-

ಸಿಂಧು ಭೈರವಿ -ಮಸೀದಿಯಿಂದ ಮಂದಿರಕ್ಕೆ

-

ಸಿಂಧುಭೈರವಿ ಮಸೀದಿಯಿಂದ ಮಂದಿರಕ್ಕೆ ಬಂತು. ಅದನ್ನು ತನ್ನ ಸಂಯೋಜನೆಗಳಲ್ಲಿ ಹೆಚ್ಚು ಬಳಸಿ ಪ್ರಚುರಪಡಿಸಿದವನು ಮತ್ತು ಜನಪ್ರಿಯಗೊಳಿಸಿದವನು ಮಿಯಾನ್ ತಾನ್‌ಸೇನ್. ಅಕ್ಬರನ ಕಾಲದಲ್ಲಂತೂ ಸಂಗೀತ ಮತ್ತು ಸಾಹಿತ್ಯಗಳಲ್ಲಿ ಬಗೆ ಬಗೆ ಪ್ರಯೋಗಗಳು ನಡೆದವು ಮತ್ತು ಅಂತಹ ಪ್ರಯೋಗಗಳಿಗೆ ಮುಕ್ತವಾದ ವಾತಾವರಣವಿರುವುದಿರಲಿ, ಸ್ವಯಂ ಪ್ರಭುತ್ವವೇ ಪ್ರೋತ್ಸಾಹ ನೀಡುತ್ತಿತ್ತು.

 ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ’ ಇದು ಪುರಂದರ ದಾಸರ ರಚನೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳು, ಅಭಿಮಾನಿಗಳೆಲ್ಲರಿಗೂ ತೀರಾ ಪರಿಚಿತವಾದ ಕೀರ್ತನೆ. ಕನ್ನಡದ ವಾಗ್ಗೇಯಕಾರರಾಗಿರುವ ದಾಸರು ಬೆರಳೆಣಿಕೆಯಷ್ಟು ರಚಿಸಿರುವ ಸಂಸ್ಕೃತದ ಕೀರ್ತನೆಗಳಲ್ಲಿ ಇದೂ ಒಂದು. ಹಾಗೆಯೇ ಈ ಕೀರ್ತನೆ ಆಂಧ್ರದ ಕೂಚುಪುಡಿ ಮತ್ತು ಕರ್ನಾಟಕ ಹಾಗೂ ತಮಿಳುನಾಡಿನ ಭರತನಾಟ್ಯದವರಿಗೂ ಅಚ್ಚುಮೆಚ್ಚು. ಭಕ್ತಿ, ಸ್ತುತಿಯ ಭಾವಪರವಶತೆಯನ್ನು ಹೊಂದಿರುವ ಈ ಕೀರ್ತನೆಯಲ್ಲಿ ಭಾವ ಪ್ರದರ್ಶನಕ್ಕೆ, ರಸಾಭಿನಯಕ್ಕೆ ಒಳ್ಳೆಯ ಅವಕಾಶ ಇದೆ. ಕಾರಣ ಅದನ್ನು ಸಂಯೋಜಿಸಿರುವ ರಾಗ, ಸಿಂಧುಭೈರವಿ. ಸಿಂಧು ಭೈರವಿಯ ಮಾಧುರ್ಯವೇ ಹಾಗಿದೆ. ಅದರಲ್ಲಿರುವುದು ವಿರಹ, ಶೋಕ, ಕರುಣೆ, ಭಕ್ತಿ ಮತ್ತು ಪ್ರೀತಿ; ಈ ಐದೂ ರಸಗಳು ಅಭಿವ್ಯಕ್ತಿಯ ಲಹರಿ. ಸಂಗೀತ ಪ್ರೇಮಿಗಳಿಗೇನೂ ಹೊಸತಲ್ಲದ ಈ ರಾಗದಲ್ಲಿ ಅಸಂಖ್ಯಾತ ಗೀತೆ ಸಂಯೋಜನೆಗಳಿವೆ. ಶಾಸ್ತ್ರೀಯ ಸಂಗೀತಗಳಲ್ಲೂ, ಸಿನೆಮಾ ಸಂಗೀತಗಳಲ್ಲೂ ಇದರ ಛಾಪು ಬಹಳ ಢಾಳಾಗಿಯೇ ಇದೆ. 1985ರಲ್ಲಿ ತಮಿಳಿನಲ್ಲಿ ಕೆ.ಬಾಲಚಂದರ್ ನಿರ್ದೇಶಿಸಿದ, ಶಿವಕುಮಾರ್, ಸುಹಾಸಿನಿ ಮತ್ತು ಸುಲಕ್ಷಣ ಅಭಿನಯದ ಸಿನೆಮಾ ಸಿಂಧುಭೈರವಿಯೂ ಕೂಡಾ ರಾಗದ ಶಾಸ್ತ್ರೀಯ ಸಂಗೀತ ಪ್ರಕಾರ ಮತ್ತು ಜಾನಪದ ಮಟ್ಟುಗಳನ್ನು ಯಶಸ್ವಿಯಾಗಿ ಪ್ರಯೋಗಿಸಿತು. ಇಳಯರಾಜ ಸಿಂಧುಭೈರವಿಯನ್ನು ಎಷ್ಟು ಸಾಧ್ಯ ಅಷ್ಟು ಸೋಸಿ ಸೂಸಿದರು. ಕರ್ಣಾಟಕ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಇಷ್ಟೆಲ್ಲಾ ತನ್ನ ಗುರುತನ್ನು ಪ್ರಭಾವಶಾಲಿಯಾಗಿ ಮತ್ತು ಪ್ರತಿಭಾನ್ವಿತವಾಗಿ ಗುರುತಿಸಿಕೊಂಡಿರುವ ಸಿಂಧುಭೈರವಿ ಬಂದಿರುವುದು ಮಸೀದಿಯಿಂದ ಎಂದು ಬಿಟ್ಟರು ಡಾ. ಚಾರುಲತಾ ಮಣಿ. 

ಕರ್ನಾಟಕ ಸಂಗೀತದಲ್ಲಿ ಬಹುದೊಡ್ಡ ಹೆಸರನ್ನು ಹೊಂದಿರುವ ಚಾರುಲತಾ ಭಾರತೀಯ ಮೂಲದ ಆಸ್ಟ್ರೇಲಿಯ ದೇಶದವರು. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಾರುಲತಾ ಸಿಂಧುಭೈರವಿ ರಾಗವನ್ನು ಸಭೆಗೆ ಪರಿಚಯ ಮಾಡಿಕೊಡುತ್ತಾ ‘‘ಮಿಯಾ ತಾನ್‌ಸೇನ್ ಈ ರಾಗವನ್ನು ಬಹಳ ಜನಪ್ರಿಯಗೊಳಿಸಿದರು. ಸಿಂಧುಭೈರವಿಯ ವಿವಿಧ ಆಯಾಮಗಳನ್ನು ಉತ್ತರ ಭಾರತದಿಂದ ಎರವಲು ಪಡೆದಿದ್ದೇವೆ. ಈ ರಾಗ ಮಸೀದಿಯಿಂದ ಸಂಗೀತ ಕಛೇರಿಗೆ ಬಂದಿರುವುದು. ಇದು ಸತ್ಯ, ಮಧ್ಯಪ್ರಾಚ್ಯದ ಅರೇಬಿಯದ ನೆಲದಿಂದ ಬಂದಿರುವ ಈ ರಾದಲ್ಲಿ ದಿವ್ಯ ಕುರ್‌ಆನನ್ನು ಅಲ್ಲಿ ಹಾಡುತ್ತಾರೆ’’ ಎಂದು ಸ್ಪಷ್ಟಗೊಳಿಸುತ್ತಾರೆ. ಅರೆ! ಇಮಾಂಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಅಂತ ಹುಬ್ಬೇರಿಸುವಷ್ಟೇನೂ ಇಲ್ಲ. ಭಾರತಕ್ಕೆ ಇಸ್ಲಾಮ್ ಪರಿಚಯವಾದಾಗಿನಿಂದ ಭಾಷೆಯ ಬಳಕೆಯಲ್ಲಿ, ಪದ ಸಂಪತ್ತುಗಳಿಗೆ ಕಾಣ್ಕೆ ಪಡೆದುಕೊಳ್ಳುವಲ್ಲಿ, ಉಡುಪಿನ ವಿನ್ಯಾಸದಿಂದ ಹಿಡಿದು ಕಟ್ಟಡದ ವಿನ್ಯಾಸದವರೆಗೂ ವಿಧವಿಧವಾದ ಕಾಣ್ಕೆಗಳ ಕೊಡುಕೊಳ್ಳುವಿಕೆ ಸಹಜವಾಗಿಯೇ ಆಗಿದೆ. ಪೈಜಾಮ ಪರ್ಷಿಯದ ಕೊಡುಗೆ. ಪಾಯ್ ಎಂದರೆ ಕಾಲು, ಜಾಮ ಎಂದರೆ ಉಡುಪು, ಹಾಗೆಯೇ ಜುಬ್ಬಾ ನೇರವಾಗಿ ಅರೇಬಿಯದ ಕೊಡುಗೆ. ಇನ್ನು ಕುರ್ತಾ ಕೂಡಾ ಪರ್ಷಿಯದಿಂದ ಮುಹಮದ್ ಘಝ್ನ್ನಿ ಸಮಯದಲ್ಲಿ ಈಗಿನ ಅಫ್ಘಾನಿಸ್ತಾನದ ಮಾರ್ಗವಾಗಿ ಭಾರತಕ್ಕೆ ನುಸುಳಿತು. ಹಾಗೆಯೇ, ಪಾಯಜಾಮ ಹದಿನೆಂಟು ಮತ್ತು ಹತ್ತೊಂಬತ್ತರ ಶತಮಾನಲ್ಲಿ ಇಂಗ್ಲಿಷರು ಬಹುವಾಗಿ ಮೆಚ್ಚಿಕೊಂಡು, ಹಚ್ಚಿಕೊಂಡು ಅದರ ಹುಚ್ಚು ಹೆಚ್ಚಿಸಿಕೊಂಡರು. ಭಾರತದ ಮುಸ್ಲಿಮರಲ್ಲಿ ಮತ್ತು ಸಿಖ್ಖರಲ್ಲಿ ಗಂಡು ಹೆಣ್ಣು ಭೇದವಿಲ್ಲದೆ ಎಲ್ಲರೂ ತೊಡುತ್ತಿದ್ದದ್ದು ಇಂಗ್ಲಿಷರ ಗಮನ ಸೆಳೆದಿತ್ತು. 

ಗಂಡಸರು ಸೂಟು ಶರ್ಟು ಪ್ಯಾಂಟುಗಳ ಬಿಗಿತಗಳಲ್ಲಿ, ಹೆಂಗಸರು ಲೇಸ್ಸಿಂದ ಎಳೆದು ಕಟ್ಟುವ ಕೋರ್ಸೆಟ್ಟಿನ ಹಿಡಿತಗಳಲ್ಲಿ ಬಳಲಿದ್ದವರಿಗೆ ಈ ಜುಬ್ಬ ಮತ್ತು ಪೈಜಾಮಗಳು ಅವರ ಚರ್ಮಕ್ಕೆ ಉಸಿರಾಡಿಸಿದವು. ಇವೆಲ್ಲಾ ಯಾವುದು ಆಕರ್ಷಕವೋ, ಅನುಕೂಲವೋ ಅದನ್ನು ಬಳಸಿಕೊಳ್ಳುವ ಸಹಜ ವಿದ್ಯಮಾನಗಳಷ್ಟೇ. ಹಾಗೆಯೇ ವಿಶ್ವದ ಬೇರೆ ಬೇರೆ ಕಡೆಗಳಿಂದ ಸಂಗೀತ ವಾದ್ಯಗಳು ನಮ್ಮ ದೇಶಕ್ಕೂ ಬಂದಿವೆ. ಹಾಗೆಯೇ ಇಲ್ಲಿಂದ ಅಲ್ಲಿಗೂ ಹೋಗಿವೆ. ಕರ್ನಾಟಕ ಸಂಗೀತದಲ್ಲಿ ಅವಿಭಾಜ್ಯದಂತಿರುವ ಪಿಟೀಲು ಇಟಲಿಯ ಮೂಲದ್ದು, ನಮ್ಮ ದೇಶದ ಉದ್ದಗಲಕ್ಕೂ ಭಜನೆಗಳಿಗೆ ಜೊತೆ ನೀಡುತ್ತಾ, ರಂಗಭೂಮಿಗಳಿಗೆ ರಾಗರಂಗು ಏರಿಸುವ ಹಾರ್ಮೋನಿಯಂ ಹುಟ್ಟಿದ್ದು ಆಸ್ಟ್ರಿಯಾದ ವಿಯೆನ್ನಾದಲ್ಲಿ, ನಂತರ ಅದು ವಿಕಾಸಗೊಂಡು ಹೆಚ್ಚು ಬೆಳಕಿಗೆ ಬಂದಿದ್ದು ಪ್ಯಾರಿಸ್‌ನಲ್ಲಿ. ಚರ್ಚಿನಲ್ಲಿ ಪಿಯಾನೋ ಪ್ರವೇಶವಾಗುವವರೆಗೂ ಹಾರ್ಮೋನಿಯಮ್ಮೇ ಕ್ರಿಸ್ತನ ಸ್ತುತಿಗೀತೆಗಳಿಗೆ ಮೇಳ ಒದಗಿಸುತ್ತಿದ್ದದ್ದು. ಅಂತಹ ಹಾರ್ಮೋನಿಯಂ ಐರೋಪ್ಯ ದೇಶದ ಚರ್ಚುಗಳಿಂದ ನಮ್ಮ ಭಜನೆಮನೆಗಳಿಗೆ ಬಂದವು, ರಾಮಾಯಣ, ಮಹಾಭಾರತ, ಕುರುಕ್ಷೇತ್ರ, ಕೃಷ್ಣಸಂಧಾನಗಳನ್ನು ನಮ್ಮ ಮನೆ ಮನಗಳಿಗೆ ತಲುಪಿಸುತ್ತಿದ್ದ ನಾಟಕಗಳ ವೇದಿಕೆಗಳನ್ನೇರಿದವು ಎನ್ನಬಹುದು. ಅದೇ ರೀತಿ ಸಿಂಧುಭೈರವಿ ಮಸೀದಿಯಿಂದ ಮಂದಿರಕ್ಕೆ ಬಂತು. 

ಅದನ್ನು ತನ್ನ ಸಂಯೋಜನೆಗಳಲ್ಲಿ ಹೆಚ್ಚು ಬಳಸಿ ಪ್ರಚುರಪಡಿಸಿದವನು ಮತ್ತು ಜನಪ್ರಿಯಗೊಳಿಸಿದವನು ಮಿಯಾನ್ ತಾನ್‌ಸೇನ್. ಅಕ್ಬರನ ಕಾಲದಲ್ಲಂತೂ ಸಂಗೀತ ಮತ್ತು ಸಾಹಿತ್ಯಗಳಲ್ಲಿ ಬಗೆ ಬಗೆ ಪ್ರಯೋಗಗಳು ನಡೆದವು ಮತ್ತು ಅಂತಹ ಪ್ರಯೋಗಗಳಿಗೆ ಮುಕ್ತವಾದ ವಾತಾವರಣವಿರುವುದಿರಲಿ, ಸ್ವಯಂ ಪ್ರಭುತ್ವವೇ ಪ್ರೋತ್ಸಾಹ ನೀಡುತ್ತಿತ್ತು. ನಮ್ಮ ಭಾರತೀಯ ಮೂಲದ ವೀಣೆಗಿಂತಲೂ ಕೊಂಚ ಸೂಕ್ಷ್ಮವೂ, ಆಕರ್ಷಕವೂ, ನವಿರೂ ಆಗಿ ಭಿನ್ನ ಸ್ವರೂಪದಲ್ಲಿ ಪ್ರಕಟಗೊಂಡದ್ದು ಸಿತಾರ್. ಅದು ಹುಟ್ಟಿದ್ದು ಭಾರತದಲ್ಲೇ ಆಗಿದ್ದರೂ ಅದರ ಹೆಸರು ಪರ್ಷಿಯ ಮೂಲದ್ದು. ತಂಬೂರದ ದೇಹವನ್ನೇ ಆಧಾರವಾಗಿಟ್ಟುಕೊಂಡು ರೂಪ ತಳೆದ ಸಿತಾರನ್ನು ಅಮೀರ್ ಖುಸ್ರೂ (1253-1325) ಹೆಚ್ಚು ಅಭಿವೃದ್ಧಿ ಮಾಡಿದನು. ಹಿಂದೂಸ್ತಾನದ ಭಕ್ತಿರಸ, ಸೂಫಿಯ ಅಧ್ಯಾತ್ಮ ಭಾವಗಳೆರಡನ್ನೂ ಅಭಾಷಿಕ ಲಹರಿಯನ್ನಾಗಿ ಸೂಫಿಯಾನ ರಂಗಿಗೆ ಬಳಸಿಕೊಳ್ಳುತ್ತಿದ್ದರು. ಸೂಫಿ ಅಧ್ಯಾತ್ಮ ಅನುಭೂತಿಯ ಪರವಶತೆಯನ್ನು ಹೊಂದಲು ಈ ಸಂಗೀತ ವಾದ್ಯಗಳು ಹೊರಡಿಸುತ್ತಿದ್ದ ರಾಗಲಹರಿಗಳು ಸಹಕರಿಸುತ್ತಿದ್ದವು. ಅರೇಬಿಯ, ಪರ್ಷಿಯ, ಹಿಂದೂಸ್ತಾನಗಳೆಲ್ಲದರ ಕಾಣ್ಕೆಗಳು ಜನರ ಜೀವನದಲ್ಲಿ, ಅದರಲ್ಲೂ ಸಂಗೀತ, ಸಾಹಿತ್ಯ, ಕಲೆ, ಉಡುಗೆ ತೊಡುಗೆ, ಕಟ್ಟಡ ವಿನ್ಯಾಸಗಳಲ್ಲಿ ಬೆರೆತು ಹೋಗಿದ್ದರ ಪಾರಂಪರಿಕ ಹಿನ್ನೆಲೆಯನ್ನು ಹೊಂದಿದ್ದ ಸಮಾಜದಲ್ಲಿ ರೂಪುಗೊಂಡವನು ತಾನ್‌ಸೇನ್. 1493ರಲ್ಲಿ ಗ್ವಾಲಿಯರ್‌ನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ರಾಮ್ ತಾನು ಪಾಂಡೆ ತಾನ್‌ಸೇನ್‌ನ ಮೂಲ ಹೆಸರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪಿತಾಮಹನೆನಿಸುವಷ್ಟು ಬೆಳೆದ ತಾನ್‌ಸೇನ್ ತನ್ನ ಸಂಗೀತ ಸಾಧನೆಯ ಆರಂಭದ ದಿನಗಳಲ್ಲಿ ರೇವಾದ ರಾಜಾ ರಾಮಚಂದ್ರ ಬಳಿ ಇದ್ದರೂ, ತಾನ್‌ಸೇನ್ ಹೆಸರನ್ನು ಗ್ವಾಲಿಯರಿನ ರಾಜಾ ವಿಕ್ರಮ್ ಜಿತ್ ನೀಡಿದರೂ, ನಂತರ ಅಕ್ಬರನ ಆಸ್ಥಾನದಲ್ಲಿ ಅವನ ಸಂಗೀತ ಸಾಧನೆಯು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಸಂಗೀತ್ ಸಾಮ್ರಾಟ್ ಆಗಿದ್ದು. ಅವನನ್ನು ಅಕ್ಬರನ ಆಸ್ಥಾನಕ್ಕೆ ಕಳುಹಿಸಿದ್ದೂ ರಾಜಾ ರಾಮಚಂದ್ರನೇ. ಅಬುಲ್ ಫಝಲ್ ತನ್ನ ಐನ್ ಏ ಅಕ್ಬರಿಯಲ್ಲಿ ದಾಖಲು ಮಾಡುವಂತೆ ತಾನ್‌ಸೇನ್‌ನ ಮೊದಲನೇ ಸಂಗೀತ ಕಾರ್ಯಕ್ರಮಕ್ಕೆ ಅಕ್ಬರ ನೀಡಿದ ಸಂಭಾವನೆ ಎರಡು ಲಕ್ಷ. ಅಲ್ಲಿಯೇ ತಾನ್‌ಸೇನ್  ಗಣಪತಿ, ಶಿವ, ಪಾರ್ವತಿ ಮತ್ತು ರಾಮನ ಮೇಲೆ ಅನೇಕಾನೇಕ ದ್ರುಪದಗಳನ್ನು ಸಂಯೋಜಿಸಿದ. ಅವನು ತನ್ನ ಸಂಗೀತದಲ್ಲಿ ತನ್ನ ಇಷ್ಟ ದೈವಗಳನ್ನು ಆರಾಧಿಸುತ್ತಿದ್ದ. ಜೊತೆಜೊತೆಗೇ ಸೂಫಿ ಆಧ್ಯಾತ್ಮಿಕತೆ ಯನ್ನೂ ಅಪ್ಪಿದ್ದ. ಹೀಗೊಂದು ದಂತಕತೆ ಇದೆ. ತಾನ್‌ಸೇನ್

ಹುಟ್ಟಾ ಮೂಕನಾಗಿದ್ದನಂತೆ. ಅವನು ಸ್ವಾಮಿ ಹರಿದಾಸರ ಸಂಪರ್ಕದಲ್ಲಿದ್ದಾಗ ಅವರು ಸೂಫಿ ಸಂತ ಮುರ್ಶಿದ್ ಮುಹಮ್ಮದ್ ಗೌಸ್ ಗ್ವಾಲಿಯಾರಿಯ ಬಳಿಗೆ ಕರೆದುಕೊಂಡು ಹೋದರಂತೆ. ಆ ಮೂಕಬಾಲಕ ರಾಮ್ ತನು ಪಾಂಡೆಯ ಬಾಯಿಯಲ್ಲಿ ಸೂಫಿ ಸಂತ ಮುರ್ಶಿದ್

ಮುಹಮ್ಮದರು ಊದಿದ ಮೇಲೆ ಅವನಿಗೆ ಮಾತು ಬಂತಂತೆ. ಅವರೇ ಸ್ವಾಮಿ ಹರಿ ದಾಸರಿಗೆ ಆ ಹುಡುಗನನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹೇಳಿ ಕಳುಹಿಸಿದ ಮೇಲೆ ತಾನ್ ಸೇನ್‌ನ ಸಂಗೀತ ಪಯಣ ಆರಂಭವಾಯಿತೆಂಬ ಪ್ರತೀತಿ. ಈ ರೂಪಕವನ್ನು ಗಮನಿಸಿ. ಸಾಂಪ್ರದಾಯಿಕವಾದ ಸಾಮಾಜಿಕ ಚೌಕಟ್ಟುಗಳ ಮತ್ತು ಮನಸ್ಥಿತಿಗಳಲ್ಲಿ ಪ್ರೇಮ, ಔದಾರ್ಯ ಮತ್ತು ಕರುಣೆಯ ಪರಾಕಾಷ್ಠೆಯನ್ನು ಪ್ರಕಟಿಸಿ ಮಾನಸಿಕ ಬಂಧನಗಳಿಂದ ಮುಕ್ತಗೊಳಿಸುತ್ತಿದ್ದ ಪರಂಪರೆ ಸೂಫಿ ಸಂತರದ್ದಾಗಿತ್ತು. ಯಾವ ಕಾರಣಕ್ಕೋ ಅಂತರ್ಮುಖಿಯಾಗಿ, ಮಾನಸಿಕ ಮತ್ತು ಭಾವನಾತ್ಮಕ ಒತ್ತಡದಿಂದ ಬಳಲುತ್ತಿದ್ದ ರಾಮ್ ತಾನು ಪಾಂಡೆಯನ್ನು ಮುಕ್ತಗೊಳಿಸಿದ್ದರು ಸಂತ ಮುರ್ಶಿದ್ ಮುಹಮ್ಮದ್ ಗೌಸ್. ನಮ್ಮ ಕನ್ನಡದ ನೆಲದಲ್ಲಿ ಶಿಶುನಾಳ ಶರೀಫರು ಗುರು ಗೋವಿಂದ ಭಟ್ಟರಂತೆ. ಆದರೆ ಇಲ್ಲಿ ಗುರು ಸೂಫಿ ಸಂತನಾಗಿದ್ದ. ಶಿಷ್ಯ ಬ್ರಾಹ್ಮಣನಾಗಿದ್ದ. ಈ ಸೂಫಿ ಆಧ್ಯಾತ್ಮಿಕ ಅನುಭೂತಿಯನ್ನು ಅಪ್ಪಿಕೊಂಡಿದ್ದ ತಾನ್ ಸೇನ್ ಅರೇಬಿಯದಲ್ಲಿ ದಿವ್ಯ ಕುರ್‌ಆನನ್ನು, ಮುಹಮ್ಮದ್ ಪೈಗಂಬರರ ಸ್ತುತಿಗೀತೆಗಳಾದ ನಾತ್ ಗಳ ರಾಗವನ್ನು ಗ್ರಹಿಸುವುದಾಗಲಿ, ಅವುಗಳಲ್ಲಿ ಸಂಗೀತ ಸಂಯೋಜನೆ ಮಾಡುವುದಾಗಲಿ, ಆ ರಾಗ ಮಾಧುರ್ಯವನ್ನು ಅಭಿವೃದ್ಧಿ ಪಡಿಸಿ ಜನಪ್ರಿಯಗೊಳಿಸುವುದಾಗಲಿ ಏನೂ ಆಶ್ಚರ್ಯವಿಲ್ಲ. ದಿವ್ಯ ಕುರ್‌ಆನನ್ನು ವಾಚಿಸುವಾಗ ಇದ್ದಂತಹ ಸ್ವರನೇಮಗಳನ್ನು ಆಧರಿಸಿಕೊಂಡು ಕುತ್ಬುಲ್ ದೀನ್ ಅಲ್ ಶಿರಾಜ್ 1271ರ ಆಸುಪಾಸಿನಲ್ಲಿ ನಾತ್ ಗಳನ್ನು, ಹದೀಸ್‌ಗಳನ್ನು ಮತ್ತು ಕುರ್‌ಆನನ್ನು ಹಾಡಲು ಒಂದಷ್ಟು ಸ್ವರಗಳನ್ನು ಸಂಯೋಜಿಸಿದರು. 

ಅಲ್ ಶಿರಾಜ್ ಸೂಫಿ ಆಧ್ಯಾತ್ಮಿಕ ಅನುಭೂತಿಯ ಪ್ರಸಾರಕ ಮಾತ್ರವಲ್ಲ ವಿಜ್ಞಾನಿಯೂ ಮತ್ತು ಮಹಾ ಪಂಡಿತ ಕೂಡಾ ಆಗಿದ್ದರು. ಹೀಗೆ ಇಸ್ಲಾಮ್ ಪಠ್ಯಗಳಿಗೆ ಸ್ವರ ಪ್ರಸ್ತಾರವನ್ನು ಹಾಕುವಲ್ಲಿ ಮತ್ತು ಅದನ್ನು ಅಚ್ಚುಕಟ್ಟುಗೊಳಿಸುವಲ್ಲಿ ಅಲ್ ಶಿರಾಜ್ ಮುನ್ನವೂ ಇತಿಹಾಸವಿದೆ. ಅಲ್ ಕಿಂದಿ (874), ಅಲ್ ಫರಬಿ (950), ಇಬ್ನ್ ಸೀನಾ (1034) ಮತ್ತು ಶಾಫಿ ಅಲ್ ದೀನುಲ್ ಉರ್ಮಾವಿ (1294) ಇವರೆಲ್ಲಾ ಸ್ವರ ಪ್ರಸ್ತಾರವನ್ನು ಹಾಕುವುದರಲ್ಲಿ, ರಾಗ ಸಂಯೋಜನೆಯಲ್ಲಿ ಕೆಲಸ ಮಾಡಿರುವವರೇ ಆಗಿದ್ದಾರೆ. ಅವರಲ್ಲಿ ಹೆಚ್ಚು ಶಾಸ್ತ್ರೀಯವಾಗಿ ಕ್ರಮಕ್ಕೊಳಿಸಿದ ಕೀರ್ತಿ ಅಲ್ ಉರ್ಮಾವಿಯವರಿಗೇ ಸಲ್ಲಬೇಕು. ಅವರ ನಂತರ ಅಲ್ ಶಿರಾಜ್ ಈ ಅಬ್ಜಾಬ್ ಸ್ವರ ಪ್ರಸ್ತಾರದ ಕಾರ್ಯವನ್ನು ಅತ್ಯಂತ ಸಮರ್ಪಕವಾಗಿ ಕೈಗೊಂಡು ಕುರ್‌ಆನಿನ ಪಠಣದಲ್ಲಿರುವ ತಜ್ವೀದ್ ಸ್ವರನೇಮಗಳನ್ನು ಕ್ರಮಗೊಳಿಸಿದರು. ಇವರ ಹದಿನೇಳು ಅಬ್ಜಾಬ್ ಸ್ವರಪ್ರಸ್ತಾರಗಳನ್ನು ಮೊದಲು ಗುರುತಿಸಿದ್ದು ರವೂಫ್ ಯೆಕ್ತಾ ಎಂಬವರು ಟರ್ಕಿ ದೇಶದಲ್ಲಿ. ಇದು ಅರಬ್ ಮತ್ತು ಪರ್ಷಿಯದ ಸಂಗೀತ ಮಾಧುರ್ಯವನ್ನು ಒಳಗೊಂಡಂತಹ ಸ್ವರ ಪ್ರಸ್ತಾರಗಳೆಂದು ಗಮನಿಸಿದ್ದರು.

 ನಮ್ಮ ಭಾರತೀಯ ಸ್ವರಗಳ ಆರೋಹಣ ಮತ್ತು ಅವರೋಹಣದ ಅನುಕ್ರಮಣಿಕೆಯ ರೀತಿಯಲ್ಲಿಯೇ ಅರೇಬಿಯ ಮತ್ತು ಪರ್ಶಿಯದ ಸಂಗೀತ ಮೂಲಗಳ ಸ್ವರಗಳನ್ನು, ನಾದಗಳ ಧ್ವನಿಗಳನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಬೇಕೆಂದರೆ ಅಲ್ ಶಿರಾಜ್‌ರ ಪ್ರಯೋಗಗಳನ್ನು ಮತ್ತು ಪಠ್ಯಕ್ರಮಗಳನ್ನು ಗಮನಿಸಬೇಕು. ಇದರೊಂದಿಗೆ ಸಂಗೀತ ಮಯವಾಗಿ ನಿವೇದಿಸುವ ಸಂಪ್ರದಾಯದ ಕುರ್‌ಆನ್ ತಜ್ವೀದ್ ಕೂಡಾ ಅರ್ಥವಾಗುತ್ತದೆ. ಇಂತಹ ದಿವ್ಯ ಕುರ್‌ಆನಿನ ತಜ್ವೀದ್ ಮತ್ತು ಖಿರಾಅತ್ ಮೂಲದ ಸ್ವರಪ್ರಸ್ತಾರಗಳಿಂದ ತಾನ್‌ಸೇನ್ ಸಿಂಧುಭೈರವಿಯನ್ನು ಹೆಕ್ಕಿಕೊಂಡಿರುವ ಅವಕಾಶಗಳಿತ್ತು. ಹನ್ದಸಹ್ ಅಲ್ ಸ್ತ್ ಅಂದರೆ ನಾದ ಸ್ವರಗಳ ಕಲೆ ಇಸ್ಲಾಮಿಗೆ ಅಪರಿಚಿತವೇನೂ ಅಲ್ಲ ಮತ್ತು ವರ್ಜ್ಯವೂ ಆಗಿರಲಿಲ್ಲ. ಅದರ ಬಗ್ಗೆ ಅನೇಕ ಚರ್ಚೆಗಳು ಇಸ್ಲಾಮಿನ ಪಂಡಿತರಲ್ಲಿ ನಡೆಯುತ್ತಿರುತ್ತವೆ. ಆದರೆ ಕುರ್‌ಆನನ್ನು ಮತ್ತು ಹದೀಸ್ ಗಳನ್ನು ಲಯಬದ್ಧವಾಗಿ, ಸ್ವರಬದ್ಧವಾಗಿ ಪಠಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗೆಯೇ ಅವುಗಳಲ್ಲಿ ಧ್ವನಿಸುವ ರಾಗ ಮಾಧುರ್ಯವನ್ನೂ ಗುರುತಿಸದೇ ಇರಲಾಗುವುದಿಲ್ಲ. ಸಾಧಾರಣ ಪಠ್ಯದಂತೆ ಕುರ್‌ಆನನ್ನು ಓದುವುದಕ್ಕಿಂತ ಕೊಂಚ ಭಿನ್ನವಾಗಿ ಸ್ವರಬದ್ಧವಾಗಿ ಓದುವ ಖಿರಾಅತ್ ತಿಳಿದಿರುವವರು ತಾನ್‌ಸೇನ್ ಹಾಡುವ ಕುರ್‌ಆನಿನಿಂದ ಪ್ರೇರೇಪಿತನಾಗಿ ಸಿಂಧುಭೈರವಿಯ ಮೂಲಕ ಸಂಗೀತವನ್ನು ಆರಾಧಿಸುವುದರ ಪ್ರೇರಣೆಯನ್ನು ಗಮನಿಸಬಹುದು. ಅಷ್ಟೇ ಅಲ್ಲ, ಅವನ ಹೆಂಡತಿ ಹುಸೇನಿಯೂ ಮುಸಲ್ಮಾನಳಾಗಿದ್ದು, ಅವನಿಗೆ ಹುಟ್ಟಿದ ಐದು ಮಕ್ಕಳು; ಸೂರತ್ ಸೇನ್, ಶರತ್ ಸೇನ್, ತರಂಗ್ ಖಾನ್, ಬಿಲ್ವಾಸ್ ಖಾನ್ ಮತ್ತು ಸರಸ್ವತಿ.

 ಅವರೆಲ್ಲರೂ ಅವರವರ ಮಟ್ಟಿಗೆ ಸಂಗೀತ ಕ್ಷೇತ್ರದಲ್ಲಿ ಅಗ್ರಗಣ್ಯರಾದವರೇ. ಐತಿಹ್ಯವೊಂದರಂತೆ ತಾನ್ ಸೇನ್ ಅಕ್ಬರನ ಮಗಳಾದ ಮೆಹ್ರುನ್ನೀಸಳನ್ನೂ ಮದುವೆಯಾಗಿದ್ದನಂತೆ. ತಾನ್‌ಸೇನ್ ಸತ್ತ ಮೇಲೆ ಅವನ ಸೂಫಿ ಗುರು ಶೇಖ್ ಮುಹಮ್ಮದ್ ಗೌಸರ ಸನ್ನಿಧಾನದಲ್ಲೇ ಅಂತ್ಯ ಸಂಸ್ಕಾರ ಮಾಡಿದರು. ಅವನ ಅಂತ್ಯ ಸಂಸ್ಕಾರವನ್ನು ಹಿಂದೂ ಮತ್ತು ಮುಸ್ಲಿಮರ ಎರಡೂ ಪದ್ಧತಿಯಂತೆಯೂ ಮಾಡಿದರೆಂದು ದಾಖಲೆಗಳು ಹೇಳುತ್ತವೆ. ಮುಸ್ಲಿಮ್ ಅರಸನ ಆಸ್ಥಾನದಲ್ಲಿ ಕೆಲಸ ಮಾಡಬೇಕೆಂದರೆ ಅವರೇನೂ ಮುಸ್ಲಿಮ್ ಆಗಿ ಮತಾಂತರ ಹೊಂದುವಂತಿರಲಿಲ್ಲವಲ್ಲ. ಅವರಿಗೆಲ್ಲ ಧರ್ಮಗಳು, ಅವರವರ ವ್ಯಕ್ತಿಗತ ಆಚರಣೆಗಳು ಅವರವರ ಸ್ನೇಹ, ಸಂಬಂಧ, ವ್ಯವಹಾರ, ಪ್ರಶಂಸೆ, ಸಂಘರ್ಷ; ಹೀಗೆ ಯಾವುದಕ್ಕೂ ತೊಡಕಾಗಿರಲಿಲ್ಲ. ಬೀರಬಲ್ ಅಕ್ಬರನ ಆಪ್ತ. ಅಕ್ಬರನ ಹೆಸರಿನೊಂದಿಗೆ ಬೆರೆತು ಹೋಗಿರುವ ಸಾರಸ್ವತ ಬ್ರಾಹ್ಮಣನಾಗಿದ್ದ ಮಹೇಶ್ ದಾಸ್ ಬ್ರಾಹ್ಮಣನಾಗಿಯೇ ಉಳಿದಿದ್ದ. ಅಕ್ಬರನ ಪಟ್ಟದ ರಾಣಿ ಜೋಧಾಳೇ ತನ್ನ ಧಾರ್ಮಿಕ ಶ್ರದ್ಧೆ ಮತ್ತು ನಂಬುಗೆಯನ್ನು

ಕಾಡಿಕೊಂಡಿದ್ದಳು. ಸಹಬಾಳ್ವೆಯು ಸಹಜವೇ ಆಗಿತ್ತು. ಮನಸ್ತಾಪಗಳು, ಸಂಘರ್ಷಗಳು, ಕೊಲೆಗಳು ಆಗಿಯೇ ಇರಲಿಲ್ಲವೆಂದಲ್ಲ. ಆದರೆ ಅವೆಲ್ಲವೂ ಆಗುತ್ತಿದ್ದದ್ದು ರಾಜಕೀಯ ಕಾರಣಗಳಿಂದ, ವ್ಯಕ್ತಿಗತ ವೈಷಮ್ಯಗಳಿಂದಲೇ ಹೊರತು ಧಾರ್ಮಿಕ, ಸಾಂಸ್ಕೃತಿಕ ಕಾರಣಗಳಿಂದಲ್ಲ. ಈಗಿನವರು ಹಿಂದಕ್ಕೆ ಹೊರಳಿ ತಮ್ಮ ಹಿಂದೆ ನೋಡಿಕೊಳ್ಳಬೇಕಿದೆ. ತಾವು ಎಂತಹ ಅನಾಗರಿಕ ಸಮಾಜವನ್ನು ರೂಪಿಸುತ್ತಿದ್ದೇವೆ ಎಂದು ಎಚ್ಚರಗೊಳ್ಳಬೇಕಿದೆ. ಸಹಜವಾದ ಕೊಡುಕೊಳ್ಳುವಿಕೆಗಳಲ್ಲಿ ಆನಂದ ಮತ್ತು ನೆಮ್ಮದಿಯನ್ನು ಪಡೆಯಲು ಎಚ್ಚೆತ್ತುಕೊಳ್ಳಬೇಕಿದೆ. ಸಂಗೀತ, ನೃತ್ಯ, ಕಲೆಗಳಂತೂ ಎಲ್ಲವನ್ನೂ ಒಳಗೊಂಡು ಮನುಷ್ಯನ ಮನಸ್ಸನ್ನು ಅರಳಿಸುವಂತಹ ವಿಶ್ವಧರ್ಮದ ಪ್ರಕಟಗಳೇ ಆಗಿವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top