ಹೆಚ್ಚುತ್ತಿರುವ ಹಸಿವು; ಅರಾಜಕತೆಗೆ ಮುನ್ನುಡಿ
-

ಶ್ರೀಲಂಕಾ
ಈಗಾಗಲೇ ದೇಶವನ್ನು ಹಲವರು ತೊರೆದಿರುವರಾದರೂ, ಎಲ್ಲವೂ ಅವರು ನಿರೀಕ್ಷಿಸಿದಂತೆ ಆಗಿಲ್ಲ. ಕಳೆದ ವಾರ, ತಮ್ಮ ಕುಟುಂಬ ಸದಸ್ಯರಿಗೆ ಊಟ ಕೊಡಲು ಸಾಧ್ಯವಾಗದ 16 ಶ್ರೀಲಂಕನ್ನರು ತಮಿಳುನಾಡಿಗೆ ಬಂದರು. ಆದರೆ, ಅವರನ್ನು ಭಾರತೀಯ ತಟ ರಕ್ಷಣಾ ಪಡೆಯು ಬಂಧಿಸಿತು.
1983ರಿಂದ ಎರಡೂವರೆ ದಶಕಗಳ ಕಾಲ ಆಂತರಿಕ ಯುದ್ಧವು ಶ್ರೀಲಂಕಾವನ್ನು ಬಾಧಿಸಿದರೂ, ‘ದಿ ಐಲ್ಯಾಂಡ್’ ಪತ್ರಿಕೆಯು ತನ್ನ ಪ್ರಸಾರವನ್ನು ನಿಲ್ಲಿಸಿರಲಿಲ್ಲ. ಆದರೆ, ಮುಂದಿನ ಸೂಚನೆಯವರೆಗೆ ವಾರಾಂತ್ಯದ ಮುದ್ರಣ ಆವೃತ್ತಿಯನ್ನು ನಿಲ್ಲಿಸುತ್ತಿರುವುದಾಗಿ ಅದು ಶುಕ್ರವಾರ ಘೋಷಿಸಿತು. ಅದರ ಸಿಂಹಳ ಭಾಷೆಯ ಪತ್ರಿಕೆ ‘ದಿವಾಯಿನ’ ಕೂಡ ವಾರಾಂತ್ಯಗಳಲ್ಲಿ ಡಿಜಿಟಲ್ ರೂಪದಲ್ಲಿ ಪಕ್ರಟಗೊಳ್ಳಲಿದೆ.
‘‘ನ್ಯೂಸ್‌ಪ್ರಿಂಟ್ ಕೊರತೆಯ ಹಿನ್ನೆಲೆಯಲ್ಲಿ, ಮುಂದಿನ ಸೂಚನೆಯವರೆಗೆ ‘ದಿ ಐಲ್ಯಾಂಡ್’ ಪತ್ರಿಕೆಯ ಶನಿವಾರದ ಮುದ್ರಣ ಆವೃತ್ತಿಯ ಪ್ರಕಟನೆಯನ್ನು ನಿಲ್ಲಿಸುವ ಅನಿವಾರ್ಯತೆಗೆ ನಾವು ಒಳಗಾಗಿದ್ದೇವೆ ಎನ್ನುವುದನ್ನು ಓದುಗರಿಗೆ ತಿಳಿಸಲು ನಾವು ವಿಷಾದಿಸುತ್ತೇವೆ’’ ಎಂದು ಪತ್ರಿಕೆಗಳ ಪ್ರಕಾಶನ ಸಂಸ್ಥೆ ಉಪಾಲಿ ನ್ಯೂಸ್‌ಪೇಪರ್ಸ್ ಲಿಮಿಟೆಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ದ್ವೀಪ ದೇಶದಲ್ಲಿ ಕಾಗದದ ಕೊರತೆ ಎಷ್ಟು ಗಂಭೀರವಾಗಿದೆಯೆಂದರೆ, ಸರಕಾರವು 9, 10 ಮತ್ತು 11ನೇ ತರಗತಿಗಳ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ. ಯಾಕೆಂದರೆ, ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಲು ಸರಕಾರದ ಬಳಿ ಕಾಗದವಿಲ್ಲ. ಇದರಿಂದಾಗಿ 45 ಲಕ್ಷ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ.
1948ರಲ್ಲಿ ಸ್ವಾತಂತ್ರ ಗಳಿಸಿದ ಬಳಿಕ , ಶ್ರೀಲಂಕಾವು ತನ್ನ ಇತಿಹಾಸದಲ್ಲೇ ಅತ್ಯಂತ ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆರ್ಥಿಕ ಬಿಕ್ಕಟ್ಟು ಜನರಿಗೆ ಹಲವು ವಿಧಗಳಲ್ಲಿ ಹೊಡೆತ ನೀಡಿದೆ. ಅವುಗಳ ಪೈಕಿ ಇವುಗಳೂ ಸೇರಿವೆ.
ಇಂಧನ ಮತ್ತು ಅಡುಗೆ ಅನಿಲಕ್ಕಾಗಿ ಜನರು ಉದ್ದನೆಯ ಸರತಿ ಸಾಲುಗಳಲ್ಲಿ ಕಾಯುತ್ತಾ ನಿಲ್ಲುವುದು ಕಳೆದ ಹಲವು ತಿಂಗಳುಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಅದೇ ರೀತಿ ವಿದ್ಯುತ್ ಕಡಿತಗಳ ಹೆಚ್ಚಳ ಮತ್ತು ಅವಶ್ಯಕ ಆಹಾರ ವಸ್ತುಗಳ ಬೆಲೆ ಹೆಚ್ಚಳ (ಅವುಗಳು ಲಭಿಸುವಾಗ)ವೂ ಸಾಮಾನ್ಯ ಸಂಗತಿಯಾಗಿದೆ.
‘‘ಸೇಬು ಮತ್ತು ಕಿತ್ತಳೆಗಳೂ ವಿಲಾಸಿ ವಸ್ತುಗಳಾಗಿ ಬಿಟ್ಟಿವೆ’’ ಎಂದು ಕೊಲಂಬೊದ ಸಂಗೀತಗಾರ ಹರಿಣ್ ಅಮಿರ್ತನಾತನ್ ಹೇಳುತ್ತಾರೆ.ಶ್ರೀಲಂಕಾ ಅಂತರ್‌ರಾಷ್ಟ್ರೀಯ ಸಾಲಗಳನ್ನು ಪಾವತಿಸಲು ಪರದಾಡುತ್ತಿದ್ದ ಹೊತ್ತಿನಲ್ಲೇ ಕೊರೋನ ವೈರಸ್ ಸಾಂಕ್ರಾಮಿಕವು ಕಾಲಿಟ್ಟಿತು. ಸಾಂಕ್ರಾಮಿಕವು ದ್ವೀಪ ದೇಶದ ಪ್ರವಾಸೋದ್ಯಮ ಅವಲಂಬಿತ ಆರ್ಥಿಕತೆಯ ಮೇಲೆ ಭೀಕರ ದಾಳಿ ನಡೆಸಿತು. ಉಕ್ರೇನ್ ಮೇಲೆ ರಶ್ಯ ಯುದ್ಧ ಘೋಷಿಸಿದ ಬಳಿಕವಂತೂ ಇಂಧನ ಬೆಲೆಗಳು ಗಗನಕ್ಕೇರಿದವು. ಆಗ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಗಂಭೀರ ಹಂತ ತಲುಪಿತು.
ಶ್ರೀಲಂಕಾವು 51 ಬಿಲಿಯ ಡಾಲರ್ ವಿದೇಶಿ ಸಾಲವನ್ನು ಹೊಂದಿದೆ. ಈ ಸಾಲವನ್ನು ‘ತಾಳಿಕೊಳ್ಳಲು’ ಶ್ರೀಲಂಕಾಗೆ ಸಾಧ್ಯವಿಲ್ಲ ಎಂಬುದಾಗಿ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಮ್‌ಎಫ್) ಬಣ್ಣಿಸಿದೆ. ದೇಶಕ್ಕೆ ಸಾಲ ಮರುಪಾವತಿಗಳನ್ನು ನಿಯಮಿತವಾಗಿ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂಬ ಭೀತಿಯನ್ನು ಹಲವರು ವ್ಯಕ್ತಪಡಿಸಿದ್ದಾರೆ. ಅದರ ವಿದೇಶಿ ವಿನಿಮಯಗಳು ಕುಸಿಯುತ್ತಾ ಸಾಗುತ್ತಿದ್ದು, ದೈನಂದಿನ ಅಗತ್ಯದ ವಸ್ತುಗಳು ದುರ್ಲಭವಾಗುತ್ತಿವೆ. ಯಾಕೆಂದರೆ, ಹಾಲಿನ ಪುಡಿ, ಔಷಧ, ಆಹಾರ ಪದಾರ್ಥ ಮತ್ತು ಕಾಗದ ಮುಂತಾದ ಅಗತ್ಯ ವಸ್ತುಗಳನ್ನು ಶ್ರೀಲಂಕಾವು ಆಮದು ಮಾಡಿಕೊಳ್ಳುತ್ತಿದೆ. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ, ಗೊತಬಯ ರಾಜಪಕ್ಸ ನೇತೃತ್ವದ ಸರಕಾರದ ಬಗ್ಗೆ ಜನರ ಅಸಹನೆ ಹೆಚ್ಚುತ್ತಿದೆ. ಈ ಸರಕಾರವು ಪರಿಸ್ಥಿತಿಯನ್ನು ತಪ್ಪಾಗಿ ನಿಭಾಯಿಸಿದೆ ಎಂಬ ಭಾವನೆ ಸರಕಾರದಲ್ಲಿದೆ. ಈಗಾಗಲೇ, ದೇಶದಲ್ಲಿ ಸರಕಾರದ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿವೆ.
‘‘ಜನರು ಭ್ರಮನಿರಸನಗೊಂಡಿದ್ದಾರೆ ಹಾಗೂ ಕೋಪಗೊಂಡಿದ್ದಾರೆ’’ ಎಂದು ಕೊಲಂಬೊದಲ್ಲಿರುವ ರಾಜಕೀಯ ವಿಶ್ಲೇಷಕ ರಸಿಕ ಜಯಕೋಡಿ ಹೇಳಿದರು. ‘‘ಸರಕಾರ ಪರಿಸ್ಥಿತಿಯನ್ನು ತಪ್ಪಾಗಿ ನಿಭಾಯಿಸಿದೆ ಎಂಬ ಭಾವನೆ ಜನರಲ್ಲಿದೆ’’ ಎಂದರು.
ಆಹಾರವಿಲ್ಲ
ಶ್ರೀಲಂಕಾದಲ್ಲಿ ಈಗ ಎರಡು ಸಂಗತಿಗಳು ನಡೆಯುತ್ತಿವೆ: ಮೊದಲನೆಯದು, ಬೆಲೆಗಳಲ್ಲಿ ಏರಿಕೆ ಮತ್ತು ಎರಡನೆಯದು, ಕೊರತೆಗಳಲ್ಲಿ ಏರಿಕೆ ಎಂದು ಕೊಲಂಬೊದ ಸಂಘಟನೆ ವೆರಿಟೆ ರಿಸರ್ಚ್‌ನ ಕಾರ್ಯಕಾರಿ ನಿರ್ದೇಶಕ ನಿಶಾನ್ ಡಿ ಮೆಲ್ ಹೇಳುತ್ತಾರೆ.
ಫೆಬ್ರವರಿಯಲ್ಲಿ, ಸಾಮಾನ್ಯ ಹಣದುಬ್ಬರ 15.1 ಶೇಕಡಕ್ಕೆ ಏರಿದರೆ, ಆಹಾರ ಹಣದುಬ್ಬರ 25.7 ಶೇಕಡಕ್ಕೆ ಏರಿತು. ಅಕ್ಕಿಯ ಬೆಲೆ ಕಳೆದ ವರ್ಷದಿಂದ 30 ಶೇಕಡಕ್ಕಿಂತಲೂ ಹೆಚ್ಚು ಏರಿತು. ಅದೇ ವೇಳೆ, ಟೊಮ್ಯಾಟೊ ಮುಂತಾದ ತರಕಾರಿಗಳ ಬೆಲೆ ಐದು ಪಟ್ಟು ಹೆಚ್ಚಿದೆ. ಆಹಾರ ಅತಿ ದುಬಾರಿಯಾಗುತ್ತಿದ್ದಂತೆಯೇ, ಜನರು ಕಡಿಮೆ ಊಟ ಮಾಡಿ ಹಸಿದು ಕೊಂಡಿರುವ ವರದಿಗಳು ಬರುತ್ತಿವೆ.
ಬಿಕ್ಕಟ್ಟುಗಳಲ್ಲಿ ಯಾವಾಗಲೂ ನಡೆಯುತ್ತಿರುವಂತೆಯೇ, ದೇಶದ ಶೋಷಿತ ಜನವರ್ಗವು ಅತಿ ಹೆಚ್ಚಿನ ಸಂಕಟಕ್ಕೀಡಾಗಿದೆ. ‘‘ಈ ಬಿಕ್ಕಟ್ಟಿನಿಂದ ಅತಿ ಹೆಚ್ಚಿನ ಸಂಕಟಕ್ಕೊಳಗಾದವರು ಬಡವರು ಮತ್ತು ದಿನಗೂಲಿ ಕೆಲಸಗಾರರು’’ ಎಂದು ಅರ್ಥಶಾಸ್ತ್ರಜ್ಞೆ ರೆಹಾನಾ ತೌಫೀಕ್ ಹೇಳುತ್ತಾರೆ.
ಉದ್ದನೆಯ ಸರತಿ ಸಾಲುಗಳಲ್ಲಿ ನಿಲ್ಲುವುದೆಂದರೆ, ಸಂಪಾದನೆಗಳನ್ನು ಕಳೆದುಕೊಂಡಂತೆ. ‘‘ಅಗತ್ಯ ವಸ್ತುಗಳನ್ನು ಖರೀದಿಸುವುದಕ್ಕಾಗಿ ಅವರು ಉದ್ದನೆಯ ಸರತಿ ಸಾಲುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ’’ ಎಂದು ಅವರು ಹೇಳಿದರು.
‘‘ಕೊಲಂಬೊದ ಬೀದಿಗಳಲ್ಲಿ ಹಣ ಕೇಳುವ ಭಾರೀ ಸಂಖ್ಯೆಯ ಜನರನ್ನು ನಾವೀಗ ಕಾಣಬಹುದಾಗಿದೆ. ಈ ಮೊದಲು ಇಂತಹ ದೃಶ್ಯಗಳು ಕಾಣಸಿಕ್ಕಿರಲಿಲ್ಲ’’ ಎಂದು ಅಮಿರ್ತನಾತನ್ ಹೇಳಿದರು.
ಶ್ರೀಲಂಕಾ ರೂಪಾಯಿಯ ವೌಲ್ಯ ಮಾರ್ಚ್‌ನಲ್ಲಿ ಬಹುತೇಕ 50 ಶೇಕಡದಷ್ಟು ಕುಸಿದಿದೆ. ಡಾಲರ್‌ಗೆ ಸುಮಾರು 200 ಇದ್ದ ಶ್ರೀಲಂಕಾ ರೂಪಾಯಿ ಮಾರ್ಚ್ 26ರಂದು 292ಕ್ಕೆ ಇಳಿದಿದೆ. ದೇಶದ ಕೇಂದ್ರೀಯ ಬ್ಯಾಂಕ್ ಮಾರ್ಚ್ 8ರಂದು ಕರೆನ್ಸಿಯ ವೌಲ್ಯವನ್ನು 15 ಶೇಕಡದಷ್ಟು ಅಪವೌಲ್ಯಗೊಳಿಸಿತು. ಈ ಕ್ರಮವು ವಿದೇಶಗಳಲ್ಲಿರುವ ಶ್ರೀಲಂಕಾ ನಾಗರಿಕರು ಹೆಚ್ಚೆಚ್ಚು ಹಣವನ್ನು ದೇಶಕ್ಕೆ ಕಳುಹಿಸುವಂತೆ ಉತ್ತೇಜಿಸುತ್ತದೆ ಎಂಬುದಾಗಿ ವಿಶ್ಲೇಷಕರು ಹೇಳಿದ್ದಾರೆ. ಮಾರ್ಚ್ 9ರಂದು, ಮಾಂಸ, ಕ್ರೀಮ್ ಮತ್ತು ಚೀಸ್ ಸೇರಿದಂತೆ 367 ವಸ್ತುಗಳನ್ನು ಪರವಾನಿಗೆಯಿಲ್ಲದೆ ಆಮದು ಮಾಡಿಕೊಳ್ಳುವುದನ್ನು ಸರಕಾರ ನಿಷೇಧಿಸಿತು. ವಿದೇಶಿ ಕರೆನ್ಸಿ ಹೊರಹೋಗುವುದನ್ನು ತಡೆಯಲು ಅದು ಈ ಕ್ರಮವನ್ನು ತೆಗೆದುಕೊಂಡಿತ್ತು.
ಇಂಧನದ ಕೊರತೆ
ಆಹಾರ ಪದಾರ್ಥಗಳ ಜೊತೆಗೆ, ಇತರ ಅಗತ್ಯ ವಸ್ತುಗಳೂ ದುರ್ಲಭವಾಗಿವೆ. ಅವುಗಳ ಪೈಕಿ ಅತ್ಯಂತ ಮುಖ್ಯವಾದವುಗಳು ತೈಲ ಮತ್ತು ಅಡುಗೆ ಅನಿಲ. ಇವುಗಳನ್ನು ಶ್ರೀಲಂಕಾ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ.
ತೈಲವನ್ನು ಆಮದು ಮಾಡಿಕೊಳ್ಳಲು ಹಣವಿಲ್ಲದೆ, ತೈಲ ಬೆಲೆಗಳು ತೀವ್ರವಾಗಿ ಏರಿವೆ. ಪೆಟ್ರೋಲ್ ಬೆಲೆಯು ಡಿಸೆಂಬರ್ ಮತ್ತು ಮಾರ್ಚ್ ನಡುವಿನ ಅವಧಿಯಲ್ಲಿ ಲೀಟರ್‌ಗೆ 177 ಶ್ರೀಲಂಕಾ ರೂ.ಯಿಂದ 71 ಶೇಕಡದಷ್ಟು ಏರಿ 303 ಶ್ರೀಲಂಕಾ ರೂಪಾಯಿ ಆಯಿತು (ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 45 ರೂ.ಯಿಂದ 77 ರೂ.ಗೆ ಏರಿಕೆ). ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲುಗಳು ಉದ್ದ ವಾಗುತ್ತಿರುವಂತೆಯೇ, ಇಂಧನ ಪಡೆಯಲು ಜನರು ಗಂಟೆಗಳ ಕಾಲ ಕಾಯಬೇಕಾಗಿತ್ತು. ಸರತಿ ಸಾಲುಗಳಲ್ಲಿ ಕಾಯುತ್ತಿದ್ದ ಕನಿಷ್ಠ ಮೂವರು ವೃದ್ಧರು ಉಷ್ಣತೆಯನ್ನು ತಾಳಲಾರದೆ ಮೃತಪಟ್ಟಿದ್ದಾರೆ. ಅದೂ ಅಲ್ಲದೆ, ಸರತಿ ಸಾಲುಗಳಲ್ಲಿನ ಸ್ಥಾನಗಳ ವಿಷಯದಲ್ಲಿ ಜಗಳ ನಡೆದು ಓರ್ವನಿಗೆ ಇರಿಯಲಾಗಿದೆ. ಇದನ್ನು ನಿಯಂತ್ರಿಸಲು ಮಾರ್ಚ್ 22ರಂದು ಪೆಟ್ರೋಲ್ ಪಂಪ್‌ಗಳಲ್ಲಿ ಸೇನೆಯನ್ನು ನಿಯೋಜಿಸಲಾಯಿತು.
Scroll.in
ಅಡುಗೆ ಅನಿಲದ ಪೂರೈಕೆಯೂ ಕಡಿಮೆಯಾಗಿರುವುದರಿಂದ ಕೆಲವರು ಇತರ ಇಂಧನ ಮೂಲಗಳತ್ತ ಗಮನ ಹರಿಸಿದ್ದಾರೆ. ‘‘ಅಡುಗೆ ಅನಿಲ ಹೆಚ್ಚಿನ ಸಂದರ್ಭಗಳಲ್ಲಿ ಸಿಗುವುದೇ ಇಲ್ಲ. ಹಾಗಾಗಿ ಜನರು ಈಗ ಸೀಮೆಎಣ್ಣೆ ಮತ್ತು ಕಟ್ಟಿಗೆಯಿಂದ ಅಡುಗೆ ಮಾಡುತ್ತಿದ್ದಾರೆ’’ ಎಂದು ಶ್ರೀಲಂಕಾದ ಲೇಖಕ ಇಂದ್ರಜಿತ್ ಸಮರಜೀವ ಜೊತೆಗೆ ಮಾತನಾಡುತ್ತಾ ಹೇಳಿದರು. ‘‘ಸೀಮೆಎಣ್ಣೆ ತುಂಬಾ ಅಗ್ಗವಾಗಿದೆ.. ಆದರೆ, ಅದನ್ನು ತರಬೇಕಾದರೂ ಪೆಟ್ರೋಲ್ ಪಂಪ್‌ಗೇ ಹೋಗಬೇಕು’’ ಎಂದು ತೌಫೀಕ್ ಹೇಳಿದರು. ಕೆಲವರು ಇಲೆಕ್ಟ್ರಿಕ್ ಬಿಸಿ ಪ್ಲೇಟ್‌ಗಳನ್ನು ಬಳಸಲು ಆರಂಭಿಸಿದ್ದಾರೆ. ಹಾಗಾಗಿ, ಈಗ ಈಮಶಿನ್‌ಗಳ ಲಭ್ಯತೆಯೂ ಕಡಿಮೆಯಾಗಿದೆ. ‘‘ಮೊನ್ನೆ ಹಾ ಪ್ಲೇಟೊಂದನ್ನು ಖರೀದಿಸಲು ನಾನು ಅಂಗಡಿಗೆ ಹೋದೆ. ಆದರೆ ಅದರ ಬೆಲೆ 15,000 ಶ್ರೀಲಂಕಾ ರೂ.ಯಿಂದ 30,000 ಶ್ರೀಲಂಕಾ ರೂ.ಗೆ ಏರಿತ್ತು’’ ಎಂದು ಅಮಿರ್ತನಾತನ್ ಹೇಳಿದರು.
ವಿದ್ಯುತ್ ಕಡಿತಗಳು
ಇಂಧನ ಕೊರತೆಯಿಂದಾಗಿ ವಿದ್ಯುತ್ ಸ್ಥಾವರಗಳು ಪೂರ್ಣ ಸಾಮರ್ಥ್ಯದಲ್ಲಿ ನಡೆಯುತ್ತಿಲ್ಲ. ಹಾಗಾಗಿ, ಸುದೀರ್ಘ ವಿದ್ಯುತ್ ಕಡಿತಗಳನ್ನು ಸರಕಾರ ಘೋಷಿಸಿದೆ. ವಿದ್ಯುತ್ ಕಡಿತವನ್ನು ದಿನಕ್ಕೆ 10 ಗಂಟೆಗಳ ಅವಧಿಗೆ ವಿಸ್ತರಿಸಲಾಗಿದೆ. ಇದು 26 ವರ್ಷಗಳಲ್ಲೇ ಸುದೀರ್ಘವಾಗಿದೆ. ಇದು ಕೈಗಾರಿಕೆಗಳು ಮತ್ತು ಆನ್‌ಲೈನ್ ತರಗತಿಗಳ ಮೇಲೆ ಪರಿಣಾಮವನ್ನು ಬೀರಿದೆ.
Scroll.inಅದೇ ವೇಳೆ, ವಿದ್ಯುತ್ ಕಡಿತಗಳ ಹೇರಿಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂಬುದಾಗಿ ನೊಂದಿಗೆ ಮಾತನಾಡಿದ ಕೆಲವು ಶ್ರೀಲಂಕಾ ಪ್ರಜೆಗಳು ಹೇಳಿದರು. ಶ್ರೀಮಂತರು, ಪ್ರಭಾವಿಗಳು ವಾಸಿಸುತ್ತಿರುವ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗಳಿಲ್ಲ ಎಂದು ಅವರು ಹೇಳಿದ್ದಾರೆ.
‘‘ಪ್ರಭಾವಿ ವ್ಯಕ್ತಿಗಳು ಇರುವ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಕಡಿತಗಳು ಇಲ್ಲ ಎನ್ನುವುದು ತಿಳಿದು ಬಂದಿದೆ’’ ಎಂದು ವಿಶ್ವವಿದ್ಯಾನಿಲಯವೊಂದರಲ್ಲಿ ಉಪನ್ಯಾಸಕರಾಗಿರುವ ನುವಾನ್‌ಜಯವರ್ದನೆ ಹೇಳಿದರು. ‘‘ಇವುಗಳಿಗೆ ಹೊರತುಪಡಿಸಿ, ಆಸ್ಪತ್ರೆಗಳು ಇರುವ ಸ್ಥಳಗಳಲ್ಲಿ ಪವರ್‌ಕಟ್‌ಗಳಿಲ್ಲ. ಇದಕ್ಕೆ ಯಾವುದೇ ಆಕ್ಷೇಪವಿಲ್ಲ’’ ಎಂದರು.
ಸರಕಾರದ ವಿರುದ್ಧ ಆಕ್ರೋಶ
ಸರಕಾರದ ವಿರುದ್ಧ ಜನರ ಅತೃಪ್ತಿ ಹೆಚ್ಚುತ್ತಿರುಂತೆಯೇ, ಸರಕಾರದ ಬೆಂಬಲಿಗರೂ ಅದಕ್ಕೆ ತಿರುಗಿ ಬಿದ್ದಿದ್ದಾರೆ.
ಮಾರ್ಚ್ 3ರಂದು ಪ್ರಕಟಗೊಂಡ ವೆರಿಟೆ ರಿಸರ್ಚ್‌ನ ಸಮೀಕ್ಷೆಯೊಂದರ ಪ್ರಕಾರ, ಕೇವಲ ಶೇ.10 ಶ್ರೀಲಂಕನ್ನರು ಮಾತ್ರ ಈ ಸರಕಾರವನ್ನು ಬೆಂಬಲಿಸುತ್ತಿದ್ದಾರೆ. 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜಪಕ್ಷ ಪಕ್ಷವು 52 ಶೇಕಡ ಮತಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತ್ತು. ‘‘ಈ ಸರಕಾರಕ್ಕೆ ಮತ ಹಾಕಿದ 69 ಲಕ್ಷ ಜನರಲ್ಲಿ ತಾವೂ ಸೇರಿರುವುದಕ್ಕೆ ತಮಗೆ ನಾಚಿಕೆಯಾಗುತ್ತಿದೆ ಎಂಬುದಾಗಿ ಈಗ ಉದ್ದನೆಯ ಸರತಿ ಸಾಲುಗಳಲ್ಲಿ ಕಾಯುತ್ತಿರುವ ಜನರು ಹೇಳುತ್ತಿದ್ದಾರೆ’’ ಎಂದು ಅಮಿರ್ತನಾತನ್ ಹೇಳಿದರು.
‘‘ಈ ಸರಕಾರಕ್ಕೆ ಮತ ಹಾಕಿರುವುದಕ್ಕಾಗಿ ತನಗೆ ವಿಷಾದವಿದೆ ಎಂಬುದಾಗಿ ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ನಾನು ಮಾತನಾಡಿದ ಪ್ರತಿಯೊಬ್ಬ ಟ್ಯಾಕ್ಸಿ ಚಾಲಕ ಹೇಳಿದ್ದಾರೆ’’ ಎಂದು ಕೊಲಂಬೊದ ವಕೀಲೆ ಒಲಿವಿಯಾ ಥಾಮಸ್ ಹೇಳಿದರು.
ದೇಶದ ಆರ್ಥಿಕ ಭವಿಷ್ಯದ ಬಗ್ಗೆಯೂ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಇದೇ ಸಮೀಕ್ಷೆಯಲ್ಲಿ, ದೇಶದ ಆರ್ಥಿಕ ಸ್ಥಿತಿ ಮತ್ತು ಅದರ ಪಥಕ್ಕೆ ಜನರು 100ರಿಂದ ಮೈನಸ್ 100ರ ವ್ಯಾಪ್ತಿಯಲ್ಲಿ ಮೈನಸ್ 82.96 ಅಂಕ ನೀಡಿದ್ದಾರೆ. ಬಿಕ್ಕಟ್ಟು ತೀವ್ರಗೊಳ್ಳುತ್ತಿರುವಂತೆಯೇ, ದೇಶವನ್ನು ತೊರೆಯುವ ಬಗ್ಗೆಯೂ ಕೆಲವು ಶ್ರೀಲಂಕನ್ನರು ಯೋಚಿಸುತ್ತಿದ್ದಾರೆ.
‘‘ನನಗೀಗ 20 ಮತ್ತು 30 ವರ್ಷಗಳ ನಡುವಿನ ವಯಸ್ಸು’’ ಎಂದು ವಿಶ್ವವಿದ್ಯಾನಿಲಯ ಉಪನ್ಯಾಸಕ ಜಯವರ್ದನೆ ಹೇಳಿದರು. ‘‘ಮುಂದೇನು ಮಾಡುವುದು ಎನ್ನುವುದು ನಾನು ನನ್ನ ಸ್ನೇಹಿತರನ್ನು ಭೇಟಿಯಾಗುವಾಗ ಆಡುವ ಸಾಮಾನ್ಯ ಮಾತು. ಬೇರೆ ದೇಶಕ್ಕೆ ಹೋಗುವುದು ಎನ್ನುವುದು ಅದಕ್ಕೆ ಸಿಗುವ ಸಾಮಾನ್ಯ ಪ್ರತಿಕ್ರಿಯೆ. ಆದರೆ ಆ ಆಯ್ಕೆಯು ಸುಲಭವಲ್ಲ. ಆದರೂ, ನನಗೆ ಗೊತ್ತಿರುವ ಹಲವು ಮಧ್ಯಮ ವರ್ಗದ ಜನರು, ದೇಶದಿಂದ ಹೊರಗೆ ಹೋಗುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ’’ ಎಂದು ಅವರು ಹೇಳಿದರು.
ಈಗಾಗಲೇ ದೇಶವನ್ನು ಹಲವರು ತೊರೆದಿರುವರಾದರೂ, ಎಲ್ಲವೂ ಅವರು ನಿರೀಕ್ಷಿಸಿದಂತೆ ಆಗಿಲ್ಲ. ಕಳೆದ ವಾರ, ತಮ್ಮ ಕುಟುಂಬ ಸದಸ್ಯರಿಗೆ ಊಟ ಕೊಡಲು ಸಾಧ್ಯವಾಗದ 16 ಶ್ರೀಲಂಕನ್ನರು ತಮಿಳುನಾಡಿಗೆ ಬಂದರು. ಆದರೆ, ಅವರನ್ನು ಭಾರತೀಯ ತಟ ರಕ್ಷಣಾ ಪಡೆಯು ಬಂಧಿಸಿತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.