--

ಬ್ರಾಹ್ಮಣಶಾಹಿ ಸಂಚುಗಳೂ.. ಹಳಿ ತಪ್ಪಿದ ಹೋರಾಟಗಳೂ...

ಪಠ್ಯ ಪರಿಷ್ಕರಣೆಯ ನೆಪದಲ್ಲಿ ಬಸವಣ್ಣ, ನಾರಾಯಣ ಗುರು, ಪೆರಿಯಾರ್, ಅಂಬೇಡ್ಕರ್ ಮೊದಲಾದ ಜನಚಳವಳಿಯ ನೇತಾರರನ್ನು ಹಾಗೂ ಇಸ್ಲಾಮ್, ಕ್ರೈಸ್ತ, ಬೌದ್ಧ ಮೊದಲಾದ ಧರ್ಮಗಳನ್ನು ಅವಗಣಿಸುವ, ತಪ್ಪಾಗಿ ಬಿಂಬಿಸುವ ಕಾರ್ಯಗಳನ್ನು ಎಗ್ಗಿಲ್ಲದೇ ನಡೆಸಿದಾಗ ಜನಸಮೂಹಗಳು ಬೀದಿಗಿಳಿದವು. ಈ ಹೋರಾಟ ಈಗಲೂ ಮುಂದುವರಿದಿದ್ದರೂ ಬಹಳ ಸಂಕುಚಿತವಾಗಿ ತಮ್ಮ ಜಾತಿ ಸಮೂಹಗಳಿಗೆ ಸೀಮಿತವಾಗಿ ನಡೆಯಲಾರಂಭಿಸಿವೆ. ಎಲ್ಲರೂ ಒಗ್ಗೂಡಿ ಬ್ರಾಹ್ಮಣಶಾಹಿ ಸಂಚುಗಳನ್ನು ಬಯಲಿಗೆಳೆದು ಹಿಮ್ಮೆಟ್ಟಿಸಿ ನಿಲ್ಲಬೇಕೆಂಬ ಗ್ರಹಿಕೆಯಿಂದ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಅಂತಹ ಪ್ರಯತ್ನ ನಡೆಯಿತು. ಆದರೆ ಕೆಲವು ಪ್ರಗತಿಪರ ವಲಯ ಬಿಟ್ಟರೆ ಉಳಿದಂತೆ ಎಲ್ಲವೂ ಈ ಗಂಭೀರ ಸಂಕುಚಿತತೆಯ ಕಾಯಿಲೆಯಿಂದ ಬಳಲುತ್ತಿವೆ. ಇದಕ್ಕೆ ಆಯಾ ಸಮುದಾಯಗಳ ಮಠಪೀಠಗಳು ಮತ್ತು ಕೆಲವು ಸಮುದಾಯ ನಾಯಕರುಗಳು ಪ್ರಧಾನ ಕಾರಣರಾಗಿದ್ದಾರೆ.


ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಆಟದ ಮೈದಾನವನ್ನಾಗಿ ಸಂಘ ಪರಿವಾರ ಮಾರ್ಪಡಿಸುತ್ತಿದೆ. ಉತ್ತರ ಇಂಡಿಯಾದಲ್ಲಿ ಉತ್ತರ ಪ್ರದೇಶವನ್ನು ಬಹುತೇಕವಾಗಿ ಸಂಘಪರಿವಾರ ತನ್ನ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ನಡೆಗಳ ಮೈದಾನವನ್ನಾಗಿಸಿಕೊಂಡಿದೆ. ಯೋಗಿ ಎಂದು ಹೇಳಿಕೊಳ್ಳುವ ಆದಿತ್ಯನಾಥ ಸರಕಾರವನ್ನು ಅದಕ್ಕಾಗಿ ನೇಮಿಸಿಕೊಳ್ಳಲಾಗಿದೆ. ಚುನಾವಣೆಯ ಮೂಲಕವೇ ಆ ಸರಕಾರ ಆರಿಸಿ ಬಂದಿದೆ ಎಂದುಕೊಂಡರೂ ನಮ್ಮ ದೇಶದ ಚುನಾವಣೆಗಳು ನಡೆಯುವ ರೀತಿ ಅದರಿಂದ ಹೊರಬರುವ ಫಲಿತಾಂಶಗಳನ್ನು ಸರಿಯಾಗಿ ಅವಲೋಕಿಸಿದರೆ ಅದರಲ್ಲಿ ಬಹುಸಂಖ್ಯಾತ ಜನಸಾಮಾನ್ಯರ ಪಾತ್ರ ಲೆಕ್ಕಕ್ಕೆ ಇಲ್ಲವೆಂಬುದು ಗ್ರಹಿಕೆಗೆ ಬರುತ್ತದೆ. ನಮ್ಮ ದೇಶದ ಚುನಾವಣೆಗಳನ್ನು ಭಾರೀ ಕಾರ್ಪೊರೇಟ್ ಹಣ ಹಾಗೂ ಬಲಾಢ್ಯ ಜಾತಿ ಗುಂಪುಗಾರಿಕೆ ಇನ್ನಿತರ ವಶೀಲಿಬಾಜಿಯ ಕುತಂತ್ರಗಳ ಮೂಲಕ ನಿರ್ವಹಿಸಿ, ಯಾರು ಬೇಕಾದರೂ ಅಧಿಕಾರದ ಸ್ಥಾನಗಳಲ್ಲಿ ಕೂರಬಹುದು ಎನ್ನುವುದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ ತಾನೇ.

ಆರಂಭದಲ್ಲಿ ಜೆಡಿಎಸ್‌ನ ಎಚ್.ಡಿ. ಕುಮಾರ ಸ್ವಾಮಿ ಸಹಕಾರದಿಂದ ಅಧಿಕಾರಕ್ಕೇರಿದ ಸಂಘ ಪರಿವಾರದ ಬಿಜೆಪಿ ಹತ್ತು ಹಲವು ತಂತ್ರಗಳ ಮೂಲಕ ಶಾಸಕರ ಬಲ ಜೋಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಸರಕಾರ ರಚಿಸಿತು. ಆ ಮೂಲಕ ಪ್ರಜಾತಾಂತ್ರಿಕವಾಗಿರಬೇಕಿದ್ದ ಅಧಿಕಾರವನ್ನು ಹಣದ ಮೂಲಕ, ಆಮಿಷಗಳ ಮೂಲಕ, ಬೆದರಿಕೆಗಳ ಮೂಲಕ ಕೊಂಡುಕೊಳ್ಳಲಾಯಿತು. ಆನಂತರ ಆಕ್ರಮಣಕಾರಿಯಾಗಿ ತನ್ನ ನಡೆಗಳನ್ನು ನಡೆಸುತ್ತಾ ಗೋವು, ಲವ್ ಜಿಹಾದ್, ಮುಸ್ಲಿಮ್ ದ್ವೇಷ ಹರಡುವಿಕೆಗಳ ಮೂಲಕ ಅಧಿಕಾರ ರಾಜಕಾರಣದಲ್ಲಿ ತನ್ನ ಹಿಡಿತ ಬಿಗಿಗೊಳಿಸತೊಡಗಿತು. ಅದಕ್ಕಾಗಿ ಮನುಷ್ಯ ವಿರೋಧಿ ಹಾಗೂ ನಾಡ ವಿರೋಧಿ ತಂತ್ರಗಳನ್ನು ಮಾಡಿ ಎಲ್ಲಾ ಮಟ್ಟದಲ್ಲಿಯೂ ಜಾರಿಗೊಳಿಸುತ್ತಾ ಬಂದಿತು. ಚುನಾವಣೆಯಲ್ಲಿ ಲಿಂಗಾಯತ ಹಿನ್ನೆಲೆಯ ಯಡಿಯೂರಪ್ಪರನ್ನು ಸಂಪೂರ್ಣವಾಗಿ ಬಳಸಿಕೊಂಡು ಬಹುಮತ ಪಡೆದು ನಂತರ ಪೂರ್ಣಾವಧಿಯನ್ನು ಪೂರೈಸಲು ಬಿಡದೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ತಮ್ಮ ಕೈಗೊಂಬೆಯಾದ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಕುಳ್ಳಿರಿಸಿಕೊಂಡಿತು. ಅವರನ್ನು ಮುಖ್ಯಮಂತ್ರಿಯಾಗಿಸಿದ್ದಕ್ಕೆ ಒಳ್ಳೆಯ ಹಿನ್ನೆಲೆಯವರು, ಯೋಗ್ಯ ಆಯ್ಕೆ, ಇರುವುದರಲ್ಲಿ ಸೂಕ್ತ ವ್ಯಕ್ತಿ ಎಂದೆಲ್ಲಾ ಪ್ರಗತಿಪರ ವಲಯದಲ್ಲಿ ಗುರುತಿಸಿಕೊಂಡಿರುವ ಹಲವರು ಮುಕ್ತವಾಗಿ ಸ್ವಾಗತಿಸಿದ್ದೂ ನಡೆಯಿತು.

ಬಸವರಾಜ ಬೊಮ್ಮಾಯಿ ಮುಖ್ಯ ಮಂತ್ರಿಯಾದ ಮೇಲೆ ಸಂಘಪರಿವಾರ ಏಕಪಕ್ಷೀಯವಾಗಿ ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಬಹಿರಂಗವಾಗಿಯೇ ಯಾವುದೇ ತಡೆಯಿಲ್ಲದೆ ಜಾರಿಗೊಳಿಸತೊಡಗಿದೆ. ಸುಗ್ರೀವಾಜ್ಞೆಯ ಮೂಲಕ ಕಾನೂನುಗಳ ಜಾರಿಮಾಡುವಿಕೆಗಳು ಅಧಿಕವಾದವು. ಅದರಲ್ಲಿ ಮೋದಿ ಸರಕಾರ ಜಾರಿಮಾಡಲು ಸೂಚಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿದರು. ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕ ಸರಕಾರ ಸಂಘಪರಿವಾರದ ಕಾರ್ಯಸೂಚಿಯಾದ ರಾಷ್ಟ್ರೀಯ ಶಿಕ್ಷಣನೀತಿಯನ್ನು ಮೊತ್ತ ಮೊದಲಿಗೆ ಯಾವುದೇ ಹಿಂಜರಿಕೆಯಿಲ್ಲದೆ ಜಾರಿಗೊಳಿಸಿದ ರಾಜ್ಯವಾಯಿತು. ಅದರ ಅನುಷ್ಠಾನದ ಭಾಗವಾಗಿ ಯಾವುದೇ ನಿಯಮಾವಳಿಗಳನ್ನು ಪಾಲಿಸದೇ ಮೌಖಿಕ ಆದೇಶದ ಮೇಲೆ ಪಠ್ಯ ಪುಸ್ತಕ ಪರಿಷ್ಕರಣೆಯಂತಹ ಕಾರ್ಯಗಳಿಗೆ ಕೈ ಹಾಕಿದರು. ಇಂತಹ ಜವಾಬ್ದಾರಿಯುತ ವಿಚಾರಗಳಲ್ಲಿ ತೊಡಗುವ ಯಾವುದೇ ಅರ್ಹತೆ ಇರದ, ಸಾಮಾಜಿಕ ಕಾಳಜಿ ಕೂಡ ಇಲ್ಲದ ಬ್ರಾಹ್ಮಣಶಾಹಿ ಮೌಲ್ಯಗಳ ಕುರುಡು ಪ್ರತಿಪಾದಕ, ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತವಾಗಿ ಅಸಭ್ಯವಾಗಿ ಬರೆದುಕೊಳ್ಳುವ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದರು. ಇಡೀ ಸಮಿತಿಯೇ ಬ್ರಾಹ್ಮಣಮಯವಾಗಿತ್ತು.
 
ಕುವೆಂಪು ವಿಶ್ವ ವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ರಾಜಾರಾಮ ಹೆಗಡೆ ‘‘ಇಂಡಿಯಾದಲ್ಲಿ ಜಾತಿಗಳೇ ಇಲ್ಲ ಅವೆಲ್ಲ ಪಾಶ್ಚಾತ್ಯ ಚಿಂತನೆಗಳ ಹೇರಿಕೆಗಳು.. ಹಾಗಿದ್ದ ಮೇಲೆ ಜಾತಿ ಶೋಷಣೆಯ ಮಾತೆಲ್ಲಿದೆ’’ ಎಂದು ಪ್ರತಿಪಾದಿಸುವವರು. ಅವರು ಕೂಡ ಈ ಸಮಿತಿಯ ಭಾಗವಾದರು. ಈ ಸಮಿತಿಗೆ ಯಾವುದೇ ಶಾಸನಬದ್ಧತೆ ಇಲ್ಲದಿದ್ದರೂ ಏಕಪಕ್ಷೀಯವಾಗಿ ಎಲ್ಲಾ ಶಾಲಾ ಪಠ್ಯಗಳನ್ನು ಬದಲಾಯಿಸಿ ಹಲವಾರು ಚಾರಿತ್ರಿಕ ವಾಸ್ತವ ಸಂಗತಿಗಳನ್ನು ತಿರುಚಿ ಮತ್ತಷ್ಟು ಬ್ರಾಹ್ಮಣಶಾಹಿ ಪರವಾಗಿರುವಂತೆ ಬದಲಾಯಿಸಿತು. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಾಮಾಜಿಕವಾಗಿ ಬಹಳ ಅಪಾಯಕಾರಿಯಾದ ಮಟ್ಟದಲ್ಲಿ ಶಾಸನಬದ್ಧ ಅಧಿಕಾರ ಇಲ್ಲವೇ ಮಾನ್ಯತೆ ಇಲ್ಲದಿದ್ದರೂ ಏಕಪಕ್ಷೀಯವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಪಠ್ಯಗಳನ್ನು ಬದಲಿಸಿತು. ಅದನ್ನು ಬಿ.ಸಿ. ನಾಗೇಶ್ ಎಂಬ ಶಿಕ್ಷಣ ಮಂತ್ರಿ ಅನುಮೋದಿಸಿ ಜಾರಿಗೊಳಿಸಿದರು. ಪಾಠಪುಸ್ತಕಗಳ ಮುದ್ರಣ ಕಾರ್ಯವನ್ನೂ ಮಾಡಿದರು. ಅದರಲ್ಲಿ ಕೋಟ್ಯಂತರ ರೂಪಾಯಿಗಳ ಹಗರಣದ ಬಗ್ಗೆಯೂ ಸುದ್ದಿಯಾಗಿವೆ. ಆನಂತರ ರೋಹಿತ್ ಚಕ್ರತೀರ್ಥ ಸಮಿತಿಗೆ ಪಿಯು ಪಠ್ಯ ಪರಿಷ್ಕರಣೆಯ ಜವಾಬ್ದಾರಿಯನ್ನು ಕೂಡ ವಹಿಸಿತು. ನಂತರ ಜನರ ವಿರೋಧವನ್ನು ಶಮನಗೊಳಿಸಲು ಪಿಯು ಪಠ್ಯ ಪರಿಷ್ಕರಣೆ ಜವಾಬ್ದಾರಿ ಆ ಸಮಿತಿಗೆ ವಹಿಸಿಲ್ಲವೆಂದು ಹೇಳಲಾಯಿತು. ಮುಖ್ಯಮಂತ್ರಿ ಬೊಮ್ಮಾಯಿ ಸಮ್ಮತದೊಂದಿಗೆ ಇವೆಲ್ಲಾ ನಡೆದಿವೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಇಲ್ಲವೆಂದರೆ ಬೊಮ್ಮಾಯಿಗೆ ಯಾವುದೇ ನಿರ್ಣಯಾತ್ಮಕ ಅಧಿಕಾರವಿಲ್ಲ ಎಂದು ಕೂಡ ತಿಳಿಯಬಹುದು. ಈ ವಿಚಾರವನ್ನು ಅವರ ಪಕ್ಷದವರೇ ಈಗ ಬಹಿರಂಗವಾಗಿಯೇ ಹೇಳುತ್ತಿದ್ದಾರೆ ಕೂಡ. ಕರ್ನಾಟಕದ ಒಂದು ಬಲಾಢ್ಯ ಸಮುದಾಯವನ್ನು ತಮ್ಮ ಹಿಡಿತದೊಳಗೆ ಇಟ್ಟುಕೊಳ್ಳುವ ಉದ್ದೇಶದಿಂದ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಸಂಘ ಪರಿವಾರ ತನಗೆ ಆಡಳಿತಾತ್ಮಕವಾಗಿ ಏನೆಲ್ಲಾ ಬೇಕೋ ಅವನ್ನೆಲ್ಲಾ ಸಾಧಿಸಲು ಹೊರಟಿದೆ ಎನ್ನುವುದಕ್ಕೆ ಹೆಚ್ಚಿನ ಒಳನೋಟವೇನೂ ಬೇಕಿಲ್ಲ ಬಿಡಿ. ಒಕ್ಕಲಿಗ ಸಮುದಾಯವನ್ನು ತಮ್ಮ ಹಿಡಿತದಡಿ ಇಟ್ಟುಕೊಳ್ಳಲು ಸಾಕಷ್ಟು ಮಂತ್ರಿ ಸ್ಥಾನಗಳನ್ನು ಆ ಸಮುದಾಯದ ವ್ಯಕ್ತಿಗಳಿಗೆ ನೀಡಲಾಗಿದೆ. ದಲಿತ ಸಮುದಾಯವನ್ನು ಯಾಮಾರಿಸಲು ದಲಿತ ಹಿನ್ನೆಲೆಯ ವ್ಯಕ್ತಿಗಳನ್ನು ಮಂತ್ರಿ ಶಾಸಕರುಗಳನ್ನಾಗಿಸಿದ್ದಾರೆ. ಇತರ ಪಕ್ಷಗಳಿಂದಲೂ ಸಮಾಜದ ಹಲವಾರು ಜಾತಿಸಮೂಹಗಳ ಶಾಸಕರನ್ನು ಕೊಂಡುಕೊಂಡು ತಮ್ಮ ಪರ ಕೆಲಸ ಮಾಡಲು ಹಚ್ಚಿರುವುದನ್ನೂ ನಾವು ಗಮನಿಸಬಹುದು. ಒಕ್ಕೂಟ ಸರಕಾರ ಬಹುಸಂಖ್ಯಾತ ಜನಸಮೂಹಕ್ಕೆ ಮಾರಕವಾಗಿ ಜಾರಿಗೊಳಿಸಿದ ಕೋವಿಡ್-19 ಹೆಸರಿನ ದೇಶಾದ್ಯಂತದ ಅವೈಜ್ಞಾನಿಕ ಲಾಕ್‌ಡೌನ್ ಆಗಲೀ, ಬ್ರಾಹ್ಮಣಶಾಹಿ ರಾಷ್ಟ್ರೀಯ ಶಿಕ್ಷಣ ನೀತಿಯಾಗಲೀ, ರೈತ ಹಾಗೂ ನಾಡವಿರೋಧಿ ರೈತ ಮಸೂದೆಗಳಾಗಲೀ, ಕಾರ್ಮಿಕರು ಹಾಗೂ ನೌಕರರು ಮತ್ತು ರಾಷ್ಟ್ರಕ್ಕೆ ಮಾರಕವಾಗುವ ಸಾರ್ವಜನಿಕ ವಲಯದ ಉದ್ದಿಮೆ ಸಂಸ್ಥೆಗಳ ಸಂಪೂರ್ಣ ಕಾರ್ಪೊರೇಟೀಕರಣವಾಗಲೀ, ಇತ್ತೀಚಿನ ಸೇನೆಯನ್ನು ಗುತ್ತಿಗೆಯಾಧಾರವಾಗಿಸುವ ಅಗ್ನಿಪಥ್ ಯೋಜನೆಯಾಗಲೀ. ಇವೆಲ್ಲ ತಮ್ಮ ಸಮೂಹದ ಬಹುಸಂಖ್ಯಾತರಿಗೆ ಮಾರಣಾಂತಿಕವಾಗಿದ್ದರೂ ಇವರು ಅವುಗಳನ್ನು ಯಾವುದೇ ಅಳುಕೂ ಇಲ್ಲದೆ ಸಮರ್ಥಿಸುತ್ತಾ ಬರುತ್ತಿರುವುದನ್ನು ನಾವು ನೋಡಬಹುದು. ಇವರು ಮೂಲ ಸಂಘಪರಿವಾರಕ್ಕಿಂತ ಆಕ್ರಮಣಕಾರಿ ಹಾಗೂ ಸಮರ್ಥವಾಗಿ ಸಮಾಜಕ್ಕೆ ಅಪಾಯಕಾರಿಯಾದ ಬ್ರಾಹ್ಮಣಶಾಹಿ ವಿಷವಿಚಾರಗಳನ್ನು ಯಾವುದೇ ಎಗ್ಗಿಲ್ಲದೆ ತಮ್ಮ ಸಮುದಾಯಗಳೊಳಗೆ ಪರಿಣಾಮಕಾರಿಯಾಗಿ ಹಬ್ಬುತ್ತಿರುವುದನ್ನು ನಾವು ಗಮನಿಸಬಹುದು. ಅದಕ್ಕಾಗಿ ಹಲವಾರು ಆಮಿಷಗಳನ್ನು ಒಡ್ಡುತ್ತಾ, ಕೆಲವರಿಗೆ ಲಾಭಗಳನ್ನು ನೀಡುತ್ತಾ, ಕುತಂತ್ರಗಳನ್ನು ಮಾಡುತ್ತಾ, ಹಸಿಹಸಿ ಸುಳ್ಳುಗಳನ್ನು ಹರಡುತ್ತಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅದರಲ್ಲೂ ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಂಘಪರಿವಾರವು ಜನಸಮೂಹಗಳನ್ನು ಬ್ರಾಹ್ಮಣಶಾಹಿ ವಿಷದಡಿ ಮುಳುಗಿಸಿ ನಾಶಮಾಡುವ ಪ್ರಯೋಗಗಳ ಭೀಕರ ಪರಿಣಾಮಗಳನ್ನು ನಾವಿಂದು ಗ್ರಹಿಸಬಹುದು. ಅಲ್ಲಿನ ಬಿಲ್ಲವ, ಬಂಟ, ಮೊಗವೀರ ಮೊದಲಾದ ಜನಸಮೂಹಗಳ ಯುವಕ ಯುವತಿಯರನ್ನು ತಮ್ಮ ಕಾರ್ಯ ಸೂಚಿಗಳ ಜಾರಿಗಾಗಿ ಹಲವಾರು ರೀತಿಯಲ್ಲಿ ಬಳಸಿಕೊಂಡರು. ನಂತರ ಅದರ ಪರಿಣಾಮವಾಗಿ ಹಲವರು ಕೊಲೆಗಳಿಗೀಡಾಗಿರುವುದು ಹಾಗೂ ಸಾವಿರಾರು ಜನರು ಕೇಸುಗಳನ್ನು ಎದುರಿಸಬೇಕಾಗಿ ಬಂದಿದ್ದು, ನೂರಾರು ಜನರು ಜೈಲು ಪಾಲಾಗುವಂತಾಗಿರುವುದನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕಿದೆ. ಅವರ ಕುಟುಂಬಗಳು ಈ ಸ್ವಾರ್ಥ ಹಿತಾಸಕ್ತಿಗಳು ತಂದೊಡ್ಡಿರುವ ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದಾರೆ. ಈಗ ಈ ಬ್ರಾಹ್ಮಣಶಾಹಿ ನಾಯಕರು ಯಾರೂ ಅವರನ್ನು ಗಮನಿಸುತ್ತಲೂ ಇಲ್ಲ. ಈ ಬ್ರಾಹ್ಮಣ ಮೂಲದ ನಾಯಕರುಗಳ ಮೇಲೆ ಯಾವ ಪ್ರಕರಣಗಳೂ ದಾಖಲಾಗುತ್ತಿಲ್ಲ. ಅವರು ಜೈಲಿಗೂ ಹೋಗುತ್ತಿಲ್ಲ. ಇವರ ಮಕ್ಕಳು, ಬಂಧುಗಳು ಕೂಡ ಇವರು ಪ್ರತಿಪಾದಿಸುವ ‘ಧರ್ಮರಕ್ಷಣೆ’!?ಯ ಕಾರ್ಯದಲ್ಲಿ ಇಲ್ಲವೇ ಇಲ್ಲ.

ಇದಿಷ್ಟೇ ಅಲ್ಲದೆ ಪ್ರಧಾನವಾಗಿ ಕರಾವಳಿಯ ಈ ಜಿಲ್ಲೆಗಳಲ್ಲಿ ಅದಾನಿಯ ನಾಗಾರ್ಜುನ ಉಷ್ಣವಿದ್ಯುತ್ ಸ್ಥಾವರ, ಜಯಪ್ರಕಾಶ್ ಅಸೋಸಿಯೇಟ್ಸ್ ನ ಗುಂಡ್ಯದ ಜಲವಿದ್ಯುತ್ ಸ್ಥಾವರ, ಎಂಆರ್‌ಪಿಎಲ್‌ನಂತಹ ಭಾರೀ ತೈಲೋದ್ಯಮ, ಇನ್ನಿತರ ಭಾರೀ ಕಾರ್ಪೊರೇಟ್ ವ್ಯವಹಾರಗಳು ತಲೆಯೆತ್ತಲು ಈ ಬ್ರಾಹ್ಮಣಶಾಹಿ ಶಕ್ತಿಗಳು ಬೆಂಬಲಕ್ಕೆ ನಿಂತು ಕುತಂತ್ರ ಮಾಡಿ ಅಲ್ಲಿನ ಜನಸಾಮಾನ್ಯರನ್ನು ಒಕ್ಕಲೆಬ್ಬಿಸಿ ಬಿಸಾಕಿದರು. ಅದರ ಪರಿಣಾಮವಾಗಿ ಕೋಮು, ಜಾತಿವಾರು ಊರುಗಳು ಬೆಳೆದವು. ಪಾರಿಸಾರಿಕವಾಗಿ ಭಾರೀ ಹಾನಿಗೆ ಬೆಂಬಲವಾಗಿ ನಿಂತರು. ಇವರ ಹಲವು ಮಠಪೀಠಗಳು ಇದರಲ್ಲಿ ಶಾಮೀಲಾದವು. ಇದರಿಂದಾಗಿ ಕರಾವಳಿಯ ಜನರು ಹಾಗೂ ಮೀನುಗಾರರ ಬದುಕುಗಳು ಸಾಕಷ್ಟು ಹಾನಿಗೆ ಒಳಗಾಗಿವೆ. ಹಾರುಬೂದಿ ಸಮಸ್ಯೆಯಿಂದಾಗಿ ಕೃಷಿ ಕೈಗೆ ಸಿಗುತ್ತಿಲ್ಲ. ವಾತಾವರಣದ ಬಿಸಿಯೇರುವಿಕೆ ತೀವ್ರಗತಿಯಲ್ಲಿ ಸಾಗತೊಡಗಿದೆ. ಜನರ ಆರೋಗ್ಯಗಳ ಮೇಲೆ ಗಂಭೀರ ಪರಿಣಾಮಗಳು ಆಗತೊಡಗಿವೆ. ಜಾಗತೀಕರಣ ಪ್ರಕ್ರಿಯೆಗಳು ಬಿರುಸುಗೊಳ್ಳುವುದಕ್ಕೂ ಭಾರತದಲ್ಲಿ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಕೋಮುವಾದ ತನ್ನ ಆಕ್ರಮಣಗಳನ್ನು ಹೆಚ್ಚಿಸುತ್ತಾ ಹೋಗುತ್ತಿರುವುದಕ್ಕೂ ಇರುವ ನೇರ ಸಂಬಂಧವನ್ನು ಈ ಉದಾಹರಣೆಯಿಂದಲೂ ನಾವು ಗ್ರಹಿಸಬಹುದು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸಂಘಪರಿವಾರದ ಬ್ರಾಹ್ಮಣಶಾಹಿ ವಿಷಪ್ರಯೋಗದಿಂದ ಚೇತರಿಸಿಕೊಳ್ಳಲು ಒದ್ದಾಡತೊಡಗಿವೆ. ಈ ಭಾಗದಲ್ಲಿ ಜನಹೋರಾಟಗಳು ಆ ಮಟ್ಟಕ್ಕೆ ಮೂಡಿ ಬರದೇ ಇರುವುದು ಇದಕ್ಕೆ ಪ್ರಧಾನ ಕಾರಣವಾಗಿದೆ. ಜನಹೋರಾಟಗಳು ಸಿಡಿದಾಗಲೆಲ್ಲಾ ಬ್ರಾಹ್ಮಣಶಾಹಿ ಶಕ್ತಿಗಳೇ ಅದರ ಮುಂಚೂಣಿಯಲ್ಲಿ ಇರುವಂತೆ ನಾಟಕವಾಡಿ ನಂತರ ಅದರ ದಿಕ್ಕು ತಪ್ಪಿಸಿ ಹೋರಾಟ ಮುಂದುವರಿಯದಂತೆ ಮಾಡಿ ತಮ್ಮ ತಿಜೋರಿ ತುಂಬಿಸಿಕೊಳ್ಳುತ್ತಾರೆ. ಇದು ಅಲ್ಲಿನ ಎಂಆರ್‌ಪಿಎಲ್, ಗುಂಡ್ಯ ಇತ್ಯಾದಿ ಬಹುತೇಕ ಪ್ರಮುಖ ಹೋರಾಟಗಳ ಕತೆಯಾಗಿದೆ.

ಆದರೆ ‘ಚಲೋ ಉಡುಪಿ’ಯಂತಹ ದಲಿತ ದಮನಿತರು ಪ್ರಧಾನವಾಗಿ ಒಗ್ಗೂಡಿ ನಡೆಸಿದ ಹೋರಾಟ ಉಡುಪಿಯಲ್ಲಿ ಸಾಕಷ್ಟು ಸಂಚಲನವನ್ನು ಉಂಟುಮಾಡಿತ್ತು. ನಂತರ ‘ಗುಡಿಬಂಡೆ ಚಲೋ’, ದಾನಮ್ಮ ಅತ್ಯಾಚಾರ ಕೊಲೆ ಪ್ರಕರಣವನ್ನು ವಿರೋಧಿಸಿ ರಾಜ್ಯಾದ್ಯಂತ ನಡೆದ ಹೋರಾಟಗಳು ನಡೆಯಿತು. ಹಲವಾರು ಜಿಲ್ಲೆಗಳು ಬಂದ್ ಆಚರಿಸಿದವು. ಅದಾಗಿ ನಂತರ ದೊಡ್ಡ ಮಟ್ಟದಲ್ಲಿ ಜನರು ಸಮಾವೇಶಗೊಂಡಿದ್ದ ಮುಖ್ಯ ಹೋರಾಟವೆಂದರೆ ಅದು ದಿಲ್ಲಿಯ ರೈತ ಹೋರಾಟಕ್ಕೆ ಬೆಂಬಲವಾಗಿ ಶಿವಮೊಗ್ಗ, ಬೆಂಗಳೂರು, ಹಾವೇರಿ, ಬೆಳಗಾವಿಗಳಲ್ಲಿ ನಡೆದ ಹೋರಾಟಗಳು. ಇವುಗಳಲ್ಲೆಲ್ಲಾ ಜನರು ಸ್ವಯಂಪ್ರೇರಿತರಾಗಿಯೇ ಹೆಚ್ಚಾಗಿ ಜೊತೆಗೂಡಿದ್ದನ್ನು ನಾವು ಕಾಣಬಹುದು. ಅದಾದ ನಂತರ ರಾಯಚೂರಿನ ನ್ಯಾಯಾಧೀಶರು ಅಂಬೇಡ್ಕರ್‌ರಿಗೆ ಮಾಡಿದ ಅವಮಾನದ ನೆಪದಲ್ಲಿ ದಲಿತದಮನಿತರ ಆಕ್ರೋಶ ರಾಜ್ಯಾದ್ಯಂತ ಹೊರಬಿದ್ದು ಅದು ಭಾರೀ ಪ್ರತಿಭಟನೆಯಾಗಿ ಬೆಂಗಳೂರಿನಲ್ಲಿ ಪ್ರತಿಧ್ವನಿಸಿತು.

ಈ ಎಲ್ಲಾ ಹೋರಾಟಗಳು ಪ್ರಧಾನವಾಗಿ ಸಂಘಪರಿವಾರದ ವಿರುದ್ಧ ನಡೆದ ಹೋರಾಟಗಳಾಗಿದ್ದವು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಪಠ್ಯ ಪರಿಷ್ಕರಣೆಯಂತಹ ಕಾರ್ಯಕ್ಕೆ ಯಾವುದೇ ನೀತಿಸೂತ್ರಗಳನ್ನು ಪಾಲಿಸದೆ ಸಾರಾಸಗಟಾಗಿ ಇಳಿದಿದ್ದನ್ನು ಪ್ರತಿಭಟಿಸಿ ಹಲವಾರು ಹೋರಾಟಗಳು ನಡೆದವು. ಇದು ಕೂಡ ಸಂಘಪರಿವಾರದ ವಿರುದ್ಧವಾಗಿ ಕರ್ನಾಟಕದ ಜನರು ಮಾಡಿದ ಹೋರಾಟವಾಗಿತ್ತು.

ಪಠ್ಯ ಪರಿಷ್ಕರಣೆಯ ನೆಪದಲ್ಲಿ ಬಸವಣ್ಣ, ನಾರಾಯಣ ಗುರು, ಪೆರಿಯಾರ್, ಅಂಬೇಡ್ಕರ್ ಮೊದಲಾದ ಜನಚಳವಳಿಯ ನೇತಾರರನ್ನು ಹಾಗೂ ಇಸ್ಲಾಮ್, ಕ್ರೈಸ್ತ, ಬೌದ್ಧ ಮೊದಲಾದ ಧರ್ಮಗಳನ್ನು ಅವಗಣಿಸುವ, ತಪ್ಪಾಗಿ ಬಿಂಬಿಸುವ ಕಾರ್ಯಗಳನ್ನು ಎಗ್ಗಿಲ್ಲದೇ ನಡೆಸಿದಾಗ ಜನಸಮೂಹಗಳು ಬೀದಿಗಿಳಿದವು. ಈ ಹೋರಾಟ ಈಗಲೂ ಮುಂದುವರಿದಿದ್ದರೂ ಬಹಳ ಸಂಕುಚಿತವಾಗಿ ತಮ್ಮ ಜಾತಿ ಸಮೂಹಗಳಿಗೆ ಸೀಮಿತವಾಗಿ ನಡೆಯಲಾರಂಭಿಸಿವೆ. ಎಲ್ಲರೂ ಒಗ್ಗೂಡಿ ಬ್ರಾಹ್ಮಣಶಾಹಿ ಸಂಚುಗಳನ್ನು ಬಯಲಿಗೆಳೆದು ಹಿಮ್ಮೆಟ್ಟಿಸಿ ನಿಲ್ಲಬೇಕೆಂಬ ಗ್ರಹಿಕೆಯಿಂದ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಅಂತಹ ಪ್ರಯತ್ನ ನಡೆಯಿತು. ಆದರೆ ಕೆಲವು ಪ್ರಗತಿಪರ ವಲಯ ಬಿಟ್ಟರೆ ಉಳಿದಂತೆ ಎಲ್ಲವೂ ಈ ಗಂಭೀರ ಸಂಕುಚಿತತೆಯ ಕಾಯಿಲೆಯಿಂದ ಬಳಲುತ್ತಿವೆ. ಇದಕ್ಕೆ ಆಯಾ ಸಮುದಾಯಗಳ ಮಠಪೀಠಗಳು ಮತ್ತು ಕೆಲವು ಸಮುದಾಯ ನಾಯಕರುಗಳು ಪ್ರಧಾನ ಕಾರಣರಾಗಿದ್ದಾರೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಶೂದ್ರ, ಸಮುದಾಯಗಳ ಮಧ್ಯೆ ಇರುವ ಇಂತಹ ಗಂಭೀರ ತಪ್ಪುಗಳನ್ನು ಸಮರ್ಥವಾಗಿ ಸಂಘಪರಿವಾರ ಉಪಯೋಗಿಸ ತೊಡಗಿದೆ. ಅದರಂತೆ ಸರಕಾರ ಬಲಾಢ್ಯ ಸಮುದಾಯಗಳನ್ನು ಓಲೈಸುವ ರೀತಿಯಲ್ಲಿ ಪಠ್ಯಪರಿಷ್ಕರಣೆಯ ಅಪಚಾರಗಳನ್ನು ಸರಿಪಡಿಸುವ ನಾಟಕ ಶುರುವಿಟ್ಟುಕೊಂಡಿದೆ.

ಈ ಗಂಭೀರ ತಪ್ಪುಗಳಿಂದ ಜನಸಮುದಾಯ ಹೊರಬಂದು ಸಂಘಪರಿವಾರದ ಬ್ರಾಹ್ಮಣಶಾಹಿ ಸಂಚುಗಳ ವಿರುದ್ಧ ಒಗ್ಗೂಡುತ್ತಾ ಗಟ್ಟಿ ದನಿಯಲ್ಲಿ ಪ್ರತಿಭಟಿಸಿ ನಿಲ್ಲಬೇಕಾದ ಅಗತ್ಯ ಬಹಳವಿದೆ. ಇದು ಈ ಸಂದರ್ಭದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ದಲಿತ, ದಮನಿತ, ಅಲ್ಪಸಂಖ್ಯಾತ, ಹಿಂದುಳಿದ ಜನಸಮುದಾಯಗಳು ತುರ್ತಾಗಿ ಗ್ರಹಿಸಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top