ಹೊಸ ಜ್ಯೋತಿ ಉರಿಸಲು ಹಳೆ ಜ್ಯೋತಿ ಆರಿಸಬೇಕೆ? | Vartha Bharati- ವಾರ್ತಾ ಭಾರತಿ

--

ಹೊಸ ಜ್ಯೋತಿ ಉರಿಸಲು ಹಳೆ ಜ್ಯೋತಿ ಆರಿಸಬೇಕೆ?

ಇದೀಗ ಅಮರ್ ಜವಾನ್ ಜ್ಯೋತಿಯನ್ನು ಆರಿಸಿ, ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಒಯ್ದ ಕುರಿತು ಪರ ವಿರೋಧ ಅಭಿಪ್ರಾಯಗಳನ್ನು ಅಕ್ಕಪಕ್ಕದಲ್ಲಿರಿಸಿ ನೋಡಿದಾಗ, ಸರಕಾರಿ ವಾದದ ಪೊಳ್ಳುತನ ಕಾಣಿಸಿಕೊಳ್ಳುತ್ತದೆ ಮಾತ್ರವಲ್ಲ; ಅದರ ಉದ್ದೇಶ ಅಥವಾ ದುರುದ್ದೇಶದ ಕುರಿತೇ ಸಂಶಯಪಡುವಂತೆ ಮಾಡುತ್ತದೆ. ಜ್ಯೋತಿಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ; ಅದನ್ನು ಆರಿಸಿಲ್ಲ; ವಿಲೀನಗೊಳಿಸಲಾಗಿರುವುದು ಮಾತ್ರವೆಂದು ಸರಕಾರ ಹೇಳಿದರೂ, ಇನ್ನು ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಭೇಟಿ ನೀಡುವವರಿಗೆ ಕಾಣುವುದು ಬಣಗುಡುವ ನಾಲ್ಕು ಖಾಲಿ ಕುಂಡಗಳು ಮಾತ್ರ. ಉದ್ಘಾಟನೆಯ ಸುವರ್ಣ ಮಹೋತ್ಸವದಂದೇ ಅದು ಬಣಗುಡುವಂತೆ ಮಾಡಲಾಗಿರುವುದು ವಿಪರ್ಯಾಸ.

ನಾನು ದಿಲ್ಲಿಗೆ ಹೋಗಿರುವುದು ಒಂದೇ ಬಾರಿ. ಒಂದೂವರೆ ದಶಕಕ್ಕೂ ಹಿಂದೆ. ಆಗ ದಿಲ್ಲಿಯನ್ನು ಹೆಚ್ಚು ನೋಡಲು ಆಗಲಿಲ್ಲ. ಆದರೆ, ಆ ಭೇಟಿ ನೆನಪಿನಲ್ಲಿ ಅಚ್ಚೊತ್ತಿದಂತೆ ಇರುವುದಕ್ಕೆ ಕಾರಣಗಳು ಎರಡು. ಮೊದಲನೆಯದೆಂದರೆ, ನನ್ನ ಜೊತೆ ಇಡೀ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ಹನ್ನೆರಡು ಮಹಿಳೆಯರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷೆಯಿಂದ ಹಿಡಿದು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯ ತನಕ. ಅವರಿಂದ ಮತ್ತು ದೇಶಾದ್ಯಂತದಿಂದ ಸಾವಿರಕ್ಕೂ ಹೆಚ್ಚು ಮಹಿಳಾ ಜನಪ್ರತಿನಿಧಿಗಳು ಪಾಲುಗೊಂಡಿದ್ದ ಸಮಾವೇಶದಿಂದ ಕಲಿತದ್ದು ಬಹಳ.

ಎರಡನೆಯದೆಂದರೆ, ಇವರ ಜೊತೆ ನಾನು ಇಡೀ ರಾಜಪಥದಲ್ಲಿ ನಡೆದು, ಇಂಡಿಯಾ ಗೇಟ್ ಮತ್ತು ಅಮರ್ ಜವಾನ್ ಜ್ಯೋತಿಯನ್ನು ನೋಡಿದ್ದು. ದೇಶಪ್ರೇಮ, ಯುದ್ಧ, ಸಾವು, ಹುತಾತ್ಮ, ಅಮರ, ಜ್ಯೋತಿ ಇತ್ಯಾದಿ ಪದಗಳು ತುಂಬಾ ಭಾವನಾತ್ಮಕ. ಆ ಇಡೀ ಪರಿಸರದಲ್ಲಿ ಒಂದು ರೀತಿಯ ಮೌನ ಕವಿದಿತ್ತು. ನಾನೇ ಒಂದು ರೀತಿಯ ಬಣ್ಣಿಸಲು ಸಾಧ್ಯವಿಲ್ಲದ ಗಂಭೀರತೆ, ಪಾವಿತ್ರ ವಲಯಕ್ಕೆ ಸೇರಿಹೋದೆ. ದೇಶಕ್ಕಾಗಿ ಸತ್ತವರ ನೆನಪು... ದೇಶಕ್ಕಾಗಿ ಬದುಕಿದವರ ನೆನಪು ಅಲ್ಲಿ ಬರುವುದೇ ಇಲ್ಲ!

ಒಂದು ಭಾವನೆಯ ಪಾಶಕ್ಕೆ ಒಳಗಾದರೂ ಅದರಿಂದ ಹೊರಬಂದು ಸುತ್ತಲೂ ನೋಡಿದೆ. ಜ್ಯೋತಿಗಳು ಬೆಳಗುತ್ತಿವೆ. ಸೈನಿಕನೊಬ್ಬ ಕಲ್ಲಿನಲ್ಲಿ ಕಡೆದಂತೆ ನಿಂತಿದ್ದಾನೆ. ಸುತ್ತ ನಿಂತ ಕೆಲವು ಜನರೂ ಕಲ್ಲುಗಳಂತೆ. ಅದರೆ, ಅವರಲ್ಲಿ ಕೆಲವರ ಕಣ್ಣುಗಳಲ್ಲಿ ನೀರಿಳಿಯುತ್ತಿದೆ. ಆ ಕಣ್ಣುಗಳು ಅಲ್ಲೆಲ್ಲೋ ಏನನ್ನೋ ಹುಡುಕುತ್ತಿವೆ. ಮೇಲೆ ಹೇಳಿದ ಜೀವಗಳ- ಕಲ್ಲಿನಂತೇ ಇದ್ದವರ, ಆ ಹನಿತುಂಬಿದ ಕಣ್ಣುಗಳು ನೋಡುತ್ತಿದ್ದದ್ದು ಏನನ್ನು? ಅಲ್ಲಿ ಬರೆದ ಹೆಸರುಗಳನ್ನು. ಸರ್ದಾರ್, ಸಿಪಾಯಿ, ಹವಲ್ದಾರ್, ಸುಬೇದಾರ್... ಉಧಾಮ್ ಸಿಂಗ್, ಮುಹಮ್ಮದ್ ಗೌಸ್, ಆಲ್ಬರ್ಟ್ ಡಿಸಿಲ್ವಾ... ಆ ಎಪ್ಪತ್ತು ಸಾವಿರ ಹುತಾತ್ಮ ಭಾರತೀಯರ ನಡುವೆ ತಮ್ಮ ಅಜ್ಜ, ಪಿಜ್ಜರ, ಹಿರಿಯರ ಹೆಸರು ಹುಡುಕುತ್ತಿದ್ದರು. ನಾನು ಈ ಕಡೆ ನೋಡಿದೆ. ನಮ್ಮ ಪಂಚಾಯತ್ ಹುಡುಗಿಯರೂ ಭಾವನೆಗಳಲ್ಲಿ ಚದುರಿ ಹೋಗಿದ್ದರು. ಜನಸೇವೆ ಮಾಡಬೇಕಾದವರಲ್ಲಿ ಪ್ರೇರೇಪಿಸಬೇಕಾದ ಏನೋ ತ್ಯಾಗದ ಭಾವ ಅಲ್ಲಿ ಇತ್ತು.

ಸತತ ನೂರು ಮತ್ತು ಐವತ್ತು ವರ್ಷಗಳಿಂದ ಹಲವಾರು ತಲೆಮಾರುಗಳ ಭಾರತೀಯರಲ್ಲಿ ಇಂತಹ ಆಳವಾದ ಭಾವನೆಯೊಂದನ್ನು ಉಂಟುಮಾಡುತ್ತಾ ಬಂದಿರುವ ಸ್ಮಾರಕವೊಂದರಲ್ಲಿ ಕೇಂದ್ರ ಸರಕಾರವು ಯಾವುದೇ ಆಳ ವಿಚಾರವಿಲ್ಲದೆ ಕೈಯಾಡಿಸಿ, ಅಮರ ಜವಾನ್ ಜ್ಯೋತಿಯನ್ನು ನಂದಿಸಿ, ಅದನ್ನು ಹೊಸ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ಜ್ಯೋತಿಯೊಂದಿಗೆ ವಿಲೀನಗೊಳಿಸುವುದರ ಮೂಲಕ ಹಲವರ ಭಾವನೆಗಳಿಗೆ ನೋವುಂಟುಮಾಡಿದೆ. ರಾಜಕೀಯ, ಸಾಮಾಜಿಕ ವಲಯಗಳಲ್ಲಿ ಮಾತ್ರವಲ್ಲದೆ, ನಿವೃತ್ತ ಸೈನಿಕರು ಮತ್ತು ಅಧಿಕಾರಿಗಳ ವಲಯದಲ್ಲೂ ಕಟುವಾದ ಪ್ರತಿಕ್ರಿಯೆ ಹೊರಬಿದ್ದಿದೆ.

ಮೊದಲಿಗೆ ಈ ಸ್ಮಾರಕಗಳ ಬಗ್ಗೆ ಚುಟುಕಾಗಿ ತಿಳಿದುಕೊಳ್ಳಬೇಕು. ಹೊಸದಿಲ್ಲಿಯ ವಿನ್ಯಾಸಕಾರನಾದ ಎಡ್ವರ್ಡ್ ಲ್ಯುಟಿಯೆನ್ಸ್ 1921ರಲ್ಲಿ ಕಟ್ಟಿದ ಇಂಡಿಯಾ ಗೇಟ್‌ನಲ್ಲಿ ಮೊದಲ ವಿಶ್ವ ಯುದ್ಧ ಮತ್ತು ಆಫ್ಘಾನ್ ಯುದ್ಧಗಳಲ್ಲಿ ಬ್ರಿಟಿಷ್ ಸೇನೆಯಲ್ಲಿ ಕಾದಾಡಿ ಮಡಿದ 70,000 ಭಾರತೀಯ ಸೈನಿಕರ ಹೆಸರುಗಳಿವೆ. ಬ್ರಿಟಿಷ್ ಪ್ರಭುತ್ವವು ಅವರಿಗೆ ಸಲ್ಲಿಸಿದ ಶ್ರದ್ಧಾಂಜಲಿ ಇದಾಗಿರಬಹುದು ಅಥವಾ ತಮ್ಮ ಅಡಿಯಾಳು ಭಾರತೀಯ ಪ್ರಜೆಗಳನ್ನು ಖುಶಿಪಡಿಸಿ, ನೀವೂ ನಮ್ಮವರೇ ಎಂದು ಹೇಳುವ ಹುನ್ನಾರವೂ ಇದಾಗಿರಬಹುದು. ಆದರೂ, ಹರಿದ ರಕ್ತ ಭಾರತೀಯವೇ ಆಗಿರುವುದರಿಂದ ಇದು ಆಗಿನಿಂದಲೇ ಜನರನ್ನು ಆಕರ್ಷಿಸುತ್ತಾ ಬಂದಿದೆ.

ನಂತರ 1971ರ ಬಾಂಗ್ಲಾ ಯುದ್ಧ ಅಥವಾ ಬಾಂಗ್ಲಾ ವಿಮೋಚನೆಯಲ್ಲಿ ಹುತಾತ್ಮರಾದವರ ನೆನಪಿನಲ್ಲಿ ಅಮರ್ ಜವಾನ್ ಜ್ಯೋತಿಯನ್ನು ಸ್ಥಾಪಿಸಲಾಯಿತು. 1972ರ ಜನವರಿ 26ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಅದನ್ನು ಉದ್ಘಾಟಿಸಿದ್ದರು. ಅಲ್ಲಿರುವ ನಾಲ್ಕು ನಿರಂತರ ಉರಿಯುವ ಜ್ಯೋತಿಗಳ ನಡುವೆ, ತಲೆಕೆಳಗಾದ ಬಂದೂಕಿನ ಮೇಲಿನ ಸೈನಿಕ ಹೆಲ್ಮೆಟ್ ಒಂದು ಸಂಕೇತವಾಗಿ ಜನರ ಮನಸ್ಸಿನಲ್ಲಿ ನಿಂತಿದೆ. ಗಣರಾಜ್ಯೋತ್ಸವ ಮುಂತಾದ ಸಮಾರಂಭಗಳು ಮತ್ತು ವಿದೇಶಿ ಗಣ್ಯರ ಭೇಟಿಗಳ ಸಂದರ್ಭಗಳಲ್ಲಿ ಇಲ್ಲಿ ಸೈನಿಕ ಸಂಪ್ರದಾಯದ ಆಚರಣೆಗಳು ನಡೆಯುತ್ತಾ ಬಂದಿವೆ

ಇತ್ತೀಚೆಗೆ ಅಂದರೆ, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ, ಚೆನ್ನೈಯ ಯೋಗೇಶ್ ಚಂದ್ರಹಾಸನ್ ವಿನ್ಯಾಸಗೊಳಿಸಿದ ರಾಷ್ಟ್ರೀಯ ಯುದ್ಧ ಸ್ಮಾರಕವು 40 ಎಕರೆ ಪ್ರದೇಶದಲ್ಲಿ ಹರಡಿದ್ದು, ಯೋಜನಾಬದ್ಧವಾಗಿದೆ ಎಂಬುದೇನೋ ನಿಜ. ಇಲ್ಲಿ ಅಮರ ಚಕ್ರ, ವೀರಚಕ್ರ, ತ್ಯಾಗಚಕ್ರ, ರಕ್ಷಕಚಕ್ರ ಎಂಬ ನಾಲ್ಕು ವೃತ್ತಗಳ ನಡುವೆ ಇರುವ ಸ್ಮಾರಕ ಸ್ತಂಭದ ಅಡಿಯಲ್ಲಿ ಜ್ಯೋತಿಯೊಂದಿದೆ. ಅದರಲ್ಲೇ ಅಮರ್ ಜವಾನ್ ಜ್ಯೋತಿಯನ್ನು ಸರಕಾರ ವಿಲೀನಗೊಳಿಸಿರುವುದು. ಇಲ್ಲಿ ಚೀನಾ, ಪಾಕ್ ಮತ್ತು ಬಾಂಗ್ಲಾ ಸೇರಿದಂತೆ ಸ್ವಾತಂತ್ರ್ಯಾನಂತರದ ಯುದ್ಧಗಳಲ್ಲಿ ಹುತಾತ್ಮರಾದ 25,942 ಸೈನಿಕರ ಹೆಸರುಗಳನ್ನು ಕರಿಕಲ್ಲಿನ ಕೆತ್ತನೆಯಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆಯಲಾಗಿದೆ.

ಇದೀಗ ಅಮರ್ ಜವಾನ್ ಜ್ಯೋತಿಯನ್ನು ಆರಿಸಿ, ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಒಯ್ದ ಕುರಿತು ಪರ ವಿರೋಧ ಅಭಿಪ್ರಾಯಗಳನ್ನು ಅಕ್ಕಪಕ್ಕದಲ್ಲಿರಿಸಿ ನೋಡಿದಾಗ, ಸರಕಾರಿ ವಾದದ ಪೊಳ್ಳುತನ ಕಾಣಿಸಿಕೊಳ್ಳುತ್ತದೆ ಮಾತ್ರವಲ್ಲ; ಅದರ ಉದ್ದೇಶ ಅಥವಾ ದುರುದ್ದೇಶದ ಕುರಿತೇ ಸಂಶಯಪಡುವಂತೆ ಮಾಡುತ್ತದೆ. ಜ್ಯೋತಿಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ; ಅದನ್ನು ಆರಿಸಿಲ್ಲ; ವಿಲೀನಗೊಳಿಸಲಾಗಿರುವುದು ಮಾತ್ರವೆಂದು ಸರಕಾರ ಹೇಳಿದರೂ, ಇನ್ನು ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಭೇಟಿ ನೀಡುವವರಿಗೆ ಕಾಣುವುದು ಬಣಗುಡುವ ನಾಲ್ಕು ಖಾಲಿ ಕುಂಡಗಳು ಮಾತ್ರ. ಉದ್ಘಾಟನೆಯ ಸುವರ್ಣ ಮಹೋತ್ಸವದಂದೇ ಅದು ಬಣಗುಡುವಂತೆ ಮಾಡಲಾಗಿರುವುದು ವಿಪರ್ಯಾಸ.

ಇಂಡಿಯಾ ಗೇಟ್ ಸ್ಮಾರಕವು ಸ್ವತಂತ್ರ ಭಾರತದ ಭಾಗವಲ್ಲ; ಅದು ವಸಾಹತುಶಾಹಿ ಪರಂಪರೆಯ ಭಾಗವೆಂದು ಸರಕಾರ ಈಗ ಹೇಳುತ್ತಿದೆ. ಎರಡೇ ವರ್ಷಗಳ ಹಿಂದೆ, ಅಮರ ಜವಾನ್ ಜ್ಯೋತಿಯನ್ನು ಸ್ಥಳಾಂತರಿಸುವ ಸಾಧ್ಯತೆಯೇ ಇಲ್ಲ; ಅದು ಭಾರತೀಯ ಇತಿಹಾಸದ ಭಾಗ ಎಂದು ಖಡಾಖಂಡಿತವಾಗಿ ಹೇಳಿದ್ದ ಸರಕಾರ ಏಕಾಏಕಿ ತನ್ನ ನಿರ್ಧಾರ ಬದಲಾಯಿಸಿದ್ದೇಕೆ? ಈ ಸ್ಮಾರಕದ ಸ್ಥಾನಮಾನ ಒಮ್ಮಲೇ ಕುಸಿದುಹೋಯಿತೆ? ಹಾಗೆ, ನೋಡಿದರೆ, ಭಾರತೀಯ ಸೇನೆಯ ಇತಿಹಾಸವೇ ವಸಾಹತುಶಾಹಿ ಇತಿಹಾಸದಲ್ಲಿ ಹುದುಗಿರುವಂತಹದ್ದು. ರಜಪುತಾನ ರೈಫಲ್ಸ್, ಸಿಖ್, ಜಾಟ್, ಮರಾಠಾ, ಗೂರ್ಖಾ, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್... ಹೀಗೆ ಬಹುತೇಕ ರೆಜಿಮೆಂಟುಗಳ ಸ್ಥಾಪನೆಯಾದುದು, ಅವು ಆಚರಿಸುವ ಪದ್ಧತಿಗಳು, ಅವುಗಳ ಧ್ವಜ, ಸಂಕೇತಗಳು, ಘೋಷಣೆಗಳು, ವಾದ್ಯ, ನಿಯಮಾವಳಿ, ಆಡಳಿತ ಸ್ವರೂಪ... ಎಲ್ಲವೂ ವಸಾಹತುಶಾಹಿ ಇತಿಹಾಸ, ಪರಂಪರೆಗೆ ಸೇರಿದವುಗಳು. ಹಾಗೆಂದು ಅವುಗಳನ್ನು ಬದಲಿಸುವ ಧೈರ್ಯ ಸರಕಾರಕ್ಕೆ ಇದೆಯೆ? ವಾಸ್ತವವೆಂದರೆ, 1857ರ ಸಿಪಾಯಿದಂಗೆ, ಅದಕ್ಕೆ ಮೊದಲು ಮತ್ತು ನಂತರದ ದಂಗೆಗಳಲ್ಲಿ ಭಾರತೀಯ ಪ್ರಜೆಗಳನ್ನು ಮಟ್ಟಹಾಕಿದವರು ಇದೇ ರೆಜಿಮೆಂಟುಗಳ ಭಾರತೀಯ ಸೈನಿಕರು; ಜಲಿಯನ್ ವಾಲಾಬಾಗ್‌ನಲ್ಲಿ ಜನರಲ್ ಡಾಯರ್ ಆಜ್ಞೆ ನೀಡಿದರೂ ಗುಂಡುಹಾರಿಸಿದವರು ಇದೇ ಭಾರತೀಯ ರೆಜಿಮೆಂಟುಗಳ ಸೈನಿಕರು ಎಂಬುದನ್ನು ಬದಲಿಸಲು ಸಾಧ್ಯವೆ?

ಸರಕಾರದ ಇನ್ನೊಂದು ವಾದವೆಂದರೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯದ ಬಳಿಕದ ಎಲ್ಲಾ ಯುದ್ಧಗಳ ಹುತಾತ್ಮರ ಹೆಸರುಗಳಿವೆ ಎಂಬುದು. ಇದು ನಿಜವಾದರೂ, ಅದಕ್ಕಾಗಿ ಸ್ಥಾಪಿಸಲಾಗಿದ್ದ ಸ್ಮಾರಕವನ್ನು ಐವತ್ತು ವರ್ಷಗಳ ನಂತರ ಕೆಳದರ್ಜೆಗೆ ಇಳಿಸಬೇಕೇ ಎಂಬುದು ಪ್ರಶ್ನೆ. ಸರಕಾರಿ ಸಮಾರಂಭಗಳನ್ನು ಎರಡೂ ಕಡೆ ನಡೆಸಲಾಗದು ಎಂಬ ವಾದ ಮೂರನೆಯದು. ಸಮಾರಂಭಗಳನ್ನು ಎರಡೂ ಕಡೆ ನಡೆಸದೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಯೇ ನಡೆಸಿ, ಅಮರ್ ಜವಾನ್ ಜ್ಯೋತಿಯಲ್ಲಿ ನಿತ್ಯ ನಡೆಯುತ್ತಿದ್ದ ಗೌರವರಕ್ಷೆಯನ್ನು ಮುಂದುವರಿಸಿದರೆ ಸಾಕಿತ್ತು.

ಆದರೆ, ಸರಕಾರ ನೀಡಿರುವ ನಾಲ್ಕನೇ ಕಾರಣ ಹಾಸ್ಯಾಸ್ಪದ ಮತ್ತು ಅವಮಾನಕಾರಿಯಾಗಿದೆ. ಎರಡೂ ಕಡೆಯ ಸ್ಮಾರಕಗಳನ್ನು ನಿರ್ವಹಿಸಲು ತುಂಬಾ ಖರ್ಚಾಗುತ್ತದೆ ಎಂಬುದು. ಹಾಗಾದರೆ, ಇಂಡಿಯಾ ಗೇಟ್ ಸ್ಮಾರಕವನ್ನು ನಿರ್ವಹಿಸದೇ ಪಾಳು ಬೀಳಿಸುವ ಉದ್ದೇಶ ಸರಕಾರಕ್ಕೆ ಈಗಾಗಲೇ ಇದೆ ಎಂದಾಯಿತು. ದೇಶಪ್ರೇಮದ ಹೆಸರಿನಲ್ಲಿ ಸ್ಪರ್ಧೆಯ ರೀತಿಯಲ್ಲಿ ಗಗನ ಚುಂಬಿ ಪ್ರತಿಮೆಗಳನ್ನು ನಿರ್ಮಿಸುತ್ತಿರುವ ಸರಕಾರಕ್ಕೆ ಒಂದು ಸ್ಮಾರಕಕ್ಕೆ ಗೌರವರಕ್ಷೆ ನೀಡಲು ಬೇಕಾದ ಒಂದು ಕಂಪೆನಿ ಸೈನಿಕರನ್ನು ಒದಗಿಸಲು, ನಾಲ್ಕು ಜ್ಯೋತಿಗಳನ್ನು ನಿರಂತರ ಉರಿಸಲು ಬೇಕಾದ ಇಂಧನದ ಖರ್ಚು ಭರಿಸಲು ಸಾಧ್ಯವಿಲ್ಲ ಎಂಬುದು ನಾಚಿಗೆಗೇಡಲ್ಲವೆ?

ದೇಶಪ್ರೇಮದಂತಹ ಒಂದು ಭಾವನಾತ್ಮಕ ವಿಷಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ವಿವೇಕವೂ ದೇಶಪ್ರೇಮವನ್ನು ಗುತ್ತಿಗೆಗೆ ತೆಗೆದುಕೊಂಡಂತೆ ವರ್ತಿಸುವವರಿಗೆ ಇರಲಿಲ್ಲವೇ? ಅಥವಾ ಇದೆಲ್ಲದರ ಹಿಂದೆ ಇರುವುದು ಒಂದು ಸಂಕುಚಿತ ಮನೋಭಾವದ ಹುನ್ನಾರವೇ? ಅಮರ್ ಜವಾನ್ ಜ್ಯೋತಿಯು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸ್ಥಾಪಿಸಿದ ಸ್ಮಾರಕ. ಪೂರ್ವ ಪಾಕಿಸ್ತಾನದ ವಿಮೋಚನೆಗೆ ಸೈನ್ಯ ಕಳುಹಿಸಿ ಬಾಂಗ್ಲಾದೇಶವನ್ನು ಸ್ಥಾಪಿಸುವುದಕ್ಕೆ ಕಾರಣವಾದ ದಿಟ್ಟ ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಇಂದಿರಾ ಗಾಂಧಿಯವರನ್ನು ಇತಿಹಾಸದ ಮೂಲೆಗೆ ಸರಿಸಲು, ತಾನು ಸ್ಥಾಪಿಸಿದ ಸ್ಮಾರಕದ ಮೇಲೆ ಎಲ್ಲರೂ ಗಮನಹರಿಸುವಂತೆ ಮಾಡಲು ನಡೆಸಿದ ಸಂಕುಚಿತ ಸಂಚಿನ ಫಲವೇ ಇದು? ಸರ್ಜಿಕಲ್ ಸ್ಟ್ರೈಕ್ ಇತ್ಯಾದಿಯಾಗಿ ಪಕ್ಷರಹಿತ ಭಾರತೀಯ ಸೇನೆಯ ಸಾಧನೆಯನ್ನು ಸರಕಾರ ಮತ್ತು ತಮ್ಮ ಪಕ್ಷದ ಸಾಧನೆ ಎಂದು ಬಿಂಬಿಸುವವರಿಗೆ ಇದು ಆಗದ, ನಾಚಿಕೆಪಡಬೇಕಾದ ಕೆಲಸವೇನಲ್ಲ. ಅಷ್ಟಕ್ಕೂ, ಕೆಲಸಮಯದ ಹಿಂದೆ 1971ರ ಯುದ್ಧದ 50ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಇಂದಿರಾ ಗಾಂಧಿಯವರ ಹೆಸರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಕಾಕತಾಳೀಯ ಇರಲಾರದೇನೋ!

ಒಂದು ದೀಪದಿಂದ ಸಾವಿರ ಸಾವಿರ ದೀಪ ಉರಿಸಿ ಬೆಳಕು ಹರಡಬಹುದು ಎಂಬುದು ವಿವೇಕದ ಮಾತು. ಒಂದು ಹೊಸ ದೀಪ ಉರಿಸಲು ಹಳೆ ದೀಪ ಆರಿಸಬೇಕೇ ಎಂಬ ಪ್ರಶ್ನೆ ಕೊನೆಗೂ ಉಳಿಯುತ್ತದೆ. ಸರಕಾರ ಉತ್ತರಿಸಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top