ಅಶೋಕವನದಲ್ಲೊಂದು ‘ಕಪ್ಪೆ ಗೂಡು’ | Vartha Bharati- ವಾರ್ತಾ ಭಾರತಿ

--

ಅಶೋಕವನದಲ್ಲೊಂದು ‘ಕಪ್ಪೆ ಗೂಡು’

ಅಶೋಕವನದವರು ಹೇಳುವಂತೆ, ‘ಕಪ್ಪೆಗೂಡು’ ಪ್ರವಾಸಿತಾಣವಲ್ಲ, ಪರಿಸರ ಶಿಕ್ಷಣ ಕಲ್ಪಿಸುವ ನೆಲವೂ ಅಲ್ಲ. ಇಲ್ಲಿಗೆ ಅಧ್ಯಯನ ಮೀರಿ, ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು, ವಿನೋದಾವಳಿಗಳನ್ನು ನಡೆಸುವಂತಿಲ್ಲ.


ಮಲೆನಾಡ ಭಾಗದ ಪಶ್ಚಿಮ ಘಟ್ಟಗಳಿಗೆ ಬರುವ ಜೀವ ವಿಜ್ಞಾನದ ಅಧ್ಯಯನಕಾರರಿಗೆ ಅನುಕೂಲವಾಗುವಂತೆ ‘ಕಪ್ಪೆಗೂಡು’ ಕಂಟೈನರ್ ವಸತಿ ಗೃಹವು ಬಿಸಿಲೆ ಘಾಟ್ ವ್ಯಾಪ್ತಿಯ ಅಶೋಕವನದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.

ಸುಬ್ರಹ್ಮಣ್ಯಂ-ಸಕಲೇಶಪುರ ಸಂಪರ್ಕಿಸುವ ಬಿಸಿಲೆ ಘಾಟ್ ಅರಣ್ಯ ಪರಿಸರ ಸಮೀಪದ, ಮಂಗಳೂರಿನ ಅತ್ರಿ ಬುಕ್ ಸೆಂಟರ್‌ನ ಮಾಲಕ ಜಿ. ಎನ್. ಅಶೋಕವರ್ಧನ ಮತ್ತು ಶಸ್ತ್ರಚಿಕಿತ್ಸಾ ತಜ್ಞ ಡಾ. ಕೃಷ್ಣಮೋಹನ್ ಪ್ರಭು ಅವರಿಗೆ ಸೇರಿದ ಆಶೋಕ ವನ ಪ್ಲಾಟ್‌ನಲ್ಲಿ ‘ಕಪ್ಪೆಗೂಡು’ ನಿರ್ಮಾಣಗೊಂಡಿದ್ದು ತಮ್ಮ ಬಳಗದ ವನ್ಯಜೀವಿಪ್ರೇಮಿಗಳ ಸಮ್ಮುಖದಲ್ಲಿ ಲೋಕರ್ಪಣೆಗೊಳಿಸಲಾಯಿತು. 1975ರಲ್ಲಿ ಪುಸ್ತಕ ವ್ಯಾಪಾರಕ್ಕೆಂದು ಮೈಸೂರಿನಿಂದ ಮಂಗಳೂರಿಗೆ ಬಂದು ನೆಲೆಸಿದ ಜಿ. ಎನ್. ಅಶೋಕವರ್ಧನ್ ಬಿಸಿಲೆ ಘಾಟ್ ವಲಯದ ಬೆಟ್ಟ ಕಾಡುಗಳಲ್ಲಿ ಪರ್ವತಾರೋಹಣದ ಹವ್ಯಾಸದಲ್ಲಿದ್ದವರು. 1980ರ ದಶಕದಲ್ಲಿ ತನ್ನ ಕುಟುಂಬದ ಗೆಳೆಯ ಉಲ್ಲಾಸ ಕಾರಂತರೊಂದಿಗೆ ಒಂದು ವಾರ ನಾಗರಹೊಳೆಯಲ್ಲಿ ಕಳೆದಿದ್ದರು. ಆ ಸಮಯದಲ್ಲಿ ಅಶೋಕವರ್ಧನ ಅವರ ಸುತ್ತಾಟಗಳಿಗೆ ಕಾರಂತರು ವನ್ಯ ಸಂರಕ್ಷಣೆಯ ಸ್ಪಷ್ಟ ರೂಪವನ್ನು ನೀಡಿದ್ದರು. ಉಲ್ಲಾಸ್ ಕಾರಂತ ಮತ್ತು ಕೆ. ಎಂ. ಚಿನ್ನಪ್ಪಅವರ ನೇತೃತ್ವದಲ್ಲಿ ನಿಯತಕಾಲಗಳಲ್ಲಿ ಹಲವು ವರ್ಷ ನಡೆಸಿದ ವನ್ಯ ಜಾನುವಾರು ಗಣತಿಯ ತಂಡದಲ್ಲಿ ಜಿ. ಎನ್. ಅಶೋಕವರ್ಧನ್ ಕೂಡ ಒಬ್ಬರಾಗಿದ್ದರು ಮತ್ತು ಅಶೋಕವನದ ಪಾಲುದಾರ ವೈದ್ಯ ಡಾ. ಕೃಷ್ಣಮೋಹನ್ ಕೂಡ ಜೊತೆಗಿದ್ದರು.

ಏನಿದು ಅಶೋಕವನ? 
ನಾಗರಹೊಳೆಯಿಂದ ಮರಳಿದ ನಂತರ, ಆಗ ಮಂಗಳೂರು ಕೇಂದ್ರಿತವಾದಂತೆ, ಗೆಳೆಯ ನಿರೇನ್ ಜೈನ್ ನಾಗರಿಕರಿಂದ ವನ್ಯ ಸಂರಕ್ಷಣಾ ಜಾಗೃತಿಯಲ್ಲಿ ಜವಾಬ್ದಾರಿಯುತ ನಾಯಕತ್ವ ಕೊಟ್ಟರು. ಆರ್ಕಿಟೆಕ್ಟ್ ವೃತ್ತಿಯ ಪ್ರಾಥಮಿಕ ಹಂತದಲ್ಲಿದ್ದ ನಿರೇನ್ ಜೈನ್ ತನ್ನ ವೃತ್ತಿ ಅಗತ್ಯಗಳನ್ನು ಕಿರಿದುಮಾಡಿ, ವನ್ಯ ಸಂರಕ್ಷಣೆಯ ಕೆಲಸವನ್ನು ಸಮರ್ಥವಾಗಿ ನಡೆಸಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕುದುರೆಮುಖ ಗಣಿಗಾರಿಕೆಯನ್ನು ಕಾನೂನಾತ್ಮಕವಾಗಿಯೇ ನಿರ್ಗಮಿಸುವಂತೆ ಮಾಡಿದ್ದು, ವನ್ಯಧಾಮ ಪರಿಸರದ ಗ್ರಾಮೀಣ ಮಂದಿಯ ಮರುವಸತಿಯ ಸಂಕಟಗಳಿಗೆ ನಿರೇನ್ ಸ್ಪಂದಿಸಿದ್ದರು. ಆ ಹೋರಾಟಗಳಲ್ಲಿ ನಿರೇನ್‌ಗೆ ಸಿಕ್ಕ ಪರಿಸರ ಸಹಕಾರಿಗಳಲ್ಲಿ ಬಿಸಿಲೆ ಘಾಟ್ ವಲಯದ ಹಿರಿಯ ಕೃಷಿಕ, ಪರಿಸರ ಪ್ರೇಮಿ ಗೊದ್ದು ಉಮೇಶ್ ಎಂಬವರು ಮುಖ್ಯರು.

ಆ ವಲಯದಲ್ಲಿ ಸಣ್ಣೇಗೌಡ ಎಂಬವರ ಕುಟುಂಬಕ್ಕೆ ಸೇರಿದ್ದ ಭೂಮಿ ಯೊಂದಿತ್ತು. ಆ ಸ್ಥಳದಲ್ಲಿ ರೆಸಾರ್ಟ್ ಮಾಡುವುದಾಗಿ ಯಾರೋ ಚೌಕಾಸಿ ಮಾಡಿದ್ದರು, ಈ ಪಟ್ಟಾ ಭೂಮಿಯ ಸುದ್ದಿಯು ಗೊದ್ದು ಉಮೇಶ್ ಅವರಿಂದ ನಿರೇನ್ ಅವರ ಕಿವಿಗೆ ಬಿತ್ತು. ಘಟ್ಟದ ತಪ್ಪಲಿನ ಬಿಸಿಲೆ ಗೇಟಿನಿಂದ ತೊಡಗಿ, ಕೆಳಗಿನ ಸುಬ್ರಹ್ಮಣ್ಯ ಸಮೀಪದ ಕುಳ್ಕುಂದದವರೆಗೆ ಅಂದರೆ ಸುಮಾರು 23 ಕಿ.ಮೀ. ದಾರಿಯ ಉದ್ದಕ್ಕೆ ಎರಡೂ ಮಗ್ಗುಲಿನಲ್ಲಿ ಒಂದೋ ಪುಷ್ಪಗಿರಿ ವನಧಾಮ ಅಥವಾ ಸ್ಪಷ್ಟವಾಗಿ ಕಾಣುವಂತೆ ಬಿಸಿಲೆ ಕಾಯ್ದಿರಿಸಿದ ಕಾಡು ಮಾತ್ರವಿದ್ದು, ಅಲ್ಲಿ ಜನ ವಸತಿ, ಕೃಷಿ ಕಾರ್ಯ ಮತ್ತು ನಾಗರಿಕ ಚಟುವಟಿಕೆಗಳು ಏನೂ ನಡೆಯುತ್ತಿರಲಿಲ್ಲ, ಇನ್ನು ರೆಸಾರ್ಟ್ ಬಂದರೆ ಕಾಡಿನ ಉದರದಲ್ಲಿ ವಿಷದ ಬೀಜ ಬಿತ್ತಿದಂತಾಗುತ್ತದೆ ಎಂದು ಮನಗೊಂಡ ನಿರೇನ್, ಜಿ. ಎನ್. ಅಶೋಕವರ್ಧನ್ ಹಾಗೂ ಡಾ. ಕೃಷ್ಣಮೋಹನ್‌ರಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಎಚ್ಚೆತ್ತು ಇವರಿಬ್ಬರೂ ಸೇರಿ ಸಣ್ಣೇಗೌಡರ ಕುಟುಂಬಕ್ಕೆ ಸೇರಲಾದ ಈ ಭೂಮಿಯನ್ನು 14 ವರ್ಷಗಳ ಹಿಂದೆ ಖರೀದಿಸಿದರು. ಅದೇ ಭೂಮಿ ‘ಅಶೋಕವನ’ ಎಂಬ ಹೆಸರು ಪಡೆಯಿತು.

‘‘ಈ ನೆಲವನ್ನು ಯಾವುದೇ ವಾಣಿಜ್ಯ ಕಲಾಪ ಅಥವಾ ನಾಗರಿಕ ಚಟುವಟಿಕೆಗಳು ಬಾರದಂತೆ ಕಳೆದ ಹದಿನಾಲ್ಕು ವರ್ಷಗಳುದ್ದಕ್ಕೂ ಕಾಯ್ದುಕೊಂಡು ಬಂದಿದ್ದೇವೆ. ಇದುವರೆಗೆ ಇಲ್ಲಿ ಬೀಜ, ಗಿಡ ನೆಟ್ಟಿಲ್ಲ, ಇಲ್ಲಿರುವ ಏಲಕ್ಕಿ, ಸೀಗೆ, ಕಣಿಲೆಗಳಂತಹ ವನೋತ್ಪತ್ತಿಗಳನ್ನು ನಮ್ಮ ಮನೆಯ ಅಗತ್ಯಕ್ಕೂ ಸಂಗ್ರಹಿಸಿಲ್ಲ. ಅಶೋಕವನ ಮಾಡಿದ ಹೊಸತರಲ್ಲಿ ಪತ್ರಿಕಾ ಲೇಖನದ ಮೂಲಕ ಸಂಪರ್ಕಕ್ಕೆ ಬಂದ ಎಲ್ಲರಲ್ಲೂ ವನ್ಯ ಸಂರಕ್ಷಣೆಯ ಈ ಕ್ರಮವನ್ನು ಪ್ರಚಾರ ಮಾಡಿದ್ದೆವು. ಕಾಡಿನ ಅಂಚಿನಲ್ಲಿದ್ದುಕೊಂಡು, ಅನಿವಾರ್ಯವಾಗಿ ಕೃಷಿಬಿಟ್ಟು ಬೀಳಾಗಿರುವ ಖಾಸಗಿ ನೆಲಗಳು ಈ ವಲಯದಲ್ಲಿ ಇನ್ನಷ್ಟು ಇವೆ, ಅವನ್ನು ಸಮಾನಾಸಕ್ತರು ಕೊಂಡು, ವನವಾಗಿಯೇ ಕಾಯ್ದುಕೊಳ್ಳಬೇಕು, ತುಣುಕುಗಳು ಸಣ್ಣವಾದರೂ ‘ಖಾಸಗಿ ವನ್ಯ ಸಂರಕ್ಷಣೆ’ ಒಂದು ಚಳವಳಿಯಾದರೆ ವ್ಯಾಪ್ತಿ ಹೆಚ್ಚುತ್ತದೆ ಎಂದು ಆಶಿಸಿದ್ದೆವು. ಆದರೆ ಕಾಡು ಬೋಳಿಸುವಲ್ಲಿ, ನೆಲವನ್ನು ವಾಣಿಜ್ಯ ಉದ್ದೇಶಕ್ಕೆ ದುಡಿಸುವಲ್ಲಿ ಇರುವ ಆಕರ್ಷಣೆಗಳು ಇದ್ದಂತೆ ಉಳಿಸಿಕೊಳ್ಳುವಲ್ಲಿ ಇಲ್ಲ. ನಮ್ಮ ಪ್ರಯತ್ನ ಯಾರಿಗೂ ಅನುಕರಣೀಯವಾಗಿ ಕಾಣಲೇ ಇಲ್ಲ’’ ಎಂದು ಹೇಳುತ್ತಾರೆ ಅಶೋಕವನದ ಜಿ. ಎನ್. ಅಶೋಕವರ್ಧನ್.

ಮರನಾಯಿ ದರ್ಶನ
 ಸಮಾನಾಸಕ್ತ ಗೆಳೆಯರೊಡನೆ ಇಲ್ಲಿಗೆ ವರ್ಷದಲ್ಲಿ ಹಲವು ಬಾರಿ ಬಂದು ಪುಟ್ಟ ಗುಡಾರ ಹೂಡಿ, ಸುತ್ತಣ ಪರಿಸರದ ಅಲ್ಪಸ್ವಲ್ಪಪರಿಚಯ ಮಾಡಿಕೊಳ್ಳುತ್ತಿದ್ದರು, ಒಂದು ಬಾರಿ ಶಿಬಿರ ನಡೆಸುವಾಗ ಆ ಪರಿಸರದಲ್ಲಿ ಮರನಾಯಿ(ನೀಲಗಿರಿ ಮಾರ್ಟಿನ್) ಕಾಣಿಸಿತ್ತು. ಆ ವಲಯದಲ್ಲಿ ಅಳಿದೇ ಹೋಗಿದೆ ಎಂದು ನಂಬಲಾಗಿದ್ದ ಮರನಾಯಿ ದರ್ಶನ ವನ್ಯ ವಿಜ್ಞಾನ ವಲಯದಲ್ಲಿ ದೊಡ್ಡ ರೋಮಾಂಚನವನ್ನೇ ಸೃಷ್ಟಿಸಿತ್ತು.

ಯುವಕರ ಆಸಕ್ತಿಗೆ ಕುಮ್ಮಕ್ಕು ನೀಡಿದ ಅಧ್ಯಯನ
ಇಲ್ಲಿ ಏನಾದರೂ ಗಂಭೀರ ಅಧ್ಯಯನ ನಡೆಸಬೇಕೆಂಬ ಉದ್ದೇಶವನ್ನಿಟ್ಟು, ಎಂಟು-ಒಂಭತ್ತು ವರ್ಷಗಳ ಹಿಂದೆ ಮಂಗಳೂರಿನ ಇನ್ಫೋಸಿಸ್‌ನಲ್ಲಿದ್ದ ಕೆಲವು ಕಿರಿಯ ವನ್ಯಪ್ರೇಮಿ ಉತ್ಸಾಹಿ ಗೆಳಯರು ಇಲ್ಲಿಗೆ ಭೇಟಿ ನೀಡಿದ್ದರು. ಈ ಯುವಕರ ಆಸಕ್ತಿಗೆ ಹೆಚ್ಚಿನ ಕುಮ್ಮಕ್ಕು ನೀಡಲು ಉಡುಪಿಯ ಪ್ರಾಣಿಶಾಸ್ತ್ರ ಅಧ್ಯಾಪಕ ಹಾಗೂ ವನ್ಯ ಸಂರಕ್ಷಣಾ ಹವ್ಯಾಸಿ ಎನ್.ಎ. ಮಧ್ಯಸ್ಥ ಮತ್ತು ಸಸ್ಯ ವಿಜ್ಞಾನಿ ಕಾಕುಂಜೆ ಗೋಪಾಲಕೃಷ್ಣ ಭಟ್ ತಮ್ಮ ಬಳಗದೊಂದಿಗೆ ಬಂದರು. ಆದರೆ ಈ ಬಳಗಕ್ಕೆ ನಿಜ ದಿಕ್ಕು ಸಿಕ್ಕಿದ್ದು ಅಂತರ್ಜಾಲಾಟದಲ್ಲಿ ಕಪ್ಪೆಗಳ ವಿಶೇಷ ಅಧ್ಯಯನ ನಿರತ ವಿಜ್ಞಾನಿ ಕೆ. ವಿ. ಗುರುರಾಜ್ ಸಿಕ್ಕಿದ ಮೇಲೆ. ಅವರ ಅಧ್ಯಯನಕ್ಕೆ ಯಾವುದೇ ಕೊರತೆಯಾಗದಂತೆ ಗುಬ್ಬಿ ಲ್ಯಾಬಿನ ಎಚ್.ಎಸ್ ಸುಧೀರ್, ಕೆ.ಎಸ್. ಶೇಷಾದ್ರಿ, ಮಧುಶ್ರೀ ಮುಡ್ಕೆ, ಶ್ರೀಕಾಂತ ಗುನಗ ಮುಂತಾದವರು ಜೊತೆಯಾದರು.

ಕಪ್ಪೆ ಗುರುತಿಸಿ ಶಿಬಿರ
ಪ್ರಾಕೃತಿಕ ಸತ್ಯಾನ್ವೇಷಣೆಯಲ್ಲಿ ಹುಲಿ, ಆನೆಗಳಂತಹ ಪ್ರಾಣಿಗಳಿಗೆ ನೂರಾರು ಚದರ ಕಿ.ಮೀ. ವ್ಯಾಪ್ತಿಯ ಕಾಡು, ಬಯಲು ಬೇಕಾಗುತ್ತದೆ. ಆದರೆ ಅಷ್ಟೇ ಪರಿಣಾಮಕಾರಿ ಸೂಚ್ಯಂಕವನ್ನು ಕೊಡುವ ಕಪ್ಪೆ, ಹಾವು, ವಾಟೆ, ಹುಲ್ಲು, ಮಣ್ಣು, ಕಲ್ಲುಗಳ ಅಧ್ಯಯನಕ್ಕೆ ಇಂತಹ ಭೌಗೋಳಿಕ ತುಣುಕುಗಳೂ ಧಾರಾಳವಾಗುತ್ತವೆ. ಇದನ್ನು ಗುರುರಾಜರ ಬಳಗ ಯಾವ ಗದ್ದಲವೂ ಇಲ್ಲದೆ ಮಾಡಿ ತೋರಿಸುತ್ತಲೇ ಇದ್ದಾರೆ. ಇವರು ಸತತ ಆರು ವರ್ಷಗಳಿಂದ ಪ್ರತೀ ಮಳೆಗಾಲದ ಆರಂಭದಲ್ಲಿ ನಡೆಸಿಕೊಟ್ಟ ‘ಕಪ್ಪೆಗುರುತಿಸಿ’ ಶಿಬಿರ ಅಶೋಕವನದ ಹೆಮ್ಮೆಯ ಸಾಧನೆಯಾಗಿದೆ.

‘ಕಪ್ಪೆಗೂಡು’ ಕಟ್ಟಿದ್ದು ಯಾಕೆ?
ಜಡಿ ಮಳೆಗಾಲ, ಕಪ್ಪೆಗಳ ಸಂಗಮ ಸಂಭ್ರಮದ ವೇಳೆ, ಅಪರಾತ್ರಿಯಲ್ಲಿ ಇಲ್ಲಿ ನಡೆಸಿದ ಫೀಲ್ಡ್ ವರ್ಕ್ ಬಹಳ ಮಹತ್ವದ್ದಾಗಿರುತ್ತದೆ. ಇಲ್ಲಿ ಕೆಲವೊಮ್ಮೆ ರಾತ್ರಿಯ ವೇಳೆ ನಡೆಯುವ ಅಧ್ಯಯನ ನಿರತ ಕಲಾಪಕ್ಕೆ 20-25 ಮಂದಿ ಬಿಸಿಲೆ ಗೇಟ್ ಬಳಿಯ ಸಮುದಾಯ ಭವನದ ಕನಿಷ್ಠ ಸವಲತ್ತುಗಳನ್ನು ಹೇಗೋ ಹೊಂದಿಸಿಕೊಳ್ಳುತ್ತಿದ್ದರು. ಆದರೆ ಆ ರೀತಿಯ ಕ್ಷೇತ್ರ ಕಾರ್ಯದಲ್ಲಿ ಸಿಕ್ಕ ಪ್ರಾಥಮಿಕ ಮಾಹಿತಿಗಳನ್ನು ಸಂಶೋಧನೆಗಳ ಮಟ್ಟಕ್ಕೆ ಏರಿಸಬೇಕಾದರೆ ಇಲ್ಲಿನ ಸವಲತ್ತುಗಳು ಪೂರಕವಾಗುತ್ತಿರಲಿಲ್ಲ. ಇಲ್ಲಿ ಕನಿಷ್ಠ ಎರಡು ಮೂರು ಮಂದಿ ವರ್ಷದ ವಿವಿಧ ಅವಧಿಗಳಲ್ಲಿ ದಿನ, ವಾರಗಟ್ಟಲೆ ಉಳಿದುಕೊಂಡು, ಅಧ್ಯಯನ ನಡೆಸುವುದು ಕಷ್ಟವಾಗುತ್ತಿತ್ತು. ಅದಕ್ಕಾಗಿ ಅಶೋಕವನದವರು ಈ ತಾತ್ಕಾಲಿಕ ಕಂಟೈನರ್ ಮನೆ ನಿರ್ಮಾಣಕ್ಕೆ ಮುಂದಾದರು. ಈ ಮನೆಯೊಳಗೆ ನಾಲ್ಕು ಮಂದಿಗೆ ಸ್ವಯಂ ಆಡುಗೆ ಮಾಡಿಕೊಂಡು ಇರಬಹುದಾದ ವ್ಯವಸ್ಥೆ ಇದೆ. ಮನೆಯ ಮುಂಭಾಗ ಹರಿಯುತ್ತಿರುವ ತೊರೆಯಿದ್ದರೂ ಕಾನನದ ನೀರನ್ನು ಸ್ವಂತಕ್ಕೆ ಬಳಸಬಾರದೆಂಬ ನಿಟ್ಟಿನಲ್ಲಿ ಕಂಟೈನರ್ ಮನೆಯ ಸಮೀಪದಲ್ಲೇ ಕಿರಿದಾದ ಬಾವಿ ನಿರ್ಮಿಸಲಾಗಿದೆ. ಇದರಿಂದ ರಾತ್ರಿಯ ಅಧ್ಯಯನದ ಸಂದರ್ಭ ಎದುರಾಗುತ್ತಿದ್ದ ಕಷ್ಟವನ್ನು ತಪ್ಪಿಸಿದಂತಾಗಿದೆ. ಹೀಗೊಂದು ಪ್ರಯೋಗಕ್ಕೆ ಪ್ರೇರಣೆ ನೀಡಿದ್ದು ಗುರುರಾಜರ ಕಪ್ಪೆಗಳ ಅಧ್ಯಯನ ಎಂಬ ಕಾರಣಕ್ಕೆ ಈ ಕಂಟೈನರ್ ಮನೆಗೆ ‘ಕಪ್ಪೆಗೂಡು’ ಎಂದು ಹೆಸರಿಡಲಾಗಿದೆ.

ಹಿಂದೆ ಈ ಪ್ರದೇಶದಲ್ಲಿ ಏಲಕ್ಕಿ ತೋಪುಗಳಿದ್ದವು ಎನ್ನಲಾಗಿದ್ದು, ಇಲ್ಲಿನ ಕೃಷಿ ಕಾರ್ಯಕ್ಕೋ ಅಥವಾ ಮರ ಸಾಗಾಣೆಗೋ ಮಾಡಿದ ದಾರಿಯೊಂದಿದ್ದು, ಸದ್ಯ ಅದನ್ನೇ ಬಳಸಲಾಗುತ್ತಿದೆ. ಈ ಪರಿಸರದ ವನ್ಯ ಜೀವಿಗಳ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಬೇಲಿ, ಪಾಗಾರ ಅಥವಾ ಕಂದಕಗಳನ್ನು ನಿರ್ಮಿಸಿಲ್ಲ. ಅರಣ್ಯ ಇಲಾಖೆ ಸಾಮಾಜಿಕ ರಕ್ಷಣೆಯ ಭಾಗವಾಗಿ ಇಲ್ಲಿಗೂ ವಿದ್ಯುತ್ ಬೇಲಿ ನಿರ್ಮಿಸುವ ಮಾತು ಬಂದಾಗ ಅಶೋಕವನದವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಕಪ್ಪೆಗೂಡಿನ ಬಳಕೆಯ ನೀರಿನ ವಿಲೇವಾರಿಗಳು ಹಾಗೂ ಕಸಗಳು ವಿಸ್ತೃತವಾಗಿ ಇಲ್ಲಿನ ವನ್ಯಪರಿಸರವನ್ನು ಪ್ರಭಾವಿಸದಂತೆ ಎಚ್ಚರವಹಿಸಲಾಗಿದೆ. ಅಶೋಕವನದವರು ಹೇಳುವಂತೆ, ‘ಕಪ್ಪೆಗೂಡು’ ಪ್ರವಾಸಿತಾಣವಲ್ಲ, ಪರಿಸರ ಶಿಕ್ಷಣ ಕಲ್ಪಿಸುವ ನೆಲವೂ ಅಲ್ಲ. ಇಲ್ಲಿಗೆ ಅಧ್ಯಯನ ಮೀರಿ, ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು, ವಿನೋಧಾವಳಿಗಳನ್ನು ನಡೆಸುವಂತಿಲ್ಲ. ಇಲ್ಲಿಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ, ಹಾಗಾಗಿ ಅಶೋಕವನದ ವಿಳಾಸವನ್ನು ಬಹಿರಂಗ ಪಡಿಸುವಂತಿಲ್ಲ. ‘‘ಈ ಕಂಟೈನರ್ ಮನೆಯನ್ನು ಮುಂದೆ ಕ್ಷೇತ್ರಕಾರ್ಯಕ್ಕಾಗಿ ಯಾವುದೇ ಜೀವವೈವಿಧ್ಯ ಸಂಶೋಧಕರಿಗೆ ಉಚಿತವಾಗಿ ನೀಡುತ್ತೇವೆ. ಆದರೆ ಅದು ತಮ್ಮ ಬಿಗಿಯಾದ ಕಣ್ಗಾವಲಿನಲ್ಲಿ’’ ಎನ್ನುತ್ತಾರೆ ಅಶೋಕವನದವರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top