ಅನ್ವರ್ ಸಾದಾತ್ ತಂದಿತ್ತ ಕ್ಷಣಿಕ ಉನ್ಮಾದ ಮತ್ತು ಶಾಶ್ವತ ನಿರಾಶೆ
-

photo : facebook (@anwarelsadat.egy)
ಬಾಗ-14
ಇತಿಹಾಸದ ಪುಸ್ತಕಗಳಲ್ಲಿ ಅನ್ವರ್ ಸಾದಾತ್ 1970ರಿಂದ 81 ರ ತನಕ ಭರ್ತಿ 11 ವರ್ಷ ಈಜಿಪ್ಟ್ ದೇಶದ ಅಧ್ಯಕ್ಷರಾಗಿದ್ದರು. ಆದರೆ ಅವರ ಕುರಿತು ಸಾದಾತ್‌ರ ಅಧ್ಯಕ್ಷಾವಧಿಯು ನಿಜವಾಗಿ ಅವರು 1973 ರಲ್ಲಿ ಇಸ್ರೇಲ್ ವಿರುದ್ಧ ಯುದ್ಧ ಸಾರಿದ ದಿನ ಆರಂಭವಾಗಿ 1977ರಲ್ಲಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ ದಿನ ಮುಗಿದು ಹೋಯಿತು ಎಂಬ ಭಾವುಕ ಅಣಕದ ಮಾತು ಅರಬ್ ವಲಯಗಳಲ್ಲಿ ಈಗಲೂ ಚಲಾವಣೆಯಲ್ಲಿದೆ.
ಈಜಿಪ್ಟ್, ತುಂಬಾ ಪ್ರಾಚೀನ ಇತಿಹಾಸವಿರುವ ದೇಶ. ಅದು ಬಹುಕಾಲದಿಂದ, ಮಾತ್ರವಲ್ಲ, ಆಧುನಿಕ ಯುಗದಲ್ಲೂ ಸಾಹಿತ್ಯ, ಮಾಧ್ಯಮ, ರಾಜಕೀಯ, ವೈಚಾರಿಕತೆ, ಹೀಗೆ ವಿವಿಧ ರಂಗಗಳಲ್ಲಿ ಅರಬ್ ಜನತೆಗೆ ನಾಯಕತ್ವ ನೀಡುತ್ತಾ ಬಂದಿದೆ. 1967 ರ ನಂತರದ ಬೆಳವಣಿಗೆಗಳು, ಫೆಲೆಸ್ತೀನ್, ಈಜಿಪ್ಟ್ ಸಮೇತ ಸಮಸ್ತ ಅರಬ್ ಜನತೆಯನ್ನು ತೀವ್ರ ಹತಾಶ ಸ್ಥಿತಿಗೆ ತಳ್ಳಿದವು.
1970 ರಲ್ಲಿ ಜಮಾಲ್ ಅಬ್ದುನ್ನಾಸಿರ್ ನಿಧನರಾದಾಗ ಅರಬ್ ನಾಡಿನ ಇತ್ತೀಚಿನ ಮಹಾನಷ್ಟಗಳೆಲ್ಲಾ ವ್ಯಾಪಕವಾಗಿ ಚರ್ಚಿತವಾದವು. ಅವರು ನಾಸಿರ್‌ರ ಬದುಕನ್ನು ಚರ್ಚಿಸುವಾಗಲೆಲ್ಲ, ಆ ಮಟ್ಟದ ಸಮರ್ಥ ನಾಯಕರೊಬ್ಬರು ತನ್ನ ಬದುಕಿನ ತೀರಾ ಕೊನೆಯ ದಿನಗಳಲ್ಲಿ ಆ ರೀತಿ ಸ್ವತಃ ತನ್ನನ್ನು ಕಳೆದುಕೊಂಡದ್ದೇಕೆ? ಎಂಬ ಮುಜುಗರದ ಪ್ರಶ್ನೆ ಅವರನ್ನು ಕಾಡಿತ್ತು. ಇಂತಹ ವೇಳೆ, ನಾಸಿರ್‌ಗೆ ಪರ್ಯಾಯ ಎಂಬಂತೆ ಉದಯಿಸಿ ಬಂದ ನಾಯಕ ಅನ್ವರ್ ಸಾದಾತ್. ಅವರು ಈಜಿಪ್ಟ್‌ನ ಅಧ್ಯಕ್ಷರಾದಾಗ ಮತ್ತೆ ಈಜಿಪ್ಟ್‌ನಲ್ಲಿ ಮಾತ್ರವಲ್ಲ ಫೆಲೆಸ್ತೀನ್ ಸಹಿತ ಒಟ್ಟು ಅರಬ್ ನಾಡಿನಲ್ಲಿ ಒಂದು ಹೊಸ ಆಶಾವಾದ ಚಿಗುರಿತ್ತು.
ತಮ್ಮಿಂದ ಜನರು ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಅರಿವು ಸಾದಾತ್‌ರಿಗಿತ್ತು. ಆದರೆ, ಫೆಲೆಸ್ತೀನ್, ಜೆರುಸಲೇಮ್ ಇತ್ಯಾದಿ ಎಲ್ಲಕ್ಕಿಂತ ಮುಖ್ಯವಾಗಿ, 67ರ ಯುದ್ಧದಲ್ಲಿ ಇಸ್ರೇಲ್‌ನವರು ಈಜಿಪ್ಟ್ ಕೈಯಿಂದ ಕಿತ್ತುಕೊಂಡಿದ್ದ ಸುಮಾರು 61 ಸಾವಿರ ಚದರ ಕಿ.ಮೀ. ವಿಸ್ತಾರದ ನಾಡುಗಳನ್ನು ಇಸ್ರೇಲ್ ಕಪಿ ಮುಷ್ಟಿಯಿಂದ ಬಿಡಿಸಿಕೊಳ್ಳುವುದು ಹೇಗೆ? ಎಂಬುದು ಸಾದಾತ್ ಮುಂದಿನ ಪ್ರಥಮ ತುರ್ತು ಸವಾಲಾಗಿತ್ತು. ಸ್ವತಃ ಈಜಿಪ್ಟ್‌ನಲ್ಲಿ ಮತ್ತು ಅರಬ್ ವಲಯಗಳಲ್ಲಿ ತಕ್ಕ ಮಟ್ಟದ ಗೌರವವಾದರೂ ಸಿಗಬೇಕಿದ್ದರೆ ಆ ಗುರಿ ಸಾಧನೆ ಸಾದಾತ್‌ರಿಗೆ ಅನಿವಾರ್ಯವಾಗಿತ್ತು. ತನ್ನ ಭವಿಷ್ಯದ ದೃಷ್ಟಿಯಿಂದ ಅಮೆರಿಕದ ಆಶೀರ್ವಾದ ತನಗೆ ಅನಿವಾರ್ಯ ಎಂದು ಅವರು ನಂಬಿದ್ದರು. ಅದೇ ವೇಳೆ, ಈಜಿಪ್ಟ್ ಅಸ್ಮಿತೆ, ಅರಬ್ ರಾಷ್ಟ್ರವಾದ ಇತ್ಯಾದಿ ವಿಷಯಗಳಲ್ಲಿ ನಾಸಿರ್‌ರ ಧಾಟಿಯಲ್ಲೇ ಮಾತನಾಡಿ ತನ್ನ ದೇಶದಲ್ಲಿ ಭಾಷಣ ಪ್ರಿಯ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು.
ತತ್ವ ಸಿದ್ಧಾಂತಗಳಿಗೆ ಸಂಬಂಧಿಸಿದ ಯಾವುದೇ ವಾದವನ್ನು ಸಾದಾತ್ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಅವರು ಅಧಿಕಾರಕ್ಕೆ ಬಂದೊಡನೆ, ಸಾಂಸ್ಕೃತಿಕವಾಗಿ ಪಶ್ಚಿಮದ ಕಡೆಗೆ ಮತ್ತು ಆರ್ಥಿಕ ನೀತಿಗಳಲ್ಲಿ ಸೋವಿಯತ್‌ನ ಸಮಾಜವಾದದ ಕಡೆಗೆ ವಾಲಿದ್ದ ನಾಸಿರ್ ಕಾಲದ ಧೋರಣೆ, ಯೋಜನೆಗಳನ್ನೆಲ್ಲ ತಿದ್ದಿ ಈಜಿಪ್ಟನ್ನು ಮತ್ತೆ ಬಂಡವಾಳಶಾಹಿ ಅಮೆರಿಕದ ಕಡೆಗೆ ದೂಡುವ ಶ್ರಮ ಆರಂಭಿಸಿದರು. ನಿಜವಾಗಿ, ಅಮೆರಿಕದ ಮಡಿಲು ಸೇರಲು ಅವರಿಟ್ಟ ಸದ್ದಿಲ್ಲದ ಹಜ್ಜೆಗಳು ಬಹಳ ಕ್ರಮಬದ್ಧವಾಗಿದ್ದವು. ನಾಸಿರ್ ಕಾಲದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲಹೆಗಾರರಾಗಿ 20,000 ಸೋವಿಯತ್ ಅಧಿಕಾರಿಗಳು ಈಜಿಪ್ಟ್‌ನಲ್ಲಿ ನಿಯುಕ್ತರಾಗಿದ್ದರು. ಸಾದಾತ್, ಅವರೆಲ್ಲರನ್ನೂ 1972ರಲ್ಲಿ ಮರಳಿ ಮನೆಗೆ ಕಳಿಸಿ ಬಿಟ್ಟರು. ಅದರ ಬೆನ್ನಿಗೇ, ಅಮೆರಿಕ ಜೊತೆ ಬಾಂಧವ್ಯ ವೃದ್ಧಿಯ ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡರು. ತಾನು ಇತ್ತೀಚೆಗೆ ಆಕ್ರಮಿಸಿಕೊಂಡಿರುವ ಈಜಿಪ್ಟ್‌ಗೆ ಸೇರಿದ ಪ್ರದೇಶಗಳಲ್ಲಿ ಇಸ್ರೇಲ್ ನಡೆಸುತ್ತಿರುವ ಕಿಡಿಗೇಡಿ ಕೃತ್ಯಗಳ ಬಗ್ಗೆ ಸಾದಾತ್ ನೇರವಾಗಿ ಶ್ವೇತ ಭವನಕ್ಕೆ ವರದಿಗಳನ್ನು ರವಾನಿಸ ತೊಡಗಿದರು. ಗುಪ್ತವಾಗಿ ಸಿರಿಯಾದ ಹಾಫಿಝ್ ಅಲ್ ಅಸದ್ ಜೊತೆಗೂ ಮಾತುಕತೆಗಳ ಸರಣಿಯನ್ನು ಆರಂಭಿಸಿದರು.
ಅತ್ತ ಅಮೆರಿಕದಲ್ಲೂ ಇಸ್ರೇಲನ್ನು ಹದ್ದುಬಸ್ತಿನಲ್ಲಿಡಬೇಕೆಂಬ ಬೇಡಿಕೆ ಹೆಚ್ಚತೊಡಗಿತ್ತು. 67ರ ಯುದ್ಧದಲ್ಲಿ ಕೇವಲ ಆರೇ ದಿನದಲ್ಲಿ ಅಕ್ಕಪಕ್ಕದ ಎಲ್ಲ ನೆಲಗಳನ್ನೂ ಕಬಳಿಸಿ ತನ್ನ ಗಾತ್ರವನ್ನು ಸರ್ವತೋಮುಖವಾಗಿ ಬಹುತೇಕ ನಾಲ್ಕು ಪಟ್ಟು ಹೆಚ್ಚಿಸಿಕೊಂಡಿದ್ದ ಇಸ್ರೇಲ್, ಪ್ರಾದೇಶಿಕ ಶಾಂತಿಯ ಕುರಿತಂತೆ ಅಮೆರಿಕದ ಸಲಹೆಗಳನ್ನು ಕಡೆಗಣಿಸತೊಡಗಿತ್ತು.
1973 ಅಕ್ಟೊಬರ್ 6 ರಂದು ಹಠಾತ್ತನೆ ಈಜಿಪ್ಟ್ ಮತ್ತು ಸಿರಿಯಾದ ಸೇನೆಗಳು ಎರಡು ಕಡೆಗಳಿಂದ ಇಸ್ರೇಲ್ ಮೇಲೆ ಯುದ್ಧ ಸಾರಿದವು.
ಮೂರು ವಾರಗಳ ಕಾಲ ನಡೆದ ಈ ಯುದ್ಧದ ಮೊದಲ ಹಂತದಲ್ಲಿ ಈಜಿಪ್ಟ್ ಪಡೆಗಳು ಸುಯೆಜ್ ಕಾಲುವೆಯನ್ನು ದಾಟಿ ಹೋಗಿ ಸಾಧಿಸಿದ ಮುನ್ನಡೆಯನ್ನು ಕಂಡು ಹಲವು ಕಡೆ ಭಾರೀ ಸಂಭ್ರಮೋಲ್ಲಾಸದ ವಾತಾವರಣ ಮೂಡಿತ್ತು. ರಾತ್ರಿ ಬೆಳಗಾಗುವ ಹೊತ್ತಿಗೆ ಅನ್ವರ್ ಸಾದಾತ್ ಅರೇಬಿಯಾದ ದಂತಕತೆಯಾಗಿ ಬಿಟ್ಟರು. ಈ ಹಿಂದೆ ಪದೇ ಪದೇ ಇಸ್ರೇಲ್ ಮಾತ್ರ ಜಯಿಸುವುದನ್ನು ಕಂಡು ರೋಸಿ ಹೋಗಿದ್ದ ಹಲವು ಅರಬ್, ಮುಸ್ಲಿಮ್ ಮತ್ತು ಕಮ್ಯುನಿಸ್ಟ್ ಸಮಾಜಗಳಲ್ಲಿ ಇನ್ನೇನು ಇಸ್ರೇಲ್ ಕತೆ ಮುಗಿದೇ ಹೋಯಿತು ಎಂಬಂತಹ ವಿಜಯೋನ್ಮಾದ ಕಂಡು ಬಂತು. ಇಸ್ರೇಲ್‌ಗೆ ಅಮೆರಿಕದ ಸೈನಿಕ ನೆರವು ತಲುಪಲು ತಡವಾದಾಗಲಂತೂ ಈ ಉನ್ಮಾದ ತಾರಕಕ್ಕೇರಿ ಬಿಟ್ಟಿತು. ಇಸ್ರೇಲ್ ಅನ್ನು ಹಿಮ್ಮೆಟ್ಟಿಸಿ ಮುನ್ನಡೆಯ ತೊಡಗಿದ್ದ ಈಜಿಪ್ಟ್‌ನ 8 ಲಕ್ಷ ಮತ್ತು ಸಿರಿಯಾದ 1.5 ಲಕ್ಷ ಯೋಧರಿಗೆ ನೆರವಾಗಲು ಸೌದಿ ಸರಕಾರ ತನ್ನ 3 ಸಾವಿರ ಪಡೆಗಳ ತುಕಡಿಯೊಂದನ್ನು ಕಳಿಸಿಕೊಟ್ಟಿತು. ಇರಾಕ್, ಲಿಬಿಯಾ, ಜೋರ್ಡನ್, ಮೊರೊಕ್ಕೋ, ಕುವೈತ್ ಮುಂತಾದ ದೇಶಗಳು ಸೇನೆ, ಆಯುಧ ಮತ್ತಿತರ ನೆರವುಗಳನ್ನೂ ಕಳಿಸಿದವು. ಮಾತ್ರವಲ್ಲ, ಫಿಡೆಲ್ ಕಾಸ್ಟ್ರೋ ಪ್ರಧಾನಿಯಾಗಿದ್ದ ಕ್ಯೂಬಾದಿಂದಲೂ ಎರಡು ಯುದ್ಧ ಟ್ಯಾಂಕ್ ಪಡೆಗಳು ಹಾಗೂ ಸುಮಾರು 4 ಸಾವಿರ ಯೋಧರನ್ನು ಹೊತ್ತು ಹೊರಟವು.
ಕೆಲವೇ ದಿನಗಳಲ್ಲಿ ಚಿತ್ರ ಬದಲಾಯಿತು. ಇಸ್ರೇಲ್ ಸಾವರಿಸಿಕೊಂಡು ಪ್ರತಿದಾಳಿ ಆರಂಭಿಸಿತು. ಸೋವಿಯತ್ ಪಡೆಗಳು ಈಜಿಪ್ಟ್ ನೆರವಿಗೆ ಬರುತ್ತಿವೆ ಎಂಬ ಸುದ್ದಿ ಬಂದೊಡನೆ, ಆವರೆಗೆ ತುಸು ನಿಧಾನವಾಗಿದ್ದ ಅಮೆರಿಕ, ಚುರುಕಾಗಿ ಬಿಟ್ಟಿತು. ತೈಲ ದೊರೆಗಳ ಆರ್ಭಟ, ಬೆದರಿಕೆ ಇತ್ಯಾದಿಗಳನ್ನು ಮಾತ್ರವಲ್ಲ, ಸ್ವತಃ ತನ್ನ ದೇಶದ ಹಿತಾಸಕ್ತಿಗಳನ್ನೂ ಕಡೆಗಣಿಸಿ ತುರ್ತು ವಿಧಾನಗಳ ಮೂಲಕ ಇಸ್ರೇಲ್‌ಗೆ ಎಲ್ಲ ವಿಧದ ನೆರವನ್ನು ತಲುಪಿಸಿತು. ಕೇವಲ ಹತ್ತು ದಿನಗಳಲ್ಲಿ ಯುದ್ಧದ ದಿಕ್ಕು ಬದಲಾಯಿತು. ಮೂರು ವಾರಗಳಲ್ಲಿ ಮುಗಿದೂ ಹೋಯಿತು. ಸ್ಕೋರ್ ಬೋರ್ಡ್ ನೋಡಿದಾಗ, ಈಜಿಪ್ಟ್ ಸೇನೆ 6 ವರ್ಷಗಳ ಹಿಂದೆ ತಾನು ಕಳೆದುಕೊಂಡಿದ್ದ ಒಂದು ದೊಡ್ಡ ಭೂಭಾಗವನ್ನು ಇಸ್ರೇಲ್ ಕೈಯಿಂದ ಭಾಗಶಃ ಕಿತ್ತುಕೊಂಡಿತ್ತು. ಅತ್ತ ಇಸ್ರೇಲ್, ಈಜಿಪ್ಟ್‌ನ ಸುಮಾರು 1,600 ಚದರ ಕಿಲೋ ಮೀಟರ್ ಜಮೀನನ್ನು ಆಕ್ರಮಿಸಿಕೊಂಡು, ರಾಜಧಾನಿ ಕೈರೋದಿಂದ ಕೇವಲ 100 ಕಿ.ಮೀ. ಮಾತ್ರ ದೂರ ಇರುವಲ್ಲಿಗೆ ತಲುಪಿತ್ತು. ಮತ್ತೊಂದೆಡೆ ಇಸ್ರೇಲ್ ಪಡೆಗಳು ಸಿರಿಯಾದ 500 ಚದರ ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಂಡು, ರಾಜಧಾನಿ ಡೆಮಾಸ್ಕಸ್‌ನಿಂದ ಕೇವಲ 30 ಕಿ.ಮೀ. ದೂರದವರೆಗೂ ಬಂದು ಬಿಟ್ಟಿದ್ದವು. ಹೀಗೆ ಈ ಯುದ್ಧದಲ್ಲಿ ಈಜಿಪ್ಟ್ ಜನತೆಗೆ ಸೀಮಿತ ವಿಜಯದ ಭ್ರಮೆಯೊಂದು ಸಿಕ್ಕಿತು. ಅನ್ವರ್ ಸಾದಾತ್ ರಿಗೂ ದೊಡ್ಡ ನಷ್ಟವೇನೂ ಆಗಲಿಲ್ಲ. ಸಾಹಸಿ, ಪ್ರತಾಪಿ ಎಂದೆಲ್ಲಾ ಅವರನ್ನು ಹೊಗಳುವವರ ಸಂಖ್ಯೆ ಹೆಚ್ಚಿತು. ಅಮೆರಿಕದ ಷರತ್ತುಗಳ ಪ್ರಕಾರ ಯುದ್ಧ ವಿರಾಮಕ್ಕೆ ಸಮ್ಮತಿಸಿದ್ದರಿಂದ ಅಲ್ಲಿಯೂ ಸಾದಾತ್ ಆಪ್ತರ ಸಂಖ್ಯೆ ಹೆಚ್ಚಿತು. ಆದರೆ ನಿಜವಾಗಿ ದೂರಗಾಮಿ ಪರಿಣಾಮಗಳ ದೃಷ್ಟಿಯಿಂದ ಇದು ಇಸ್ರೇಲ್ ಪಾಲಿಗೆ ವರದಾನವಾಯಿತು. ಅಮೆರಿಕ ಮತ್ತು ಯುರೋಪ್ ಗಳಲ್ಲಿ ಎಲ್ಲೆಂದರಲ್ಲಿ ಇಸ್ರೇಲ್ ಪರವಾಗಿ ಭಾರೀ ಸಹತಾಪದ ಅಲೆಗಳು ಎದ್ದವು. ‘ಸಭ್ಯರ ನಡುಮೊಬ್ಬ ಕಿಡಿಗೇಡಿ’ ಎಂಬ ಅದರ ಇಮೇಜು, ‘ಕಿಡಿಗೇಡಿಗಳ ನಡುವೆ ಸಿಲುಕಿಕೊಂಡಿರುವ ಸಭ್ಯ’ ಎನ್ನುವಷ್ಟು ಬದಲಾಯಿತು. ಇಸ್ರೇಲ್‌ಗೆ ಬೇಕಿದ್ದುದೂ ಇದುವೇ. ಎಲ್ಲವನ್ನೂ ಕಳೆದುಕೊಂಡ ಸಿರಿಯಾದ ಹಾಫಿಝ್ ಅಸದ್‌ರಿಗೆ ಮಾತ್ರ, ತನ್ನನ್ನು ಎಲ್ಲರೂ ವಂಚಿಸಿದರೆಂದು ರೋದಿಸುವುದು ಬಿಟ್ಟರೆ ಬೇರಾವ ದಾರಿಯೂ ಉಳಿಯಲಿಲ್ಲ.
ಫೆಲೆಸ್ತೀನಿಗಳು, ತಮ್ಮ ಹೆಸರಲ್ಲಿ ನಡೆಯುತ್ತಿದ್ದ ಈ ಎಲ್ಲ ಕಾರ್ಯಾಚರಣೆಗಳುದ್ದಕ್ಕೂ ತಮಗೆ ಯಾವುದೇ ಪಾತ್ರವಿಲ್ಲದೆ, ಎಲ್ಲದಕ್ಕೂ ಕೇವಲ ಮೂಕ ಸಾಕ್ಷಿಗಳಾಗಿದ್ದರು.
► ಇಸ್ರೇಲ್‌ನಲ್ಲಿ ಸಾದಾತ್
ಅರಬ್ ಜನತೆಗೆ ಬದುಕು ಬೋರಾಗುವುದಿಲ್ಲ. ಅಚ್ಚರಿಗಳ ಸರಮಾಲೆ ಅವರ ಮುಂದೆ ನಿತ್ಯವೂ ತೆರೆದುಕೊಳ್ಳುತ್ತಲೇ ಇರುತ್ತವೆ. 1977 ನವೆಂಬರ್ 19 ರಂದು ಹಠಾತ್ತನೆ ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದಾತ್ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿ ಪ್ರತ್ಯಕ್ಷರಾದರು.
ಈ ರೀತಿ ಒಬ್ಬ ಅರಬ್ ಪ್ರಮುಖ ಇಸ್ರೇಲ್ ನೆಲಕ್ಕೆ ಆಗಮಿಸಿದ್ದು ಇಸ್ರೇಲ್‌ನ ಇತಿಹಾಸದ ಮೊದಲ ಘಟನೆಯಾಗಿತ್ತು. ನಾಲ್ಕು ವರ್ಷಗಳ ಹಿಂದಷ್ಟೇ ತಮ್ಮ ಮೇಲೆ ಮುಗಿ ಬೀಳುವುದಕ್ಕೆ ದೊಡ್ಡ ದಂಡೊಂದನ್ನು ತಂದಿದ್ದ ವ್ಯಕ್ತಿ ಇದೀಗ ಅತಿಥಿಯಾಗಿ ತಮ್ಮ ಮನೆಬಾಗಿಲಿಗೆ ಬಂದುದನ್ನು ಕಂಡು ಇಸ್ರೇಲಿಗಳಿಗೂ ರೋಮಾಂಚನವಾಯಿತು. ತಮ್ಮ ಅಸ್ತಿತ್ವಕ್ಕೆ ಅಧಿಕೃತ ಮಾನ್ಯತೆ ನೀಡಬೇಕೆಂಬ ಅವರ ಬಹುಕಾಲದ ಬೇಡಿಕೆಯು ಈ ಮೂಲಕ ಈಡೇರಿತ್ತು.
ನಿಜವಾಗಿ ಈ ಭೇಟಿಯ ಮೂಲಕ ಅನ್ವರ್ ಸಾದಾತ್ ಹಲವು ದೊಡ್ಡ ಬೇಲಿಗಳನ್ನು ಹಾರಿದ್ದರು. ಮುಖ್ಯವಾಗಿ, ಎರಡು ವಿಷಯಗಳಲ್ಲಿ ಎಲ್ಲ ಅರಬ್ ದೇಶಗಳ ಮಧ್ಯೆ ಒಮ್ಮತವಿತ್ತು. 1. ಅರಬ್ ನೆಲದ ಯಾವುದೇ ಭಾಗ ಇಸ್ರೇಲ್ ವಶದಲ್ಲಿರುವ ತನಕ ಇಸ್ರೇಲ್‌ಗೆ ಮಾನ್ಯತೆ ನೀಡುವ ಅಥವಾ ಅದರ ಜೊತೆ ನೇರ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. 2. ಒಂದು ವೇಳೆ ಮಾತುಕತೆಯ ಅನಿವಾರ್ಯತೆ ತಲೆದೋರಿದರೂ ಅದನ್ನು ಎಲ್ಲ ಅರಬ್ ದೇಶಗಳು ಸಂಯುಕ್ತವಾಗಿ ನಡೆಸಬೇಕು, ಯಾವುದೇ ಒಂದು ದೇಶ ಪ್ರತ್ಯೇಕ ಮಾತುಕತೆ ನಡೆಸಬಾರದು.
ಸಾದಾತ್ ಈ ಎರಡೂ ನಿಯಮಗಳನ್ನು ಬಹಿರಂಗವಾಗಿ ಮುರಿದರು. ಅವರ ಈ ಉಲ್ಲಂಘನೆ ಇಸ್ರೇಲ್ ಮತ್ತು ಅದರ ಪೋಷಕರ ಪಾಲಿಗೆ ಹಲವು ದೊಡ್ಡ ವಿಜಯಗಳ ಭಂಡಾರವಾಗಿತ್ತು. ಅದು ಅರಬ್ ಐಕ್ಯ ಎಂಬ ಭ್ರಮೆಯನ್ನು ನೆಲಕಚ್ಚಿಸಿತ್ತು. ಅರಬ್ ಜಗತ್ತಿನ ಅತ್ಯಂತ ಶಕ್ತ ದೇಶವು ಅರಬ್ ಪಾಳಯವನ್ನು ಬಿಟ್ಟು ತೆರಳಿದರೆ ಇಸ್ರೇಲ್‌ಗೆ ಅದಕ್ಕಿಂತ ದೊಡ್ಡ ಹಬ್ಬ ಏನಿದೆ?
ಇಸ್ರೇಲ್ ಸಂಸತ್ತು ಕನೆಸ್ಸೆಟ್ ನಲ್ಲಿ ತುಂಬು ಸದನವನ್ನುದ್ದೇಶಿಸಿ ಮಾತನಾಡಿದ ಸಾದಾತ್ ಹೇಳಿದರು: ಇಂದು, ನಾವೆಲ್ಲಾ ಒಂದು ಹೊಸ ಬದುಕನ್ನು ರೂಪಿಸೋಣ ಮತ್ತು ಶಾಂತಿಯನ್ನು ಸ್ಥಾಪಿಸೋಣ ಎಂಬ ಗಟ್ಟಿಯಾದ ಸಂಕಲ್ಪ ದೊಂದಿಗೆ ನಾನು ನಿಮ್ಮ ಬಳಿಗೆ ಬಂದಿದ್ದೇನೆ. ದೇವರದ್ದಾದ ಈ ಭೂಮಿಯಲ್ಲಿ ಇರುವ, ಮುಸ್ಲಿಮರು, ಕ್ರೈಸ್ತರು ಯಹೂದಿಗಳೆಲ್ಲಾ, ಅಂದರೆ ನಾವೆಲ್ಲಾ, ಒಬ್ಬ ದೇವರನ್ನು ಪೂಜಿಸುವವರು, ಒಬ್ಬ ದೇವರ ಹೊರತು ಬೇರೆ ಯಾರನ್ನೂ ಪೂಜಿಸದವರು ನಾವು.
ಈ ರೀತಿ ಮೊನ್ನೆಮೊನ್ನೆ ತಮ್ಮ ವಿರುದ್ಧ ಯುದ್ಧನಿರತನಾಗಿದ್ದ ವ್ಯಕ್ತಿ ಇಂದು ಹಠಾತ್ತನೆ ತಮ್ಮ ಸಂಸತ್ತಿನಲ್ಲಿ ನಿಂತು ತಮಗೆ ಉಪದೇಶ ನೀಡುತ್ತಿರುವುದು ಇಸ್ರೇಲಿಗಳಿಗೂ ನಂಬಲಾಗದ ಅದ್ಭುತವಾಗಿತ್ತು. ಈ ನಾಟಕೀಯ ಬೆಳವಣಿಗೆಯಿಂದಾಗಿ ಪಶ್ಚಿಮದಲ್ಲಂತೂ ಸಾದಾತ್ ಎಲ್ಲೆಡೆ ಎಲ್ಲರ ಕಣ್ಮಣಿಯಾಗಿ ಬಿಟ್ಟರು.
ಸಂಸತ್ತಿಗೆ ಭೇಟಿ ನೀಡುವ ಮುನ್ನ ಸಾದಾತ್ ಜೆರುಸಲೇಮ್‌ನ ಮಸ್ಜಿದ್ ಅಲ್ ಅಕ್ಸಾದಲ್ಲಿ ನಮಾಝ್ ಸಲ್ಲಿಸಿದ್ದು ಮುಸ್ಲಿಮರಿಗೆ ದೊಡ್ಡ ಸುದ್ದಿಯಾಯಿತು. ಅವರು ಹೋಲಿಸೆಫಲ್ಚರ್ ಚರ್ಚಿಗೆ ಮತ್ತು ‘ಯದ್ ವಾಶೆಮ್’ ಎಂಬ ಹೋಲೋಕಾಸ್ಟ್ ಸ್ಮಾರಕಕ್ಕೆ ಭೇಟಿ ನೀಡಿದ್ದು ಕ್ರಮವಾಗಿ ಕ್ರೈಸ್ತರಿಗೆ ಮತ್ತು ಯಹೂದಿಗಳಿಗೆ ನೆಮ್ಮದಿ ತಂದಿತು. ಇಸ್ರೇಲಿಗಳು ಎಷ್ಟು ಸಂಶಯಿಸಿದರೂ ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್‌ರಿಗೆ, ಸಾದಾತ್ ನಮ್ಮ ನಂಬಿಕೆಗೆ ಅರ್ಹ ಎಂಬ ವಿಶ್ವಾಸ ಮೂಡಿತು. ಅರಬ್ ಮತ್ತು ಮುಸ್ಲಿಮ್ ಜಗತ್ತಿನಲ್ಲಿ ಒಂದು ವರ್ಗವು ಇದನ್ನು ಸ್ವಾಗತಿಸಿದರೆ ಇನ್ನೊಂದು ದೊಡ್ಡ ವರ್ಗವು ಇದನ್ನು ಒಂದು ಅಕ್ಷಮ್ಯ ದ್ರೋಹವೆಂದು ಕರೆಯಿತು.
ಅದೆಷ್ಟೋ ಮಂದಿ, ಸಾದಾತ್ ಅವರ 1970 ರಿಂದ 1977 ರವರೆಗಿನ ವಿವಿಧ ನಿಗೂಢ ನಡೆಗಳನ್ನು ವಿಸ್ಮಯದಿಂದ ನೋಡುತ್ತಾ ಆ ನಡೆಗಳ ಹಿಂದಿನ ಮರ್ಮವೇನು ಎಂಬುದನ್ನು ಅರಿಯಲು ಹೆಣಗಾಡುತ್ತಿದ್ದರು. ಅವರ ಎಲ್ಲ ಸಂಶಯಗಳನ್ನು ನಿವಾರಿಸುವ ಘಟನೆ ಮುಂದಿನ ವರ್ಷ ನಡೆಯಿತು.
1978 ಸೆಪ್ಟಂಬರ್ 17 ರಂದು ಜಿಮ್ಮಿ ಕಾರ್ಟರ್ ಸಮಕ್ಷಮ, ಅನ್ವರ್ ಸಾದಾತ್ ಮತ್ತು ಇಸ್ರೇಲ್ ಪ್ರಧಾನಿ ಮೆನಚೇಮ್ ಬೆಗಿನ್ ಒಂದು ಐತಿಹಾಸಿಕ ಒಪ್ಪಂದಕ್ಕೆ ಸಹಿ ಮಾಡಿದರು. ಇದರಿಂದ ಪಶ್ಚಿಮದಲ್ಲಿ ಅನ್ವರ್ ಸಾದಾತ್ ಭಾರೀ ದೂರ ದೃಷ್ಟಿಉಳ್ಳ ಧೀರ ನಾಯಕ ಎನಿಸಿಕೊಂಡರು. ಮುಂದಿನ ವರ್ಷ 1979 ರಲ್ಲಿ ಸಾದಾತ್ ಮತ್ತು ಬೆಗಿನ್ ಇವರಿಬ್ಬರಿಗೆ ಜಂಟಿ ನೊಬೆಲ್ ಶಾಂತಿ ಪ್ರಶಸ್ತಿ ಸಿಕ್ಕಿತು.
ಕ್ಯಾಂಪ್ ಡೇವಿಡ್ ಒಪ್ಪಂದ ಎಂದು ಕರೆಯಲಾಗುವ, ಫೆಲೆಸ್ತೀನ್ ಜನತೆಯ ಯಾವ ಹಿತಾಸಕ್ತಿಯನ್ನೂ ಗಣನೆಗೆ ತೆಗೆದುಕೊಳ್ಳದೆ ಕೇವಲ ಇಸ್ರೇಲ್ ಮತ್ತು ಈಜಿಪ್ಟ್‌ಗಳ ಹಿತವನ್ನು ಪರಿಗಣಿಸಿ ಮಾಡಿಕೊಳ್ಳಲಾದ ಈ ಒಪ್ಪಂದ ಇಸ್ರೇಲ್ ನಲ್ಲಿ ಭಾರೀ ಸಂಭ್ರಮಕ್ಕೆ ಮತ್ತು ಅರಬ್ ಜಗತ್ತಿನಲ್ಲಿ ಅಪೂರ್ವ ಮಟ್ಟದ ಘೋರ ಆಕ್ರೋಶಕ್ಕೆ ಕಾರಣವಾಯಿತು. ಸಾದಾತ್ ಮತ್ತವರ ಕುಟುಂಬ ಹಾಗೂ ಆಪ್ತರ ಮೇಲಿದ್ದ, ಅಪರಾಧಗಳ ಮತ್ತು ಭ್ರಷ್ಟಾಚಾರಗಳ ಆರೋಪಗಳನ್ನು ಮರೆತವರು ಕೂಡಾ ಸಾದಾತ್ ಅವರ ಈ ನಡೆಯನ್ನು ಕ್ಷಮಿಸಿಲ್ಲ. ಫೆಲೆಸ್ತೀನ್ ಸಹಿತ, ಅರಬಿಗಳಿಗೆ ಸೇರಿದ್ದ ಒಂದು ದೊಡ್ಡ ಭೂಭಾಗವನ್ನು ಇಸ್ರೇಲ್‌ಗೆ ಬಿಟ್ಟುಕೊಟ್ಟು, ಇಸ್ರೇಲ್ ನ ಅಕ್ರಮ ಅಸ್ತಿತ್ವ ಸಮೇತ ಎಲ್ಲ ಅಕ್ರಮಗಳಿಗೆ ಶಾಶ್ವತ ಮನ್ನಣೆ ನೀಡಿದ ಮತ್ತು ಫೆಲೆಸ್ತೀನಿಗಳ ಮಾನವ ಹಕ್ಕುಗಳನ್ನು ಸಂಪೂರ್ಣ ಬಲಿಕೊಟ್ಟ ಶ್ರೇಯ ಸಾದಾತ್‌ರಿಗೆ ಸಲ್ಲುತ್ತದೆ ಎಂದು ಅವರು ನಂಬಿದ್ದಾರೆ.
ಕ್ಯಾಂಪ್ ಡೇವಿಡ್ ಒಪ್ಪಂದದ ಎರಡು ವರ್ಷಗಳ ಬಳಿಕ 1981 ಅಕ್ಟೊಬರ್ 6 ರಂದು ಸಾದಾತ್ ತಮ್ಮ ದೇಶದ ಸೇನೆಯ ಮುಂದೆ, ತಮ್ಮ 1973ರ ವಿಜಯದ ವಾರ್ಷಿಕೋತ್ಸವ ಆಚರಿಸುತ್ತಿದ್ದಾಗ, ಅವರದೇ ಸೇನೆಯಲ್ಲಿದ್ದ ಕೆಲವು ಬಂಡುಕೋರ ಯೋಧರು ಅವರ ಹತ್ಯೆ ಮಾಡಿದರು. ಪೂರ್ವಯೋಜಿತ ಸಂಚಿನ ಪ್ರಕಾರ ಎಸಗಲಾದ ಈ ಅಮಾನುಷ ಹತ್ಯೆಯಲ್ಲಿ ಭಾಗವಹಿಸಿದ್ದವರು ಕೂಡ ಇದೇ ಕಾರಣಕ್ಕಾಗಿ ಸಾದಾತ್ ವಿರುದ್ಧ ಪ್ರತೀಕಾರಕ್ಕೆ ಇಳಿದಿದ್ದರು.
(ಮುಂದುವರಿಯುದು)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.