Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಯನಾಡಿನಲ್ಲಿ ರಾಹುಲ್‌ಗೆ...

ವಯನಾಡಿನಲ್ಲಿ ರಾಹುಲ್‌ಗೆ ಸೋಲುಣಿಸುತ್ತೇವೆ: ಕೋಡಿಯೇರಿ

ವಿಶೇಷ ಸಂದರ್ಶನ

ಮುಹಮ್ಮದ್ ಮಂಗಳೂರುಮುಹಮ್ಮದ್ ಮಂಗಳೂರು20 April 2019 10:54 AM IST
share
ವಯನಾಡಿನಲ್ಲಿ ರಾಹುಲ್‌ಗೆ ಸೋಲುಣಿಸುತ್ತೇವೆ: ಕೋಡಿಯೇರಿ

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್) ಅಂದರೆ ಸಿಪಿಎಂ ಪಕ್ಷದ ಕೇರಳ ಘಟಕದ ಕಾರ್ಯದರ್ಶಿ, ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಸಮಿತಿ ಪಾಲಿಟ್ ಬ್ಯೂರೋದ ಸದಸ್ಯ ಕೋಡಿಯೇರಿ ಬಾಲಕೃಷ್ಣನ್ ಬುಧವಾರ ಕಾಸರಗೋಡಿನಲ್ಲಿದ್ದರು. ಕೇರಳದ ಮಾಜಿ ಗೃಹ ಸಚಿವ ಹಾಗೂ ಸದ್ಯ ಕೇರಳ ಸಿಪಿಎಂನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಳಿಕ ಅತ್ಯಂತ ಪ್ರಭಾವಿ ನಾಯಕರಾಗಿರುವ ಕೋಡಿಯೇರಿ ತಮ್ಮ ನಿಬಿಡ ಚುನಾವಣಾ ಚಟುವಟಿಕೆಗಳ ನಡುವೆ ಪ್ರಚಾರ ಹಾಗೂ ಚುನಾವಣೆಯಲ್ಲಿ ಕೇರಳ ಎಡರಂಗದ ಸಾಧ್ಯತೆಗಳ ಬಗ್ಗೆ ‘ವಾರ್ತಾಭಾರತಿ’ ಜೊತೆ ವಿವರವಾಗಿ ಮಾತನಾಡಿದರು. ಅದರ ಆಯ್ದ ಭಾಗ ಇಲ್ಲಿದೆ:

► ರಾಜ್ಯಾದ್ಯಂತ ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

ಪ್ರಚಾರ ಕಾರ್ಯ ಬಹಳ ಚೆನ್ನಾಗಿ ನಡೆಯುತ್ತಿದೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಟ್ಟಾರೆ ಈ ಬಾರಿ ಎಲ್‌ಡಿಎಫ್ ಮೇಲುಗೈ ಪಡೆದಿದೆ. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಒಟ್ಟು ಇಪ್ಪತ್ತು ಸೀಟುಗಳಲ್ಲಿ ಎಂಟು ಕಡೆ ಎಲ್‌ಡಿಎಫ್ ಗೆದ್ದಿತ್ತು . ಈ ಸಲ ಇನ್ನಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ. ಯುಡಿಎಫ್‌ಗಿಂತ ಹೆಚ್ಚು ಕಡೆ ಗೆಲ್ಲುತ್ತೇವೆ. ಅದರ ಸಂಪೂರ್ಣ ವಿಶ್ವಾಸ ಇದೆ.

► ಆದರೆ ರಾಜ್ಯದಲ್ಲಿ ಎಲ್‌ಡಿಎಫ್ ಆಡಳಿತ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್‌ಗೆ ಮೇಲುಗೈ ಇದೆ ಎನ್ನಲಾಗುತ್ತಿದೆಯಲ್ಲವೇ?

ಅದು ಮಾಧ್ಯಮಗಳ ಪ್ರಚಾರದಲ್ಲಿ ಮಾತ್ರ. ಇವೆಲ್ಲ ಮಾಧ್ಯಮಗಳ ಸೃಷ್ಟಿಯಾಗಿದೆ. ಅವುಗಳನ್ನು ಸಂಪೂರ್ಣವಾಗಿ ಕಾಂಗ್ರೆಸ್ ಮ್ಯಾನೇಜ್(ನಿರ್ವಹಿಸುತ್ತಿದೆ ) ಮಾಡುತ್ತಿದೆ.

► ಮಾಧ್ಯಮಗಳು ಯಾಕೆ ಎಲ್‌ಡಿಎಫ್ ವಿರುದ್ಧ ಇವೆ?

ಅವುಗಳು ಕಾರ್ಪೊರೇಟ್ ದೊರೆಗಳ ಹಿಡಿತದಲ್ಲಿವೆ. ಅಲ್ಲಿನ ಪತ್ರಕರ್ತರು ನಮ್ಮ ವಿರುದ್ಧ ಇಲ್ಲ. ಆದರೆ ಹೆಚ್ಚಿನ ಮಾಧ್ಯಮಗಳ ಮಾಲಕರು ಕಾಂಗ್ರೆಸ್ ನಿಯಂತ್ರಣದಲ್ಲಿದ್ದಾರೆ. ಆದ್ದರಿಂದ ಎಲ್‌ಡಿಎಫ್ ವಿರುದ್ಧ ಆವುಗಳು ಪ್ರಚಾರ ನಡೆಸುತ್ತಿವೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕೂಡ ಮಾಧ್ಯಮಗಳು ನಮ್ಮ ವಿರುದ್ಧ ಇದ್ದವು. ಅರುವತ್ತು ಸ್ಥಾನಗಳು ಮಾತ್ರ ನಮಗೆ ಸಿಗುತ್ತವೆ ಎಂದು ಮಾಧ್ಯಮಗಳ ಸಮೀಕ್ಷೆಗಳು ಹೇಳಿದ್ದವು. ಆದರೆ ನಾವು 91 ಸ್ಥಾನಗಳನ್ನು ಪಡೆದೆವು. ಕಳೆದ 2004ರ ಲೋಕಸಭಾ ಚುನಾವಣೆಯಲ್ಲಿ ನಾವು 18 ಸ್ಥಾನ ಪಡೆದಿದ್ದೆವು. ಆಗ ಮಾಧ್ಯಮಗಳ ಸಮೀಕ್ಷೆ ಆರು ಸೀಟುಗಳನ್ನು ಗೆಲ್ಲುತ್ತೇವೆ ಎಂದಾಗಿತ್ತು. ಆದರೆ ನಮಗೆ ಹದಿನೆಂಟು ಸೀಟುಗಳು ಬಂದವು. ಕಾಂಗ್ರೆಸ್‌ಗೆ ಕೇವಲ ಒಂದು ಸ್ಥಾನ ಸಿಕ್ಕಿತ್ತು. ಆದ್ದರಿಂದ ಈ ಸಮೀಕ್ಷೆಗಳ ಕುರಿತು ನಾವು ತಲೆಕೆಡಿಸಿಕೊಳ್ಳುವುದಿಲ್ಲ.

► ಶಬರಿ ಮಲೆ ವಿಷಯ ಎಲ್‌ಡಿಎಫ್‌ಗೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವಿದೆ...

ಶಬರಿ ಮಲೆ ವಿಷಯದಲ್ಲಿ ಬಿಜೆಪಿ ಮತ್ತು ಯುಡಿಎಫ್ ಅಪಪ್ರಚಾರ ನಡೆಸುತ್ತಿವೆ. ಎಲ್‌ಡಿಎಫ್ ಶಬರಿಮಲೆ ವಿಷಯದಲ್ಲಿ ಏನೂ ಮಾಡಿಲ್ಲ. ಯಾಕೆಂದರೆ ಆ ವಿಷಯದಲ್ಲಿ ಎಲ್‌ಡಿಎಫ್ ನಿರ್ಧಾರ ತೆಗೆದುಕೊಂಡಿಲ್ಲ. ಅದು ಸುಪ್ರೀಂಕೋರ್ಟಿನ ತೀರ್ಪು. ಸುಪ್ರೀಂ ಕೋರ್ಟ್ ಈಗ ಚುನಾವಣೆಗೆ ನಿಂತಿಲ್ಲ(ನಗು). ನಮ್ಮ ಸರಕಾರ ಸುಪ್ರೀಂ ಕೋರ್ಟಿನ ತೀರ್ಪನ್ನು ಪಾಲಿಸಿತು ಅಷ್ಟೇ. ಅವರು(ಬಿಜೆಪಿ, ಕಾಂಗ್ರೆಸ್) ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಹೋದರು. ತೀರ್ಪನ್ನು ಖಂಡಿಸಿದರು. ಈ ಹಿಂದೆ ಸುಪ್ರೀಂ ಕೋರ್ಟಿನ ತೀರ್ಪನ್ನು ಜಾರಿಗೊಳಿಸಲು ಕೇರಳ ಮುಖ್ಯಕಾರ್ಯದರ್ಶಿಗೆ ಕೇಂದ್ರ ಸರಕಾರವೇ ಹೇಳಿತ್ತು. ಪೊಲೀಸರು ಮಾತ್ರವಲ್ಲ, ಕೇಂದ್ರ ಪಡೆಗಳನ್ನು ಬೇಕಾದರೂ ಕೇಳಿ ಪಡೆದುಕೊಳ್ಳಿ ಎಂದು ಕೇರಳ ಸರಕಾರಕ್ಕೆ ತಿಳಿಸಿತ್ತು. ಆ ಸ್ಥಳದಲ್ಲಿ ನಿರ್ಬಂಧಕಾಜ್ಞೆ ಹಾಕಲು ಸೂಚಿಸಿತ್ತು. ಆದರೆ ನಾವು ಅಂತಹ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಕೇಂದ್ರ ಪಡೆಗಳನ್ನು ಕೇಳಿಲ್ಲ. ನಮ್ಮ ಸರಕಾರ ಭಕ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕೇರಳ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಮಾತ್ರ ಕ್ರಮ ಕೈಗೊಂಡಿದ್ದಾರೆ. ಬೇರೆಲ್ಲವೂ ಅಪಪ್ರಚಾರವಾಗಿದೆ. ಹಾಗಾಗಿ ಇದರಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ.

► ನೀವು ಎಲ್‌ಡಿಎಫ್ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂದು ಬಹಳ ಭರವಸೆ ವ್ಯಕ್ತಪಡಿಸುತ್ತಿದ್ದೀರಿ. ಅದಕ್ಕೆ ಮುಖ್ಯ ಕಾರಣಗಳು ಯಾವುವು?

ಪ್ರಧಾನವಾಗಿ ಕೋಮುವಾದದ ವಿರುದ್ಧ ಎಡಪಕ್ಷಗಳ ನಿಲುವುಗಳು. ನಾವು ಆರೆಸೆಸ್ಸ್ ನೊಂದಿಗೆ ರಾಜಿಯಾಗಿಲ್ಲ. ಆರೆಸ್ಸೆಸ್‌ನ ನಿಲುವಿನ ವಿರುದ್ಧ ಜಾತ್ಯತೀತ ನಿಲುವಿನಲ್ಲಿ ದೃಢವಾಗಿ ನಿಂತಿದ್ದೇವೆ. ಅಲ್ಪಸಂಖ್ಯಾತರು, ದಲಿತರು ಎಲ್ಲ ದಮನಿತರು ಎಡಪಕ್ಷಗಳ ಪರವಾಗಿದ್ದಾರೆ. ಎಲ್ಲಿಯೂ ಸರಕಾರದ ವಿರುದ್ಧ ಜನಾಭಿಪ್ರಾಯ ಇಲ್ಲ. ಸರಕಾರದ ಸಾಧನೆ ಜನರಲ್ಲಿ ತೃಪ್ತಿ ಮೂಡಿಸಿದೆ. ಇದು ನಮಗೆ ಅನುಕೂಲಕರವಾಗಿದೆ. ರಾಜ್ಯದ ದುರ್ಬಲ ಜನವಿಭಾಗಗಳು ಎಡಪಕ್ಷಗಳಲ್ಲಿ ಭರವಸೆ ಇರಿಸಿಕೊಂಡಿವೆ. 55 ಲಕ್ಷ ಮಂದಿಗೆ ಪ್ರತಿ ತಿಂಗಳು 1,200 ರೂಪಾಯಿ ಮಾಸಾಶನ ನೀಡಲಾಗುತ್ತಿದೆ, ರೈತರಿಗೆ ಒಂದು ವರ್ಷದಲ್ಲಿ 14,400 ರೂ., ಕೃಷಿ ಕಾರ್ಮಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಅದೇ ರೀತಿ ಅಂಗವಿಕಲರಿಗೆ ವಾರ್ಧಕ್ಯ ಮಾಸಾಶನ ನೀಡುತ್ತೇವೆ. ಈಗ ಹಳೆ ಬಾಕಿ ಸೇರಿಸಿ ಎಪ್ರಿಲ್ ತಿಂಗಳ ಪೆನ್ಶನ್ ಸೇರಿಸಿ 5,600 ರೂಪಾಯಿ ಮಾಸಾಶನ ಕೊಡುತ್ತಿದ್ದೇವೆ. 20 ಲಕ್ಷ ಮಂದಿಗೆ ಕ್ಷೇಮ ನಿಧಿ ಮಾಸಾಶನ ನೀಡುತ್ತೇವೆ. ಹೀಗೆ ಎಪ್ಪತ್ತೈದು ಲಕ್ಷ ಮಂದಿಗೆ ವಿವಿಧ ಮಾಸಾಶನ ನೀಡಲಾಗುತ್ತಿದೆ. ಇಂತಹ ಮಾಸಾಶನ ನೀಡುವ ವ್ಯವಸ್ಥೆ ಯಾವ ರಾಜ್ಯದಲ್ಲೂ ಇಲ್ಲ. ಈ ಹಿಂದೆ ಯುಡಿಎಫ್ ಕಾಲದಲ್ಲಿ ಕೇವಲ ಆರು ನೂರು ರೂಪಾಯಿ ಪೆನ್ಶನ್ ನೀಡಲಾಗುತ್ತಿತ್ತು. ಈಗ ಅದನ್ನು ನಮ್ಮ ಸರಕಾರ ಶೇ. ನೂರರಷ್ಟು ಹೆಚ್ಚಿಸಿ 1,200 ರೂಪಾಯಿ ಮಾಡಿದೆ. ರೈತರ ಎಲ್ಲ ಸಾಲಗಳನ್ನು ಅಂದರೆ ಎರಡು ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಲಾಗಿದೆ.

ಆದ್ದರಿಂದ ಕೇರಳದಲ್ಲಿ ರೈತ ಆತ್ಮಹತ್ಯೆ ಇಲ್ಲದಾಗಿದೆ. ಹೀಗೆ ಕೃಷಿ ಕ್ಷೇತ್ರದಲ್ಲಿಯೂ ಎಲ್‌ಡಿಎಫ್ ಸರಕಾರಕ್ಕೆ ಅನೂಕೂಲಕರ ವಾತಾವರಣ ಇದೆ. ಅದೇ ರೀತಿ ಸರಕಾರದಿಂದ ಒಂದು ಲಕ್ಷ 55 ಸಾವಿರ ಮಂದಿಗೆ ಉದ್ಯೋಗ ನೇಮಕಾತಿ ನೀಡಲಾಯಿತು. ಹೊಸ ಉದ್ಯೋಗ ಸೃಷ್ಟಿ ಈ ಹಿಂದೆ ಆಗುತ್ತಿರಲಿಲ್ಲ. ನಮ್ಮ ಸರಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೊಸ 20 ಸಾವಿರ ಉದ್ಯೋಗ ಸೃಷ್ಟಿ ಮಾಡಿತು. ಮಹಿಳೆಯರಿಗೆ ಹೆಚ್ಚು ಅನೂಕೂಲ ಮಾಡಿಕೊಡಲಾಯಿತು. ಅಂಗನವಾಡಿ ನೌಕರರು, ಹೆಲ್ಪರ್ಸ್, ಆಶಾ ನೌಕರರು, ಪ್ರೀಪೈಮರಿ ಟೀಚರ್ಸ್, ಶಾಲೆಯ ಅಡುಗೆ ಕೆಲಸಗಾರರ ಸೌಲಭ್ಯವನ್ನು ಹೆಚ್ಚಿಸಲಾಯಿತು. ಖಾಸಗಿ ಆಸ್ಪತ್ರೆಯ ನರ್ಸ್‌ಗಳಿಗೆ ಕನಿಷ್ಠ ವೇತನ ಘೋಷಿಸಲಾಯಿತು. ತೋಟ ಕಾರ್ಮಿಕರಿಗೆ ಪ್ರತಿದಿನ 50 ರೂಪಾಯಿ ಬೆಂಬಲ ಮಧ್ಯಕಾಲೀನ ನೆರವು ಘೋಷಿಸಲಾಯಿತು. ಇವರೆಲ್ಲರೂ ಮಹಿಳೆಯರು. ಮಹಿಳೆಯರು ಕೆಲಸ ಮಾಡುವ ಕ್ಷೇತ್ರಗಳಲ್ಲಿ ಆದಾಯ ಹೆಚ್ಚಿಸಲಾಯಿತು. ಮಹಿಳಾ ಕಲ್ಯಾಣ ಬಜೆಟ್‌ನಲ್ಲಿ ಶೇ.16ರಷ್ಟು ಹಣವನ್ನು ಮೀಸಲಿರಿಸಲಾಯಿತು. ಈ ಸ್ಥಿತಿ ಹಿಂದೆ ಇರಲಿಲ್ಲ. ಜನರಲ್ ಬಜೆಟ್‌ನಲ್ಲಿ ಇದೆಲ್ಲವನ್ನೂ ಮಾಡಲಾಯಿತು. ಎಸ್ಸಿ/ಎಸ್ಟಿ ವಿಭಾಗಗಳಿಗೆ ಸೌಲಭ್ಯಗಳನ್ನು ಹೆಚ್ಚಿಸಲಾಯಿತು. ದಲಿತರ ಏಳಿಗೆಯಾಗಬೇಕಾದರೆ ಅವರಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಇದಕ್ಕೆ ಬೇಕಾದ ಸೌಲಭ್ಯವನ್ನು ನಮ್ಮ ಸರಕಾರ ಒದಗಿಸಿತು. ಅದರ ಫಲವಾಗಿ ದಲಿತ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಸೀಟು ಗಳಿಸುವ ಪ್ರವೇಶ ಅರ್ಹತೆಯನ್ನು ಪಡೆದರು. ಎಲ್ಲ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳಲ್ಲಿ ಸರಕಾರ ಫೀಸು ಕೊಟ್ಟು ಕಲಿಸುತ್ತಿದೆ. ಸರಕಾರಿ ಕಾಲೇಜಿನಲ್ಲಿ ಈ ಅವಕಾಶ ಮೊದಲೇ ಇದೆ. ಇದು ದೊಡ್ಡ ಬದಲಾವಣೆ ತಂದಿತು. ಇದೇ ರೀತಿ ಮೀನುಗಾರಿಕಾ ಸಮುದಾಯದ ವಿದ್ಯಾರ್ಥಿಗಳಿಗೆ ಇದೇ ಸೌಕರ್ಯ ಕಲ್ಪಿಸಲಾಯಿತು. 28 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ಸಿಕ್ಕಿದೆ. ಹತ್ತು ದಲಿತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಂಡನ್, ಅಮೆರಿಕಕ್ಕೆ ಕಳುಹಿಸಿದ್ದೇವೆ. ಇವೆಲ್ಲ ಎಡಪಕ್ಷದ ಸರಕಾರದ ಸಾಧನೆ ಆಗಿದೆ. ದಲಿತ ವಿದ್ಯಾರ್ಥಿಗಳಿಗೆ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಕೋಚಿಂಗ್ ನೀಡುತ್ತಿದೆ. ಈ ಬಾರಿ ಶ್ರೀಧನ್ಯಾ ಎನ್ನುವ ದಲಿತ ವಿದ್ಯಾರ್ಥಿನಿಗೆ ಯುಪಿಎಸ್ಸಿ ರ್ಯಾಂಕ್ ಸಿಕ್ಕಿದೆ. ಈ ವಿದ್ಯಾರ್ಥಿನಿಗೆ ಸರಕಾರ ಕೋಚಿಂಗ್ ವ್ಯವಸ್ಥೆ ಕಲ್ಪಿಸಿತ್ತು. ಇನ್ನು ಅಲ್ಪಸಂಖ್ಯಾತರಿಗೆ ಈ ಹಿಂದೆಯೇ ಬೇಕಾದಷ್ಟು ಸೌಲಭ್ಯಗಳು ಕೇರಳದಲ್ಲಿವೆ. ಅಲ್ಪಸಂಖ್ಯಾತರು ಹಿಂದಿನಿಂದಲೇ ಇಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮುಂದಿದ್ದಾರೆ. ದಲಿತರು ಹಿಂದಿದ್ದರು. ಆದರೆ ನಮ್ಮ ಸಕಾರ ಅವರನ್ನು ಮುಂದೆ ತಂದಿದೆ.

► ಈ ಬಾರಿ ಬಿಜೆಪಿಗೆ ರಾಜ್ಯದಲ್ಲಿ ಒಂದೆರಡು ಸೀಟು ಸಿಗಬಹುದು ಎಂದು ಅವರು ಹೇಳುತ್ತಿದ್ದಾರೆ...

ಬಿಜೆಪಿ ವಿಲ್ ನಾಟ್ ಗೆಟ್ ಎನೀ ಸೀಟ್ (ಅವರಿಗೆ ಒಂದು ಸ್ಥಾನ ಕೂಡ ಸಿಗುವುದಿಲ್ಲ). ಅವರು ತುಂಬ ಹಣ ಖರ್ಚು ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಬರುತ್ತಿದ್ದಾರೆ. ಪ್ರಧಾನಿ ಬಂದರೆ ಸೀಟು ಸಿಗುವುದಿದ್ದರೆ 2004ರಲ್ಲಿ ವಾಜಪೇಯಿ ಬಂದಾಗ ಅವರಿಗೆ ಸೀಟು ಸಿಗಬೇಕಿತ್ತು. ಆಗ ಸಿಕ್ಕಿದೆಯಾ , ಇಲ್ಲ. ಇದು ಗುಜರಾತ್ ಅಲ್ಲ. ಕೇರಳ ಇದು. ಹಾಗೆಲ್ಲ ಸೀಟು ಸಿಗುವ ರಾಜ್ಯವಲ್ಲ. ಅವರಿಗೆ ಒಂದೇ ಒಂದು ಸೀಟು ಸಿಗುವುದಿಲ್ಲ.

► ಕೇರಳದ ಮುಸ್ಲಿಮರು ಈ ಬಾರಿ ನಿಮಗೆ ಬೆಂಬಲ ನೀಡುವರೇ?

ಮುಸ್ಲಿಂ ಸಂಘಟನೆಗಳು ಯಾವ ನಿಲುವು ತಳೆಯುತ್ತವೆ ಎಂಬುದನ್ನು ನೋಡಿ ಕೇರಳದ ಮುಸ್ಲಿಮರು ಓಟು ಹಾಕುವುದಿಲ್ಲ. ಕೇರಳದ ಮುಸ್ಲಿಮರು ವಿದ್ಯಾವಂತರು. ಅವರ ಅನುಭವ ಕಾಂಗ್ರೆಸ್ ವಿರುದ್ಧವಾಗಿದೆ. ಕಾಂಗ್ರೆಸ್‌ನ ಜೊತೆ ಸೇರುವವರ ಕುರಿತು ಕೂಡ ಅವರಿಗೆ ವಿರೋಧವಿದೆ. ಬಾಬರಿ ಮಸೀದಿ ಕೆಡವಿದ್ದು ಕಾಂಗ್ರೆಸ್‌ನ ಸರಕಾರ ಕಾಲದಲ್ಲಾಗಿದೆ. ಈ ಅಸಮಾಧಾನ ಈವರೆಗೂ ಮುಸ್ಲಿಮರ ಮನಸ್ಸಿನಿಂದ ಮಾಸಿ ಹೋಗಿಲ್ಲ. ಗುಜರಾತ್ ಗಲಭೆಯಲ್ಲಿ 2,000ಕ್ಕೂ ಹೆಚ್ಚು ಮುಸ್ಲಿಮರು ಹತ್ಯೆಯಾಗಿದ್ದಾರೆ. ಮುಂಬೈ ಗಲಭೆಯಲ್ಲಿ ಸಾವಿರಾರು ಮುಸ್ಲಿಮರ ಹತ್ಯೆ ನಡೆಯಿತು. ಇವೆಲ್ಲ ಕಾಂಗ್ರೆಸ್ ಸರಕಾರವಿದ್ದಾಗಿನ ಘಟನೆಗಳು. ಕಾಂಗ್ರೆಸ್ ಸರಕಾರಗಳು ಇವುಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಇತ್ತೀಚೆಗೆ ಲೋಕಸಭೆಯಲ್ಲಿ ಮುತ್ತಲಾಕ್ ಮಸೂದೆ ಮಂಡಿಸಿದರು. ಕಾಂಗ್ರೆಸ್ ಅದಕ್ಕೆ ಒತ್ತಾಸೆ ನೀಡಿತು. ಪೌರತ್ವ ಮಸೂದೆಯ ಕುರಿತು ಕಾಂಗ್ರೆಸ್ ಮಾತನಾಡಲಿಲ್ಲ. ಮುಸ್ಲಿಮರಲ್ಲದವರಿಗೆ ಪೌರತ್ವ ನೀಡುವ ವಿಷಯದಲ್ಲಿ ಮಸೂದೆ ಮಂಡಿಸಿದಾಗ ಕಾಂಗ್ರೆಸ್ ಸರಿಯಾಗಿ ವಿರೋಧಿಸಲಿಲ್ಲ. ಇಂತಹ ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಹೋರಾಟ ಸಾಧ್ಯವಿಲ್ಲ. ಮಾತ್ರವಲ್ಲ ಗೆದ್ದ ಕಾಂಗ್ರೆಸಿಗರು ಬಿಜೆಪಿಗೆ ಪಕ್ಷಾಂತರ ವಾಗುತ್ತಾರೆ. ಗೋವಾ, ಮಣಿಪುರ, ಕರ್ನಾಟಕದಲ್ಲಿಯೂ ಹೀಗಾಗಿದೆ. ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೆಲ್ಲುವ ಕಾಂಗ್ರೆಸಿಗರಲ್ಲಿ ಸಿದ್ಧಾಂತ ಬದ್ಧತೆ ಇಲ್ಲ. ಆದ್ದರಿಂದ ಕಾಂಗ್ರೆಸ್‌ನಲ್ಲಿ ವಿಶ್ವಾಸ ಕಳಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕಾಂಗ್ರೆಸ್ ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಆದರೆ ಮಹತ್ವದ ವಿಷಯಗಳಲ್ಲಿ ಎಡಪಕ್ಷಗಳು ದೃಢ ನಿಲುವು ತೆಗೆದುಕೊಂಡಿವೆ . ಇದು ಎಡಪಕ್ಷಗಳಿಗೆ ಪ್ಲಸ್ ಪಾಯಿಂಟಾಗಿದೆ. ಈಗ ರಾಹುಲ್ ಗಾಂಧಿ ವಯನಾಡಿಗೆ ಬಂದು ಸ್ಪರ್ಧಿಸುತ್ತಿದ್ದಾರೆ. ಅಲ್ಲಿ ಮುಸ್ಲಿಂ ಲೀಗ್ ರಾಹುಲ್ ಗಾಂಧಿಗೆ ಬೆಂಬಲ ನೀಡುತ್ತಿದೆ. ಇದನ್ನು ನೆಪ ಮಾಡಿಕೊಂಡು ಬಿಜೆಪಿ ರಾಷ್ಟ್ರಾದ್ಯಂತ ಪಾಕಿಸ್ತಾನ ಧ್ವಜ ಹಿಡಿದರು ಎಂದು ಅಪಪ್ರಚಾರ ಮಾಡುತ್ತಿದೆ. ಇದಕ್ಕೆ ತಕ್ಕ ತಿರುಗೇಟು ನೀಡಲು ಕೂಡ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಇಂತಹ ವಿಷಯಗಳಲ್ಲಿ ಮುಸ್ಲಿಂ ವಿರೋಧ, ಪಾಕಿಸ್ತಾನ ವಿರೋಧವನ್ನು ಪ್ರಚಾರ ಮಾಡಿ ಜನರನ್ನು ಪ್ರಚೋದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಲೀಗಿನ ಬೆಂಬಲ ಇರುವುದರಿಂದ ಇದನ್ನು ಪ್ರತಿರೋಧಿಸಲು ಕಾಂಗ್ರೆಸ್‌ನಿಂದ ಸಾಧ್ಯವಾಗುತ್ತಿಲ್ಲ. ಇದು ಧಾರ್ಮಿಕ ಅಲ್ಪಸಂಖ್ಯಾತರು ನಮ್ಮತ್ತ ನೋಡಲು ಕಾರಣವಾಗಿದೆ. ಮಾತ್ರವಲ್ಲ ಎಡಪಕ್ಷ ಕೇರಳದಲ್ಲಿ ಬಲವಾಗಿದೆ. ಉಳಿದ ರಾಜ್ಯದಲ್ಲಿ ಈ ಪರಿಸ್ಥಿತಿಯಿಲ್ಲ. ಮಾತ್ರವಲ್ಲ ಕೇರಳದಲ್ಲಿ ಎಡಪಕ್ಷಗಳು ದುರ್ಬಲವಾದರೆ ಇತರ ರಾಜ್ಯಗಳ ಪರಿಸ್ಥಿತಿ ಇಲ್ಲಿಯೂ ಬರಬಹುದು. ಕಾಂಗ್ರೆಸ್ ಇರುವ ಇತರ ರಾಜ್ಯಗಳಲ್ಲಿ ತಮ್ಮ ತಮ್ಮ ಉಡುಗೆ ತೊಡುಗೆ, ಆಹಾರ ಪದ್ಧತಿ ಅನುಸರಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಆದರೆ ಇಲ್ಲಿ ಎಡಪಕ್ಷಗಳು ಪ್ರಬಲವಾಗಿವೆ. ಆದ್ದರಿಂದ ಅಂತಹ ಯಾವುದೂ ಇಲ್ಲಿ ನಡೆಯುತ್ತಿಲ್ಲ. ಆರೆಸ್ಸೆಸ್ ವಿರುದ್ಧ ಎಡಪಕ್ಷಗಳು ಹೋರಾಡುತ್ತವೆ . ಎಡಪಕ್ಷಗಳಿಲ್ಲದ ಕೇರಳವನ್ನು ಊಹಿಸಲೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಜಾತ್ಯತೀತ ಮತದಾರರು ಎಡಪಕ್ಷಗಳಿಗೆ ಪೂರ್ಣ ಬೆಂಬಲ ನೀಡುತ್ತಾರೆ.

► ರಾಹುಲ್ ಗಾಂಧಿಯವರನ್ನು ವಯನಾಡಿನಲ್ಲಿ ಸೋಲಿಸಲು ನೀವು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದೀರಿ ...

ಖಂಡಿತ ನಾವು ಅವರನ್ನು ಸೋಲಿಸುತ್ತೇವೆ. ವಯನಾಡಿನಲ್ಲಿ ಕಳೆದ ಚುನಾವಣೆಯಲ್ಲಿ ಕೇವಲ 21 ಸಾವಿರ ಮತಗಳ ಅಂತರದಿಂದ ಯುಡಿಎಫ್ ಗೆದ್ದಿದೆ. ಬಳಿಕ ವಿಧಾನಸಭಾ ಚುನಾವಣೆಯಲ್ಲೂ ಅದರ ಗೆಲುವಿನ ಅಂತರ ಕೇವಲ ಹತ್ತೊಂಬತ್ತು ಸಾವಿರ. ಆಗ ಎಲ್‌ಜೆಡಿ ಪಕ್ಷ ಯುಡಿಎಫ್ ಜೊತೆ ಇತ್ತು. ಈ ಸಲ ಎಲ್‌ಜೆಡಿ ಎಡಪಕ್ಷಗಳ ಜೊತೆ ಇದೆ. ಇದು ನಮಗೆ ಲಾಭವಾಗಿದೆ. ರಾಹುಲ್ ಗಾಂಧಿ ಸ್ಪರ್ಧೆಯಿಂದ ಪರಿಸ್ಥಿತಿ ಅವರಿಗೆ ಪೂರಕವಾಗಿ ಬದಲಾಗಿಲ್ಲ. ಹಾಗಾಗಿ ಅವರನ್ನು ಸೋಲಿಸುವುದು ಈ ಬಾರಿ ಕಷ್ಟವಲ್ಲ.

► ಈಗ ಕೇವಲ ಕೇರಳದಲ್ಲಿ ಎಡರಂಗ ಸರಕಾರ ಇದೆ. ಈ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಎಡರಂಗದ ಸಾಧನೆ ಹೇಗಿರಬಹುದು?

ಆ ಬಗ್ಗೆ ಈಗ ಏನು ಹೇಳುವುದಿಲ್ಲ. ಚುನಾಣೆ ಮುಗಿಯಲಿ. ಮತ್ತೆ ನೋಡೋಣ.

► ಕಾಂಗ್ರೆಸ್ ಮೃದು ಹಿಂದುತ್ವ ಅನುಸರಿಸುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇತ್ತೀಚೆಗೆ ಎಡರಂಗ ಕೂಡ ಈ ನೀತಿಯ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ...

ಇಲ್ಲವೇ ಇಲ್ಲ. ಅದು ಅಸಾಧ್ಯ. ಅಂತಹ ನೀತಿ ನಮ್ಮಲ್ಲಿಲ್ಲ. ನಾವು ಎರಡೂ ( ಹಿಂದೂ, ಮುಸ್ಲಿಂ) ಕೋಮುವಾದವನ್ನು ಸ್ಪಷ್ಟವಾಗಿ ವಿರೋಧಿಸುತ್ತೇವೆ. ಜಾತ್ಯತೀತ ತತ್ವದ ಜೊತೆ ರಾಜಿಯ ಪ್ರಶ್ನೆಯೇ ಇಲ್ಲ. ನಮ್ಮ 236 ಕಾರ್ಯಕರ್ತರನ್ನು ಆರೆಸ್ಸೆಸ್ ಕೊಂದಿದೆ.

share
ಮುಹಮ್ಮದ್ ಮಂಗಳೂರು
ಮುಹಮ್ಮದ್ ಮಂಗಳೂರು
Next Story
X