ಅಮೆರಿಕ ಅಷ್ಟೊಂದು ನಿಷ್ಠೆಯಿಂದ ಇಸ್ರೇಲ್ ಬೆಂಬಲಕ್ಕೆ ನಿಂತಿರುವುದೇಕೆ?
-

ಭಾಗ - 23
ಇಂದು ಇಸ್ರೇಲ್ ಸಾಕಷ್ಟು ಸ್ವಾವಲಂಬಿಯಾಗಿದೆ. ಹಲವು ರಂಗಗಳಲ್ಲಿ ಹಲವು ದೇಶಗಳು ಇಸ್ರೇಲ್ ಅನ್ನು ಅವಲಂಬಿಸಿವೆ. ಅದು ಈಗಾಗಲೇ ಜಗತ್ತಿನ 4ನೆಯ ಅತ್ಯಂತ ಬಲಿಷ್ಠ ಮಿಲಿಟರಿ ಶಕ್ತಿ ಎಂಬ ಮಾನ್ಯತೆ ಪಡೆದಿದೆ. ಅಂತಹ ಇಸ್ರೇಲ್ ಸರಕಾರದ ಕುರಿತಂತೆ - ಅದೊಂದು ಅಕ್ರಮವಾಗಿ ಸ್ಥಾಪಿತವಾಗಿ, ನಿರಂತರ ಅಕ್ರಮ ವಿಸ್ತರಣೆಯಲ್ಲಿ ನಿರತವಾಗಿರುವ ಸರಕಾರ. ಒಂಟಿಯಾಗಿದ್ದರೆ ಎಂದೋ ಅಳಿದು ಹೋಗಬಹುದಾಗಿದ್ದ ಆ ಸರಕಾರ ಅಮೆರಿಕಾದ ಬೆಂಬಲದಿಂದ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ - ಎಂಬ ಜನಾಭಿಪ್ರಾಯ ಹಲವು ವಲಯಗಳಲ್ಲಿ ಕಂಡು ಬರುತ್ತದೆ. ಇಸ್ರೇಲ್ ಮತ್ತು ಅದರ ಭದ್ರತಾ ಪಡೆಗಳು ಪದೇಪದೇ ವಿಶ್ವ ಸಂಸ್ಥೆಯ ನಿರ್ಣಯಗಳನ್ನು, ಅಂತರ್‌ರಾಷ್ಟ್ರೀಯ ನಿಯಮಗಳನ್ನು ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಸಿದರೂ ಅಮೆರಿಕ ಎಂಬ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾಸತ್ತಾತ್ಮಕ ದೇಶವು ಇಸ್ರೇಲ್‌ಗೆ ನಿಶ್ಶರ್ತ ಬೆಂಬಲ ನೀಡುತ್ತಾ ಬಂದಿದೆ. ಅದು ಬಹಳ ಉದಾರವಾಗಿ ಹಣಕಾಸು, ಶಸ್ತ್ರಾಸ್ತ್ರ, ತಂತ್ರಜ್ಞಾನ ಮತ್ತು ಬೇಹುಗಾರಿಕೆಯ ರಂಗಗಳಲ್ಲಿ ಇಸ್ರೇಲ್‌ಗೆ ಅತ್ಯಮೂಲ್ಯ ನೆರವು ನೀಡಿದ್ದು ಮಾತ್ರವಲ್ಲ, ಇಸ್ರೇಲ್ ಎಂಬ ದೇಶಕ್ಕೆ ಜಗತ್ತಿನ ಹಲವಾರು ದೇಶಗಳ ಮನ್ನಣೆ ದೊರಕಿಸಿಕೊಡುವಲ್ಲಿ ಕೂಡಾ ನಿರ್ಣಾಯಕ ಪಾತ್ರ ವಹಿಸಿದೆ. ಆರ್ಥಿಕವಾಗಿ ಇಸ್ರೇಲ್ ಸಾಕಷ್ಟು ಸ್ವಾವಲಂಬಿಯಾದ ಬಳಿಕವೂ ಅಮೆರಿಕ ತನ್ನ ಔದಾರ್ಯವನ್ನು ಕಡಿಮೆಗೊಳಿಸಿಲ್ಲ. ಇಸ್ರೇಲ್ ಯಾವುದಾದರೂ ದೊಡ್ಡ ಅಪರಾಧ ಮಾಡಿ, ಜಗತ್ತು ಅದನ್ನು ಖಂಡಿಸಿದಾಗ, ಅಮೆರಿಕ ಒಂಟಿಯಾಗಿ ಇಸ್ರೇಲ್‌ನ ರಕ್ಷಣೆಗೆ ನಿಂತಿದ್ದು ಮಾತ್ರವಲ್ಲ ವಿಶ್ವ ಸಂಸ್ಥೆಯಲ್ಲಿ ಕೂಡಾ ಇಸ್ರೇಲ್ ವಿರುದ್ಧ ಯಾವುದೇ ಖಂಡನಾ ನಿರ್ಣಯ ಅಂಗೀಕೃತವಾಗದಂತೆ ನೋಡಿಕೊಂಡಿದೆ. 1972 ರಿಂದೀಚೆಗೆ ಅಮೆರಿಕವು ಕನಿಷ್ಠ 53 ಬಾರಿ, ಜಾಗತಿಕ ಜನಾಭಿಪ್ರಾಯವನ್ನು ಅವಗಣಿಸಿ ಮತ್ತು ಸ್ವತಃ ತಾನು ಪ್ರತಿಪಾದಿಸುವ ಎಲ್ಲ ವೌಲ್ಯಗಳನ್ನು ಕಡೆಗಣಿಸಿ ಭದ್ರತಾ ಮಂಡಳಿಯಲ್ಲಿನ ತನ್ನ ವೀಟೋ ಅಧಿಕಾರವನ್ನು ಪ್ರಯೋಗಿಸಿ ಇಸ್ರೇಲ್ ಅನ್ನು ರಕ್ಷಿಸಿದೆ. ಈ ರೀತಿ ಅಮೆರಿಕ ಸ್ವತಃ ತನ್ನ ತತ್ವಾದರ್ಶ ಮತ್ತು ತನ್ನ ಹಿತಾಸಕ್ತಿಗಳನ್ನು ಬಲಿಗೊಟ್ಟು ಇಸ್ರೇಲ್‌ನ ಹಿಂದೆ ನಿಲ್ಲುವುದಕ್ಕೆ ಕಾರಣವೇನು? ಇದು ಬಹುಕಾಲದಿಂದ ಹಲವರ ಕುತೂಹಲ ಕೆರಳಿಸಿರುವ ಒಂದು ದೊಡ್ಡ ನಿಗೂಢ.
► ಪ್ರಜಾಪ್ರಭುತ್ವ ಕಾರಣವೇ?
ಈ ಕುರಿತು ಅಮೆರಿಕದಲ್ಲಿನ ವ್ಯವಸ್ಥೆಯ ಸಾರಥಿಗಳು ಮತ್ತವರ ಬಾಲ ಬಡುಕರೊಡನೆ, ವಿಚಾರಿಸಿದರೆ ಅವರ ಬಳಿ ಇದಕ್ಕೊಂದು ಸಿದ್ಧ ಉತ್ತರವಿದೆ. ‘‘ಆ ಒಟ್ಟು ಭೂಭಾಗದಲ್ಲಿ ಒಂದು ಪೂರ್ಣ ಪ್ರಮಾಣದ ಪ್ರಜಾಸತ್ತಾತ್ಮಕ ದೇಶವಿದ್ದರೆ ಅದು ಇಸ್ರೇಲ್ ಮಾತ್ರ. ಆದ್ದರಿಂದ ಒಂದು ಹಿರಿಯ, ಬಲಿಷ್ಠ ಪ್ರಜಾಸತ್ತಾತ್ಮಕ ದೇಶವೆಂಬ ನೆಲೆಯಲ್ಲಿ ಇಸ್ರೇಲ್‌ನ ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ’’ ಎಂಬುದೇ, ಸಾವಿರಾರು ಬಾರಿ ಆವರ್ತಿಸಲಾಗಿರುವ ಆ ಉತ್ತರ. ನಮ್ಮ ಯುಗದಲ್ಲಿ ಒಂದು ದೇಶ ಅಥವಾ ಸರಕಾರವು ಪ್ರತಿಪಾದಿಸುವ ತತ್ವಾದರ್ಶಗಳು ಎಷ್ಟೇ ಉದಾತ್ತವಾಗಿದ್ದರೂ, ನಿಜ ಜೀವನದಲ್ಲಿ ಅವುಗಳ ಸ್ಥಾನ ಕೇವಲ ಆಲಂಕಾರಿಕವಾಗಿರುತ್ತದೆ. ಆ ಸರಕಾರದ ಆಂತರಿಕ ಅಥವಾ ಜಾಗತಿಕ ಧೋರಣೆಗಳು ಮತ್ತು ಪ್ರಮುಖ ನಿರ್ಧಾರಗಳೆಲ್ಲಾ ಕೇವಲ ನಿರ್ದಿಷ್ಟ ಹಿತಾಸಕ್ತಿಗಳಿಂದ ಪ್ರೇರಿತವಾಗಿರುತ್ತವೆಯೇ ಹೊರತು ತತ್ವಾದರ್ಶಗಳೊಂದಿಗೆ ಅವುಗಳಿಗೆ ದೂರದ ನಂಟೂ ಇರುವುದಿಲ್ಲ. ಅಮೆರಿಕದ ಕಥೆಯೂ ಅಷ್ಟೇ. ಅಮೆರಿಕವನ್ನು ಒಂದು ಪ್ರಜಾಸತ್ತಾತ್ಮಕ ದೇಶ ಎಂಬ ದೃಷ್ಟಿಯಿಂದ ನೋಡುವವರು ಅದು ಮಾನವ ಇತಿಹಾಸದ ಅತ್ಯಂತ ಪ್ರಬಲ ಬಂಡವಾಳ ಶಾಹಿ ದೇಶ ಮತ್ತು ಆಧುನಿಕ ಯುಗದ ಅತ್ಯಂತ ಯಶಸ್ವಿ ನವ ವಸಾಹತುಶಾಹಿ ದೇಶ ಎಂಬುದನ್ನು ಮರೆಯಬಾರದು. ಈ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಸನ್ನಿವೇಶವನ್ನು ವೀಕ್ಷಿಸಿದರೆ, ಅಮೆರಿಕದ ವಿವಿಧ ಧೋರಣೆಗಳ ಹಿಂದೆ ಅಡಗಿರುವ ಒಳಗುಟ್ಟುಗಳೆಲ್ಲಾ ರಟ್ಟಾಗುವ ಸಾಧ್ಯತೆ ಇದೆ. ಉದಾ: ಇಸ್ರೇಲ್‌ನ ಬೆಂಬಲಕ್ಕೆ ನಿಲ್ಲಲು ಅಮೆರಿಕದ ಬಳಿ ಬೇರೆ ಸಾವಿರ ಕಾರಣವಿದ್ದರೂ ‘ಡೆಮಾಕ್ರಸಿ’ ಎಂಬ ಒಂದು ಅಂಶವು ಅದಕ್ಕೆ ಕಾರಣವಾಗಿರಲು ಖಂಡಿತ ಸಾಧ್ಯವಿಲ್ಲ. ಏಕೆಂದರೆ, ಮಧ್ಯಪ್ರಾಚ್ಯದ ಯಾವುದೇ ದೇಶದಲ್ಲಿ ಡೆಮಾಕ್ರಸಿ ತಲೆ ಎತ್ತದಂತೆ ನೋಡಿಕೊಂಡಿರುವುದೇ ಅಮೆರಿಕ. ಕೊಲ್ಲಿಯ ಮುಸ್ಲಿಮ್ ಮತ್ತು ಅರಬ್ ದೇಶಗಳಲ್ಲಿ ಇಂದು ಮೆರೆಯುತ್ತಿರುವ ರಾಜಾಳ್ವಿಕೆ ಮತ್ತು ಸರ್ವಾಧಿಕಾರಗಳು ಅಲ್ಲಿಯ ಸ್ಥಳೀಯ ಜನರ ಒಪ್ಪಿಗೆಯಿಂದ ನಡೆಯುತ್ತಿಲ್ಲ. ಅವೆಲ್ಲಾ ನಿಜವಾಗಿ ಸ್ಥಳೀಯರ ಕೈ, ಕಾಲು, ಕಿವಿ ಮೂಗೆಲ್ಲಾ ಕಟ್ಟಿ, ಕಣ್ಣಿಗೆ ಪಟ್ಟಿ ಜಡಿದು, ಬಾಯಿಗೆ ಮುದ್ರೆ ಒತ್ತಿ ಸ್ಥಳೀಯರನ್ನು ಗುಲಾಮರಾಗಿಸಿ ನಡೆಯುತ್ತಿರುವ ಆಡಳಿತಗಳು. ಸೌದಿ ಅರೇಬಿಯಾದಲ್ಲಿ ಯಾರಾದರೂ ತನ್ನ ಮನೆಯೊಳಗೆ ಕುಳಿತು ಈ ದೇಶದಲ್ಲಿ ಚುನಾವಣೆ ಬೇಕೆಂದು ಹೇಳಿದರೆ ಅವನು ಮರುದಿನ ಕಣ್ಮರೆಯಾಗಿ ಬಿಡುತ್ತಾನೆ. ಈಜಿಪ್ಟ್‌ನಂತೆ ಎಲ್ಲಾದರೂ ಇಂತಹ ವ್ಯಕ್ತಿಗಳು ಅಥವಾ ಗುಂಪುಗಳು ಗಟ್ಟಿಯಾಗಿ ಬೆಳೆದು, ಚುನಾವಣೆಯಲ್ಲಿ ಭಾಗವಹಿಸಿ ಗೆದ್ದು ಬಂದರೂ, ಅಂತಹ ಚುನಾಯಿತ ಆಡಳಿತಗಾರರನ್ನು ಪದಚ್ಯುತಗೊಳಿಸಿ ಗಲ್ಲಿಗೇರಿಸುವ ಕಾರ್ಯಾಚರಣೆಗಳು ಕೂಡಾ ಅಮೆರಿಕದ ಉಸ್ತುವಾರಿಯಲ್ಲಿಯೇ ನಡೆಯುತ್ತವೆ. ಜಗತ್ತಿನ ಬೇರೆ ಅನೇಕ ಭಾಗಗಳಲ್ಲೂ ಅಮೆರಿಕ ತನ್ನ ಸ್ವಾರ್ಥಕ್ಕಾಗಿ ಪ್ರಜಾಸತ್ತಾತ್ಮಕ ಆಂದೋಲನಗಳನ್ನು ಧ್ವಂಸಗೊಳಿಸಿ ಸರ್ವಾಧಿಕಾರಿ ಶಕ್ತಿಗಳಿಗೆ ಬಲ ಒದಗಿಸಿದ ಡಜನ್ ಗಟ್ಟಲೆ ದಾಖಲೆಗಳಿವೆ.
► ಹತ್ಯಾ ಕಾಂಡದ ಪಾಪ ಪ್ರಜ್ಞೆ ಇರಬಹುದೇ?
1941 ರಿಂದ 1945ರ ವರೆಗಿನ ಅವಧಿಯಲ್ಲಿ ಯೂರೋಪಿನ ವಿವಿಧೆಡೆ ಬಿಳಿಯ ಆರ್ಯನ್ ಜನಾಂಗವಾದಿಗಳ ಕೈಯಲ್ಲಿ ಯಹೂದಿಗಳ ಸಾಮೂಹಿಕ ಹತ್ಯಾಕಾಂಡ ನಡೆದಿತ್ತು. ಒಂದು ಅಂದಾಜಿನ ಪ್ರಕಾರ ಅದರಲ್ಲಿ ಸುಮಾರು 60 ಲಕ್ಷ ನಿರಪರಾಧಿ ಯಹೂದಿಗಳು ಹತರಾಗಿದ್ದರು. ಈ ಪಾಪ ಪ್ರಜ್ಞೆಯಿಂದಾಗಿ ಅಮೆರಿಕವು, ಯಹೂದಿಗಳ ಒಂದು ಹೊಸ, ಸ್ವತಂತ್ರ ದೇಶದ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದೆ ಎಂಬೊಂದು ಜನಪ್ರಿಯ ತರ್ಕವಿದೆ. ಇದು ತೀರಾ ಹುರುಳಿಲ್ಲದ ತರ್ಕ. ಏಕೆಂದರೆ ಮೊದಲನೆಯದಾಗಿ, ಫೆಲೆಸ್ತೀನ್‌ನಲ್ಲಿ ‘ಇಸ್ರೇಲ್’ ಎಂಬ ಯಹೂದಿ ತಾಯಿನಾಡಿನ ನಿರ್ಮಾಣಕ್ಕೆ ಬೇಕಾದ ಎಲ್ಲ ಸಿದ್ಧತೆಗಳು, ಯುರೋಪಿನಲ್ಲಿ ಯಹೂದಿಗಳ ಹತ್ಯಾಕಾಂಡ ಆರಂಭವಾಗುವುದಕ್ಕಿಂತ ಹಲವು ದಶಕಗಳ ಮುನ್ನವೇ ಆರಂಭವಾಗಿತ್ತು. ಎರಡನೆಯದಾಗಿ, ಯಹೂದಿಗಳ ಹತ್ಯಾಕಾಂಡವು ಯುರೋಪಿಯನ್ನರ ಕೈಯಲ್ಲಿ ನಡೆದಿದ್ದು, ಅದರಲ್ಲಿ ನೇರವಾಗಿ ಅಮೆರಿಕದ ಯಾವ ಪಾತ್ರವೂ ಇರಲಿಲ್ಲ. ಹೀಗಿರುವಾಗ, ಯಾರೋ ಮಾಡಿದ ಪಾಪಕ್ಕೆ ಯಾರೋ ಪರಿಹಾರ ಸಲ್ಲಿಸುವುದು ಅನುಚಿತವಾಗಿತ್ತು. ಮೂರನೆಯದಾಗಿ, ಅನ್ಯಾಯ ಯುರೋಪಿನಲ್ಲಿ ನಡೆದಿರುವಾಗ ಅದಕ್ಕೆ ನ್ಯಾಯೋಚಿತವಾದ ಪರಿಹಾರವನ್ನೂ ಯುರೋಪಿನಲ್ಲೇ ಏರ್ಪಡಿಸಬೇಕಿತ್ತು. ಜಗತ್ತಿನ ಎಲ್ಲ ಅರಕ್ಷಿತ ಯಹೂದಿಗಳಿಗೆ ಯುರೋಪಿನಲ್ಲೇ ಒಂದು ಸುರಕ್ಷಿತ ನೆಲೆ ಒದಗಿಸಲು ಖಂಡಿತ ಅವಕಾಶವಿತ್ತು. ಅದರ ಬದಲು, ಈ ಹತ್ಯಾಕಾಂಡದೊಂದಿಗೆ ಯಾವ ಸಂಬಂಧವೂ ಇಲ್ಲದ ಇನ್ನೊಂದು ಭೂಭಾಗದವರನ್ನು ಬಲಿ ಪಶುಗಳಾಗಿ ಮಾಡಿದ್ದಕ್ಕೆ ಯಾವ ಸಮರ್ಥನೆಯೂ ಇರಲಿಲ್ಲ. ನಾಲ್ಕನೆಯದಾಗಿ, ಯುರೋಪ್ ಖಂಡದಲ್ಲಿ ನಡೆದ ಅನ್ಯಾಯಕ್ಕೆ ಏಶ್ಯ ಎಂಬ ಇನ್ನೊಂದು ಖಂಡದಲ್ಲಿ ಪರಿಹಾರ ಒದಗಿಸಿ ಅದಕ್ಕೆ ಅಮೆರಿಕ ಎಂಬ ಮತ್ತೊಂದು ಖಂಡದಿಂದ ಕಾವಲು ಒದಗಿಸುವುದು ಯಾವ ರೀತಿಯಲ್ಲೂ ತರ್ಕಬದ್ಧವೆನಿಸುವುದಿಲ್ಲ. ಅಮೆರಿಕಕ್ಕೆ ನಿಜಕ್ಕೂ ತನ್ನ ಗತಕಾಲದ ಪಾಪವನ್ನು ಅಂಗೀಕರಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಹುಡುಕಲು ಹೊರಡುವಂತಹ ಸಜೀವ ಆತ್ಮಸಾಕ್ಷಿ ಮತ್ತು ದೊಡ್ಡ ಮನಸ್ಸು ಇದ್ದಿದ್ದರೆ, ಅದು ಕಳೆದ ಕೆಲವು ದಶಕಗಳ ಅವಧಿಯಲ್ಲಿ ಜಗತ್ತಿನ ನಾನಾ ಭಾಗಗಳಲ್ಲಿ ಮಾಡಿರುವ ಮತ್ತು ಮಾಡಿಸಿರುವ ಅನೇಕಾರು, ನೇರ ಹಾಗೂ ಪರೋಕ್ಷ ಹತ್ಯಾಕಾಂಡಗಳಿಗೆ ಪ್ರಾಯಶ್ಚಿತ್ತ ಮಾಡಲು ಹೊರಡಬೇಕಿತ್ತು.
ಅದು ತನ್ನ ಅಮೆರಿಕ ಖಂಡದಲ್ಲಿ ಸ್ವತಃ ತಾನೇ ಮಾಡಿರುವ ಹತ್ಯಾಕಾಂಡಗಳ ಪಟ್ಟಿಯನ್ನೊಮ್ಮೆ ನೋಡಿಕೊಂಡು ಅದರ ಪರಿಹಾರಕ್ಕೆ ಹೊರಡಬಹುದಿತ್ತು. ಇಂದು ಅಮೆರಿಕನ್ ಖಂಡವನ್ನು ಆಕ್ರಮಿಸಿಕೊಂಡಿರುವವರು ಮತ್ತವರ ಸಭ್ಯ ಪೂರ್ವಜರು ಯುರೊಪಿನಲ್ಲಿ ಹಸಿವು ತಾಳಲಾಗದೆ ಅಮೆರಿಕವನ್ನು ಅರಸಿ ಹೋಗಿದ್ದಾಗ, ಅದೇನೂ ನಿರ್ಜನ, ಬರಡು ಭೂಮಿಯಾಗಿರಲಿಲ್ಲ. ಅಲ್ಲಿ ಜನರಿದ್ದರು. ಪೂರ್ಣಪ್ರಮಾಣದಲ್ಲಿ ವಿಕಾಸ ಹೊಂದಿದ್ದ, ಸುಸಂಸ್ಕೃತ, ಜೀವಂತ ಮೂಲನಿವಾಸಿ ಜನರು. ಕ್ರೌರ್ಯ, ಯುದ್ಧ ತಂತ್ರ ಮತ್ತು ಶಸ್ತ್ರಾಸ್ತ್ರ ಗಳ ವಿಷಯದಲ್ಲಿ ಮಾತ್ರ ಯುರೋಪಿಯನ್ನರಿಗಿಂತ ಹಿಂದಿದ್ದ ಜನರು. ಒಂದು ಹಂತದಲ್ಲಿ ಅಮೆರಿಕನ್ನರು ಅಮೆರಿಕದ ಇತಿಹಾಸ ಹೇಳುವಾಗ ಆ ಮೂಲ ನಿವಾಸಿ ಅಮೆರಿಕನ್ನರ ಅಸ್ತಿತ್ವವನ್ನೇ ಮರೆಮಾಚುತ್ತಿದ್ದರು. ಕ್ರಮೇಣ, ಅದು ಅಸಾಧ್ಯವೆಂಬುದು ಮನವರಿಕೆಯಾದ ಬಳಿಕ, ಅಲ್ಲಿ ಮೂಲನಿವಾಸಿಗಳು ಇದ್ದರು ಎಂಬುದನ್ನು ಒಪ್ಪಿಕೊಂಡು, ಅವರು ತೀರಾ ಸೀಮಿತ ಸಂಖ್ಯೆಯಲ್ಲಿದ್ದರು ಎಂದು ವಾದಿಸ ಲಾರಂಭಿಸಿದರು. ಇದೀಗ ಅವರ ತಜ್ಞರೇ ಸತ್ಯವನ್ನು ಅನಾವರಣಗೊಳಿಸ ತೊಡಗಿದ್ದಾರೆ. ಉದಾ: ಆಂಥ್ರೊಪಾಲಜಿ ತಜ್ಞ ಜೇಮ್ಸ್ ಮೂನಿ 1910 ರಲ್ಲಿ ಮುಂದಿಟ್ಟ ವರದಿಯಲ್ಲಿ, 1492ರಲ್ಲಿ ಇಟಲಿಯ ಕೊಲಂಬಸ್ ಅಮೆರಿಕಕ್ಕೆ ಕಾಲಿಟ್ಟಾಗ ಅಲ್ಲಿ ಕೇವಲ 11.15 ಲಕ್ಷ ಮೂಲ ನಿವಾಸಿಗಳಿದ್ದರು ಎಂದು ವಾದಿಸಿದ್ದರು. ಮುಂದೆ ಬೇರೆಬೇರೆ ವಿಜ್ಞಾನಿಗಳು ಈ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದಿದ್ದಾರೆ. ಉದಾ: ಜನಾಂಗೀಯ ಇತಿಹಾಸದ ತಜ್ಞ ಹೆನ್ರಿ ಡೋಬಿನ್ಸ್ ಅವರು 1966 ರ ತಮ್ಮ ವರದಿಯಲ್ಲಿ, ಕೊಲಂಬಸ್ ಅಮೆರಿಕಕ್ಕೆ ಹೋದಾಗ ಅಲ್ಲಿದ್ದ ಮೂಲನಿವಾಸಿಗಳ ಜನಸಂಖ್ಯೆ 98 ಲಕ್ಷ ಮತ್ತು 1.22 ಕೋಟಿಯ ಮಧ್ಯೆ ಇದ್ದಿರಬಹುದೆಂದು ಅಂದಾಜಿಸಿದ್ದರು. ಅವರೇ 1983ರಲ್ಲಿ ಈ ಹಿಂದಿನ ತಮ್ಮದೇ ಅಂದಾಜನ್ನು ಪರಿಷ್ಕರಿಸಿ ಆ ಸಂಖ್ಯೆಯನ್ನು 1.80 ಕೋಟಿಗೆ ಏರಿಸಿದ್ದಾರೆ. ಈಗ ಆ ಮೂಲ ನಿವಾಸಿಗಳು ಮತ್ತು ಅವರ ಮಕ್ಕಳೆಲ್ಲಾ ಎಲ್ಲಿದ್ದಾರೆ? ಎಂದು ಹುಡುಕಲು ಹೊರಟವರು ಹಲವು ಶತಮಾನಗಳ ತನಕ ನಡೆದ ಸತತ ಹಾಗೂ ವ್ಯವಸ್ಥಿತ ಸಾಮೂಹಿಕ ಹತ್ಯಾಕಾಂಡದ ಭಾರೀ ಭಯಾನಕ ಇತಿಹಾಸವನ್ನು ಎದುರಿಸಬೇಕಾಗುತ್ತದೆ. ಕೆಲವು ತಜ್ಞರ ಪ್ರಕಾರ, ಯೂರೋಪಿನ ಕೊಳ್ಳೇಗಾರರು ಅಮೆರಿಕದ ನೆಲಕ್ಕೆ ಕಾಲಿಟ್ಟ ಬಳಿಕ ಕೇವಲ 5 ಶತಮಾನಗಳ ಅವಧಿಯಲ್ಲಿ ಅಲ್ಲಿನ 95ಶೇ. ದಷ್ಟು ಮೂಲನಿವಾಸಿ ಜನಸಂಖ್ಯೆ ಕಣ್ಮರೆಯಾಗಿದೆ. ಅಂದರೆ ಕೆಲವೇ ತಲೆ ಮಾರುಗಳ ಅಂತರದಲ್ಲಿ 2 ಕೋಟಿ ಮೂಲನಿವಾಸಿಗಳು ಅಮೆರಿಕದ ತಮ್ಮ ಮೂಲ ನೆಲದಿಂದ ಮಾಯವಾಗಿದ್ದಾರೆ. ಈ ರೀತಿ ಕೋಟಿಗಟ್ಟಲೆ ಮಾನವರನ್ನು ಅವರದೇ ನೆಲದಲ್ಲಿ ಸಂಹರಿಸಿ ಬಿಟ್ಟ ಪಾಪಿಗಳಿಗೆ ಆ ಬಗ್ಗೆ ಯಾವುದೇ ಪಾಪ ಪ್ರಜ್ಞೆ ಇಲ್ಲವೆಂದಾದರೆ ಬೇರೆ ಯಾವ ಪಾಪಪ್ರಜ್ಞೆ ತಾನೇ ಅವರನ್ನು ಕಾಡೀತು ?
ಇಸ್ರೇಲ್ ಜಗತ್ತಿನ ಅತಿ ಸಣ್ಣ ದೇಶಗಳಲ್ಲೊಂದು. ಆದರೆ ಅದರ ಬೇಹುಗಾರಿಕಾ ಏಜನ್ಸಿ ಮೊಸ್ಸಾದ್ (Mossad) ಅನ್ನು ಜಗತ್ತಿನ ಅತಿದೊಡ್ಡ ಬೇಹುಗಾರಿಕಾ ಜಾಲಗಳ ಸಾಲಲ್ಲಿ ಗಣಿಸಲಾಗುತ್ತದೆ. ಅದರ ವಾರ್ಷಿಕ ಬಜೆಟ್ ಸುಮಾರು 3 ಬಿಲಿಯನ್ ಡಾಲರ್‌ಗಳಷ್ಟಿದೆ. ಇದಲ್ಲದೆ ಮಿಲಿಟರಿ ಬೇಹುಗಾರಿಕೆಗೆಂದೇ ಮೀಸಲಾಗಿರುವ ‘ಅಮಾನ್’ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ನಿಯುಕ್ತವಾಗಿರುವ ‘ಶಿನ್ ಬೆಟ್’ - ಹೀಗೆ ಎರಡು ಪ್ರತ್ಯೇಕ ಸಂಸ್ಥೆಗಳೂ ಇಸ್ರೇಲ್‌ನಲ್ಲಿವೆ. ಮೊಸ್ಸಾದ್ ತನ್ನ ಅಸಾಂಪ್ರದಾಯಿಕ ಕಾರ್ಯ ವಿಧಾನಗಳಿಗಾಗಿ ಖ್ಯಾತವಾಗಿದೆ. ಖಾಸಗಿತನಕ್ಕೆ ಸಂಬಂಧಿಸಿದ ನೈತಿಕ ಮಿತಿಮೇರೆಗಳನ್ನು ಲೆಕ್ಕಿಸದೆ, ತುಂಬಾ ಮುಂದುವರಿದ ತಂತ್ರಜ್ಞಾನವನ್ನು ಪ್ರಯೋಗಿಸಿ ಮಾಹಿತಿ ಸಂಗ್ರಹಿಸುವ ಕಲೆಯಲ್ಲಿ ಪಳಗಿರುವ ಮೊಸ್ಸಾದ್, ತಾನು ಸಂಗ್ರಹಿಸಿದ ಮಾಹಿತಿಗಳನ್ನು ಬಳಸಿ, ಆಮೂಲಕ ವಿವಿಧ ದೇಶಗಳ ಧೋರಣೆಗಳ ಹಾಗೂ ಅಲ್ಲಿನ ಆಂತರಿಕ ಬೆಳವಣಿಗೆಗಳ ಮೇಲೆ ಪ್ರಭಾವ ಬೀರಿದ ದಾಖಲೆಗಳೂ ಇವೆ. ಜಗತ್ತಿನ ಎಷ್ಟೋ ಸರಕಾರಗಳು ತಮ್ಮ ವಿರೋಧಿ ದೇಶಗಳ ಕುರಿತು ಮಾಹಿತಿ ಸಂಗ್ರಹಕ್ಕಾಗಿ ಮೊಸ್ಸಾದ್‌ನ ಸೇವೆ ಪಡೆದದ್ದಿದೆ. ಮೊಸ್ಸಾದ್ ಇಸ್ರೇಲ್‌ನ ಪರಮಾಪ್ತ ದೇಶಗಳಾದ ಅಮೆರಿಕದ ವಿರುದ್ಧ ಹಾಗೂ ಹಲವು ಯುರೋಪಿಯನ್ ದೇಶಗಳ ವಿರುದ್ಧ ಬೇಹುಗಾರಿಕೆ ನಡೆಸಿದ ಆರೋಪಗಳಿವೆ ಮತ್ತು ಇದರಿಂದಾಗಿ ಇಸ್ರೇಲ್ ಜೊತೆ ಆ ದೇಶಗಳ ಸಂಬಂಧಗಳು ಉದ್ವಿಗ್ನವಾದದ್ದೂ ಇದೆ.
ಎಷ್ಟೋ ಸರ್ವಾಧಿಕಾರಿ ಅರಬ್ ಮತ್ತು ಮುಸ್ಲಿಮ್ ದೇಶಗಳು ಕೂಡಾ ತಮ್ಮ ದೇಶದೊಳಗಿನ ಪ್ರಜಾಸತ್ತಾತ್ಮಕ ಚಟುವಟಿಕೆಗಳ ಮೇಲೆ ಕಣ್ಣಿಡಲು ಮೊಸ್ಸಾದ್ ಜಾಲವನ್ನು ಬಳಸಿಕೊಂಡದ್ದಿದೆ. ಇಸ್ಲಾಮಿಕ್ ವಿಚಾರಧಾರೆಯ ಪಕ್ಷಗಳನ್ನು ಅಮೆರಿಕ, ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ಸರ್ವಾಧಿಕಾರಿಗಳು ಸಮಾನವಾಗಿ ದ್ವೇಷಿಸುವುದರಿಂದ ಆ ಪಕ್ಷಗಳನ್ನು ಹತ್ತಿಕ್ಕುವ ಹೆಸರಲ್ಲಿ ಪ್ರಸ್ತುತ ಮೂರೂ ವಲಯಗಳು ಒಂದಾಗುತ್ತಲಿರುತ್ತವೆ.
(ಮುಂದುವರಿಯುವುದು)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.