ಮೋದಿಯವರ ಆಗಮನ ರಾಜ್ಯಕ್ಕೆ ಅವಮಾನ | Vartha Bharati- ವಾರ್ತಾ ಭಾರತಿ

--

ಮೋದಿಯವರ ಆಗಮನ ರಾಜ್ಯಕ್ಕೆ ಅವಮಾನ

ನಿಮ್ಮ ಸರಕಾರದ ಬಳಿ ಎಲ್ಲವನ್ನೂ ಬೇಡಿ ಪಡೆಯುವ ಸ್ಥಿತಿ ಕರ್ನಾಟಕದ್ದಾಗಿದೆ. ನಿಮ್ಮ ಪಕ್ಷದಲ್ಲಿರುವ ನಮ್ಮ ರಾಜ್ಯದ ಸಂಸದರು ಕಣ್ಣು, ಕಿವಿ, ಮೂಗು, ನಾಲಿಗೆ ಎಲ್ಲ ಕಳೆದುಕೊಂಡು ಕೂತಿದ್ದಾರೆ. ಅವರು ನಿಮ್ಮ ಬಳಿ ಬಂದು ನಮ್ಮ ರಾಜ್ಯ ಹೀಗಾಗಿದೆ ಎಂದು ಹೇಳುತ್ತಾರೊ ಇಲ್ಲವೊ ಗೊತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ಆದರೆ ಕೇಂದ್ರದಿಂದ ಅನುದಾನ ಪಡೆಯುವ ರಾಜ್ಯಗಳಲ್ಲಿ ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲೂ ನಮ್ಮ ಹೆಸರಿಲ್ಲ. ನಮ್ಮ ರಾಜ್ಯದ ರಕ್ತ ಹೀರಿ ಹೋಗಲಿ ಬದುಕಿಕೊಳ್ಳಲಿ ಪಾಪ ಎಂದು ಬಾಯಿಗೆ ಗುಟುಕು ನೀರು ಬಿಡುವ ಹಾಗೆ ಅನುದಾನಗಳನ್ನು ಕೊಡುತ್ತಿದ್ದೀರಿ. ಕೆಲವರು ಕರ್ನಾಟಕಕ್ಕೆ ಹೆದ್ದಾರಿಗಳಿಗೆ ಒಳ್ಳೆ ಅನುದಾನಗಳನ್ನು ಕೊಡುತ್ತಿದ್ದಾರೆ ಎಂದು ಹೇಳುತ್ತಾರೆ, ಆದರೆ ತಮಿಳುನಾಡು, ಕೇರಳ ಮುಂತಾದ ದಕ್ಷಿಣದ ರಾಜ್ಯಗಳಿಗೆ ನೀವು ಕೊಟ್ಟಿರುವ ಅನುದಾನದ ನಾಲ್ಕನೇ ಒಂದು ಭಾಗದಷ್ಟನ್ನೂ ನೀವು ಕರ್ನಾಟಕಕ್ಕೆ ಕೊಟ್ಟಿಲ್ಲ.

ನರೇಂದ್ರ ಮೋದಿಯವರೇ, ನಿಮ್ಮ 8 ವರ್ಷಗಳ ಆಡಳಿತದಲ್ಲಿ ಕರ್ನಾಟಕದಿಂದ ರೂ. 19 ಲಕ್ಷ ಕೋಟಿಗೂ ಅಧಿಕ ಸಂಪತ್ತನ್ನು ಸಂಗ್ರಹಿಸಿದ್ದೀರಿ. ಇದರಲ್ಲಿ ನಮಗೆ ವಾಪಸ್ ಕೊಟ್ಟದ್ದೆಷ್ಟು? ಶೇ.42ರಷ್ಟನ್ನು ರಾಜ್ಯಗಳಿಗೆ ಕೊಡುತ್ತಿದ್ದೇವೆ ಎಂದು ಹೇಳುತ್ತೀರಲ್ಲ. ರೂ. 8 ಲಕ್ಷ ಕೋಟಿಗಳನ್ನು ಕೊಡಬೇಕಾಗಿತ್ತು. ಎಷ್ಟು ಕೊಟ್ಟಿದ್ದೀರಿ?. ರೂ. 8 ಲಕ್ಷ ಕೋಟಿ ಕೊಡಬೇಕಾಗಿದ್ದ ಮೋದಿಯವರ ಸರಕಾರ ನಮಗೆ ತೆರಿಗೆ ಪಾಲು ನೀಡಿದ್ದು ಕೇವಲ 2.14 ಲಕ್ಷ ಕೋಟಿ ರೂ. ಇದಾದ ಮೇಲೆ ರಾಜ್ಯದ ಯೋಜನೆಗಳಿಗೆ 1.29 ಲಕ್ಷ ಕೋಟಿ ರೂ. ನೀಡಿದ್ದಾರೆಂದು ನೂರಾರು ಕೋಟಿಗಟ್ಟಲೆ ಖರ್ಚು ಮಾಡಿ ಜಾಹೀರಾತು ನೀಡುತ್ತಿದ್ದಾರೆ. ತಮಿಳುನಾಡಿಗೆ ಕಳೆದ ಒಂದು ವರ್ಷದಲ್ಲೇ ಹೆದ್ದಾರಿಗಳಿಗೆ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಕೊಟ್ಟಿದ್ದಾರೆ. 

ಮೋದಿಯವರು ಮೈಸೂರಿಗೆ ಬಂದಿದ್ದಾರೆ. ಮೈಸೂರು ಭಾರತಕ್ಕೆ ಬೆಳಕು ನೀಡಿದ ಜಾಗ. ಇಲ್ಲಿ ನಾಲ್ವಡಿಯವರಂಥ ರಾಜರಿದ್ದರು. ಕುವೆಂಪು ಅವರಂಥ ದಾರ್ಶನಿಕರಿದ್ದರು. ದೇವರಾಜ ಅರಸು ಅವರಂಥ ಮುಖ್ಯಮಂತ್ರಿಯವರನ್ನೂ ಈ ರಾಜ್ಯ ಕಂಡಿದೆ. ಇಂಥ ಮಹಾ ಮಾನವತಾವಾದಿಗಳಿದ್ದ ಊರಿಗೆ, ಮನುಷ್ಯ ದ್ವೇಷಿ  ಆರೆಸ್ಸೆಸ್ ಸಿದ್ಧಾಂತವನ್ನು ಪೋಷಿಸುವ ಸಂಘಟನೆಯಲ್ಲಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೈಸೂರಿಗೆ ಬಂದಿದ್ದಾರೆ. ಆದರೆ ಮೋದಿಯವರು ಇಲ್ಲಿನ ಜನರ ಹಲವು ಪ್ರಶ್ನೆ, ಸವಾಲುಗಳಿಗೆ ಉತ್ತರ ನೀಡಬೇಕಾಗಿದೆ. ಯಾಕೆಂದರೆ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಕರ್ನಾಟಕ, ಮಹಾರಾಷ್ಟ್ರ ಮುಂತಾದ ದಕ್ಷಿಣದ  ರಾಜ್ಯಗಳನ್ನು ಕಂಡರೆ ಅಷ್ಟಕ್ಕಷ್ಟೆ. ಅದರಲ್ಲೂ ಕರ್ನಾಟಕವೆಂದರೆ ಇನ್ನೂ ಸಮಸ್ಯೆ. ಈಗ ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ಕೊಡಬಾರದಷ್ಟು ಕಾಟ ಕೊಡುತ್ತಿದ್ದಾರೆ. ಅದರ ಕೆಲವೇ ಪ್ರಶ್ನೆಗಳಿವು.

1. ಸನ್ಮಾನ್ಯ ನರೇಂದ್ರ ಮೋದಿಯವರೇ, ದೇಶದಲ್ಲಿ ಅತ್ಯಂತ ಪ್ರತಿಷ್ಠಿತವಾದ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಎಂಬ ಒಂದು ಬ್ಯಾಂಕು ಇತ್ತು. ನಿಮಗೆ ಅದರ ನೆನಪು ಇದೆಯೆ? ಆ ಬ್ಯಾಂಕನ್ನು 1913ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 42 ಲಕ್ಷ ರೂಪಾಯಿಯನ್ನು ಸೀಡ್ ಮನಿಯಾಗಿ ಕೊಟ್ಟು ಸ್ಥಾಪಿಸಿದ್ದರು. 104 ವರ್ಷಗಳ ಇತಿಹಾಸವಿದ್ದ ನಮ್ಮ ಹೆಮ್ಮೆಯ ಮೈಸೂರು ಬ್ಯಾಂಕಿನಲ್ಲಿ 10,627 ಅಧಿಕಾರಿ, ಸಿಬ್ಬಂದಿಯಿದ್ದರು. 976 ಶಾಖೆಗಳಿದ್ದವು. ಪ್ರತಿ ವರ್ಷ ರೂ. 1.5 ಲಕ್ಷ ಕೋಟಿಯಷ್ಟು ವಹಿವಾಟು ನಡೆಯುತ್ತಿತ್ತು. ಲಕ್ಷಾಂತರ ಕೋಟಿ ರೂಪಾಯಿಯಷ್ಟು ಮೌಲ್ಯದ ಆಸ್ತಿ ಇತ್ತು. ಇಂತಹ ನಮ್ಮ ಹೆಮ್ಮೆಯ ಬ್ಯಾಂಕನ್ನು ನೀವು ಪ್ರಧಾನಿಗಳಾಗಿ 3 ವರ್ಷಕ್ಕೆ ನುಂಗಿ ಹಾಕಿ ಮೈಸೂರು ಎಂಬ ಹೆಸರನ್ನೇ ಅಳಿಸಿ ಬಿಟ್ಟಿರಿ, ಇಂಥದ್ದರಲ್ಲಿ ಯಾವ ಮುಖ ಹೊತ್ತು ಮೈಸೂರಿಗೆ ಬಂದಿದ್ದೀರಿ.

2. ಮೈಸೂರು ಬ್ಯಾಂಕಿನ ಹಾಗೆಯೇ ನಮ್ಮ ಕರಾವಳಿಯ ಹಾಜಿ ಅಬ್ದುಲ್ಲಾ ಅವರು 5,000 ರೂ. ಬಂಡವಾಳ ಹಾಕಿ 1906ರಲ್ಲಿ ಕಾರ್ಪೊರೇಷನ್ ಬ್ಯಾಂಕನ್ನು ಸ್ಥಾಪಿಸಿದ್ದರು. ಆ ಬ್ಯಾಂಕನ್ನು ನೀವು ಪ್ರಧಾನಿಯಾಗಿ 5 ವರ್ಷಗಳಾದಾಗ 2019ರಲ್ಲಿ ನುಂಗಿ ಹಾಕಿದಿರಿ. ನೀವು ಈ ಬ್ಯಾಂಕನ್ನು ನುಂಗುವುದಕ್ಕೆ ಮೊದಲು, ಅದರಲ್ಲಿ 18,935 ನೌಕರರಿದ್ದರು. ಈ ಬ್ಯಾಂಕಿನಲ್ಲಿ 2,13,578 ಲಕ್ಷ ಕೋಟಿ ಮೌಲ್ಯದ ಆಸ್ತಿ ಇತ್ತು. 17,495 ಕೋಟಿ ರೂ. ವಾರ್ಷಿಕ ಆದಾಯ ವಿತ್ತು.

3. ಮತ್ತೊಂದು ಸಿಂಡಿಕೇಟ್ ಬ್ಯಾಂಕ್; ಈ ಬ್ಯಾಂಕನ್ನು 1925 ರಲ್ಲಿ ಮಣಿಪಾಲದ ಟಿ.ಎಂ.ಎ. ಪೈ ಅವರು ಸ್ಥಾಪಿಸಿದ್ದರು.  ಇದರಲ್ಲಿ 4.1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದಷ್ಟು ಆಸ್ತಿ ಇತ್ತು.  34,054 ಅಧಿಕಾರಿ, ಸಿಬ್ಬಂದಿಯಿದ್ದರು. ಪ್ರತಿ ವರ್ಷ ರೂ. 23,949 ಕೋಟಿ ಆದಾಯವಿತ್ತು.

4. ವಿಜಯಾ ಬ್ಯಾಂಕ್; ಈ ಬ್ಯಾಂಕನ್ನು 1931ರಲ್ಲಿ ಎ.ಬಿ. ಶೆಟ್ಟಿಯವರು ಸ್ಥಾಪಿಸಿದ್ದರು. ಈ ಬ್ಯಾಂಕನ್ನು ನೀವು ನುಂಗಿ ಹಾಕುವ ಮೊದಲು ಅದರಲ್ಲಿ 1.78 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಇತ್ತು. ಪ್ರತಿ ವರ್ಷ ರೂ. 2.29 ಲಕ್ಷ ಕೋಟಿಯಷ್ಟು ವಹಿವಾಟು ನಡೆಯುತ್ತಿತ್ತು. ಈ ಬ್ಯಾಂಕಿನಲ್ಲಿ 10,079 ಜನ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡುತ್ತಿದ್ದರು.

5. ದೇಶದ ಆರ್ಥಿಕತೆಗೆ ಸಿಂಹಪಾಲು ಕೊಡುಗೆಯನ್ನು ನೀಡಿ, ಕರ್ನಾಟಕದ ಗೌರವವನ್ನು ಎತ್ತಿ ಹಿಡಿಯುತ್ತಿದ್ದ 5 ಬ್ಯಾಂಕುಗಳಲ್ಲಿ ಪ್ರಮುಖ 4 ಬ್ಯಾಂಕುಗಳನ್ನು ನಮ್ಮಿಂದ ಕಿತ್ತುಕೊಂಡಿರಿ. ಈ ನಾಲ್ಕು ಬ್ಯಾಂಕುಗಳಲ್ಲಿದ್ದ ಒಟ್ಟಾರೆ ಆಸ್ತಿಯ ಮೌಲ್ಯ 317 ಲಕ್ಷ ಕೋಟಿ ರೂಪಾಯಿಯೆಂದು ದಾಖಲೆಗಳು ಹೇಳುತ್ತಿವೆ.  ಈ ಬ್ಯಾಂಕುಗಳಲ್ಲಿ 75,000ಕ್ಕೂ ಅಧಿಕ ಸಂಖ್ಯೆಯ ಅಧಿಕಾರಿ ಸಿಬ್ಬಂದಿಯಿದ್ದರು. ಇವರುಗಳಲ್ಲಿ ಬಹುಪಾಲು ಜನ ಕರ್ನಾಟಕದವರಿದ್ದರು. ಇವರು ನಮ್ಮ ಸಣ್ಣ ಪುಟ್ಟ ಕೈಗಾರಿಕೋದ್ಯಮಿಗಳಿಗೆ, ರೈತರಿಗೆ ಗುಣ ಮಟ್ಟದ ಸೇವೆಯನ್ನೂ ಸಲ್ಲಿಸುತ್ತಿದ್ದರು. ನಮ್ಮ ರಾಜ್ಯದ ಪದವೀಧರ ಯುವಜನತೆಗೆ ಸಾಕಷ್ಟು ಉದ್ಯೋಗಗಳನ್ನೂ ನೀಡುತ್ತಿದ್ದವು. ನೀವು ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ಏನು ಮಾಡಿದಿರಿ? ಗುಜರಾತ್ ಸೇರಿದಂತೆ ಅನೇಕ ಕಡೆ ಅಂಬಾನಿ, ಅದಾನಿ ಮುಂತಾದವರಿಗೆ ಸಾಲ ಕೊಟ್ಟು ಆ ಸಾಲವನ್ನು ವಸೂಲು ಮಾಡದೆ ಮನ್ನಾ ಮಾಡಿದಿರಿ, ಇದರಿಂದಾಗಿ ಬರೋಡ ಬ್ಯಾಂಕು, ಪಂಜಾಬ್ ನ್ಯಾಶನಲ್ ಬ್ಯಾಂಕು ಮುಂತಾದವುಗಳು ದಿವಾಳಿಯಾಗಿದ್ದವು. ಹಾಗಾಗಿ ಅವುಗಳನ್ನು ಉಳಿಸುವುದಕ್ಕಾಗಿ ನಮ್ಮ ರಾಜ್ಯದ ಬ್ಯಾಂಕುಗಳನ್ನು ನುಂಗಿ ಹಾಕಿದಿರಿ. ಮೋದಿಯವರೇ ನಿಮ್ಮ ದಿವಾಳಿ ಆರ್ಥಿಕ ನೀತಿಗಳಿಂದಾಗಿ ಕರ್ನಾಟಕದ ಬ್ಯಾಂಕುಗಳ ಅಸ್ತಿತ್ವವನ್ನೇ ಕಳೆದು ಹಾಕಿದಿರಿ. ಬ್ಯಾಂಕಿನ ಜೊತೆಗೆ ಇದ್ದ ಮೈಸೂರು ಎಂಬ ಬ್ಯಾಂಕನ್ನು ನುಂಗಿ ಹಾಕಿದ್ದೀರಿ. ಈಗ ಯಾವ ಮುಖವನ್ನು ತೋರಿಸಲು ಮೈಸೂರಿಗೆ ಬಂದಿದ್ದೀರಿ. ನಮ್ಮ ಬ್ಯಾಂಕುಗಳೆಲ್ಲ ಉತ್ತರದ ಬೇರೆ ಬ್ಯಾಂಕುಗಳ ಜೊತೆ ಸೇರಿ ಹೋದ ಮೇಲೆ ನಮ್ಮ ರಾಜ್ಯದ ಯುವ ಜನತೆಗೆ ಉದ್ಯೋಗ ಸಿಗುತ್ತಿಲ್ಲ. ಈಗ ಎಲ್ಲ ಬ್ಯಾಂಕುಗಳಲ್ಲೂ ಹಿಂದಿ ಭಾಷಿಕರು ಬಂದು ಕೂತಿದ್ದಾರೆ. ಅವರಿಗೆ ಕನ್ನಡ ಬರುತ್ತಿಲ್ಲ. ಜನರಿಗೆ ಅನನುಕೂಲಗಳಾಗುತ್ತಿವೆ. ಇಷ್ಟೆಲ್ಲ ಮಾಡಿದ ನೀವು ಈಗ ಮೈಸೂರಿಗೆ ಯೋಗ ಮಾಡಿಸುತ್ತೇನೆಂದು ಬಂದಿದ್ದೀರಿ. ಕನ್ನಡಿಗರಿಗೆ ವಿಷ ನೀಡಿದ ಮೇಲೆ ಯಾವ ಮುಖ ತೋರಿಸಲು ಬಂದಿದ್ದೀರಿ ನೀವು.

6. ಬ್ಯಾಂಕುಗಳನ್ನಷ್ಟೆ ಅಲ್ಲ, ನಿಮ್ಮ 8 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಮಾಡಿದ ಅವಮಾನ ಒಂದೇ ಎರಡೇ ಮೋದಿಯವರೇ?

7. ಜಾಸ್ತಿ ದೂರ ಹೋಗಬೇಡಿ. ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ನಮಗೆ ಆಕ್ಸಿಜನ್ ಇಲ್ಲದಂತೆ ಮಾಡಿ ಜನರನ್ನು ಕೊಂದು ಹಾಕಿದಿರಿ. ಕೋವಿಡ್‌ನಿಂದಾಗಿ ಅತಿ ಹೆಚ್ಚು ತೊಂದರೆಗೊಳಗಾದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ನಮಗೆ ಅತಿ ಹೆಚ್ಚು ಆಕ್ಸಿಜನ್ ಅಗತ್ಯವಿತ್ತು. ಆದರೆ ನೀವು ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ಆಕ್ಸಿಜನ್‌ನ್ನು ಕಿತ್ತುಕೊಂಡಿರಿ. ಕಡೆಗೆ ನಮ್ಮ ಹೈಕೋರ್ಟ್ ಕರ್ನಾಟಕಕ್ಕೆ ಆಕ್ಸಿಜನ್ ಕೊಡಿ ಎಂದು ಆದೇಶ ಮಾಡಿತು. ಆದರೆ ನೀವು ಹೈಕೋರ್ಟ್ ಹೇಳಿದಷ್ಟು ಆಕ್ಸಿಜನ್ ಕೊಡಲಾಗುವುದಿಲ್ಲವೆಂದು ಹೇಳಿ ಸುಪ್ರೀಂ ಕೋರ್ಟಿಗೆ ಅಪೀಲು ಮಾಡಿದಿರಿ. ಸುಪ್ರೀಂ ಕೋರ್ಟ್ ಕೂಡ ನಿಮಗೆ ತಪರಾಕಿ ನೀಡಿ ಕರ್ನಾಟಕಕ್ಕೆ ಆಕ್ಸಿಜನ್ ಕೊಡಿ ಎಂದು ಆದೇಶ ನೀಡಿತು. ಆದರೆ ಅಷ್ಟೊತ್ತಿಗಾಗಲೇ ಕರ್ನಾಟಕದಲ್ಲಿ ಹೆಣಗಳ ಬಣವೆ ಬಿದ್ದಿತ್ತು.  ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಎಷ್ಟು ಜನ ಸತ್ತರು ಎಂಬ ಮಾಹಿತಿ ಇದೆಯೇ ಮೋದಿಯವರೇ? ಪಾರ್ಲಿಮೆಂಟಿನಲ್ಲಿ ಇತ್ತೀಚೆಗೆ ನಡೆದ ಅಧಿವೇಶನದಲ್ಲೂ ಆಕ್ಸಿಜನ್ ಇಲ್ಲದೆ ಯಾರೂ ಸತ್ತಿಲ್ಲ ಎಂದು ನಿಮ್ಮ ಸರಕಾರ ಉತ್ತರ ನೀಡಿತು. ಮೈಸೂರಿನಲ್ಲಿ ಕರ್ನಾಟಕದಲ್ಲಿ ಇನ್ನೂ ಸೂತಕದ ಛಾಯೆ ಇದೆ. ನೀವು ಯೋಗ ಮಾಡಿಸಿ ಜನರನ್ನು ಲಾಗ ಹೊಡೆಸುವ ಮೊದಲು ಆ ಸಂತ್ರಸ್ತರನ್ನು ಒಮ್ಮೆ ಭೇಟಿ ಮಾಡಿ ಅವರ ಕುಟುಂಬಗಳಿಗೆ ಪರಿಹಾರ ನೀಡಿ ಪುಣ್ಯ ಕಟ್ಟಿಕೊಳ್ಳಬಹುದಿತ್ತು. ನಿಮ್ಮ ಮೈಗೆ, ಮನಸ್ಸಿಗೆ ಅಂಟಿಕೊಂಡಿರುವ ಕೊಲೆಯ ಸೂತಕವಾದರೂ ತುಸು ಕಡಿಮೆಯಾಗುತ್ತಿತ್ತು.

8. ಕೋವಿಡ್ ಸೇರಿದಂತೆ ಕರ್ನಾಟಕದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯದ ಜನ ಒಂದೇ ಸಮನೆ ದಾಖಲೆಗಳ ಸಮೇತ ನಿಮಗೆ ಪತ್ರ ಬರೆಯುತ್ತಿದ್ದಾರೆ. ನೀವು ಏನಾದರೂ ಕ್ರಮ ತೆಗೆದುಕೊಂಡಿದ್ದೀರಾ? ಕೋವಿಡ್ ಖರೀದಿಗಳಲ್ಲಿ ವಿಪರೀತ ಭ್ರಷ್ಟಾಚಾರ ನಡೆದಿದೆ.

9. ಅದಾದ ಮೇಲೆ 40 ಪರ್ಸೆಂಟ್ ಕಮಿಷನ್  ನಡೆಯುತ್ತಿದೆಯೆಂದು ಇಲಾಖೆಗಳನ್ನು, ಇಲಾಖೆಗಳ ಸಚಿವರನ್ನು ಹೆಸರಿಸಿ ನಿಮಗೆ ಗುತ್ತಿಗೆದಾರರ ಸಂಘದವರು ಪತ್ರ ಬರೆದರಲ್ಲ ಅದರ ಕುರಿತು ಯಾವ ಕ್ರಮ ಕೈಗೊಂಡಿದ್ದೀರಿ? 

10. ಭ್ರಷ್ಟಾಚಾರ ಸಹಿಸಲಾಗುತ್ತಿಲ್ಲವೆಂದು ನಿಮಗೆ ಪತ್ರ ಬರೆದಿದ್ದರಲ್ಲ ಮೋದಿಯವರೇ ಅದರ ಕುರಿತು ಮೊದಲೇ ಕ್ರಮ ತೆಗೆದುಕೊಂಡಿದ್ದರೆ  ಸಂತೋಷ್ ಎಂಬ ಯುವಕ ತಂದೆ, ತಾಯಿ, ಹೆಂಡತಿ ಮಕ್ಕಳನ್ನು ಅನಾಥರನ್ನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಉದ್ಭವಿಸುತ್ತಿರಲಿಲ್ಲ. ಚೌಕಿದಾರನೆಂದು ಬೋರ್ಡು ಹಾಕಿಕೊಂಡು ಓಡಾಡುವ ನೀವು ಏನು ಮಾಡುತ್ತಿದ್ದೀರಿ ಹೇಳಿ.

11. ಮಾತೆತ್ತಿದರೆ ವಿರೋಧ ಪಕ್ಷದವರ ಮೇಲೆ ಐಟಿ, ಈಡಿಗಳನ್ನು ಛೂ ಬಿಡುವ ನೀವು ಬಿಜೆಪಿಯವರು ರಾಜ್ಯವನ್ನು ಲೂಟಿ ಮಾಡುತ್ತಿದ್ದರೂ ನೀವು ಏಕೆ ಸುಮ್ಮನಿದ್ದೀರಿ. ಇಂದು ಯಾವುದೇ ಸರಕಾರಿ ಕಚೇರಿಗೆ ಬಡವರು ಹೋಗಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಠಾಣೆ, ಕಂದಾಯ ಇಲಾಖೆಯ ಕಚೇರಿಗಳು ರಿಯಲ್ ಎಸ್ಟೇಟ್ ಆಫೀಸುಗಳಾಗಿವೆ. ಆಫಿಸರುಗಳು 10 ರಿಂದ 5 ಕೋಟಿ ರೂಪಾಯಿವರೆಗೆ ಲಂಚ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆಂದು ಪತ್ರಿಕೆಗಳು ಸಾಲು ಸಾಲು ವರದಿ ಮಾಡಿವೆ. ಕೃಷಿ ಇಲಾಖೆಯಲ್ಲಿನ ಭ್ರಷ್ಟಾಚಾರದಿಂದ ಕಳಪೆ, ಔಷಧ, ಗೊಬ್ಬರ, ಬಿತ್ತನೆ ಬೀಜಗಳಿಂದಾಗಿ ಕೃಷಿ ಭೂಮಿ ಬಂಜರಾಗುತ್ತಿದೆ. ಕೃಷಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆಯೂ ನಿಮಗೆ ಪತ್ರ ಬರೆದಿದ್ದಾರೆ. ಬಿಜೆಪಿ ಸರಕಾರವು ಭ್ರಷ್ಟಾಚಾರದಿಂದಾಗಿ ರಾಜ್ಯವನ್ನು ನರಕ ಮಾಡಿದೆೆ. ಇಂಥದ್ದರ ಮಧ್ಯೆ ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಬಂದಿದ್ದೀರಿ ಮೋದಿಯವರೇ?  ನರಕದಲ್ಲಿ ಕೂತ ಜನರಿಗೆ ಯೋಗ ಮಾಡಿ ಎಂದರೆ ಅದಕ್ಕಿಂತ ದೊಡ್ಡ ಮೀಡಿಯೋಕ್ರಸಿ, ಹಿಪಾಕ್ರಸಿ ಬೇರೆ ಇನ್ನೇನೂ ಇರಲು ಸಾಧ್ಯವಿಲ್ಲ.

12. ಸನ್ಮಾನ್ಯ ನರೇಂದ್ರ ಮೋದಿಯವರೇ, ನಿಮ್ಮ 8 ವರ್ಷಗಳ ಆಡಳಿತದಲ್ಲಿ ಕರ್ನಾಟಕದಿಂದ ರೂ. 19 ಲಕ್ಷ ಕೋಟಿಗೂ ಅಧಿಕ ಸಂಪತ್ತನ್ನು ಸಂಗ್ರಹಿಸಿದ್ದೀರಿ. ಇದರಲ್ಲಿ ನಮಗೆ ವಾಪಸ್ ಕೊಟ್ಟದ್ದೆಷ್ಟು? ಶೇ.42ರಷ್ಟನ್ನು ರಾಜ್ಯಗಳಿಗೆ ಕೊಡುತ್ತಿದ್ದೇವೆ ಎಂದು ಹೇಳುತ್ತೀರಲ್ಲ. ರೂ. 8 ಲಕ್ಷ ಕೋಟಿಗಳನ್ನು ಕೊಡಬೇಕಾಗಿತ್ತು. ಎಷ್ಟು ಕೊಟ್ಟಿದ್ದೀರಿ?. ರೂ. 8 ಲಕ್ಷ ಕೋಟಿ ಕೊಡಬೇಕಾಗಿದ್ದ ಮೋದಿಯವರ ಸರಕಾರ ನಮಗೆ ತೆರಿಗೆ ಪಾಲು ನೀಡಿದ್ದು ಕೇವಲ 2.14 ಲಕ್ಷ ಕೋಟಿ ರೂ. ಇದಾದ ಮೇಲೆ ರಾಜ್ಯದ ಯೋಜನೆಗಳಿಗೆ 1.29 ಲಕ್ಷ ಕೋಟಿ ರೂ. ನೀಡಿದ್ದಾರೆಂದು ನೂರಾರು ಕೋಟಿಗಟ್ಟಲೆ ಖರ್ಚು ಮಾಡಿ ಜಾಹೀರಾತು ನೀಡುತ್ತಿದ್ದಾರೆ. ತಮಿಳುನಾಡಿಗೆ ಕಳೆದ ಒಂದು ವರ್ಷದಲ್ಲೇ ಹೆದ್ದಾರಿಗಳಿಗೆ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಕೊಟ್ಟಿದ್ದಾರೆ. 

13. 15ನೇ ಹಣಕಾಸು ಆಯೋಗದ ನಿಯಮಗಳನ್ನು ಬದಲಾಯಿಸಿ  ಇಡೀ ದೇಶದಲ್ಲಿ ಭಾರತಕ್ಕೆ ಅತಿ ಹೆಚ್ಚು ಅನ್ಯಾಯ ಮಾಡಿದಿರಿ. ಆದರೂ ಆಯೋಗವು 5,495 ಕೋಟಿ ರೂ.ಯನ್ನು ನಷ್ಟಕ್ಕೆ ಪರಿಹಾರಾರ್ಥವಾಗಿ ಕರ್ನಾಟಕಕ್ಕೆ ಕೊಡಿ ಎಂದು ಶಿಫಾರಸು ಮಾಡಿತ್ತು. ಆದರೆ ನಿಮ್ಮ ಸರಕಾರ ಅದನ್ನು ಕೊಡುವುದಿಲ್ಲ ಎಂದು ಹೇಳಿ ಅನ್ಯಾಯ ಮಾಡಿತು. ಆದರೂ ನೀವು ಮೈಸೂರಿಗೆ ಬಂದಿದ್ದೀರಿ. 

14. ಬರುವವರು ಬಂದಿದ್ದೀರಿ. ರಾಜ್ಯದ ರಸ್ತೆಗಳನ್ನು ಒಮ್ಮೆ ನೋಡಿದ್ದೀರಾ? ಹೆಚ್ಚೂ ಕಡಿಮೆ ಪ್ರತಿ ವಾರವೂ ಕರ್ನಾಟಕದ ಹೈಕೋರ್ಟ್ ‘‘ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಿಲ್ಲ ನಿಮ್ಮನ್ನು ಜೈಲಿಗೆ ಕಳಿಸಬೇಕಾಗುತ್ತದೆ’’ ಎಂದು ಅಧಿಕಾರಿಗಳಿಗೆ ಛೀಮಾರಿ ಹಾಕುತ್ತಿದೆ. ಕಳೆದ ಮೂರು ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಗುಂಡಿ ಮುಚ್ಚಲು ಖರ್ಚು ಮಾಡಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ ಗುಂಡಿಗಳ ಆಳ ಹೆಚ್ಚಾಗುತ್ತಿದೆ. ಸರಕಾರದ ಮಂತ್ರಿಗಳ, ಅಧಿಕಾರಿಗಳ ಜೇಬು ದೊಡ್ಡದಾಗುತ್ತಿದೆ. ಇಲ್ಲಿ 40 ಪರ್ಸೆಂಟ್ ಅಲ್ಲ ಕೆಲವು ಕಾಮಗಾರಿಗಳಲ್ಲಿ 100 ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ. ಕೆಲಸವೇ ಮಾಡದೆ ಬಿಲ್ಲು ಮಾಡುತ್ತಿದ್ದಾರೆ. ರಾಜ್ಯದ ಪರಿಸ್ಥಿತಿಯೂ ಹೀಗೆ ಆಗಿದೆ. 

15. ನಿಮ್ಮ ಸರಕಾರದ ಬಳಿ ಎಲ್ಲವನ್ನೂ ಬೇಡಿ ಪಡೆಯುವ ಸ್ಥಿತಿ ಕರ್ನಾಟಕದ್ದಾಗಿದೆ. ನಿಮ್ಮ ಪಕ್ಷದಲ್ಲಿರುವ ನಮ್ಮ ರಾಜ್ಯದ ಸಂಸದರು ಕಣ್ಣು, ಕಿವಿ, ಮೂಗು, ನಾಲಿಗೆ ಎಲ್ಲ ಕಳೆದುಕೊಂಡು ಕೂತಿದ್ದಾರೆ. ಅವರು ನಿಮ್ಮ ಬಳಿ ಬಂದು ನಮ್ಮ ರಾಜ್ಯ ಹೀಗಾಗಿದೆ ಎಂದು ಹೇಳುತ್ತಾರೋ ಇಲ್ಲವೋ ಗೊತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ಆದರೆ ಕೇಂದ್ರದಿಂದ ಅನುದಾನ ಪಡೆಯುವ ರಾಜ್ಯಗಳಲ್ಲಿ ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲೂ ನಮ್ಮ ಹೆಸರಿಲ್ಲ. ನಮ್ಮ ರಾಜ್ಯದ ರಕ್ತ ಹೀರಿ ಹೋಗಲಿ ಬದುಕಿಕೊಳ್ಳಲಿ ಪಾಪ ಎಂದು ಬಾಯಿಗೆ ಗುಟುಕು ನೀರು ಬಿಡುವ ಹಾಗೆ ಅನುದಾನಗಳನ್ನು ಕೊಡುತ್ತಿದ್ದೀರಿ. ಕೆಲವರು ಕರ್ನಾಟಕಕ್ಕೆ ಹೆದ್ದಾರಿಗಳಿಗೆ ಒಳ್ಳೆ ಅನುದಾನಗಳನ್ನು ಕೊಡುತ್ತಿದ್ದಾರೆ ಎಂದು ಹೇಳುತ್ತಾರೆ, ಆದರೆ ತಮಿಳುನಾಡು, ಕೇರಳ ಮುಂತಾದ ದಕ್ಷಿಣದ ರಾಜ್ಯಗಳಿಗೆ ನೀವು ಕೊಟ್ಟಿರುವ ಅನುದಾನದ ನಾಲ್ಕನೇ ಒಂದು ಭಾಗದಷ್ಟನ್ನೂ ನೀವು ಕರ್ನಾಟಕಕ್ಕೆ ಕೊಟ್ಟಿಲ್ಲ.

16. ತಾವು ಬೆಳೆದ ಬೆಳೆಯನ್ನು ಸೂಕ್ತ ಬೆಂಬಲ ಬೆಲೆ ಕೊಟ್ಟು ಕೊಂಡುಕೊಳ್ಳಿ ಎಂದು ರೈತರು ನಿರಂತರ ಧರಣಿ ನಡೆಸಿದರು. ಕಳೆದ 8 ವರ್ಷಗಳಲ್ಲಿ ರಾಗಿ, ಭತ್ತ, ತೊಗರಿ ಮುಂತಾದ ಉತ್ಪನ್ನಗಳನ್ನು ಖರೀದಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡಿದರೂ ನೀವು ಲೆಕ್ಕಿಸುತ್ತಿಲ್ಲ. ತಾವು ಪ್ರಜಾತಂತ್ರವುಳ್ಳ ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥ ಎಂಬುದನ್ನು ಮರೆತು ಪ್ರಜಾತಂತ್ರವನ್ನು ಗಾಳಿಗೆ ತೂರಿದಂತೆ ವರ್ತಿಸುತ್ತಿದ್ದೀರಿ. ಇದು ಸರಿಯೇ ಎಂದು ಯೋಚಿಸಿ.

17. ನೀಟ್ ವ್ಯವಸ್ಥೆ ಸರಿ ಇಲ್ಲ. ಅದನ್ನು ರದ್ದು ಮಾಡಿ ಎಂದು ಹಲವಾರು ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ನೀಟ್‌ನಿಂದ ಹೆಚ್ಚು  ಅನ್ಯಾಯವಾಗಿರುವುದು ಕರ್ನಾಟಕಕ್ಕೆ. ನಮ್ಮಲ್ಲಿ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಆದರೆ ನಿಮ್ಮ ನೀಟ್ ವ್ಯವಸ್ಥೆಯಿಂದ ನಮ್ಮ ಪ್ರತಿಭಾವಂತ ಮಕ್ಕಳಿಗೆ ಮೆಡಿಕಲ್ ಓದಲು ಆಗುತ್ತಿಲ್ಲ. ಹಾಗಾಗಿ ಮಕ್ಕಳು ಕಡಿಮೆ ದರದಲ್ಲಿ ಶಿಕ್ಷಣ ಸಿಗುವ ದೇಶಗಳಿಗೆ ಹೋಗುತ್ತಾರೆ. ಅದರಿಂದಾಗಿ ನವೀನ್ ಎಂಬ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಮರಣ ಹೊಂದಬೇಕಾಯಿತು. ನಿಮ್ಮ ನೀಟ್ ವ್ಯವಸ್ಥೆಯಿಂದ ನಮ್ಮ ಪ್ರತಿಭಾವಂತ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ದಿಕ್ಕೆಟ್ಟು ಹೋಗಿದ್ದಾರೆ.

18. ಕಳೆದ 3 ವರ್ಷಗಳಲ್ಲಿ ರಾಜ್ಯ ಭೀಕರ ಪ್ರವಾಹವನ್ನು ಕಂಡಿದೆ. 2019ರಲ್ಲಿ, 2020ರಲ್ಲಿ ಉತ್ತರ ಕರ್ನಾಟಕ ನೀರಿನಲ್ಲಿ ಮುಳುಗಿ ಹೋಗಿದ್ದರೂ ನೀವು ಒಮ್ಮೆಯೂ ರಾಜ್ಯದ ಕಡೆ ತಿರುಗಿ ನೋಡಿಲ್ಲ. ಪರಿಹಾರ ಕೇಳಿದರೆ ಬಿಡಿಗಾಸನ್ನು ಕೊಟ್ಟು ಕೈ ತೊಳೆದುಕೊಂಡಿದ್ದೀರಿ. 3 ವರ್ಷಗಳಲ್ಲಿ ಸುಮಾರು ರೂ. 2 ಲಕ್ಷ ಕೋಟಿಯಷ್ಟು ಮೌಲ್ಯದ ಬೆಳೆ, ಭೂಮಿ, ಮನೆ, ಸರಕಾರಿ ಆಸ್ತಿ ಪಾಸ್ತಿ, ಜನ, ಜಾನುವಾರುಗಳನ್ನು ರಾಜ್ಯ ಕಳೆದುಕೊಂಡಿದೆ. ಆದರೆ ನೀವು ಶೇ.2 ರಷ್ಟನ್ನೂ ಪರಿಹಾರವಾಗಿ ಕೊಟ್ಟಿಲ್ಲ. ನಿಮ್ಮ ದಬ್ಬಾಳಿಕೆಯಂತಹ ನಿರ್ಲಕ್ಷ್ಯದಿಂದ ರಾಜ್ಯ ಸರಕಾರದ ಮೇಲೆ ಹೊರೆ ಬೀಳುತ್ತಿದೆ. 

19. ಪ್ರಕೃತಿ ವಿಕೋಪ ನಿಧಿಯ ನಿಯಮಗಳನ್ನು 2015 ರಲ್ಲಿ ಪರಿಷ್ಕರಣೆ ಮಾಡಲಾಯಿತು. ಆನಂತರ ಒಂದೇ ಸಮನೆ ಬೆಲೆ ಏರಿಕೆಯಾಗುತ್ತಿದೆ, 7 ವರ್ಷಗಳಾದರೂ ಹಳೆಯ ಪರಿಹಾರಗಳನ್ನೇ ನೀಡಲಾಗುತ್ತದೆ. 

20. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕ. ನದಿ ಜೋಡಣೆ ಮಾಡಿದರೆ ರಾಜ್ಯಕ್ಕೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು. ಆದರೆ ಆಂಧ್ರ, ತಮಿಳುನಾಡಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ.

21. ರಾಜ್ಯದಲ್ಲಿ  ಮನೆ ಇಲ್ಲದವರಿಗೆ ಮನೆ ನೀಡಿಲ್ಲ. ಗ್ರಾಮೀಣ ಸಡಕ್ ಯೋಜನೆಯಲ್ಲಿ ರಸ್ತೆಗಳಿಗೆ ಅನುದಾನ ನೀಡುತ್ತಿಲ್ಲ, ರೈಲ್ವೆ ಯೋಜನೆಗಳಿಗೆ ಅನುದಾನವಿಲ್ಲ. ಎಲ್ಲವೂ ಕುಂಟುತ್ತಾ ಸಾಗುತ್ತಿವೆ. ಬೆಂಗಳೂರಿಗೆ ನೀಡುತ್ತೇವೆಂದು ಹೇಳಿದ್ದ ಸಬ್ ಅರ್ಬನ್ ರೈಲು ಇನ್ನೂ ಕಾಗದದ ಮೇಲೆ ಉಳಿದಿದೆ. ಜಿಎಸ್‌ಟಿ ಪರಿಹಾರದ ಬಾಕಿ ಬಿಡುಗಡೆಯಾಗಿಲ್ಲ. ಎಂಎಸ್‌ಪಿಯಲ್ಲಿ ಖರೀದಿ ಮಾಡಿದ ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ನೀವು ಮತ್ತು ನಿಮ್ಮ ಪಕ್ಷವು ಕರ್ನಾಟಕ ರಾಜ್ಯಕ್ಕೆ ಮಾಡಿರುವ ಅನ್ಯಾಯಗಳಿಗೆ, ದ್ರೋಹಗಳಿಗೆ ಲೆಕ್ಕವಿಲ್ಲ. ರಾಜ್ಯದ ಮನಸ್ಸಿನ ಮೇಲೆ ಆಗಿರುವ ಗಾಯದ ಕಲೆಗಳನ್ನು ಅಳಿಸಲು ಸಾಧ್ಯವಿಲ್ಲ.

22. ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿರುವ ಕೃಷಿ ಕಾನೂನುಗಳು, ಸಹಕಾರ ಸಂಬಂಧಿತ ಕಾನೂನುಗಳನ್ನು ಸರ್ವಾಧಿಕಾರಿ ಧೋರಣೆಯಿಂದ ತಿದ್ದುಪಡಿ ಮಾಡಿ ನಮ್ಮ ಅಧಿಕಾರ ವ್ಯಾಪ್ತಿಯನ್ನು ಆಕ್ರಮಿಸಿಕೊಂಡಿರಿ.

23. ಮೋದಿಯವರು ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದು ಚುನಾವಣಾ ಭಾಷಣದಲ್ಲಿ ಹೇಳಿದ್ದರು, ಆದರೆ ಮೈಸೂರಿನ ಅಭಿವೃದ್ಧಿಗೆ ಏನನ್ನೂ ಮಾಡಿಲ್ಲ.

24. ಮೋದಿಯವರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಅನ್ನು ಉದ್ಘಾಟಿಸಿದ್ದಾರೆ. ಈ ಸಂಸ್ಥೆಯನ್ನು ಪ್ರಾರಂಭಿಸಿದ್ದು ನಮ್ಮ ಸರಕಾರ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜನ್ಮ ಜಯಂತಿಯ ಅಂಗವಾಗಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದೆವು. ಇಲ್ಲಿಂದ ಈಗಾಗಲೇ ಎರಡು ಬ್ಯಾಚ್‌ಗಳು ತಮ್ಮ ಶಿಕ್ಷಣ ಮುಗಿಸಿ ಹೊರಬಂದಿದ್ದಾರೆ. ಈ ಸಂಸ್ಥೆ ಹಿಂದೆಯೇ ಉದ್ಘಾಟನೆಯಾಗಿದೆ.

25. ಬಿಜೆಪಿಯವರು ಮೈಸೂರು-ಬೆಂಗಳೂರು ಹೆದ್ದಾರಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಯೋಜನೆಯನ್ನು ಅನುಮೋದಿಸಿದ್ದು ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರ. ಆಸ್ಕರ್ ಫೆರ್ನಾಂಡಿಸ್ ಅವರು ಸಚಿವರಾಗಿದ್ದಾಗ ಕೊಟ್ಟ ಕೊಡುಗೆ ಇದು. ಆದರೂ ಬಿಜೆಪಿಯವರು ಇದರ ಕ್ರೆಡಿಟ್ಟನ್ನು ತೆಗೆದುಕೊಳ್ಳಲು ಹೊರಟಿದ್ದಾರೆ.

26. ರಾಜ್ಯ ಆರ್ಥಿಕವಾಗಿ ಆಡಳಿತಾತ್ಮಕವಾಗಿ ದಿವಾಳಿಯಾಗಿ ಹೋಗಿದೆ. ಇದನ್ನು ಮುಚ್ಚಿಕೊಳ್ಳಲು ಸಾಮಾಜಿಕ ಕ್ಷೋಭೆಯನ್ನು ಹುಟ್ಟು ಹಾಕಿ ಬಿಸಿ ಕಾಯಿಸಿಕೊಂಡು ಬಿಜೆಪಿ ಸರಕಾರ ಕೂತಿದೆ.

27. ಈ ಹಿನ್ನೆಲೆಯಲ್ಲಿ ಮೋದಿಯವರ ಮೈಸೂರು ಭೇಟಿ ಅರ್ಥಹೀನವಾದದ್ದು. ಕರ್ನಾಟಕವನ್ನು ದಿವಾಳಿ ಮಾಡಿ  ರಾಜ್ಯವನ್ನು ಅವಮಾನ ಮಾಡುವುದಕ್ಕಾಗಿಯೇ ಮೈಸೂರಿಗೆ ಬರುತ್ತಿದ್ದಾರೆ ಎಂಬ ಭಾವನೆ ಜನರಲ್ಲಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top