‘ಸಾವಿತ್ರಿಬಾಯಿ ಫುಲೆ ಮತ್ತು ನಾವು’
-

ಶತಮಾನಗಳ ಕಾಲ ಭಾರತದ ಸಮಾಜ ತಳಸಮುದಾಯಗಳಿಗೆ ಅಕ್ಷರ ಕಲಿಯುವ ಅವಕಾಶವನ್ನು ನೀಡದೆ ವಂಚಿಸಿತ್ತು. ಸ್ವಾತಂತ್ರ ಸಿಕ್ಕ ನಂತರದಲ್ಲಿ ಸಂವಿಧಾನದ ಕಾರಣಕ್ಕೆ ಎಲ್ಲರಿಗೂ ಅಕ್ಷರ ಕಲಿಯುವ ಅವಕಾಶ ಸಿಕ್ಕಿತು. ಆದರೆ ಮೇಲ್ಜಾತಿಯ ಹಿಡಿತದಲ್ಲೇ ಇರುವ ಭಾರತದ ವಿಶ್ವವಿದ್ಯಾನಿಲಯಗಳು ತಳಸಮುದಾಯದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳ ಒಳಗೆ ಬರದಂತೆ ತಡೆಯಲು ವ್ಯವಸ್ಥಿತವಾಗಿ ಸಂಚು ಮಾಡುತ್ತ ಬಂದಿವೆ. ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಳಸಮುದಾಯಗಳ ಯುವಕ ಯುವತಿಯರು ತಮ್ಮ ಜಾತಿಯ ಕಾರಣಕ್ಕೆ ಅನುಭವಿಸುವ ಅನ್ಯಾಯ, ಶೋಷಣೆಗಳನ್ನು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮಲನ ಸಾವು ದೊಡ್ಡ ಮಟ್ಟದಲ್ಲಿ ಎತ್ತಿ ತೋರಿಸಿತು. ಜಾತಿ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ ರೋಹಿತ್ ವೇಮಲನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಯಿತು. ದೇಶದ ಬಹುಜನರು ರೋಹಿತ್ ಸಾವನ್ನು ‘ಸಾಂಸ್ಥಿಕ ಹತ್ಯೆ’ ಎಂದು ಕರೆದು ದೇಶದಾತ್ಯಂತ ಪ್ರತಿಭಟನೆಗಳನ್ನು ನಡೆಸಿದರು. ರೋಹಿತ್ ಸಾವಿನ ಕುರಿತು ಹಿರಿಯ ಲೇಖಕ ದೇವನೂರ ಮಹಾದೇವ ‘‘ದೇಶದಲ್ಲಿರುವ ಕುಹಕದ ವಾತಾವರಣಕ್ಕೆ ವೇಮುಲಾ ಬಲಿಯಾಗಿದ್ದಾನೆ. ಸಂವೇದನಾಶೀಲತೆ ಹೊಂದಿದ್ದ ರೋಹಿತ್ ಜಾತಿ, ಭೇದ ಮಾಡುವವರಿಂದ ನೊಂದು ಸಾವಿಗೆ ಶರಣಾಗಿದ್ದಾನೆ. ಡೆತ್ ನೋಟ್‌ನಲ್ಲಿ ಆತನ ಸಂವೇದನಾಶೀಲತೆಯನ್ನು ಗ್ರಹಿಸಬಹುದು. ದೇಶದಲ್ಲಿ ಸಾಕಷ್ಟು ಜನ ಒಳ್ಳೆಯ ಮಾತುಗಳನ್ನಾಡುತ್ತಾರೆ. ಆದರೆ ವರ್ತನೆಯಲ್ಲಿ ಮಾತ್ರ ಕುಹಕವನ್ನು ತೋರುತ್ತಾರೆ. ಅಂಬೇಡ್ಕರ್ ಪಟ್ಟಷ್ಟು ಅವಮಾನ, ಕಷ್ಟದಲ್ಲಿ ಶೇ.10ರಷ್ಟನ್ನು ನಾವು ಯಾರೂ ಅನುಭವಿಸಿಲ್ಲ. ಅದನ್ನು ದೇಶದ ಸಂವೇದನಾಶೀಲ ಯುವಕರು ಅರಿತು ಸಹನೆಯಿಂದ ಬದುಕಬೇಕು’’ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ಪ್ರತಿಭಾವಂತ ದಲಿತ ಹುಡುಗರು ಸುಲಭವಾಗಿ ಬಲಿಯಾಗಬಾರದು ಯಾಕೆಂದರೆ ಈ ಹುಡುಗರ ಮೇಲಿರುವ ಜವಾಬ್ದಾರಿ ತುಂಬಾ ದೊಡ್ಡದು ಎನ್ನುವ ಆಶಯ ದೇವನೂರರ ಮಾತುಗಳಲ್ಲಿತ್ತು.
ನಿಜ, ಅಂಬೇಡ್ಕರ್ ಅನುಭವಿಸಿದ್ದ ಕಷ್ಟದಲ್ಲಿ ಶೇ. ಹತ್ತರಷ್ಟನ್ನು ಕೂಡ ಇವತ್ತಿನ ದಲಿತ ಯುವಜನತೆ ಅನುಭವಿಸುತ್ತಿಲ್ಲ. ಆದರೆ ಅಂಬೇಡ್ಕರ್ ಅವರ ಕಾಲದಲ್ಲಿ ಇದ್ದ ಸವಾಲುಗಳಿಗಿಂತ ಭಿನ್ನವಾದ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಈಗಿನ ದಲಿತ ಯುವಕ/ಯುವತಿಯರ ಮುಂದಿದೆ. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ ಅಂಬೇಡ್ಕರ್ ಜಾತಿಗ್ರಸ್ಥ ಸಮಾಜದಿಂದ ಎಷ್ಟು ಸವಾಲುಗಳನ್ನು ಎದುರಿಸಬೇಕಾಯಿತು ಎನ್ನುವ ಚರಿತ್ರೆ ನಮ್ಮ ಕಣ್ಣ ಮುಂದಿದೆ. ಅಂಬೇಡ್ಕರ್ ಅವರಿಗಿಂತ ಎಷ್ಟೊ ವರ್ಷಗಳ ಮುಂಚೆಯೇ ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಜಾತಿ ವ್ಯವಸ್ಥೆಯ ವಿರುದ್ಧ ಎದ್ದು ನಿಂತಿದ್ದರು. ಫುಲೆ ದಂಪತಿ ಅಂಬೇಡ್ಕರ್ ಅವರಿಗಿಂತಲೂ ಹೆಚ್ಚು ಸವಾಲಿನ ಪರಿಸ್ಥಿತಿ ಇತ್ತು. ಆದರೆ ಜ್ಯೊತಿಬಾ ಮತ್ತು ಸಾವಿತ್ರಿಬಾಯಿ ಫುಲೆ ಅವರು ಸವಾಲುಗಳನ್ನು ಎದುರಿಸುತ್ತಲೇ ಸಮಾನತೆಯ ಸಮಾಜವನ್ನು ಕಟ್ಟುವ ಹೊಸ ಮಾದರಿಯನ್ನು ನಮಗೆ ತೋರಿಸಿಕೊಟ್ಟರು. ಅದಕ್ಕಾಗಿಯೇ ಫುಲೆಯವರನ್ನು ತಮ್ಮ ಗುರುಗಳಲ್ಲಿ ಒಬ್ಬರು ಎಂದು ಅಂಬೇಡ್ಕರ್ ಸ್ವೀಕರಿಸಿದ್ದು. ವಸಾಹತುಶಾಹಿಯ ಸಂದರ್ಭದಲ್ಲಿ ಜಾತಿ ಅಸಮಾನತೆಯ ವಿರುದ್ಧ ಜ್ಯೊತಿಬಾ ಫುಲೆ ನಡೆಸಿದ ಹೋರಾಟಕ್ಕೆ ಜೊತೆಯಾಗಿ ಅವರ ಪತ್ನಿ ಸಾವಿತ್ರಿಬಾಯಿಯವರು ನಿಂತಿದ್ದರು. ಹಿಂದುಳಿದ ‘ಮಾಲಿ’ ಸಮುದಾಯಕ್ಕೆ ಸೇರಿದ ಜ್ಯೋತಿಬಾ ಫುಲೆ ಶಿಕ್ಷಣ ಮಾತ್ರ ಸಾಮಾಜಿಕ ಸಂಕೋಲೆಗಳಿಂದ ಭಾರತೀಯ ಸಮಾಜವನ್ನು ಬಿಡುಗಡೆಗೊಳಿಸಬಹುದು ಎಂದು ಬಹುಬೇಗ ಅರ್ಥ ಮಾಡಿಕೊಂಡರು. ಕೇವಲ ಮೇಲ್ಜಾತಿಯ ಗಂಡಸರಿಗೆ ಮಾತ್ರ ಶಿಕ್ಷಣ ಪಡೆಯುವ ಅವಕಾಶವಿದ್ದ ಆ ಕಾಲದಲ್ಲಿ ದಲಿತರು ಮತ್ತು ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶ ಇರಬೇಕು ಎನ್ನುವುದಕ್ಕಾಗಿ ಹೋರಾಟ ಮಾಡಿದರು. ತಮ್ಮ ಪತ್ನಿಗೆ ಅಕ್ಷರ ಕಲಿಸುವ ಮೂಲಕ ಹೊಸ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯನ್ನು ತಮ್ಮ ಮನೆಯಿಂದಲೇ ಬರೆದರು. ಸಾವಿತ್ರಿಬಾಯಿ ಫುಲೆ ‘ದೇಶದ ಮೊದಲ ಶಿಕ್ಷಕಿ’ಯಾಗುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಸಾವಿತ್ರಿಬಾಯಿ ಫುಲೆ ಶಿಕ್ಷಣ ಪಡೆದು ಸುಮ್ಮನೆ ಕೂರದೆ ತಳಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ತಮ್ಮ ಗೆಳತಿ ಫಾತಿಮಾ ಶೇಖ್ ಅವರೊಂದಿಗೆ ಸೇರಿ ಒಂದು ಶಾಲೆಯನ್ನು ತೆರೆದರು. ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದಕ್ಕೆ ಅವಕಾಶವಿರದ ಆ ಕಾಲದಲ್ಲಿ ಶಿಕ್ಷಣ ಪಡೆದಿದ್ದಷ್ಟೆ ಅಲ್ಲದೆ ಹೆಣ್ಣುಮಕ್ಕಳ ಶಾಲೆ ತೆರೆದ ಸಾವಿತ್ರಿಬಾಯಿಯವರಿಗೆ ತಮ್ಮ ಮನೆಯಲ್ಲೇ ವಿರೋಧ ವ್ಯಕ್ತವಾಯಿತು. ಜೊತೆಗೆ ಸಾಂಪ್ರದಾಯಿಕ ಸಮಾಜ ಹಲವು ಕಿರುಕುಳಗಳನ್ನು ನೀಡಿತು. ಇವೆಲ್ಲವನ್ನು ದಿಟ್ಟವಾಗಿ ಎದುರಿಸಿ ಪುರುಷಪ್ರಧಾನ ಸಮಾಜ ಹೆಣ್ಣುಮಕ್ಕಳಿಗೆ ವಿಧಿಸಿದ್ದ ಕಟ್ಟಳೆಗಳನ್ನು ಮುರಿಯುತ್ತ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸಿದರು. ಸ್ತ್ರೀವಾದ ಹುಟ್ಟುವ ಎಷ್ಟೋ ವರ್ಷಗಳ ಮೊದಲೇ ಸ್ತ್ರೀ ಸ್ವಾತಂತ್ರದ ಕಲ್ಪನೆಯನ್ನು ಕಟ್ಟಿಕೊಟ್ಟರು. ಶಿಕ್ಷಕಿಯಾಗಿ, ಚಿಂತಕಿಯಾಗಿ, ಹೋರಾಟಗಾರ್ತಿಯಾಗಿ ಬದುಕಿದ ಸಾವಿತ್ರಿಬಾಯಿಯವರ ವ್ಯಕ್ತಿತ್ವ ಇವತ್ತಿಗೂ ಹಲವು ಬಗೆಯಲ್ಲಿ ಭಾರತದ ಮಹಿಳೆಯರ, ಅದರಲ್ಲೂ ತಳಸಮುದಾಯದ ಮಹಿಳೆಯರ ಹೋರಾಟದ ಬದುಕಿನ ಬಹುಮುಖ್ಯ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಸಾವಿತ್ರಿಬಾಯಿಯವರ ಇಮೇಜ್ ಹೊಸ ರೂಪಗಳಲ್ಲಿ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿದೆ. ಇದಕ್ಕೆ ಒಳ್ಳೆಯ ಉದಾಹರಣೆಯಾಗಿ ಇತ್ತೀಚೆಗೆ ಬಿಡುಗಡೆಯಾದ ಸಂಗೀತಾ ಮುಳೆಯವರ ‘ಸಾವಿತ್ರಿಬಾಯಿ ಫುಲೆ ಆ್ಯಂಡ್ ಐ’ ಕೃತಿಯನ್ನು ನೋಡಬಹುದು (ಈ ಕೃತಿಯನ್ನು ‘ಸಾವಿತ್ರಿಬಾಯಿ ಫುಲೆ ಮತ್ತು ನಾನು’ ಹೆಸರಿನಲ್ಲಿ ಕೆಸ್ತಾರ ಮೌರ್ಯ ಮತ್ತು ವಿಕಾಸ್ ಮೌರ್ಯ ಅನುವಾದಿಸಿದ್ದಾರೆ) ಇದು ನಮ್ಮ ಕಾಲದ ಗಂಭೀರವಾದ ಸಮಸ್ಯೆಯೊಂದಕ್ಕೆ ಸಾವಿತ್ರಿಬಾಯಿ ಫುಲೆಯವರಲ್ಲಿ ಪರಿಹಾರ ಹುಡುಕಿಕೊಂಡಿರುವ ಹೊಸ ಮಾದರಿಯ ಕಥನ.
ತಳಸಮುದಾಯಗಳ ಬಗ್ಗೆ ಭಾರತೀಯ ಸಮಾಜ ಇಟ್ಟುಕೊಂಡಿರುವ ಅಸಹನೆಗೆ ಕಾರಣಗಳಲ್ಲಿ ಮೀಸಲಾತಿ ಬಹಳ ಮುಖ್ಯವಾದುದು. ಸ್ವಾತಂತ್ರಾ ನಂತರ ಸಂವಿಧಾನ ಕೊಟ್ಟ ಮೀಸಲಾತಿಯಡಿಯಲ್ಲಿ ತಳಸಮುದಾಯಗಳು ಶಿಕ್ಷಣ ಮತ್ತು ಸಾರ್ವಜನಿಕ ರಂಗಗಳಿಗೆ ಪ್ರವೇಶ ಪಡೆಯುವುದಕ್ಕೆ ಶುರು ಮಾಡಿದ್ದು ಮೇಲ್ಜಾತಿಯ ಪಟ್ಟಭದ್ರರಲ್ಲಿ ಅಭದ್ರತೆಯನ್ನು ಹುಟ್ಟಿಸಿತು. ಇದರ ಜೊತೆಯಲ್ಲಿ ಶತಮಾನಗಳಿಂದ ‘ಹೊರಗಿಡಲ್ಪಟ್ಟಿದ್ದ’ ಸಮುದಾಯಗಳನ್ನು ‘ಒಳಗೊಳ್ಳಬೇಕಾದ’ ಅನಿವಾರ್ಯತೆಯನ್ನು ಕೂಡಾ ಉಂಟುಮಾಡಿತು. ಸಾಮಾಜಿಕ ಒಳಗೊಳ್ಳುವಿಕೆಯನ್ನು ಎಂದೂ ಒಪ್ಪದ ಭಾರತದ ಸಮಾಜ ತಳಸಮುದಾಯಗಳನ್ನು ಶಿಕ್ಷಣ ಸಂಸ್ಥೆಗಳಿಂದ ಹೊರಗಿಡುವುದಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಂಡಿತು. ಮೀಸಲಾತಿಯಿಂದಾಗಿ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎನ್ನುವ ಮಿಥ್ ಸೃಷ್ಟಿ ಮಾಡಿ ತಳಸಮುದಾಯದವರನ್ನು ಮಾನಸಿಕವಾಗಿ ಕುಗ್ಗಿಸುವ, ಕೀಳರಿಮೆ ಉಂಟುಮಾಡಿ ಅವರನ್ನು ಮಾನಸಿಕವಾಗಿ ಕೊಲ್ಲುವ ವಂಚನೆಯನ್ನು ಶುರುಮಾಡಿತು. ಇಂತಹ ವಂಚನೆಗೆ ಬಲಿಯಾಗಿ ಸಾಯುವ ನಿರ್ಧಾರ ಮಾಡುವ ದಲಿತ ಹೆಣ್ಣುಮಗಳೊಬ್ಬಳು ಸಾವಿತ್ರಿಬಾಯಿ ಫುಲೆಯಿಂದಾಗಿ ಬದುಕಿ ಉಳಿಯುವ ಕಥನವೇ ‘ಸಾವಿತ್ರಿಬಾಯಿ ಫುಲೆ ಆ್ಯಂಡ್ ಐ’ ಕೃತಿಯ ವಸ್ತು.
ತೀರಾ ಹಿಂದುಳಿದ ಗ್ರಾಮೀಣ ಭಾಗವೊಂದರಿಂದ ನಗರದ ಪ್ರತಿಷ್ಠಿತ ಕಾಲೇಜಿಗೆ ಇಂಜಿನಿಯರಿಂಗ್ ಓದಲು ಬರುವ ದಲಿತ ಹುಡುಗಿ ಶಬರಿ ತನ್ನ ಸಾಮಾಜಿಕ ಹಿನ್ನ್ನೆಲೆಯ ಕಾರಣಕ್ಕೆ ಅವಮಾನವನ್ನು, ಹೀಗಳಿಕೆಯನ್ನು ಎದುರಿಸುತ್ತಾಳೆ. ಮೀಸಲಾತಿಯಡಿಯಲ್ಲಿ ಬಂದವಳು ಎನ್ನುವ ಕಾರಣಕ್ಕೆ ಆಕೆಯ ಅಧ್ಯಾಪಕರು ಮತ್ತು ಸಹಪಾಠಿಗಳಿಂದ ಮುದಲಿಕೆಗೆ ಒಳಗಾಗುತ್ತಾಳೆ. ಜಾತಿ, ವರ್ಗ, ಭಾಷೆ, ಬಣ್ಣ, ನಗರ ಪ್ರದೇಶದ ಯಾವ ಹಿನ್ನ್ನೆಲೆಯೂ ಇಲ್ಲದ ಶಬರಿ ಪರೀಕ್ಷೆಯಲ್ಲಿ ಫೇಲಾಗಿ ಕುಗ್ಗಿ ಹೋಗುತ್ತಾಳೆ, ಒಂಟಿಯಾಗುತ್ತಾಳೆ. ಖಿನ್ನತೆ ಅನುಭವಿಸಿ ಸಾಯುವ ನಿರ್ಧಾರ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಸಾಯಲು ಹೋದಾಗ ಅಲ್ಲಿ ಆಕೆಗೆ ಆಕಸ್ಮಿಕವಾಗಿ ಸಾವಿತ್ರಿಬಾಯಿ ಫುಲೆಯವರು ಬರೆದಿರುವ ಡೈರಿ ದೊರೆಯುತ್ತದೆ. ಅಲ್ಲಿಂದ ಶಬರಿ ಮತ್ತು ಸಾವಿತ್ರಿಬಾಯಿಯವರ ಪಯಣ ಶುರುವಾಗುತ್ತದೆ. ತನಗಿಂತ ಎರಡು ಶತಮಾನಗಳ ಹಿಂದೆ ಬದುಕಿದ್ದ ಸಾವಿತ್ರಿ ಬಾಯಿಯವರ ಬದುಕಿನ ಕಥನ ಶಬರಿಯ ಇವತ್ತಿನ ಬದುಕಿನ ಸವಾಲುಗಳನ್ನು ಎದುರಿಸಲು ಪ್ರೇರಕ ಶಕ್ತಿಯಾಗುತ್ತದೆ. ಸಾವಿತ್ರಿಬಾಯಿಯವರ ಬದುಕಿನ ಘಟನೆಗಳನ್ನ್ನು ತನ್ನ ಬದುಕಿನ ಜೊತೆಗಿಟ್ಟು ನೋಡುತ್ತಾ ಹೇಗೆ ಸಾವಿತ್ರಿಬಾಯಿ ಸಾಂಪ್ರದಾಯಿಕ ಸಮಾಜ ನೀಡಿದ ಕಿರುಕುಳಗಳನ್ನು ಎದುರಿಸಿದರು. ಧೈರ್ಯದಿಂದ ತಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಂಡರು ಎನ್ನುವುದನ್ನು ನೋಡಿ ಕಲಿಯುತ್ತಾ ಶಬರಿ ಆತ್ಮವಿಶ್ವಾಸ ಪಡೆದು ಬದಲಾಗುತ್ತಾಳೆ. ಇವತ್ತಿನ ಪ್ರತಿಭಾವಂತ ದಲಿತ ಯುವಜನರು ಮೇಲ್ಜಾತಿಗಳಿಗೆ ಇರುವ ಪ್ರಿವಿಲೆೇಜ್‌ಗಳು ಇಲ್ಲದ ಕಾರಣಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿ ವಾಪಸಾಗುವ, ತಮ್ಮನ್ನೇ ತಾವು ಕೊಂದುಕೊಳ್ಳುವುದಕ್ಕೆ ಮುಂದಾಗುವುದನ್ನು ತಪ್ಪಿಸುವುದಕ್ಕಾಗಿ ಸಂಗೀತಾ ಮುಳೆ ಸಾವಿತ್ರಿಬಾಯಿಯವರ ಬದುಕನ್ನು ಈ ಕೃತಿಯಲ್ಲಿ ತರುತ್ತಾರೆ. ಜೊತೆಗೆ ತಳಸಮುದಾಯಗಳ ವಿದ್ಯಾರ್ಥಿಗಳ ಆತ್ಮವಿಶ್ವಾಸ ಕಳೆಯುವುದರಲ್ಲಿ ಮೇಲ್ಜಾತಿಯ ಯುವಕ/ಯುವತಿಯರು ಹೇಗೆ ಪಾತ್ರವಹಿಸುತ್ತಾರೆ ಎನ್ನುವುದನ್ನು ಎತ್ತಿ ತೋರಿಸಿ ನಿಜವಾಗಿಯೂ ಒಂದು ಅಸಮಾನ ಸಮಾಜದಲ್ಲಿ ಎಲ್ಲ ರೀತಿಯಲ್ಲೂ ಲಾಭ ಪಡೆದು ಶಕ್ತರಾಗಿರುವ ಸಮುದಾಯಗಳು ಮಾಡಬೇಕಿರುವ ಕೆಲಸವೇನು ಎನ್ನುವುದನ್ನು ಈ ಕೃತಿ ಹೇಳುವುದಕ್ಕೆ ಪ್ರಯತ್ನಿಸುತ್ತದೆ. ಶಬರಿ ಓದಿನಲ್ಲಿ ಎದುರಿಸುವ ಕಷ್ಟಗಳು ಮತ್ತು ಕೀಳರಿಮೆಯನ್ನು ನೀಗಿಕೊಳ್ಳಲು ಸಹಾಯ ಮಾಡುವ ಮೇಲ್ಜಾತಿಯ ಗೆಳೆಯ ಮತ್ತವನ ಗೆಳೆಯರ ಗುಂಪು ಈ ಕಾಲದಲ್ಲಿ ಮೇಲ್ಜ್ಜಾತಿಗಳು ತಳಸಮುದಾಯಗಳನ್ನು ಹೇಗೆ ಒಳಗೊಳ್ಳಬೇಕು ಎನ್ನುವುದಕ್ಕೆ ಉದಾಹರಣೆಯಾಗುತ್ತವೆ. ತಳಸಮುದಾಯಗಳಿಗೆ ಅಗತ್ಯವಿರುವ ಸ್ಪೇಸ್ ಸೃಷ್ಟಿಮಾಡಿಕೊಟ್ಟಾಗ ಅವರು ತಾವಾಗೇ ಅರಳಬಲ್ಲರು ಎನ್ನುವ ಸಾಧ್ಯತೆಯನ್ನು ಸಂಗೀತಾ ಮುಳೆ ಕಟ್ಟುವುದಕ್ಕೆ ಪ್ರಯತ್ನಸಿದ್ದಾರೆ. ಸ್ವತಃ ಮೇಲ್ಜಾತಿಗೆ ಸೇರಿರುವ ಲೇಖಕಿ ತನ್ನದಲ್ಲದ ದಲಿತ ಅನುಭವವನ್ನು ಬಳಸಿಕೊಂಡಿರುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಈ ಕೃತಿಯ ಮೂಲಕ ತನ್ನಂತಹ ಮೇಲ್ಜ್ಜಾತಿಯ ಜನ ಮಾಡಬೇಕಾದ ಕೆಲಸವೇನು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ಪ್ರಯತ್ನಸಿದ್ದಾರೆ. ದಲಿತ ಹೆಣ್ಣುಮಗಳಿಗೆ ಆತ್ಮವಿಶ್ವಾಸ ತುಂಬಲು ಸಾವಿತ್ರಿಬಾಯಿಯವರ ಕಾಲ್ಪನಿಕ ದಿನಚರಿಯನ್ನು ಸೃಷ್ಟಿಸಿ ಆ ಮೂಲಕ ಸಾವಿತ್ರಿಬಾಯಿ ಫುಲೆಯವರ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತಾರೆ.
ದಲಿತರ ಬದುಕಿನ ನೋವಿನ ಕಥಾನಕಗಳನ್ನಷ್ಟೇ ಓದಿ ಸ್ವೀಕರಿಸಿರುವ ನಮ್ಮ ಸಮಾಜ ದಲಿತರ ಯಶಸ್ಸನ್ನು ಸ್ವೀಕರಿಸಲು ಯಾಕೋ ಮುಂದೆ ಬಂದಂತೆ ಕಾಣುವುದಿಲ್ಲ. ಇದಕ್ಕೆ ಕಾರಣ ನಮ್ಮ ಸಮಾಜ ಇಂದಿಗೂ ದಲಿತ ಜಗತ್ತನ್ನು ಸ್ಟಿರೀಯೋಟೈಪ್‌ಗಳಲ್ಲೇ ಕಟ್ಟಿಕೊಂಡಿರುವುದು. ಹಾಗಾಗಿಯೇ ಅವಮಾನ, ನೋವು, ಹಿಂಸೆ, ಶೋಷಣೆಯ ಆಚೆಗೂ ದಲಿತರ ಬದುಕಿದೆ ಎನ್ನುವುದನ್ನು ಇನ್ನೂ ಅರಗಿಸಿಕೊಳ್ಳಲು ನಮ್ಮ ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ. ರೋಹಿತ್ ವೇಮುಲಾ ಪ್ರಕರಣ ನಡೆದ ಮೇಲೂ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳು ನಿಂತಿಲ್ಲ. ಹಾಗೆಂದಮಾತ್ರಕ್ಕೆ ರೋಹಿತ್ ವೇಮುಲಾ, ಪಾಯಲ್ ತಡ್ವಿಯಂತಹವರ ಸಾವಿಗೆ ಬೆಲೆ ಇಲ್ಲವೆಂದರ್ಥವಲ್ಲ. ಅವಮಾನ, ಶೋಷಣೆ, ಕಿರುಕುಳದ ನಡುವೆಯೂ ಹೋರಾಡಿ ಬದುಕುಳಿದಿದ್ದರೆ ತನ್ನ ಸಾವಿಗಿಂತಲೂ ಹೆಚ್ಚಿ ನದಾದ್ದನ್ನು ರೋಹಿತ್ ವೇಮುಲಾನಂತಹ ಪ್ರತಿಭಾವಂತರು ಈ ಸಮಾಜಕ್ಕೆ ಕೊಡಬಹುದಾಗಿತ್ತು. ಶೋಷಣೆಯ ವಿರುದ್ಧ ಎದ್ದು ನಿಂತು ಪ್ರತಿಭಟಿಸುವುದು ಎಷ್ಟು ಮುಖ್ಯವೋ ದಮನಕಾರಿ ಸಮಾಜದಲ್ಲಿ ಬದುಕಿ ಉಳಿಯುವುದು ಕೂಡ ಅಷ್ಟೇ ಮುಖ್ಯ. ದಮನಕಾರಿ ಸಮಾಜದಲ್ಲಿ ಬದುಕಿ ಉಳಿಯುವುದು ನಿಜವಾದ ಪ್ರತಿರೋಧ. ಸಾವಿತ್ರಿಬಾಯಿ ಫುಲೆ ಅಂತಹ ದಮನಕಾರಿ ಸಮಾಜದಲ್ಲಿ ಬದುಕಿ ಉಳಿದ ಕಾರಣಕ್ಕೆ ಶಬರಿಯ ಬದುಕಿಗೆ ಒಂದು ಮಾದರಿಯಾಗಿದ್ದಾರೆ. ದಲಿತರು ಅನುಭವಿಸುವ ಶೋಷಣೆಯ ಕಥನಗಳ ಜೊತೆಗೆ ದಲಿತರ ಯಶಸ್ಸಿನ ಕತೆಗಳನ್ನು ಕಟ್ಟುವುದು ಈ ಕಾಲದಲ್ಲಿ ದಲಿತರ ಆತ್ಮವಿಶ್ವಾಸ ಹೆಚ್ಚಿಸುವುದಕ್ಕೆ ಸಹಾಯ ಮಾಡಬಹುದು. ದಲಿತರ ಯಶಸ್ಸಿನ ಮಾದರಿಗಳು ಕೂಡ ದಲಿತರ ವಿಮೋಚನೆಗೆ ದಾರಿಯಾಗಬಲ್ಲವು. ಸಾವಿತ್ರಿಬಾಯಿ ಫುಲೆಯವರ ಬದುಕಿನಿಂದ ಸ್ಫೂರ್ತಿ ಪಡೆದ ಶಬರಿ ಗೆಲ್ಲುತ್ತಾಳೆ. ಇನ್ನೂ ಕೋಟ್ಯಂತರ ಶಬರಿಯರು ಈ ದೇಶದಲ್ಲಿದ್ದಾರೆ ಅವರೆಲ್ಲರೂ ಸಾವಿತ್ರಿಬಾಯಿಯವರನ್ನು ಹುಡುಕುವುದಕ್ಕೆ ಶುರುಮಾಡಿದರೆ ಸಮಾನತೆಯ ಕನಸಿನ ಕಡೆಗೆ ನಡೆಯುತ್ತಾರೆ. ಇಂತಹ ಕಥನಗಳನ್ನು ನೆನೆಯುವುದರ ಮೂಲಕ ನಾವು ಸಾವಿತ್ರಿಬಾಯಿಯವರಿಗೆ ಗೌರವ ಸಲ್ಲಿಸಬಹುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.