-

ಭಾರತೀಯ ಮುಸ್ಲಿಮರ ವಿರುದ್ಧದ ದ್ವೇಷಪರಾಧಗಳ ದಾಖಲೆ ಇಡುತ್ತಿರುವ ಪತ್ರಕರ್ತ ಆಲಿಶಾನ್ ಜಾಫ್ರಿ ಸಂದರ್ಶನ

"ಮೊದಲು ನಮ್ಮ ಜೀವನಶೈಲಿ, ಬಳಿಕ ಜೀವನೋಪಾಯ ವಿರೋಧಿಸಿದ ಅವರು ಈಗ ಜೀವಿಸುವ ಹಕ್ಕನ್ನೇ ಕಿತ್ತುಕೊಳ್ಳಬಯಸಿದ್ದಾರೆ"

-

ಪತ್ರಕರ್ತ ಆಲಿಶಾನ್ ಜಾಫ್ರಿ (Photo: Article-14.com)

ಬೆಂಗಳೂರು,ಜ.1: ಸ್ವತಂತ್ರ ಪತ್ರಕರ್ತರಾಗಿರುವ ಅಲಿಶಾನ್ ಜಾಫ್ರಿ (24) 2017ರಲ್ಲಿ ರೈಲಿನಲ್ಲಿ ಜುನೈದ್ ಖಾನ್ ಎಂಬ ಹದಿಹರೆಯದ ಯುವಕನನ್ನು ಎಂಟು ಬಾರಿ ಚೂರಿಯಿಂದ ಇರಿದಿದ್ದ ವೀಡಿಯೊವನ್ನು ನೋಡಿದಾಗಿನಿಂದಲೂ ಮುಸ್ಲಿಂ ವಿರೋಧಿ ಹಿಂಸಾಚಾರಗಳನ್ನು ದಾಖಲಿಸುತ್ತಿದ್ದಾರೆ. ಈ ಪ್ರಕರಣವನ್ನು ಗೆಳೆಯನೋರ್ವನೊಂದಿಗೆ ಚರ್ಚಿಸಿದಾಗ ಆತ ಜುನೈದ್ ಹತ್ಯೆಯು ದ್ವೇಷಾಪರಾಧವಾಗಿರಲಿಲ್ಲ ಎಂದು ವಾದಿಸಿದ್ದ. ಇದಕ್ಕೆ ಹೇಗೆ ಉತ್ತರಿಸಬೇಕು ಎನ್ನುವುದು ಆಗ ಜಾಫ್ರಿಗೆ ತಿಳಿದಿರಲಿಲ್ಲ. 2021ರಲ್ಲಿ ಹರ್ಯಾಣದಲ್ಲಿ ನಡೆದಿದ್ದ ಮಹಾ ಪಂಚಾಯತ್ನಲ್ಲಿ ಜುನೈದ್ನ ಹಂತಕ ಸಾವಿರಾರು ಹಿಂದುಗಳ ಗುಂಪಿನೆದುರು ತಾನು ಆತನನ್ನು ಕೊಂದಿದ್ದ ಬಗ್ಗೆ ಹೆಮ್ಮೆಯಿಂದ ಬಡಾಯಿ ಕೊಚ್ಚಿಕೊಂಡಿದ್ದ ಮತ್ತು ಅಲ್ಲಿ ಜಾಫ್ರಿಯವರಿಗೆ ಗೆಳೆಯ ಹೆಚ್ಚು ಸಮಯ ಗೆಳೆಯನಲ್ಲ ಎಂಬ ತನ್ನ ಉತ್ತರ ದೊರಕಿತ್ತು.

ದೇಶದ ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಬಿಂಬಿಸಿದ್ದ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ 2013ರಲ್ಲಿ ಆಗ ಹದಿಹರೆಯದವರಾಗಿದ್ದ ಜಾಫ್ರಿ ದ್ವೇಷ ಭಾಷಣದ ವೀಡಿಯೊಗಳನ್ನು ಮೊದಲ ಸಲ ವೀಕ್ಷಿಸಿದ್ದರು. ಈಗ ಮೋದಿಯವರ ಎರಡನೇ ಅಧಿಕಾರಾವಧಿಯಲ್ಲಿ ತಮ್ಮ ಯೌವನವನ್ನು ಆನಂದಿಸಬೇಕಿದ್ದ ಹದಿಹರೆಯದ ಮುಸ್ಲಿಮರು ಇಸ್ಲಾಮೋಫೋಬಿಯಾದ ಇತ್ತೀಚಿನ ಘಟನೆಗಳು ಮತ್ತು ತಳಮಟ್ಟದಲ್ಲಿ ಹಾಗೂ ಪ್ರೈಮ್ ಟೈಮ್ ಟಿವಿ ಕಾರ್ಯಕ್ರಮಗಳಲ್ಲಿ ದ್ವೇಷದ ಪ್ರಚಾರದ ಕುರಿತು ಜಾಫ್ರಿಯವರನ್ನು ಎಚ್ಚರಿಸುತ್ತಿದ್ದಾರೆ.

ಜಾಫ್ರಿ ತನ್ನ ಸಹೋದ್ಯೋಗಿ ನವೋಮಿ ಬಾರ್ಟನ್ ಜೊತೆಗೆ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷದ ಜಾಡು ಹಿಡಿಯಲು ಸುದ್ದಿ ಜಾಲತಾಣ ‘thewire ’ನ ಉಪಕ್ರಮ ‘ಹಾರ್ಟ್ಲ್ಯಾಂಡ್ ಹೇಟ್ ವಾಚ್’ (Heartland Hate Watch) ಅನ್ನು ನಡೆಸುತ್ತಿದ್ದಾರೆ. ಮುಸ್ಲಿಮರ ನರಮೇಧಕ್ಕೆ ನೀಡಲಾಗುತ್ತಿರುವ ಕರೆಗಳು ಮತ್ತು ದ್ವೇಷ ಭಾಷಣಗಳು ಹಾಗೂ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ದಾಳಿಗಳು ಹೆಚ್ಚುತ್ತಿರುವ ಭಾರತವು ಜಾಫ್ರಿಯವರ ಮೇಲೆ ಹೇರಿರುವ ಭಾವೋದ್ರೇಕವು ಅವರು ಪ್ರತಿದಿನವೂ ದ್ವೇಷ ಭಾಷಣಗಳು ಮತ್ತು ಹಿಂಸಾಚಾರದ ಜಾಡು ಹಿಡಿಯುವುದನ್ನು ಅಗತ್ಯವಾಗಿಸಿದೆ. ಇದಕ್ಕಾಗಿ ಅವರು ವಾರವೊಂದರಲ್ಲಿ ಡಝನ್ ಗಟ್ಟಲೆ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಜಗತ್ತಿನ ಮೇಲೆ ನಿಕಟ ನಿಗಾಯಿರಿಸುತ್ತಿದ್ದಾರೆ. ‘ಇದು ನಿಮ್ಮನ್ನು ಕೆಲವೊಮ್ಮೆ ಅಸ್ವಸ್ಥಗೊಳಿಸುತ್ತದೆ ಮತ್ತು ನೀವು ವಿರಾಮವನ್ನು ಪಡೆಯುವುದು ಅಗತ್ಯವಾಗುತ್ತದೆ.  ಆದಾಗ್ಯೂ ಅದನ್ನು ಬಿಟ್ಟುಬಿಡುವ ಆಯ್ಕೆ ನಮಗಿಲ್ಲ’ ಎಂದು Article 14 ಜೊತೆ ಮಾತನಾಡಿದ ಜಾಫ್ರಿ ಹೇಳಿದರು.

ಜಾಫ್ರಿಯವರ ಕಾರ್ಯ ಮತ್ತು ಅವರ ಟ್ವಿಟರ್ ಟೈಮ್ಲೈನ್ ಭಾರತೀಯ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಜೀವಂತ ದಾಖಲೆಯಾಗಿದೆ.‘2021ರಲ್ಲಿ ಭಾರತವು ತನ್ನ ಮುಸ್ಲಿಂ ಪ್ರಜೆಗಳ ಪಾಲಿಗೆ ಹೇಗಿತ್ತು ಎನ್ನುವುದನ್ನು ನನ್ನ ಮಕ್ಕಳಿಗೆ ಹೇಳಲು ನಾನು ಇಲ್ಲಿದ್ದೇನೆ. ಆ ಅರ್ಥದಲ್ಲಿ ನಾವು ಮುಂದಿನ ಪೀಳಿಗೆಗಾಗಿ ಇತಿಹಾಸವನ್ನು ದಾಖಲಿಸುತ್ತಿದ್ದೇವೆ ’ಎಂದು ಜಾಫ್ರಿ ಹೇಳಿದರು. ‘ಟೂಟ್ ರಹಿ ಹೈ ಮುಝ್ ಮೆ ಹರ್ ದಿನ್ ಇಕ್ ಮಸ್ಜಿದ್,ಇಸ್ ಬಸ್ತಿ ಮೆ ರೋಜ್ ಡಿಸೆಂಬರ್ ಆತಾ ಹೈ (ನನ್ನ ಹೃದಯದಲ್ಲಿ ಪ್ರತಿ ದಿನವೂ ಒಂದು ಮಸೀದಿ ಧ್ವಂಸಗೊಳ್ಳುತ್ತಿದೆ,ಈ ನೆಲದಲ್ಲಿ ಪ್ರತಿ ದಿನವೂ ಡಿಸೆಂಬರ್ ಆಗಿದೆ’ ಎಂಬ ಕವಿ ರಾಹತ್ ಇಂದೋರಿಯವರ ನೋವಿನ ಸಾಲುಗಳು ಅವರ ಟ್ವಿಟರ್ ಖಾತೆಯ ಬ್ಯಾನರ್ ಚಿತ್ರವಾಗಿದೆ.

ತಮ್ಮಂತಹವರ ಕಾರ್ಯವು ಜನರು ಕನಿಷ್ಠ ಮುಸ್ಲಿಮರ ವಿರುದ್ಧ ದ್ವೇಷವು ಮುಖ್ಯವಾಹಿನಿಯಲ್ಲಿ ಶಾಶ್ವತವಾಗಿದೆ ಮತ್ತು ಅಪ್ರಧಾನ ಸಮೂಹದಲ್ಲಿ ಅಲ್ಲ ಎನ್ನುವುದನ್ನು ಒಪ್ಪಿಕೊಳ್ಳುವಂತೆ ಮಾಡಿದೆ ಎನ್ನುವ ತೃಪ್ತಿ ಜಾಫ್ರಿಯವರಿಗಿದೆ. ಮುಸ್ಲಿಮರೂ ಈಗ ತಮ್ಮನ್ನು ಗುರಿಯಾಗಿಸಿಕೊಂಡಿರುವ ದ್ವೇಷವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅವರು ಹೇಳಿದರು.

ಜಾಫ್ರಿ ಅವರು ‘ಆರ್ಟಿಕಲ್ 14’ಗೆ ನೀಡಿರುವ ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ:

*ನೀವು ಎಂದಿನಿಂದ ದ್ವೇಷವನ್ನು ಗಮನಿಸಲು ಆರಂಭಿಸಿದ್ದಿರಿ ಮತ್ತು ಅದನ್ನು ಯಾವುದಾದರೂ ರೂಪದಲ್ಲಿ ದಾಖಲಿಸುವ ಅಗತ್ಯವಿದೆ ಎಂದು ಭಾವಿಸಿದ್ದಿರಿ?

ರಾಕ್ಷಸರೆಂದು ಬಿಂಬಿಸಲ್ಪಟ್ಟಿರುವ ಸಮುದಾಯದ ವ್ಯಕ್ತಿ ಪ್ರಜ್ಞಾಪೂರ್ವಕನಾದ ತಕ್ಷಣ ದ್ವೇಷವನ್ನು ಗಮನಿಸುತ್ತಾನೆ. ಹೆಚ್ಚಿನ ಮುಸ್ಲಿಂ ಹುಡುಗರಂತೆ ನನಗೂ ನನ್ನ ಹದಿಹರೆಯದಲ್ಲಿ ಅದರ ಬಗ್ಗೆ ಪ್ರಜ್ಞೆಯುಂಟಾಗಿತ್ತು. 2014ರ ಸುಮಾರಿಗೆ ಶಾಲೆಯಲ್ಲಿ ನನ್ನ ಮೇಲ್ಜಾತಿಯ ಹಿಂದು ಗೆಳೆಯರು ಪ್ರಧಾನಿ ನರೇಂದ್ರ ಮೋದಿಯವರ ‘ಅಚ್ಛೇ ದಿನ್ ’ಅಭಿಯಾನದ ಬಗ್ಗೆ ಉತ್ಸುಕರಾಗಿದ್ದಾಗ ನನ್ನಲ್ಲಿ ಅಂತಹ ಪ್ರಜ್ಞೆ ಮೂಡಲು ಆರಂಭವಾಗಿತ್ತು ಎಂದು ಭಾವಿಸಿದ್ದೇನೆ. ಆ ಆಶಾವಾದವನ್ನು ನಾನು ಹಂಚಿಕೊಂಡಿರಲಿಲ್ಲ. ಕಾಲಕ್ರಮೇಣ ನನ್ನ ಹೆಸರು ಮತ್ತು ಗುರುತಿನ ಬಗ್ಗೆ ನನ್ನಲ್ಲಿ ಆತಂಕ ಬೆಳೆಯತೊಡಗಿತ್ತು.

ನಾನು ಮಾಡುತ್ತಿರುವುದನ್ನು ಯಾವಾಗ ಆರಂಭಿಸಿದ್ದೆ ಎನ್ನುವುದು ನನಗೆ ನೆನಪಿಲ್ಲ. ಎಂಟು ವರ್ಷಗಳ ಹಿಂದೆ ಸಾಧ್ವಿ ಸರಸ್ವತಿ ಮಾಡಿದ್ದ ದ್ವೇಷಭಾಷಣದ ವೀಕ್ಷಣೆ ಅಥವಾ ದಾಖಲೀಕರಣ ನನ್ನ ಮೊದಲ ನೆನಪಾಗಿದೆ. ಸನ್ನಿಹಿತವಾಗಿರುವ ನರಮೇಧದಂತೆ ತೋರುತ್ತಿದ್ದ ವಿದ್ಯಮಾನಕ್ಕೆ ಸಾಕ್ಷಿಯಾಗುವ ಅನಿವಾರ್ಯತೆ ನಮ್ಮ ಹೆಚ್ಚಿನ ಮುಸ್ಲಿಂ ಯುವಜನರದಾಗಿತ್ತು. ಇಂತಹುದನ್ನು ಯಾವುದೇ ಯುವವ್ಯಕ್ತಿ ಅನು ಅನುಭವಿಸಬಾರದು.

*2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತೀಯ ಇಸ್ಲಾಮೋಫೋಬಿಯಾದ ಸ್ವರೂಪ ಮತ್ತು ವ್ಯಾಪ್ತಿ ಹೇಗೆ ಬದಲಾಗಿದೆ ? 

ಅವರು ಮೊದಲು ನಮ್ಮ ಜೀವನಶೈಲಿಗಾಗಿ ಬಂದರು,ನಂತರ ನಮ್ಮ ಜೀವನೋಪಾಯಗಳಿಗೆ,ಈಗ ನಮ್ಮ ಬದುಕುವ ಹಕ್ಕಿಗಾಗಿ ಬಂದಿದ್ದಾರೆ.

2014ರಲ್ಲಿ ನಮ್ಮ ಆಹಾರ ಕ್ರಮದ ಮೇಲಿನ ದಾಳಿಯಿಂದ ಹಿಡಿದು ಹೆಚ್ಚಿದ ಥಳಿಸಿ ಹತ್ಯೆಗಳು,ನಾಗರಿಕ ಹಕ್ಕುಗಳ ಮೊಟಕುಗೊಳಿಸುವಿಕೆ,ವಿದ್ಯುನ್ಮಾನ ಮತ್ತು ಟಿವಿ ಮಾಧ್ಯಮಗಳಲ್ಲಿ ನಿರಂತರ ರಾಕ್ಷಸೀಕರಣ,ಅನ್ಯಾಯದ ಮತ್ತು ಕಠೋರ ಕಾನೂನುಗಳು,ಪ್ರತ್ಯೇಕತೆ,‘ಕೊರೋನ ಜಿಹಾದ್’ಗಾಗಿ ಬಹಿಸ್ಕರಿಸಲ್ಪಟ್ಟ ನಂತರ ನಮ್ಮ ಜೀವನೋಪಾಯಗಳ ಮೇಲೆ ದಾಳಿಯವರೆಗೆ ಮತ್ತು ಈಗ ಗುಂಪು ನಮ್ಮನ್ನು ಕೊಲ್ಲುವ ಹಕ್ಕನ್ನು ಬಯಸಿದೆ.

‘ಅಚ್ಛೇ ದಿನ್’ಗೆ ಮರುಳಾಗಿದ್ದ ಮೇಲ್ಜಾತಿಗಳ ಕನಸುಗಾರರಿಗೆ ಅದು ಇಂದು ಹಣದುಬ್ಬರ ಮತ್ತು ದುಬಾರಿ ಪೆಟ್ರೋಲ್ಗೆ ಸೀಮಿತವಾಗಿದೆ,ಆದರೆ ಮುಸ್ಲಿಮರು ಈ ಅವಧಿಯಲ್ಲಿ ತಮ್ಮದೆಲ್ಲವನ್ನೂ ಕಳೆದುಕೊಂಡಿದ್ದಾರೆ.

ಅದು ಈಗ ನಿರಂತರ,ದೈನಂದಿನ ದಾಳಿಯಾಗಿದೆ. ದ್ವೇಷೋತ್ತರ ವ್ಯಾಖ್ಯಾನಕಾರರ ಪಾತ್ರಕ್ಕೆ ನಮ್ಮನ್ನು ಇಳಿಸಲಾಗಿದೆ. ಅದೃಷ್ಟವಶಾತ್ ಅದೀಗ ಬದಲಾಗುತ್ತಿದೆ ಮತ್ತು ದೀರ್ಘಕಾಲಿಕ ಪ್ರತಿಭಟನೆಗಳು ಮತ್ತು ಹೊಸ ಪೀಳಿಗೆಯ ಪತ್ರಕರ್ತರ ತಾಜಾ ಮತ್ತು ಶಕ್ತಿಯುತ ವರದಿಗಾರಿಕೆಯ ಮೂಲಕ ಹೊಸದಾಗಿ ಕೊಂಚ ಪ್ರತಿರೋಧ ಮೂಡಿಬರುತ್ತಿದೆ. ಈ ಹೊಸ ಪೀಳಿಗೆಯ ಪತ್ರಕರ್ತರಲ್ಲಿ ಮುಸ್ಲಿಮರು ಮತ್ತು ಮುಸ್ಲಿಮೇತರರೂ ಇದ್ದು,ಅವರು ಈ ದಾಳಿಗಳನ್ನು ಕಡೆಗಣಿಸಲು ಬಯಸುವುದಿಲ್ಲ.

*2014ರಲ್ಲಿ ನೀವು ಹದಿಹರೆಯದಲ್ಲಿದ್ದೀರಿ. ಈ ದಿನಗಳಲ್ಲಿ ಹದಿಹರೆಯದ ಮುಸ್ಲಿಮರೊಂದಿಗೆ ಸಂವಹನ ನಡೆಸುವ ಅವಕಾಶ ನಿಮಗೆ ದೊರಕಿದೆಯೇ? ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ?

ಈ ದಿನಗಳಲ್ಲಿ ನಾನು ಬಹಳಷ್ಟು ಹದಿಹರೆಯದ ಮುಸ್ಲಿಂ ಯುವಕರನ್ನು ಭೇಟಿಯಾಗುತ್ತಿರುತ್ತೇನೆ. ಸದಾ ಕಾಲವೂ ನಾನು ಅವರೊಂದಿಗೆ ಮಾತನಾಡುತ್ತಿರುತ್ತೇನೆ. ಅವರು ತಳಮಟ್ಟದಲ್ಲಿ ನನ್ನ ಕಣ್ಣುಗಳು ಮತ್ತು ಕಿವಿಗಳಾಗಿದ್ದಾರೆ. 2014ರ ಬಳಿಕ ಹದಿಹರೆಯದ ಮುಸ್ಲಿಮರು ಬೇಗನೆ ಪ್ರಬುದ್ಧರಾಗಿದ್ದಾರೆ. ಅವರು ವರ್ಷಗಳಲ್ಲಿ ಇನ್ನಷ್ಟು ಬೆಳೆಯುವುದಿಲ್ಲ,ಅವರು ದಶಕಗಳಲ್ಲಿ ಬೆಳೆಯುತ್ತಾರೆ. ಕೆಲವರಿಗೆ ಇಲ್ಲಿ ತಮ್ಮ ಭವಿಷ್ಯವು ಕಾಣುತ್ತಿಲ್ಲವಾದ್ದರಿಂದ ಭಾರತವನ್ನು ತೊರೆಯಲು ಬಯಸಿದ್ದಾರೆ ಮತ್ತು ಕೆಲವರು ಇಲ್ಲಿಯೇ ಉಳಿಯಲು ಬಯಸಿದ್ದಾರೆ. ಈ ಬಗ್ಗೆ ನನ್ನದು ಯಾವುದೇ ನಿರ್ಣಯವಿಲ್ಲ.

 ವಿದೇಶಗಳಿಗೆ ತೆರಳುತ್ತಿರುವ ಅಥವಾ ಭಾರತದಲ್ಲಿಯೇ ಉಳಿಯುತ್ತಿರುವ ಹೊಸ ಪೀಳಿಗೆಯ ಮುಸ್ಲಿಂ ಯುವಜನರಲ್ಲಿಯ ಭಾವನೆಗಳು ಬಹುಶಃ ಹಿಂದಿನ ಪೀಳಿಗೆಗಿಂತ ಭಿನ್ನವಾಗಿದೆ. ಗಂಗಾ ಜಮುನಿ ಸಂಸ್ಕೃತಿಯ ಬಗ್ಗೆ ಮಾತನಾಡುವಾಗೆಲ್ಲ ಅವರು ಮುಸ್ಲಿಂ ವಿರೋಧಿ ದ್ವೇಷ ಮತ್ತು ಹಿಂಸಾಚಾರವನ್ನು ಸಕ್ರಿಯವಾಗಿ ಪ್ರತಿರೋಧಿಸುತ್ತಿದ್ದಾರೆ ಮತ್ತು ಅದರ ಬಗ್ಗೆ ಅರಿವನ್ನು ಮೂಡಿಸುತ್ತಿದ್ದಾರೆ.

ಅವರು ಸಮಾನತೆ,ಉತ್ತರದಾಯಿತ್ವ ಮತ್ತು ನ್ಯಾಯವನ್ನು ಬಯಸುತ್ತಿದ್ದಾರೆ.

*2014ರ ನಂತರದ ವರ್ಷಗಳಲ್ಲಿ ನಿಮ್ಮ ಆಲೋಚನಾ ವಿಧಾನವನ್ನು ಬದಲಿಸಿದ 2-3 ಪ್ರಮುಖ ಘಟನೆಗಳ ಬಗ್ಗೆ ನೀವು ಏನು ಹೇಳುತ್ತಿರಿ?

ಕಳೆದ ಆರೇಳು ವರ್ಷಗಳಲ್ಲಿ ಒಳ್ಳೆಯದು ಮತ್ತು ಕೆಡುಕಿನ ಪ್ರಮಾಣವನ್ನು ನೋಡಿದರೆ ಯಾವುದೇ ನಿರ್ದಿಷ್ಟ ಘಟನೆಗಳನ್ನು ಬೆಟ್ಟು ಮಾಡುವುದು ಕಷ್ಟವಾಗುತ್ತದೆ. ಪ್ರತಿಯೊಂದೂ ಹತ್ಯೆಯು ನಿಮ್ಮನ್ನು ಕ್ರುದ್ಧರನ್ನಾಗಿಸುತ್ತದೆ. ನನ್ನ ಒಂದು ಭಾಗವು ಜುನೈದ್ ಮತ್ತು ಫೈಝಾನ್ ಅವರೊಂದಿಗೇ ಸತ್ತು ಹೋಗಿದೆ.

ರಾಷ್ಟ್ರಗೀತೆ ಯಾವಾಗಲೂ ನನ್ನಲ್ಲಿ ರೋಮಾಂಚನವನ್ನುಂಟು ಮಾಡುತ್ತಿತ್ತು. ಆದರೆ ರಾಷ್ಟ್ರಗೀತೆಯನ್ನು ಹಾಡುವಂತೆ ಪೊಲೀಸರು ಬಲವಂತಗೊಳಿಸಿದ ಬಳಿಕ ಫೈಝಾನ್ ಮತ್ತು ಆತನ ಸ್ನೇಹಿತರನ್ನು ಹತ್ಯೆ ಮಾಡಿದ್ದನ್ನು ನೋಡಿದ ನಂತರ ಅಂತಹ ರೋಮಾಂಚನ ನನ್ನಲ್ಲಿ ಮೂಡುತ್ತಿಲ್ಲ. ಪ್ರತಿಬಾರಿಯೂ ರಾಷ್ಟ್ರಗೀತೆಯನ್ನು ಕೇಳಿದಾಗ ಫೈಝಾನ್,ಆತನ ಅಮಾಯಕ ರಕ್ತ,ಛಿದ್ರಗೊಂಡ ಆತನ ಕುಟುಂಬ ನನಗೆ ನೆನಪಾಗುತ್ತದೆ ಮತ್ತು ಸಮವಸ್ತ್ರದಲ್ಲಿರುವ ಹಂತಕರನ್ನು ಕಾನೂನು ಮುಟ್ಟಿಲ್ಲ. ನಾನು ಈ ದೇಶವನ್ನು ತುಂಬ ಪ್ರೀತಿಸಿದ್ದೇನೆ,ಆದರೆ ಅದು ನನ್ನ ಸೋದರರಾದ ಜುನೈದ್ ಮತ್ತು ಫೈಝಾನ್ ಅವರಿಗೆ ಪ್ರೀತಿ ಅಗತ್ಯವಾಗಿದ್ದಾಗ ಅದನ್ನು ನೀಡಿರಲಿಲ್ಲ. ಹೀಗಾಗಿ ಪ್ರತಿಸ್ಪಂದನವಿಲ್ಲದ ಪ್ರೀತಿಯನ್ನು ನಾನೀಗ ನಂಬುತ್ತಿಲ್ಲ. ಅಲ್ಲದೆ ನಾನು ದೇಶಕ್ಕಾಗಿ ನನ್ನ ಪ್ರೀತಿಯನ್ನು ಏಕೆ ಸಾಬೀತು ಮಾಡಬೇಕು? ಭಾರತವೇಕೆ ನನ್ನ ಬಗ್ಗೆ ತನ್ನ ಪ್ರೀತಿಯನ್ನು ಸಾಬೀತು ಮಾಡಬಾರದು?

ಸಿಎಎ ವಿರೋಧಿ ಪ್ರತಿಭಟನೆಗಳು ಮುಸ್ಲಿಮರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿವೆ ಎಂದು ನಾನು ಭಾವಿಸಿದ್ದೇನೆ. ಪ್ರತಿಭಟನೆಗಳು ತೀಕ್ಷ್ಣ ಮತ್ತು ಬುದ್ಧಿವಂತ ಜನರ,ವಿಶೇಷವಾಗಿ ಮುಸ್ಲಿಮರ ನಡುವೆ ಸಂಪರ್ಕಗಳನ್ನು ಸಾಧ್ಯವಾಗಿಸಿದೆ. ಅವರ ಚುರುಕುತನದ ಮುಂದೆ ಸಮುದಾಯದ ಹಿಂದಿನ ನಾಯಕರು ಪೊಳ್ಳಾಗಿ ಕಾಣುತ್ತಿದ್ದಾರೆ.

*ಜುನೈದ್ ಹತ್ಯೆ ನಿಮ್ಮ ಮೇಲೆ ಹೇಗೆ ಪರಿಣಾಮವನ್ನು ಬೀರಿತ್ತು?

ಜುನೈದ್ ಹತ್ಯೆ ನನ್ನ ಪಾಲಿಗೆ ಅತ್ಯಂತ ವೈಯಕ್ತಿಕವಾಗಿತ್ತು. ಆತ ಲವಲವಿಕೆ ಹೊಂದಿದ್ದ, ನನಗಿಂತ ಕೊಂಚ ಚಿಕ್ಕವನಾಗಿದ್ದ. ನಾಲ್ಕು ವರ್ಷಗಳ ಹಿಂದೆ ನನ್ನ ಒಳ್ಳೆಯ ಸ್ನೇಹಿತನೋರ್ವ ಜುನೈದ್ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದ. ಅದು ದ್ವೇಷಾಪರಾಧ ಎಂದು ಸಾಬೀತುಗೊಳಿಸುವಂತೆ ಆತ ನನಗೆ ಸವಾಲು ಹಾಕಿದ್ದ ಮತ್ತು ನನ್ನ ಬಳಿ ಉತ್ತರವಿರಲಿಲ್ಲ. ಜೂನ್ 2021ರಲ್ಲಿ ಹರ್ಯಾಣದಲ್ಲಿ ನಡೆದಿದ್ದ ಮುಸ್ಲಿಂ ವಿರೋಧಿ ಮಹಾ ಪಂಚಾಯತ್ನಲ್ಲಿ ಜುನೈದ್ ನ ಹಂತಕ ಕ್ಯಾಮೆರಾದೆದುರು ಸಾವಿರಾರು ಹಿಂದುಗಳ ಗುಂಪಿನ ಬಳಿ ಆತನ ಕೊಲೆಯ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದ. ಮಹಾ ಪಂಚಾತಯತ್ ಅನ್ನು ವರದಿ ಮಾಡಿದಾಗ ನಾಲ್ಕು ವರ್ಷಗಳ ಹಿಂದೆ ನನ್ನ ಗೆಳೆಯ ಕೇಳಿದ್ದ ಪ್ರಶ್ನೆಗೆ ಉತ್ತರ ನನಗೆ ದೊರಕಿತ್ತು. ಆದರೆ ಆತ ಈಗ ನನ್ನ ಗೆಳೆಯನಾಗಿಲ್ಲ.

*ನಾಸೀರುದ್ದೀನ್ ಶಾ ಮತ್ತು ಜಾವೇದ್ ಅಖ್ತರ್ರಂತಹ ಹಿರಿಯ,ಉದಾರವಾದಿ ಮುಸ್ಲಿಮರ ಬಗ್ಗೆ ನಿಮ್ಮನ್ನು ಯಾವ ಚಿಂತೆ ಕಾಡುತ್ತಿದೆ?

ಮುಸ್ಲಿಮರಿಗೆ ಅಗತ್ಯವಾದಾಗ ಅವರು ಪ್ರತಿಕ್ರಿಯಿಸುವುದಿಲ್ಲ. ಅವರು ತಾಲಿಬಾನ್ ಬಗ್ಗೆ ನಮಗೆ ಸುಲಭವಾಗಿ ಪಾಠ ಕಲಿಸುತ್ತಾರೆ,ಆದರೆ ಮುಸ್ಲಿಮರ ವಿರುದ್ಧ ದಿನವೂ ನಡೆಯುತ್ತಿರುವ ದ್ವೇಷಾಪರಾಧಗಳ ಬಗ್ಗೆ ಅವರು ವೌನವಾಗಿರುತ್ತಾರೆ. ನಾಸ್ತಿಕರು ಎಂದು ಹೇಳಿಕೊಳ್ಳುವ,ಆದರೂ ಸದಾ ಕಾಲ ಮುಸ್ಲಿಮರ ಪರವಾಗಿ ಮಾತನಾಡುವ ಹಿರಿಯ ಉದಾರವಾದಿ ಮುಸ್ಲಿಂ ಧ್ವನಿಗಳು ಸಮುದಾಯದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಮತ್ತು ನಮ್ಮ ಕಷ್ಟಗಳನ್ನು ಪ್ರಾಮಾಣಿಕವಾಗಿ ಹಿಂದುಗಳಿಗೆ ತಿಳಿಸಲು ಅವರಿಗೆಂದೂ ಸಾಧ್ಯವಾಗುವುದಿಲ್ಲ,ಹೀಗಾಗಿ ಅವರು ಸಮಸ್ಯೆಯ ಭಾಗವಾಗಿದ್ದಾರೆ.

2016ರಲ್ಲಿ ಜಾವೇದ್ ಅಖ್ತರ್ ಅವರು ಭಾರತ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ಅಮಾಯಕ ಮುಸ್ಲಿಮರನ್ನು ಥಳಿಸಿ ಹತ್ಯೆಗೈದಿದ್ದ ಗುಂಪುಗಳಿಗೆ ಅಸದುದ್ದೀನ್ ಉವೈಸಿಯವರನ್ನು ಹೋಲಿಸಿದ್ದರು. 2021ರಲ್ಲಿ ಯುವ ಮುಸ್ಲಿಮರು ಅಖ್ತರ್ ಇಂತಹ ಅಭಿಪ್ರಾಯದೊಂದಿಗೆ ಪಾರಾಗಲು ಬಿಡುವುದಿಲ್ಲ.

ಧಾರ್ಮಿಕ ಮತಾಂಧತೆ ಮತ್ತು ಭೀತಿವಾದದ ವಿರುದ್ಧ ಎದ್ದು ನಿಲ್ಲುವ ಮಾಮೂಲು ನಾಸ್ತಿಕರು ಧಾರ್ಮಿಕ ಭಯೋತ್ಪಾದನೆಯ ವಿರುದ್ಧ ಪಣವನ್ನು ತೊಡುವಾಗ ಕೈಗಳಲ್ಲಿ ಗಂಗಾಜಲವನ್ನು ಹಿಡಿದುಕೊಂಡಿರುವುದಿಲ್ಲ,ಆದರೆ ಜಾವೇದ್ ಸಾಹೇಬರು ಭಿನ್ನವಾಗಿದ್ದಾರೆ. ಅವರು ಭಾರತ ಮಾತಾ ಪರಿಕಲ್ಪನೆಯನ್ನು ನಂಬುತ್ತಾರೆ. ಬಾಬ್ರಿ ಮಸೀದಿಯನ್ನು ಅಪರಾಧಿಕವಾಗಿ ನೆಲಸಮಗೊಳಿಸಿದ ಬಳಿಕ ಮುಸ್ಲಿಮರಿಗೆ ಹಂಚಿಕೆ ಮಾಡಲಾಗಿರುವ ಐದು ಎಕರೆ ಜಾಗದಲ್ಲಿ ಶಾಲೆ ಅಥವಾ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಅವರು ಹೇಳುತ್ತಾರೆ. 

ಆದರೆ ಅವರ ವಾದವು ಧಾರ್ಮಿಕ ಸ್ಥಳಗಳನ್ನು ನೆಲಸಮಗೊಳಿಸುತ್ತಿರುವ ಗುಂಪುಗಳಿಗೆ ತರ್ಕಬದ್ಧತೆಯನ್ನು ನೀಡುತ್ತದೆ ಮತ್ತು ತಮ್ಮ ಕೃತ್ಯವು ಮುಸ್ಲಿಮರಿಗೆ ಹೆಚ್ಚು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನೀಡುವುದರಿಂದ ಎಲ್ಲ ಫ್ಯಾಸಿಸ್ಟ್ ಗುಂಪುಗಳು ಇನ್ನಷ್ಟು ಮಸೀದಿಗಳನ್ನು ಅಪವಿತ್ರಗೊಳಿಸಬಹುದು ಎನ್ನುವುದನ್ನು ಸೂಚಿಸಲು ಬಳಕೆಯಾಗುತ್ತದೆ ಎಂದು ಬೆಟ್ಟು ಮಾಡಿದಾಗ ಜಾವೇದ್ ಸಾಹೇಬರು ವೌನವಾಗಿರುತ್ತಾರೆ. 

ಇತ್ತೀಚಿಗೆ ನಾಸೀರ್ ಸಾಹೇಬರು ಭಾರತೀಯ ಮುಸ್ಲಿಮರು ವಿಶ್ವಾದ್ಯಂತದ ಎಲ್ಲ ಮುಸ್ಲಿಮರಷ್ಟು ಉಗ್ರವಾದಿಗಳಲ್ಲ ಎಂಬ ಬಗ್ಗೆ ಮಾತನಾಡಿದ್ದರು. ಭಾರತೀಯ ಮುಸ್ಲಿಮರು ಕಡಿಮೆ ಮೂಲಭೂತವಾದಿಗಳಾಗಿದ್ದಾರೆ ಎಂಬ ಈ ಪರಿಕಲ್ಪನೆಯು ನಾವು ಹಿಂದು ಬಹುಸಂಖ್ಯಾತರಿಂದ ಸಾಂಸ್ಕೃತಿಕ ಪ್ರಭಾವಕ್ಕೆ ಒಳಗಾಗಿದ್ದೇವೆ ಎಂಬ ವಿಕೃತ ಕಲ್ಪನೆಯಿಂದ ಬಂದಿದೆ ಮತ್ತು ನಾಸೀರ್ ಸಾಹೇಬರ ಈ ಮಾತನ್ನು ನಾನು ಎಳ್ಳಷ್ಟೂ ಒಪ್ಪುವುದಿಲ್ಲ. ಪಾಕಿಸ್ತಾನಿ ಹಿಂದುಗಳು ಅಥವಾ ಬಾಂಗ್ಲಾದೇಶಿ ಹಿಂದುಗಳು ಅಲ್ಲಿಯ ಮುಸ್ಲಿಮರನ್ನು ಕೊಲ್ಲುವುದಿಲ್ಲ,ಹೀಗಾಗಿ ಅವರು ಭಾರತೀಯ ಹಿಂದುಗಳಿಗಿಂತ ಹೆಚ್ಚು ಶಾಂತಿಪ್ರಿಯರಲ್ಲವೇ? ವ್ಯಾಖ್ಯಾನದಂತೆ ಅಲ್ಪಸಂಖ್ಯಾತರು ಭಾರತದಲ್ಲಿ ಅಥವಾ ಬೇರೆ ಕಡೆಗಳಲ್ಲಿ ಬಹುಸಂಖ್ಯಾಕರಿಗಿಂತ ಹೆಚ್ಚು ಶಾಂತಿಪ್ರಿಯರಾಗಿದ್ದಾರೆ.

 ಇಂತಹ ಉದಾರವಾದಿ ಮುಸ್ಲಿಮರು ಈಗ ಸ್ವತಃ ಬಹುಸಂಖ್ಯಾತ ಗುಂಪುಗಳ ಪಾಲಿಗೆ ಸ್ವೀಕಾರಾರ್ಹವಲ್ಲದ ದೇಶದ್ರೋಹಿಗಳಾಗಿದ್ದರೂ ಮುಸ್ಲಿಮರ ಬಗ್ಗೆ ಇಂತಹ ಕಲ್ಪನೆಗಳನ್ನು ಸೃಷ್ಟಿಸುತ್ತಾರೆ.

 *ಕಳೆದ ವರ್ಷಗಳ ನಿರಂತರ ಇಸ್ಲಾಮೋಫೋಬಿಯಾಕ್ಕೆ ಭಾರತೀಯ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಿದ್ದಾರೆ?

ಘನತೆಯಿಂದ,ಗೌರವದಿಂದ,ತಾಳ್ಮೆಯಿಂದ. ಈ ದ್ವೇಷ ಮತ್ತು ಹಿಂಸೆಯನ್ನು ಸುಮ್ಮನೆ ಒಪ್ಪಿಕೊಳ್ಳದಿರುವ ಇಚ್ಛೆಯೊಂದಿಗೆ. ರಾಜಕೀಯ ಪ್ರತಿಪಕ್ಷ ಮತ್ತು ಬಹುಸಂಖ್ಯಾತ ಸಮುದಾಯ ಎದ್ದು ನಿಲ್ಲುವುದನ್ನು ಅವರು ಎದುರು ನೋಡುತ್ತಿದ್ದರು,ಆದರೆ ಅವು ವೌನ ಮುರಿಯುವುದಕ್ಕಾಗಿ ಅವರು ಇನ್ನು ಕಾಯುವುದಿಲ್ಲ. ದ್ವೇಷಕ್ಕೆ ದ್ವೇಷದಿಂದ ಉತ್ತರಿಸಲು ಭಾರತೀಯ ಮುಸ್ಲಿಮರು ನಿರಾಕರಿಸಿದ್ದಾರೆ ಎನ್ನುವುದು ನಂಬಲಾಗದ ಸಂಗತಿ. ಆದಾಗ್ಯೂ ಅವರು ಈಗ ಬಹುಸಂಖ್ಯಾತರಿಂದ ನಿಂದನೆಯನ್ನು ಒಪ್ಪಿಕೊಳ್ಳುವುದಿಲ್ಲ.

ಮುಸ್ಲಿಮರು ಅವಮಾನಗಳ ನಡುವೆಯೂ ಹೊಂದಿಕೊಳ್ಳಲು ಪ್ರಯತ್ನಿಸಿದ್ದನ್ನು ನಾನು ನೋಡಿದ್ದೇನೆ. ಅವರು ಇನ್ನು ಮುಂದೆ ಹಾಗೆ ಮಾಡುವುದಿಲ್ಲ ‘ಪಾಕಿಸ್ತಾನಕ್ಕೆ ಹೋಗಿ’ ಎಂಬ ಪ್ರತಿ ಅವಹೇಳನಕ್ಕೂ ಈಗ ‘ಹಿಂದುಸ್ಥಾನವು ನಿಮ್ಮಪ್ಪನದೇನು’ ಎಂಬ ಉತ್ತರವಿದೆ. ಇದು ನಿಜಕ್ಕೂ ಅದ್ಭುತ.

ಯುವ ಮುಸ್ಲಿಮರ ಗಣನೀಯ ವರ್ಗವು ತಮ್ಮ ಹೆತ್ತವರು ಮತ್ತು ಅಜ್ಜ-ಅಜ್ಜಿ ಹೊತ್ತಿದ್ದ ವಿಭಜನೆಯ ಅಪರಾಧದ ಕಳಂಕವನ್ನು ತೊಲಗಿಸುವಲ್ಲಿ ಕೊನೆಗೂ ಸಫಲರಾಗಿದ್ದಾರೆ. ಬಹುಸಂಖ್ಯಾತ ದೇಶಭಕ್ತಿಯ ಸರ್ಟಿಫಿಕೇಟ್ನ ವಿತರಕರು ನಿಗದಿಗೊಳಿಸಿರುವ ಯಾವುದೇ ಮಾನದಂಡವಿಲ್ಲದೆ ಅವರು ತಮ್ಮ ಭಾರತೀಯ ಗುರುತನ್ನು ಪ್ರತಿಪಾದಿಸುತ್ತಿದ್ದಾರೆ. ಇಂದಲ್ಲ ನಾಳೆ ಇದು ಇಡೀ ಸಮುದಾಯದ ಭಾವನೆಯಾಗಲಿದೆ.

*ಭಾರತೀಯ ಮುಸ್ಲಿಮರ ಮಾಧ್ಯಮಗಳ ಬಳಕೆ ಮಾದರಿಗಳು ಬದಲಾಗಿವೆಯೇ?

ಮುಸ್ಲಿಮರೇಕೆ ಸುರೇಶ ಚಾವಂಕೆ ಅಥವಾ ಅರ್ನಾಬ್ ಗೋಸ್ವಾಮಿಯ ಕಾರ್ಯಕ್ರಮಗಳನ್ನು ವೀಕ್ಷಿಸಬೇಕು? ಟಿವಿ ವಾಹಿನಿಗಳಲ್ಲಿ ಮುಸ್ಲಿಂ ವಿರೋಧಿ ಚರ್ಚೆಗಳು ಆರಂಭಗೊಂಡ ಬೆನ್ನಿಗೇ ಮಧ್ಯಮ ವರ್ಗದ ಮುಸ್ಲಿಮರು ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸಲು ಆರಂಭಿಸಿದ್ದರು. ಒಳ್ಳೆಯ ವಿಷಯವಂದರೆ ಮುಸ್ಲಿಂ ವೀಕ್ಷಕರ ನಿರೀಕ್ಷೆಗಳು ತ್ವರಿತವಾಗಿ ಬೆಳೆಯುತ್ತಿವೆ. ಅವರು ಯೂಟ್ಯೂಬರ್ಗಳು ಮುಸ್ಲಿಂ ವಿರೋಧಿ ಹಿಂಸೆಯನ್ನು ಕಡೆಗಣಿಸಿದರೆ ಅವರನ್ನೂ ಬಿಡುವುದಿಲ್ಲ. ಮಿ.ರಿಯಾಕ್ಷನ್ವಾಲಾ,ಹಿಂದುಸ್ಥಾನ ಗೆಜೆಟ್,ಕ್ಲೇರಿಯನ್ ಇಂಡಿಯಾ ಮತ್ತು ಮಕ್ತೂಬ್ ಮೀಡಿಯಾದಂತಹ ಮುಸ್ಲಿಂ ಪತ್ರಕರ್ತರ ಹೊಸ ಪೀಳಿಗೆಯೂ ಮುಸ್ಲಿಮರ ಫೋನ್ ಕರೆಗಳಿಗೆ ಅವಕಾಶ ಕಲ್ಪಿಸಿದೆ.

ಅವರು ತಮಗೆ ಕಿರುಕುಳಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಈಗ ದಲಿತರು ತಮ್ಮ ಮೀನಾ ಕೊತ್ವಾಲ್ಗಳನ್ನು ಮತ್ತು ಮುಸ್ಲಿಮರು ತಮ್ಮ ಮುಹಮ್ಮದ್ ಝುಬೈರ್ ಗಳನ್ನು ಹೊಂದಿದ್ದಾರೆ. ಇತರರು ಹೇಗೆ ಪ್ರತಿರೋಧಿಸಬೇಕು ಮತ್ತು ಅದನ್ನು ಹೇಗೆ ಪಟ್ಟು ಬಿಡದೆ ದಾಖಲಿಸಬೇಕು ಎನ್ನುವುದನ್ನು ಇತಿಹಾಸದ ಪುಟಗಳಿಗೆ ಸೇರುತ್ತಿರುವ ಈ ನಾಯಕರಿಂದ ಕಲಿತುಕೊಳ್ಳುವ ಅಗತ್ಯವಿದೆ.

*ನಿಮ್ಮ ಕಾರ್ಯವು ಯಾವ ಪರಿಣಾಮವನ್ನು ಬೀರಲಿದೆ ಎಂದು ನೀವು ಆಶಿಸಿದ್ದೀರಿ?

ಕಳೆದ ಮೂರ್ನಾಲ್ಕು ವರ್ಷಗಳಿಂದ ನಾನು ಮತ್ತು ನನ್ನ ಹಲವಾರು ಸ್ನೇಹಿತರು ಮಾಡುತ್ತಿರುವ ಕೆಲಸವು ಬಹುಸಂಖ್ಯಾತ ಹಿಂಸಾಚಾರದ ಮೇಲಿನ ಚರ್ಚೆಗಳ ಸ್ವರೂಪಗಳನ್ನು ಬದಲಿಸಿವೆ. ನಮ್ಮ ಕೊಲೆಗಳು ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದ್ದಾಗಿವೆ,ನಮ್ಮ ಅವಹೇಳನಗಳನ್ನು ಮುಚ್ಚಿಕೊಳ್ಳುವುದು ನಮ್ಮ ಹಂತಕರಿಗೆ ಲಾಭವನ್ನು ನೀಡಲಿದೆ ಮತ್ತು ಈ ಹುಚ್ಚುತನವು ನಮ್ಮನ್ನು ಟೊಳ್ಳಾಗಿಸುತ್ತಿದೆ ಎನ್ನುವುದು ಪ್ರತಿಯೊಬ್ಬರಿಗೂ ಅರ್ಥವಾಗುವವರೆಗೆ ಕಾಯಬೇಕು ಎನ್ನುವುದರ ಬಗ್ಗೆ ಗಣ್ಯ ಮೇಲ್ಜಾತಿಗಳ ಪ್ರಗತಿಪರರಿಂದ ಪಾಠ ನಮಗೆ ಬೇಕಿಲ್ಲ. ನನ್ನ ಕೆಲಸವು ಭಾರತದಲ್ಲಿ ಕ್ರೈಸ್ತರು,ದಲಿತರು ಮತ್ತು ಮುಸ್ಲಿಮರ ಹಕ್ಕುಗಳ ಉಲ್ಲಂಘನೆಯಾಗುತ್ತಿರುವಾಗ ಅದನ್ನು ಕಡೆಗಣಿಸದಿರಲು ಮುಸ್ಲಿಂ ಮತ್ತು ಮುಸ್ಲಿಮೇತರ ಯುವ ಪತ್ರಕರ್ತರಿಗೆ ಸ್ಫೂರ್ತಿಯನ್ನು ನೀಡುತ್ತದೆ ಎಂದು ನಾನು ಆಶಿಸಿದ್ದೇನೆ.

ನನ್ನ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿರುವ ಕೆಲವು ಹಿತೈಷಿಗಳು ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ವರದಿ ಮಾಡದಂತೆ ನನಗೆ ಸಲಹೆ ನೀಡುತ್ತಿರುತ್ತಾರೆ. ಹಿಂಸಾಚಾರದ ಇಂತಹ ಕೃತ್ಯಗಳನ್ನು ಕಡೆಗಣಿಸುವಂತೆ ಅವರು ನನಗೆ ಹೇಳುತ್ತಿರುತ್ತಾರೆ,ಏಕೆಂದರೆ ಇಂತಹ ನಿರೂಪಣೆಗಳನ್ನು ಹರಡುವುದರಿಂದ ಬಿಜೆಪಿ ಮತ್ತು ಬಲಪಂಥೀಯ ಗುಂಪುಗಳು ತಮ್ಮ ಸಂದೇಶ ಮತ್ತು ಗುರಿಯನ್ನು ಪ್ರಸಾರ ಮಾಡಬಹುದು ಎಂದು ಅವರು ನಂಬಿದ್ದಾರೆ. ಇವೆಲ್ಲ ಸಮಾಜದ ಅಂಚಿನಲ್ಲಿರುವವರ ಕೆಲಸ ಎಂದು ಅವರು ಹೇಳುತ್ತಾರೆ,ಆದರೆ ಅದು ಸುಳ್ಳು. ಓರ್ವ ಪರ್ತಕರ್ತನಾಗಿ ಹಾಗೆ ಮಾಡುವುದು ನನ್ನ ಕೆಲಸವಲ್ಲ.

*ನೀವು ಭರವಸೆಯನ್ನು ಎಲ್ಲಿ ನೋಡುತ್ತಿದ್ದೀರಿ?

  ಹೊಸ ಅಭಿಪ್ರಾಯಗಳ ಯುವ ಮುಸ್ಲಿಮರು,ದಲಿತರು ಮತ್ತು ಹಿಂದುಗಳ ಮಧ್ಯಮ ವರ್ಗದಲ್ಲಿ ನನಗೆ ಭರವಸೆಯು ಕಾಣುತ್ತಿದೆ. ನಕಲಿ ಸಮಾನಾಂತರಗಳನ್ನು ತಿರಸ್ಕರಿಸುವ,ಸ್ಪಷ್ಟ,ಬುದ್ಧಿವಂತ ಮತ್ತು ಸಂವೇದನಾಶೀಲರಾಗಿರುವ,ಮಾಹಿತಿಯನ್ನು ಪಡೆಯಲು ಬಯಸುವ,ನ್ಯಾಯವನ್ನು ಬಯಸುವ ಮತ್ತು ಸೇಡನ್ನು ಬಯಸದ ಸಾವಿರ ಸಾವಿರ ಜನರು ಈಗ ನಮ್ಮಲ್ಲಿದ್ದಾರೆ.

 ಅವರು ವಾಸ್ತವಗಳಿಗೆ ಮುಖ ತಿರುಗಿಸದಂತೆ ಉದಾರವಾದಿ ಪರ್ಯಾಯ ಮಾಧ್ಯಮಗಳ ಮೇಲೆ ಒತ್ತಡ ಹೇರಿದ್ದಾರೆ. ಈ ಹಿಂಸಾಚಾರವನ್ನು ತರ್ಕಬದ್ಧಗೊಳಿಸುವ ಅವರ ಶಬ್ದಕೋಶವನ್ನು ಬದಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ನಾನು ನೋವು ಮತ್ತು ಸಿಟ್ಟಿನಲ್ಲಿದ್ದಾಗ ಬೇಷರತ್ತಾಗಿ ನನ್ನ ಅಹವಾಲನ್ನು ಆಲಿಸುವ ನನ್ನ ಮುಸ್ಲಿಮೇತರ ಪ್ರೊಫೆಸರ್ಗಳು,ಸ್ನೇಹಿತರು ಮತ್ತು ಮಾರ್ಗದರ್ಶಕರಲ್ಲಿ ನಾನು ಭರವಸೆಯನ್ನು ಕಾಣುತ್ತಿದ್ದೇನೆ. ಉತ್ತಮ ಹೋರಾಟವನ್ನು ನಡೆಸುತ್ತಿರುವ ಮತ್ತು ನನ್ನಂತಹ ವರದಿಗಾರರಿಗೆ ನಾವು ಮಾಡುತ್ತಿರುವುದನ್ನು ಮಾಡಲು ಸಾಧ್ಯವಾಗಿಸಿರುವ ನನ್ನ ಮುಸ್ಲಿಮೇತರ ಸಂಪಾದಕರಲ್ಲಿ ನಾನು ಭರವಸೆಯನ್ನು ಕಾಣುತ್ತಿದ್ದೇನೆ. ಜೈಶ್ರೀರಾಮ್ ಘೋಷಣೆಯನ್ನು ಕೂಗುತ್ತಿದ್ದ ಗುಂಪಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಮತ್ತು ದೈಹಿಕ ಹಾಗೂ ಆರ್ಥಿಕ ನಷ್ಟವನ್ನು ಅನುಭವಿಸಿಯೂ ತನ್ನ ಮುಸ್ಲಿಂ ಸಹೋದ್ಯೋಗಿಯನ್ನು ರಕ್ಷಿಸಿದ್ದ ವೃದ್ಧ ಹಿಂದು ತರಕಾರಿ ವ್ಯಾಪಾರಿ ರಾಮಜಿಯಲ್ಲಿ ನಾನು ಭರವಸೆಯನ್ನು ಕಾಣುತ್ತಿದ್ದೇನೆ.

ನಮ್ಮ ನರಮೇಧಕ್ಕೆ ಕರೆ ನೀಡುತ್ತಿರುವವರಿಗೆ 200 ಮಿಲಿಯನ್ ಜನರನ್ನು ಕೊಲ್ಲುವುದು ಅಸಾಧ್ಯ ಎನ್ನುವುದು ಗೊತ್ತಿದೆ. ಅವರು ಕೇವಲ ನಮ್ಮನ್ನು ಎರಡನೆಯ ದರ್ಜೆಯ ನಾಗರಿಕರನ್ನಾಗಿಸಲು ಮತ್ತು ನ್ಯಾಯ ಹಾಗೂ ಸಮಾನತೆಗಾಗಿ ಹೋರಾಡುವ ನಮ್ಮ ಇಚ್ಛಾಶಕ್ತಿಯನ್ನು ವಿಫಲಗೊಳಿಸಲು ಬಯಸಿದ್ದಾರೆ.

ಇಂತಹ ತೃಪ್ತಿಯನ್ನು ಅವರಿಗೆ ನೀಡಲು ಮುಸ್ಲಿಮರು ನಿರಾಕರಿಸುತ್ತಿದ್ದಾರೆ ಎನ್ನುವದು ಭರವಸೆಯ ಆಶಾಕಿರಣವಾಗಿದೆ.

ಕೃಪೆ: Article14.com

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top