-

ಇಂದು ಶಿವರಾಮ ಕಾರಂತರ ಜನ್ಮದಿನ

ಶಿವರಾಮ ಕಾರಂತರು ನಾ ಕಂಡಂತೆ...

-

ನಾನು ‘ಬೆಟ್ಟದ ಜೀವ’ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ಹೊಂದಿಸಬೇಕೆಂದು ಹೊರಟಾಗ ಅದನ್ನು ಹಲವು ಬಾರಿ ಓದಿದೆ. ಒಂದೊಂದು ಓದಿಗೂ ಒಂದೊಂದು ತೆರನಾಗಿ ತೆರೆದುಕೊಳ್ಳುವ ಶಕ್ತಿ ಆ ಕೃತಿಗಿತ್ತು. ಸ್ನೇಹಿತರೊಬ್ಬರು ‘‘ಇದನ್ನು ಹೇಗೆ ಸಿನೆಮಾ ಮಾಡುತ್ತೀರಿ? ಇಲ್ಲಿ ಕತೆಯೇ ಇಲ್ಲವಲ್ಲ!’’ ಎಂದಿದ್ದರು. ನನಗೂ ಹೌದೆನ್ನಿಸಿತು. ಒಂದೆರಡು ವರ್ಷ ಸುಮ್ಮನಿದ್ದೆ. ಒಮ್ಮೆ ಆಕಸ್ಮಿಕವಾಗಿ ಕಾರಂತರು ತಮ್ಮ ಈ ಕಾದಂಬರಿ ರಚನೆಯ ಸಂದರ್ಭದಲ್ಲಿ ಹೇಳಿದ ಮಾತುಗಳು ಕಾಣಿಸಿದವು: ‘‘ಇಲ್ಲಿ ಕತೆ ಹೇಳುವುದಕ್ಕೆ ಕುಳಿತವ ನಾನಲ್ಲ. ನನ್ನ ಮಗಳಿಗೆ ಆಗಾಗ ಕತೆ ಹೊಸೆದು ಹೇಳುತ್ತೇನೆ. ಜನರು, ಕಾದಂಬರಿಯಿರುವುದು ಶೀಲ ನಿರೂಪಣೆಗೆ...’’ ಈ ವಾಕ್ಯಗಳನ್ನು ಓದಿದ ಮೇಲೆ ಯೋಚಿಸಿದೆ. ಹೌದಲ್ಲ; ಸಿನೆಮಾಗೆ ಒಂದು ಕತೆ ಬೇಕೇ? ಅದಿಲ್ಲದೆ ಚಲನಚಿತ್ರ ಮಾಡಲು ಸಾಧ್ಯವಿಲ್ಲವೇ? ಈ ಆಲೋಚನೆ ನಾನು ‘ಬೆಟ್ಟದ ಜೀವ’ವನ್ನು ಬೇರೆ ದೃಷ್ಟಿಕೋನದಿಂದ ನೋಡುವಂತೆ ಮಾಡಿತು.


‘‘ಕೇಳಿಸ್ಕೊಳೀ, ಬರ ಬಂದಿದೆ ಅಂತ ಮಸಾಲೆ ದೋಸೆ ತಿನ್ನೋದು ಬಿಟ್ಟಿದ್ದೀವಾ?... ಹೇಳಿ?’’
ಹೀಗೆಂದು ಶಿವರಾಮ ಕಾರಂತರು ಮೈಕಿನಲ್ಲಿ ಗುಡುಗಿದಾಗ, ನೆರೆದಿದ್ದ ಸಾವಿರಾರು ಜನಗಳ ಮಧ್ಯೆ ನಾನೂ ಇದ್ದೆ., ಮೂವತ್ತೈದು ವರ್ಷಗಳ ಹಿಂದೆ (1985), ಮೈಸೂರಿನಲ್ಲಿ. ಅದೊಂದು ಬಹುದೊಡ್ಡ ವೇದಿಕೆ. ಕುವೆಂಪು ಮುಂತಾದ ಅನೇಕ ಘಟಾನುಘಟಿ ಸಾಹಿತಿಗಳು ನೆರೆದಿದ್ದ ಪ್ರಥಮ ವಿಶ್ವಕನ್ನಡ ಸಮ್ಮೇಳನ ಸಮಾರಂಭ. ನಾಡಿನಲ್ಲಿ ಬರ ಇರುವಾಗ ವಿಶ್ವ ಕನ್ನಡ ಸಮ್ಮೇಳನದಂತಹ ಉತ್ಸವಗಳು ಬೇಕೇ? ಎಂದು ಕೆಲವರು ವಿರೋಧ ಎತ್ತಿದಾಗ ಕಾರಂತರು ಪ್ರತಿಕ್ರಿಯಿಸಿದ ರೀತಿ ಇದು. ಕಾರಂತರ ಬಗೆಗೆ ಗೊತ್ತಿರುವವರಿಗೆ ಈ ಮಾತುಗಳು ವಿಶೇಷ ಅನ್ನಿಸುವುದಿಲ್ಲ. ಕಾರಂತರು ಇದ್ದದ್ದೇ ಹೀಗೆ. ನೇರ, ನಿಷ್ಠುರ ವ್ಯಕ್ತಿತ್ವ ಅವರದ್ದು.

ಅವು ನನ್ನ ಹರೆಯದ ದಿನಗಳು. ಒಂದಿಷ್ಟು ಕವನಗಳನ್ನು ಬರೆಯುತ್ತಾ ನಾನೂ ಒಬ್ಬ ಕವಿ ಎಂಬ ಭ್ರಮೆಯಲ್ಲಿ ತೇಲುತ್ತಿದ್ದ ನಾನು ಅಂದು ಮರಿ ಸಾಹಿತಿಯ ವೇಷ ಧರಿಸಿ ಹಿರಿ ಸಾಹಿತಿಗಳನ್ನು ನೋಡಲು ಸಮ್ಮೇಳನಕ್ಕೆ ಹೋಗಿದ್ದೆ. ಸಾಧ್ಯವಾದರೆ ಸಾಹಿತಿಗಳನ್ನು ಭೇಟಿಯಾಗಬೇಕು, ಚರ್ಚಿಸಬೇಕು ನನ್ನ ಕವನಗಳನ್ನು ತೋರಿಸಬೇಕು ಎಂಬ ಆಸೆ. ಆದರೆ ಆ ಬೃಹತ್ ವೇದಿಕೆಯ ಬಳಿ ಹೋಗಲೂ ಸಾಧ್ಯವಾಗದೆ, ಜನಜಂಗುಳಿಯ ಮಧ್ಯೆ ಕಳೆದು ಹೋಗಿದ್ದು ಬೇರೆ ಮಾತು.
ಬೇರೆ ಸಾಹಿತಿಗಳಿಗಿಂತ ನನಗೆ ಕಾರಂತರನ್ನು ಭೇಟಿ ಮಾಡಬೇಕು ಎಂಬ ಆಸೆ ಬಲವಾಗಿತ್ತು. ಯಾಕೆಂದರೆ ಅವರು ನನಗೆ ಒಂದು ಪತ್ರ ಬರೆದಿದ್ದರು! ಈ ಪತ್ರ ಬಂದ ಪ್ರಸಂಗ ಹೇಳಬೇಕೆಂದರೆ ನಾನು ಫ್ಲ್ಯಾಷ್‌ಬ್ಯಾಕ್‌ಗೆ ಹೋಗಬೇಕು.
ನನಗಾಗ ಹದಿನಾಲ್ಕು ವರ್ಷ.
ಎಪ್ಪತ್ತರ ದಶಕದ ಒಂದು ದಿನ. ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಯ ಸಮಯ. ಕನ್ನಡ ಮೇಷ್ಟ್ರು ಭಾಷಣ ಮಾಡಿದ್ದರು. ‘‘ಪ್ರಿಯ ವಿದ್ಯಾರ್ಥಿಗಳೇ, ಇಂದು ಕನ್ನಡನಾಡು, ಭಾಷೆ ಸಂಭ್ರಮಿಸುವ ಶುಭದಿನ. ನಮ್ಮ ಹೆಮ್ಮೆಯ ಸಾಹಿತಿ ಕೆ.ಶಿವರಾಮ ಕಾರಂತರು ಬರೆದಿರುವ ‘ಮೂಕಜ್ಜಿಯ ಕನಸುಗಳು’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇದು ಕನ್ನಡ ಭಾಷೆಗೆ ದೊರೆತ ಮೂರನೇ ಜ್ಞಾನಪೀಠದ ಗೌರವ..’’ ಎಲ್ಲೆಡೆ ಚಪ್ಪಾಳೆಯ ಸದ್ದು. ನಮಗೆ ಶಿವರಾಮ ಕಾರಂತರೊಬ್ಬ ದೊಡ್ಡ ಸಾಹಿತಿ ಎಂದು ತಿಳಿದಿತ್ತೇ ಹೊರತು ಅವರ ಕೃತಿಗಳನ್ನು ನಾವ್ಯಾರೂ ಓದಿರಲಿಲ್ಲ. ತರಗತಿಗೆ ಪಾಠಕ್ಕೆಂದು ಬಂದಾಗ ಮೇಷ್ಟ್ರು ಮುಂದುವರಿದು ಇನ್ನೊಂದು ಮಾತು ಹೇಳಿದರು.

‘‘ಈ ‘ಮೂಕಜ್ಜಿಯ ಕನಸುಗಳು’ ಮತ್ತು ‘ಶಿವರಾಮ ಕಾರಂತ’ ಈ ಹೆಸರುಗಳನ್ನು ನೀವು ಸರಿಯಾಗಿ ನೆನಪಿಟ್ಟುಕೊಳ್ಳಿ, ಮುಂದಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ಇದರ ಕುರಿತು ಒಂದು ಪ್ರಶ್ನೆ ಬಂದರೂ ಬರಬಹುದು. ಈ ಹೆಸರುಗಳು ನಿಮ್ಮ ನೆನಪಿನಲ್ಲಿದ್ದರೆ ನಿಮಗೆ ಒಂದು ಮಾರ್ಕ್ ಗ್ಯಾರಂಟಿ’’ ಎಂದರು. ಅವರ ಈ ಮಾತು ನನ್ನ ತಲೆ ಹೊಕ್ಕಿತು. ‘ಕೆ.ಶಿವರಾಮ ಕಾರಂತ’, ‘ಮೂಕಜ್ಜಿಯ ಕನಸುಗಳು’, ‘ಜ್ಞಾನಪೀಠ’ ಈ ಮೂರನ್ನೂ ಗಟ್ಟಿಮಾಡಿ ನೆನಪಿಟ್ಟುಕೊಂಡೆ. ಮೇಷ್ಟ್ರ ಮಾತು ಸುಳ್ಳಾಗಲಿಲ್ಲ! ಆಗ ನಮ್ಮಣ್ಣ ಎಂ.ಎ. ಮಾಡುತ್ತಿದ್ದ. ಒಮ್ಮೆ ಅವನು ಲೈಬ್ರರಿಯಿಂದ ‘ಮೂಕಜ್ಜಿಯ ಕನಸುಗಳು’ ಕೃತಿ ತಂದು ಓದುತ್ತಿದ್ದ. ಅದನ್ನು ಕಂಡು ನನಗೂ ಓದುವ ಕುತೂಹಲವಾಯಿತು. ಓದಲು ಪ್ರಾರಂಭಿಸಿದೆ. ಆದರೆ ಅದು ಅಷ್ಟು ಸುಲಭವಾಗಿ ದಕ್ಕಲಿಲ್ಲ. ಆದರೆ ನನಗೆ ಬೇರೆ ಅನುಕೂಲವಾಯಿತು. ನಾನು ಕೌಮಾರ್ಯ ಕಳೆದು ಯವ್ವನಕ್ಕೆ ಕಾಲಿಟ್ಟಿದ್ದೆ. ಜಗತ್ತು, ಸೃಷ್ಟಿ, ಸಾವು, ದೇವರು, ದೆವ್ವ, ಆಚಾರ, ವಿಚಾರ, ಪ್ರೀತಿ, ಕಾಮ, ಸಂಬಂಧ ಹೀಗೆ ಹತ್ತು ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುತ್ತಿದ್ದವು. ಮನಸ್ಸು ಗೊಂದಲದ ಗೂಡಾಗಿತ್ತು. ಆ ಸಂದರ್ಭದಲ್ಲಿ ಓದಿದ ‘ಮೂಕಜ್ಜಿಯ ಕನಸುಗಳು’ ಕೃತಿಯನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲಾಗದಿದ್ದರೂ ನನ್ನ ಕೆಲವು ಪ್ರಶ್ನೆಗಳಿಗೆ ಅಲ್ಲಿ ಉತ್ತರ ಸಿಕ್ಕಿದ್ದಂತೂ ದಿಟ. ಹಾಗಾಗಿ ನನ್ನಲ್ಲಿ ಹುಟ್ಟಿದ ವೈಚಾರಿಕ ಆಲೋಚನೆಗಳಿಗೆ ತಳಹದಿ ಹಾಕಿಕೊಟ್ಟವರು ಕಾರಂತರು.

 ಅದೇ ಕಾದಂಬರಿಯಲ್ಲಿ ಸಲಿಂಗಕಾಮದ ಬಗ್ಗೆ ಒಂದು ಪ್ರಸಂಗ ಬರುತ್ತದೆ. ನನಗೆ ಆ ಸನ್ನಿವೇಶದ ತಲೆಬುಡ ಗೊತ್ತಾಗಿರಲಿಲ್ಲ. ಅಜ್ಜಿ ಅನಂತರಾಯನನ್ನು ಯಾಕೆ ಬಯ್ಯುತ್ತಾಳೆ? ಅವನೇಕೆ ಪೆಚ್ಚಾಗುತ್ತಾನೆ? ಈ ಸಂದೇಹ ಯಾರಲ್ಲಿ ನಿವಾರಿಸಿಕೊಳ್ಳುವುದು? ಅದೇನು ಭಂಡ ಧೈರ್ಯ ಬಂತೋ. ಪೋಸ್ಟ್ ಕಾರ್ಡ್‌ನಲ್ಲಿ ಈ ಪ್ರಶ್ನೆ ಬರೆದು, ಕೆ.ಶಿವರಾಮ ಕಾರಂತ, ಪುತ್ತೂರು, ದಕ್ಷಿಣ ಕನ್ನಡ ಎಂದು ವಿಳಾಸ ಬರೆದು ಪೋಸ್ಟ್ ಮಾಡಿಯೇ ಬಿಟ್ಟೆ. ಆಮೇಲೆ ಭಯವಾಯಿತು. ಅವರಿಗೆ ಕಾರ್ಡ್ ತಲುಪುತ್ತದಾ? ತಲುಪಿದರೂ ಅವರು ಓದುತ್ತಾರಾ? ಒಂದೆರಡು ವಾರ ಕಳೆಯಿತು. ಈ ವಿಚಾರ ಮಸುಕಾಯಿತು. ಸುಮ್ಮನಾಗಿಬಿಟ್ಟೆ.

ಒಂದು ದಿನ ನನ್ನ ಹೆಸರಿಗೆ ಇನ್‌ಲ್ಯಾಂಡ್ ಲೆಟರ್ ಒಂದು ಬಂತು. ಯಾರದ್ದಿರಬಹುದು ಎಂದು ಒಡೆದು ಓದಿದರೆ, ಕಾರಂತರದ್ದು! ಅವರು ನನ್ನ ಪ್ರಶ್ನೆಗೆ ಒಂದು ಪ್ಯಾರಾದಲ್ಲಿ ಉತ್ತರಿಸಿದ್ದರು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಒಂದಲ್ಲ, ಎರಡಲ್ಲ ಹತ್ತು ಬಾರಿ ಓದಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಯಿಂದ ಬಂದ ಆ ಪತ್ರ ನನಗೆ ಜ್ಞಾನಪೀಠ ಪ್ರಶಸ್ತಿಯಷ್ಟೇ ಅಮೂಲ್ಯವಾಗಿತ್ತು. ನಂತರ ಆ ಪತ್ರವನ್ನು ಪ್ರಶಸ್ತಿಯಂತೆ ಕಾಪಿಟ್ಟುಕೊಂಡು ಎಲ್ಲರಿಗೂ ತೋರಿಸುತ್ತಾ ನನ್ನ ಗೌರವ ಹೆಚ್ಚಿಸಿಕೊಂಡಿದ್ದೆ. ಇದೇ ಅಭಿಮಾನದಿಂದ ಕಾರಂತರ ಇತರ ಕೃತಿಗಳನ್ನೂ ಓದಿದೆ. ಅವರು ತಮ್ಮ ಕೃತಿಗಳ ಮೂಲಕ ಮಾರ್ಗದರ್ಶಕರಂತೆ ಕಂಡರು. ಅವರನ್ನು ಮುಖತಃ ಕಾಣುವ ಬಯಕೆಯಾಯಿತು. ಆದರೆ ಪುತ್ತೂರಿಗೆ ಹೋಗಿ ಅವರನ್ನು ಕಾಣುವ ಧೈರ್ಯವಿರಲಿಲ್ಲ.

ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜನೆಗೊಂಡಿತ್ತು. ಆ ಸಮಾರಂಭಕ್ಕೆ ಕಾರಂತರು ಬರುತ್ತಾರೆ ಎಂದು ಪತ್ರಿಕೆಗಳಲ್ಲಿ ಓದಿದ್ದೆ. ಅವರು ನನಗೆ ಬರೆದಿದ್ದ ಪತ್ರವನ್ನು ಜೇಬಿನಲ್ಲಿಟ್ಟುಕೊಂಡು ಅವರನ್ನು ಮಾತನಾಡಿಸಬೇಕೆಂದು ಜುಬ್ಬಾ ಹಾಕಿಕೊಂಡು ಮೈಸೂರಿಗೆ ಹೋದೆ. ದೂರದಿಂದ ವೇದಿಕೆಯ ಮೇಲೆ ಕಾರಂತರೇನೊ ಕಂಡರು, ಚುಕ್ಕೆಯಂತೆ! ನಾನು ಕಾರಂತರ ಸಮೀಪ ಕೂಡ ಹೋಗಲಾಗಲಿಲ್ಲ. ಆಮೇಲೆ ನಾನು ಪತ್ರಕರ್ತನಾಗಿ ವೃತ್ತಿ ಆರಂಭಿಸಿ ಅಲ್ಲಿ ಒಂದಷ್ಟು ಕಾಲ ಮಣ್ಣುಹೊತ್ತು ನಂತರ ಸಿನೆಮಾ ಕ್ಷೇತ್ರಕ್ಕೆ ಬಂದೆ. ಆಗ ನಾಗಾಭರಣರು ಶಿವರಾಮ ಕಾರಂತರ ‘ಚಿಗುರಿದ ಕನಸು’ ಕೃತಿಯನ್ನು ಸಿನೆಮಾ ಮಾಡಲು ಯೋಜಿಸಿದ್ದರು. ಅದರ ಚಿತ್ರಕಥೆಯ ರಚನೆಯಲ್ಲಿ ನಾನು ಕೂಡ ಪಾಲ್ಗೊಂಡಿದ್ದೆ. ಕಾರಂತರು ಬೆಂಗಳೂರಿಗೆ ಬಂದಿದ್ದಾರೆ ಎಂಬ ಸುದ್ದಿ ಬಂತು. ಅವರು ಬೆಂಗಳೂರಿನ ಶಿವಾನಂದ ಸ್ಟೋರ್ಸ್ ಬಳಿಯ ಜನಾರ್ದನ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಚಿತ್ರಕಥೆಯನ್ನು ಅವರಿಗೆ ತೋರಿಸಿ ಒಪ್ಪಿಗೆ ಪಡೆದುಕೊಳ್ಳಬೇಕಿತ್ತು. ಭರಣರು ಅವರೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಚಿತ್ರಕಥೆಯ ಪ್ರತಿಯನ್ನು ಅವರಿದ್ದ ಹೊಟೇಲ್ ಕೋಣೆಗೆ ತಲುಪಿಸಿ ಬರಲು ನನಗೆ ಸೂಚಿಸಿದರು. ನನ್ನ ಮೆಚ್ಚಿನ ಸಾಹಿತಿಯನ್ನು ಕಾಣಲು ಇದಕ್ಕಿಂತ ಉತ್ತಮ ಅವಕಾಶ ಬೇಕೆ? ನಾನು ಸಂಭ್ರಮದಿಂದ ಹೊರಟೆ.

ನನ್ನಲ್ಲಿ ಅವರ ಕಾದಂಬರಿಗಳ ಕುರಿತು, ಸಮಾಜದ ಕುರಿತು ಹಲವು ಪ್ರಶ್ನೆಗಳಿದ್ದವು. ಈ ಚಿತ್ರಕಥೆಯ ಪ್ರತಿ ಕೊಡುವ ನೆವದಲ್ಲಿ ಅವರೊಂದಿಗೆ ಕನಿಷ್ಠ ಅರ್ಧಗಂಟೆಯಾದರೂ ಕುಳಿತು ನನ್ನೆಲ್ಲ ಅನುಮಾನಗಳನ್ನು ಪರಿಹರಿಸಿಕೊಂಡು ಬರಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಹೊರಟೆ. ನಾನು ಜನಾದರ್ನ ಹೊಟೇಲ್‌ಗೆ ಬಂದು ಅವರಿದ್ದ ಕೊಠಡಿಯ ಕಾಲಿಂಗ್‌ಬೆಲ್ ಒತ್ತಿದೆ. ಪ್ರತಿಕ್ರಿಯೆ ಇಲ್ಲ. ಒಳಗಿದ್ದಾರೋ ಇಲ್ಲವೋ? ಮತ್ತೊಮ್ಮೆ ಬೆಲ್ ಮಾಡಿದೆ. ಕೆಲವು ಕ್ಷಣಗಳ ನಂತರ ಬೋಲ್ಟ್ ತೆಗೆಯುವ ಸದ್ದು. ಕಾತರದಿಂದ ಕಾದೆ. ಎದೆ ಢವಗುಟ್ಟುತ್ತಿತ್ತು. ಬಾಗಿಲು ಮೆಲ್ಲನೆ ತೆರೆಯಿತು. ಹೊರಗೆ ನಿಂತಿದ್ದ ನನಗೂ, ಒಳಗಿದ್ದ ಅವರಿಗೂ ಮಧ್ಯೆ ಉಂಟಾದ ಕಿಂಡಿ ಕೇವಲ ಮೂರು ಇಂಚು ಮಾತ್ರ! ಒಳಗಿನಿಂದ ಚೈನ್ ಲ್ಯಾಚ್ ಹಾಕಲಾಗಿತ್ತು. ನಾನು ಆ ಕಂಡಿಯಲ್ಲೇ ಹೊಳೆಯುವ ಕಾರಂತರನ್ನು ನೋಡುತ್ತಾ ನಿಂತು ಬಿಟ್ಟೆ.

‘‘ಯಾರು?’’ ಕಾರಂತಜ್ಜನ ಗಡಸು ಧ್ವನಿ. ನಾನು ಚಿತ್ರಕಥೆ ಪುಸ್ತಕ ತೋರಿಸಿ, ‘‘ಇದನ್ನು ಕೊಡಲು ಬಂದೆ’’ ಅಂದೆ. ಅವರು ಒಳಗಿನಿಂದಲೇ ಕೈ ಚಾಚಿದರು. ನಾನು ಚಿತ್ರಕಥೆಯ ಪ್ರತಿಯನ್ನು ಬಾಗಿಲ ಸಂದಿಯಲ್ಲಿ ತೂರಿಸಿದೆ. ಅವರು ಅದನ್ನು ಒಳಕ್ಕೆಳೆದುಕೊಂಡು ಬಾಗಿಲು ಹಾಕಿದರು! ಪೆಚ್ಚು ಮೋರೆ ಹಾಕಿಕೊಂಡು ಹೊಟೇಲಿನಿಂದ ಆಚೆ ಬಂದೆ. ಅವರೊಂದಿಗೆ ಮಾತನಾಡಬೇಕು, ನನ್ನ ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು ಎಂಬ ನನ್ನ ಬಯಕೆ ಮನದಲ್ಲೇ ಉಳಿಯಿತು. ಕಾರಂತರಿಗೆ ಪತ್ರ ಬರೆದೇ ಸಂದೇಹ ನಿವಾರಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ. ಆದರೆ ಆ ವಯಸ್ಸಿನಲ್ಲಿದ್ದ ಹುಚ್ಚು ಧೈರ್ಯ ಈಗಿರಲಿಲ್ಲ. ಇದಾದ ಮೂರು ವರ್ಷಕ್ಕೆ ಕಾರಂತರು ಈ ಲೋಕ ಬಿಟ್ಟು ತೆರಳಿದರು. ಹಾಗಾಗಿ ನನ್ನ ಅವರ ಮುಖಾಮುಖಿ ಇಷ್ಟೇ, ಭೌತಿಕವಾಗಿ! ಆದರೆ ಕಾರಂತರ ಕೃತಿಗಳ ಮೂಲಕ ನಾನು ಅವರನ್ನು ಶೋಧಿಸುವ ಪ್ರಯತ್ನ ನಡೆಸಿದ್ದೇನೆ.

ನಾನು ‘ಬೆಟ್ಟದ ಜೀವ’ ಕೃತಿಯನ್ನು ದೃಶ್ಯಮಾಧ್ಯಮಕ್ಕೆ ಹೊಂದಿಸಬೇಕೆಂದು ಹೊರಟಾಗ ಅದನ್ನು ಹಲವು ಬಾರಿ ಓದಿದೆ. ಒಂದೊಂದು ಓದಿಗೂ ಒಂದೊಂದು ತೆರನಾಗಿ ತೆರೆದುಕೊಳ್ಳುವ ಶಕ್ತಿ ಆ ಕೃತಿಗಿತ್ತು. ಸ್ನೇಹಿತರೊಬ್ಬರು ‘‘ಇದನ್ನು ಹೇಗೆ ಸಿನೆಮಾ ಮಾಡುತ್ತೀರಿ? ಇಲ್ಲಿ ಕತೆಯೇ ಇಲ್ಲವಲ್ಲ!’’ ಎಂದಿದ್ದರು. ನನಗೂ ಹೌದೆನ್ನಿಸಿತು. ಒಂದೆರಡು ವರ್ಷ ಸುಮ್ಮನಿದ್ದೆ. ಒಮ್ಮೆ ಆಕಸ್ಮಿಕವಾಗಿ ಕಾರಂತರು ತಮ್ಮ ಈ ಕಾದಂಬರಿ ರಚನೆಯ ಸಂದರ್ಭದಲ್ಲಿ ಹೇಳಿದ ಮಾತುಗಳು ಕಾಣಿಸಿದವು: ‘‘ಇಲ್ಲಿ ಕತೆ ಹೇಳುವುದಕ್ಕೆ ಕುಳಿತವ ನಾನಲ್ಲ. ನನ್ನ ಮಗಳಿಗೆ ಆಗಾಗ ಕತೆ ಹೊಸೆದು ಹೇಳುತ್ತೇನೆ. ಜನರು, ಕಾದಂಬರಿಯಿರುವುದು ಶೀಲ ನಿರೂಪಣೆಗೆ...’’ ಈ ವಾಕ್ಯಗಳನ್ನು ಓದಿದ ಮೇಲೆ ಯೋಚಿಸಿದೆ. ಹೌದಲ್ಲ; ಸಿನೆಮಾಗೆ ಒಂದು ಕತೆ ಬೇಕೇ? ಅದಿಲ್ಲದೆ ಚಲನಚಿತ್ರ ಮಾಡಲು ಸಾಧ್ಯವಿಲ್ಲವೇ? ಈ ಆಲೋಚನೆ ನಾನು ‘ಬೆಟ್ಟದ ಜೀವ’ವನ್ನು ಬೇರೆ ದೃಷ್ಟಿಕೋನದಿಂದ ನೋಡುವಂತೆ ಮಾಡಿತು. ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಅವರು ಕಾಲ, ಸ್ಥಳ, ಕ್ರಿಯೆ ಇವುಗಳ ಐಕ್ಯವನ್ನು ಆಧುನಿಕ ನಾಟಕಗಳಲ್ಲಿರುವಂತೆ ಪ್ರಯೋಗಾತ್ಮಕವಾಗಿ ಹೆಣೆದಿದ್ದಾರೆ. ಈ Time and Space ತಂತ್ರ ಕೂಡ ನನಗೆ ಸಿಕ್ಕಿದ್ದು ಕಾರಂತರ ಬರವಣಿಗೆಯಲ್ಲಿಯೇ.

‘ಮೂಕಜ್ಜಿಯ ಕನಸುಗಳು’ ಇನ್ನೊಂದು ವಿಶಿಷ್ಟ ಕೃತಿ. ಕಾರಂತರನ್ನು ಅರಿಯುವ ಮತ್ತೊಂದು ಪ್ರಯತ್ನ. ಅತೀಂದ್ರಿಯ ಸಂವೇದನೆಯುಳ್ಳ ಮೂಕಜ್ಜಿಯ ಪಾತ್ರ ನಿರ್ಮಿತಿಯ ಹಿಂದೆ ಕಾರಂತರ ಉದ್ದೇಶವೇನಿತ್ತು? ಅದು ತಾತ್ವಿಕವಾಗಿತ್ತೇ? ಕಲಾತ್ಮಕವಾಗಿತ್ತೇ? ಅಥವಾ ಮೂಕಜ್ಜಿ ಕಾರಂತರ ಸಾಂಕೇತಿಕ ರೂಪವೇ? ಕಾರಂತರೇ ಅವರ ಸ್ಮತಿಪಟಲದಲ್ಲಿ ಹೇಳಿರುವಂತೆ ಅವರಿಗೆ ಈ ಕಾದಂಬರಿ ಬರೆಯಲು ಪ್ರೇರಣೆ ದೊರೆತಿದ್ದು ಅವರು ಬಹಳ ಓದಿದ ಎಂಬ A plains in Camdemboo ಕೃತಿಯಿಂದ. ಇದು ಕತೆಯಲ್ಲ. ದಕ್ಷಿಣ ಆಫ್ರಿಕಾಕ್ಕೆ ಹೋಗಿ ನೆಲೆಸಿದ ಯುರೋಪಿನ ಒಂದು ಕುಟುಂಬದ ಇತಿಹಾಸ ವೃತ್ತಾಂತ. ಅಲ್ಲಿ ಅತೀಂದ್ರಿಯ ಜ್ಞಾನವುಳ್ಳ ಮುದುಕಿಯೊಬ್ಬಳು ಮರದ ಚಕ್ಕೆಯೊಂದನ್ನು ಕೈಯಲ್ಲಿ ಹಿಡಿದು, ಆ ಚಕ್ಕೆ ಸಿಕ್ಕಿದ ತಾವಿನಲ್ಲಿ ನಡೆದ ಘಟನೆಯನ್ನು ಹೇಳಬಲ್ಲವಳಾಗಿರುತ್ತಾಳೆ.

ಈ ಅಂಶವನ್ನೇ ವಿಸ್ತರಿಸಿದ ಕಾರಂತರು ಮೂಕಜ್ಜಿ ಕಾದಂಬರಿಯಲ್ಲಿ ಶಿಲಾಯುಗ, ಮಧ್ಯಯುಗ, ವೈದಿಕಯುಗ, ಜೈನ-ಬೌದ್ಧ ಯುಗ ಇತ್ಯಾದಿ ಕಾಲಾವಧಿಗಳ ಮೂಲಕ ಭಾರತೀಯ ಬದುಕು ಹಾದು ಬಂದ ಮತ್ತು ಆ ಹಾದಿಯಲ್ಲಿ ನಿಸರ್ಗ, ದೇವರು, ವಿಗ್ರಹ ಪೂಜೆ, ಲೈಂಗಿಕ ಸಂಬಂಧಗಳ ವಿಕಾಸ, ಧರ್ಮಗಳ ಹುಟ್ಟು ಮತ್ತು ತಿಕ್ಕಾಟ, ಈ ಮೂಲಕ ಮನುಷ್ಯನ ಬದುಕು ಪಡೆದುಕೊಂಡ ಹಲವಾರು ವಿಕೃತಿ, ಸುಕೃತಿಗಳ ವಿಶ್ಲೇಷಣೆಯನ್ನು ಮಾಡುತ್ತಾರೆ. ಇಲ್ಲಿ ಮನುಷ್ಯನಿಗೂ ಆತನ ಸಾಂಸ್ಕೃತಿಕ ನೆನಪುಗಳಿಗೂ ಇರುವ ಸಂಬಂಧ ಕೂಡ ಮುಖ್ಯವಾಗುತ್ತದೆ. ನಮ್ಮ ಇಂದಿನ ಜೀವನದ ಬಗೆಗೆ ನಮ್ಮ ಹಿಂದಿನವರ ಬದುಕಿನ ಬಗೆಯೂ ಪ್ರೇರಣೆಯನ್ನು ಒದಗಿಸುತ್ತದೆ. ನಮ್ಮ ಜೀವನದ ಕಾರಣಗಳು ಅವರ ಜೀವನ ಕಾರಣದಿಂದ ರೂಪುಗೊಂಡಿರುತ್ತವೆ. ಸಾಂಸ್ಕೃತಿಕ ಪರಂಪರೆಯನ್ನು ಕುರಿತ ಚಿಂತನೆಯೇ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯ ಹೊಸತನಕ್ಕೆ ಕಾರಣವಾಗಿದೆ.

ಇಲ್ಲಿ ಮೂಕಜ್ಜಿಯದು ಆಸ್ತಿಕವಾದವೂ ಅಲ್ಲದ, ನಾಸ್ತಿಕವಾದವೂ ಅಲ್ಲದ ಅಸ್ತಿತ್ವವಾದ. ‘‘ನಾಲ್ಕು ದಿನ ಚಂದವಾಗಿ ಇರಬೇಕು’’ ಎಂಬುದು ಮೂಕಜ್ಜಿಯ ತತ್ವ. ಚಂದಾಗಿ ಇರುವುದು ಎಂದರೇನು? ಈ ಜೀವನದಲ್ಲಿ ಮನುಷ್ಯನಿಗೆ ಮನುಷ್ಯನೇ ಆಧಾರ. ಪರಸ್ಪರ ಸಹಾನುಭೂತಿಯೇ ಸಂಘಜೀವನದ ತತ್ವ. ‘‘ಇರುವಷ್ಟು ದಿನ ನಮಗೂ ಹಿತವಾಗಿ, ನಾಲ್ಕು ಜನರಿಗೂ ಹಿತವಾಗುವ ಹಾಗೆ ಬಾಳುವುದಪ್ಪ, ಬರೀ ಮನುಷ್ಯರಿಗಷ್ಟೇ ಅಲ್ಲ; ಆಚೀಚಿನ ಎಲ್ಲ ಜೀವಿಗಳಿಗೂ ಹಿತವಾಗುವ ಹಾಗೆ ಇರಬೇಕು.. ಅಂದರೆ, ಇನ್ನೊಬ್ಬರಿಗೆ ಅನ್ಯಾಯವಾಗದ ರೀತಿಯಲ್ಲಿ ಬದುಕುವುದು, ಪರರಿಗೆ ಸುಖ ಕೊಡಲು ಬಾರದೇ ಹೋದರೆ ಬೇಡ, ದುಃಖ ಕೊಡದೇ ಇರುವುದು.’’ ಈ ಮಾತುಗಳನ್ನಾಡುವ ಮೂಕಜ್ಜಿ ಅಸ್ತಿತ್ವವಾದಿ ಮಾನವತಾವಾದವನ್ನು ಪ್ರತಿಪಾದಿಸುವ ತತ್ವಜ್ಞಾನಿ. ಕಾರಂತರು ಇಲ್ಲಿಯ ಪ್ರದೇಶಗಳಿಗೆ ಕೊಡುವ ಹೆಸರುಗಳನ್ನು ನೀವು ಗಮನಿಸಬೇಕು. ಮೂಡೂರು, ನಡೂರು, ಪಡೂರು. ಬಸರೀಕಟ್ಟೆ, ಅಶ್ವತ್ಥಕಟ್ಟೆ(ಬಾಳ್‌ಕಟ್ಟೆ), ಬೂದಿಕಟ್ಟೆ ಇವುಗಳು ಇಲ್ಲಿ ಮನುಷ್ಯನ ಬದುಕಿನ ಗತಿಗಳಿಗೆ ಸಂಕೇತಗಳಾಗಿ ಬರುತ್ತವೆ. ಮೂಡೂರು ಅಂದರೆ ಮೂಡುವ, ಅಂದರೆ ಹುಟ್ಟುವ ಊರು; ಅದು ಸೂರ್ಯ ಹುಟ್ಟುವ ದಿಕ್ಕೂ ಹೌದು, ಮನುಷ್ಯ ಜನ್ಮ ತಾಳುವ ತಾವೂ ಹೌದು. ನಡೂರು ನಡುವೆ ಇರುವ ಊರು, ನಾವು ನಡೆದಾಡುವ ಊರು. ಇನ್ನು ಪಡೂರು, ಸೂರ್ಯ ಮುಳುಗುವ, ಜೀವಕಂತುವ, ಪಡವಡಿಸುವ ಊರು. ಈ ಜಗತ್ತೆಲ್ಲಾ ಮೂರೂರೇ!

ಹೀಗೆ ಪ್ರತಿಯೊಂದು ಕಾದಂಬರಿಯಲ್ಲೂ ವಿನೂತನ ಪ್ರಯೋಗ ಮಾಡಿದವರು ಕಾರಂತರು. ಅವುಗಳಲ್ಲಿ ಇನ್ನೂ ಕೆಲವನ್ನು ದೃಶ್ಯಮಾಧ್ಯಮಕ್ಕೆ ಇಳಿಸುವ ಬಯಕೆ. ನೋಡಬೇಕು...

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top