-

ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?

ಇಸ್ರೇಲ್ ಜನಾಂಗವಾದಿ ಎಂಬುದು ಕೇವಲ ಆರೋಪವೇ?

-

ಭಾಗ-5

ವಿಶ್ವ ಸಂಸ್ಥೆಯ, ಪಶ್ಚಿಮ ಏಶ್ಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCWA) ಸಂಸ್ಥೆಯು 2017ರ ಮೇ ತಿಂಗಳಲ್ಲಿ ಮುಂದಿಟ್ಟ ತನ್ನ ವರದಿಯಲ್ಲಿ, ಇಸ್ರೇಲ್ ಸರಕಾರವು ವರ್ಣಭೇದದ ಹಾಗೂ ಜನಾಂಗವಾದದ ವ್ಯವಸ್ಥೆಯನ್ನು ಫೆಲೆಸ್ತೀನ್ ಜನತೆಯ ಮೇಲೆ ಹೇರುತ್ತಿದೆ ಎಂದು ಬಹಳ ಸ್ಪಷ್ಟವಾಗಿ ಆರೋಪಿಸಿತ್ತು. ಇಸ್ರೇಲ್ ಸರಕಾರವು ಸಂಪೂರ್ಣ ಫೆಲೆಸ್ತೀನ್ ಜನತೆಯನ್ನು ಅಧೀನಗೊಳಿಸುವ ಒಂದು ಜನಾಂಗವಾದಿ ವ್ಯವಸ್ಥೆಯನ್ನು ಸ್ಥಾಪಿಸಿದೆ ಎಂಬುದು ವರದಿಯ ಸಮಾರೋಪ ತೀರ್ಪಾಗಿತ್ತು. ಈ ವರದಿಯ ವಿರುದ್ಧ ಇಸ್ರೇಲ್, ಅಮೆರಿಕ ಮತ್ತು ವಿಶ್ವಸಂಸ್ಥೆಯೊಳಗಿನ ಕೆಲವು ಅಧಿಕಾರಿಗಳು ಭಾರೀ ಆಕ್ರೋಶ ಪ್ರಕಟಿಸಿದ್ದರು. ವರದಿಯನ್ನು ತಿದ್ದುವಂತೆ ಆಯೋಗದ ಅಧ್ಯಕ್ಷೆ ರೀಮಾ ಖಲಾಫ್ ಅವರ ಮೇಲೆ ತುಂಬಾ ಒತ್ತಡ ಹೇರಿದ್ದರು. ಆದರೆ ಖಲಾಫ್ ಅವರು ಒತ್ತಡಕ್ಕೆ ಮಣಿಯುವ ಬದಲು ಆಯೋಗಕ್ಕೆ ರಾಜೀನಾಮೆ ಕೊಟ್ಟು ಬಿಟ್ಟರು.

ಜಾಗತಿಕ ಮಾನ್ಯತೆ ಇರುವ ಮಾನವ ಹಕ್ಕು ರಕ್ಷಕ ಸಂಘಟನೆ 'ಹ್ಯೂಮನ್ ರೈಟ್ಸ್ ವಾಚ್' (HRW) ಈ ವರ್ಷ ಎಪ್ರಿಲ್ 27 ರಂದು ಪ್ರಕಟಿಸಿದ 213 ಪುಟಗಳ ಸವಿಸ್ತಾರ ವರದಿಯಲ್ಲಿ ಇಸ್ರೇಲ್ ಸರಕಾರವು ಮಾನವೀಯತೆಯ ವಿರುದ್ಧ ಜನಾಂಗವಾದದ ಅಪರಾಧ ಎಸಗುತ್ತಿದೆ ಮತ್ತು ಆಕ್ರಮಿತ ಫೆಲೆಸ್ತೀನ್‌ನಲ್ಲೂ ಸ್ವತಃ ಇಸ್ರೇಲ್‌ನ ಒಳಗೂ ಫೆಲೆಸ್ತೀನಿಗಳನ್ನು ದಮನಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.

ಸಂಘಟನೆಯ ನಿರ್ದೇಶಕ ಕೆನ್ನೆತ್ ರಾಥ್ ಹೇಳುತ್ತಾರೆ:

 ಕಳೆದ ಅರ್ಧ ಶತಮಾನದಿಂದ ಫೆಲೆಸ್ತೀನ್ ಪ್ರದೇಶಗಳನ್ನು ಇಸ್ರೇಲ್ ತನ್ನ ಅಕ್ರಮ ವಶದಲ್ಲಿಟ್ಟುಕೊಂಡಿದ್ದು, ಜಗತ್ತಿನ ಹೆಚ್ಚಿನ ಜನರು ಇದು ಒಂದು ತಾತ್ಕಾಲಿಕ ಪ್ರಕ್ರಿಯೆ ಎಂದು ಮತ್ತು ಹಲವು ದಶಕಗಳಿಂದ ನಡೆಯುತ್ತಿರುವ ಶಾಂತಿ ಪ್ರಕ್ರಿಯೆಯ ಫಲವಾಗಿ ಕ್ರಮೇಣಆಕ್ರಮಿತ ಪ್ರದೇಶಗಳನ್ನು ತೆರವುಗೊಳಿಸಲಾಗುವುದು ಎಂದು ನಂಬುತ್ತಾ ಬಂದಿದ್ದಾರೆ. ಆದರೆ ಇತ್ತ ಫೆಲೆಸ್ತೀನ್ ಜನತೆಯನ್ನು ದಮನಿಸುವ ಪ್ರಕ್ರಿಯೆಯು ಚರಮ ಸೀಮೆಯನ್ನು ತಲುಪಿದ್ದು ಶಾಶ್ವತ ಸ್ವರೂಪ ತಾಳಿದೆ. ಈ ಪ್ರಕ್ರಿಯೆಯು ಜನಾಂಗವಾದ ಮತ್ತು ದಮನ ನೀತಿ ಎಂಬ ಅಪರಾಧಗಳಿಗಿರುವ ಎಲ್ಲ ವ್ಯಾಖ್ಯಾನಗಳ ಅನುಸಾರವಾಗಿಯೇ ಇದೆ. ದಕ್ಷಿಣ ಆಫ್ರಿಕದ ಆತ್ಮಸಾಕ್ಷಿ ಎಂದೇ ಖ್ಯಾತರಾಗಿರುವ ವರ್ಣಭೇದ ವಿರೋಧಿ ಹೋರಾಟಗಾರ ಆರ್ಚ್ ಬಿಷಪ್ ದೆಸ್ಮನ್ಡ್ ಟೂಟು 2002ರಲ್ಲಿ ಜೆರುಸಲೇಮ್‌ಗೆ ಭೇಟಿ ನೀಡಿದ್ದರು. ಭೇಟಿ ಮುಗಿದಾಗ ಅವರು ನೀಡಿದ ಹೇಳಿಕೆ ಹೀಗಿತ್ತು: ಇಸ್ರೇಲ್‌ನಲ್ಲಿ ಫೆಲೆಸ್ತೀನಿಗಳ ಜೊತೆ ಯಾವ ರೀತಿಯಲ್ಲಿ ವರ್ತಿಸಲಾಗುತ್ತಿದೆ ಎಂಬ ಕುರಿತಂತೆ ನಾನು ನೋಡಿದ ದೃಶ್ಯಗಳು ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಮ್ಮ ಕರಿಯ ಜನರನ್ನು ಯಾವ ರೀತಿ ನಡೆಸಿಕೊಳ್ಳಲಾಗಿತ್ತು ಎಂಬುದನ್ನು ನೆನಪಿಸಿತು. ಈ ಅಭಿಪ್ರಾಯವನ್ನು ಅವರು ಮುಂದೆಯೂ ಹಲವು ಬಾರಿ ಪುನರಾವರ್ತಿಸಿದ್ದರು.

► ಇಸ್ರೇಲ್ ಬರ್ಬರತೆಯ ಉದ್ದೇಶ ಆತ್ಮ ರಕ್ಷಣೆಯೇ? ಜನಾಂಗವಾದದ ಅನುಷ್ಠಾನವೇ?

ಇಂದು ಭಾರತ ಸಹಿತ ಹಲವೆಡೆ ಕೆಲವು ಇಸ್ರೇಲ್‌ನ ಅಂಧ ಭಕ್ತರು ಫೆಲೆಸ್ತೀನ್‌ನ ವಿವಿಧ ಭಾಗಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ಬರ್ಬರ ದಾಳಿಯನ್ನು ಬಲವಾಗಿ ಸಮರ್ಥಿಸುತ್ತಿದ್ದಾರೆ. ಫೆಲೆಸ್ತೀನ್‌ನ ಹಮಾಸ್ ನಂತಹ ಕೆಲವು ಸಂಘಟನೆಗಳ ಸದಸ್ಯರು ನಡೆಸಿರುವ ಕೆಲವು ಹಿಂಸಾತ್ಮಕ ಚಟುವಟಿಕೆಗಳನ್ನು ಮತ್ತು ಅವರು ಎಸೆದಿರುವ, (ಇಸ್ರೇಲ್‌ನ ತಂತ್ರಜ್ಞಾನಕ್ಕೆ ಹೋಲಿಸಿದರೆ ಕೇವಲ ನಾಡ ಪಟಾಕಿಯ ಮಟ್ಟದ) ರಾಕೆಟ್ ಗಳನ್ನು ಪ್ರಸ್ತಾಪಿಸಿ, ಇಂತಹ ಆಕ್ರಮಣಗಳಿಂದಾಗಿ, ಅತ್ಯುಗ್ರ ಪ್ರತಿಕ್ರಮಗಳನ್ನು ಕೈಗೊಳ್ಳಲು ಇಸ್ರೇಲ್ ಸರಕಾರವು ನಿರ್ಬಂಧಿತವಾಗಿದೆ ಎಂದು ಅವರು ವಾದಿಸುತ್ತಿದ್ದಾರೆ. ಇಂಥವರು ಸ್ವತಃ ಇಸ್ರೇಲ್ ದೇಶದ ಯಹೂದಿ ಮತಸ್ಥರಾದ ಖ್ಯಾತ ಪತ್ರಕರ್ತ ಮೈಖೇಲ್ ಶೇಫರ್ ಅವರ ಒಂದು ಹೇಳಿಕೆಯನ್ನು ಗಮನಿಸಿ, ತಮ್ಮ ಮುಚ್ಚಿದ ಕಣ್ಣುಗಳನ್ನು ತೆರೆಯುವ ಯತ್ನ ನಡೆಸಬೇಕು.

ಹಮಾಸ್ ಎಂಬುದು ಇಸ್ರೇಲ್ ಬಳಸುವ ಒಂದು ಅನುಕೂಲಕರ ಕುಂಟು ನೆಪ ಮಾತ್ರ. ನಿಜವಾಗಿ ಇಸ್ರೇಲ್‌ಗೆ ಅಂತಹ ಯಾವುದೇ ನೆಪದ ಅಗತ್ಯವೇ ಇಲ್ಲ. ಫೆಲೆಸ್ತೀನಿಗಳ ರಾಜಕೀಯ ಚಟುವಟಿಕೆಗಳನ್ನು ಹತ್ತಿಕ್ಕಲಿಕ್ಕಾಗಿ ಮತ್ತು ವಿಶೇಷವಾಗಿ ಅವರ ಜನಸಾಮಾನ್ಯರು ಬೀದಿಗೆ ಬಂದು ಪ್ರತಿಭಟಿಸುವುದನ್ನು ಹಿಂಸಾತ್ಮಕವಾಗಿ ತಡೆಗಟ್ಟಲಿಕ್ಕಾಗಿ ಇಸ್ರೇಲ್‌ಗೆ ಇಂತಹ ನೆಪಗಳ ಅಗತ್ಯ ಎಂದೂ ಇರಲಿಲ್ಲ.

 ಹಿಂದೆ ಜೆರುಸಲೇಮ್ ಪೋಸ್ಟ್‌ನಲ್ಲಿ ಹಿರಿಯ ಹುದ್ದೆಯಲ್ಲಿದ್ದ ಶೇಫರ್ ಪ್ರಸ್ತುತ ಹೇಳಿಕೆ ನೀಡಿದ್ದು ಈ ವರ್ಷ ಮೇ ತಿಂಗಳಲ್ಲಿ ಇಸ್ರೇಲ್ ಆರಂಭಿಸಿರುವ ನರಹತ್ಯಾ ಅಭಿಯಾನಕ್ಕೆ ಪ್ರತಿಕ್ರಿಯೆಯಾಗಿ ಅಲ್ಲ. ನಿಜವಾಗಿ ಅವರ ಹೇಳಿಕೆಯು 2018ರ ಮಾರ್ಚ್ 30 ರಂದು ಗಾಝಾದಲ್ಲಿ ಆರಂಭವಾದ 'ಜಿ.ಎಮ್.ಆರ್' (ಗ್ರೇಟ್ ಮಾರ್ಚ್ ಆಫ್ ರಿಟರ್ನ್) ಅಥವಾ 'ಮಹಾ ಮರಳಿಕೆಯ ಆಂದೋಲನ' ಎಂಬ ದೀರ್ಘ, ಶಾಂತಿಯುತ ಚಳವಳಿ ಮತ್ತು ಅದಕ್ಕೆ ಒದಗಿದ ದಾರುಣ ಗತಿಯನ್ನು ಕಂಡು ನೀಡಿದ ಪ್ರತಿಕ್ರಿಯೆಯಾಗಿತ್ತು.

ವಿಶ್ವ ಸಂಸ್ಥೆಯು ಪ್ರಸ್ತುತ ದಿಗ್ಬಂಧನವನ್ನು ಅಕ್ರಮ, ಸಾಮೂಹಿಕ ದಂಡನೆ, ಅಮಾನುಷ ಎಂದೆಲ್ಲಾ ಖಂಡಿಸಿದ್ದರೂ ಯಾವುದೇ ಸತ್ಪರಿಣಾಮ ಉಂಟಾಗಲಿಲ್ಲ. ಸಾಲದ್ದಕ್ಕೆ 2008 - 2009, 2012 ಮತ್ತು 2014ರಲ್ಲಿ ವಿವಿಧ ನೆಪಗಳನ್ನೊಡ್ಡಿ ಇಸ್ರೇಲ್ ಸರಕಾರವು ಈ ಪ್ರದೇಶಕ್ಕೆ ತನ್ನ ಪಡೆಗಳನ್ನು ಕಳಿಸಿ ನಡೆಸಿದ 3 ಪ್ರಮುಖ ಕಾರ್ಯಾಚರಣೆಗಳಲ್ಲಿ 90 ಇಸ್ರೇಲಿ ಯೋಧರು ಹತರಾಗಿದ್ದರೆ, ಫೆಲೆಸ್ತೀನಿಗಳ ಪಾಳಯದಲ್ಲಿ ನೂರಾರು ಮಕ್ಕಳ ಸಹಿತ 3,500 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು15,000 ಕ್ಕೂ ಹೆಚ್ಚಿನ ನಾಗರಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಹಲವು ಸಾವಿರ ಮಂದಿ ಶಾಶ್ವತವಾಗಿ ಅಂಗವಿಕಲರಾಗಿ ಬಿಟ್ಟಿದ್ದಾರೆ. (ಆಧಾರ: ಹೆಲ್ತ್ ಅಂಡ್ ಹ್ಯೂಮನ್ ರೈಟ್ಸ್ ಜರ್ನಲ್ Vol June - 22/1, 2020) ಈ ವಿಪರೀತ ಸನ್ನಿವೇಶದ ಹಿನ್ನೆಲೆಯಲ್ಲಿ 2018 ಮಾರ್ಚ್ 30 ರಂದು ಇಲ್ಲೊಂದು ಚಳವಳಿ ಆರಂಭವಾಯಿತು. ಜಿ.ಎಮ್.ಆರ್.(ಗ್ರೇಟ್ ಮಾರ್ಚ್ ಆಫ್ ರಿಟರ್ನ್) ಎಂದೇ ಖ್ಯಾತವಾಗಿರುವ ಮತ್ತು ಜಗತ್ತಿನ ಹೆಚ್ಚಿನವರ ಗಮನಸೆಳೆದ ಈ ಪ್ರಶಾಂತ ಚಳವಳಿಯನ್ನು ಕ್ರಮೇಣ ಹಮಾಸ್ ಸಂಘಟನೆಯು ತನ್ನ ನಿಯಂತ್ರಣಕ್ಕೆ ತೆಗೆದು ಕೊಂಡಿತಾದರೂ ಮೂಲತಃ ಇದು ಕೆಲವು ಸಕ್ರಿಯ ಸಾಮಾಜಿಕ ಕಾರ್ಯಕರ್ತರು ಆರಂಭಿಸಿದ ಚಳವಳಿಯಾಗಿತ್ತು. ಅದರಲ್ಲಿ ಫೆಲೆಸ್ತೀನ್‌ನ ಹಲವು ವಿಭಿನ್ನ ವಲಯಗಳ ಪಾತ್ರ ಮತ್ತು ಪ್ರಾತಿನಿಧ್ಯವಿತ್ತು.

  1. ಫೆಲೆಸ್ತೀನ್ ಪ್ರದೇಶಗಳ ಮೇಲಿನ ದಿಗ್ಬಂಧನವನ್ನು ಹಿಂದೆಗೆದು ಕೊಳ್ಳಬೇಕು, 2. ಆಕ್ರಮಿತ ಪ್ರದೇಶಗಳಲ್ಲಿ ಜನ ಸಂಚಾರ ಮತ್ತು ಸರಕು ಸಾಗಾಟದ ಮೇಲಿನ ನಿರ್ಬಂಧಗಳನ್ನು ರದ್ದುಗೊಳಿಸಬೇಕು ಮತ್ತು 3. ಫೆಲೆಸ್ತೀನ್ ವಲಸಿಗರಿಗೆ ಮರಳಿ ತಮ್ಮ ನಾಡಿಗೆ ಬಂದು ನೆಲೆಸಲು ಅನುಮತಿಸಬೇಕು - ಇವು ಪ್ರಸ್ತುತ ಚಳವಳಿಗಾರರ ಪ್ರಮುಖ ಬೇಡಿಕೆಗಳಾಗಿದ್ದವು. ಜನರು, ವಿಶೇಷವಾಗಿ ಹೊಸ ತಲೆಮಾರಿನ ಯುವಕ ಯುವತಿಯರು ದೊಡ್ಡ ಸಂಖ್ಯೆಯಲ್ಲಿ, ಭಾರೀ ಉತ್ಸಾಹದೊಂದಿಗೆ ಈ ಚಳವಳಿಯಲ್ಲಿ ಭಾಗವಹಿಸಿದ್ದರು. ಈ ಚಳವಳಿಯ ಸರಣಿಯಲ್ಲಿ ಪ್ರತಿಭಟನೆಯ ಹಲವು ನೂತನ ಹಾಗೂ ಸೃಜನಶೀಲ ವಿಧಾನಗಳನ್ನು ಬಳಸಲಾಗಿತ್ತು. ಪ್ರತಿ ಶುಕ್ರವಾರ ಅಥವಾ ವಿಶೇಷ ದಿನಗಳಲ್ಲಿ ಮತಪ್ರದರ್ಶಕರು ಯಾವುದಾದರೂ ಬೀಚ್, ಕ್ರೀಡಾಂಗಣ ಮುಂತಾದ ಸಾರ್ವಜನಿಕ ಸ್ಥಳದಲ್ಲಿ ಅಥವಾ ಗಾಝಾದ ಸುತ್ತ ಇಸ್ರೇಲ್ ಕಟ್ಟಿರುವ ಗಡಿ ಬೇಲಿಯ ಬಳಿ ಬಂದು ಜಮಾಯಿಸುತ್ತಿದ್ದರು. ಈ ಹಿಂದೆ ಇಸ್ರೇಲ್ ಸರಕಾರವು ಬಲವಂತವಾಗಿ ತೆರವುಗೊಳಿಸಿರುವ ಪ್ರದೇಶಗಳಲ್ಲಿರುವ ಹಳೆಯ ಫೆಲೆಸ್ತೀನಿ ಮನೆಗಳು ಮತ್ತು ಐತಿಹಾಸಿಕ ಕಟ್ಟಡಗಳ ಬಳಿ ಬಂದು ಸೇರುತ್ತಿದ್ದರು. ಪ್ರಾಸಬದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ರಂಗುರಂಗಿನ ಕಲಾಕೃತಿಗಳ ರೂಪದಲ್ಲಿರುವ ಘೋಷಣಾ ಫಲಕಗಳನ್ನು ಪ್ರದರ್ಶಿಸುತ್ತಿದ್ದರು. ಸಾಂಸ್ಕೃತಿಕ ಗಾಯನದ ಧಾಟಿಯಲ್ಲಿ ಕ್ರಾಂತಿಕಾರಿ ಹಾಡುಗಳನ್ನು ಹಾಡುತ್ತಿದ್ದರು. ಫೆಲೆಸ್ತೀನ್ ಧ್ವಜದ ಬಣ್ಣಗಳಿರುವ ಬೆಲೂನ್ ಹಾಗೂ ಗಾಳಿಪಟಗಳನ್ನು ಹಾರಿಸುತ್ತಿದ್ದರು. ವಿಶ್ವ ಸಂಸ್ಥೆಯ ವರದಿ ಪ್ರಕಾರ ಜಿ.ಎಮ್.ಆರ್. ಪ್ರದರ್ಶನಕಾರರು ನಿಶಸ್ತ್ರರಾಗಿರುತ್ತಿದ್ದರು. ಪೊಲೀಸರ ಕಡೆಯಿಂದ ಅನಗತ್ಯ ಅಡೆ ತಡೆ ಉಂಟಾದಾಗ ಅವರಲ್ಲಿ ಕೆಲವರು ಕಲ್ಲು ತೂರಾಟ ನಡೆಸುತ್ತಿದ್ದರು. ಕೆಲವೆಡೆ ಗಡಿ ಬೇಲಿಯ ಸಮೀಪ ಪೆಟ್ರೋಲ್ ಬಾಂಬ್ ಗಳನ್ನು ಬಳಸಿದ ಹಾಗೂ ಟಯರ್ ಗಳನ್ನು ಸುಟ್ಟ ಘಟನೆಗಳೂ ನಡೆದಿದ್ದವು. ಕೆಲವು ಪ್ರತಿಭಟನಾಕಾರರು ಗಾಳಿಯ ಮೂಲಕ ಇಸ್ರೇಲ್ ಕಡೆಗೆ ಹಾರಿಸುತ್ತಿದ್ದ ಗಾಳಿಪಟ ಮತ್ತು ಬೆಲೂನುಗಳಲ್ಲಿ ಸಣ್ಣ ದೀಪಗಳಿರುತ್ತಿದ್ದವು. ಇಸ್ರೇಲ್ ಸರಕಾರ ಆರೋಪಿಸುವಂತೆ ಅವು ಇಸ್ರೇಲ್‌ನ ಹೊಲ, ತೋಟ ಮತ್ತಿತರ ಸೊತ್ತುಗಳ ಮೇಲೆ ಬಿದ್ದು, ಬೆಂಕಿ ಹೊತ್ತಿಕೊಂಡು, ಆ ಸೊತ್ತುಗಳಿಗೆ ಅಪಾರ ಹಾನಿ ಉಂಟು ಮಾಡುತ್ತಿದ್ದವು.

ಆದರೆ ಅಪವಾದ ಸ್ವರೂಪದ ಹಿಂಸೆಗಳ ಹೊರತಾಗಿಯೂ ಸಾಮಾನ್ಯವಾಗಿ ಶಾಂತಿಯುತವಾಗಿದ್ದ ಈ ಚಳವಳಿ ಇಸ್ರೇಲ್ ಪಾಲಿಗೆ ಸಹನೀಯವಾಗಿರಲಿಲ್ಲ. ಇಸ್ರೇಲ್ ಪಡೆಗಳು ಅನೇಕ ಬಾರಿ ಪ್ರದರ್ಶನಕಾರರ ವಿರುದ್ಧ ಹಿಂಸೆಗಿಳಿದವು. ಡ್ರೋನ್‌ಗಳನ್ನು ಮತ್ತು ದೂರ ಅವಿತಿರುವ ಮುಸುಕುಧಾರಿ ಸ್ನಯಿಪರ್ ಗಳನ್ನು ಬಳಸಿ ಮತ್ತು ನೇರವಾಗಿ ಚಳವಳಿ ನಿರತ ನಾಗರಿಕರ ಮೇಲೆ ಗುಂಡು, ಅಶ್ರುವಾಯು ಶೆಲ್, ರಬ್ಬರ್ ಲೇಪಿತ ಗುಂಡು ಇತ್ಯಾದಿಗಳ ಮಳೆ ಸುರಿಸಿದವು. ಒಟ್ಟು ಸುಮಾರು 20 ತಿಂಗಳ ಅವಧಿಯಲ್ಲಿ ಇಸ್ರೇಲ್ ಯೋಧರು 46 ಮಕ್ಕಳ ಸಹಿತ 214 ಫೆಲೆಸ್ತೀನಿಗಳನ್ನು ಕೊಂದು ಹಾಕಿದರು ಮತ್ತು 8,800 ಮಕ್ಕಳ ಸಹಿತ 36,100 ಮಂದಿಯನ್ನು ಗಾಯಗೊಳಿಸಿದರು. ಈ ಪೈಕಿ 8 ಸಾವಿರ ಮಂದಿಗೆ ನೇರವಾಗಿ ಗುಂಡೇಟು ತಗಲಿತ್ತು. ಕೊನೆಗೆ 2019ರ ಕೊನೆಯಲ್ಲಿ ಅನಿವಾರ್ಯವಾಗಿ ಈ ಚಳವಳಿಯನ್ನು ಹಿಂದೆಗೆದುಕೊಳ್ಳಲಾಯಿತು.

 ಈ ಚಳವಳಿಯುದ್ದಕ್ಕೂ ಪ್ರದರ್ಶನಕಾರರು ಶಾಂತಿಯುತರಾಗಿದ್ದು ಸಂಯಮ ಪಾಲಿಸಿದ್ದರು ಮತ್ತು ಇಸ್ರೇಲ್ ಪಡೆಗಳು ನಡೆಸಿದ ಹಿಂಸಾಚಾರವೆಲ್ಲಾ ಅಪ್ರಚೋದಿತ ಹಾಗೂ ಏಕಪಕ್ಷೀಯವಾಗಿತ್ತು ಎಂಬುದಕ್ಕೆ ಪುರಾವೆ ಏನೆಂದರೆ, ಪ್ರಸ್ತುತ 20 ತಿಂಗಳ ಅವಧಿಯಲ್ಲಿ ಇಸ್ರೇಲ್ ಕಡೆಯಲ್ಲಿ ಕೇವಲ ಒಬ್ಬ ಸೈನಿಕ ಮಾತ್ರ ಹತನಾಗಿದ್ದು 7 ಮಂದಿ ಮಾತ್ರ ಗಾಯಗೊಂಡಿದ್ದರು !

► ಸಮೂಹ ಹತ್ಯೆಯ ಮುನ್ನೆಚ್ಚರಿಕೆ

'ಅಲಯನ್ಸ್ ಎಗೇನ್‌ಸ್ಟ್ ಜಿನೋ ಸೈಡ್' (Alliance Against Genocide) ಇದು ಜಗತ್ತಿನ ಬೇರೆ ಬೇರೆ ಭಾಗಗಳ ಸುಮಾರು 75 ಮಾನವ ಹಕ್ಕು ಸಂಘಟನೆಗಳ ಒಕ್ಕೂಟ. 1999 ರಲ್ಲಿ ಸ್ಥಾಪಿತವಾದ ಈ ಒಕ್ಕೂಟದ ಸಮನ್ವಯ ಸಂಸ್ಥೆಯ ಹೆಸರು 'ಜಿನೋಸೈಡ್ ವಾಚ್' (Genocide Watch) . ಜಗತ್ತಿನ ಯಾವುದೇ ಭಾಗದಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿದ್ದರೆ ಅಥವಾ ಯುದ್ಧದಂತಹ ಸನ್ನಿವೇಶವಿದ್ದರೆ, ಅಲ್ಲಿನ ಪರಿಸ್ಥಿತಿ ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದು ಮತ್ತು ಅಲ್ಲಿ ಸಾಮೂಹಿಕ ನರಹತ್ಯೆಯ ಸಾಧ್ಯತೆಗಳಿವೆಯೇ ಎಂಬುದನ್ನು ಗುರುತಿಸಿ, ಇದ್ದರೆ ಜಗತ್ತಿಗೆ ಮುನ್ನೆಚ್ಚರಿಕೆ ನೀಡುವುದು ಈ ಸಂಸ್ಥೆಯ ಮುಖ್ಯ ಕೆಲಸ. ತನ್ನ ಕೆಲಸವನ್ನು ಬಹಳ ವಸ್ತು ನಿಷ್ಠ ಹಾಗೂ ವೃತ್ತಿಪರವಾಗಿ ಮಾಡಿರುವ ಇತಿಹಾಸ ಈ ಸಂಸ್ಥೆಯ ಹಿಂದೆ ಇರುವುದರಿಂದ ಮತ್ತು ಹಲವು ಸನ್ನಿವೇಶಗಳ ಕುರಿತು ಈ ಸಂಸ್ಥೆ ನೀಡಿರುವ ವಿಶ್ಲೇಷಣೆಗಳು ಮುಂದೆ ಸತ್ಯವೆಂದು ಸಾಬೀತಾಗಿರುವುದರಿಂದ ಅದರ ಮುನ್ನೆಚ್ಚರಿಕೆ ಗಳನ್ನು ಜಾಗತಿಕ ಬೆಳವಣಿಗೆಗಳ ವೀಕ್ಷಕರು ಗಂಭೀರವಾಗಿ ಪರಿಗಣಿಸುತ್ತಾರೆ. ಇಸ್ರೇಲ್ - ಫೆಲೇಸ್ತೇನ್ ಪ್ರದೇಶವು ಆರಂಭದಿಂದಲೂ ಈ ಸಂಸ್ಥೆಯ ವೀಕ್ಷಣೆಯಲ್ಲಿದ್ದು, ಅಲ್ಲಿ ಸಮೂಹ ಹತ್ಯೆಯ ಸಾಧ್ಯತೆಗಳ ಬಗ್ಗೆ ಅದು ಎಚ್ಚರಿಸುತ್ತಾ ಬಂದಿದೆ.

ಈ ಸಂಸ್ಥೆ ಮೇ 18 ರಂದು ಪ್ರಕಟಿಸಿದ ವರದಿಯ ಪ್ರಕಾರ ಇಸ್ರೇಲ್ ಮತ್ತು ಗಾಝಾ ನಡುವೆ ಸದ್ಯ ನಡೆಯುತ್ತಿರುವ ಘರ್ಷಣೆಯಲ್ಲಿ ಹಮಾಸ್ ಕಡೆಯಿಂದ ಇಸ್ರೇಲ್ ನಾಗರಿಕರ ಮೇಲೆ 3,000 ಕ್ಕೂ ಹೆಚ್ಚಿನ ರಾಕೆಟ್‌ಗಳನ್ನು ಎಸೆಯಲಾಗಿದೆ. ಇದರಲ್ಲಿ ಇಬ್ಬರು ಮಕ್ಕಳ ಸಹಿತ 12 ಮಂದಿ ಇಸ್ರೇಲ್ ನಾಗರಿಕರು ಹತರಾಗಿದ್ದಾರೆ. ಈ ರೀತಿ ಹಮಾಸ್ ಉದ್ದೇಶಪೂರ್ವಕ, ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದು ಜಿನೇವಾ ಕನ್ವೆನ್ಷನ್ ಪ್ರಕಾರ ಯುದ್ಧಾಪರಾಧವಾಗಿದೆ.

  ಅತ್ತ ಇಸ್ರೇಲ್ ಭದ್ರತಾ ಪಡೆಗಳು, ನಾಗರಿಕರಿಗೆ ಮುನ್ನೆಚ್ಚರಿಕೆ ನೀಡದೆ, ತೆರವುಗೊಳಿಸಲು ಸಮಯಾವಕಾಶ ನೀಡದೆ ರಾತ್ರಿ ಹೊತ್ತು ಬಾಂಬ್ ದಾಳಿಗಳನ್ನು ನಡೆಸುತ್ತಿವೆ. ಇದರ ಪರಿಣಾಮವಾಗಿ ಈಗಾಗಲೇ ಗಾಝಾದ 100 ಮಕ್ಕಳು ಮತ್ತು ಮಹಿಳೆಯರ ಸಹಿತ 212 ಫೆಲೆಸ್ತೀನಿ ನಾಗರಿಕರು ಹತರಾಗಿದ್ದು ನಾಗರಿಕ ಸವಲತ್ತುಗಳೆಲ್ಲಾ ಧ್ವಂಸವಾಗಿವೆ. ಗಾಝಾದ 52,000 ನಾಗರಿಕರು ನಿರ್ವಸಿತರಾಗಿದ್ದಾರೆ.

ಜಿನೋಸೈಡ್ ವಾಚ್ ಸಂಸ್ಥೆ ಗುರುತಿಸುವಂತೆ ಈ ಪ್ರದೇಶದಲ್ಲಿ ಸನ್ನಿವೇಶವು ಪಕ್ಷಪಾತದ ದೃಷ್ಟಿಯಿಂದ 3ನೇ ಹಂತದಲ್ಲಿ, ಧ್ರುವೀಕರಣದ ದೃಷ್ಟಿಯಿಂದ 6ನೇ ಹಂತದಲ್ಲಿ ಮತ್ತು ದಮನದ ದೃಷ್ಟಿಯಿಂದ 8ನೇ ಹಂತದಲ್ಲಿದೆ. ಇಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡದೆ ಇರಲು ಸಂಸ್ಥೆಯು ಮಾಡಿರುವ ಶಿಫಾರಸುಗಳು ಹೀಗಿವೆ:

ಇಸ್ರೇಲ್ ಮತ್ತು ಹಮಾಸ್ ತಕ್ಷಣ ಯುದ್ಧ ವಿರಾಮ ಘೋಷಿಸಬೇಕು.

ಎರಡೂ ಕಡೆಯವರು ನೇರ ಮಾತುಕತೆಯನ್ನು ಮತ್ತೆ ಆರಂಭಿಸುವ ಮೂಲಕ ಬಿಕ್ಕಟ್ಟಿನ ಪರಿಹಾರಕ್ಕೆ ಹಾಗೂ ಶಾಂತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು.

ಇಸ್ರೇಲ್ ಸರಕಾರವು ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಮ್ ನಲ್ಲಿ ತನ್ನ ಅಕ್ರಮ ಬಡಾವಣೆಗಳ ನಿರ್ಮಾಣಕಾರ್ಯವನ್ನು ನಿಲ್ಲಿಸಬೇಕು ಮತ್ತು ಶೇಕ್ ಜರಾ ಸಹಿತ ಎಲ್ಲ ಕಡೆಗಳಲ್ಲಿ ಫೆಲೆಸ್ತೀನ್ ನಾಗರಿಕರನ್ನು ಅವರ ಮನೆಗಳಿಂದ ಹೊರ ಹಾಕಿ ನಿರ್ವಸಿತರಾಗಿಸುವ ಚಟುವಟಿಕೆಯನ್ನು ನಿಲ್ಲಿಸಬೇಕು.

 ಅಮೆರಿಕ ಸರಕಾರವು ಇಸ್ರೇಲ್ ಸರಕಾರಕ್ಕೆ ನೀಡಲು ಹೊರಟಿರುವ 4 ಶತಕೋಟಿ ಡಾಲರ್‌ಗಳ ಗಾಲ ನೆರವು ಮತ್ತು ಶಸ್ತ್ರಾಸ್ತ್ರ ಸರಬರಾಜನ್ನು ಶರ್ತಬದ್ಧಗೊಳಿಸಬೇಕು. ಇಸ್ರೇಲ್ ಸರಕಾರವು ಯುದ್ಧ ವಿರಾಮ ಘೋಷಿಸಬೇಕು, ಶಾಂತಿ ಮಾತುಕತೆ ಆರಂಭಿಸಬೇಕು ಮತ್ತು ಪಶ್ಚಿಮ ದಂಡೆ ಹಾಗೂ ಪೂರ್ವ ಜೆರುಸಲೇಮ್ ಗಳಲ್ಲಿ ಹೊಸ ಯಹೂದಿ ಬಡಾವಣೆಗಳ ನಿರ್ಮಾಣವನ್ನು ನಿಲ್ಲಿಸಬೇಕು ಎಂಬುದೇ ಶರತ್ತುಗಳು.

ಕೆಲವರು ಇಸ್ರೇಲ್ ಮತ್ತು ಗಾಝಾದವರ ಮಧ್ಯೆ ನಡೆಯುವ ಘರ್ಷಣೆಯನ್ನು ಎರಡು ಶಕ್ತಿಶಾಲಿ ದೇಶಗಳ ನಡುವಣ ಯುದ್ಧ ಎಂಬಂತೆ ಬಿಂಬಿಸಲು ಶ್ರಮಿಸುತ್ತಾರೆ. ನಿಜವಾಗಿ ಇಸ್ರೇಲ್, ಗಾತ್ರದಲ್ಲಿ ಸಣ್ಣದಿದ್ದರೂ ಆರ್ಥಿಕತೆ, ಉದ್ಯಮ, ಮಿಲಿಟರಿ ಶಕ್ತಿ, ವಿಜ್ಞಾನ, ತಂತ್ರಜ್ಞಾನ, ಪ್ರಚಾರ ಶಕ್ತಿ ಇತ್ಯಾದಿ ಎಲ್ಲ ವಿಷಯಗಳಲ್ಲಿ ಕೊಲ್ಲಿ ಪ್ರದೇಶದ ಬೇರೆಲ್ಲ ದೇಶಗಳಿಗಿಂತ ಮುಂದಿದೆ. ಮಾತ್ರವಲ್ಲ, ಅದನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಸಾಲಲ್ಲಿ ಗಣಿಸಲಾಗುತ್ತದೆ.

 ಇದಕ್ಕೆ ಹೋಲಿಸಿದರೆ ಗಾಝಾ ಎಂಬುದು ಫೆಲೆಸ್ತೀನಿಗಳಿಗೆ ಸೇರಿದ, ಆದರೆ ಇಸ್ರೇಲ್‌ನ ಅಕ್ರಮ ವಶದಲ್ಲಿರುವ, ಹೆಚ್ಚೆಂದರೆ 365 ಚದರ ಕಿ.ಮೀ.ವಿಸ್ತೀರ್ಣದ ಒಂದು ಪುಟ್ಟ ಪ್ರದೇಶ. 20 ಲಕ್ಷಕ್ಕೂ ಹೆಚ್ಚಿನ ಫೆಲೆಸ್ತೀನ್ ನಾಗರಿಕರು ಈ ಪುಟ್ಟ ಪ್ರದೇಶದಲ್ಲಿ ಉಸಿರು ಬಿಗಿಹಿಡಿದು ಬದುಕುತ್ತಿದ್ದಾರೆ. ಆಗಲೇ ಅಷ್ಟೊಂದು ಇಕ್ಕಟ್ಟಿನಲ್ಲಿರುವ ಈ ಪ್ರದೇಶದ ಮೇಲೆ 2007 ರಿಂದ ಇಸ್ರೇಲ್ ಸರಕಾರವು (ಈಜಿಪ್ಟ್ ಸರಕಾರದ ಸಹಯೋಗದೊಂದಿಗೆ) ಕಠಿಣ ದಿಗ್ಬಂಧನವನ್ನೂ ಹೇರಿದೆ. ಮೊದಲೇ ಪ್ರಾಥಮಿಕ ಪೌರ ಸವಲತ್ತುಗಳಿಂದ ವಂಚಿತವಾಗಿರುವ, ದಟ್ಟ ದಾರಿದ್ರ ಪೀಡಿತವಾಗಿರುವ ಮತ್ತು ಪ್ರತಿ ಚದರ ಕಿ.ಮೀ. ನಲ್ಲಿ 5 ಸಾವಿರಕ್ಕೂ ಹೆಚ್ಚಿನ ಜನ ವಾಸಿಸುವಷ್ಟು ಅಪಾರ ಸಾಂದ್ರತೆ ಇರುವ ಒಂದು ಪ್ರದೇಶದ ನೆಲ, ಜಲ ಮತ್ತು ವಾಯು ಮಾರ್ಗಗಳ ಮೇಲೆ ದಿಗ್ಬಂಧನವನ್ನೂ ಹೇರಲಾದರೆ ಅಲ್ಲಿನ ಪರಿಸ್ಥಿತಿ ಹೇಗಿದ್ದೀತು? ಆದ್ದರಿಂದಲೇ ಹಲವರು ಗಾಝಾವನ್ನು ಒಂದು ದೊಡ್ಡ ಕೊಳಚೆ ಪ್ರದೇಶವೆಂದೂ ಗುರುತಿಸುತ್ತಾರೆ. ಇದನ್ನು 'ಜಗತ್ತಿನ ಅತಿದೊಡ್ಡ ಬಯಲು ಬಂದಿಖಾನೆ' ಎಂದೂ ಕರೆಯಲಾಗುತ್ತದೆ. ವರ್ಲ್ಡ್ ಬ್ಯಾಂಕ್ ವರದಿಯನುಸಾರ ಗಾಝಾದ ನಿವಾಸಿಗಳ ಪೈಕಿ ಇಬ್ಬರಲ್ಲೊಬ್ಬರು ಕಡು ದಾರಿದ್ರ್ಯದಲ್ಲಿ ನರಳುತ್ತಿದ್ದಾರೆ. ಈ ಪ್ರದೇಶದಲ್ಲಿ ಸಾಮಾನ್ಯ ನಿರುದ್ಯೋಗ ದರವು ಶೇ.50ರಷ್ಟಿದ್ದರೆ, ಯುವಜನರಲ್ಲಿನ ನಿರುದ್ಯೋಗ ದರವು ಶೇ.70ರಷ್ಟಿದೆ. ಯೂನಿಸೆಫ್  (UNICEF) ವರದಿಯನುಸಾರ ಆಕ್ರಮಿತ ಫೆಲೆಸ್ತೀನ್ ನಲ್ಲಿ ಪ್ರಾಥಮಿಕ ಶಿಕ್ಷಣದ ಮಟ್ಟದಲ್ಲಿ ಶೇ.95.4ರಷ್ಟಿದೆ. ಆದರೆ ಸಾಮಾಜಿಕ ಸ್ಥಿತಿ ಹೇಗಿದೆಯೆಂದರೆ 15 ವರ್ಷ ಪ್ರಾಯವಾಗುವ ಮುನ್ನವೇ ಸುಮಾರು ಶೇ.7 ಹುಡುಗಿಯರು ಮತ್ತು ಶೇ.25 ಹುಡುಗರು ಶಾಲೆಯನ್ನು ಶಾಶ್ವತವಾಗಿ ತೊರೆದಿರುತ್ತಾರೆ. ಈ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಅಂಗವಿಕಲರು ದೊಡ್ಡ ಸಂಖ್ಯೆಯಲ್ಲಿದ್ದು, ಅವರಲ್ಲಿ 6 ರಿಂದ 15 ವರ್ಷ ಪ್ರಾಯದ ಶೇ.22.5 ಹುಡುಗರು ಮತ್ತು ಶೇ.30 ಹುಡುಗಿಯರು ಜೀವನದಲ್ಲೊಮ್ಮೆಯೂ ಶಾಲೆಯ ಮೆಟ್ಟಲನ್ನೇ ಏರಿರುವುದಿಲ್ಲ.

► ಇಸ್ರೇಲ್ ಜನಾಂಗವಾದದ ಅಂತಿಮ ಗುರಿ ಏನು?

 ಫೆಲೆಸ್ತೀನ್ ಜನತೆಯ ವಿರುದ್ಧ ಇಸ್ರೇಲ್ ಇಷ್ಟೊಂದು ಅಮಾನುಷವಾಗಿ ಯಾಕೆ ವರ್ತಿಸುತ್ತಿದೆ? ಇದು ಸಹಸ್ರಾರು ಯಹೂದಿಗಳ ಸಹಿತ ಜಗತ್ತಿನೆಲ್ಲೆಡೆ ಅನೇಕರು ಕೇಳುವ ಪ್ರಶ್ನೆ.

ಇಸ್ರೇಲ್ ಸರಕಾರದ ಸ್ಥಾಪನೆ ಮತ್ತು ಆನಂತರದ ಇಸ್ರೇಲ್‌ನ ಹೆಚ್ಚಿನೆಲ್ಲ ಸಾಧನೆಗಳ ಹಿಂದೆ ಸಕ್ರಿಯವಾಗಿರುವುದು 'ಝಿಯೋನಿಸ್ಟ್' ಎಂಬ ಒಂದು ಬಲಿಷ್ಠ ಜನಾಂಗವಾದಿ ಸಂಚುಕೂಟ. ಮಿದುಳು, ಹಣ, ಸಂಪರ್ಕಗಳು, ಸಾಧನಗಳು, ಪ್ರಭಾವ ಮತ್ತು ನೆಟ್ ವರ್ಕ್ ದೃಷ್ಟಿಯಿಂದ ಇದನ್ನು ಜಗತ್ತಿನ ಅತ್ಯಂತ ಬಲಿಷ್ಠ ಖಾಸಗಿ ಗುಂಪುಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. ಈ ಗುಂಪಿನ ಇರಾದೆಗಳ ಪರಿಚಯ ಇರುವ ಯಾರಿಗೂ ಇಸ್ರೇಲ್‌ನ ಕಿಡಿಗೇಡಿ ನಡವಳಿಕೆಯನ್ನು ಕಂಡು ಅಚ್ಚರಿಯಾಗುವುದಿಲ್ಲ. ಅವರು ಗುರುತಿಸಿರುವಂತೆ ಝಿಯೋನಿಸ್ಟರ ಎಲ್ಲ ಧೋರಣೆ ಮತ್ತು ಕಾರ್ಯಾಚರಣೆಗಳ ಹಿಂದಿನ ಅಂತಿಮ ಗುರಿ ಕೇವಲ ಯಹೂದಿಗಳು ಮಾತ್ರ ಇರುವ ಮತ್ತು ಪ್ರಶ್ನಾತೀತವಾಗಿ ಯಹೂದಿಗಳ ನಿಯಂತ್ರಣದಲ್ಲಿರುವ ಒಂದು ವಿಶಾಲ ಇಸ್ರೇಲ್ ಅನ್ನು ಸ್ಥಾಪಿಸುವುದಾಗಿದೆ. ಭೌಗೋಳಿಕವಾಗಿ ಅವರು ಅಕ್ಕಪಕ್ಕದ ಅರಬ್ ದೇಶಗಳ ಆಯಕಟ್ಟಿನ ಭೂಭಾಗಗಳನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮ ಕನಸಿನ ವಿಶಾಲ ಇಸ್ರೇಲ್ ಸ್ಥಾಪನೆಯ ನಿಟ್ಟಿನಲ್ಲಿ ಸಾಕಷ್ಟು ಮುನ್ನಡೆದಿದ್ದಾರೆ. ಇನ್ನಷ್ಟು ಭೂಭಾಗಗಳು ಅವರ ಗುರಿಯಲ್ಲಿದ್ದು ಅವುಗಳನ್ನು ವಶಪಡಿಸಿಕೊಳ್ಳಲು ಬೇಕಾದ ಯೋಜನೆ ಮತ್ತು ಸಿದ್ಧತೆಯೂ ಅವರ ಬಳಿ ಇದೆ.

 ಇದೀಗ ಬಾಕಿ ಉಳಿದಿರುವ ಅವರ ಇನ್ನೊಂದು ಗುರಿ, ತಮ್ಮ ನಡುವಣ ಇತರೆಲ್ಲ ಭಿನ್ನತೆಗಳ ಹೊರತಾಗಿಯೂ ಕನ್ಯೆ ಮೇರಿಯ ಪುತ್ರ ಏಸುವನ್ನು ಸಮನಾಗಿ ಗೌರವಿಸುವ, ಅರಬ್ ಮೂಲದ ಮುಸ್ಲಿಮರು ಮತ್ತು ಕ್ರೈಸ್ತ ರಿಂದ ಇಸ್ರೇಲನ್ನು ಮುಕ್ತಗೊಳಿಸುವುದಾಗಿದೆ. ಜನಾಂಗೀಯ ಶುಚೀಕರಣದ ಈ ಯೋಜನೆಯನ್ನು ಅನುಷ್ಠಾನಿಸುವುದಕ್ಕಾಗಿ ಅವರು ಅನುಸರಿಸುತ್ತಿರುವ ಹಲವು ಹಂತಗಳ ಸುಸಜ್ಜಿತ ಕಾರ್ಯ ತಂತ್ರ ಹೀಗಿದೆ:

 ಕಳೆದ ಒಂದು ಶತಮಾನದ ಅವಧಿಯಲ್ಲಿ ಯುದ್ಧ, ಆಕ್ರಮಣ, ದಾರಿದ್ರ ಮುಂತಾದ ವಿವಿಧ ಕಾರಣದಿಂದ ಫೆಲೆಸ್ತೀನ್ ನೆಲದಿಂದ ಹೊರತಳ್ಳಲ್ಪಟ್ಟಿರುವ ಅಥವಾ ಹೊರನಾಡುಗಳಿಗೆ ವಲಸೆ ಹೋಗಿರುವ ಫೆಲೆಸ್ತೀನ್ ಮೂಲದ ನಾಗರಿಕರು ಮತ್ತವರ ಸಂತತಿಗಳು ಯಾರೂ ಮತ್ತೆಂದೂ ಮರಳಿ ಫೆಲೆಸ್ತೀನ್‌ಗೆ ಬರದಂತೆ ನೋಡಿಕೊಳ್ಳುವುದು.

ಫೆಲೆಸ್ತೀನಿಗಳ ಬಾಹುಳ್ಯವಿರುವ ಇಸ್ರೇಲ್ ಆಕ್ರಮಿತ ಪ್ರದೇಶಗಳಲ್ಲೂ ಭಾರೀ ಸಂಖ್ಯೆಯಲ್ಲಿ ಯಹೂದಿಗಳಿಗೆಂದೇ ಮೀಸಲಾಗಿರುವ ಬೃಹತ್ ಬಡಾವಣೆಗಳನ್ನು ನಿರ್ಮಿಸಿ, ಅಲ್ಲಿನ ಜನಸಂಖ್ಯೆಯ ಅನುಪಾತವನ್ನು ಬದಲಿಸಿ, ಕ್ರಮೇಣ ಆ ಪ್ರದೇಶಗಳನ್ನೂ ಯಹೂದಿ ಬಾಹುಳ್ಯದ ಪ್ರದೇಶಗಳಾಗಿ ಪರಿವರ್ತಿಸುವುದು.

ಇಸ್ರೇಲ್ ಆಕ್ರಮಿತ ಪ್ರದೇಶಗಳಲ್ಲಿ ಫೆಲೆಸ್ತೀನ್ ಮೂಲದವರ ಪಾಲಿಗೆ ಲಭ್ಯವಿರುವ ಶುದ್ಧ ನೆಲ, ಜಲ ಮತ್ತು ವಾಯುವಿನ ಪ್ರಮಾಣವನ್ನು ಕುಗ್ಗಿಸುತ್ತಾ, ಸೀಮಿತಗೊಳಿಸುತ್ತಾ ಹೋಗುವುದು. ಈ ಮೂಲಕ ಅವರು ಆ ನೆಲಗಳನ್ನು ಬಿಟ್ಟು, ಬದುಕುವ ಅವಕಾಶಗಳನ್ನು ಹುಡುಕುತ್ತಾ ಬೇರೆ ನಾಡುಗಳಿಗೆ ವಲಸೆ ಹೋಗುವಂತೆ ನಿರ್ಬಂಧಿಸುವುದು.

ಫೆಲೆಸ್ತೀನ್ ಮೂಲದ ಜನರ ಪಾಲಿಗೆ ಮೂಲಭೂತ ಮಾನವ ಹಕ್ಕುಗಳನ್ನು ಮತ್ತು ಪ್ರಾಥಮಿಕ ಪೌರ ಸೌಲಭ್ಯಗಳನ್ನು ನಿರಾಕರಿಸುವ ಮೂಲಕ ಕ್ರಮೇಣ ಅವರು ತಮ್ಮ ಅಸ್ತಿತ್ವದ ಬಗ್ಗೆ ತಾವೇ ಜಿಗುಪ್ಸೆ ತಾಳುವಂತಹ ವಾತಾವರಣವನ್ನು ನಿರ್ಮಿಸುವುದು. ವಿವಿಧ ಕ್ರಮಗಳ ಮೂಲಕ, ಫೆಲೆಸ್ತೀನಿಗಳಿಗೆ ಲಭ್ಯವಿರುವ ನೆಲದ ವ್ಯಾಪ್ತಿಯನ್ನು ಕುಗ್ಗಿಸುತ್ತಾ ಜನಸಂಖ್ಯಾ ಸಾಂದ್ರತೆಯನ್ನು ವಿಪರೀತವಾಗಿ ಹೆಚ್ಚಿಸುವುದು. ಜೊತೆಗೆ, ಔಷಧಿ, ಚಿಕಿತ್ಸೆ ಮತ್ತು ವೈದ್ಯಕೀಯ ಸವಲತ್ತುಗಳನ್ನು ನಿರ್ಬಂಧಿಸಿ, ಸಾಂಕ್ರಾಮಿಕ ವ್ಯಾಧಿಗಳಿಗೆ ದಾರಿಮಾಡಿ ಕೊಟ್ಟು ಅವರ ಪಾಲಿಗೆ ಬದುಕಿಗಿಂತ ಸಾವಿನ ಅವಕಾಶಗಳನ್ನು ಹೆಚ್ಚಿಸುವುದು.

ಅಪರಾಧ ನಿಯಂತ್ರಣ ಅಥವಾ ಭದ್ರತಾ ಕ್ರಮಗಳ ಹೆಸರಲ್ಲಿ ಅವರ ವಿರುದ್ಧ ಪದೇ ಪದೇ ಹಿಂಸಾತ್ಮಕ ಪೊಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿ, ಬಾಂಬುಗಳ ಮಳೆ ಸುರಿಸಿ ಹಂತಹಂತವಾಗಿ ಅವರ ಜನಸಂಖ್ಯೆಯನ್ನು ಇಲ್ಲವಾಗಿಸಿ ಬಿಡುವುದು.

 ಈ ರೀತಿ ಅಂತಿಮವಾಗಿ ಸಂಪೂರ್ಣ ಅರಬ್ ಮುಕ್ತ ಇಸ್ರೇಲ್ ಅನ್ನು ಸ್ಥಾಪಿಸುವುದು ಮತ್ತು ಫೆಲೆಸ್ತೀನ್ ಎಂಬ ಹೆಸರನ್ನೇ ಭೂಪಟ ಮತ್ತು ಇತಿಹಾಸದಿಂದ ಅಳಿಸಿಬಿಡುವುದು. ಇವೆಲ್ಲ ಕೇವಲ ಯಾರದಾದರೂ ಊಹೆಗಳಲ್ಲ. ವಿಶ್ವಸಂಸ್ಥೆ, ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್, ಹ್ಯೂಮನ್ ರೈಟ್ಸ್ ವಾಚ್ ಮುಂತಾದ ಜಾಗತಿಕ ಸಂಸ್ಥೆಗಳು ತಮ್ಮ ನೇರ ತನಿಖೆ, ಅಧ್ಯಯನ ಮತ್ತು ಸಂಶೋಧನೆಗಳ ಆಧಾರದಲ್ಲಿ ಸ್ಪಷ್ಟವಾಗಿ ಗುರುತಿಸಿರುವ, ದಾಖಲಿಸಿರುವ ಮತ್ತು ಅಧಿಕೃತವಾಗಿ ಖಂಡಿಸಿರುವ ಅಂಶಗಳು. ಜನಾಂಗವಾದ ಮತ್ತು ಸಾಮೂಹಿಕ ಹತ್ಯಾಕಾಂಡ ಎಂಬ ಎರಡು ವಿಷಯಗಳಲ್ಲಿ ಜಗತ್ತಿನ ಬೇರಾವುದೇ ದೇಶದ ಮೇಲಿರುವುದಕ್ಕಿಂತ ಹೆಚ್ಚಿನ ಗಂಭೀರ ಮತ್ತು ದಾಖಲೆ ಸಹಿತ ಆರೋಪಗಳು ಇಸ್ರೇಲ್ ಮೇಲಿವೆ. ಈ ವಿಷಯಗಳಲ್ಲಿ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಅತ್ಯಧಿಕ ಬಾರಿ ಛೀಮಾರಿ ಹಾಕಿಸಿಕೊಂಡ ಅನುಭವವೂ ಇಸ್ರೇಲ್‌ಗೆ ಇದೆ.

► ಜನಾಂಗವಾದದ ಅಂತಿಮ ಗತಿಯೇನು?

ಇಸ್ರೇಲ್ ಸರಕಾರ ಮತ್ತು ಅದರ ಹಿಂದಿರುವ ಝಿಯೋನಿಸ್ಟ್ ಗುಂಪುಗಳು, ಈ ಹಿಂದೆ ಯಹೂದಿ ಜನಾಂಗದ ವಿರುದ್ಧ ಯೂರೋಪಿನ ಫ್ಯಾಶಿಸ್ಟ್ ಮತ್ತು ನಾಝಿ ಜನಾಂಗವಾದಿಗಳು ನಡೆಸಿದ ಘೋರ ದೌರ್ಜನ್ಯಗಳನ್ನು ಪದೇ ಪದೇ ನೆನಪಿಸಿ ಶೋಕಾಚರಿಸುತ್ತಿರುತ್ತಾರೆ. ನಿಜವಾಗಿ ಅವರು ತಮ್ಮ ಅನುಭವಗಳಿಂದ ಪಾಠ ಕಲಿಯಬೇಕಿತ್ತು. ಎಲ್ಲ ಬಗೆಯ ಜನಾಂಗವಾದಗಳನ್ನು ಈ ಭೂಮುಖದಿಂದಲೇ ಇಲ್ಲವಾಗಿಸಿ ಬಿಡುವ ಪಣತೊಟ್ಟು ಮಾನವ ಸಮಾನತೆ, ಮಾನವ ಏಕತೆ ಮತ್ತು ಸಾರ್ವತ್ರಿಕ ನ್ಯಾಯದ ಮೌಲ್ಯಗಳನ್ನು ಜಗತ್ತಿನೆಲ್ಲೆಡೆ ಜನಪ್ರಿಯಗೊಳಿಸಿ ಅವುಗಳಿಗೆ ವ್ಯಾಪಕ ಮಾನ್ಯತೆ ಗಳಿಸಿಕೊಡಲು ಹೋರಾಟ ನಿರತರಾಗಬೇಕಿತ್ತು. ಆದರೆ ದುರಂತ ನೋಡಿ. ಒಂದು ಜನಾಂಗವಾದದಿಂದ ಕೊರಳು ಬಿಡಿಸಿಕೊಂಡು ಬಂದವರು ತಮ್ಮದೇ ಆದ ಇನ್ನೊಂದು ಭೀಕರ ಜನಾಂಗವಾದವನ್ನು ಅನುಷ್ಠಾನಿಸಲು ಹೊರಟಿದ್ದಾರೆ. ತಮ್ಮ ವಿರುದ್ಧ ಮಾಡಲಾದ ಎಲ್ಲ ಅಪರಾಧಗಳನ್ನು, ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನದನ್ನು ಅವರು ಇನ್ನೊಬ್ಬರ ವಿರುದ್ಧ ಮಾಡುತ್ತಿದ್ದಾರೆ. ಸದ್ಯ ಶಕ್ತಿಶಾಲಿಗಳಾಗಿರುವ ಇಸ್ರೇಲಿ ಆಡಳಿತಗಾರರು ಒಂದು ಅಸಹಾಯಕ ಜನಾಂಗದ ವಿರುದ್ಧ ಈ ರೀತಿ ಕ್ರೌರ್ಯ ಮೆರೆಯುತ್ತಿರುವಾಗ ಒಂದು ವಿಷಯವನ್ನು ಮರೆಯಬಾರದು:

ಒಂದು ಹಂತದಲ್ಲಿ ಮುಸ್ಸೋಲಿನಿ ಮತ್ತು ಹಿಟ್ಲರ್ ಗಳೂ ತುಂಬಾ ಬಲಿಷ್ಠರಾಗಿದ್ದರು. ಅವರು ಕಟ್ಟಿದ ಸೇನೆ ಅಜೇಯವಾಗಿತ್ತು. ಅವರಿಗೆ ಸಾಟಿಯಾದವರು ಯಾರೂ ಈ ಭೂಮುಖದ ಮೇಲಿರಲಿಲ್ಲ. ಅವರು ವ್ಯಾಪಕ ರಕ್ತಪಾತ ನಡೆಸಿ ಅಪಾರ ನಾಶನಷ್ಟಗಳನ್ನು ಮೆರೆದಿದ್ದರು. ಆ ಮೂಲಕ ಭೂಮಿಯ ಶಾಶ್ವತ ಒಡೆಯರಾಗುವ ಕನಸು ಕಂಡಿದ್ದರು. ಆದರೆ ಕೊನೆಗೆ ಸತ್ಯ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಮುಂದೆ ಆ ಖಳನಾಯಕರ ಗತಿ ಏನಾಯಿತು? ಹಿಟ್ಲರ್ ಬಗ್ಗೆ ಸ್ವತಃ ಯೂರೋಪಿನ ಜನರಿಗೆ ಇಂದು ಎಷ್ಟು ತಾತ್ಸಾರವಿದೆಯೆಂದರೆ ಅವರು ಹಿಟ್ಲರ್ ನನ್ನು ಅನುಕರಿಸುವ ಮೂಲಕ ಅವನನ್ನು ಅಣಕಿಸಿದ ಹಾಸ್ಯ ಕಲಾವಿದ ಚಾರ್ಲಿ ಚಾಪ್ಲಿನ್ ಅನ್ನು ಮನಸಾರೆ ಗೌರವಿಸುತ್ತಾರೆ. ಹಿಟ್ಲರ್‌ನ ಹೆಸರೆತ್ತಿದರೆ ಉಗುಳುತ್ತಾರೆ.

(ಮುಂದುವರಿಯುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top