-

ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?

ವಿಮೋಚನಾ ಸಂಗ್ರಾಮಕ್ಕೆ ಜೀವ ತುಂಬಿದ ‘ಇನ್ತಿಫಾದಃ’

-

Photo: twitter.com 

                                                                                  ► ಭಾಗ-19

‘‘ಮೂರನೆಯ ‘ಇನ್ತಿಫಾದಃ’ ಆರಂಭವಾಗಿ ಬಿಟ್ಟಿತೇ?’’ - ಈ ವರ್ಷ ಮೇ ತಿಂಗಳಲ್ಲಿ ಇಸ್ರೇಲ್ ಪಡೆಗಳು ಮತ್ತು ಫೆಲೆಸ್ತೀನ್ ಪೌರರ ನಡುವೆ ಘರ್ಷಣೆ ಭುಗಿಲೆದ್ದಾಗ ಎಲ್ಲೆಂದರಲ್ಲಿ ಕೇಳಿ ಬಂದಿದ್ದ ಪ್ರಶ್ನೆ ಇದು. ಈ ಪ್ರಶ್ನೆಗೆ ಅಂತಿಮ ಉತ್ತರ ಇನ್ನೂ ಸಿಕ್ಕಿಲ್ಲ. ಏಕೆಂದರೆ ಸದ್ಯ ಯುದ್ಧ ವಿರಾಮ ಘೋಷಿತವಾಗಿದ್ದರೂ ಶಾಂತಿ ಸ್ಥಾಪನೆಯೇನೂ ಆಗಿಲ್ಲ. ಅದೇ ವೇಳೆ, ಕಳೆದ ತಿಂಗಳ ಬೆಳವಣಿಗೆಗಳು ಮೂರನೆಯ ‘ಇನ್ತಿಫಾದಃ’ ಕ್ಕೆ ಪೀಠಿಕೆ ಯಾಗುವ ಎಲ್ಲ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಾವು, ಈ ಹಿಂದಿನ ಎರಡು ‘ಇನ್ತಿಫಾದಃ’ಗಳನ್ನು ನೆನಪಿಸಿಕೊಳ್ಳಬೇಡವೇ?

► ಪ್ರಥಮ ‘ಇನ್ತಿಫಾದಃ’ - 1987 ರಿಂದ 1993

1987ರಲ್ಲಿ, ಪಿಎಲ್‌ಒ ಮತ್ತು ಅರಫಾತ್ ಬಳಗವು ಫೆಲೆಸ್ತೀನ್ ವಿಮೋಚನೆಗಾಗಿ ತಮ್ಮ ಆವರೆಗಿನ ಹೋರಾಟದಿಂದ ದಣಿದು, ಇನ್ನೇನು ನಿವೃತ್ತಿ ಘೋಷಿಸುವುದರಲ್ಲಿತ್ತು. ಒಂದೆಡೆ ಇಸ್ರೇಲ್ ಅನ್ನು ಸೋಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಅಕ್ಕಪಕ್ಕದ ಎಲ್ಲ ದೇಶಗಳಲ್ಲಿ ಅವರು ಅನಪೇಕ್ಷಿತರಾಗಿದ್ದರು. ಸ್ವತಃ ಫೆಲೆಸ್ತೀನಿಗಳ ಮಧ್ಯೆ ಅವರ ಜನಪ್ರಿಯತೆ ಕುಸಿದಿತ್ತು. ಅಷ್ಟರಲ್ಲೇ ಹಠಾತ್ತನೆ ಫೆಲೆಸ್ತೀನ್‌ನಲ್ಲಿ ‘ಹಮಾಸ್’ ಎಂಬ ಒಂದು ಹೊಸ ಸಂಘಟನೆಯಿಂದ ಪ್ರೇರಿತವಾದ ‘ಇನ್ತಿಫಾದಃ’ ಎಂಬ ಹೊಸದೊಂದು ವಿಶಿಷ್ಟ ಜನಾಂದೋಲನ ತಲೆ ಎತ್ತಿತು. (‘ಇನ್ತಿಫಾದಃ’ ಎಂಬ ಸಮಗ್ರ ಅರಬಿ ಪದವನ್ನು, ಬಂಡಾಯ, ಪ್ರತಿಭಟನೆ, ದಂಗೆ, ನಡುಕ, ಕಂಪನ ಎಂದಿತ್ಯಾದಿಯಾಗಿ ಅನುವಾದಿಸಬಹುದು.) ಯಾವ ದೃಷ್ಟಿಯಿಂದ ನೋಡಿದರೂ ಅದು ಜನಾಂದೋಲನವೇ ಆಗಿತ್ತು. ಜನಮಾನಸದಲ್ಲಿ ಭಾರೀ ಆಳ ಬೇರುಗಳಿದ್ದ ಆಂದೋಲನ. ಅದು ಯಾವುದೇ ನಿರ್ದಿಷ್ಟ ಪಕ್ಷವನ್ನಾಗಲಿ ನಾಯಕನನ್ನಾಗಲಿ ಅವಲಂಬಿಸದ, ಸಹಜತೆಯೇ ಪ್ರಧಾನ ಸ್ವಭಾವವಾಗಿದ್ದ ಆಂದೋಲನವಾಗಿತ್ತು. ಹತಾಶರಲ್ಲಿ ಆಶೆ ಚಿಗುರಿಸಲು ಮತ್ತು ಸರ್ವಾಧಿಕಾರಿಗಳಲ್ಲಿ ನಡುಕ ಹುಟ್ಟಿಸಲು ಬೇಕಾದ ಎಲ್ಲ ಗುಣಗಳೂ ಅದರಲ್ಲಿದ್ದವು.

 ಹಲವರ ಪಾಲಿಗೆ ಇದೊಂದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ತಾವೇ ಫೆಲೆಸ್ತೀನಿಗಳ ಎಲ್ಲ ಹಿತಾಸಕ್ತಿಗಳ ಶಾಶ್ವತ ಪ್ರತಿನಿಧಿಗಳೆಂದು ನಂಬಿಕೊಂಡಿದ್ದ ಪಿಎಲ್‌ಒ ಗೆ ಇದರಿಂದ ಆಘಾತವಾಯಿತು. ಅತ್ತ ಪಿಎಲ್‌ಒ ಅನ್ನು ನಿಯಂತ್ರಿಸಿಟ್ಟರೆ ಸಾಕು, ಸಂಪೂರ್ಣ ಫೆಲೆಸ್ತೀನ್ ನಮ್ಮ ನಿಯಂತ್ರಣದಲ್ಲಿರುತ್ತದೆ ಎಂದು ನಂಬಿದ್ದ ಇಸ್ರೇಲ್ ಸರಕಾರಕ್ಕೂ ಆಘಾತವಾಯಿತು. 1987ರಲ್ಲಿ ಮೊದಲ ‘ಇನ್ತಿಫಾದಃ’ ಯಾವುದೇ ಉದ್ಘಾಟನಾ ಸಮಾರಂಭದೊಂದಿಗೆ ಆರಂಭವಾಗಿರಲಿಲ್ಲ. ಇಸ್ರೇಲ್ ಮಟ್ಟಿಗೆ ಆ ವರ್ಷವೆಲ್ಲಾ 1967ರ ಸಮರದ ಇಪ್ಪತ್ತನೇ ವಾರ್ಷಿಕೋತ್ಸವ ಆಚರಿಸುವ ವರ್ಷವಾಗಿತ್ತು. ಆದರೆ ಆ ವರ್ಷ ಡಿಸೆಂಬರ್ 9ರಂದು ಗಾಝಾ ಪಟ್ಟಿಯಲ್ಲಿ ಸಂಭವಿಸಿದ ಒಂದು ರಸ್ತೆ ಅಪಘಾತವು, ಹಠಾತ್ತನೆ ಎಲ್ಲ ಉತ್ಸವಗಳಿಗೆ ತೆರೆ ಎಳೆದು, ‘ಇನ್ತಿಫಾದಃ’ ಎಂಬ ಹೊಸ ಯುಗವೊಂದರ ಪ್ರವೇಶಕ್ಕೆ ಕಾರಣವಾಯಿತು.

ಇಸ್ರೇಲ್ ಸೇನೆಯ ಒಂದು ಟ್ರಕ್, ಕೆಲವು ಫೆಲೆಸ್ತೀನಿ ನಾಗರಿಕರು ಪ್ರಯಾಣಿಸುತ್ತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಕಾರಿನಲ್ಲಿದ್ದ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಅದೇ ಪ್ರದೇಶದಲ್ಲಿ ಇಸ್ರೇಲಿ ವಲಸಿಗನೊಬ್ಬನ ಹತ್ಯೆ ಸಂಭವಿಸಿತ್ತು. ಇದು ಆ ಹತ್ಯೆಯ ಪ್ರತೀಕಾರವೇ ಹೊರತು ಅಪಘಾತವೇನಲ್ಲ ಎಂದು ವಾದಿಸುತ್ತಾ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ತಮ್ಮ ರೋಷವನ್ನು ಪ್ರಕಟಿಸತೊಡಗಿದರು. ಅಂದು ಆರಂಭವಾದ ಪ್ರತಿಭಟನೆಗಳ ಸರಣಿ ಅದೇ ದಿನ ಕನಿಷ್ಠ 5 ಲಕ್ಷ ಮಂದಿಯನ್ನು ಬೀದಿಗೆ ತಂದಿತು. ಈ ರೀತಿ ಒಂದೇ ದಿನ ಅಷ್ಟೊಂದು ಮಂದಿ ಬೇರೆಡೆಯೂ ಬೀದಿಗೆ ಬಂದಿರಬಹುದು. ಆದರೆ ಅಂದು ಬೀದಿಗೆ ಬಂದವರು ಮುಂದಿನ 6 ವರ್ಷಗಳ ಕಾಲ ತಮ್ಮ ಆಕ್ರೋಶದ ಕಾವನ್ನು ಕಾಯ್ದುಕೊಂಡರು. ಅವರದ್ದು ತಾತ್ಕಾಲಿಕ ಭಾವಾವೇಶವಾಗಿರಲಿಲ್ಲ. ಪ್ರತಿದಿನ ಪ್ರತಿಯೊಂದು ಊರಲ್ಲೂ ಸಾವಿರಾರು ಜನ ಬೀದಿಗೆ ಬಂದು ಮತ ಪ್ರದರ್ಶನ ನಡೆಸುತ್ತಿದ್ದರು. ವ್ಯಾಪಾರಿಗಳು ಎಷ್ಟೋ ದಿನ ಅಂಗಡಿ ಮುಚ್ಚಿಟ್ಟರು. ಕೆಲಸಗಾರರು ಕೆಲಸಕ್ಕೆ ಹೋಗಲು ನಿರಾಕರಿಸಿದರು. ಜನರೆಲ್ಲಾ ಅಲ್ಲಲ್ಲಿ ಸರಕಾರ ಮತ್ತದರ ಜನಾಂಗವಾದಿ ಧೋರಣೆಗಳ ವಿರುದ್ಧ ತಮ್ಮ ಆಕ್ರೋಶ ಪ್ರಕಟಿಸುತ್ತಿದ್ದರು. ನಿರಂತರ 6 ವರ್ಷಗಳ ಕಾಲ ಈ ಪ್ರದರ್ಶನಗಳ ಸರಣಿ ಮುಂದುವರಿಯಿತು. ಇಸ್ರೇಲ್‌ನ ಹೆಚ್ಚಿನೆಡೆ, ವಿಶೇಷವಾಗಿ ಆಕ್ರಮಿತ ಪ್ರದೇಶಗಳಲ್ಲಿ ‘ಇನ್ತಿಫಾದಃ’ ವನ್ನು ನಿಯಂತ್ರಿಸುವುದೇ ಸರಕಾರದ ಮುಂದಿನ ನಿತ್ಯದ ಸವಾಲಾಗಿತ್ತು. ಚಳವಳಿಗಾರರನ್ನು ತಡೆಯುವುದಕ್ಕಾಗಿ ಸರಕಾರವು 80 ಸಾವಿರಕ್ಕೂ ಹೆಚ್ಚಿನ ತನ್ನ ಸಶಸ್ತ್ರ ಯೋಧರನ್ನು ನಿಯೋಜಿಸಿತ್ತು. ಜನರನ್ನು ಹೆದರಿಸಲು ಮತ್ತು ತಡೆಯಲು ಎಲ್ಲ ಬಗೆಯ ಅಮಾನುಷ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕಾಯಕ ಸುಲಭವಾಗಿರಲಿಲ್ಲ. 1993ರಲ್ಲಿ ಮೊದಲ ‘ಇನ್ತಿಫಾದಃ’ ಸ್ಥಗಿತಗೊಂಡಾಗ 1,962 ಮಂದಿ ಫೆಲೆಸ್ತೀನಿ ನಾಗರಿಕರು ಹತರಾಗಿದ್ದರು. ಅವರ 1.20 ಲಕ್ಷ ಮಂದಿ ಗಾಯಗೊಂಡಿದ್ದರು. 6 ಲಕ್ಷ ಮಂದಿ ವಿವಿಧ ಅವಧಿಯ ಜೈಲುವಾಸ ಅನುಭವಿಸಿದ್ದರು. ಇಸ್ರೇಲ್ ಕಡೆಯಲ್ಲಿ 102 ಮಂದಿ ಯೋಧರು ಮತ್ತು 175 ನಾಗರಿಕರ ಸಹಿತ ಒಟ್ಟು 277 ಮಂದಿ ಹತರಾಗಿದ್ದರು.

 ► ಎರಡನೇ ‘ಇನ್ತಿಫಾದಃ’- 2000 ದಿಂದ 2005

ಎರಡನೇ ‘ಇನ್ತಿಫಾದಃ’ 2000 ಸೆಪ್ಟಂಬರ್ 28 ರಂದು ಆರಂಭ ವಾಯಿತು. ಒಂದು ರಸ್ತೆ ಅಪಘಾತವು ಮೊದಲ ‘ಇನ್ತಿಫಾದಃ’ಕ್ಕೆ ತಕ್ಷಣದ ಪ್ರಚೋದನೆಯಾಗಿದ್ದರೆ ಈಬಾರಿ ಇಸ್ರೇಲ್ ಸರಕಾರ ಬಹಳಷ್ಟು ಪೂರ್ವಸಿದ್ಧತೆಯೊಂದಿಗೆ ಘರ್ಷಣೆಗೆ ಇಳಿದಿತ್ತು. ಮೊದಲ ‘ಇನ್ತಿಫಾದಃ’ ತಣಿಯುವುದಕ್ಕೆ, ಇಸ್ರೇಲ್ ಮತ್ತು ಅಮೆರಿಕ ಓಸ್ಲೋ ಒಪ್ಪಂದದನ್ವಯ ಫೆಲೆಸ್ತೀನ್ ಜನತೆಗೆ ನೀಡಿದ್ದ ಕೆಲವು ಆಶ್ವಾಸನೆಗಳು ಕಾರಣವಾಗಿದ್ದವು. ಹಲವು ಸುತ್ತಿನ ಮಾತುಕತೆ ಹಾಗೂ ಚೌಕಾಸಿಯ ಬಳಿಕ ಮೂಡಿ ಬಂದಿದ್ದ ಆ ಆಶ್ವಾಸನೆಗಳನ್ನು ಯಾಸಿರ್ ಅರಫಾತ್ ಥರದ ಅಪಾರ ಲೋಕಾನುಭವವಿದ್ದ ಹಿರಿಯ ನಾಯಕರು ನಂಬಿದ ಬಳಿಕವಷ್ಟೇ ಫೆಲೆಸ್ತೀನ್‌ನ ಮುಗ್ಧ ಜನಸಾಮಾನ್ಯರು ನಂಬಿದ್ದರು. ಆದರೆ 1993ರಲ್ಲಿ ನಡೆದ ಮೊದಲ ಹಂತದ ಒಪ್ಪಂದದ ಬಳಿಕ 2000 ದ ಕ್ಯಾಂಪ್ ಡೇವಿಡ್ ಒಪ್ಪಂದದ ತನಕ ಉದ್ದಕ್ಕೂ ನಡೆದಿರುವುದು, ಇಸ್ರೇಲನ್ನು ಬಲಪಡಿಸಿ ಫೆಲೆಸ್ತೀನ್ ಅನ್ನು ವಂಚಿಸುವ ಜಾಣ ಶ್ರಮಮಾತ್ರ ಎಂಬುದು ಫೆಲೆಸ್ತೀನಿಗಳಿಗೆ ಮನವರಿಕೆಯಾದಾಗ ಬಹಳ ತಡವಾಗಿತ್ತು. ಅವರು ಬಹಳಷ್ಟನ್ನು ಕಳೆದುಕೊಂಡಿದ್ದರು. ವಿಶೇಷವಾಗಿ, ಒಲ್ಲದ ಮನಸ್ಸಿನಿಂದ ಅವರು ಅಮೆರಿಕದ ಮೇಲೆ ಇಟ್ಟಿದ್ದ ವಿಶ್ವಾಸವು ಸಂಪೂರ್ಣ ಕುಸಿದು ಬಿದ್ದಿತ್ತು. ಅರಫಾತ್ ಮೋಸ ಹೋಗುವುದಿಲ್ಲ ಎಂಬ ಭ್ರಮೆ ಕರಗಿತ್ತು. ಯಾಸಿರ್ ಅರಫಾತ್ ಕೂಡ ಬಹಿರಂಗವಾಗಿ ತಮಗಾದ ಭ್ರಮನಿರಸನವನ್ನು ಪ್ರಕಟಿಸತೊಡಗಿದ್ದರು. 1999 ಮೇ ತಿಂಗಳ ಹೊತ್ತಿಗೆ, ಒಂದು ಪೂರ್ಣಪ್ರಮಾಣದ, ಸ್ವತಂತ್ರ, ಸ್ವಾಯತ್ತ ಫೆಲೆಸ್ತೀನ್ ದೇಶ ನಿರ್ಮಾಣವಾಗಿ ಬಿಡುತ್ತದೆಂಬ ಕನಸು ನುಚ್ಚುನೂರಾಗಿತ್ತು. ಅಷ್ಟೇ ಅಲ್ಲ ಆಕ್ರಮಿತ ಪ್ರದೇಶಗಳಲ್ಲಿ ಹೊಸ ಯಹೂದಿ ನಿವಾಸಗಳ ನಿರ್ಮಾಣ ಕಾರ್ಯವನ್ನು ನಿಲ್ಲಿಸಲಾಗುವುದೆಂದು ಆಶ್ವಾಸನೆ ನೀಡಿದ್ದ ಇಸ್ರೇಲ್, 7 ವರ್ಷಗಳ ಅವಧಿಯಲ್ಲಿ ಅವರ ಸಂಖ್ಯೆಯನ್ನು ದ್ವಿಗುಣ ಗೊಳಿಸಿತ್ತು. ಸ್ವತಂತ್ರ ಫೆಲೆಸ್ತೀನ್‌ನ ಕನಸನ್ನು ಮಾರಿದವರಿಗೆ ಅಂತಹ ಯಾವ ಇರಾದೆ ಕೂಡಾ ಇರಲಿಲ್ಲ ಎಂಬುದು ಈಗ ಸ್ಪಷ್ಟವಾಗಿ ಬಿಟ್ಟಿತ್ತು.

ಸೆಪ್ಟಂಬರ್ 28 ರಂದು ವಿಪಕ್ಷ ನಾಯಕ ಏರಿಯಲ್ ಶೆರಾನ್ ಇಸ್ರೇಲ್ ಸರಕಾರದ ಅನುಮತಿ ಪಡೆದು, ನೂರಾರು ಸಶಸ್ತ್ರ ಯೋಧರ ರಕ್ಷಣೆಯಲ್ಲಿ, ತನ್ನ ಲಿಕುಡ್ ಪಕ್ಷದ ಒಂದು ನಿಯೋಗದೊಂದಿಗೆ ಜೆರುಸಲೇಮ್‌ನ ಮಸ್ಜಿದ್ ಅಲ್ ಅಕ್ಸಾಗೆ ಭೇಟಿ ನೀಡಿದರು. ಫೆಲೆಸ್ತೀನಿಗಳನ್ನು ಹಿಂಸೆಗಿಳಿಯುವಂತೆ ಪ್ರಚೋದಿಸಿ, ಅದನ್ನು ನಿಯಂತ್ರಿಸುವ ಹೆಸರಲ್ಲಿ ಅವರ ಮೇಲೆ ದೊಡ್ಡ ಪ್ರಮಾಣದಲ್ಲಿ ನಾಶನಷ್ಟಗಳನ್ನು ಹೇರಿ ಕೊನೆಗೆ ಅವರ ಸದ್ದಡಗಿಸಿ ಬಿಡುವುದು ಇಸ್ರೇಲ್‌ನ ಯೋಜನೆಯಾಗಿತ್ತು. ಆ ವರೆಗಿನ ಎಲ್ಲ ಶಿಷ್ಟಾಚಾರಗಳನ್ನು ಉಲ್ಲಂಘಿಸಿ ನಡೆದ ಶೆರಾನ್‌ರ ಆ ಯೋಜಿತ, ಪ್ರಚೋದನಾತ್ಮಕ ಭೇಟಿಯ ಬೆನ್ನಿಗೆ ಭುಗಿಲೆದ್ದ ಭಾರೀ ಪ್ರತಿಭಟನೆಗಳ ಸರಣಿಯನ್ನು ಎರಡನೇ ‘ಇನ್ತಿಫಾದಃ’ ಎಂದು ಗುರುತಿಸಲಾಯಿತು. ಪ್ರಸ್ತುತ ‘ಇನ್ತಿಫಾದಃ’ದ ಆರಂಭದಲ್ಲಿ ಹಿಂಸೆಯ ಪ್ರಮಾಣ ತೀರಾ ಸೀಮಿತವಾಗಿತ್ತು. ಆದರೆ ಇಸ್ರೇಲ್ ಕಡೆಯಿಂದ ಭಾರೀ ಅತಿರೇಕದ ಕ್ರಮಗಳನ್ನು ಕೈಗೊಳ್ಳಲಾಯಿತು. ಆಗ ಇಸ್ರೇಲ್ ಸೇನೆಯ ಬೇಹುಗಾರಿಕಾ ಇಲಾಖೆಯಲ್ಲಿ ನಿರ್ದೇಶಕರಾಗಿದ್ದ ಅಮೋಸ್ ಮಾಲ್ಕ ಅವರ ಪ್ರಕಾರ ಎರಡನೇ ‘ಇನ್ತಿಫಾದಃ’ ಆರಂಭವಾಗಿ ಕೆಲವೇ ದಿನಗಳೊಳಗೆ ಇಸ್ರೇಲ್ ಸೇನೆ ಫೆಲೆಸ್ತೀನಿ ಪ್ರದರ್ಶನಕಾರರ ಮೇಲೆ 13 ಲಕ್ಷ ಸುತ್ತು ಗುಂಡುಗಳ ಮಳೆ ಸುರಿಸಿಯಾಗಿತ್ತು. ಮೊದಲು ರಬ್ಬರ್ ಗುಂಡುಗಳನ್ನು ಬಳಸಿ ಅದರ ಬೆನ್ನಿಗೆ ನೈಜ ಗುಂಡುಗಳನ್ನು ಬಳಸಲಾಯಿತು. ಸಾಲದ್ದಕ್ಕೆ ಹೆಲಿಕಾಪ್ಟರ್‌ಗಳ ಮೂಲಕವೂ ನಿಶಸ್ತ್ರ ಪ್ರದರ್ಶನಕಾರರ ಮೇಲೆ ಗುಂಡು ಹಾರಿಸಲಾಯಿತು.

ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ಪ್ರಕಾರ ಎರಡನೇ ಇನ್ತಿಫಾದಃ ಆರಂಭವಾದ ದಿನವೇ 7 ಮಂದಿ ಪ್ರದರ್ಶನಕಾರರು ಹತರಾಗಿ 300 ಮಂದಿ ಗಾಯಗೊಂಡಿದ್ದರು. ಕೇವಲ 5 ದಿನದೊಳಗೆ ಇಸ್ರೇಲ್ ಪಡೆಗಳು 47 ಫೆಲೆಸ್ತೀನಿ ನಾಗರಿಕರನ್ನು ಕೊಂದು 1,885 ಮಂದಿಯನ್ನು ಗಾಯಗೊಳಿಸಿದ್ದವು. ಈ ಅವಧಿಯಲ್ಲಿ 5 ಮಂದಿ ಇಸ್ರೇಲಿಗಳು ಫೆಲೆಸ್ತೀನಿಗಳ ಕೈಯಲ್ಲಿ ಹತರಾದರು. ಆ್ಯಮ್ನೆಸ್ಟಿ ಪ್ರಕಾರ ಇಸ್ರೇಲಿ ಸೈನಿಕರ ಕೈಯಲ್ಲಿ ಹತರಾದ 80ಶೇ. ಕಠೋರ ಪ್ರತಿಕ್ರಿಯೆಗೆ ಕಾರಣವಾದಂತಹ ಯಾವುದೇ ಚಟುವಟಿಕೆಯಲ್ಲಿ ತೊಡಗಿರಲಿಲ್ಲ. ‘ಫೆಲೆಸ್ತೀನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್’ ಸಂಸ್ಥೆಯ ವರದಿ ಪ್ರಕಾರ ಎರಡನೇ ‘ಇನ್ತಿಫಾದಃ’ ದ ಐದು ವರ್ಷಗಳಲ್ಲಿ 32 ಮಂದಿ ವೈದ್ಯಕೀಯ ಸಿಬ್ಬಂದಿ, 274 ಮಹಿಳೆಯರು ಮತ್ತು 1,262 ಮಕ್ಕಳ ಸಹಿತ 4,973 ಫೆಲೆಸ್ತೀನಿಗಳು ಹತರಾಗಿದ್ದರು. ಈ ಜನಾಂದೋಲನದಿಂದ ಫೆಲೆಸ್ತೀನಿಗಳಿಗಾದ ಲಾಭವೇನೆಂದರೆ ಜಗತ್ತು ಅವರ ಸಮಸ್ಯೆಗಳ ಕಡೆಗೆ ಗಮನ ಹರಿಸತೊಡಗಿತು. ಹಾಗೆಯೇ, ಕೆಲವು ಬೀದಿ ಪುಂಡರ ಮಾಮೂಲಿ ಕಿರುಕುಳ ಬಿಟ್ಟರೆ ಇಸ್ರೇಲ್‌ನಲ್ಲಿ ಬೇರೆಲ್ಲವೂ ಕ್ಷೇಮವಾಗಿದೆ ಎಂದು ಬಹುಕಾಲ ಜಗತ್ತನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದ ಇಸ್ರೇಲ್‌ನ ಬಂಡವಾಳ ಈ ಆಂದೋಲನದಿಂದಾಗಿ ಜಗತ್ತಿನ ಮುಂದೆ ಬಟಾ ಬಯಲಾಗಿಬಿಟ್ಟಿತು. ಜನಧ್ವನಿಯನ್ನು ಮೆಟ್ಟುವ ಸಾವಿರ ಕಲೆಗಳಲ್ಲಿ ಪಳಗಿದ್ದ ಇಸ್ರೇಲ್ ‘ಇನ್ತಿಫಾದಃ’ ವನ್ನು ಗುಟ್ಟಾಗಿಡಲು ನಡೆಸಿದ ಎಲ್ಲ ಶ್ರಮಗಳು ವ್ಯರ್ಥವಾದವು. ಎರಡು ಅವಧಿಗಳ ಇನ್ತಿಫಾದಃದಿಂದ ಲೋಕದಲ್ಲಿ ಫೆಲೆಸ್ತೀನ್ ಬಗ್ಗೆ ದೊಡ್ಡ ಪ್ರಮಾಣದ ಜಾಗೃತಿ ಬೆಳೆಯದಿದ್ದರೂ ಕುತೂಹಲ ಮಾತ್ರ ಖಂಡಿತ ಕೆರಳಿತ್ತು. ಅಲ್ಲೇನು ನಡೆಯುತ್ತಿದೆ ?ಎಂಬ ಪ್ರಶ್ನೆ ಜಗತ್ತಿನ ವಿವಿಧೆಡೆಗಳಿಂದ ಕೇಳಿಬರತೊಡಗಿತ್ತು. ‘ಇನ್ತಿಫಾದಃ’ ಮೂಲಕ ಇಸ್ರೇಲ್ ಮತ್ತು ಅದರ ಆಕ್ರಮಿತ ಪ್ರದೇಶಗಳಲ್ಲಿ ಮೊಳಗಿದ ನ್ಯಾಯ ಮತ್ತು ಸ್ವಾತಂತ್ರದ ಮೊರೆ ಹಾಗೂ ದಾಸ್ಯ ಮತ್ತು ಅಕ್ರಮದ ವಿರುದ್ಧ ಆಕ್ರೋಶ ಜಗತ್ತಿನೆಲ್ಲೆಡೆ ಮಾರ್ದನಿಸತೊಡಗಿತ್ತು. ಇಸ್ರೇಲ್ ಪಾಲಿಗೆ ಅದುವೇ ಒಂದು ಐತಿಹಾಸಿಕ ಹಿನ್ನಡೆಯಾಗಿತ್ತು.

► ‘ಆಕ್ರಮಣಕಾರಿ ಅಹಿಂಸೆ’

‘ಇನ್ತಿಫಾದಃ’ದುದ್ದಕ್ಕೂ, ಚಳವಳಿ ನಿರತರು ಕೆಲವು ನಿರ್ದಿಷ್ಟ ಬೇಡಿಕೆಗಳನ್ನು ಬೇರೆ ಬೇರೆ ವಿಧಾನಗಳಿಂದ ಪದೇ ಪದೇ ಪುನರಾವರ್ತಿಸಿ, ಅವು ಜನರ ನೆನಪಿನಲ್ಲಿ ಸದಾ ಉಳಿಯುವಂತೆ ಮಾಡಿದರು. ಉದಾ :

1. ಇಸ್ರೇಲ್ ಸರಕಾರ 1967 ರಲ್ಲಿ ತಾನು ಆಕ್ರಮಿಸಿಕೊಂಡ ಎಲ್ಲ ಪ್ರದೇಶಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು.

2. ಆಕ್ರಮಿತ ಪ್ರದೇಶಗಳಿಂದ ಹೊರಹಾಕಲ್ಪಟ್ಟ ಹಾಗೂ ನಿರಾಶ್ರಿತರಾಗಿ ಮಾರ್ಪಟ್ಟ ಎಲ್ಲ ಫೆಲೆಸ್ತೀನಿಗಳನ್ನು ಮತ್ತೆ ಅವರ ನಾಡಿಗೆ ಕರೆಸಿಕೊಳ್ಳಬೇಕು ಮತ್ತು ಅವರ ಪುನರ್ವಸತಿಗೆ ಪೂರ್ಣ ಪ್ರಮಾಣದ ಏರ್ಪಾಡು ಮಾಡಬೇಕು.

3. ಆಕ್ರಮಿತ ಪ್ರದೇಶಗಳಲ್ಲಿ ಕರ್ಫ್ಯೂ ಹಿಂದೆಗೆದುಕೊಳ್ಳಬೇಕು, ಚೆಕ್ ಪಾಯಿಂಟ್‌ಗಳನ್ನು ರದ್ದುಗೊಳಿಸಬೇಕು, ಮುಕ್ತ ಸಂಚಲನಕ್ಕೆ ಅವಕಾಶ ಒದಗಿಸಬೇಕು.

4. ಫೆಲೆಸ್ತೀನ್ ವಿಮೋಚನೆಯ ಮೊದಲ ಹೆಜ್ಜೆಯಾಗಿ ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ಪೂರ್ಣ ಪ್ರಮಾಣದ ಸ್ವತಂತ್ರ, ಸಾರ್ವಭೌಮ ಫೆಲೆಸ್ತೀನ್ ಸರಕಾರವನ್ನು ಸ್ಥಾಪಿಸಬೇಕು.

 ಮೊದಲ ‘ಇನ್ತಿಫಾದಃ’ ಸ್ವಭಾವತಃ ಶಾಂತಿಯುತವಾಗಿತ್ತು. ಮಹಿಳೆಯರು ಮತ್ತು ಹದಿಹರೆಯದವರು ಈ ಆಂದೋಲನದ ಮುಂಚೂಣಿಯಲ್ಲಿದ್ದರು. ಭಾಷಣ, ಕರಪತ್ರ, ಗೋಡೆ ಬರಹ, ಘೋಷಣೆ, ಕಚೇರಿಗಳಿಗೆ ಮುತ್ತಿಗೆ, ರಸ್ತೆ ತಡೆ ಇತ್ಯಾದಿಗಳೇ ಪ್ರಧಾನ ವಿಧಾನಗಳಾಗಿದ್ದವು. ಆಂದೋಲನದ ಉದ್ದೇಶಗಳ ಕುರಿತು ಜನಜಾಗೃತಿ ಬೆಳೆಸಲು ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಕಡೆಯಿಂದ ಹಲವು ಸೃಜನಶೀಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಲಕ್ಷಾಂತರ ಮಂದಿ ಭಾಗವಹಿಸಿದ ಆ ದೀರ್ಘ ಚಳವಳಿ ಸಂಪೂರ್ಣ ಹಿಂಸಾ ಮುಕ್ತವಾಗಿ ಉಳಿಯಲಿಲ್ಲ. ‘ಇನ್ತಿಫಾದಃ’ದಲ್ಲೂ ಕೆಲವು ಹಿಂಸಾತ್ಮಕ ಘಟನೆಗಳು ನಡೆದವು. ‘ಇನ್ತಿಫಾದಃ’ ನಾಯಕರು ಪದೇ ಪದೇ ಶಾಂತಿ ಮತ್ತು ಸಂಯಮ ಪಾಲಿಸಲು ಕರೆ ನೀಡುತ್ತಲೇ ಇದ್ದರೂ ಕೆಲವೊಮ್ಮೆ, ವಿಶೇಷವಾಗಿ ಪೊಲೀಸರು ಅಥವಾ ಭದ್ರತಾ ಪಡೆಗಳು ಅತಿರೇಕವೆಸಗಿದಾಗ ಯುವಕರು ಪ್ರಚೋದಿತರಾಗಿ ಕಲ್ಲೆಸೆಯಲು ಆರಂಭಿಸುತ್ತಿದ್ದರು. ಕೆಲವೆಡೆ ಪೆಟ್ರೋಲ್ ಬಾಂಬ್ ಎಸೆದ ಘಟನೆಗಳೂ ನಡೆದಿದ್ದವು. ಆದರೆ ಒಟ್ಟಿನಲ್ಲಿ ಮೊದಲ ‘ಇನ್ತಿಫಾದಃ’ ಒಬ್ಬ ಪಾಶ್ಚಿಮಾತ್ಯ ವಿಮರ್ಶಕನ ಪ್ರಕಾರ ಆಕ್ರಮಣಕಾರಿ ಅಹಿಂಸೆಯ ರೂಪದಲ್ಲಿತ್ತು!.

► ಸರಕಾರದ ದೌರ್ಜನ್ಯ

  ‘ಸೇವ್ ದಿ ಚಿಲ್ಡ್ರನ್’ ಸಂಘಟನೆಯ ಸ್ವೀಡಿಷ್ ಶಾಖೆಯ ವರದಿ ಪ್ರಕಾರ ‘ಇನ್ತಿಫಾದಃ’ದ ಮೊದಲ ಎರಡು ವರ್ಷಗಳಲ್ಲಿ ಸುಮಾರು 30 ಸಾವಿರ ಎಳೆಯ ಮಕ್ಕಳು ಪೊಲೀಸ್ ದೌರ್ಜನ್ಯಕ್ಕೆ ತುತ್ತಾಗಿ ವೈದ್ಯಕೀಯ ಸಹಾಯ ಪಡೆಯಲು ನಿರ್ಬಂಧಿತರಾಗಿದ್ದರು. ಅವರಲ್ಲಿ 30ಶೇ. ಮಂದಿ 10 ವರ್ಷಕ್ಕಿಂತಲೂ ಕೆಳಗಿನವರಾಗಿದ್ದರು. ಆಂದೋಲನವನ್ನು ಹತ್ತಿಕ್ಕುವ ತಂತ್ರವಾಗಿ ಸರಕಾರವು, ಅದರಲ್ಲಿ ಸಕ್ರಿಯರಾಗಿದ್ದ ನಾಯಕರನ್ನು ಕಂಡ ಕಂಡಲ್ಲಿ ಬಂಧಿಸತೊಡಗಿತು. ವಿಶೇಷವಾಗಿ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಗುರಿಯಾಗಿಸಿ ಅವರನ್ನು ಬಂಧಿಸಲಾಗುತ್ತಿತ್ತು. ಅವರ ವಕೀಲರಿಗೆ ಅವರನ್ನು ಭೇಟಿಯಾಗುವ ಅನುಮತಿ ಸಿಗುತ್ತಿರಲಿಲ್ಲ. ಈ ನೀತಿಯ ವಿರುದ್ಧ ವಕೀಲರ ಸಂಘವು ಪ್ರತಿಭಟಿಸಿದಾಗ ವಕೀಲರ ಸಂಘದ ಉಪಾಧ್ಯಕ್ಷರನ್ನೇ ಯಾವುದೇ ವಿಚಾರಣೆ ಇಲ್ಲದೆ 6 ತಿಂಗಳ ಕಾಲ ಬಂಧನದಲ್ಲಿಡಲಾಯಿತು. ಗಾಝಾ ಮೆಡಿಕಲ್ ಎಸೋಸಿಯೇಶನ್‌ನಅಧ್ಯಕ್ಷ ಡಾ.ಝಕಾರಿಯಾ ಅವರನ್ನೂ ಇದೇ ರೀತಿ ವಿಚಾರಣೆ ಇಲ್ಲದೆ 6 ತಿಂಗಳ ಕಾಲ ಜೈಲಲ್ಲಿಡಲಾಯಿತು. ಸರಕಾರಿ ಪಡೆಗಳು ಶೋಧ ಕಾರ್ಯಾಚರಣೆಗಳ ಹೆಸರಲ್ಲಿ 5,000ಕ್ಕೂ ಹೆಚ್ಚು ಫೆಲೆಸ್ತೀನಿ ಮನೆಗಳನ್ನು ಸಂಪೂರ್ಣ ಧ್ವಂಸಗೊಳಿಸಿದ್ದು 6,500ಕ್ಕೂ ಹೆಚ್ಚಿನ ಮನೆಗಳಿಗೆ ಗಂಭೀರ ಹಾನಿ ಮಾಡಿದವು.

► ಇಸ್ರೇಲ್‌ಗೆ ವಿಶ್ವ ಸಂಸ್ಥೆಯ ಖಂಡನೆ

 ಇನ್ತಿಫಾದಃದ ಅವಧಿಯಲ್ಲಿ ಇಸ್ರೇಲ್ ಸರಕಾರ ಮತ್ತು ಇಸ್ರೇಲಿ ಪಡೆಗಳು ನಡೆಸಿದ ಅಮಾನುಷ ದೌರ್ಜನ್ಯಗಳನ್ನು ಮತ್ತು ಮಾನವಹಕ್ಕುಗಳ ಬರ್ಬರ ಉಲ್ಲಂಘನೆಯನ್ನು ವಿಶ್ವ ಸಂಸ್ಥೆಯು ಹಲವು ಬಾರಿ ಖಂಡಿಸಿತು. ಭದ್ರತಾ ಮಂಡಳಿಯು ತನ್ನ 607 ಹಾಗೂ 608ನೇ ನಿರ್ಣಯಗಳಲ್ಲಿ, ಫೆಲೆಸ್ತೀನಿಗಳನ್ನು ದೇಶದಿಂದ ಹೊರಹಾಕುವ ಕ್ರಮವನ್ನು ಇಸ್ರೇಲ್ ಸರಕಾರವು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿತು. 1988 ನವೆಂಬರ್‌ನಲ್ಲಿ ವಿಶ್ವ ಸಂಸ್ಥೆ ಮಹಾ ಸಭೆಯ ಹೆಚ್ಚಿನೆಲ್ಲಾ ಸದಸ್ಯ ದೇಶಗಳು ಇನ್ತಿಫಾದಃದ ದಮನಕ್ಕಾಗಿ ಇಸ್ರೇಲ್ ಸರಕಾರವು ಕೈಗೊಂಡ ಕ್ರೂರ ಕ್ರಮಗಳನ್ನು ಖಂಡಿಸಿದವು. 1989ರಲ್ಲಿ ಒಂದೇ ವರ್ಷ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಇಸ್ರೇಲ್ ವಿರುದ್ಧ ಅಂಗೀಕರಿಸಲಿದ್ದ ಮೂರು ನಿರ್ಣಯಗಳನ್ನು ಅಮೆರಿಕ ತನ್ನ ವೀಟೋ ಅಧಿಕಾರದ ಮೂಲಕ ತಡೆ ಹಿಡಿಯಿತು.

► ವಿಶ್ವ ಸಂಸ್ಥೆಗೆ ಇಸ್ರೇಲ್‌ನ ಬಹಿಷ್ಕಾರ !!

ಇಂದಿನ ಜಾಗತಿಕ ವ್ಯವಸ್ಥೆಯಲ್ಲಿ ನ್ಯಾಯ ಎಷ್ಟೊಂದು ಅಸಹಾಯಕವಾಗಿ ಬಿಡುತ್ತದೆ ಎಂಬುದನ್ನು ಇನ್ತಿಫಾದಃದ ಹಿನ್ನೆಲೆಯಲ್ಲಿ ಜಗತ್ತೆಲ್ಲಾ ಕಾಣುವಂತಾಯಿತು. ಫೆಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ಸರಕಾರ ಎಸಗಿರುವ ಅಕ್ಷಮ್ಯ ದೌರ್ಜನ್ಯಗಳಿಗಾಗಿ ಇಸ್ರೇಲ್ ಮೇಲೆ ದಿಗ್ಬಂಧನ ಹೇರಬೇಕು, ಇಸ್ರೇಲ್ ಅನ್ನು ಬಹಿಷ್ಕರಿಸಬೇಕು ಎಂದೆಲ್ಲಾ ಜಗತ್ತಿನ ಹೆಚ್ಚಿನೆಲ್ಲಾ ದೇಶಗಳು ವಿಶ್ವ ಸಂಸ್ಥೆಯನ್ನು ಆಗ್ರಹಿಸುತ್ತಿದ್ದಾಗ, ಇಸ್ರೇಲ್ ಸರಕಾರವು ಸಾಕ್ಷಾತ್ ವಿಶ್ವ ಸಂಸ್ಥೆಯನ್ನೇ ಬಹಿಷ್ಕರಿಸುವ ಮತ್ತು ಅದಕ್ಕೆ ಛೀಮಾರಿ ಹಾಕುವ ಕೆಲಸ ಮಾಡಿತು. 1990 ಅಕ್ಟೊಬರ್‌ನಲ್ಲಿ ಇಸ್ರೇಲ್ ಸರಕಾರವು, ವಿಶ್ವ ಸಂಸ್ಥೆಯ 672 ನೇ ನಿರ್ಣಯವನ್ನು ತಾನು ಗಣನೆಗೇ ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿ ಬಿಟ್ಟಿತು. ಜಗತ್ತಿನ ಹಲವಾರು ದೇಶಗಳ ಆಗ್ರಹದ ಮೇರೆಗೆ, ವಿಶ್ವ ಸಂಸ್ಥೆಯು, ಫೆಲೆಸ್ತೀನ್ ಜನತೆಯ ವಿರುದ್ಧ ಇಸ್ರೇಲ್ ಸರಕಾರವು ನಡೆಸಿರುವ ದೌರ್ಜನ್ಯಗಳ ವಿರುದ್ಧ ತನಿಖೆಗಾಗಿ ತನ್ನ ಪ್ರಧಾನ ಕಾರ್ಯದರ್ಶಿಯವರ ನೇತೃತ್ವದಲ್ಲಿ ಒಂದು ತನಿಖಾ ಆಯೋಗವನ್ನು ಕಲಿಸಲು ಬಯಸಿತು. ಆಗ ಇಸ್ರೇಲ್ ಸರಕಾರವು ತಾನು ಅಂತಹ ಯಾವುದೇ ಆಯೋಗವನ್ನು ಬಹಿಷ್ಕರಿಸುವುದಾಗಿ ಘೋಷಿಸಿ ಬಿಟ್ಟಿತು.

ಎರಡನೇ ‘ಇನ್ತಿಫಾದಃ’ದ ಮಧ್ಯೆ ಇಸ್ರೇಲ್ ಸರಕಾರ ಎಸಗಿದ ಅಪರಾಧಗಳ ಪಟ್ಟಿ ಸಾಕಷ್ಟು ದೀರ್ಘವಾಗಿದೆ. ಆದರೆ ಅದೇವೇಳೆ ಫೆಲೆಸ್ತೀನಿಗಳ ಕಡೆಯಿಂದಲೂ ಬಾಂಬು ದಾಳಿ, ಅಪಹರಣ, ಆತ್ಮ ಹತ್ಯಾ ದಾಳಿಯಂತಹ ಹಲವು ಅಪರಾಧಕೃತ್ಯಗಳು ನಡೆದಿವೆ. ಹೆಚ್ಚಿನ ದೊಡ್ಡ ಕೃತ್ಯಗಳ ಹೊಣೆಯನ್ನು ಸಣ್ಣ ಅಪರಿಚಿತ ಗುಂಪುಗಳು ವಹಿಸಿಕೊಂಡಿವೆ. ಒಟ್ಟಿನಲ್ಲಿ ಪರಸ್ಪರ ಆರೋಪಗಳ ಪಟ್ಟಿ ಬೆಳೆದಿದೆಯೇ ಹೊರತು ಒಟ್ಟು ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಯಾರೊಬ್ಬರೂ ಒಂದಿಂಚು ಮುಂದೆ ಸಾಗಿಲ್ಲ. ಸದ್ಯ ಇಸ್ರೇಲ್ ಎಂಬ ಬಲಿಷ್ಠ ಶಕ್ತಿಯ ವಿರುದ್ಧ ಒಂದು ದುರ್ಬಲ ಗುಂಪು ವಿಮೋಚನಾ ಹೋರಾಟಕ್ಕೆ ನಿಂತಿದೆ. ಆ ಗುಂಪಿನಲ್ಲಿರುವ ಲಕ್ಷಾಂತರ ಮಂದಿಯ ಮಾನವೀಯ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಮಾತ್ರವಲ್ಲ ಅವರ ಅಸ್ತಿತ್ವವೇ ಅಪಾಯದಲ್ಲಿದೆ. ಫೆಲೆಸ್ತೀನ್‌ನ ಲಕ್ಷಾಂತರ ನಾಗರಿಕರಿಗೆ ನ್ಯಾಯದ ಅಗತ್ಯವಿದೆ. ಆದರೆ ಅದಕ್ಕಿಂತ ತುರ್ತಾಗಿ, ಅವರಿಗೆ ಘನತೆಯೊಂದಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಭದ್ರತೆ ಮತ್ತು ಮೂಲಭೂತ ಸವಲತ್ತುಗಳ ಅಗತ್ಯವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top