ಭಾರತದಲ್ಲಿ ಪೆಟ್ರೋಕೆಮಿಕಲ್ ಉದ್ದಿಮೆ ವಿಸ್ತರಣೆ: ಶೂನ್ಯ ಮಾಲಿನ್ಯ ಸಾಧಿಸುವುದು ಹೇಗೆ ? | Vartha Bharati- ವಾರ್ತಾ ಭಾರತಿ

--

ಭಾರತದಲ್ಲಿ ಪೆಟ್ರೋಕೆಮಿಕಲ್ ಉದ್ದಿಮೆ ವಿಸ್ತರಣೆ: ಶೂನ್ಯ ಮಾಲಿನ್ಯ ಸಾಧಿಸುವುದು ಹೇಗೆ ?

ಭಾರತದಲ್ಲಿ ಪ್ರತಿ ವರ್ಷ 9.46 ಮೆಗಾ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಈ ಪೈಕಿ ಶೇ. 40ರಷ್ಟನ್ನು ಸಂಗ್ರಹಿಸಲಾಗುತ್ತಿಲ್ಲ ಅಥವಾ ಸುಡಲಾಗುತ್ತದೆ, ಬಿಸಾಡಲಾಗುತ್ತದೆ ಅಥವಾ ಹೊಂಡಗಳಿಗೆ ಅಥವಾ ಹರಿಯುವ ನೀರಿಗೆ ಎಸೆಯಲಾಗುತ್ತದೆ. ಒಟ್ಟು ಉತ್ಪಾದನೆಯಾಗುವ ಪ್ಲಾಸ್ಟಿಕ್‌ಗಳ ಪೈಕಿ ಅರ್ಧದಷ್ಟನ್ನು ಪ್ಯಾಕೇಜಿಂಗ್‌ಗಳಲ್ಲಿ ಬಳಸಲಾಗುತ್ತದೆ. ಈ ಪೈಕಿ ಹೆಚ್ಚಿನವು ಏಕ ಬಳಕೆಯ ಪ್ಯಾಕೇಜಿಂಗ್‌ಗಳು. 5,000 ನೋಂದಾಯಿತ ಪ್ಲಾಸ್ಟಿಕ್ ಮರುಬಳಕೆ ಘಟಕಗಳು ಅಸ್ತಿತ್ವದಲ್ಲಿದ್ದರೂ, ಪ್ಲಾಸ್ಟಿಕ್ ಮರುಬಳಕೆ ಎನ್ನುವುದು ಕೇವಲ ಬಾಯಿಮಾತಿನ ಪ್ರಕ್ರಿಯೆಯಾಗಿದೆ. ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸುವ, ಮರು ಬಳಕೆ ಮಾಡುವ ಸಂಕೀರ್ಣ ವ್ಯವಸ್ಥೆಯೊಂದು ಪ್ಲಾಸ್ಟಿಕ್ ಆರ್ಥಿಕತೆಯಿಂದ ಸ್ವಲ್ಪಲಾಭವನ್ನು ಮಾಡಿಕೊಳ್ಳುತ್ತಿದೆ.

ಪ್ಲಾಸ್ಟಿಕ್ ಮಾಲಿನ್ಯದಲ್ಲಿ ತೀವ್ರ ಹೆಚ್ಚಳವಾಗಿರುವುದನ್ನು ಹಲವು ವರದಿಗಳು ಮತ್ತು ಅಧ್ಯಯನಗಳು ಇತ್ತೀಚೆಗೆ ಹೊರಗೆಡಹಿವೆ ಹಾಗೂ ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಕರೆ ನೀಡಿವೆ. ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ನಡುವೆ ಸಂಬಂಧವಿದೆ ಎಂದು ಹೇಳುವ ವರದಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

2021ರ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು ಸಾಗರಗಳಲ್ಲಿರುವ ಪ್ಲಾಸ್ಟಿಕ್‌ಗೆ ಸಂಬಂಧಿಸಿದ ಸಮಸ್ಯೆಯ ಜಾಗತಿಕ ಅಧ್ಯಯನ ‘ಫ್ರಮ್ ಪೊಲ್ಯುಶನ್ ಟು ಸೊಲ್ಯುಶನ್’ನ್ನು ಬಿಡುಗಡೆ ಮಾಡಿತು. ಇದು ಸಾಗರಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಮೈಕ್ರೋಪ್ಲಾಸ್ಟಿಕ್ ಕುರಿತ 2016ರ ವರದಿಯ ಪರಿಷ್ಕೃತ ಭಾಗವಾಗಿದೆ. ಸಾಗರಗಳಲ್ಲಿ ಚೆಲ್ಲಲಾಗುವ ಕಸ, ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್‌ಗಳು ಮತ್ತು ಮೈಕ್ರೋಪ್ಲಾಸ್ಟಿಕ್‌ಗಳ ಪ್ರಮಾಣ ಮತ್ತು ಗಂಭೀರತೆಯ ಬಗ್ಗೆ ಜಾಗೃತಿ ಹುಟ್ಟಿಸುವ ಆಶಯವನ್ನು ‘ಫ್ರಮ್ ಪೊಲ್ಯುಶನ್ ಟು ಸೊಲ್ಯುಶನ್’ ಹೊಂದಿದೆ. ಈ ಸಮಸ್ಯೆಗೆ ಸಂಬಂಧಿಸಿದ ಮಾಹಿತಿ ಕೊರತೆಯನ್ನು ನೀಗಿಸುವುದು, ಪರಿಣಾಮಕಾರಿ ಪರಿಹಾರಗಳನ್ನು ಉತ್ತೇಜಿಸುವುದು ಮತ್ತು ಸಾಗರ ಮಾಲಿನ್ಯ ತಡೆಯಲು ಜಾಗತಿಕ ಮಧ್ಯಪ್ರವೇಶ ಹಾಗೂ ಪಾರಿಸಾರಿಕ ಮತ್ತು ಮಾನವ ಆರೋಗ್ಯವನ್ನು ರಕ್ಷಿಸುವ ಉದ್ದೇಶವನ್ನು ಈ ಪುರಾವೆ ಆಧಾರಿತ ವರದಿ ಹೊಂದಿದೆ.

2021 ಅಕ್ಟೋಬರ್‌ನಲ್ಲಿ, ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋಪರೇಶನ್ ಆ್ಯಂಡ್ ಡೆವೆಲಪ್‌ಮೆಂಟ್‌ಗೆ ಸೇರಿದ ಎರಡು ಪತ್ರಿಕೆಗಳು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಪರಿಷ್ಕೃತ ಮಾಹಿತಿಗಳನ್ನು ನೀಡಿವೆ ಹಾಗೂ ಹಲವು ಕ್ರಮಗಳನ್ನು ಶಿಫಾರಸು ಮಾಡಿವೆ. ಇತರ ಜಾಗತಿಕ ಸಂಘಟನೆಗಳೂ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ದೃಢವಾದ ನಿಲುವುಗಳನ್ನು ತೆಗೆದುಕೊಂಡಿವೆ.

‘ಕಾಮನ್ ಸೀಸ್’ ಎಂಬ ಸಂಘಟನೆಯು ರಾಷ್ಟ್ರೀಯ ಸರಕಾರಗಳಿಗಾಗಿ ರೂಪಿಸಿರುವ ಮೌಲ್ಯಮಾಪನ ಸಾಧನ ‘ಪ್ಲಾಸ್ಟಿಕ್ ಡ್ರಾಡೌನ್’, ಸಮರ್ಪಕ ನಿರ್ವಹಣಾ ತಂತ್ರೋಪಾಯಗಳನ್ನು ರೂಪಿಸಲು ದೇಶವೊಂದರ ಲಭ್ಯವಿರುವ ಸಂಪನ್ಮೂಲಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶದ ‘ಝೀರೋ ವೇಸ್ಟ್’ ಕಾರ್ಯಕ್ರಮವು, ಯುರೋಪ್‌ನ ನಗರಗಳಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಕಾನೂನು ಮತ್ತು ಆರ್ಥಿಕ ಪರಿಹಾರಗಳನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದೆ. ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹವಾಮಾನ ಬಿಕ್ಕಟ್ಟುಗಳನ್ನು ನಿಭಾಯಿಸುವಂತೆ ಕೋರಿ ಪ್ಲಾಸ್ಟಿಕ್ ಪೊಲ್ಯೂಶನ್ ಕೋಯಲೀಶನ್‌ಗೆ ಸೇರಿದ ಯುವ ರಾಯಭಾರಿಗಳು 26ನೇ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಜಾಗತಿಕ ನಾಯಕರಿಗೆ ಮನವಿ ಮಾಡಿದರು. ಗ್ಲೋಬಲ್ ಅಲಯನ್ಸ್ ಫಾರ್ ಇನ್ಸಿನರೇಟರ್ ಆಲ್ಟರ್ನೇಟಿವ್ಸ್, ಬ್ರೇಕ್ ಫ್ರೀ ಫ್ರಮ್ ಪ್ಲಾಸ್ಟಿಕ್ಸ್, ಬಿಯಾಂಡ್ ಪ್ಲಾಸ್ಟಿಕ್ಸ್ ಮತ್ತು ರಿಸೈಕ್ಲಿಂಗ್ ಅಸೋಸಿಯೇಶನ್ ಎಂಬ ಸಂಘಟನೆಗಳೂ ಇಂತಹದೇ ಕ್ರಮಗಳನ್ನು ತೆಗೆದುಕೊಂಡಿವೆ.

ಪರಿಸರ ಸಮಾವೇಶದಲ್ಲಿ ಹಲವು ಸಂಘಟನೆಗಳು ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯನ್ನು ಪ್ರಸ್ತಾಪಿಸಲು ಯಾಕೆ ಪ್ರಯತ್ನಿಸಿದವು ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ, ಮೊದಲು ನಾವು ಸಾಗರಗಳು, ಪರಿಸರ ವಲಯಗಳು ಮತ್ತು ಮಾನವ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಬೀರುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಮಾಲಿನ್ಯದ ಅತ್ಯಂತ ಗಂಭೀರ ಪರಿಣಾಮವೆಂದರೆ ಅದು ಜಾಗತಿಕ ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಮತ್ತು ಹವಾಮಾನ ಬದಲಾವಣೆಯಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತದೆ. ಆದರೆ, ಈ ವಿಷಯ ಹೆಚ್ಚಿನವರಿಗೆ ಗೊತ್ತಿಲ್ಲ.

 2019ರಲ್ಲಿ, ‘ಪ್ಲಾಸ್ಟಿಕ್ ಕ್ಲೈಮೇಟ್: ದ ಹಿಡನ್ ಕಾಸ್ಟ್ಸ್ ಆಫ್ ಎ ಪ್ಲಾಸ್ಟಿಕ್ ಪ್ಲಾನೆಟ್’ ಎಂಬ ಹೆಸರಿನ ವರದಿಯು ಪ್ಲಾಸ್ಟಿಕ್‌ನ ಜೀವನಚಕ್ರದ ಬಗ್ಗೆ ವಿಶ್ಲೇಷಣೆ ನಡೆಸಿತು ಹಾಗೂ ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮುಖ ಮೂಲಗಳು, ಪತ್ತೆಯಾಗದ ಅನಿಲ ಹೊರಸೂಸುವಿಕೆಯ ಮೂಲಗಳು ಮತ್ತು ಪ್ಲಾಸ್ಟಿಕ್‌ನ ಪರಿಸರ ಪರಿಣಾಮಗಳ ಕೀಳಂದಾಜುವಿಕೆಗೆ ಕಾರಣವಾದ ಅನಿಶ್ಚಿತತೆಗಳನ್ನು ಗುರುತಿಸಿತು.

 2021 ಅಕ್ಟೋಬರ್‌ನಲ್ಲಿ, ‘ಬಿಯಾಂಡ್ ಪ್ಲಾಸ್ಟಿಕ್ಸ್’ ಸಂಘಟನೆಯು ಹಿಂದಿನ ಅಧ್ಯಯನಗಳ ಆಧಾರದಲ್ಲಿ ರಚಿಸಿ ಇನ್ನೊಂದು ವರದಿ ‘ದ ನ್ಯೂ ಕೋಲ್: ಪ್ಲಾಸ್ಟಿಕ್ಸ್ ಕ್ಲೈಮೇಟ್ ಚೇಂಜ್’ ಎಂಬ ಹೆಸರಿನ ಇನ್ನೊಂದು ವರದಿಯನ್ನು ಬಿಡುಗಡೆಗೊಳಿಸಿತು. ಪ್ಲಾಸ್ಟಿಕ್ ಪರಿಸರದ ಮೇಲೆ ಬೀರುತ್ತಿರುವ ವಿನಾಶಕಾರಿ ಪರಿಣಾಮದ ಬಗ್ಗೆ ಈ ವರದಿಯು ವಿವರಗಳನ್ನು ಒದಗಿಸಿದೆ. ಯಾವುದೇ ಸಾರ್ವಜನಿಕ ನಿಗಾ ಇಲ್ಲದೆ ಹಾಗೂ ಸರಕಾರಿ ಮತ್ತು ಕೈಗಾರಿಕಾ ಉತ್ತರದಾಯಿತ್ವವಿಲ್ಲದೆ ಇದು ನಡೆಯುತ್ತಿದೆ ಎಂದು ಅದು ಹೇಳಿದೆ. ಈ ಎರಡೂ ವರದಿಗಳು ಮುಖ್ಯವಾಗಿ ಅಮೆರಿಕದ ಪ್ಲಾಸ್ಟಿಕ್ ಉದ್ದಿಮೆಯ ಮೇಲೆ ಗಮನ ಹರಿಸಿವೆ. ವಿಸ್ತಾರಗೊಳ್ಳುತ್ತಿರುವ ಪೆಟ್ರೋಕೆಮಿಕಲ್ ಉದ್ದಿಮೆಗಳನ್ನು ಹೊಂದಿರುವ ದೇಶಗಳಿಗೂ ಈ ವರದಿಯು ಅನ್ವಯಗೊಳ್ಳುತ್ತದೆ. ಅಮೆರಿಕವು ಜಗತ್ತಿನ ಅತಿ ದೊಡ್ಡ ಪ್ಲಾಸ್ಟಿಕ್ ಮಾಲಿನ್ಯಕಾರಕ ದೇಶವಾಗಿದೆ.

ಪ್ಲಾಸ್ಟಿಕನ್ನು ಕಚ್ಚಾ ತೈಲ ಆಧರಿತ ಉತ್ಪನ್ನ ನಾಫ್ತ ಮತ್ತು ಈಥೇನ್‌ನಿಂದ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇತರ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಈ ರಾಸಾಯನಿಕಗಳ ಪೈಕಿ ಹೆಚ್ಚಿನವುಗಳನ್ನು ಭೂಗತ ಇಂಧನದಿಂದ ಹೊರತೆಗೆಯಲಾಗುತ್ತದೆ. ಹಾಗಾಗಿ, ಪ್ಲಾಸ್ಟಿಕ್ ತಯಾರಿಕೆಯಲ್ಲಿ ಗಮನಾರ್ಹ ಪ್ರಮಾಣದ ಹಸಿರುಮನೆ ಅನಿಲಗಳು ಪರಿಸರವನ್ನು ಸೇರುತ್ತವೆ.

ಪ್ಲಾಸ್ಟಿಕ್ ತಯಾರಿಕೆಯಲ್ಲಿ 8,000ಕ್ಕೂ ಅಧಿಕ ರಾಸಾಯನಿಕಗಳ ಬಳಕೆಯನ್ನು ಇತ್ತೀಚಿನ ಅಧ್ಯಯನವೊಂದು ಗುರುತಿಸಿದೆ. ಈ ಪೈಕಿ ಕೆಲವು ಹಸಿರುಮನೆ ಅನಿಲಗಳ ಉತ್ಪಾದನೆಯಲ್ಲಿ ಇಂಗಾಲದ ಡೈ ಆಕ್ಸೈಡ್‌ಗಿಂತಲೂ ಸಾವಿರ ಪಟ್ಟು ಅಧಿಕ ಪರಿಣಾಮಕಾರಿಯಾಗಿವೆ. ಒಮ್ಮೆ ಬಳಸುವ ಪ್ಯಾಕೇಜಿಂಗ್, ಪ್ಲಾಸ್ಟಿಕ್ ರೆಸಿನ್‌ಗಳು, ಫೋಮ್ಡ್ ಪ್ಲಾಸ್ಟಿಕ್ ಇನ್ಸುಲೇಶನ್, ಬಾಟಲಿಗಳು ಮತ್ತು ಕಂಟೇನರ್‌ಗಳು ಮುಂತಾದ ಉತ್ಪನ್ನಗಳು ಜಾಗತಿಕ ಹಸಿರುಮನೆ ಅನಿಲಗಳ ಉತ್ಪಾದನೆಗೆ ಅಗಾಧ ದೇಣಿಗೆ ನೀಡುತ್ತಿವೆ.

ಹೆಚ್ಚಿನ ಪ್ಲಾಸ್ಟಿಕ್‌ಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ, ಮಾಲಿನ್ಯದ ತೀವ್ರತೆಯನ್ನು ಕಡಿಮೆ ಮಾಡಬಹುದು ಅಷ್ಟೆ. ಪ್ಲಾಸ್ಟಿಕ್‌ಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಇನ್ಸಿನರೇಟ್ ಮಾಡಲಾಗುತ್ತದೆ ಅಥವಾ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಸ್ಥಾವರಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ, ಇದನ್ನು ಕೆಲವು ಸಲ ರಾಸಾಯನಿಕ ಮರು ಬಳಕೆ ಎಂಬುದಾಗಿ ಕರೆಯಲಾಗುತ್ತದೆ. ಪ್ಲಾಸ್ಟಿಕ್, ಗುಜರಿಗಿಂತ 4-5 ಪಟ್ಟು ಹೆಚ್ಚು ಮೌಲ್ಯವನ್ನು ಇಂಧನವಾಗಿ ನೀಡುತ್ತದೆ. ಆದರೆ ಈ ಮರುಬಳಕೆ ಪ್ರಕ್ರಿಯೆಗಳು ಹೆಚ್ಚಿನ ಇಂಗಾಲದ ಡೈ ಆಕ್ಸೈಡನ್ನು ವಾತಾವರಣಕ್ಕೆ ಬಿಡುಗಡೆಗೊಳಿಸುತ್ತವೆ.

ಭಾರತದ ಪ್ಲಾಸ್ಟಿಕ್ ಸರಣಿ

ಪೆಟ್ರೋಕೆಮಿಕಲ್ ಉದ್ದಿಮೆಗಳನ್ನು ವಿಸ್ತರಿಸುತ್ತಿರುವ ಹಲವು ದೇಶಗಳಲ್ಲಿ ಭಾರತವೂ ಸೇರಿದೆ. ದೇಶಿ ಉತ್ಪನ್ನವನ್ನು ಹೆಚ್ಚಿಸಲು 2030ರ ವೇಳೆಗೆ 100 ಬಿಲಿಯ ಡಾಲರ್ ಹೂಡಿಕೆಯನ್ನು ಮಾಡಲಾಗುತ್ತಿದ್ದು, ಮುಂದಿನ ದಶಕದಲ್ಲಿ ಭಾರತದ ಕಚ್ಚಾತೈಲ ಬೇಡಿಕೆ ಹೆಚ್ಚಲಿದೆ. ಹಾಗಾಗಿ ಪೆಟ್ರೋಕೆಮಿಕಲ್ ಉತ್ಪಾದನೆಯೂ ವೃದ್ಧಿಸಲಿದೆ. ಡೀಕಾರ್ಬನೈಸೇಶನ್ ಮುಂತಾದ ಕೈಗಾರಿಕಾ ಪ್ರಕ್ರಿಯೆಗಳು ಮತ್ತು ಪ್ಲಾಸ್ಟಿಕ್ ಆಧಾರಿತ ಇಂಧನಗಳು ಸೂಕ್ತ ಪರಿಹಾರವಾಗಿವೆ ಎಂಬುದಾಗಿ ಹೇಳಲಾಗುತ್ತಿದೆಯಾದರೂ, ಆ ಪ್ರಕ್ರಿಯೆಗಳ ದಕ್ಷತೆ ಕಡಿಮೆ ಮತ್ತು ವೆಚ್ಚವೂ ಹೇಳಿಕೊಂಡಿರುವುದಕ್ಕಿಂತ ಹೆಚ್ಚು. ಅದರ ಫಲಿತಾಂಶವೆಂದರೆ, ಹೆಚ್ಚಿನ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಮತ್ತು ಹೆಚ್ಚಿನ ಇಂಗಾಲ ಉತ್ಪಾದನೆ.

ಭಾರತದಲ್ಲಿ ಪ್ರತಿ ವರ್ಷ 9.46 ಮೆಗಾ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಈ ಪೈಕಿ ಶೇ. 40ರಷ್ಟನ್ನು ಸಂಗ್ರಹಿಸಲಾಗುತ್ತಿಲ್ಲ ಅಥವಾ ಸುಡಲಾಗುತ್ತದೆ, ಬಿಸಾಡಲಾಗುತ್ತದೆ ಅಥವಾ ಹೊಂಡಗಳಿಗೆ ಅಥವಾ ಹರಿಯುವ ನೀರಿಗೆ ಎಸೆಯಲಾಗುತ್ತದೆ. ಒಟ್ಟು ಉತ್ಪಾದನೆಯಾಗುವ ಪ್ಲಾಸ್ಟಿಕ್‌ಗಳ ಪೈಕಿ ಅರ್ಧದಷ್ಟನ್ನು ಪ್ಯಾಕೇಜಿಂಗ್‌ಗಳಲ್ಲಿ ಬಳಸಲಾಗುತ್ತದೆ. ಈ ಪೈಕಿ ಹೆಚ್ಚಿನವು ಏಕ ಬಳಕೆಯ ಪ್ಯಾಕೇಜಿಂಗ್‌ಗಳು. 5,000 ನೋಂದಾಯಿತ ಪ್ಲಾಸ್ಟಿಕ್ ಮರುಬಳಕೆ ಘಟಕಗಳು ಅಸ್ತಿತ್ವದಲ್ಲಿದ್ದರೂ, ಪ್ಲಾಸ್ಟಿಕ್ ಮರುಬಳಕೆ ಎನ್ನುವುದು ಕೇವಲ ಬಾಯಿಮಾತಿನ ಪ್ರಕ್ರಿಯೆಯಾಗಿದೆ. ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸುವ, ಮರು ಬಳಕೆ ಮಾಡುವ ಸಂಕೀರ್ಣ ವ್ಯವಸ್ಥೆಯೊಂದು ಪ್ಲಾಸ್ಟಿಕ್ ಆರ್ಥಿಕತೆಯಿಂದ ಸ್ವಲ್ಪಲಾಭವನ್ನು ಮಾಡಿಕೊಳ್ಳುತ್ತಿದೆ.

ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಸ್ಥಾವರಗಳ ದಕ್ಷತೆ ಕಡಿಮೆ. ಅವುಗಳು ಅತಿ ಹೆಚ್ಚು ಮೂಲವಸ್ತುಗಳನ್ನು ಬಳಸಿ ಅತಿ ಕಡಿಮೆ ಅಂತ್ಯ ಉತ್ಪನ್ನವನ್ನು ನೀಡುತ್ತವೆ ಹಾಗೂ ಇವುಗಳು ಭಾರೀ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಮುಂತಾದ ವಾತಾವರಣ ಬಿಸಿ ಮಾಡುವ ಅನಿಲಗಳನ್ನು ಹೊರಬಿಡುತ್ತವೆ. ಕಡಿಮೆ ದಕ್ಷತೆ ಪ್ರಮಾಣದಿಂದಾಗಿ ಸ್ಥಗಿತಗೊಳ್ಳುವಿಕೆ, ಪರಿಸರ ರಕ್ಷಣೆ ನಿಯಮಗಳ ಉಲ್ಲಂಘನೆಗಾಗಿ ದಂಡ ಮತ್ತು ಗರಿಷ್ಠ ಉತ್ಪಾದನಾ ವೆಚ್ಚಗಳು ಮುಂತಾದ ಹಲವು ಹಿನ್ನಡೆಗಳ ಹೊರತಾಗಿಯೂ, ಭಾರತವು ಇಂತಹ ಮರುಬಳಕೆ ತಂತ್ರಜ್ಞಾನಗಳಲ್ಲಿ ಹಣ ಹೂಡುವುದನ್ನು ಮುಂದುವರಿಸುತ್ತಿದೆ. ಯಾಕೆಂದರೆ ಬೇರೆ ಆಯ್ಕೆಯಿಲ್ಲ.

‘‘ಇವುಗಳು ತ್ಯಾಜ್ಯ ವಿಲೇವಾರಿ ಅಥವಾ ತ್ಯಾಜ್ಯ ಸಂಸ್ಕರಣೆಯ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಧಾನಗಳು. ಆದರೆ ದಕ್ಷತೆ ಮತ್ತು ವೆಚ್ಚ ಕಡಿತ ಸಾಧಿಸಲು ಇನ್ನೂ ಹೆಚ್ಚಿನ ಕ್ರಮಗಳ ಅಗತ್ಯವಿದೆ’’ ಎಂದು ‘ದ ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್’ನಲ್ಲಿ ಘನ ತ್ಯಾಜ್ಯ ನಿರ್ವಹಣೆ ಪರಿಣತರಾಗಿರುವ ಕೌಶಿಕ್ ಚಂದ್ರಶೇಖರ್ ಹೇಳುತ್ತಾರೆ. ಇನ್ಸಿನರೇಶನ್ ಮತ್ತು ಇಂಧನ ತಯಾರಿಸುವ ಉದ್ದೇಶದ ಮರುಬಳಕೆ ವಿಧಾನಗಳು ಹಸಿರುಮನೆ ಅನಿಲಗಳ ಉತ್ಪಾದನೆಗೆ ಕಾರಣವಾಗುವುದಾದರೆ, ಅವುಗಳು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಪರಿಹಾರದ ಒಂದು ಭಾಗ ಮಾತ್ರ ಆಗಬಹುದಾಗಿದೆ. 2070ರ ವೇಳೆಗೆ ಮಾಲಿನ್ಯ ಮುಕ್ತ (ನೆಟ್ ಝೀರೊ) ಭಾರತದ ಗುರಿಯನ್ನು ಸಾಧಿಸಬೇಕಾದರೆ ಪರಿಣಾಮಕಾರಿ ಪರಿಹಾರಗಳ ಅಗತ್ಯವಿದೆ.

ನೆಟ್ ಝೀರೊ ಗುರಿ

2070ರ ವೇಳೆಗೆ, ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಯಾವುದೇ ಅನಿಲ ಭಾರತದಲ್ಲಿ ಉತ್ಪಾದನೆಯಾಗುವುದಿಲ್ಲ (ನೆಟ್ ಝೀರೊ) ಎಂಬ ಭಾರತದ ಮಹತ್ವಾಕಾಂಕ್ಷೆಯ ಘೋಷಣೆಯನ್ನು 2021ರ ನವೆಂಬರ್‌ನಲ್ಲಿ ವ್ಯಾಪಕವಾಗಿ ಸಂಭ್ರಮಿಸಲಾಯಿತು.

ಜಗತ್ತಿನ ನಾಲ್ಕನೇ ಅತಿ ದೊಡ್ಡ ಇಂಗಾಲದ ಡೈ ಆಕ್ಸೈಡ್ ಹೊರಸೂಸುವ ದೇಶ ಭಾರತವಾಗಿದೆ. ಹವಾಮಾನ ಬದಲಾವಣೆಯನ್ನು ಗಣನೆಗೆ ತೆಗೆದುಕೊಂಡು ಅದನ್ನು ನಿಭಾಯಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವ ಭಾರತದ ಇಂಗಿತವನ್ನು ಈ ಘೋಷಣೆಯು ವ್ಯಕ್ತಪಡಿಸಿದೆ. ಆದರೆ, ಭಾರತದ ಕೈಗಾರಿಕಾ ವಿಧಾನಗಳು ಬೇರೆಯದೇ ದಾರಿಯಲ್ಲಿ ಸಾಗುತ್ತಿದ್ದು, ಇನ್ನು 50 ವರ್ಷಗಳಲ್ಲಿ ನೆಟ್-ಝೀರೊ ಗುರಿಯನ್ನು ವಾಸ್ತವಿಕವಾಗಿ ಸಾಧಿಸುವುದು ಸಾಧ್ಯವೇ?

ಇನ್ನು 50 ವರ್ಷಗಳಲ್ಲಿ ಶೂನ್ಯ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಸಾಧಿಸಬೇಕಾದರೆ, ನಮ್ಮ ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 2050ರ ವೇಳೆಗೆ 1,689 ಗಿಗಾವ್ಯಾಟ್ ಮತ್ತು 2070ರ ವೇಳೆಗೆ 5,630 ಗಿಗಾವ್ಯಾಟ್‌ಗಳಿಗೆ ಹೆಚ್ಚಬೇಕು ಎಂದು ಕೌನ್ಸಿಲ್ ಫಾರ್ ಎನರ್ಜಿ, ಎನ್ವಿರಾನ್‌ಮೆಂಟ್ ಆ್ಯಂಡ್ ವಾಟರ್ ರಿಸೋರ್ಸಸ್‌ನ ಅಧ್ಯಯನವೊಂದು ಹೇಳುತ್ತದೆ.

ನೆಟ್ ಝೀರೊ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ವಿದ್ಯುತ್ ಉತ್ಪಾದನೆ, ಸಾರಿಗೆ, ನಿರ್ಮಾಣ ಮತ್ತು ಉದ್ದಿಮೆ ಕ್ಷೇತ್ರಗಳಿಗೆ ನವೀಕರಿಸುವ ಇಂಧನ ಮೂಲಗಳನ್ನು ಒದಗಿಸಬೇಕಾಗುತ್ತದೆ. ಇದಕ್ಕೆ ಬೇಕಾಗುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 10 ಟ್ರಿಲಿಯ ಡಾಲರ್ (ಸುಮಾರು 750 ಲಕ್ಷ ಕೋಟಿ ರೂಪಾಯಿ) ವೆಚ್ಚ ತಗಲುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

 ‘‘ಮುಂದಿನ ದಿನಗಳಲ್ಲಿ ಪೆಟ್ರೋಕೆಮಿಕಲ್ ಉದ್ದಿಮೆಯು ಹೊರಸೂಸುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಲೆಕ್ಕ ಮಾಡಬೇಕಾದರೆ, ಪ್ಲಾಸ್ಟಿಕ್ ಉತ್ಪಾದನೆಗಾಗಿ ಬಳಸಲಾದ ಇಂಧನಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ನಿರ್ವಹಿಸುವುದು ಅಗತ್ಯವಾಗಿದೆ’’ ಎಂದು ಕೌನ್ಸಿಲ್ ಫಾರ್ ಎನರ್ಜಿ, ಎನ್ವಿರಾನ್‌ಮೆಂಟ್ ಆ್ಯಂಡ್ ವಾಟರ್ ರಿಸರ್ಚ್ ವರದಿಯ ಸಹಲೇಖಕ ವೈಭವ್ ಚತುರ್ವೇದಿ ಹೇಳುತ್ತಾರೆ.

‘‘ಆದರೆ, ಕೈಗಾರಿಕಾ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್‌ಗೆ ಹೊರತಾದ ಪರ್ಯಾಯಗಳಿಗೆ ಬದಲಾಗಿ ಪ್ಲಾಸ್ಟಿಕ್ ಇರಲು ಅವಕಾಶ ಮಾಡಿಕೊಡುವ ಸರ್ಕ್ಯುಲರ್ ಆರ್ಥಿಕತೆಗಳನ್ನು ಜಾರಿಗೊಳಿಸುವುದು ಪೆಟ್ರೋಕೆಮಿಕಲ್ ಕ್ಷೇತ್ರದ ವಾಣಿಜ್ಯ ಹಿತಾಸಕ್ತಿಗೆ ಪೂರಕವಾಗಿದೆ’’ ಎಂದು ಅವರು ಹೇಳುತ್ತಾರೆ.

ಕೈಗಾರಿಕಾ ಇಂಧನವಾಗಿ ಪ್ಲಾಸ್ಟಿಕ್‌ಗಳ ಮರುಬಳಕೆಯು ಮಾಲಿನ್ಯಕ್ಕೆ ದೀರ್ಘಾವಧಿಯ ಸ್ಪರ್ಧಾರ್ಹ ಪರಿಹಾರವಲ್ಲ ಎನ್ನುವುದನ್ನು ಈ ವರದಿಯು ನೆನಪಿಸುತ್ತದೆ.

2021 ಎಪ್ರಿಲ್‌ನಲ್ಲಿ, ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌ನ ಮಾರ್ಗನಕ್ಷೆಯು, ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆ ಸಮಸ್ಯೆಯನ್ನು ನಿಭಾಯಿಸಲು ‘ಸರ್ಕ್ಯುಲರ್ ಪ್ಲಾಸ್ಟಿಕ್ ವ್ಯಾಲ್ಯೂ ಚೇನ್’ ಮುಂದಿಟ್ಟಿತು. ಇದು ಭೂಗತ ಇಂಧನದಿಂದ ಪ್ಲಾಸ್ಟಿಕ್ ಉತ್ಪಾದಿಸುವುದನ್ನು ನಿರುತ್ತೇಜಿಸುವ ಹಾಗೂ ಮಾಲಿನ್ಯವನ್ನು ನಿಭಾಯಿಸಲು ‘ಪ್ಲಾಸ್ಟಿಕ್ ಉತ್ಪಾದನೆಯನ್ನು ಕಡಿಮೆ ಮಾಡುವ, ಮರುಬಳಕೆ ಮಾಡುವ’ ಪ್ರವೃತ್ತಿಗೆ ಉತ್ತೇಜನೆ ನೀಡುವ ಪ್ರಸ್ತಾವವನ್ನು ಮಂಡಿಸಿತು.

ಜೈವಿಕ ಮೂಲದಿಂದ ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ತಯಾರಾಗುವ ಜೈವಿಕ ಪ್ಲಾಸ್ಟಿಕ್‌ಗಳು ಮತ್ತು ಅನುಕೂಲಕರ ಪರಿಸ್ಥಿತಿಗಳಲ್ಲಿ ಕೊಳೆಯಬಲ್ಲ ಓಕ್ಸೋ-ಬಯೋಡೀಗ್ರೇಡಬಲ್ ಪ್ಲಾಸ್ಟಿಕ್‌ಗಳು ಹಸಿರುಮನೆ ಅನಿಲಗಳನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸುತ್ತವೆ. ಇವು ಭೂಗತ ಇಂಧನದಿಂದ ತಯಾರಾಗುವ ಪ್ಲಾಸ್ಟಿಕ್‌ಗಳಿಗೆ ಪರ್ಯಾಯವಾಗಬಹುದಾಗಿದೆ. ಆದರೆ, ಈ ಎರಡರಲ್ಲಿ ಯಾವುದೂ ಸಂಪೂರ್ಣ ಕೊಳೆಯಬಲ್ಲ ಪ್ಲಾಸ್ಟಿಕ್ ಅಲ್ಲ ಹಾಗೂ ಉದ್ದಿಮೆಗಳು ಪ್ಯಾಕೇಜಿಂಗ್‌ಗಾಗಿ ಇತರ ಆಯ್ಕೆಗಳನ್ನು ಪರಿಗಣಿಸಬೇಕಾಗಿದೆ.

ಅಂತಿಮವಾಗಿ, ಸಾಗರ ಪರಿಸರದಲ್ಲಿರುವ ತ್ಯಾಜ್ಯ ಪ್ಲಾಸ್ಟಿಕ್ ಸಮಸ್ಯೆಯನ್ನು ನಿಭಾಯಿಸಲು ಮ್ಯಾನ್‌ಗ್ರೋವ್‌ಗಳು ಮತ್ತು ಸಮುದ್ರ ಹುಲ್ಲುಗಾವಲುಗಳನ್ನು ಬೆಳೆಸುವುದು ಅಗತ್ಯವಾಗಿದೆ. ಇವುಗಳು ಪ್ಲಾಸ್ಟಿಕ್‌ಗಳನ್ನು ಹಿಡಿದಿಟ್ಟುಕೊಂಡು ಹೂತುಹಾಕುತ್ತವೆ ಹಾಗೂ ಸಮುದ್ರಗಳಿಗೆ ಸೇರುವುದನ್ನು ತಡೆಯುತ್ತವೆ. ಇದರಲ್ಲಿ ಇನ್ನೊಂದು ಪ್ರಯೋಜನವೂ ಇದೆ. ಇವುಗಳು ಜಮೀನುಗಳಲ್ಲಿರುವ ಕಾಡುಗಳಿಗಿಂತ ಹೆಚ್ಚಿನ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತವೆ.

ಪ್ಲಾಸ್ಟಿಕ್ ಮಾಲಿನ್ಯ ಮತ್ತು ಹವಾಮಾನ ಬದಲಾವಣೆ- ಈ ಶತಮಾನದ ಎರಡು ಅತ್ಯಂತ ಗಂಭೀರ ಜಾಗತಿಕ ಸಮಸ್ಯೆಗಳಾಗಿವೆ. ಇವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಪರಿಹಾರಗಳ ಸಂಶೋಧನೆಗೆ ಹಣ ಹೂಡಿದರೆ ನೆಟ್-ಝೀರೋ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಮುನ್ನಡೆಯಬಹುದಾಗಿದೆ. ಆ ಮೂಲಕ ಸಮುದಾಯಗಳು ಮತ್ತು ಅವುಗಳ ವಾಸಸ್ಥಾನಗಳನ್ನು ರಕ್ಷಿಸಬಹುದಾಗಿದೆ.

ಕೃಪೆ: scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top