇದೆ. ಆದರೆ ಚಲನಶೀಲ ಪ್ರಸನ್ನ ಇದಾವುದಕ್ಕೂ ತಲೆಕೆಡಿಸಿ ಕೊಂಡವರಲ್ಲ. ದೂರದ ಗಜೇಂದ್ರಗಡದಲ್ಲಿ ಬಡ ಕೈಮಗ್ಗ ನೇಕಾರರ ಕಷ್ಟ ಪರಿಹರಿಸಲು ಮುಂದಾಗುತ್ತಾರೆ. ಬದನವಾಳುವಿನಲ್ಲಿ ಸುಸ್ಥಿರ ಬದುಕಿಗಾಗಿ ಉಪವಾಸ ಸತ್ಯಾಗ್ರಹ ಕೂರುತ್ತಾರೆ. ಬಿಡುವು ಮಾಡಿಕೊಂಡು ‘ಯಂತ್ರಗಳನ್ನು ಕಳಚೋಣ ಬನ್ನಿ’, ‘ಶೂದ್ರರಾಗೋಣ ಬನ್ನಿ’, ‘ದೇಸಿ ಆಹಾರ ಪದ್ಧತಿ’ ಕೃತಿಗಳನ್ನು ರಚಿಸಿ, ನಾಡಿನ ಗಮನ ಸೆಳೆಯುತ್ತಾರೆ. ಇದರ ನಡುವೆಯೇ ಪತ್ರಿಕೆಯೊಂದಕ್ಕೆ ತಮ್ಮ ಅರಿವಿನ ಗಾಂಧಿಯನ್ನು, ಗ್ರಾಮೀಣ ಭಾರತವನ್ನು, ಗುಡಿ ಕೈಗಾರಿಕೆಯನ್ನು, ಅಂದಿನ-ಇಂದಿನ ಭಾರತವನ್ನು ‘ಸಂಭಾಷಣೆ’ಯ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಪ್ರಸನ್ನರು ಯಂತ್ರ ಕಳಚೋಣ ಬನ್ನಿ ಎಂದಾಗ, ಈ ಆಧುನಿಕ ಯಂತ್ರಮಾನವನ ಕಾಲದಲ್ಲಿ, ಪ್ರಸನ್ನ ಪುರಾತನ ಕಾಲದ ಮಾತುಗಳನ್ನಾಡುತ್ತಿದ್ದಾರೆಂದು ಕೆಲವರು ಗೇಲಿ ಮಾಡಿದ್ದರು. ಆಗ ಪ್ರಸನ್ನ, ‘‘ಯಂತ್ರ ಕಳಚೋದು ಅಂದ್ರೆ ಅದನ್ನು ಕಿತ್ತು ಹಾಕೋದಲ್ಲ, ಒಡೆದು ಹಾಕೋದಲ್ಲ. ಮುರಿದು ಹಾಕೋದಲ್ಲ. ನಮ್ಮ ದೇಹದಿಂದ, ಆತ್ಮದಿಂದ, ಮನಸ್ಸಿನಿಂದ ಯಂತ್ರಗಳನ್ನು ಕಳಚೋದು. ಯಂತ್ರ ನಮ್ಮನ್ನು ಹಿಡಿದಿಲ್ಲ. ನಾವು ಅದನ್ನು ಹಿಡಿದಿದ್ದೇವೆ. ನಮ್ಮ ಸಂಸ್ಕೃತಿ, ಮನಸ್ಸು, ಆತ್ಮ, ಜೀವನಶೈಲಿಯನ್ನು ಯಂತ್ರದ ಕೈಲಿ ಕೊಟ್ಟುಬಿಟ್ಟಿದ್ದೇವೆ. ನಾವು ಕೈ ಬಿಟ್ಟರೆ ಸಾಕು, ಅದು ತಂತಾನೇ ಕಳಚಿ ಬೀಳುತ್ತದೆ’ ಎಂದು ಅರ್ಥ ಮಾಡಿಸಿದ್ದೂ ಇದೆ. ಸ್ನಾತಕೋತ್ತರ ಕೆಮಿಸ್ಟ್ರಿ ಪದವೀಧರ, ಕಮ್ಯುನಿಸ್ಟ್ ಕಾರ್ಯಕರ್ತ, ಸಮುದಾಯದ ರಂಗಕರ್ಮಿ, ಕವಿ-ಕಾವ್ಯದ ಸಂಘಟಕ, ಋಜುವಾತುಗೆ ಹೊಸತನ, ಗಾಂಧಿಮಾರ್ಗ, ಚರಕ ಸಂಸ್ಥೆ, ದೇಸಿ ಮಳಿಗೆ, ನೇಕಾರರ ಪರ ಹೋರಾಟ, ಸುಸ್ಥಿರ ಬದುಕಿಗಾಗಿ ಉಪವಾಸ, ಸಮಾಜಮುಖಿ ಬರವಣಿಗೆ, ಪ್ರಶಸ್ತಿ-ಪುರಸ್ಕಾರಗಳು, ದಣಿವರಿಯದ ಸುತ್ತಾಟ... ಈ ಬಹುರೂಪಿ ಪ್ರಸನ್ನರ ಬಗ್ಗೆ, ‘‘ಅವರ ಒಂಟಿತನವೇ ಈ ಸಾಧನೆಗಳಿಗೆಲ್ಲ ಸ್ಫೂರ್ತಿ’’ ಎಂದು ಖ್ಯಾತ ಚಿತ್ರನಿರ್ದೇಶಕ ಎಂ.ಎಸ್.ಸತ್ಯು ಹೇಳಿದ್ದು ಸೂಕ್ತವಾಗಿದೆ.

ಆ ಕಾರಣಕ್ಕಾಗಿಯೇ ಪ್ರಸನ್ನ ಎಲ್ಲಿ ಏನು ಮಾಡಿದರೂ, ಅದರಲ್ಲಿನ ಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆಯಿಂದಾಗಿ ಅವರನ್ನು ನಂಬುವ, ಬೆಂಬಲಿಸುವ ಮಂದಿಗೇನೂ ಕಡಿಮೆ ಇಲ್ಲ. ಮೊನ್ನೆಯ ಕರನಿರಾಕರಣ ಉಪವಾಸ ಸತ್ಯಾಗ್ರಹಕ್ಕೆ ನಿಡುಮಾಮಿಡಿ ಸ್ವಾಮೀಜಿಯಿಂದ ಹಿಡಿದು ದೇವೇಗೌಡರವರೆಗೆ, ರವಿಕೃಷ್ಣಾ ರೆಡ್ಡಿಯಿಂದ ಹಿಡಿದು ನಟ ಪ್ರಕಾಶ್ ರೈವರೆಗೆ, ದೊರೆಸ್ವಾಮಿಯಿಂದ ಹಿಡಿದು ಅಗ್ರಹಾರ ಕೃಷ್ಣಮೂರ್ತಿವರೆಗೆ ಎಲ್ಲರೂ ಮುಕ್ತಮನಸ್ಸಿನಿಂದ ಬೆಂಬಲಿಸಿದ್ದಾರೆ. ಅವರ ಹೋರಾಟಕ್ಕೊಂದು ನೈತಿಕ ಸ್ಥೈರ್ಯ ತುಂಬಿದ್ದಾರೆ. ಇಂತಹ ಮನಸ್ಸುಗಳು ಮತ್ತಷ್ಟು ಹೆಚ್ಚಾಗಲಿ, ಇಂತಹ ಕಾರಣಗಳಿಂದಾಗಿಯೇ ಕರ್ನಾಟಕ ಭಿನ್ನವಾಗಿ ಕಂಡು ದೇಶಕ್ಕೆ ಮಾದರಿಯಾಗಲಿ. ಇದು ಮೋದಿಗೆ ಅರ್ಥವಾಗಲಿ, ಬಡವರ ಬುಟ್ಟಿಗೆ ಹಾಕಿರುವ ತೆರಿಗೆಯನ್ನು ತೆಗೆಯಲಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top