ಸಿಜೆಐ ಯು.ಯು. ಲಲಿತ್ ಕುರಿತು ಟೀಕೆ ಸಮರ್ಥನೀಯವೇ?

-

ನಿರ್ಗಮನಗೊಳ್ಳುತ್ತಿರುವ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರು ಆ.4ರಂದು ತನ್ನ ಉತ್ತರಾಧಿಕಾರಿಯಾಗಿ ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶ ಯು.ಯು.ಲಲಿತ್ ಅವರ ಹೆಸರನ್ನು ಶಿಫಾರಸು ಮಾಡಿದ ಬೆನ್ನಿಗೇ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ ಮಹಾಪೂರವೇ ಹರಿದುಬಂದಿತ್ತು. ಗುಜರಾತಿನ ಗೃಹಸಚಿವರಾಗಿದ್ದಾಗ ಕಾನೂನುಬಾಹಿರ ಹತ್ಯೆಗಳ ಸೂತ್ರಧಾರರಾಗಿದ್ದರು ಎಂಬ ಆರೋಪವನ್ನು ಹೊತ್ತಿದ್ದ ಹಾಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಪರವಾಗಿ ನ್ಯಾಯಾಲಯದಲ್ಲಿ ಲಲಿತ್ ವಾದಿಸಿದ್ದರು ಎಂದು ಹಲವಾರು ಬಳಕೆದಾರರು ಬೆಟ್ಟು ಮಾಡಿದ್ದರು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಮೇ 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ಮೂರು ತಿಂಗಳ ಬಳಿಕ ಲಲಿತ್ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು ಎಂಬ ಅಂಶದ ಬಗ್ಗೆಯೂ ಅವರು ಗಮನ ಸೆಳೆದಿದ್ದರು.

ಆದರೆ Scroll.in  ಮಾತನಾಡಿಸಿದ ಕಾನೂನುತಜ್ಞರು ಈ ವಾದಗಳನ್ನು ಒಮ್ಮತದಿಂದ ತಿರಸ್ಕರಿಸಿದ್ದಾರೆ. ಲಲಿತ್ ನ್ಯಾಯಪರ ನ್ಯಾಯಾಧೀಶರಾಗಿದ್ದಾರೆ ಮತ್ತು ಅವರ ಈವರೆಗಿನ ಸೇವಾವಧಿಯಲ್ಲಿ ಅವರ ಸಮದರ್ಶಿತ್ವದ ಬಗ್ಗೆ ಯಾವುದೇ ಪ್ರಶ್ನೆಗಳನ್ನೆತ್ತಲಾಗಿಲ್ಲ ಎಂದು ಅವರು ಹೇಳಿದರು.

ಕಾನೂನು ಪ್ರಾತಿನಿಧ್ಯದ ನೈತಿಕೆ

2014,ಆಗಸ್ಟ್‌ನಲ್ಲಿ ಪದೋನ್ನತಿಗೆ ಮುನ್ನ ಲಲಿತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ಹೆಸರು ಮಾಡಿದ್ದರು. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ.ಸಿಂಗ್, ಮಾಜಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ನಟ ಸಲ್ಮಾನ್ ಖಾನ್‌ರಂತಹ ಹಲವಾರು ಗಣ್ಯ ಕಕ್ಷಿದಾರರನ್ನು ಲಲಿತ್ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು.

ಆದಾಗ್ಯೂ ಅಮಿತ್ ಶಾ ಪರ ವಾದಿಸಿದ್ದ ಪ್ರಕರಣಗಳು ಹೆಚ್ಚಿನ ಗಮನ ಪಡೆದುಕೊಂಡಿದ್ದವು. 2005-06ರಲ್ಲಿ ಗುಜರಾತಿನ ಗೃಹಸಚಿವರಾಗಿದ್ದಾಗ ಶಾ, ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ಅವರ ಕಾನೂನುಬಾಹಿರ ಹತ್ಯೆಗಳ ಸಂಚು ರೂಪಿಸಿದ್ದರು ಎಂಬ ಆರೋಪದಲ್ಲಿ ಈ ಪ್ರಕರಣಗಳು ದಾಖಲಾಗಿದ್ದವು. 2010ರಲ್ಲಿ ಸೊಹ್ರಾಬುದ್ದೀನ್ ಶೇಖ್ ಹತ್ಯೆ ಪ್ರಕರಣದಲ್ಲಿ ಶಾರನ್ನು ಬಂಧಿಸಲಾಗಿತ್ತು ಮತ್ತು ಸಂಕ್ಷಿಪ್ತ ಅವಧಿಗೆ ಜೈಲಿಗೆ ಕಳುಹಿಸಲಾಗಿತ್ತು.

ಲಲಿತ್ ಅವರು ಶಾ ಅಥವಾ ಇನ್ಯಾವುದೋ ಕಕ್ಷಿದಾರರನ್ನು ಪ್ರತಿನಿಧಿಸಿದ್ದಕ್ಕಾಗಿ ಅವರನ್ನು ಟೀಕಿಸುವುದು ಅನ್ಯಾಯ ಎನ್ನುತ್ತಾರೆ ವಕೀಲರು. ವಕೀಲರು ಪ್ರತಿನಿಧಿಸುವ ಕಕ್ಷಿದಾರರನ್ನು ಆಧಾರವಾಗಿಟ್ಟುಕೊಂಡು ಅವರ ಬಗ್ಗೆ ನಿರ್ಣಯಿಸಬಾರದು. ಅವರು ಪ್ರಕರಣದಲ್ಲಿಯ ಅಂಶಗಳ ಮೇಲೆ ಕಕ್ಷಿದಾರರನ್ನು ಪ್ರತಿನಿಧಿಸುತ್ತಾರೆ ಮತ್ತು ವೈಯಕ್ತಿಕವಾಗಿ ಅವರನ್ನು ರಕ್ಷಿಸುವುದಿಲ್ಲ ಎಂದು ಹೇಳಿದ ಹಿರಿಯ ನ್ಯಾಯವಾದಿ ಹಾಗೂ ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ್, ವಕೀಲರಾಗಿ ನಿಮಗೆ ಬರುವ ಎಲ್ಲ ಪ್ರಕರಣಗಳನ್ನು ನೀವು ಸ್ವೀಕರಿಸಬೇಕಾಗುತ್ತದೆ ಎಂದರು.

ಇದನ್ನು ಸಾಮಾನ್ಯವಾಗಿ ‘ಕ್ಯಾಬ್ ರ್ಯಾಂಕ್ ರೂಲ್’ ಎಂದು ಕರೆಯಲಾಗುತ್ತದೆ. ಹೇಗೆ ಓರ್ವ ಟ್ಯಾಕ್ಸಿ ಚಾಲಕನು ಪ್ರಯಾಣಿಕರನ್ನು ನಿರಾಕರಿಸುವುದಿಲ್ಲವೋ ಹಾಗೆಯೇ ವಕೀಲರು ತನ್ನ ಬಳಿಗೆ ಬರುವ ಎಲ್ಲ ಪ್ರಕರಣಗಳನ್ನು ಒಪ್ಪಿಕೊಳ್ಳಬೇಕು ಎನ್ನುವುದು ಈ ನಿಯಮದ ಅರ್ಥ.

ವಕೀಲರ ನಡವಳಿಕೆಯನ್ನು ನಿಯಂತ್ರಿಸುವ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಗಳಲ್ಲಿ ವಕೀಲರು ತಮಗೆ ಬರುವ ಯಾವುದೇ ಪ್ರಕರಣವನ್ನು ಒಪ್ಪಿಕೊಳ್ಳಲೇಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಓರ್ವ ವ್ಯಕ್ತಿಯು ತಪ್ಪಿತಸ್ಥನೆಂದು ಸಾಬೀತಾಗುವವರೆಗೆ ಆತ ನಿರಪರಾಧಿಯಾಗಿರುತ್ತಾನೆ ಮತ್ತು ವಕೀಲರು ಬೇರೆ ರೀತಿಯಲ್ಲಿ ಭಾವಿಸಬಾರದು ಎನ್ನುವುದು ಈ ನಿಯಮಕ್ಕೆ ಆಧಾರವಾಗಿರುವ ತತ್ವವಾಗಿದೆ.

ಅಂತಿಮವಾಗಿ ನಿರ್ಧರಿಸಬೇಕಾದವರು ನ್ಯಾಯಾಧೀಶರಾಗಿದ್ದಾರೆ ಮತ್ತು ಪ್ರಜೆಗಳ ವಿರುದ್ಧದ ಪ್ರಕರಣವನ್ನು ಸಾಬೀತು ಮಾಡುವುದು ಸರಕಾರ ಅಥವಾ ಪ್ರಾಸಿಕ್ಯೂಷನ್‌ನ ಕೆಲಸವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ದುಷ್ಯಂತ ದವೆ ಹೇಳಿದರು.

ಕ್ಯಾಬ್ ರ್ಯಾಂಕ್ ರೂಲ್ ವಕೀಲರಿಗೆ ನೈತಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಕೆಲವರು ಟೀಕಿಸಿದ್ದರೆ, ಯಾರಿಗೂ ಕಾನೂನು ಪ್ರಾತಿನಿಧ್ಯವು ನಿರಾಕರಣೆಯಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಲು ಈ ನಿಯಮವು ಅಗತ್ಯವಾಗಿದೆ ಎಂದು ಹಲವರು ನಂಬಿದ್ದಾರೆ.

ಕ್ಯಾಬ್ ರ್ಯಾಂಕ್ ರೂಲ್‌ನ್ನು ಒಪ್ಪದ ವಕೀಲರು ಸಹ ನ್ಯಾ.ಲಲಿತ್ ಅವರನ್ನು ಅವರ ಕಕ್ಷಿದಾರರ ಆಧಾರದಲ್ಲಿ ನಿರ್ಣಯಿಸುವುದು ಅನ್ಯಾಯ ಎಂದು ಹೇಳಿದ್ದಾರೆ.

ಕಕ್ಷಿದಾರರಿಗೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ ಎನ್ನುವ ಏಕೈಕ ಕಾರಣಕ್ಕೆ ಅವರನ್ನು ಪ್ರತಿನಿಧಿಸುವುದು ಅಪಚಾರವಾಗುತ್ತದೆ ಎನ್ನುವುದು ತನ್ನ ನಂಬಿಕೆ, ಹೀಗಾಗಿ ಕ್ಯಾಬ್ ರ್ಯಾಂಕ್ ರೂಲ್‌ಗೆ ತಾನು ತಾತ್ವಿಕವಾಗಿ ವಿರೋಧಿಯಾಗಿದ್ದೇನೆ ಎಂದು ಹೇಳಿದ ಹಿರಿಯ ನ್ಯಾಯವಾದಿ ಸಂಜಯ್‌ಘೋಷ್ ಅವರು, ಲಲಿತ್ ಅವರು ಅಮಿತ್ ಶಾರನ್ನು ಪ್ರತಿನಿಧಿಸಿದ್ದರು ಎಂಬ ಮಾತ್ರಕ್ಕೆ ಅವರನ್ನು ಟೀಕಿಸುವುದು ಮೂರ್ಖತನವಾಗುತ್ತದೆ ಮತ್ತು ಬಾಲಿಶವಾಗುತ್ತದೆ ಎಂದು ಹೇಳಿದರು. ಯಶಸ್ವಿ ವಕೀಲನೋರ್ವ ಎಲ್ಲ ವಿಧಗಳ ಕಕ್ಷಿದಾರರನ್ನು ಪ್ರತಿನಿಧಿಸುತ್ತಾನೆ ಎಂದರು.

ತಾನಾಗಿದ್ದರೆ ಅಮಿತ್ ಶಾರನ್ನು ಪ್ರತಿನಿಧಿಸುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ ಹಿರಿಯ ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಪ್ರತಿಪಾದಕ ಪ್ರಶಾಂತ್ ಭೂಷಣ್ ಅವರೂ, ಆದಾಗ್ಯೂ ಓರ್ವ ವ್ಯಕ್ತಿ ಗಂಭೀರ ಅಪರಾಧಗಳ ತಪ್ಪಿತಸ್ಥನಾಗಿದ್ದಾನೆ ಎಂದು ಇತರರು ಭಾವಿಸಿದ್ದರೂ ಆತನನ್ನು ಪ್ರತಿನಿಧಿಸಿದ್ದಕ್ಕಾಗಿ ಕ್ರಿಮಿನಲ್ ವಕೀಲರನ್ನು ನೀವು ದೂಷಿಸುವಂತಿಲ್ಲ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿ

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಲಲಿತ್ ವಿರುದ್ಧದ ಟೀಕೆಗಳು ಅವರ ಕಕ್ಷಿದಾರರ ಆಯ್ಕೆಯನ್ನು ಮೀರಿವೆ. ಹಲವರು 2014ರಲ್ಲಿ ಲಲಿತ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಿದಾಗಿನ ಸಂದರ್ಭಗಳನ್ನು ಮರುಪರಿಶೀಲಿಸಿದ್ದಾರೆ.

ಆ ವರ್ಷದ ಆದಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನ್ಯಾಯಾಧೀಶರಾಗಿ ಪದೋನ್ನತಿಗಾಗಿ ನಾಲ್ವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಅವರಲ್ಲಿ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಓರ್ವರಾಗಿದ್ದರು. ನೂತನ ಚುನಾಯಿತ ಬಿಜೆಪಿ ಸರಕಾರವು ಮೂರು ಹೆಸರುಗಳಿಗೆ ಹಸಿರು ನಿಶಾನೆ ತೋರಿಸಿದ್ದರೂ ಸುಬ್ರಮಣಿಯಂ ಅವರ ಪದೋನ್ನತಿಯನ್ನು ತಡೆಹಿಡಿದಿತ್ತು. ಸುಬ್ರಮಣಿಯಂ ಅವರು ಕಾರ್ಪೊರೇಟ್ ಸಂಬಂಧಗಳನ್ನು ಹೊಂದಿದ್ದಾರೆ ಮತ್ತು ಸಾಲಿಸಿಟರ್ ಜನರಲ್ ಆಗಿ ಕೆಲವು ಪ್ರಕರಣಗಳಲ್ಲಿ ಅನುಚಿತವಾಗಿ ವರ್ತಿಸಿದ್ದರು ಎಂಬ ಆರೋಪದ ಛಾಯೆಯನ್ನು ಹೊಂದಿದ್ದ ಪ್ರತಿಕೂಲ ಗುಪ್ತಚರ ವರದಿಗಳು ಇದಕ್ಕೆ ಕಾರಣವಾಗಿವೆ ಎಂದು ಮಾಧ್ಯಮ ವರದಿಗಳು ಹೇಳಿದ್ದವು.

ಆದಾಗ್ಯೂ ಸೊಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಅಮಿಕಸ್ ಕ್ಯುರೆ ಆಗಿದ್ದ ಸುಬ್ರಮಣಿಯಂ ಅವರು ಅಮಿತ್ ಶಾ ಬಂಧನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಕ್ಕಾಗಿ ಅವರನ್ನು ಶಿಕ್ಷಿಸಲಾಗುತ್ತಿದೆ ಎಂಬ ವ್ಯಾಪಕ ಊಹಾಪೋಹಗಳು ಗರಿಗೆದರಿದ್ದವು.

ಸರಕಾರವು ತನ್ನ ನೇಮಕಾತಿಯನ್ನು ಅನುಮೋದಿಸದ ಹಿನ್ನೆಲೆಯಲ್ಲಿ ಸುಬ್ರಮಣಿಯಂ ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗಾಗಿ ತನ್ನ ಒಪ್ಪಿಗೆಯನ್ನು ಹಿಂದೆಗೆದುಕೊಂಡಿದ್ದರು. ಜೂನ್ 2014ರಲ್ಲಿ ಅವರು ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿ ಆಗ ಸಿಜೆಐ ಆಗಿದ್ದ ಆರ್.ಎಂ.ಲೋಧಾ ಅವರಿಗೆ ಪತ್ರ ಬರೆದಿದ್ದರು. ತಾನು ಸರಕಾರದ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ ಎಂಬ ಆತಂಕದಿಂದ ಅದು ತನ್ನ ನೇಮಕಕ್ಕೆ ತಡೆಯೊಡ್ಡಿದೆ ಎಂದು ಸುಬ್ರಮಣಿಯನ್ ಹೇಳಿದ್ದರು. ಸುಬ್ರಮಣಿಯಂ ಅವರ ನೇಮಕವನ್ನು ಅನುಮೋದಿಸದ್ದಕ್ಕಾಗಿ ನ್ಯಾ.ಲೋಧಾ ಅವರು ಸಹ ಕೇಂದ್ರ ಸರಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಬಳಿಕ ಸುಬ್ರಮಣಿಯಂ ಬದಲಿಗೆ ಲಲಿತ್ ಹೆಸರನ್ನು ಶಿಫಾರಸು ಮಾಡಲಾಗಿತ್ತು ಮತ್ತು ಆಗಸ್ಟ್ 2014ರಲ್ಲಿ ಕೇಂದ್ರ ಸರಕಾರವು ಅದನ್ನು ಅನುಮೋದಿಸಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಲಲಿತ್ ಹೆಸರನ್ನು ಶಿಫಾರಸು ಮಾಡಿದಾಗ ಸಾಮಾಜಿಕ ಮಾಧ್ಯಮಗಳು ಅವರನ್ನು ಟೀಕಿಸಲು ಈ ಅಂಶಗಳು ಕಾರಣವಾಗಿದ್ದವು.

ಇದು ಮೂರ್ಖತನವಷ್ಟೇ

ಆದಾಗ್ಯೂ ಲಲಿತ್ ವಿರುದ್ಧದ ಟೀಕೆಗಳನ್ನು ಕಾನೂನು ತಜ್ಞರು ತಿರಸ್ಕರಿಸಿದ್ದಾರೆ.

ಇದು ಮೂರ್ಖತನವಷ್ಟೇ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಂ.ಬಿ.ಲೋಕೂರ್ ಅವರು, ಸುಬ್ರಮಣಿಯಂ ಅವರನ್ನು ಪದೋನ್ನತಿಗೊಳಿಸುವಲ್ಲಿ ವೈಫಲ್ಯವು ತಪ್ಪಾಗಿತ್ತು ನಿಜ, ಆದರೆ ಅದಕ್ಕೂ ನ್ಯಾ.ಲಲಿತ್ ಅವರ ಪದೋನ್ನತಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಸುಬ್ರಮಣಿಯಂ ಅವರಿಗೆ ಪದೋನ್ನತಿ ದೊರಕದಿರುವುದರಲ್ಲಿ ಲಲಿತ್ ಅವರ ತಪ್ಪಿರಲಿಲ್ಲ ಎಂದು ಹೇಳಿದ ಕಾನೂನು ವಿದ್ವಾಂಸ ಅನುಜ್ ಭುವಾನಿಯಾ ಅವರು, ನ್ಯಾಯಾಂಗ ನೇಮಕಾತಿಗಳು ಪೂರ್ವ ನಿಯೋಜಿತವಾಗಿ ರಾಜಕೀಯ ಪ್ರಕ್ರಿಯೆಯಾಗಿವೆ ಎಂದು ವಿವರಿಸಿದರು.

ಓರ್ವ ವಕೀಲರಾಗಿ ಲಲಿತ್ ಅವರ ಅನುಭವ ನ್ಯಾಯಾಧೀಶರಾಗಿ ಪದೋನ್ನತಿಗೆ ಅವರನ್ನು ಅರ್ಹರನ್ನಾಗಿಸಿತ್ತು ಎಂದು ಅಂಜನಾ ಪ್ರಕಾಶ್‌ಹೇಳಿದರು. ತನ್ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಅವಕಾಶವನ್ನು ನೀಡಿರದ ಲಲಿತ್ ಓರ್ವ ಪ್ರಾಮಾಣಿಕ ನ್ಯಾಯಾಧೀಶರಾಗಿದ್ದಾರೆ ಎಂದು ಹಲವಾರು ವಕೀಲರು ಅಭಿಪ್ರಾಯಿಸಿದ್ದಾರೆ. ನ್ಯಾ.ಲಲಿತ್ ಅವರು ಅತ್ಯಂತ ನ್ಯಾಯಪರ, ಸ್ವತಂತ್ರ ಮತ್ತು ಕಠಿಣ ಪರಿಶ್ರಮಿ ನ್ಯಾಯಾಧೀಶರಾಗಿದ್ದಾರೆ. ಅವರು ಎಂದಿಗೂ ಯಾರ ವಿರುದ್ಧವೂ ಪಕ್ಷಪಾತವನ್ನು ಪ್ರದರ್ಶಿಸಿಲ್ಲ ಎಂದು ದವೆ ಹೇಳಿದ್ದಾರೆ.

ನ್ಯಾ.ಲಲಿತ್ ಅವರು ಸಿಜೆಐ ಆಗಿ ದುರದೃಷ್ಟವಶಾತ್ ಕೇವಲ 74 ದಿನಗಳ ಅಲ್ಪಾವಧಿಯನ್ನು ಹೊಂದಿರುವುದು ವಿಷಾದನೀಯವಾಗಿದೆ ಎಂದು ನ್ಯಾ.ಲೋಕೂರ್ ಹೇಳಿದ್ದಾರೆ.

ಕೃಪೆ: Scroll.in

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top