ಮತಾಂತರ ಯಾಕೆ ತಪ್ಪು?
-

ಭಾಗ - 02
ತುಸುವಾದರೂ ಇತಿಹಾಸ ಓದಿದವರೆಲ್ಲರಿಗೂ ಗೊತ್ತು- ಬೌದ್ಧ ತಾತ್ವಿಕತೆ ಹುಟ್ಟಿದ್ದೇ ಹಿಂದೂ ಸಮಾಜದ ವಿಷಮಯ ಅಸಮಾನತೆ ಹಾಗೂ ಅಮಾನವೀಯತೆಗೆ ಸೆಡ್ಡು ಹೊಡೆದು. ಅಂಬೇಡ್ಕರ್ ಬರೆಯುತ್ತಾರೆ- ‘ಮುಸ್ಲಿಂ ದಾಳಿಗಳಿಗೆ ಮುಂಚಿನ ಭಾರತದ ಇತಿಹಾಸವೆಂದರೆ ಬೌದ್ಧಧರ್ಮ ಹಾಗೂ ಬ್ರಾಹ್ಮಣಧರ್ಮಗಳ ನಡುವಣ ಮಾರಕ ಕಾಳಗದ ಚರಿತ್ರೆಯೇ...’ ಮೌರ್ಯರ ಆಳ್ವಿಕೆಯಲ್ಲಿ ರಾಜಧರ್ಮವಾಗಿ ಮನ್ನಣೆ ಪಡೆದು ಆಳಿದ ಬೌದ್ಧ ಉಚ್ಛ್ರಾಯದ ಕಾಲದಲ್ಲಿ ‘‘ಬ್ರಾಹ್ಮಣರು ನಿಮ್ನ ವರ್ಗವಾಗಿ ಜೀವಿಸಿದ್ದರು’’ ಎಂಬುದನ್ನೂ ಅಂಬೇಡ್ಕರ್ ಸಂಶೋಧನೆ ದಾಖಲಿಸಿದೆ. (ವಿವರಗಳಿಗೆ: ಅಂಬೇಡ್ಕರರ ಬ್ರಾಹ್ಮಣಧರ್ಮದ ದಿಗ್ವಿಜಯ. ಪ್ರ: ಆದಿಮ ಪ್ರಕಾಶನ, ಕೋಲಾರ) ಆ ಕಾಲದಲ್ಲಿ ‘‘ಸಾಮ್ರಾಟ್ ಅಶೋಕ, ಬೌದ್ಧಧರ್ಮವನ್ನು ರಾಜಧರ್ಮವಾಗಿ ಘೋಷಿಸಿದ ಮತ್ತು ಬ್ರಾಹ್ಮಣಧರ್ಮದ ಜೀವಾಳವಾದ ಎಲ್ಲ ಬಗೆಯ ಪ್ರಾಣಿಬಲಿಯ ಯಜ್ಞ ಯಾಗಾದಿಗಳನ್ನು ನಿಷೇಧಿಸಿದ. ಬ್ರಾಹ್ಮಣರು ರಾಜಾಶ್ರಯ ಮಾತ್ರವಲ್ಲದೆ, ಯಜ್ಞಗಳನ್ನು ಮಾಡಿ ತಮ್ಮ ಜೀವನಕ್ಕಾಗಿ ಪಡೆಯುತ್ತಿದ್ದ ದಕ್ಷಿಣೆಯನ್ನೂ ಕಳೆದುಕೊಂಡಿದ್ದರಿಂದ ಅವರಿಗೆ ವೃತ್ತಿನಷ್ಟವೂ ಆದಂತಾಯಿತು...’’
ಮೌರ್ಯರ ಆಳ್ವಿಕೆಯ 140 ವರ್ಷ ಕಾಲ ಬೌದ್ಧಪ್ರಾಬಲ್ಯದ ವಿರುದ್ಧ ಕುದಿಯುತ್ತಿದ್ದ ದ್ವಿಜರು ಬಂಡಾಯವೆದ್ದಿದ್ದು ಕ್ರಿಸ್ತಪೂರ್ವ 185ರಲ್ಲಿ. ಆ ವರ್ಷ, ಬ್ರಾಹ್ಮಣನು ಶಸ್ತ್ರ ಹಿಡಿಯಬಾರದೆಂಬ ಆರ್ಯ ಕಟ್ಟಳೆಯನ್ನೂ ಮೀರಿ, ಶುಂಗಗೋತ್ರದ ಸಾಮವೇದಿ ಬ್ರಾಹ್ಮಣನಾಗಿದ್ದ ಪುಷ್ಯಮಿತ್ರನು ತಾನೇ ಕತ್ತಿ ಹಿಡಿದು ಕೊನೆಯ ಮೌರ್ಯ ದೊರೆಯನ್ನು ಕೊಂದು ತಾನೇ ರಾಜನೂ ಆದ. (ಅದಕ್ಕೇ ಪುಷ್ಯಮಿತ್ರನನ್ನು ಕವಿ ಬಾಣ ‘ಅನಾರ್ಯ’ ಎಂದೇ ಬಣ್ಣಿಸುತ್ತಾನೆ.) ಜಾತಿ ಶ್ರೇಣೀಕರಣವು ಹಿಂದೂ ಸಮಾಜದ ಕಟ್ಟಪ್ಪಣೆಯಾಗಿ ಜಾರಿಯಾದದ್ದು ಇವನ ಕಾಲದಲ್ಲೇ; ಸುಮತಿ ಭಾರ್ಗವ ವಿರಚಿತ ಕಾನೂನು ಸಂಹಿತೆ ಮನುಸ್ಮತಿಯ ಮೂಲಕ. ಆದ್ದರಿಂದ ಪುಷ್ಯಮಿತ್ರನೇ ಭಾರತದಲ್ಲಿ ಜಾತಿಪದ್ಧತಿಯನ್ನು ಈಗಿನ ಸಾಂಸ್ಥಿಕ ಸ್ವರೂಪದಲ್ಲಿ ಉದ್ಘಾಟಿಸಿದವನು ಎನ್ನಬಹುದು.
ಅವನ ಕ್ರಾಂತಿಯ ಒಟ್ಟು ಉದ್ದೇಶವನ್ನು ಅಂಬೇಡ್ಕರ್ ಸಂಗ್ರಹಿಸುವುದು ಹೀಗೆ-
‘‘ರಾಜಧರ್ಮವಾಗಿದ್ದ ಬೌದ್ಧಧರ್ಮವನ್ನು ನಾಶ ಮಾಡುವುದು, ಮತ್ತು ಬ್ರಾಹ್ಮಣರನ್ನೇ ಭಾರತದ ಸಾರ್ವಭೌಮ ದೊರೆಗಳನ್ನಾಗಿ ಮಾಡಿ ಆ ರಾಜಕೀಯ ಅಧಿಕಾರದ ಮೂಲಕ ಬೌದ್ಧಧರ್ಮದ ವಿರುದ್ಧ ಬ್ರಾಹ್ಮಣಧರ್ಮದ ವಿಜಯ ಸಾಧಿಸುವುದು- ಇವೇ ಪುಷ್ಯಮಿತ್ರನ ರಾಜಹತ್ಯೆಯ ಉದ್ದೇಶವಾಗಿತ್ತು...’’
ಈಗ ಭೈರಪ್ಪನವರು ಬುದ್ಧನನ್ನು ಉಪನಿಷತ್ ಮಹರ್ಷಿ ಎಂದು ಕರೆಯುತ್ತಿದ್ದಾರೆ! ಕಾರಣ ಸ್ಪಷ್ಟ: ಭೈರಪ್ಪನವರಿಗೆ ನೆಪಮಾತ್ರಕ್ಕೂ ಸತ್ಯಶೋಧನೆಯ ಉದ್ದೇಶವಿಲ್ಲ. ಅವರಿಗೇನಾದರೂ ಸತ್ಯಾನ್ವೇಷಣೆಯ ಕಾಳಜಿ ಇದ್ದಿದ್ದೇ ಆದರೆ, ಇಸ್ಲಾಂ ಮತ್ತು ಕ್ರೈಸ್ತ ಪಂಥಗಳಲ್ಲಿ ಮತಪ್ರಚಾರ ಸಂಸ್ಕೃತಿ ಬಂದಿದ್ದೇ ಸಾಮ್ರಾಜ್ಯವಾದಿ ವಿಸ್ತರಣೆಯ ಅಂಗವಾಗಿ ಎಂದು ತಿಳಿಯುತ್ತಿತ್ತು. ಮತ್ತು ಆ ಧರ್ಮಗಳು ಪ್ರದರ್ಶಿಸಿದ ಹಿಂಸೆ, ಕ್ರೌರ್ಯ ಮತ್ತು ಬಲಾತ್ಕಾರಗಳೆಲ್ಲವೂ ಮೂಲದಲ್ಲಿ ಸಾಮ್ರಾಜ್ಯವಾದಿ ಆಕ್ರಮಣದ ಲಕ್ಷಣಗಳೇ ಹೊರತು ಆಯಾ ಧರ್ಮಗಳ ಮೂಲ ಗುಣವಾಗಿರಬೇಕಿಲ್ಲ ಎಂಬುದು ಹೊಳೆಯುತ್ತಿತ್ತು. ಮುಂದುವರಿದು, ಇಂಥದೇ ಸಾಮ್ರಾಜ್ಯವಾದಿ ಅವಕಾಶ ಸಿಕ್ಕಿದ್ದಿದ್ದರೆ, ತನ್ನ ಆಕ್ರಮಣಶೀಲ ಕ್ರೌರ್ಯದಲ್ಲಿ ಹಿಂದೂಧರ್ಮವೂ ಉಳಿದೆಲ್ಲರಿಗೆ ಸರಿಸಾಟಿಯಾಗಿರುತ್ತಿತ್ತು ಎಂಬುದು ಬೋಧೆಯಾಗುತ್ತಿತ್ತು. ಯಾಕೆಂದರೆ ಹಿಂದೂ ಕ್ರೌರ್ಯದ ಸ್ವರೂಪಕ್ಕೆ ಪುಷ್ಯಮಿತ್ರನ ಕ್ರಾಂತಿಯೇ ಪ್ರಮಾಣ ಒದಗಿಸಿದೆ. ಅಂಬೇಡ್ಕರ್ ಬರೆಯುತ್ತಾರೆ-
‘‘...ಪುಷ್ಯಮಿತ್ರನು ಪಟ್ಟಕ್ಕೆ ಬಂದ ಕೂಡಲೇ ಬೌದ್ಧರು ಹಾಗೂ ಬೌದ್ಧಧರ್ಮದ ವಿರುದ್ಧ ಅತ್ಯುಗ್ರ ಹಿಂಸಾತ್ಮಕ ಆಂದೋಲನವನ್ನೇ ಆರಂಭಿಸಿದ... ಬೌದ್ಧಧರ್ಮದ ವಿರುದ್ಧ ಪುಷ್ಯಮಿತ್ರನ ಪೀಡನೆ ಎಷ್ಟು ನಿರ್ದಯವಾಗಿತ್ತೆನ್ನಲು ಬೌದ್ಧ ಭಿಕ್ಷುಗಳ ವಿರುದ್ಧ ಆತ ಹೊರಡಿಸಿದ ಕಟ್ಟಪ್ಪಣೆಯೇ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಭಿಕ್ಷುವಿನ ತಲೆಗೆ ಆತ ನೂರು ಚಿನ್ನದ ನಾಣ್ಯಗಳ ಬೆಲೆ ಕಟ್ಟಿದ್ದ...!’’
ಚರಿತ್ರೆಯ ಚಕ್ರ ಉರುಳಿದೆ. ಆ ಕಾಲದ ಹಿಂಸಾತ್ಮಕ ಮತಾಂತರ ಇಂದು ಸಾಧ್ಯವಿಲ್ಲ ಎಂಬುದನ್ನು ಭೈರಪ್ಪನವರೂ ಪರೋಕ್ಷವಾಗಿ ಒಪ್ಪುತ್ತಾರೆ. ಅವರು ‘ಚರ್ಚು ತನ್ನ ಮತ ವಿಸ್ತರಣೆಯ ವಿಧಾನದಲ್ಲಿ ಕ್ರೌರ್ಯವನ್ನು ಕಡಿಮೆ ಮಾಡಿಕೊಂಡಿದ್ದಕ್ಕೆ ಪ್ರಮುಖ ಕಾರಣವೆಂದರೆ ಯೂರೋಪಿನಲ್ಲಿ ನವೋದಯ ಉಂಟಾಗಿ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯಾಗಿ ಯೂರೋಪಿನ ಹಲವು ರಾಜ್ಯಗಳು ಹೊಸ ಭೂಮಿಗಳನ್ನು ಆಕ್ರಮಿಸಿ ಸಾಮ್ರಾಜ್ಯ ಸ್ಥಾಪನೆ ಮಾಡತೊಡಗಿ ಧರ್ಮವೆಂದರೆ ಈಚಿನ ಧರ್ಮವೊಂದೇ ಅಲ್ಲ, ಪ್ರಪಂಚದಲ್ಲಿ ಬೇರೆ ಬೇರೆ ನಂಬಿಕೆಗಳಿವೆ ಎಂಬ ತಿಳುವಳಿಕೆಯು ಮೇಲುವರ್ಗದವರಲ್ಲಿ ಉಂಟಾದದ್ದು’ ಎಂಬ ಗೊಂದಲಮಯ ನಿರ್ಣಯ ಕೊಟ್ಟರೂ, ವಿಷಯ ಅದಲ್ಲ. ಯಾಕೆಂದರೆ ಇಂದು ವಿಶ್ವ ರಂಗದಲ್ಲಿ ರಾಜಕೀಯ ಸಾಮ್ರಾಜ್ಯಶಾಹಿಗೇ ಅವಕಾಶವಿಲ್ಲ.
ಇಷ್ಟು ಗೊತ್ತಿದ್ದೂ ಭೈರಪ್ಪನವರು ಮತಾಂತರದ ಕ್ರೌರ್ಯ ಹಿಂಸೆಗಳ ಇತಿಹಾಸವನ್ನು ಅಷ್ಟು ಸವಿಸ್ತಾರವಾಗಿ ಯಾಕೆ ಕೆದಕಿಕೊಂಡು ಕೂತಿದ್ದಾರೆ?
ಗೆಳೆಯ ಕೋಟಿಗಾನಹಳ್ಳಿ ರಾಮಯ್ಯ ಹಿಂದೊಮ್ಮೆ ಹೇಳಿದ್ದರು- ‘‘ಪ್ರಾಣಿಗಳು ತಮ್ಮ ಗಾಯಗಳನ್ನು ನೆಕ್ಕಿಕೊಳ್ಳುತ್ತವೆ. ಅವುಗಳ ಜೊಲ್ಲಿನಲ್ಲೇ ದೇವರು ಔಷಧಿ ಇಟ್ಟಿರುವುದರಿಂದ ನೆಕ್ಕಿಕೊಂಡೇ ವಾಸಿ ಮಾಡಿಕೊಳ್ಳುತ್ತವೆ. ಆದರೆ ಮನುಷ್ಯ ತನ್ನ ಹಳೇ ಗಾಯವನ್ನು ನೆಕ್ಕಿಕೊಂಡ ಕೂಡಲೇ ಒಸರುವುದು ನಂಜು, ವಿಷ ಮಾತ್ರ.’’
ಭೈರಪ್ಪನವರು ಕೇಳಿಕೊಳ್ಳದಿದ್ದರೇನಂತೆ? ನಾವೇ ಕೇಳೋಣ: ಬೇರೆ ಧರ್ಮಗಳ ಹಾಗೆ ಹಿಂದೂ ಧರ್ಮ ಯಾಕೆ ಸಾಮ್ರಾಜ್ಯವಾದಿ ಧರ್ಮವಾಗಿ ಬೆಳೆಯಲೇ ಇಲ್ಲ? ಆಮಿಷವೋ ಆಕರ್ಷಣೆಯೋ, ಇತರ ಧರ್ಮಗಳಿಂದ ಅನುಯಾಯಿಗಳನ್ನು ಸಂಪಾದಿಸಬಲ್ಲ ಮಿಷನರಿ ಧರ್ಮ ಯಾಕಾಗಲಿಲ್ಲ? ಮೊದಲ ಕಾರಣ- ಇಲ್ಲಿನ ಶ್ರೇಣೀಕೃತ ಮೇಲು ಕೀಳು. ಬೇರೆ ಧರ್ಮದವರನ್ನು ಒಂದು ಪಕ್ಷ ಸೆಳೆಯುವುದಾದರೂ, ಯಾವ ಜಾತಿಗೆ ಸೇರಿಸಿಕೊಳ್ಳುವುದು?... ಈ ಅಸಮಾನತೆ ಒಂದೆಡೆ ಯಾವ ಜಾತಿವರ್ಗವೂ ಇನ್ನೊಂದರ ವಿರುದ್ಧ ಬಂಡಾಯದ ಹಾದಿ ಹಿಡಿಯದಂತೆ ಸಮಾಜದ ಉಸಿರುಗಟ್ಟಿಸಿದ್ದರೆ, ಇನ್ನೊಂದು ಕಡೆ- ಅಂಬೇಡ್ಕರ್ ಹೇಳುವಂತೆ- ‘‘ವಿಷಪ್ರಾಶನದ ಮಾರಣಾಂತಿಕ ಪರಿಣಾಮಗಳು ವಿಷ ಕೊಡುವವನ ಮೂಲ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರಲು ಎಂದೂ ಸಾಧ್ಯವಿಲ್ಲ... ಬ್ರಾಹ್ಮಣೇತರರನ್ನು ನಿಶ್ಚೇತನಗೊಳಿಸುವುದು ಬ್ರಾಹ್ಮಣಧರ್ಮದ ಯೋಜನೆಯಾಗಿತ್ತು.... ಆದರೆ ಜಾತಿವಿಷದ ಪರಿಣಾಮ ಎಂಥದೆಂದರೆ, ಜನರು ಬ್ರಾಹ್ಮಣಧರ್ಮದ ವಿರುದ್ಧವಷ್ಟೇ ಅಲ್ಲ, ವಿದೇಶೀಯರ ವಿರುದ್ಧವೂ ನಿಷ್ಕ್ರಿಯರಾದರು...’’ ಒಟ್ಟಾರೆ ಜಾತಿ ಕಟ್ಟಳೆ ಭಾರತೀಯ ಸಮಾಜದ ಕರ್ತೃತ್ವ, ಉಲ್ಲಾಸ, ಸೋದರತ್ವಗಳನ್ನೇ ಶಾಶ್ವತವಾಗಿ ಕೊಂದುಹಾಕಿತು. ಹೀಗೆ ತನ್ನೊಳಗೇ ಮುರುಟುತ್ತ, ಕೊಳೆಯುತ್ತ ಹೋಗುವ ಜಡ ವ್ಯವಸ್ಥೆಯಾಗಿಹೋದ ಹಿಂದೂ ಧರ್ಮ, ಮಿಷನರಿ ಧರ್ಮ ಆಗಲು ಎಲ್ಲಿ ಸಾಧ್ಯವಿತ್ತು?
ಮೊದಲಲ್ಲಿ ಹೇಳಿದ ದೌರ್ಜನ್ಯದ ಪ್ರಕರಣಗಳಲ್ಲಿ ಯಾವ ಬ್ರಾಹ್ಮಣರ ಪಾತ್ರವೂ ಇರಲಿಲ್ಲ. ನಿಜ. ಆದರೆ ಆ ಪ್ರಸಂಗಗಳಲ್ಲಿ ದೌರ್ಜನ್ಯ, ಕೊಲೆ ಅತ್ಯಾಚಾರಗಳಿಗೆ ನಿರಾತಂಕವಾಗಿ ಮುಂದಾದವರೆಲ್ಲರೂ ಮನುಸ್ಮತಿಯ ಪರಂಪರೆಯನ್ನು ಶತಮಾನಗಳ ಕಾಲ ಒಪ್ಪಿ ಪಾಲಿಸುತ್ತ ಬಂದವರೇ. ಇಸ್ಲಾಮಿನಲ್ಲಾಗಲೀ, ಕ್ರೈಸ್ತಧರ್ಮದಲ್ಲಾಗಲೀ ಅಥವಾ ಜಗತ್ತಿನ ಇನ್ನಾವುದೇ ಧರ್ಮದಲ್ಲಿ- ಆ ಧರ್ಮದ ಅನುಯಾಯಿಗಳಲ್ಲಿ ಒಳ ತಾರತಮ್ಯವಿಲ್ಲ. ಆದರೆ ಜಾತಿ ಎಂಬ ಮಲವನ್ನು ತಲೆ ಮೇಲೆ ಹೊತ್ತ ಹಿಂದೂ ಸಮಾಜ, ಆ ಕಾರಣಕ್ಕೇ ತಾನೂ ಒಡೆದು, ಅನ್ಯಾಕ್ರಮಣಕ್ಕೆ ಸುಲಭವಾಗಿ ಪಕ್ಕಾಗುವ ದುರ್ಬಲ ಸಮಾಜವಾಗಿಯೇ ಉಳಿದುಬಂತು.
ಈಗ ಭೈರಪ್ಪನವರು ಮತಾಂತರವನ್ನು ಪಿಡುಗು ಎನ್ನುತ್ತಾರೆ. ರಾಮಕೃಷ್ಣ ಆಶ್ರಮದ ಸ್ವಾಮೀಜಿಯೊಬ್ಬರು ‘‘ಮತಾಂತರವೆನ್ನುವುದು ದೇಶದ್ರೋಹದ ಕೆಲಸ; ಒಬ್ಬ ಮತಾಂತರಗೊಂಡರೆ, ದೇಶದ್ರೋಹಿಯೊಬ್ಬ ಹುಟ್ಟಿದಂತೆ’’ ಎಂದು ಅಪ್ಪಣೆ ಕೊಡಿಸಿದರು. ಇನ್ನು ಇದ್ದಬದ್ದ ಮಠಾಧೀಶರೆಲ್ಲ ಸೇರಿ ಮತಾಂತರ ನಿಷೇಧ ಕಾನೂನು ತನ್ನಿ ಎಂದು ರಾಜ್ಯಪಾಲರಿಗೆ ಮನವಿ ಕೊಟ್ಟರು. ಸರಿ. ಆದರೆ ಇವರು ಯಾರೂ ಮತಾಂತರ ಯಾಕೆ ತಪ್ಪು ಎಂದು ಬಿಡಿಸಿ ಹೇಳುವ ಗೋಜಿಗೇ ಹೋಗಿಲ್ಲ! ಇವರು ಹಾಕುತ್ತಿರುವ ಬೊಬ್ಬೆ ನೋಡಿದರೆ ಇಡೀ ಭಾರತವೇ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಆಮಿಷಕ್ಕೆ ಬಲಿಯಾಗಿ ಧರ್ಮಾಂತರ ಮಾಡಲು ತುದಿಗಾಲಲ್ಲಿ ನಿಂತಿದೆಯೇನೋ ಅಂದುಕೊಳ್ಳಬೇಕು! ನಮ್ಮ ದೇಶದಲ್ಲಿ ಬೆಂಡಿಗೇರಿ, ಕಂಬಾಲಪಲ್ಲಿಗಳು ಪ್ರತಿನಿತ್ಯದ ವಿದ್ಯಮಾನಗಳಾದರೂ ನಮ್ಮ ಜನ ತಲೆತಲಾಂತರದ ನಿರಂತರ ಅವಮಾನವನ್ನು ಸಹಿಸಿಕೊಂಡಾದರೂ ಸ್ವಧರ್ಮದಲ್ಲಿ ಉಳಿದು ಬಂದಿದ್ದಾರೆ. ಅಂಬೇಡ್ಕರ್ ‘‘ಭಾರತಕ್ಕೆ ಸ್ವರಾಜ್ಯ ಎಷ್ಟು ಅಗತ್ಯವೋ, ಅಸ್ಪೃಶ್ಯರಿಗೆ ಮತಾಂತರ ಅಷ್ಟೇ ಅಗತ್ಯ’’ ಎಂದು ಬೋಧಿಸಿದಾಗ್ಯೂ, ಇಲ್ಲಿನ ದಲಿತ ವರ್ಗಗಳು ವಿಚಲಿತರಾಗಲಿಲ್ಲ. ಇಲ್ಲದಿದ್ದರೆ ಇಷ್ಟು ಕಾಲದಲ್ಲಿ ಅರ್ಧಕ್ಕರ್ಧ ಜನ ಹಿಂದೂ ಧರ್ಮ ತೊರೆದು ಹೋಗಿರಬೇಕಿತ್ತು. ಇದುವರೆಗೆ ಜಾತಿ ಅಸಮಾನತೆಯ ಬಗ್ಗೆ ಅಪ್ಪಿತಪ್ಪಿಯೂ ಚಕಾರ ಎತ್ತದ ಧಾರ್ಮಿಕ ಮುಖಂಡರು ಹಾಗೂ ಹಿಂದೂತ್ವವಾದಿಗಳು ಈಗ ಮತಾಂತರದ ವಿರುದ್ಧ ಹುಯಿಲೆಬ್ಬಿಸುತ್ತಾರೆಂದರೆ ಏನರ್ಥ? ಜಾತಿ, ಅಸ್ಪೃಶ್ಯತೆಯಂತಹ ಅನ್ಯಾಯಗಳು ನಿರಂತರವಾಗಿ, ಶಾಶ್ವತವಾಗಿ ಉಳಿದಿರಬೇಕು ಎಂಬುದೇ ಅವರ ಒಳಾಸೆ ಎಂದರ್ಥ!.... ಹಾಗೆ ನೋಡಿದರೆ, ಭಾರತದ ಧಾರ್ಮಿಕ ಚರಿತ್ರೆಯೇ ಮತಾಂತರಗಳ ಚರಿತ್ರೆ. ಇಲ್ಲಿ ಹೊಸ ಹೊಸದಾಗಿ ಹುಟ್ಟಿದ ಎಲ್ಲ ಧಾರ್ಮಿಕ ಪಂಥಗಳೂ- ಬೌದ್ಧ, ಜೈನ, ಸಿಖ್, ವೀರಶೈವ... ಜನ್ಮ ತಳೆದಿದ್ದೇ ಮತಾಂತರಗಳ ಮೂಲಕ. ಅಂಬೇಡ್ಕರ್- ‘‘ಹಿಂದೂ ಆಗಿ ಹುಟ್ಟಿದ್ದೇನೆ. ಆದರೆ ಹಿಂದೂ ಆಗಿ ಸಾಯಲಾರೆ’’ ಎಂದು ಘೋಷಿಸಿಯೇ ಸಹಸ್ರಾರು ಅನುಯಾಯಿಗಳೊಂದಿಗೆ ಬೌದ್ಧಧರ್ಮವನ್ನು ಅಪ್ಪಿಕೊಂಡರು. ಆದರೆ ಈ ಎಲ್ಲ ಧರ್ಮಪಂಥಗಳೂ ಹುಟ್ಟಿದ್ದು ಹಿಂದೂ ಸಮಾಜದಲ್ಲಿ ಹಾಸುಹೊಕ್ಕಾದ ಜಾತಿ ತಾರತಮ್ಯಕ್ಕೆ ಪ್ರತಿಭಟನೆಯಾಗಿ ಎಂಬುದು ಭೈರಪ್ಪನವರ ಗಂಟಲಲ್ಲಿ ಇಳಿಯಲಿಕ್ಕಿಲ್ಲ! ಮತಾಂತರ ದೇಶದ್ರೋಹ ಅನ್ನುವುದಾದರೆ- ಮಹಾವೀರ, ಬುದ್ಧ, ಬಸವಣ್ಣ, ಅಂಬೇಡ್ಕರ್- ಇವರೆಲ್ಲರೂ ಮಹಾನ್ ದೇಶದ್ರೋಹಿಗಳೇ!
ಆದರೆ ಅವರೆಲ್ಲ ಯಾಕೆ ಹೀಗೆ ‘ದೇಶದ್ರೋಹಿ’ಗಳಾದರು? ಉತ್ತರವಾಗಿ ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ಹೊಸ್ತಿಲಲ್ಲಿ ಅಂಬೇಡ್ಕರ್ (ತಮ್ಮ ಸುಪ್ರಸಿದ್ಧ ಮತಾಂತರ ಯಾಕೆ? ಎಂಬ ವ್ಯಾಖ್ಯಾನದಲ್ಲಿ) ಮಾಡಿದ ವಿಶ್ಲೇಷಣೆಯನ್ನು ಗಮನಿಸಬೇಕು:
‘‘ನೀವು (ಅಸ್ಪೃಶ್ಯರು) ಸವರ್ಣೀಯರೊಡನೆ ಸರಿಸಮಾನವಾಗಿ ವರ್ತಿಸಿದ ಮಾತ್ರಕ್ಕೇ ಅವರಿಗೆ ಅವಮಾನವಾಗುತ್ತದೆ. ಅಸ್ಪೃಶ್ಯತೆಯೆನ್ನುವುದು ಅಲ್ಪಕಾಲಿಕವಾದ ಅಥವಾ ತಾತ್ಕಾಲಿಕವಾದ ಸ್ಥಿತಿಯಲ್ಲ, ಶಾಶ್ವತವಾದದ್ದು. ನೇರವಾಗಿ ಹೇಳುವುದಾದರೆ, ಹಿಂದೂಗಳು ಮತ್ತು ಅಸ್ಪೃಶ್ಯರ ನಡುವಣ ಸಂಘರ್ಷವೇ ಶಾಶ್ವತವಾದದ್ದು. ಹಿಂದೂ ಸವರ್ಣೀಯರ ನಂಬಿಕೆಯಂತೆ ನಿಮ್ಮನ್ನು ಸಮಾಜದ ಕನಿಷ್ಠತಮ ಸ್ಥಾನದಲ್ಲಿ ಇರಿಸಿರುವ ಧರ್ಮವೇ ನಿರಂತರವಾದದ್ದು. ಆ ಕಾರಣ, ಈ ಸಂಘರ್ಷವೂ ನಿರಂತರವಾದದ್ದು. ಇದರಲ್ಲಿ ಕಾಲ, ಸಂದರ್ಭಕ್ಕನುಗುಣವಾದ ಯಾವ ಮಾರ್ಪಾಡೂ ಸಾಧ್ಯವಿಲ್ಲ. ಇಂದು ನೀವು ಅತ್ಯಂತ ಕೆಳಸ್ಥಾನದಲ್ಲಿದ್ದೀರಿ ಮತ್ತು ಎಂದೆಂದಿಗೂ ಅದೇ ಕೆಳಸ್ಥಾನದಲ್ಲೇ ಉಳಿಯುತ್ತೀರಿ. ಅಂದರೆ, ಹಿಂದೂಗಳು-ಅಸ್ಪೃಶ್ಯರ ಸಂಘರ್ಷವೂ ಅವಿರತವಾಗಿ ಉಳಿದೇ ಉಳಿಯುತ್ತದೆ...
‘‘...ಹಿಂದೂ ಧರ್ಮದಲ್ಲಿ ವ್ಯಕ್ತಿಗೆ ಯಾವುದೇ ಸ್ಥಾನವಿಲ್ಲ. ಹಿಂದೂ ಧರ್ಮ ರಚನೆಗೆ ವರ್ಗ ಕಲ್ಪನೆಯೇ ಆಧಾರ. ಒಬ್ಬ ವ್ಯಕ್ತಿ ಇನ್ನೊಬ್ಬನೊಡನೆ ಹೇಗೆ ವರ್ತಿಸಬೇಕೆಂದು ಹಿಂದೂ ಧರ್ಮ ಹೇಳಿಕೊಡುವುದಿಲ್ಲ.... ಒಬ್ಬ ವ್ಯಕ್ತಿಯ ಉನ್ನತಿಗೆ ಮೂರು ಅಂಶಗಳು ಬೇಕು- ಸಹಾನುಭೂತಿ, ಸಮಾನತೆ ಮತ್ತು ಸ್ವಾತಂತ್ರ. ಈ ಮೂರರಲ್ಲಿ ಯಾವುದಾದರೂ ಒಂದು ಹಿಂದೂ ಧರ್ಮದಲ್ಲಿ ಸಿಕ್ಕುವುದೆಂದು ನಿಮ್ಮ ಅನುಭವದಿಂದ ಹೇಳಬಲ್ಲಿರಾ?.....’’
ಅಂಬೇಡ್ಕರ್ ಅಂದು ಎತ್ತಿದ ಪ್ರಶ್ನೆಗಳ ಗಹನತೆ ಮತ್ತು ಮಹತ್ವ ಇಂದಿಗೂ ತಗ್ಗಿಲ್ಲ ಅನ್ನುವುದರಲ್ಲೇ ಹಿಂದೂ ಸಮಾಜದ ನಿರಂತರ ದುರಂತದ ಬೇರುಗಳಿವೆ. ಅದಕ್ಕೇ ಮತ್ತೆ ಕೇಳುತ್ತೇನೆ- ಭಾರತ ಸಂವಿಧಾನವೇ ಮುಕ್ತ ಧಾರ್ಮಿಕ ಸ್ವಾತಂತ್ರ ನೀಡಿರುವಾಗ, ಮತಾಂತರವನ್ನು ಯಾವ ಆಧಾರದ ಮೇಲೆ ತಪ್ಪು ಅನ್ನುತ್ತೀರಿ? ದಯವಿಟ್ಟು ವಿವರಿಸಿ.
(ಮುಂದುವರಿಯುವುದು)
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.