--

ಇಂದು ಅಂಬೇಡ್ಕರ್ ಮನುಸ್ಮೃತಿಯನ್ನು ಬಹಿರಂಗವಾಗಿ ಸುಟ್ಟ ದಿನ

ಅಂಬೇಡ್ಕರ್ ಮತ್ತು ಕುವೆಂಪು: ಎಂದಿಗೂ ಸಲ್ಲುವ ಬೆಳಕಿನ ಚೈತನ್ಯಗಳು

ಅಕ್ಷರ ವಂಚಿತ ಸಮುದಾಯದಿಂದ ಬಂದ ಈ ಇಬ್ಬರ ವ್ಯಕ್ತಿತ್ವ, ಹೋರಾಟ, ಬರವಣಿಗೆಗಳ ಆಳದಲ್ಲಿ ಜೀವಪರ ವೈಚಾರಿಕತೆ ಹಾಗೂ ಎಲ್ಲ ಬಗೆಯ ಅಸಮಾನತೆಗಳ ವಿರುದ್ಧದ ಪ್ರತಿಭಟನೆ ತುಂಬಿಕೊಂಡಿವೆ. ತಮ್ಮ ಪ್ರಜ್ಞಾವಂತ ಕಾರ್ಯಚಟುವಟಿಕೆಗಳ ಕಾರಣಕ್ಕಾಗಿ ಇಬ್ಬರೂ ಸಂಪ್ರದಾಯವಾದಿಗಳಿಂದ ಎದುರಿಸಿದ ವಿರೋಧ ಅಷ್ಟಿಷ್ಟಲ್ಲ. ಆದರೆ ಅವುಗಳನ್ನು ಮೆಟ್ಟಿನಿಂತು ಜಾತಿಯನ್ನು ಮೀರಿ ಬೆಳೆದ ಬಗೆ ಚಾರಿತ್ರಿಕವಾದುದು ಜೊತೆಗೆ ಸಮುದಾಯಗಳ ಪ್ರಗತಿಗೆ ಮಾದರಿ ಕೂಡ ಹೌದು.


ಮಹಾರಾಷ್ಟ್ರ ಮಣ್ಣಿನ ಬಾಬಾಸಾಹೇಬ್ ಅಂಬೇಡ್ಕರರು ಇಡೀ ಭಾರತದ ದಲಿತರ ಪ್ರಜ್ಞೆಯನ್ನು ಉದ್ಘಾಟಿಸಿ ಜಾಗೃತಗೊಳಿಸಿದರೆ ಕನ್ನಡ ಮಣ್ಣಿನ ರಾಷ್ಟ್ರಕವಿ ಕುವೆಂಪು ಕರ್ನಾಟಕದಲ್ಲಿ ಶೂದ್ರ ಸಮುದಾಯಗಳ ಪ್ರಜ್ಞೆಯನ್ನು ಉದ್ಘಾಟಿಸಿ ಜಾಗೃತಗೊಳಿಸಿದವರು. ಅಕ್ಷರ ವಂಚಿತ ಸಮುದಾಯದಿಂದ ಬಂದ ಈ ಇಬ್ಬರ ವ್ಯಕ್ತಿತ್ವ, ಹೋರಾಟ, ಬರವಣಿಗೆಗಳ ಆಳದಲ್ಲಿ ಜೀವಪರ ವೈಚಾರಿಕತೆ ಹಾಗೂ ಎಲ್ಲ ಬಗೆಯ ಅಸಮಾನತೆಗಳ ವಿರುದ್ಧದ ಪ್ರತಿಭಟನೆ ತುಂಬಿಕೊಂಡಿವೆ. ತಮ್ಮ ಪ್ರಜ್ಞಾವಂತ ಕಾರ್ಯಚಟುವಟಿಕೆಗಳ ಕಾರಣಕ್ಕಾಗಿ ಇಬ್ಬರೂ ಸಂಪ್ರದಾಯವಾದಿಗಳಿಂದ ಎದುರಿಸಿದ ವಿರೋಧ ಅಷ್ಟಿಷ್ಟಲ್ಲ. ಆದರೆ ಅವುಗಳನ್ನು ಮೆಟ್ಟಿನಿಂತು ಜಾತಿಯನ್ನು ಮೀರಿ ಬೆಳೆದ ಬಗೆ ಚಾರಿತ್ರಿಕವಾದುದು ಜೊತೆಗೆ ಸಮುದಾಯಗಳ ಪ್ರಗತಿಗೆ ಮಾದರಿ ಕೂಡ ಹೌದು.

 ಅಂಬೇಡ್ಕರರು 1926ರಲ್ಲಿ ಮಹಾರಾಷ್ಟ್ರದ ಮಹಾದ್‌ನ ಚೌಡರ್ ಕೆರೆಯ ನೀರನ್ನು ದಲಿತರು ಸ್ಪರ್ಶಿಸುವ ಚಳವಳಿ ನಡೆಸಿ ಯಶಸ್ವಿ ಯಾದರೂ ಸಂಪ್ರದಾಯವಾದಿಗಳ ಹಲ್ಲೆಗೆ ತುತ್ತಾಗಬೇಕಾಯಿತು. ಅಲ್ಲದೆ ಈ ಕೆರೆ ನೀರನ್ನು ಮೈಲಿಗೆಯಾಯಿತೆಂದು ಪುರೋಹಿತರು ಶುದ್ಧೀಕರಣ ಮಾಡಿ ಅಸಮಾನತೆಯನ್ನು ಪ್ರದರ್ಶಿಸಿದರು. ಇಂತಹ ಅಮಾನವೀಯ ನಡವಳಿಕೆಯನ್ನು ಖಂಡಿಸಿ ಅಂಬೇಡ್ಕರರು ಸಾಂಕೇತಿಕವಾಗಿ ಮನುಶಾಸ್ತ್ರವನ್ನು ಬಹಿರಂಗ ಸಭೆಯಲ್ಲಿ (1928 ಡಿಸೆಂಬರ್ 25) ಸುಡುವ ಕಾರ್ಯ ಕೈಗೊಂಡು ಆ ಮೂಲಕ ಮನುಷ್ಯರು ಅಸಮಾನತೆ ಸಾರುವ ಶಾಸ್ತ್ರಗ್ರಂಥಗಳಿಂದ ಬಿಡುಗಡೆ ಪಡೆಯಬೇಕೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಪ್ರಜ್ಞಾಪೂರ್ವಕವಾಗಿ ಬೇರೆ ಬೇರೆ ಸಮುದಾಯಗಳನ್ನು ಒಳಗೊಂಡು ಚಳವಳಿ ನಡೆಸಿದರು. ಅಂಬೇಡ್ಕರರು ಈ ಮುಖೇನ ಎಲ್ಲ ಸಮುದಾಯಗಳೂ ಅಂದರೆ ಬ್ರಾಹ್ಮಣರಿಂದ ಮೊದಲುಗೊಂಡು ತಳಸಮುದಾಯಗಳು ಜೊತೆಗೆ ಸಮಾಜದಲ್ಲಿ ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳೆಯರೂ ಶಾಸ್ತ್ರಗ್ರಂಥಗಳ ಗುಲಾಮಗಿರಿಯಿಂದ ಬಿಡುಗಡೆ ಹೊಂದಬೇಕೆಂಬುದನ್ನು ಆಶಿಸಿದರು. ವಿಶೇಷವೆಂದರೆ ಕುವೆಂಪು ಅವರು ಕೂಡ ಅಸಮಾನತೆಗಳನ್ನು ಪ್ರತಿಪಾದಿಸುವ ಶಾಸ್ತ್ರಗ್ರಂಥಗಳನ್ನು ವಿರೋಧಿಸಿದರು. 1934ರಲ್ಲಿ ಕುವೆಂಪು ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?’ ಎಂಬ ಪದ್ಯ ಬರೆದಿದ್ದಾರೆ. ಅದರಲ್ಲಿ;
‘‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು
ನಿನ್ನೆದೆಯ ದನಿಯೆ ಋಷಿ ಮನು ನಿನಗೆ ನೀನು’’
ಎಂದು ತಿಳಿಸುವ ಮೂಲಕ ಅಂಬೇಡ್ಕರರ ಚಿಂತನೆಗೆ ಪೂರಕವಾಗಿಯೆ ಅಭಿವ್ಯಕ್ತಿಸಿದ್ದಾರೆ.

1930ರ ಸಂದರ್ಭದಲ್ಲಿ ಅಂಬೇಡ್ಕರ್ ಕಾಳರಾಮ ದೇವಾಲಯ ಪ್ರವೇಶ ಚಳವಳಿ ನಡೆಸಿದರು. ಆದರೆ, ಸಂಪ್ರದಾಯನಿಷ್ಠ ವಿಕೃತ ಮನಸ್ಸುಗಳು ಅಸ್ಪೃಶ್ಯರ ಪ್ರವೇಶವನ್ನು ನಿರಾಕರಿಸಿದರು. ಈ ಮೂಲಕ ಸಂಪ್ರದಾಯತೆಯ ಅಮಾನವೀಯತೆಯನ್ನು ಎತ್ತಿಹಿಡಿದರು. ಜಾತಿವಾದಿಗಳ ಈ ಧೋರಣೆಯನ್ನು ಖಂಡಿಸುವ ಅಂಬೇಡ್ಕರರು ‘‘ದೇವಾಲಯ ಪ್ರವೇಶ ಸಿಕ್ಕಿದರೂ ಮತ್ತೆ ಪುರೋಹಿತಶಾಹಿಯ ಶ್ರೇಷ್ಠತೆಯನ್ನೇ ಒಪ್ಪಿಕೊಂಡಂತಾಗುತ್ತದೆ. ದೇವರಿಗೂ ಭಕ್ತರಿಗೂ ನಡುವೆ ಪುರೋಹಿತರ ಮಧ್ಯಸ್ಥಿಕೆ ಇರುವುದು ಕೂಡ ಅಸಮಾನತೆಯೇ. ಇದರಿಂದ ಯಾವುದೇ ವಿಮೋಚನೆ ಸಾಧ್ಯವಿಲ್ಲ. ಹಾಗಾಗಿ ಶೋಷಿತ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಕ್ಕುಗಳನ್ನು ಪಡೆಯಲು ಮತ್ತು ಸಮಾನತೆ, ಸ್ವಾಭಿಮಾನ ಮತ್ತು ಘನತೆಯಿಂದ ಬದುಕಲು ಹೋರಾಡಬೇಕು ಎಂದು ಕರೆನೀಡಿದರು.

ಗಮನಿಸಬೇಕಾದ ಅಂಶವೆಂದರೆ, 1928ರಲ್ಲಿಯೇ ಕುವೆಂಪು ‘ಜಲಗಾರ’ ನಾಟಕದ ಮೂಲಕ ಅಸಮಾನತೆ ಸಾರುವ ದೇವಾಲಯವನ್ನು ಪ್ರಶ್ನಿಸುವುದಲ್ಲದೆ; ಜಲಗಾರನಲ್ಲಿ ಶಿವನನ್ನು, ಶಿವನಲ್ಲಿ ಜಲಗಾರನನ್ನು ಕಂಡದ್ದು ವಿಶೇಷ. ವಿದ್ಯಾವಂತ ದಲಿತರೊಬ್ಬರು ದೇವಾಲಯ ಪ್ರವೇಶಿಸಿದ ಕಾರಣವಾಗಿ ಜುಲ್ಮಾನೆ ಕೊಡಬೇಕಾಗಿ ಬಂದ ಪ್ರಸಂಗದ ಬಗೆಗೆ ಅತ್ಯಂತ ಕುಪಿತರಾಗುವ ಕುವೆಂಪು ಅವರು ‘ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ’ (1944ರ ಭಾಷಣ) ‘‘ಅವರಿಗಿಂತಲೂ (ದಲಿತರಿಗಿಂತಲೂ) ಕೊಳಕರೂ, ದುಷ್ಟರೂ, ರೋಗಿಗಳೂ, ದುರಾಚಾರಿಗಳೂ ಆದ ಸ್ಪಶ್ಯರೆಂದೆನಿಸಿಕೊಂಡವರು ಗುಡಿಯೊಳಗೆ ಹೋದರೆ ಮೈಲಿಗೆಯಾಗವುದಿಲ್ಲವಂತೆ! ಸ್ಪಶ್ಯ ಯುವಕರು ತಮ್ಮ ಸಹೋದರಿನಿಗಾದ ಅವಮಾನ ತಮ್ಮದೆಂದು ಭಾವಿಸಿ ದೇವಾಲಯಗಳಿಗೆ ಹೋಗುವುದನ್ನೇ ಬಿಟ್ಟು, ಹೊರಗೆ ಪ್ರಕೃತಿ ಸೌಂದರ್ಯದಲ್ಲಿ, ಉದಯಿಸುವ ಸೂರ್ಯನಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ, ದರಿದ್ರ ನಾರಾಯಣನ ಸೇವೆಯಲ್ಲಿ ತಮ್ಮ ದೇವಾಲಯಗಳನ್ನು ಕಟ್ಟಿಕೊಂಡು ಮತದ ಅನೌದಾರ್ಯವನ್ನು ಮುರಿಯಬೇಕು’’ ಎಂದು ಸವರ್ಣೀಯರಿಗೆ ಕರೆ ನೀಡುತ್ತಾರೆ. ಸ್ವತಃ ಕುವೆಂಪು ಯಾವ ದೇವಾಲಯಗಳಿಗೂ ಹೋದವರಲ್ಲ. ಪುರೋಹಿತಶಾಹಿ ಹಿಡಿತದ ಹಾಗೂ ಅಸಮಾನತೆ -ಅಮಾನವೀಯತೆ ಸಾರುವ ದೇವಾಲಯಗಳ ನಿರಾಕರಿಸುವಿಕೆ ಅಂಬೇಡ್ಕರ್ ಹಾಗೂ ಕುವೆಂಪು ಇಬ್ಬರಲ್ಲೂ ಕಂಡುಬರುತ್ತದೆ.

ಅಂಬೇಡ್ಕರರು ಭಾರತದ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದವರು. ಸಂವಿಧಾನ ಪೂರ್ಣಗೊಂಡ ಬಳಿಕ 1949ರ ನವೆಂಬರ್ 25ರಂದು ಅದನ್ನು ಸಮರ್ಪಿಸಿ ಸಂವಿಧಾನ ರಚನಾ ಸಭೆಯಲ್ಲಿ ಮಾತನಾಡುತ್ತಾ; ‘‘1950ರ ಜನವರಿ 26ರಿಂದ ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆಯುತ್ತೇವೆ. ಅಂದರೆ ಒಬ್ಬರಿಗೆ ಒಂದೇ ವೋಟು ಅದಕ್ಕೆ ಒಂದೇ ಮೌಲ್ಯ. ಆದರೆ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅಸಮಾನತೆ ಮುಂದುವರಿಯುತ್ತದೆ. ಎಲ್ಲಿಯವರೆಗೆ ಈ ಅಸಮಾನತೆ ಮುಂದುವರಿಯುತ್ತದೋ ಅಲ್ಲಿಯವರೆಗೆ ಪ್ರಜಾಪ್ರಭುತ್ವ ಗಂಡಾಂತರಕ್ಕೆ ಸಿಲುಕುತ್ತದೆ. ಆದಷ್ಟು ಬೇಗ ಈ ವೈರುಧ್ಯವನ್ನು ನಿವಾರಣೆ ಮಾಡಬೇಕು’’ ಎಂಬ ಎಚ್ಚರಿಕೆ ನೀಡಿದರು.

ಕುತೂಹಲಕಾರಿ ಸಂಗತಿಯೆಂದರೆ ಸಂವಿಧಾನ ಜಾರಿಗೆ ಬಂದ ದಿನದಂದೇ 1950ರ ಜನವರಿ 26ರಂದು ಕುವೆಂಪು ಅವರು ಅತ್ಯಂತ ಸಂಭ್ರಮದಿಂದ ‘ಶ್ರೀಸಾಮಾನ್ಯರ ದೀಕ್ಷಾಗೀತೆ’ ಎಂಬ ಪದ್ಯವನ್ನು ಬರೆದರು ಅದರಲ್ಲಿ:
ಕೊನೆಗೊಂಡಿತೊ ಓರೊರ್ವರ ಗರ್ವದ ಕಾಲ
ಇದು ಸರ್ವರ ಕಾಲ!
ಸರ್ವೋದಯ ಸರ್ವೋದಯ
ಸರ್ವೋದಯ ಯುಗಮಂತ್ರ
ಸರ್ವೋದಯವೆ ಸ್ವಾತಂತ್ರ್ಯದ ಶ್ರೀತಂತ್ರ
ಎಂದು ಸ್ವ್ವತಂತ್ರ್ಯ ಭಾರತದ ಸಾಕ್ಷಾತ್ಕಾರವನ್ನು ಸರ್ವೋದಯದ ಮೂಲಕ ಕಾಣಲು ಹಂಬಲಿಸುತ್ತಾರೆ. ಅಲ್ಲದೆ ತಮ್ಮ ‘ಶ್ರೀಸಾಮಾನ್ಯ ಮತ್ತು ವಿಚಾರ ಕ್ರಾಂತಿ’ ಲೇಖನದಲ್ಲಿ ‘‘ಸಮನ್ವಯ ದೃಷ್ಟಿಯ ಸೆಕ್ಯುಲರ್ ಅಥವಾ ಸಾರ್ವ ಲೌಕಿಕ ಕ್ಷೇಮರಾಷ್ಟ್ರ ಎಂದು ಘೋಷಿತವಾಗಿದೆ ನಮ್ಮ ಭಾರತ. ಆದ್ದರಿಂದ ಆ ಘೋಷಣೆ ಕಾರ್ಯಕಾರಿಯಾಗಿ ಸಫಲವಾಗಬೇಕಾದರೆ ನಮ್ಮ ಶ್ರೀಸಾಮಾನ್ಯರಲ್ಲಿ ಮತದ ವೌಢ್ಯತೆಗಳು ಮಾತ್ರವಲ್ಲದೆ, ಮತಭಾವದ ಮೌಢ್ಯತೆಯೂ ತೊಲಗಬೇಕು. ವರ್ಣಾಶ್ರಮ, ಜಾತಿಪದ್ಧತಿ, ಮೇಲು-ಕೀಳು ಭಾವನೆ ಮುಂತಾದ ಮಧ್ಯಯುಗದ ಕರಾಳ ತತ್ವಗಳೆಲ್ಲ ವೈಜ್ಞಾನಿಕ ಅಗ್ನಿಕುಂಡದಲ್ಲಿ ಭಸ್ಮೀಕೃತವಾಗಬೇಕು. ಮತ ಮತ್ತು ರಾಜಕೀಯಗಳ ಅಂಧಕಾರವು ವಿಜ್ಞಾನ ಮತ್ತು ಅಧ್ಯಾತ್ಮಗಳ ಸೂರ್ಯೋದಯಕ್ಕೆ ಶರಣಾಗಿ, ತೊಲಗಿ, ಸರ್ವೋದಯದ ಕಾಂತಿ ಹಬ್ಬಿ ಶಾಂತಿ ಮೈದೋರಲಿ ಎಂಬ ಅಭೀಪ್ಸೆ ಸರ್ವರ ಹೃದಯದ ಪ್ರಾರ್ಥನೆಯಾಗಿ ಅತೀತ ಕಲ್ಯಾಣ ಶಕ್ತಿಗಳ ಅವತರಣಕ್ಕೆ ಹಾದಿಯಾಗಲಿ ಎಂದು ಹಾರೈಸುತ್ತೇನೆ.’’ ಎಂಬುದಾಗಿ ಮನದುಂಬಿ ಮಾತನಾಡುತ್ತಾರೆ. ಅಂಬೇಡ್ಕರ್ ಹಾಗೂ ಕುವೆಂಪು ಇಬ್ಬರಲ್ಲೂ ಸಂವಿಧಾನದ ಬೆಳಕಿನಲ್ಲಿ ಎಲ್ಲ ಬಗೆಯ ಗರ್ವಗಳು ನಾಶವಾಗಿ ಸಕಲ ಸಮುದಾಯಗಳ ಸಬಲೀಕರಣ ಮತ್ತು ಪ್ರಜಾಪ್ರಭುತ್ವದ ಆಶಯಗಳು ಯಶಸ್ವಿಯಾಗಬೇಕೆಂಬ ತುಡಿತ ಇರುವುದನ್ನು ಕಾಣಬಹುದು.

 ಅಂಬೇಡ್ಕರ್ ಹಾಗೂ ಕುವೆಂಪು ಇಬ್ಬರೂ ತಮ್ಮ ಜೀವಿತದ ಕೊನೆಯ ಕಾಲಘಟ್ಟಗಳಲ್ಲಿ ದಾರ್ಶನಿಕ ಸಂದೇಶಗಳನ್ನು ಜನತೆಗೆ ಬಿಟ್ಟುಹೋದರು. ಅಂಬೇಡ್ಕರರು ಬೌದ್ಧತತ್ವವನ್ನು ಕುವೆಂಪುರವರು ವಿಶ್ವಮಾನವ ಸಂದೇಶವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಬೌದ್ಧತತ್ವಕ್ಕೂ ವಿಶ್ವಮಾನವ ಸಂದೇಶಕ್ಕೂ ಅಪರಿಮಿತವಾದ ಸಾಮ್ಯತೆಗಳಿವೆ. ಅಂಬೇಡ್ಕರರು ಬೌದ್ಧತತ್ವದ ಅನುಸರಣೆಯೊಂದಿಗೆ ಜನತೆ ಜ್ಞಾನವಂತರಾಗುವ ಮುಖೇನ ತಮ್ಮನ್ನು ಆವರಿಸಿರುವ ಕತ್ತಲಿನಿಂದ ಬಿಡುಗಡೆ ಹೊಂದಬೇಕು ಎಂದರೆ, ಕುವೆಂಪು ತಮ್ಮ ವಿಶ್ವಮಾನವ ಸಂದೇಶದಲ್ಲಿ ‘‘ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಕರ್ತವ್ಯವಾಗಬೇಕು’’ ಎನ್ನುತ್ತಾರೆ. ‘‘ಬುದ್ಧತ್ವ ಎಂದರೆ ವ್ಯಕ್ತಿಯ ವಿಕಾಸ-ಬಂಧ ಮುಕ್ತ ಮನಸ್ಥಿತಿ’’ ಎಂದು ಅಂಬೇಡ್ಕರ್ ಪರಿಭಾವಿಸಿದರೆ, ಕುವೆಂಪು ಅವರು ‘‘ಮನುಷ್ಯನನ್ನಾಗಿ ಮಾಡುವುದು ಅಂದರೆ ವಿಶ್ವಮಾನವನನ್ನಾಗಿಸುವುದು’’ ಎನ್ನುತ್ತಾರೆ.

ಅಂಬೇಡ್ಕರ್ ‘‘ಎಲ್ಲ ಮನುಷ್ಯರು ಸಮಾನರು ಎಂಬ ಭಾವನೆ ಎಲ್ಲರಲ್ಲೂ ರೂಢಿಯಾಗಬೇಕು ಎಂದರೆ, ಕುವೆಂಪು ‘‘ಮನುಷ್ಯ ಜಾತಿ ತಾನೊಂದೆ ವಲಂ ಎನ್ನುವುದು ನಿರುಪಾದಿಕವಾಗಿ ಎಲ್ಲರೂ ಸ್ವೀಕರಿಸಬೇಕು’’ ಎಂದಿದ್ದಾರೆ. ‘‘ನಿಜವಾದ ಧರ್ಮ ಮಾನವನ ಹೃದಯದಲ್ಲಿದೆ ಶಾಸ್ತ್ರಗ್ರಂಥಗಳಲ್ಲಲ್ಲ’’ ಎಂದು ಅಂಬೇಡ್ಕರ್ ಪ್ರತಿಪಾದಿಸಿದರೆ, ‘‘ಯಾವ ಗ್ರಂಥವೂ ಏಕೈಕ ಪರಮ ಪೂಜ್ಯ ಗ್ರಂಥವಾಗಬಾರದು’’ ಎಂದು ಕುವೆಂಪು ತಿಳಿಸುತ್ತಾರೆ. ಅಂಬೇಡ್ಕರರು ‘‘ಜಗತ್ತಿನಲ್ಲಿ ಯಾವುದೂ ಸನಾತನವಲ್ಲ, ಶಾಶ್ವತವಲ್ಲ, ಎಲ್ಲವೂ ಪರಿವರ್ತನಶೀಲವಾದುದು, ಇರುವಿಕೆ ಎಂದರೆ ಸದಾ ಆಗುವಿಕೆ ಮನುಷ್ಯ ಚಲನಶೀಲನಾಗಬೇಕು’’ ಎನ್ನುತ್ತಾರೆ. ಕುವೆಂಪು ಅವರ ‘ಅನಿಕೇತನ’ ಪದ್ಯ ಇದೇ ಆಶಯವನ್ನು ಕಟ್ಟಿಕೊಡುತ್ತದೆ. ಅಂಬೇಡ್ಕರರ ಬೌದ್ಧತತ್ವ ಹಾಗೂ ಕುವೆಂಪು ಅವರ ವಿಶ್ವಮಾನವ ಸಂದೇಶ ಮನುಷ್ಯರೆಲ್ಲರ ವಿಮೋಚನೆಗೆ ಬೆಳಕು ತೋರುವುದಾಗಿವೆ.

ಮುಖ್ಯವಾಗಿ ಅಂಬೇಡ್ಕರ್ ಒಪ್ಪಿನಡೆದ ಬುದ್ಧತತ್ವ ಹಾಗೂ ಕುವೆಂಪು ಪ್ರತಿಪಾದಿಸಿ ನಡೆದ ವಿಶ್ವಮಾನವ ಸಂದೇಶ ಕೇವಲ ನುಡಿಗೆ ಸಂಬಂಧಿಸಿದ್ದಲ್ಲ ನಡೆಗೆ ಸಂಬಂಧಿಸಿದ್ದು. ವ್ಯಕ್ತಿ ಮತ್ತು ಸಾಮೂಹಿಕ ಬಿಡುಗಡೆಗೆ ಸಂಬಂಧಿಸಿದ್ದು, ಇಲ್ಲೇ ಒಂದು ಘಟನೆಯನ್ನು ದಾಖಲಿಸಬೇಕೆನಿಸುತ್ತದೆ. ಇದು ಕುವೆಂಪು ಅವರ ಪರಮಾಪ್ತ ಶಿಷ್ಯರಾದ ಪ್ರೊ. ಪ್ರಭುಶಂಕರರು ಹೇಳಿದ್ದು.

ಪ್ರಭುಶಂಕರರು ಆಗ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದರು. ಅವರು ಪ್ರಸಾರಾಂಗದಲ್ಲಿ ಇದ್ದಾಗ ಕಚೇರಿಗೆ ಫೋನು ಬಂತು. ಅದು ಕುವೆಂಪು ಅವರದ್ದಾಗಿತ್ತು. ಕುವೆಂಪು ಅವರು ಪ್ರಭುಶಂಕರರಿಗೆ ‘‘ಅಮೆರಿಕದಿಂದ ಹತ್ತು ಮಂದಿ ಬಂದಿದ್ದಾರೆ. ಅರ್ಜೆಂಟಾಗಿ ವಿಶ್ವಮಾನವ ಸಂದೇಶದ ಇನ್ನೂರು ಪ್ರತಿಗಳನ್ನು ಕಳಿಸಿಕೊಡಿ, ಅವರಿಗೆ ಬೇಕೆಂತೆ’’ ಎಂದರು. ಪ್ರಭುಶಂಕರರು ‘‘ಸಾರ್ ವಿಶ್ವಮಾನವ ಸಂದೇಶದ ಪ್ರತಿಗಳು ಖಾಲಿ ಆಗಿವೆ. ಈಗ ಸದ್ಯಕ್ಕೆ ಹತ್ತೊ ಹದಿನೈದೋ ಇವೆ ಅಷ್ಟೆ’’ ಎಂದರು. ಅತ್ತಿಂದ ‘‘ಹೌದಾ’’ ಎಂದ ಕುವೆಂಪು ಅವರು ರಿಸೀವರನ್ನು ಹಿಡಿದುಕೊಂಡೇ ಬಂದಿದ್ದ ಅತಿಥಿಗಳೊಂದಿಗೆ ಮಾತನಾಡಿ ಮತ್ತೆ ಪ್ರಭುಶಂಕರರಿಗೆ ‘‘ಅವರು ವಾಪಸ್ ಹೋಗೋಕೆ ಹತ್ತು ಹದಿನೈದು ದಿನ ಆಗುತ್ತಂತೆ. ಅಷ್ಟರಲ್ಲಿ ರೀಪ್ರಿಂಟ್ ಮಾಡಿಕೊಡಿ ಹೋಗೋವಾಗ ತಗೊಂಡು ಹೋಗ್ತಾರೆ’’ ಅಂದರಂತೆ. ಸ್ವಲ್ಪ ಮೌನವಹಿಸಿದ ಪ್ರಭುಶಂಕರರು ತಕ್ಷಣವೇ ‘‘ಸಾರ್ ದಯವಿಟ್ಟು ನನ್ನದೊಂದು ಪ್ರಶ್ನೆ’’ ಎಂದರು. ಆ ಕಡೆಯಿಂದ ಕೇಳಿ ಎಂದ ಕೂಡಲೇ ‘‘ಕಳೆದ ಸಾರಿ ಇವರು ಬಂದಿದ್ದಾಗ ಸುಮಾರು ಐನೂರು ಆರುನೂರು ವಿಶ್ವಮಾನವ ಸಂದೇಶದ ಪ್ರತಿಗಳನ್ನು ಕೊಟ್ಟು ಕಳಿಸಿದಿರಿ. ಅವನ್ನು ಓದಿರುವ ಎಷ್ಟು ಮಂದಿ ವಿಶ್ವಮಾನವರಾಗಿದ್ದಾರೆ ತಿಳಿಸಿ ಸಾರ್’’ ಎಂದರಂತೆ. ಆಗ ಕುವೆಂಪು ‘‘ಹೌದಲ್ವೇನ್ರಿ’’ ಎಂದು ಮೌನವಾದರಂತೆ.

ಇದು ಹೆಚ್ಚು ಹೆಚ್ಚು ಕಾಡಬೇಕಾಗಿದೆ. ದಾರ್ಶನಿಕ ಮಾತುಗಳು ಕೇವಲ ಮಾತುಗಳಾಗಿ ಉಳಿಯದೆ ಕ್ರಿಯಾರೂಪಕ್ಕೆ ಇಳಿಯಬೇಕಾಗಿದೆ. ಸ್ವತಃ ಅಂಬೇಡ್ಕರ್ ಹಾಗೂ ಕುವೆಂಪು ತಾವು ಕಂಡ ದರ್ಶನದಂತೆ ಬದುಕಿದವರು. ಆ ದರ್ಶನದ ಬೆಳಕಿನಲ್ಲಿ ಜನತೆ ನಡೆದರೆ ಸಂಸ್ಕೃತಿ ನಿರ್ಮಾಣ ಸಾಧ್ಯವೆಂದು ಖಚಿತವಾಗಿ ನಂಬಿದ್ದವರು. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹಾಗೂ ಕುವೆಂಪು ಅವರ ಚಿಂತನೆಗಳ ನಡುವೆ ಅಪರಿಮಿತವಾದ ಸಾಮ್ಯತೆಗಳಿವೆ. ಅವುಗಳನ್ನು ಹೆಚ್ಚು ಹೆಚ್ಚು ಅನುಸಂಧಾನಗೊಳಿಸಬೇಕಾಗಿದೆ. ಮುಖ್ಯವಾಗಿ ಇಬ್ಬರ ಕಾಳಜಿಯೂ ವ್ಯಕ್ತಿತ್ವ, ಸಂಸ್ಕೃತಿ ಮತ್ತು ರಾಷ್ಟ್ರನಿರ್ಮಾಣಕ್ಕೆ ಸಂಬಂಧಿಸಿದವು. ಇವುಗಳನ್ನು ಅನುಸರಿಸುವುದಾದರೆ ಅಂಬೇಡ್ಕರ್ ಹಾಗೂ ಕುವೆಂಪು ಅಂತಹವರ ವ್ಯಕ್ತಿತ್ವಗಳಿಗೆ ನಿಜವಾದ ಘನತೆ-ಗೌರವ ಸಲ್ಲಿಸಿದಂತಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top