ಇಂದು ಪೌರಕಾರ್ಮಿಕರ ದಿನಾಚರಣೆ

ಪೌರಕಾರ್ಮಿಕರ ಸರಾಸರಿ ಆಯಸ್ಸು 40 ವರ್ಷ

ರಾಜ್ಯದಲ್ಲಿ ಮ್ಯಾನ್‌ಹೋಲ್‌ಗೆ 10 ವರ್ಷಗಳಲ್ಲಿ 79 ಮಂದಿ ಬಲಿ

ದೇಶದಲ್ಲಿ ಪ್ರತಿ ವರ್ಷ ಒಂದು ಸಾವಿರ ಮಂದಿ ಮ್ಯಾನ್‌ಹೋಲ್‌ಗಳಿಗೆ ಬಲಿಯಾಗುತ್ತಾರೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಕಳೆದ ಹತ್ತು ವರ್ಷದಲ್ಲಿ ಇಡೀ ರಾಜ್ಯದಲ್ಲಿ 79 ಮಂದಿ ಸಾವನ್ನಪ್ಪಿದ್ದಾರೆ. ಮ್ಯಾನ್ ಹೋಲ್ ಸ್ಕಾವೆಂಜ್ 2013 ಎಂಬ ಕಾಯ್ದೆ ಇದೆ. ಅದರ ಪ್ರಕಾರ ಮೃತರ ಕುಟುಂಬಕ್ಕೆ ಸರಕಾರಿ ನೌಕರಿ, ಉಚಿತ ಶಿಕ್ಷಣ, ನಿವೇಶನ ನೀಡಬೇಕು ಎಂಬ ನಿಯಮ ಇದೆ. ಇದನ್ನು ಯಾರು ಪಾಲಿಸುತ್ತಿಲ್ಲ. ಈ ಕಾಯ್ದೆ ಉಲ್ಲಂಘನೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇವಲ 10 ಲಕ್ಷ ರೂ. ಮಾತ್ರ ನೀಡಲಾಗುತ್ತಿದೆ. ಅದು ಸಹ ಸಮರ್ಪಕವಾಗಿ ತಲುಪುತ್ತಿಲ್ಲ. ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಸಿದ್ದರಾಮಯ್ಯ ಇದ್ದಾಗ ಗುತ್ತಿಗೆ ಪದ್ಧತಿ ರದ್ದುಗೊಳಿಸಿದರು. ಆದರೆ ಇನ್ನೂ ಕೆಲವು ಕಡೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಗುತ್ತಿಗೆ ದಾರರ ಲಾಭಿಗೆ ಸರಕಾರಗಳು ಮಣಿಯುತ್ತಿವೆ ಎನ್ನುವುದು ಕಾರ್ಮಿಕರ ಅಳಲು. ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎನ್ನಲಾಗಿದೆ.

-------------------------------------------------------------------------

✍️ ಯುವರಾಜ್

ಪೌರಕಾರ್ಮಿಕರ ಸರಾಸರಿ ಆಯಸ್ಸು 40 ವರ್ಷ

ಬೆಂಗಳೂರು: ನಮ್ಮ ಮನೆ ಹಾಗೂ ನಗರ ಸ್ವಚ್ಛವಾಗಿರಬೇಕಾದರೆ ಪೌರಕಾರ್ಮಿಕರ ಪಾತ್ರ ಬಹಳ ದೊಡ್ಡದಿರುತ್ತದೆ. ಆದರೆ, ಇವರಿಗೆ ಸರಕಾರದಿಂದ ಸಿಗುವ ಸೌಲಭ್ಯ ಏನೇನೂ ಇಲ್ಲ. ಗುತ್ತಿಗೆದಾರರೂ ಸರಿಯಾದ ಆರೋಗ್ಯ ಸೌಲಭ್ಯ ಒದಗಿಸದ ಕಾರಣ ಇಂದು ಪೌರಕಾರ್ಮಿಕರ ಸರಾಸರಿ ಆಯಸ್ಸು 40 ವರ್ಷ ಎಂದು ಗುರುತಿಸಲಾಗಿದೆ. ಗುತ್ತಿಗೆ ಪೌರಕಾರ್ಮಿಕರು ರಜೆಯನ್ನು ಲೆಕ್ಕಿಸದೆ ತಿಂಗಳು ಪೂರ್ತಿ ಕೆಲಸ ಮಾಡುತ್ತಿರುತ್ತಾರೆ. ಆದರೆ ವೇತನ ಕೊಡುವಾಗ ಶೇಕಡ 70-80ರಷ್ಟು ಕಾರ್ಮಿಕರಿಗೆ ವೇತನ ಚೀಟಿಯನ್ನು ನೀಡುವುದಿಲ್ಲ. ಹಾಗೂ ಸಾಕಷ್ಟು ಗುತ್ತಿಗೆದಾರರು ಪೌರಕಾರ್ಮಿಕರಿಗೆ ಕೇವಲ 15-20 ದಿನಗಳ ಭವಿಷ್ಯ ನಿಧಿ (CPD) ಹಣವನ್ನು ಮಾತ್ರ ಪಾವತಿಸುತ್ತಿದ್ದಾರೆ ಹಲವು ಕಾರ್ಮಿಕರು ಆರೋಪಿಸುತ್ತಾರೆ.

ಕೊರೋನ ಸೋಂಕು ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಸುರಕ್ಷತಾ ಕಿಟ್‌ಅನ್ನು ಬಿಬಿಎಂಪಿ ಒದಗಿಸಿಲ್ಲ. ಸರಕಾರದ ಸೂಚನೆ ಪ್ರಕಾರ ಪ್ರತಿಯೊಬ್ಬ ಪೌರಕಾರ್ಮಿಕನಿಗೆ ಎರಡು ಜತೆ ಮಾಸ್ಕ್, ಒಂದು ಜತೆ ಕೈ ಗ್ಲೌಸ್, ಶೂ ಮತ್ತು ಸ್ಯಾನಿಟೈಸರ್ ಒಳಗೊಂಡ ಕಿಟ್ ನೀಡಬೇಕು. ಆದರೆ, ಬಿಬಿಎಂಪಿ ಬೆರಳೆಣಿಕೆ ಪೌರಕಾರ್ಮಿಕರಿಗೆ ಸುರಕ್ಷತಾ ಕಿಟ್ ನೀಡಿದೆ. ಅಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿ 99 ಪೌರಕಾರ್ಮಿಕರ ಕಾಲನಿಗಳಿದ್ದು, ಈ ಕಾಲನಿಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತೆರಳಿ ತಪಾಸಣೆ ನಡೆಸಬೇಕು. ಆದರೆ, ಇದುವರೆಗೂ ಪೌರಕಾರ್ಮಿಕರ ಮನೆಗೆ ತೆರಳಿ ತಪಾಸಣೆ ನಡೆಸಿದ ಉದಾಹರಣೆ ಇಲ್ಲ ಎಂದು ಕಾರ್ಮಿಕರು ಆರೋಪಿಸುತ್ತಾರೆ.

ಪೌರಕಾರ್ಮಿಕರ ಬಗ್ಗೆ ಸರಕಾರ ಸಹ ಇದುವರೆಗೂ ಯಾವುದೇ ರೀತಿಯ ಸರಿಯಾದ ಕ್ರಮವನ್ನು ತೆಗದುಕೊಂಡಿಲ್ಲ. ಸಾಕಷ್ಟು ಜನ ಇ.ಎಸ್. ಐ ಸೌಲಭ್ಯ ಸಿಗದೆ, ತಮ್ಮ ಸಂಬಳದ ಬಹುತೇಕ ಹಣ ಆಸ್ಪತ್ರೆಗೆಂದೇ ಮೀಸಲಿಟ್ಟಿರುತ್ತಾರೆ. ಹೀಗಿರುವಾಗ 20 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರಲ್ಲಿ ದೈಹಿಕ ದೃಢತೆ ಇರಲು ಸಾಧ್ಯವಾಗುತ್ತಿಲ್ಲ. ಪೌರಕಾರ್ಮಿಕರಾಗಿ ಮುಂದುವರಿಯಬೇಕಾದರೆ ಬಿಬಿಎಂಪಿ ಮತ್ತು ಸರಕಾರಿ ವೈದ್ಯರಿಂದ ದೈಹಿಕ ದೃಢತೆಯ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದಿರಬೇಕು ಮತ್ತು ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಲೇಬೇಕು ಎಂಬ ನಿಯಮದಿಂದ ಹಲವಾರು ಮಂದಿ ಪೌರಕಾರ್ಮಿಕರು ಕೆಲಸವನ್ನು ಕಳೆದುಕೊಳ್ಳುತ್ತಿದ್ದಾರೆ.

ಆಯ್ಕೆಯ ವಿಧಾನದಲ್ಲಿ ತಾರತಮ್ಯ: ಹೆಚ್ಚು ವರ್ಷ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಿಂತ ಕಡಿಮೆ ಸಂಖ್ಯೆಯ ವರ್ಷಗಳು ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಆದ್ಯತೆ ನೀಡುವುದು ಹಾಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಹೆಚ್ಚು ವಯಸ್ಸಾದ ವ್ಯಕ್ತಿಯನ್ನು ಕಡಿಮೆ ವಯಸ್ಸಾದ ವ್ಯಕ್ತಿಗಿಂತ ಹಿರಿಯನೆಂದು ಪರಿಗಣಿಸಿ, ಅದರಂತೆ ವಯಸ್ಸಿನ ಆಧಾರದ ಮೇರೆಗೆ ಆಯ್ಕೆ ಮಾಡಿಕೊಂಡರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಬಿಬಿಎಂಪಿಯೇ ತಾರತಮ್ಯ ಸೃಷ್ಟಿಸಿದೆ ಎನ್ನಲಾಗಿದೆ.

► ಕೊರೋನಕ್ಕೆ 4 ಮಂದಿ ಬಲಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಮಂದಿ ಪೌರಕಾರ್ಮಿಕರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಇವರಲ್ಲಿ ಮೂರು ಮಂದಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಮೃತರಾಗಿದ್ದಾರೆ.

► ಕಾರ್ಮಿಕರ ನಡುವೆ ಅಸಮಾನತೆ

ರಾಜ್ಯದಲ್ಲಿ ಸುಮಾರು 45, 000ಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಎಲ್ಲರನ್ನೂ ಖಾಯಂ ಮಾಡಬೇಕು. ಹೊಸ ನಿಯಮದ ಪ್ರಕಾರ 20 ವರ್ಷಗಳಿಂದ ಗುತ್ತಿಗೆದಾರರ ಬಳಿ ಕೆಲಸ ಮಾಡಿದ ಪೌರಕಾರ್ಮಿಕರು ಹೊರಗೆ ಉಳಿಯುತ್ತಾರೆ. ವಯಸ್ಸನ್ನು ಆಧಾರವಾಗಿಟ್ಟುಕೊಂಡು ನೇಮಕಾತಿ ಮಾಡಿಕೊಳ್ಳುವುದು ಒಪ್ಪುವ ಮಾತಲ್ಲ. ಬಿಬಿಎಂಪಿ ಪೌರಕಾರ್ಮಿಕರ ನಡುವೆ ತಾರತಮ್ಯ ಸೃಷ್ಟಿಸುತ್ತಿದೆ. ಎಲ್ಲ ಪೌರಕಾರ್ಮಿಕರನ್ನು ಸಮಾನತೆಯಿಂದ ಕಾಣಬೇಕು. ಮೀಸಲಾತಿ ಪ್ರಕ್ರಿಯೆಯಿಂದ ಎಲ್ಲಾ ವರ್ಗದ ಜನರಿಗೂ ಅವಕಾಶ ಕೊಟ್ಟಿದೆ. ಆದರೆ, ಎಲ್ಲ ವರ್ಗದವರೂ ಈ ಕೆಲಸವನ್ನು ಮಾಡಲು ಸಾಧ್ಯವೇ? ಕಸದ ಕೆಲಸ ಮಾಡುವವರು ಎಂಬ ತಾರತಮ್ಯ ನೇಮ ಕಾತಿಯಲ್ಲಿಯೂ ಬಳಸಿರುವುದು ದುರಂತ.

- ಸೈಯದ್ ಮುಜೀಬ್, ರಾಜ್ಯ ಮುನ್ಸಿಪಾಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ

► ಪೌರಕಾರ್ಮಿಕರಿಗೆ ಆನ್‌ಲೈನ್ ಪ್ರಕ್ರಿಯೆ ಬೇಡ

ನಗರದ ಎಲ್ಲಾ ಪೌರಕಾರ್ಮಿಕರನ್ನು ಒಟ್ಟಿಗೆ ಖಾಯಂ ಕಾರ್ಮಿಕರನ್ನಾಗಿ ಮಾಡಬೇಕೆಂದು ನಾವು ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಬಿಬಿಎಂಪಿ ಹೊರಡಿಸಿರುವ ಈ ಅಧಿಸೂಚನೆ ಯಾರು ಒಪ್ಪುವಂತದಲ್ಲ. 20 ವರ್ಷಗಳಿಂದ ಸಾಕಷ್ಟು ಕಾರ್ಮಿಕರು ಬರೀ ಕೈಯಿಂದ ಕಸವನ್ನೆಲ್ಲಾ ಎತ್ತುತ್ತಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಯಾರಿಗೂ ಅನ್ಯಾಯವಾಗಬಾರದು. ಬಹುತೇಕ ಪೌರಕಾರ್ಮಿಕರಿಗೆ ಶಿಕ್ಷಣವಿಲ್ಲ, ಹಾಗೂ ಸಾಕಷ್ಟು ಕಾರ್ಮಿಕರಿಗೆ ತಮ್ಮ ಹೆಸರನ್ನು ಬರೆಯುವುದಕ್ಕೆ ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಆನ್‌ಲೈನ್ ಮುಖಾಂತರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಖಂಡಿಸುತ್ತೇನೆ.

 - ನಿರ್ಮಲಾ, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘ ಅಧ್ಯಕ್ಷೆ

-------------------------------------------------------------------------

✍️ ರಂಗರಾಜು ಎನ್.ಡಿ.

ಪೌರಕಾರ್ಮಿಕರಿಗೆ ಸವಲತ್ತು ಪುಸ್ತಕದಲ್ಲಿ ಮಾತ್ರ

► ಮೃತ ಪೌರಕಾರ್ಮಿಕರಿಗೆ ಇನ್ನೂ ಸಿಕ್ಕಿಲ್ಲ ಉಪಧನ

ತುಮಕೂರು:  ನಗರವೂ ಸೇರಿದಂತೆ 10 ತಾಲೂಕು ಕೇಂದ್ರಗಳನ್ನು ಒಳಗೊಂಡಿರುವ ತುಮಕೂರು ಜಿಲ್ಲೆ, 27 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. 1 ಮಹಾನಗರಪಾಲಿಕೆ, 2 ನಗರಸಭೆ, 4 ಪುರಸಭೆ, 3 ಪಪಂಗಳನ್ನು ಹೊಂದಿರುವ ಜಿಲ್ಲೆಯಲ್ಲಿ 331 ಗ್ರಾಪಂಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಯಲ್ಲಿ ತೊಡಗಿರುವ ಪೌರಕಾರ್ಮಿಕರ ಸಂಖ್ಯೆ 1,500ಕ್ಕೂ ಅಧಿಕವಿದೆ.

35 ವಾರ್ಡ್‌ಗಳನ್ನು ಹೊಂದಿರುವ ತುಮಕೂರು ನಗರದಲ್ಲಿ 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು, 700 ಜನರಿಗೆ ಓರ್ವ ಪೌರಕಾರ್ಮಿಕನಂತೆ 507 ಜನ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 149 ಜನ ಖಾಯಂ ನೌಕರರಿದ್ದರೆ, 362 ಜನರು ನೇರ ಪಾವತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಯಂ ನೌಕರರನ್ನು ಹೊರತು ಪಡಿಸಿದರೆ, ಉಳಿದವರಿಗೆ ಪಾಲಿಕೆಯಿಂದ ಇದುವರೆಗೂ ಸಮವಸ್ತ್ರ ವಿತರಿಸಿರುವ ಯಾವುದೇ ಉದಾಹರಣೆಯಿಲ್ಲ. ಇತ್ತೀಚೆಗೆ ಸ್ಥಳೀಯ ಬ್ಯಾಂಕ್‌ವೊಂದರ ಅಧ್ಯಕ್ಷರು ನೀಡಿದ ಸಮವಸ್ತ್ರವೇ ಆಧಾರ. ಇದು ಇಲ್ಲಿನ ಪೌರಕಾರ್ಮಿಕರ ಸ್ಥಿತಿ.

2002ರಿಂದ ಇದುವರೆಗೂ ಅಂದಾಜು 45ಕ್ಕೂ ಹೆಚ್ಚು ಪೌರಕಾರ್ಮಿಕರು ವಿವಿಧ ಕಾರಣಗಳಿಗಾಗಿ ಸಾವನ್ನಪ್ಪಿದ್ದಾರೆ. ಆದರೆ, ಅವರಿಗೆ ಉಪಧನ ನೀಡುವಂತೆ ಹಲವಾರು ಹೋರಾಟಗಳನ್ನು ನಡೆಸಿ, ನ್ಯಾಯಾಲಯದ ಮೆಟ್ಟಿಲು ಏರಿದ್ದರೂ ಇದುವರೆಗೂ ಉಪಧನ (ಇಡಿಗಂಟು) ಲಭ್ಯವಾಗಿಲ್ಲ. 13-06-2019ರಲ್ಲಿ ಈ ಸಂಬಂಧ ಲೇಬರ್ ಟ್ರಿಬ್ಯುನಲ್‌ನಿಂದ ಪೌರಕಾರ್ಮಿಕರ ಪರವಾಗಿ ತೀರ್ಪು ಬಂದಿದೆ. ಆದರೆ, ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿರುವ ಕಾರಣ ಇಂದಿಗೂ ಉಪಧನಲಭ್ಯವಾಗಿಲ್ಲ. ಮನೆಗೆ ಆಧಾರವಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡ ಪೌರಕಾರ್ಮಿಕರ ಕುಟುಂಬಗಳು ದಿನನಿತ್ಯ ಪರಿತಪಿಸುತ್ತಿವೆ. ಕೇವಲ ಬೆರಳೆಣಿಕಯಷ್ಟು ಕುಟುಂಬ ಸದಸ್ಯರಿಗೆ ಮಾತ್ರ ನಗರಪಾಲಿಕೆಯಲ್ಲಿ ಸಣ್ಣಪುಟ್ಟ ಉದ್ಯೋಗ ದೊರೆತಿದೆ. ಉಳಿದ ಕುಟುಂಬಗಳ ಸ್ಥಿತಿ ತೀರಾ ಚಿಂತಾಜನಕವಾಗಿದೆ. ತುಮಕೂರು ನಗರದಲ್ಲಿ ಇದುವರೆಗೂ ಮ್ಯಾನ್ ಹೋಲ್ (ಮ್ಯಾನುವೆಲ್ ಸ್ಕಾವೆಂಜರ್)ನಲ್ಲಿ ಕೆಲಸ ಮಾಡುವ ವೇಳೆ ಎರಡು ಜನರು ಮೃತಪಟ್ಟಿದ್ದು, ಸಿಐಟಿಯು, ಇತರ ಸಂಘಟನೆಗಳ ಒತ್ತಾಯದ ಮೇರೆಗೆ ತಲಾ 10 ಲಕ್ಷ ರೂ. ಪರಿಹಾರ ಒದಗಿಸಿದ್ದು, ಒಂದು ಕುಟುಂಬ ಸದಸ್ಯರಿಗೆ ಉದ್ಯೋಗ ದೊರೆತಿದೆ. ನಗರದ ಐದು ಕಡೆಗಳಲ್ಲಿ ಪೌರಕಾರ್ಮಿಕರು ಕೆಲಸ ಮುಗಿಸಿ ಮನೆಗೆ ತೆರಳುವ ಮುನ್ನ ಸ್ನಾನ ಮಾಡಬೇಕು ಎಂದರೆ ಶೇ.18ರ ನಿಧಿಯಲ್ಲಿ ಶೌಚಾಲಯ, ವಿಶ್ರಾಂತಿಗೃಹ ಮತ್ತು ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಬನಶಂಕರಿ ಮತ್ತು ಶೆಟ್ಟಿಹಳ್ಳಿ ಎಚ್.ಎಂ.ಎಸ್.ಕಾಲೇಜಿನ ಬಳಿಯ ಅಂಗನವಾಡಿ ಬಳಿ ಇರುವ ಶೌಚಾಲಯಗಳು ಬಾಗಿಲು ತೆರೆದಿರುವ ಉದಾಹರಣೆಗಳೇ ಇಲ್ಲ. ಬನಶಂಕರಿಯಲ್ಲಿರುವ ಶೌಚಾಲಯಕ್ಕೆ ನೀರಿ ವ್ಯವಸ್ಥೆ, ವಿದ್ಯುತ್ ಸಂಪರ್ಕವೂ ಇಲ್ಲ. 2012ರಲ್ಲಿಯೇ 4 ಲಕ್ಷ ರೂ.ಗಳಲ್ಲಿ ನಿರ್ಮಿಸಿದ್ದರೂ ಇದುವರೆಗೂ ಬಳಕೆಗೆ ಬಂದಿಲ್ಲ. ಉಳಿದವುಗಳ ಬಳಕೆ ಅಲ್ಪಪ್ರಮಾಣದಲ್ಲಿದೆ. ಇದು ಪಾಲಿಕೆಯ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಎನ್ನಬಹುದು.

► ಬಗೆಹರಿಯದ ಯುಜಿಡಿ ಕಾರ್ಮಿಕರ ಗೋಳು

ನಗರದಲ್ಲಿ ಕಟ್ಟಿಕೊಳ್ಳುವ ಯುಜಿಡಿಗಳನ್ನು ರಿಪೇರಿ ಮಾಡಲು ಎಂಟು ಕಾರ್ಮಿಕರು ಮತ್ತು ವಾಹನಗಳ ಡ್ರೈವರ್‌ಗಳು ಸೇರಿದಂತೆ 13 ಜನರು ಕೆಲಸ ಮಾಡುತ್ತಿದ್ದು, ಕರ್ನಾಟಕ ಗುತ್ತಿಗೆ ಕಾರ್ಮಿಕರ ನಿಷೇಧ ಮತ್ತು ನಿಯಂತ್ರಣ ಕಾಯ್ದೆ, ಕನಿಷ್ಠ ವೇತನ ಕಾಯ್ದೆ ಇವುಗಳ ಅಡಿಯಲ್ಲಿ ಬಾರದ ಕಾರಣ ಇವರ ಗೋಳು ಕೇಳುವವರಿಲ್ಲದಂತಾಗಿದೆ. ಯಾವುದೇ ಸ್ವಯಂ ರಕ್ಷಣಾ ಸಲಕರಣೆಗಳಿಲ್ಲದೆ ಕೆಲಸ ಮಾಡುವ ಇವರು, ಸವಲತ್ತು ಕೇಳಿದರೆ ಕೆಲಸದಿಂದ ತೆಗೆಯುವ ಪರಿಪಾಠ ಹೆಚ್ಚಾಗಿದೆ. ಪ್ರತಿ ಬಾರಿಯೂ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಕಾಲು ಹಿಡಿದು ಪುನಃ ಕೆಲಸಕ್ಕೆ ಸೇರುವಂತಹ ಪರಿಸ್ಥಿತಿ ಇದೆ.

► ನಂಜಪ್ಪನ ಕಣ್ಣೀರು

ನಂಜಪ್ಪಎಂಬ ಪೌರಕಾರ್ಮಿಕರು ಕಳೆದ 12 ವರ್ಷಗಳಿಂದ ತುಮಕೂರು ನಗರಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, 2018ರಲ್ಲಿ ಕೆಲಸ ಮಾಡುವ ವೇಳೆ ವಿಷಪೂರಿತ ಗಿಡವೊಂದು ತಗುಲಿದ ಪರಿಣಾಮ ಮೈಯಲ್ಲಾ ಕಪ್ಪುಮಚ್ಚೆಗಳಾಗಿ ಪರಿತಪಿಸುತಿದ್ದಾರೆ. ವಾರ್ಡ್‌ನ ಕೌನ್ಸಿಲರ್ ಅವರ ಸೂಚನೆಯಂತೆ ಮೂರು ತಿಂಗಳ ಕಾಲ ಚಿಕಿತ್ಸೆಗೆಂದು ರಜೆ ಹಾಕಿದ್ದರು. ಆ ನಂತರ ಕೆಲಸ ಹೋದರೆ ಸೇರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರು, ಮೇಯರ್ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನನಗೀಗ 45 ವರ್ಷ ಬೇರೆ ವೃತ್ತಿ ಗೊತ್ತಿಲ್ಲ. ಕೆಲಸ ನೀಡಿ ಎಂದರೆ, ಇಂದು, ನಾಳೆ ಎಂದು ಅಧಿಕಾರಿಗಳು ಸತಾಯಿಸುತ್ತಲೇ ಇದ್ದಾರೆ ಎಂಬುದು ನಂಜಪ್ಪಅವರ ಅಳಲಾಗಿದೆ.

-------------------------------------------------------------------------

✍️ ನೇರಳೆ ಸತೀಶ್ ಕುಮಾರ್

ಮಲ ಹೊರುವವರ ಸಂಖ್ಯೆ ಹೆಚ್ಚುತ್ತಿದೆ !: ನಾರಾಯಣ್ ಆಕ್ರೋಶ

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಪರಿಕಲ್ಪನೆಯಿಂದ ದೇಶದಲ್ಲಿ ಮಲ ಹೊರುವ ಕಾರ್ಮಿಕರ ಸಂಖ್ಯೆ ಜಾಸ್ತಿಯಾಗಿದೆ, ಹೊರತು ಕಡಿಮೆಯಾಗಿಲ್ಲ ಎಂದು ಮೈಸೂರಿನ ಮಾಜಿ ಮೇಯರ್ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೌರಕಾರ್ಮಿಕರ ದಿನಾಚರಣೆ ಆಂಗವಾಗಿ ‘ವಾರ್ತಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಪರಿಕಲ್ಪನೆ ಒಳ್ಳೆಯದೆ. ಆದರೆ, ಅದಕ್ಕೆ ತಂಕ್ಕಂತ ವ್ಯವಸ್ಥೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಅದು ಬಿಟ್ಟು ಬರೀ ಶೌಚಾಲಯಗಳನ್ನು ಕಟ್ಟಿಸಿದರೆ ಏನು ಪ್ರಯೋಜನ, ಶೌಚಾಲಯಗಳ ಪಿಟ್ ಗುಂಡಿಗಳು ತುಂಬಿದರೆ ಅದನ್ನು ಹೊರ ಹಾಕುವವರು ಯಾರು ಎಂದು ಪ್ರಶ್ನಿಸಿದರು.

ಸ್ವಚ್ಛಭಾರತ್ ಅಭಿಯಾನದಡಿ ಸಿನೆಮಾ, ನಾಟಕದವರು, ಮತ್ತು ಕ್ರಿಕೆಟ್ ತಾರೆಗಳನ್ನು ರಾಯಭಾರಿಗಳಾಗಿ ಮಾಡಿಕೊಂಡು ಕಸಗುಡಿಸುವ ತರಹ ಮಾಡಿ ಫೋಟೊ ಸೆಷನ್‌ಗಳಿಗಷ್ಟೇ ಸೀಮಿತಗೊಳಿಸಲಾಗುತ್ತದೆ. ಮಾಧ್ಯಮದವರು ಇರುವವರೆಗೆ ಅವರೆಲ್ಲಾ ಪೊರಕೆ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ನಂತರ ಅದನ್ನೆಲ್ಲಾ ಬಿಸಾಕಿ ಹೋಗುತ್ತಾರೆ. ಇದು ಮೋದಿಯವರ ಕಾನ್ಸೆಪ್ಟ್ ಎಂದು ಲೇವಡಿ ಮಾಡಿದರು.

ಸ್ವಚ್ಛಭಾರತ ಮಾಡುತ್ತಿರುವವರು ಪೌರಕಾರ್ಮಿಕರು. ದೇಶದಲ್ಲಿ 12 ಲಕ್ಷ ಪೌರಕಾರ್ಮಿಕರಿದ್ದಾರೆ. ಇವರು ದಿನ ನಿತ್ಯ ಕೆಲಸ ಮಾಡುತ್ತಿರುವುದರಿಂದಲೇ ಭಾರತ ಸ್ವಚ್ಛವಾಗಿರುವುದು ಎಂದು ಹೇಳಿದ ನಾರಾಯಣ್, ಯಾರೊ ಸೆಲೆಬ್ರಿಟಿಗಳೀಂದ ದೇಶ ಸ್ವಚ್ಛವಾಗುತ್ತಿಲ್ಲ. ಪೌರಕಾರ್ಮಿಕರಿಂದಲಷ್ಟೇ ಸ್ವಚ್ಛವಾಗುತ್ತಿರುವುದು ಈ ಜನರಿಗೆ ಕೇಂದ್ರ ಸರಕಾರ ಯಾವ ಸೌಲಭ್ಯಗಳನ್ನು ನೀಡುತ್ತಿಲ್ಲ. ಇಡೀ ದೇಶದಲ್ಲಿ 10 ಸಾವಿರ ರೂ.ಗಿಂತ ಹೆಚ್ಚು ವೇತನ ನೀಡುತ್ತಿಲ್ಲ. ಪ್ರಧಾನಿ ಅವರ ರಾಜ್ಯ ಗುಜರಾತ್‌ನಲ್ಲಿ ಕೇವಲ 8 ಸಾವಿರ ರೂ. ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 14 ಸಾವಿರ ರೂ.ಗೆ ಹೆಚ್ಚಳ ಮಾಡಿದ್ದು, ಬಿಟ್ಟರೆ ಬೇರೆ ಅವಧಿಯಲ್ಲಿ ಹೆಚ್ಚಳವಾಗಿಲ್ಲ ಎಂದು ಹೇಳಿದರು.

► ‘ಪೌರಕಾರ್ಮಿಕರ ದಿನಾಚರಣೆಯೇ ಬೋಗಸ್’

ಸರಕಾರ ಸೆ.23ರಂದು ಪೌರಕಾರ್ಮಿಕರ ದಿನಾಚರಣೆ ಮಾಡುವಂತೆ ಆದೇಶ ಮಾಡಿದೆ. ಇದರಿಂದ ಪೌರಕಾಮಿಕರಿಗೆ ಏನು ಪ್ರಯೋಜನ ಇಲ್ಲ. ಪುರಸಭೆ ಸೇರಿದಂತೆ ಕೆಲವು ಕಡೆ ನಾಮಕಾವಸ್ಥೆಗೆ ಆಚರಣೆ ಮಾಡಲಾಗುತ್ತಿದೆ. ಪೌರಕಾರ್ಮಿಕರನ್ನು ಕರೆಸಿ ಅವರಿಗೆ ಸುಮ್ಮನೆ ಒಂದು ಹಾರ, ಶಾಲು ಹಾಕಿ ಸನ್ಮಾನಿಸಿ ಕಾಟಾಚಾರಕ್ಕೆ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಕಿಡಿಕಾರಿದರು. ಪೌರಕಾರ್ಮಿಕರ ದಿನಾಚರಣೆಯನ್ನು ಶಿಕ್ಷಕರ, ಕಾರ್ಮಿಕರ, ಡಾಕ್ಟರ್ಸ್ ಮತ್ತು ಮಹಿಳಾ ದಿನಾಚರಣೆಗಳನ್ನು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಹೇಗೆ ಆಚರಣೆ ಮಾಡಲಾಗುತ್ತದೆಯೋ ಆ ಮಾದರಿಯಲ್ಲಿ ಆಚರಿಸಬೇಕು ಎಂಬುದು ನಮ್ಮ ಬೇಡಿಕೆ, ಆದರೆ ಸರಕಾರ ಅದ್ಯಾವುದನ್ನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

------------------------------------------------------------------------- 

✍️ ಸತ್ಯಾ ಕೆ.

ಮಂಗಳೂರು: ಅತಂತ್ರ ಸ್ಥಿತಿಯಲ್ಲಿ ಪೌರಕಾರ್ಮಿಕರು

► 64 ಮಂದಿಯ ಖಾಯಮಾತಿಯ ಅನುಮೋದನೆ ಇನ್ನೂ ಆಗಿಲ್ಲ್ಲ!

ಮಂಗಳೂರು: ದೇಶದ ಸ್ವಚ್ಛ ನಗರಗಳಲ್ಲಿ ಮಂಗಳೂರು ನಗರ ಕೂಡಾ ಒಂದು. ನಗರದ ಸ್ವಚ್ಛತೆಯಲ್ಲಿ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರ ಪಾತ್ರ ಮಹತ್ತರವಾದುದು. ಸದ್ಯದ ಮಾಹಿತಿಯ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 210 ಮಂದಿ (ಗುತ್ತಿಗೆ ಕಾರ್ಮಿಕರನ್ನು ಹೊರತುಪಡಿಸಿ) ಖಾಯಂ ಪೌರಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 42 ಪೌರ ಕಾರ್ಮಿಕರಿಗೆ ಸರಕಾರಿ ವೇತನ, ಭತ್ತೆ ಸೇರಿದಂತೆ ಇತರ ಸೌಲಭ್ಯಗಳು ದೊರಕುತ್ತಿವೆ. ಆದರೆ ಖಾಯಮಾತಿ ಬಗ್ಗೆ ಸರಕಾರದಿಂದ ಇನ್ನೂ ಅನುಮೋದನೆಯಾಗಿಲ್ಲ!

2000ರ ಮೇ ತಿಂಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ದಿನಕೂಲಿ ನೌಕರರಾಗಿ ಸುಮಾರು 10 ವರ್ಷಗಳಿಗೂ ಅಧಿಕ ಕಾಲ ದಿನಕೂಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ 64 ನೌಕರರನ್ನು ಖಾಯಂಗೊಳಿಸಲು ಒತ್ತಾಯಿಸಲಾಗಿತ್ತು. ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಇವರ ಸಕ್ರಮಾತಿ ಅದೇಶಕ್ಕೆ ಅನುಮೋದನೆ ನೀಡುವಂತೆ 2006ರ ಸೆ.29ರಂ ಪತ್ರದಲ್ಲಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಹಲವು ಒತ್ತಾಯ, ಬೇಡಿಕೆಯ ಹೊರತಾಗಿಯೂ ಪೌರಾಡಳಿತ ನಿರ್ದೇಶನಾಲಯದಿಂದ ಈವರೆಗೂ ಈ ಪೌರಕಾರ್ಮಿಕರ ಖಾಯಮಾತಿ ಅನುಮೋದನೆ ದೊರಕಿಲ್ಲ. ವಿಶೇಷವೆಂದರೆ ಅಂದು 64 ಮಂದಿಯಿದ್ದ ಪೌರ ಕಾರ್ಮಿಕರಲ್ಲಿ ಈಗಾಗಲೇ 22 ಮಂದಿ ಮೃತಪಟ್ಟಿದ್ದಾರೆ. ಈಗಿರುವುದು 42 ಮಂದಿ ಮಾತ್ರ!

ಸರಕಾರದಿಂದ ಖಾಯಮಾತಿ ಅನುಮೋದನೆ ಆಗಿದ್ದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ನೆಲೆಯಲ್ಲಿ ಉದ್ಯೋಗ ದೊರಕುತ್ತಿತ್ತು. ನಿವೃತ್ತಿಯಾದ ಬಳಿಕ ಪಿಂಚಣಿ, ನಿವೃತ್ತಿ ವೇತನ ದೊರೆಯುತ್ತಿತ್ತು. ಆದರೆ ಸದ್ಯ ದುಡಿಯುತ್ತಿರುವರಿಗೆ ಸರಕಾರಿ ವೇತನ ಹಾಗೂ ಸೌಲಭ್ಯ ಹೊರತುಪಡಿಸಿ ನಿವೃತ್ತಿ ಅಥವಾ ಮೃತರಾದ ಬಳಿಕ ದೊರಕುವ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ಇದು ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಪರಿಸ್ಥಿತಿ ಎನ್ನುತ್ತಾರೆ ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ ಎಸ್.ಪಿ.

► 35 ರೂ. ದಿನಗೂಲಿಯಲ್ಲಿ ವೃತ್ತಿ ಆರಂಭ

‘‘ನಾನು 37 ವರ್ಷಗಳಿಂದ ಪೌರ ಕಾರ್ಮಿಕನಾಗಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ದುಡಿಯುತ್ತಿದ್ದೇನೆ. ಆರಂಭದ 17 ವರ್ಷ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡಿದ್ದೇನೆ. ಆರಂಭದಲ್ಲಿ ದಿನವೊಂದಕ್ಕೆ 35 ರೂ.ಯಂತೆ ತಿಂಗಳಿಗೆ ಸುಮಾರು 900 ರೂ. ಸಂಬಳ ಸಿಗುತ್ತಿತ್ತು’’ ಎನ್ನುತ್ತಾರೆ ಮಂಗಳೂರಿನ ಹಿರಿಯ ಪೌರ ಕಾರ್ಮಿಕರಲ್ಲಿ ಒಬ್ಬರಾದ ಎನ್.ರಾಮಚಂದ್ರ ಜೆಪ್ಪು.

► ಮಂಗಳೂರು ಸ್ವಚ್ಛತೆಯಲ್ಲಿ ನನ್ನ ಪಾಲಿದೆ ಎಂಬ ಹೆಮ್ಮೆಯಿದೆ

‘‘ಪೌರ ಕಾರ್ಮಿಕನಾಗಿ ಮಂಗಳೂರಿನ ಸ್ವಚ್ಛತೆಯಲ್ಲಿ ನನ್ನದೂ ಒಂದು ಪಾತ್ರವಿದೆ ಎಂಬ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನ ಕೆಲಸದ ಬಗ್ಗೆ ನನಗೆ ಗೌರವವಿದೆ. ಕಳೆದ 32 ವರ್ಷಗಳಿಂದ ಪೌರ ಕಾರ್ಮಿಕನಾಗಿ ನಾನು ದುಡಿಯುತ್ತಿದ್ದೇನೆ’’ ಎನ್ನುತ್ತಾರೆ ಮಂಗಳೂರಿನ ಬಳ್ಳಾಲ್ ಬಾಗ್ ನಿವಾಸಿ ಸುಂದರ.

ಪೌರ ಕಾರ್ಮಿಕರ ಈ ಅತಂತ್ರ ಪರಿಸ್ಥಿತಿ ಕುರಿತಂತೆ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರ ಸಂಘಟನೆಯ ನಾಯಕರು ಸೇರಿದಂತೆ ದಲಿತ ನಾಯಕರು ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರಕಾರದ ಅನುಮೋದನೆಗೆ ಆಗ್ರಹಿಸುತ್ತಾ  ಬಂದಿದ್ದೇವೆ. ಆದರೆ ಕ್ರಮ ಆಗಿಲ್ಲ.

- ಜಗದೀಶ್, ದಲಿತ ಮುಖಂಡ 

------------------------------------------------------------------------- 

✍️ ಸಿ.ವಿ.ನಾಗರಾಜ್, ಕೋಲಾರ

ಗಣಿ ನಾಡಿನ ಕಳಂಕಮಲ ಹೊರುವ ಪದ್ಧತಿ

ಕೋಲಾರ: ಬ್ರಿಟಿಷ್ ಭಾರತದ ಇತಿಹಾಸದ ಪುಟಗಳಲ್ಲಿ ಕೋಲಾರ ಜಿಲ್ಲೆಯ ಪಾತ್ರ ಬಹಳ ವಿಶಿಷ್ಟವಾಗಿದೆ. ಆಧುನಿಕತೆಯ ಜಗತ್ತಿನ ಹಲವು ಪ್ರಥಮಗಳಿಗೆ ಕೋಲಾರ ಜಿಲ್ಲೆ ಸಾಕ್ಷಿಯಾಗಿದೆ. 1880ರಲ್ಲಿ ಬ್ರಿಟಿಷ್ ಗಣಿ ಉದ್ಯಮಿಗಳಾದ ಜಾಜ್ ಟೇಲರ್ ಬ್ರದರ್ಸ್‌ ಕಂಪೆನಿ ಆರಂಭಿಸಿದ ಚಿನ್ನದ ಗಣಿಗಳು ಇವೆಲ್ಲಕ್ಕೂ ಕಾರಣವಾಗಿವೆ. ಇವೆಲ್ಲವೂ ಗುಣಾತ್ಮಕವಾದ ಬೆಳವಣಿಗೆಗಳಾದರೆ ಮತ್ತೊಂದು ಅಮಾನವೀಯ ಪದ್ಧತಿಯೊಂದು ವೃತ್ತಿಯಾಗಿ ಇಲ್ಲಿಂದಲೇ ಆರಂಭವಾಯಿತು. ಅದು ಮಲಹೊರುವ ಪದ್ಧತಿ...!

ಅಂದರೆ ಅದಕ್ಕೂ ಮುಂಚೆ ಮಲಹೊರುತ್ತಿರಲಿಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಆದರೆ, ಒಂದು ಅಮಾನುಷ ಪದ್ಧತಿ ಸಾಂಸ್ಥಿಕ ವೃತ್ತಿಯಾಗಿ ಆರಂಭವಾಗಿದ್ದು, ಇಲ್ಲಿಂದಲೇ ಎಂದರೆ ತಪ್ಪಾಗಲಾರದು. ಇದರಿಂದ ದೇಶಾದ್ಯಂತ ಲಕ್ಷಾಂತರ ಮಂದಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡವರು 50 ವರ್ಷಗಳ ಒಳಗೇ ತಮ್ಮ ಜೀವ ಕಳೆದುಕೊಂಡಿರುವುದು ಗುಟ್ಟಾಗಿ ಏನೂ ಉಳಿಯಲಿಲ್ಲ. ಈ ಕಾರಣದಿಂದ ನಡೆದ ಹಲವು ದಶಕಗಳ ಹೋರಾಟಗಳ ಪ್ರತಿಫಲವಾಗಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಾಜಿ ಸಿಎಂ ದಿ.ದೇವರಾಜು ಅರಸು ಅವರ ಆಡಳಿತದಲ್ಲಿ ಮಲಹೊರುವ ಅಮಾನವೀಯ ಪದ್ಧತಿಯನ್ನು ನಿಷೇಧಿಸಲಾಯಿತು.

1978ರ ಕಾಲಘಟ್ಟದಲ್ಲಿ ಕರ್ನಾಟಕ ಸರಕಾರ ತೆಗೆದುಕೊಂಡ ಈ ನಿರ್ಣಯ ಸ್ವಾಗತಾರ್ಹವಾದರೂ ಇದನ್ನು ಕಾನೂನಾಗಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ವಿಫಲವಾದರು. ನಂತರದ ದಿನಗಳಲ್ಲಿ ಗಣಿ ಕಾರ್ಮಿಕನ ಕುಡಿ ವಿಲ್ಸನ್ ಬೆಜವಾಡ ನೇತೃತ್ವದಲ್ಲಿ ಮಲಹೊರುವ ಪದ್ಧತಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದು, ಬಳಿಕ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು. ಅದು 1993ರಲ್ಲಿ ಮಹತ್ವದ ತೀರ್ಪು ನೀಡಿ ದೇಶ ವ್ಯಾಪ್ತಿ ಮಲಹೊರುವ ಪದ್ಧತಿಯನ್ನು ಅಪರಾಧವೆಂದು ತೀರ್ಪಿನತ್ತ ಪರಿಣಾಮ ಕೇಂದ್ರ ಸರಕಾರ ಪೂರಕವಾದ ಕಾನೂನು ರಚಿಸಲೇಬೇಕಾಯಿತು. ಮ್ಯಾನುವಲ್ ಸ್ಕಾವೇಂಜರ್ ಅಬಾಲಿಷನ್ ಆ್ಯಕ್ಟ್ ಪ್ರಕಾರ ದೇಶದಲ್ಲಿ ಮಲ ಹೊರುವ ಕುಟುಂಬಗಳನ್ನು ಗುರುತಿಸಿ ಅವರಿಗೆ ಪುನರ್ವಸತಿ, ಪರ್ಯಾಯ ಉದ್ಯೋಗ ಅವಕಾಶಗಳನ್ನು ಕಲ್ಪಿಸಬಹುದಾಗಿದೆ ಎಂದು ಹೇಳಿದೆ. ಇಷ್ಟಾದರೂ ಕಾನೂನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಸರಕಾರಗಳು ಇಚ್ಚಾಶಕ್ತಿ ತೋರಲೇ ಇಲ್ಲ. ಆದರೆ, ಸರಕಾರ ಹಾಗೂ ನ್ಯಾಯಾಲಯಗಳಿಗೆ ಮಲಹೊರುವ ಪದ್ಧತಿ ಇಲ್ಲವೆಂದೇ ಸರಕಾರ ವರದಿ ಒಪ್ಪಿಸಿತು.

ಹೀಗಿರುವಾಗ 2011ರಲ್ಲಿ ಕೆ.ಜಿ.ಎಫ್‌ನಲ್ಲಿ ಮಲಹೊರುವ ಪದ್ಧತಿ ಜೀವಂತ ಇರುವ ಸುದ್ದಿಗಳು ಪ್ರಕಟವಾದವು ಇದರ ಸತ್ಯಾಸತ್ಯತೆ ತಿಳಿಯಲು ಅಂದಿನ ಸರಕಾರದ ಬಿಜೆಪಿ ಮುಖಂಡ ಹಾಗೂ ಪೌರಾಡಳಿತ ಸಚಿವ ಸುರೇಶ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದೃಢಪಡಿಸಿಕೊಂಡು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸರ್ವೇ ನಡೆಸಿ ಸುಮಾರು 147 ಮಲಹೊರುತ್ತಿದ್ದ ಕುಟುಂಬಗಳ ಸದಸ್ಯರಿಗೆ ನಗರಸಭೆಯಲ್ಲಿ ದಿನಗೂಲಿ ಕೆಲಸ ನೀಡಲಾಯಿತಾದರೂ ಅದು ಕೇವಲ ಮೂರೇ ತಿಂಗಳಲ್ಲಿ ನಿಂತು ಹೋಯಿತು. ಇದರಿಂದ ಮತ್ತೆ ಆ ಕುಟುಂಬಗಳು ಅದೇ ಕೆಲಸಕ್ಕೆ ಮರಳಬೇಕಾಯಿತು. ಇದಾದ ಕೆಲವೇ ದಿನಗಳಲ್ಲಿ ಕೆ.ಜಿ.ಎಫ್. ನಗರದ ಅಶೋಕನಗರದಲ್ಲಿ ಮಲದಗುಂಡಿಯನ್ನು ತೆಗೆಯಲು ಇಳಿದ ಕುಟ್ಟಿ ಪ್ರಸಾದ್, ನಾಗೇಂದ್ರ ಬಾಬು, ರವಿ, ಮೂವರು ಯುವಕರು ಉಸಿರುಕಟ್ಟಿ ಅಸುನೀಗಿದರು. ಇದು ಇಡೀ ದೇಶದ ಗಮನ ಸೆಳೆಯಿತು. ಇದನ್ನು ಪ್ರಶ್ನಿಸಿದ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿ ಕೇಸುಗಳನ್ನು ದಾಖಲು ಮಾಡಲಾಯಿತು. ಇದಾದ ಕೆಲವೇ ದಿನಗಳಲ್ಲಿ ಕೋಲಾರ ನಗರದ ಆರ್‌ಟಿಒ ಕಚೇರಿ ಮುಂಭಾಗದಲ್ಲೇ ಇಬ್ಬರು ಯುವಕರು ಒಳಚರಂಡಿಯಲ್ಲಿ ಇಳಿದು ಮಲ ತೆಗೆಯುವಾಗ ಉಸಿರುಗಟ್ಟಿ ಪ್ರಾಣ ಕಳೆದುಕೊಂಡರು. ಇದು ಕೋಲಾರ ಜಿಲ್ಲೆಯಲ್ಲಿ ಮಲಹೊರುವ ಪದ್ಧತಿ ಜೀವಂತ ಇರುವುದಕ್ಕೆ ಸಾಕ್ಷಿಯನ್ನು ಒದಗಿಸಿತು. ಈ ವಿಚಾರವನ್ನು ಅಂದಿನ ರಾಜ್ಯ ಮಾನವ ಹಕ್ಕುಗಳ ಅಧ್ಯಕ್ಷ ನ್ಯಾ.ಎಸ್.ಆರ್. ನಾಯಕ್ ಅವರ ಗಮನಕ್ಕೂ ತರಲಾಗಿತ್ತು.

ಈ ಎಲ್ಲಾ ಬೆಳವಣಿಗೆಗಳು ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಕಾರಣವಾಯಿತು. ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಲವು ಸಮೀಕ್ಷೆಗಳು ನಡೆಸಿ, ಹಲವು ಸಾಲ ಯೋಜನೆಗಳನ್ನು ರೂಪಿಸಿತಾದರೂ ಅವೆಲ್ಲವೂ ಅನರ್ಹರ ಪಾಲಾಗಿ ಹೋಯಿತೇ ವಿನಃ ನಿಜವಾದ ಕುಟುಂಬಗಳಿಗೆ ಧಕ್ಕಲೇ ಇಲ್ಲ. ಜನಪ್ರತಿನಿಧಿಗಳ ಚೇಲಾಗಳು ಈ ಮ್ಯಾನ್ಯುವೆಲ್ ಸ್ಕಾವೇಂಜರ್ಸ್‌ ಗಾಗಿ ಮೀಸಲಿಟ್ಟ ಸಾಲ ಯೋಜನೆಗಳನ್ನು ಲೂಟಿ ಹೊಡೆದರು.

► ಮಲ ಹೊರುವವರ ಸಂಖ್ಯೆ ಏರುತ್ತಿದೆಯೇ?

ಕೋಲಾರ ಜಿಲ್ಲೆಯಲ್ಲಿ ಮಲಹೊರುವ ಕುಟುಂಬಗಳು ಸುಮಾರು 2 ಸಾವಿರಕ್ಕೂ ಹೆಚ್ಚು ಇದ್ದರೂ ಅಧಿಕಾರಿಗಳು ಸತ್ಯವನ್ನು ಮುಚ್ಚಿ ತಪ್ಪುಅಂಕಿ-ಅಂಶಗಳನ್ನು ನೀಡುತ್ತಿದ್ದಾರೆ. ಸರಕಾರವೇ ನೀಡಿರುವ ಅಂಕಿ-ಅಂಶಗಳ ಪ್ರಕಾರ 2014-15ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮಲಹೊರುವ 149 ಕುಟುಂಬಗಳು ಇವೆ, ಮತ್ತು 2017-18ರಲ್ಲಿ 404 ಮಲಹೊರುವ ಕುಟುಂಬಗಳು ಇವೆ. ಈ ಅಂಕೀ ಅಂಶಗಳೇ ಹೇಳುತ್ತವೆ ಮಲಹೊರುವ ಕುಟುಂಬಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಹೇಗೆ ಸಾಧ್ಯ? ಅಂದರೆ ಜಿಲ್ಲೆಯಲ್ಲಿ ಈ ಅಮಾನುಷ ಪದ್ಧತಿ ಇದೇ ಎಂದೇ ಒಪ್ಪಿಕೊಂಡಂತಲ್ಲವೇ? ಸರಕಾರ ಮಲದ ಗುಂಡಿಗಳನ್ನು ಶುಚಿಗೊಳಿಸಲು ಬೇಕಾದ ಆಧುನಿಕ ಯಂತ್ರಗಳನ್ನು ಹಾಗೂ ಅವಶ್ಯಕತೆಗೆ ಬೇಕಾದಷ್ಟು ಯಂತ್ರಗಳನ್ನು ಪೂರೈಸುವ ಮೂಲಕ ಮಾನವ ಶುಚಿಗೊಳಿಸುವುದನ್ನು ತಡೆಯಬೇಕು.

- ಪದ್ಮಾ ಎಂ. ರಾಜ್ಯ ಸಂಘಟನಾ ಸಂಚಾಲಕಿ, ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿ

------------------------------------------------------------------------- 

✍️ ಶರತ್ ಪುರದಾಳ್

ಪ್ರತ್ಯೇಕ ವೇತನ ಮಂಡಳಿ ರಚನೆಗೆ ಪಟ್ಟು

ಶಿವಮೊಗ್ಗ: ಪೌರಕಾರ್ಮಿಕರ ಸ್ಥಿತಿಗತಿ, ಸರಕಾರದ ಮುಂದೆ ಪೌರಕಾರ್ಮಿಕರ ಬೇಡಿಕೆ ಕುರಿತು ಮಹಾನಗರ ಪಾಲಿಕೆ ಪೌರಕಾರ್ಮಿಕ ಸಂಘದ ಕಾರ್ಯದರ್ಶಿಎನ್. ಗೋವಿಂದ್ ವಾರ್ತಾಭಾರತಿಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ವಾ.ಭಾ.: ಪಾಲಿಕೆಯಲ್ಲಿ ಎಷ್ಟು ಜನ ಕಾರ್ಮಿಕರಿದ್ದಾರೆ?

ಪಾಲಿಕೆಯಲ್ಲಿ ಸದ್ಯ ಒಟ್ಟು 543 ಪೌರಕಾರ್ಮಿಕರಿದ್ದಾರೆ.ಇವರಲ್ಲಿ 227 ಹೊರಗುತ್ತಿಗೆ ನೌಕರರು, 115 ಲೋಡರ್ಸ್ ಮತ್ತು 178 ಖಾಯಂ ನೌಕರರಿದ್ದಾರೆ.

ವಾ.ಭಾ.: ಪೌರ ಕಾರ್ಮಿಕ ಮಹಿಳೆಯರಿಗಾಗಿ ಪಾಲಿಕೆ ಯಾವ ಯೋಜನೆ ತಂದಿದೆ?

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮಹಾನಗರ ಪಾಲಿಕೆ ಪೌರಕಾರ್ಮಿಕ ಹೆಣ್ಣುಮಕ್ಕಳಿಗಾಗಿ ತಾಳಿ ಭಾಗ್ಯ ಯೋಜನೆ ಜಾರಿಗೆ ತಂದಿದೆ. ತಾಳಿಭಾಗ್ಯ ಯೋಜನೆಯಡಿ 50,000 ರೂ. ಪಾಲಿಕೆ ನೀಡುತ್ತಿದೆ. ಈವರೆಗೆ 17 ಪೌರ ಕಾರ್ಮಿಕ ಮಹಿಳೆಗೆ ಈ ಸೌಲಭ್ಯ ದೊರೆಕಿದೆ. ಹೊರ ಗುತ್ತಿಗೆ ಪೌರ ಕಾರ್ಮಿಕ ಮಹಿಳೆಯರಿಗೂ ತಾಳಿಭಾಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ.

ವಾ.ಭಾ.: ಪೌರ ಕಾರ್ಮಿಕರಿಗಾಗಿ ಸರಕಾರ ಗೃಹಭಾಗ್ಯ ಯೋಜನೆ ಜಾರಿಗೆ ತಂದಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಈ ಯೋಜನೆ ಯಾವ ಹಂತದಲ್ಲಿದೆ?

ರಾಜ್ಯ ಸರಕಾರ ಜಾರಿಗೆ ತಂದ ಗೃಹಭಾಗ್ಯ ಯೋಜನೆಗೆ ಪೌರಕಾರ್ಮಿಕರ ಬೇಡಿಕೆಗೆ ಉತ್ತಮ ಪ್ರತಿಕ್ರಿಯೇ ದೊರಕಿದೆ. 6 ಲಕ್ಷ ರೂ. ವೆಚ್ಚದಲ್ಲಿ ಜಿ+2 ಮಾದರಿಯಲ್ಲಿ 168 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಪಾಲಿಕೆ ವ್ಯಾಪ್ತಿಯ ನವುಲೆ ಗ್ರಾಮದಲ್ಲಿ 6 ಎಕರೆ ಜಾಗದಲ್ಲಿ ಮನೆ ನಿರ್ಮಾಣಗೊಳ್ಳಲಿದೆ. ಅ.2ರಂದು ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ದೊರೆಯಲಿದೆ.

ವಾ.ಭಾ.: ಸರಕಾರಕ್ಕೆ ಪೌರಕಾರ್ಮಿಕರ ಬೇಡಿಕೆ ಏನು?

ಪೌರಕಾರ್ಮಿಕರನ್ನು ಸರಕಾರಿ ನೌಕರರು ಅಂತ ಪರಿಗಣಿಸಬೇಕು. ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯಬೇಕು. ಪೌರ ಕಾರ್ಮಿಕರ ಪ್ರತ್ಯೇಕ ವೇತನ ಮಂಡಳಿ ರಚನೆ ಮಾಡಬೇಕು. ಪೌರಕಾರ್ಮಿಕರಿಗೆ ಪ್ರಾರಂಭಿಕ ವೇತನವಾಗಿ 25,000 ರೂ. ನಿಗದಿ ಮಾಡಬೇಕು.ಕಾಲಕಾಲಕ್ಕೆ ಭಡ್ತಿ ದೊರೆಯಬೇಕು.ವರ್ಗಾವಣೆ ನಿಲ್ಲಿಸಬೇಕು.

ವಾ.ಭಾ.: ಇತ್ತೀಚೆಗೆ ಕೊರೋನ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಕೋವಿಡ್ಸೋಂಕಿ ನಿಂದ ನಿಧನರಾಗಿದ್ದಾರೆ.ಈ ಬಗ್ಗೆ ಏನು ಹೇಳುತ್ತಿರಿ?

ಕೊರೋನ ಸೋಂಕಿನಿಂದ ಖಾಯಂ ಪೌರಕಾರ್ಮಿಕ ರಾದ ಚೆನ್ನಮ್ಮ ಹಾಗೂ ಹೊರಗುತ್ತಿಗೆ ನೌಕರನಾದ ಪಾಪಾ ನಾಯ್ಕಿ ನಿಧನರಾಗಿದ್ದಾರೆ. ಪಾಲಿಕೆಯ ಚಿತಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಪಾನಾಯಕ್ ಕೋವಿಡ್‌ನಿಂದ ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಪಾಲಿಕೆಯಿಂದ 3 ಲಕ್ಷ ರೂ. ಪರಿಹಾರ ಹಾಗೂ ಕೊರೋನ ವಾರಿಯರ್ಸ್‌ಗೆ ನೀಡುವ 30 ಲಕ್ಷ ರೂ. ಪರಿಹಾರ ನೀಡಲು ಸರಕಾರಕ್ಕೆ ಒತ್ತಾಯಿಸಲು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ.

-------------------------------------------------------------------------  

ಸೂರು ಕಲ್ಪಿಸಿ: ಫಕೀರಪ್ಪ

ದಾವಣಗೆರೆ: ವಾಸಕ್ಕೆ ಸೂರು ಇಲ್ಲ, ಬಾಡಿಗೆ ಮನೆಯಲ್ಲಿ ವಾಸ ಜಿಲ್ಲೆಯ ಹರಿಹರ ನಗರಸಭೆಯಲ್ಲಿ ಕಳೆದ 24 ವರ್ಷದ ಪೌರ ಕಾರ್ಮಿಕನಾಗಿ ದುಡಿಯುತ್ತಿರುವ 51 ವರ್ಷದ ಫಕೀರಪ್ಪನ ಅಳಲು.

ಪೌರಕಾರ್ಮಿಕ ದಿನಾಚರಣೆ ಹಿನ್ನಲೆಯಲ್ಲಿ ವಾರ್ತಾಭಾರತಿ ಪತ್ರಿಕೆಯೊಂದಿಗೆ ಮಾತನಾಡಿ, ಪೌರಕಾರ್ಮಿಕರಿಗೆ ಸೂರಿಲ್ಲ, ಬಾಡಿಗೆ ಮನೆಯಲ್ಲಿ ವಾಸ ಕಳೆದ 25 ವರ್ಷಗಳಿಂದ ಇಲ್ಲಿನ ಕೊಳಚೆ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಈ ಹಿಂದೆ ಭಾರತ್ ಆಯಿಲ್ ಮಿಲ್ ಕಾಪೌಂಡಿನಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ನೀಡಿದ್ದಾರೆ. ಅಲ್ಲಿಂದೇಚೆಗೆ ನೀಡಿಲ್ಲ. 70-80 ಖಾಯಂ ಕಾರ್ಮಿಕರಿದ್ದಾರೆ. ಅವರಿಗೆ ಸೂರಿನ ವ್ಯವಸ್ಥೆಯಾ ಗಬೇಕಿದೆ. ಈ ಸಂಬಂಧ ಶಾಸಕರಿಗೆ ಹಾಗೂ ಸರಕಾರಕ್ಕೆ ಮನವಿ ಮಾಡುತ್ತೇವೆ. ಸರಕಾರ ನಮಗೆ ಸೂರು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

-------------------------------------------------------------------------  

‘ಮಲ ಹೊರುವ ಪದ್ಧತಿ ಜೀವಂತ’

ಮಂಡ್ಯ: ಮಲಹೊರುವ ಪದ್ಧತಿ ಬಗ್ಗೆ ಗಮನಿಸುವುದಾದರೆ, ಸರಕಾರ ಒಂದಷ್ಟು ಮಟ್ಟಿಗೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸಕ್ಕಿಂಗ್ ಮಿಷನ್ ಕೊಟ್ಟಿದೆ. ಖಾಸಗಿಯಾಗಿಯೂ ಇಟ್ಟುಕೊಂಡಿದ್ದಾರೆ. ಇದರಿಂದ ಒಂದಷ್ಟು ಪ್ರಮಾಣ ಸಾರಾಂಶದಲ್ಲಿ ಕಡಿಮೆ ಎನಿಸಿದರೂ ಕೂಡ ನಗರೀಕರಣ ಆದಂಗೆಲ್ಲಾ ಯುಜಿಡಿ ಸೌಲಭ್ಯ ಇಲ್ಲದ ಕಡೆ ಮ್ಯಾನ್ಯುಯಲ್ ಆಗಿ ಮನುಷ್ಯರೇ ಮನುಷ್ಯರ ಮಲವನ್ನು ಕೊಂಡೊಯ್ಯುವಂತಹ ಪದ್ಧತಿ ಇವತ್ತಿಗೂ ಜೀವಂತವಾಗಿರುವುದನ್ನು ನೋಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಹೊರಗುತ್ತಿಗೆ ಪೌರಕಾರ್ಮಿಕರ ಸಂಘದ ಗೌರವಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಬೇಸರ ವ್ಯಕಪಡಿಸಿದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top