ಸ್ವಾತಂತ್ರ್ಯದ ಅಮೃತ ಮಹೋತ್ಸವ

ನಾವು ಮರೆತ ಮಹನೀಯರು: ಕ್ವಿಟ್ ಇಂಡಿಯಾ ಘೋಷಣೆ ಹಿಂದಿದ್ದ ಮಹಾನ್ ಚೇತನ ಯೂಸುಫ್ ಮೆಹರಾಲಿ

-

ಯೂಸುಫ್ ಮೆಹರಾಲಿ (Courtesy: Yusuf Meherally Centre)

ಯೂಸುಫ್ ಮೆಹರಾಲಿ ತಮ್ಮ ದಿಟ್ಟತನ ಮತ್ತು ಬ್ರಿಟಿಷರ ವಿರುದ್ಧ ತೋರಿದ ಅಸಾಧಾರಣ ಧೈರ್ಯದ ಕಾರಣದಿಂದ ಗಾಂಧೀಜಿಯವರೇ ಬೆರಗಾಗುವುದಕ್ಕೆ ಕಾರಣರಾದವರು. 80 ವರ್ಷಗಳ ಹಿಂದೆ ಆಗಸ್ಟ್ 8ರಂದು ಬ್ರಿಟಿಷರನ್ನು ಮರಳಿ ಇಂಗ್ಲೆಂಡಿಗೆ ಅಟ್ಟುವ ಹೋರಾಟದ ಅತ್ಯಂತ ಮಹತ್ವದ ಹೆಜ್ಜೆಯಾಗಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾದಾಗ ಅದರ ಹಿಂದೆ ಇದ್ದ ಬಹುದೊಡ್ಡ ಶಕ್ತಿಯಾಗಿದ್ದವರು ಇದೇ ಯೂಸುಫ್ ಮೆಹರಾಲಿ.

ಕ್ವಿಟ್ ಇಂಡಿಯಾ ಎಂಬ ಆ ಘೋಷಣೆ ಎಷ್ಟು ತೀವ್ರತೆಯುಳ್ಳದ್ದಾಗಿತ್ತೊ ಅಷ್ಟೇ ಘನತೆಯಿಂದ ಕೂಡಿದ್ದೂ ಆಗಿತ್ತು. ಅಂಥದೊಂದು ಅಪ್ರತಿಮ ಘೋಷಣೆಯನ್ನು ಟಂಕಿಸಿದ್ದವರು ಗಾಂಧೀಜಿಯೇ ಇರಬೇಕೆಂಬ ನಂಬಿಕೆಯೊಂದಿದೆ. ಆದರೆ ಗಾಂಧೀಜಿಯನ್ನೇ ಮೆಚ್ಚಿಸಿ ಕಡೆಗೆ ಹೋರಾಟಕ್ಕೆ ಎರಡೇ ಎರಡು ಪದಗಳಿಂದಲೇ ಇನ್ನಿಲ್ಲದಂಥ ಶಕ್ತಿಯನ್ನೊದಗಿಸಿದ ಆ ಘೋಷಣೆ ಮೆಹರಾಲಿಯವರು ಸೃಷ್ಟಿಸಿದ್ದಾಗಿತ್ತು 

1942ರ ಚಳವಳಿಗಾಗಿ ಪರಿಣಾಮಕಾರಿ ಘೋಷಣೆಯನ್ನು ಸಲಹೆ ಮಾಡಲು ಗಾಂಧೀಜಿ ಸೂಚಿಸಿದಾಗ ಯಾರೋ ಒಬ್ಬರು 'ಗೆಟ್ ಔಟ್' ಎಂಬ ಸಾಲನ್ನು ಸಲಹೆ ಮಾಡಿದರು. ಅದನ್ನು ಅಸಭ್ಯವೆಂದು ಗಾಂಧೀಜಿ ತಿರಸ್ಕರಿಸಿದರು. 'ಹಿಮ್ಮೆಟ್ಟಿ' ಎಂಬ ಸಲಹೆ ರಾಜಗೋಪಾಲಾಚಾರಿ ಅವರಿಂದ ಬಂತಾದರೂ ಅದು ಕೂಡ ಗಾಂಧೀಜಿಯವರಿಗೆ ಹಿಡಿಸಲಿಲ್ಲ. ಆಗ ಯೂಸುಫ್ ಮೆಹರಾಲಿಯವರು ಕ್ವಿಟ್ ಇಂಡಿಯಾ ಎಂಬ ಬರಹವಿದ್ದ ಚೀಟಿಯನ್ನು ನೀಡಿದರು. ನೋಡಿದ ಕ್ಷಣದಲ್ಲೇ ಅದು ಮಿಂಚಿನಂತೆ ಕಂಡಿತ್ತು ಗಾಂಧೀಜಿಯವರಿಗೆ. ಯೆಸ್ ಎಂದುಬಿಟ್ಟಿದ್ದರು. ಕ್ಚಿಟ್ ಇಂಡಿಯಾ ಚಳವಳಿಯ ಘೋಷಣೆ ಹೀಗೆ ನಿರ್ಧರಿತವಾದ ಸಂದರ್ಭವನ್ನು ಕೆ. ಗೋಪಾಲಸ್ವಾಮಿ ಅವರು ತಮ್ಮ “ಗಾಂಧಿ ಮತ್ತು ಬಾಂಬೆ” ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. 

1942ರ ಚಳುವಳಿಯ ಮುನ್ನಾದಿನ ಮೆಹರಾಲಿ "ಕ್ವಿಟ್ ಇಂಡಿಯಾ" ಎಂಬ ಕಿರುಪುಸ್ತಕವನ್ನು ಪ್ರಕಟಿಸಿದರು. ಅದು ಕೆಲವೇ ವಾರಗಳಲ್ಲಿ ಮಾರಾಟವಾಯಿತು. ಆಗಸ್ಟ್ 7ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಪ್ರಾರಂಭವಾಗುವ ಮೊದಲು ಸಾವಿರಕ್ಕೂ ಹೆಚ್ಚು 'ಕ್ವಿಟ್ ಇಂಡಿಯಾ' ಬ್ಯಾಡ್ಜ್‌ಗಳನ್ನು ಮುದ್ರಿಸುವ ಮೂಲಕ ಅವರು ಘೋಷಣೆಯನ್ನು ಇನ್ನಷ್ಟು ಜನಪ್ರಿಯಗೊಳಿಸಿದರು. 

ಕ್ವಿಟ್ ಇಂಡಿಯಾ ಘೋಷಣೆ ಮಾತ್ರವಲ್ಲ, 1928ರಲ್ಲಿ, ಭಾರತದಲ್ಲಿ ಬ್ರಿಟಿಷ್ ಆಡಳಿತಕ್ಕೆ ಸುಧಾರಣೆಗಳನ್ನು ಶಿಫಾರಸು ಮಾಡಲು ಸಾಮ್ರಾಜ್ಯಶಾಹಿ ಸರ್ಕಾರವು ನೇಮಿಸಿದ ಆಲ್-ಬ್ರಿಟಿಷ್ ಸೈಮನ್ ಆಯೋಗದ ವಿರುದ್ಧ ಪ್ರತಿಭಟಿಸುವುದಕ್ಕೆ  "ಸೈಮನ್ ಗೋ ಬ್ಯಾಕ್" ಎಂಬ ಘೋಷಣೆಯನ್ನು ಟಂಕಿಸಿದ್ದವರು ಕೂಡ ಯೂಸುಫ್ ಮೆಹರಾಲಿಯವರೇ.

ಹಾಗೆಂದು, ಸ್ವಾತಂತ್ರ್ಯ ಚಳವಳಿಯಲ್ಲಿ  ಮೆಹರಾಲಿಯವರ ಪಾತ್ರ ಕೇವಲ ಘೋಷಣೆಗಳಿಗೆ ಸೀಮಿತವಾಗಿದ್ದೇನಲ್ಲ. ಅವರದು ಎದೆಗುಂದದ ಹೋರಾಟವಾಗಿತ್ತು. ಮಾತ್ರವಲ್ಲ, ರಾಮಮನೋಹರ ಲೋಹಿಯಾ, ಅರುಣಾ ಅಸಫ್ ಅಲಿ ಮತ್ತು ಅಚ್ಯುತ್ ಪಟವರ್ಧನ್ ಸೇರಿದಂತೆ ಸಮಾಜವಾದಿ ಸಹವರ್ತಿಗಳನ್ನು ಸಜ್ಜುಗೊಳಿಸುವಲ್ಲಿಯೂ ಮೆಹರಾಲಿ ಪಾತ್ರ ದೊಡ್ಡದಿತ್ತು ಎಂಬುದನ್ನು ಅವರ ಜೀವನಚರಿತ್ರೆ ಬರೆದಿರುವ ಮಧು ದಂಡವತೆ ಹೇಳುತ್ತಾರೆ. 

ಕ್ವಿಟ್ ಇಂಡಿಯಾ ಚಳವಳಿ ಆರಂಭವಾದ ಮಾರನೇ ದಿನವೇ ಅಂದರೆ 1942ರ ಆಗಸ್ಟ್ 9ರಂದು ಗಾಂಧಿ ಮತ್ತು ಇತರರೊಂದಿಗೆ ಬಂಧಿತರಾಗಿದ್ದ ನಾಯಕರಲ್ಲಿ ಮೆಹರಾಲಿ ಇದ್ದರು.  

ಆಗ ಅವರಿಗೆ ಕೇವಲ 39 ವರ್ಷ ವಯಸ್ಸು. ಜೈಲಿನಲ್ಲಿದ್ದಾಗಲೇ ಬಾಂಬೆ ಮೇಯರ್ ಸ್ಥಾನದ ಚುನಾವಣೆಗೆ ನಾಮನಿರ್ದೇಶನಗೊಡರು, ಮಾತ್ರವಲ್ಲ ಅನಾಯಾಸವಾಗಿ ಗೆದ್ದರು. ಆ ಹುದ್ದೆಗೆ ಆಯ್ಕೆಯಾದ ಮೊದಲ ಸಮಾಜವಾದಿ ಮಾತ್ರವಲ್ಲ, ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಯೂ ಅವರದಾಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಎಂಟು ಬಾರಿ ಜೈಲು ಪಾಲಾಗಿದ್ದ ಮೆಹರಾಲಿ ಜನಿಸಿದ್ದು 1903ರ ಸೆಪ್ಟೆಂಬರ್ 3ರಂದು. ಬಾಂಬೆಯಲ್ಲಿ ಸುಸ್ಥಿತಿಯಲ್ಲಿದ್ದ ಉದ್ಯಮಿಯ ಕುಟುಂಬ. ಅದಕ್ಕೂ ಐವತ್ತು ವರ್ಷಗಳ ಹಿಂದೆ, ಅವರ ಮುತ್ತಜ್ಜಂದಿರು ಬಾಂಬೆಯ ಮೊದಲ ಜವಳಿ ಗಿರಣಿಗಳಲ್ಲಿ ಒಂದನ್ನು ಸ್ಥಾಪಿಸಿದ್ದರು ಮತ್ತು ಅಂದಿನಿಂದ ಅದು ಸ್ಥಿತಿವಂತ ಕುಟುಂಬವಾಗಿತ್ತು.

ಚಿಕ್ಕ ಹುಡುಗನಾಗಿದ್ದಾಗ ಮೆಹರಾಲಿಗೆ ತನ್ನ ಸುತ್ತ ನಡೆಯುತ್ತಿರುವ ರಾಷ್ಟ್ರೀಯತಾವಾದಿ ಚಳವಳಿಗಳ ಬಗ್ಗೆ ಕುತೂಹಲ. ಪ್ರೌಢಶಾಲೆಯಲ್ಲಿದ್ದಾಗ, ವಿವಿಧ ರಾಷ್ಟ್ರಗಳ ಕ್ರಾಂತಿಕಾರಿ ಚಳವಳಿಗಳು ಮತ್ತು ಅವುಗಳಲ್ಲಿ ಯುವಕರು ವಹಿಸಿದ ಪಾತ್ರದ ಬಗ್ಗೆ ಓದಲು ಹೆಚ್ಚು ಸಮಯವನ್ನು ಕಳೆಯುತ್ತಿದ್ದ. ತನ್ನ ಜೀವನದುದ್ದಕ್ಕೂ ತನ್ನ ಕುಟುಂಬದ ಮೇಲ್ವರ್ಗದ ಪೂರ್ವಗ್ರಹಗಳನ್ನು ಕಣ್ಣಾರೆ ಕಂಡಿದ್ದ ಸಂವೇದನಾಶೀಲ ಹುಡುಗ ಕಾರ್ಮಿಕ ವರ್ಗದ ಹೋರಾಟಗಳಿಂದಲೂ ಆಳವಾಗಿ ಪ್ರಭಾವಿತನಾಗಿದ್ದ.

ಇದೆಲ್ಲವೂ ಸೇರಿ, ಸ್ವಾತಂತ್ರ್ಯ ಹೋರಾಟಕ್ಕಿಳಿಯುವ ನಿಟ್ಟಿನಲ್ಲಿ ಮೆಹರಾಲಿ ಮನಸ್ಸಿನಲ್ಲಿ ನಿಶ್ಚಯ ದೃಢವಾಯಿತು. ಮೆಹರಾಲಿಯ ಬ್ರಿಟಿಷ್ ಪರ ಕುಟುಂಬ ಅವರನ್ನು ದಂಗೆಕೋರನಂತೆ ಮುಜುಗರದಿಂದ ಕಂಡಿತು. ಆದರೆ ಕುಟುಂಬದ ಅಸಮ್ಮತಿಯನ್ನು ಲೆಕ್ಕಿಸದೆ  ಮೆಹರಾಲಿಯವರು ಹೈಸ್ಕೂಲ್‌ ಮುಗಿಸಿದ್ದೇ ಚಳವಳಿಗೆ ಸೇರಿದರು.

ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಬಳಿಕ ಫೆಬ್ರವರಿ 1928ರಲ್ಲಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾಗ ಸೈಮನ್ ಆಯೋಗವು ಬಾಂಬೆ ತಲುಪಿತು. ಸಂಸತ್ತಿನ ಏಳು ಬ್ರಿಟಿಷ್ ಸದಸ್ಯರ ಗುಂಪು, ಸೈಮನ್ ಆಯೋಗವು ಸಾಂವಿಧಾನಿಕ ಸುಧಾರಣೆಗಳನ್ನು ಸೂಚಿಸಲು ಭಾರತಕ್ಕೆ ಆಗಮಿಸಿತ್ತು. ಆದರೆ ಒಬ್ಬನೇ ಒಬ್ಬ ಭಾರತೀಯ ಸದಸ್ಯನೂ ಅದರಲ್ಲಿರಲಿಲ್ಲ. ಈ ಅನ್ಯಾಯದ ಮತ್ತು ಅವಮಾನಕರ ನಿರ್ಧಾರವು ಭಾರತೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. 

ಅದೇ ವರ್ಷ ಬಾಂಬೆ ಯೂತ್ ಲೀಗ್ ಸ್ಥಾಪಿಸಿದ ಮೆಹರಾಲಿ, ಸೈಮನ್ ಆಯೋಗದ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಿದರು. ಸಮುದ್ರದಲ್ಲಿಯೇ ಸದಸ್ಯರನ್ನು ತಡೆಯಲು ದೋಣಿಗಳಲ್ಲಿ ದಂಡಯಾತ್ರೆ ಕೈಗೊಳ್ಳಲು ಮೊದಲು ಯೋಜಿಸಲಾಯಿತಾದರೂ ಅದರ ಸುಳಿವು ಸಿಕ್ಕ ಪೊಲೀಸರು ಅದಕ್ಕೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದರು. ಬಳಿಕ ಮೆಹರಾಲಿ ಮತ್ತು ಇತರ ಯುವಕರು ಬಾಂಬೆ ಬಂದರಿಗೆ ಕೂಲಿಗಳ ವೇಷದಲ್ಲಿ ಪ್ರವೇಶಿಸಿ, ಆಯೋಗದ ಸದಸ್ಯರಿಗೆ ಕಪ್ಪು ಬಾವುಟ ಪ್ರದರ್ಶಿಸಿ "ಸೈಮನ್ ಗೋ ಬ್ಯಾಕ್" ಘೋಷಣೆಯೊಂದಿಗೆ ಧಿಕ್ಕಾರ ವ್ಯಕ್ತಪಡಿಸಿದರು. ಆಗ ಪ್ರತಿಭಟನಾಕಾರರ ಮೇಲೆ ಮೂರು ಬಾರಿ ಲಾಠಿ ಚಾರ್ಜ್ ಮಾಡಲಾಯಿತು ಆದರೆ ಅವರು ಒಂದು ಇಂಚು ಕೂಡ ಕದಲಲಿಲ್ಲ. ಪ್ರದರ್ಶನದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ, ನಗರದಾದ್ಯಂತ ಜನರು ಸ್ವಯಂಪ್ರೇರಿತ ಹರತಾಳ ಆರಂಭಿಸಿದರು. 

ರಾತ್ರೋರಾತ್ರಿ, ಮಹಾತ್ಮ ಗಾಂಧಿಯವರನ್ನೂ ಒಳಗೊಂಡಂತೆ ಎಲ್ಲರ ಬಾಯಲ್ಲೂ  ಮೆಹರಾಲಿಯವರ ಧೈರ್ಯ ಮತ್ತು ಘೋಷಣೆಯದ್ದೇ ಮಾತಾಯಿತು. ಹಾಗೆ, ಒಬ್ಬ ಪ್ರಬಲ ಬ್ರಿಟಿಷ್ ರಾಜಕಾರಣಿಯ ಮುಖಕ್ಕೆ ಧಿಕ್ಕಾರ ಕೂಗಲು ಮೆಹರಾಲಿ ಧೈರ್ಯ ಮಾಡಿದ್ದರು. 

ಇದಾಗಿ ಎರಡು ವರ್ಷಗಳ ನಂತರ 1930ರಲ್ಲಿ ಅಸಹಕಾರ ಚಳವಳಿ ಪ್ರಾರಂಭವಾದಾಗ, ಮೆಹರಾಲಿ ಮತ್ತು ಅವರ ಯುವ ಸ್ವಯಂಸೇವಕರ ತಂಡವು ದಣಿವರಿಯಿಲ್ಲದೆ ಕೆಲಸ ಮಾಡಿತು.  ಮೆಹರಾಲಿ ನಾಲ್ಕು ತಿಂಗಳ ಜೈಲುಶಿಕ್ಷೆಗೆ ಒಳಗಾದರು. 

1932ರಲ್ಲಿ ಮತ್ತೆ  ಮೆಹರಾಲಿ  ಬಂಧನವಾಯಿತು. ನಾಸಿಕ್ ಜೈಲಿನಲ್ಲಿ ಎರಡು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಇಲ್ಲಿ ಅವರು ಸ್ವಾತಂತ್ರ್ಯ ಹೋರಾಟದ ತೀವ್ರಗಾಮಿ ಸಮಾಜವಾದಿ ನಾಯಕರನ್ನು ಭೇಟಿ ಮಾಡಿ ಸಂವಾದ ನಡೆಸಿದರು.

1934ರಲ್ಲಿ ಬಿಡುಗಡೆಯಾದ ನಂತರ, ಅವರು ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಲು ಜಯಪ್ರಕಾಶ್ ನಾರಾಯಣ್, ಅಶೋಕ್ ಮೆಹ್ತಾ, ನರೇಂದ್ರ ದೇವ್, ಅಚ್ಯುತ್ ಪಟ್ವಾದನ್, ಮಿನೂ ಮಸಾನಿ ಮತ್ತು ಇತರರೊಂದಿಗೆ ಕೈಜೋಡಿಸಿದರು. ವರ್ಗ ಒಗ್ಗಟ್ಟಿನ ಮೂಲಕ ಕೋಮು ವಿಭಜನೆಗಳನ್ನು ಮೀರುವುದು ಮತ್ತು ವಿಕೇಂದ್ರೀಕೃತ ಸಮಾಜವಾದದ ಮೂಲಕ ಆರ್ಥಿಕ ಸಬಲೀಕರಣವನ್ನು ತರುವುದು ಅದರ ಆಶಯವಾಗಿತ್ತು. .

1938ರಲ್ಲಿ, ಮೆಹೆರಲಿ ಅವರು ಮೆಕ್ಸಿಕೋದಲ್ಲಿನ ವಿಶ್ವ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸುವ ಮೊದಲು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವ ಯುವ ಕಾಂಗ್ರೆಸ್‌ಗೆ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು. ಪಶ್ಚಿಮಕ್ಕೆ ಹೋಲಿಸಿದರೆ ಭಾರತದಲ್ಲಿ ಸಮಕಾಲೀನ ವಿಷಯಗಳ ಬಗೆಗಿನ ಬರವಣಿಗೆಯ ಕೊರತೆಯಿರುವುದನ್ನು ಇಲ್ಲಿ ಮನಗಂಡ ಅವರು, ಈ ಕೊರತೆ ನೀಗಿಸಲು 'ಲೀಡರ್ಸ್ ಆಫ್ ಇಂಡಿಯಾ' ಎಂಬ ಶೀರ್ಷಿಕೆಯ ಪುಸ್ತಕಗಳ ಸರಣಿಯನ್ನು ಬರೆದರು ಮತ್ತು ಅವುಗಳನ್ನು ಗುಜರಾತಿ, ಹಿಂದಿ ಮತ್ತು ಉರ್ದು ಭಾಷೆಗಳಿಗೆ ಅನುವಾದಿಸಿದರು.

ಮುಂದಿನ ಕೆಲವು ವರ್ಷಗಳಲ್ಲಿ, ನಿಷೇಧಾಜ್ಞೆಗಳನ್ನು ಧಿಕ್ಕರಿಸಿದ್ದಕ್ಕಾಗಿ ಮತ್ತು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ  ಮೆಹರಾಲಿಯವರನ್ನು ಹಲವಾರು ಬಾರಿ ಬಂಧಿಸಲಾಯಿತು. 1942ರಲ್ಲಿ ಬಾಂಬೆ ಮೇಯರ್ ಆದ ಬಳಿಕ ತಮ್ಮ ಅಧಿಕಾರಾವಧಿಯಲ್ಲಿ, ಪರಿಣಾಮಕಾರಿ ಸೇವೆಯನ್ನು ಕೈಗೊಂಡು ಸಾರ್ವಜನಿಕರ ಮಧ್ಯೆ ಅಪಾರ ಜನಪ್ರಿಯತೆ ಗಳಿಸಿದರು.

ಮೇಯರ್ ಆಗಿ ಅವರ ಮೊದಲ ಹೆಜ್ಜೆಯೇ ಫೈಲ್‌ಗಳ ತ್ವರಿತ ವಿಲೇವಾರಿ ಮತ್ತು ಸೋಮಾರಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವುದಾಗಿತ್ತು. ಬ್ರಿಟಿಷ್ ಸರ್ಕಾರದ ಏರ್ ರೈಡ್ ಮುನ್ನೆಚ್ಚರಿಕೆಗಳ (ARP) ಯೋಜನೆಗಾಗಿ ಪುರಸಭೆಯ ಹಣವನ್ನು ಪಾವತಿಸಲು ನಿರಾಕರಿಸುವ ಅಭೂತಪೂರ್ವ ನಿರ್ಧಾರವನ್ನು ತೆಗೆದುಕೊಂಡರು.

ARP ಯೋಜನೆಯು ವಾಯುದಾಳಿಗಳ ಅಪಾಯದಿಂದ ನಾಗರಿಕರ ರಕ್ಷಣೆಗಾಗಿ ಪ್ರಾರಂಭಿಸಲಾದ ಕಾರ್ಯಕ್ರಮವಾಗಿತ್ತು. ಇದು ARP ವಾರ್ಡನ್‌ಗಳು, ಮೆಸೆಂಜರ್‌ಗಳು, ಆಂಬ್ಯುಲೆನ್ಸ್ ಚಾಲಕರು ಮತ್ತು ರಕ್ಷಣಾ ಪಕ್ಷಗಳ ಸಂಘಟನೆಯನ್ನು ಒಳಗೊಂಡಿತ್ತು, ಅವರು ವಾಯು ದಾಳಿಯ ಸಂದರ್ಭದಲ್ಲಿ ಪೊಲೀಸ್ ಮತ್ತು ಅಗ್ನಿಶಾಮಕ ದಳಗಳೊಂದಿಗೆ ಸಂಪರ್ಕ ಸಾಧಿಸುವ ವ್ಯವಸ್ಥೆಯಿತ್ತು. ಈ ಹಿಂದೆ, ಬಾಂಬೆಯ ಮುನ್ಸಿಪಲ್ ಕಾರ್ಪೊರೇಶನ್ ಎಆರ್‌ಪಿ ಯೋಜನೆಗಾಗಿ ಬ್ರಿಟಿಷ್ ಸರ್ಕಾರಕ್ಕೆ 24 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿತ್ತು. ಇದನ್ನು ನಿರಾಕರಿಸಿದ್ದಲ್ಲದೆ, ನಗರದ ರಕ್ಷಣೆಯು ಬ್ರಿಟಿಷರಲ್ಲದೆ ಸ್ಥಳದಲ್ಲೇ ಉಳಿಯುವವರ ಕೈಯಲ್ಲಿ ಇರಬೇಕು ಎಂದು ವಾದಿಸಿದರು. ಇದು ಬಾಂಬೆಯಲ್ಲಿ ಪೀಪಲ್ಸ್ ವಾಲಂಟಿಯರ್ ಬ್ರಿಗೇಡ್‌ನ ಸಂಘಟನೆಗೆ ಕಾರಣವಾಯಿತು ಮತ್ತು ARP ಯೋಜನೆಯನ್ನು ನಡೆಸಲು ಮುನ್ಸಿಪಲ್ ಕಾರ್ಪೊರೇಶನ್‌ಗೆ ಅನುಮತಿ ನೀಡಿದ ಭಾರತದ ಏಕೈಕ ನಗರ ಬಾಂಬೆ ಆಯಿತು.

ಸೆರೆಮನೆಯಲ್ಲಿನ ಈ ಅಧಿಕಾರಾವಧಿಯಲ್ಲಿಯೇ  ಮೆಹರಾಲಿ ಲಘು ಹೃದಯಾಘಾತದಿಂದ ಬಳಲುತ್ತಿದ್ದರು. ಜೈಲು ಅಧಿಕಾರಿಗಳು ಅವರನ್ನು ವಿಶೇಷ ಚಿಕಿತ್ಸೆಗಾಗಿ ಸೇಂಟ್ ಜಾರ್ಜ್ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾದರು ಆದರೆ ತತ್ವಬದ್ಧ ವ್ಯಕ್ತಿ ಮೆಹರಾಲಿ  ಇತರ ಇಬ್ಬರು ಅಸ್ವಸ್ಥ ಸ್ವಾತಂತ್ರ್ಯ ಹೋರಾಟಗಾರರಿಗೂ ಅದೇ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ನಿರಾಕರಿಸಿದಾಗ, ಅವರು ಜೈಲಿನಲ್ಲಿ ಉಳಿಯಲು ನಿರ್ಧರಿಸಿದರು.

ನಂತರದ ಕೆಲವು ತಿಂಗಳುಗಳಲ್ಲಿ, ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯದ ಕಾರಣದ ಹಿನ್ನಡೆಯ ಹೊರತಾಗಿಯೂ ಭಾರತದಾದ್ಯಂತ ಸ್ವಾತಂತ್ರ್ಯ ಹೋರಾಟ ತೀವ್ರ ಗತಿಯಲ್ಲಿ ಸಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿಯು ತಕ್ಷಣದ ಸ್ವಾತಂತ್ರ್ಯವನ್ನು ಸಾಧಿಸದಿದ್ದರೂ, ಭಾರಿ ಒತ್ತಡವನ್ನು ಸೃಷ್ಟಿಸಿತ್ತು, ಇದರ ಪರಿಣಾಮವಾಗಿ ಕೇವಲ ಮೂರು ವರ್ಷಗಳಲ್ಲೇ ಬ್ರಿಟಿಷರು ಭಾರತದಿಂದ ಕಾಲ್ತೆಗೆಯುವ ನಿರ್ಧಾರಕ್ಕೆ ಬಂದರು. .

1943ರಲ್ಲಿ ಬಿಡುಗಡೆಯಾದ ಸಮಯದಲ್ಲಿ  ಮೆಹರಾಲಿಯವರ ಆರೋಗ್ಯವು ತೀವ್ರವಾಗಿ ಹದಗೆಟ್ಟಿತ್ತು. ಆದರೆ ಅವರ ಹೋರಾಟದ ಕೆಚ್ಚು ಕಿಂಚಿತ್ತೂ ಕುಂದಿರಲಿಲ್ಲ. ತನ್ನ ಪ್ರೀತಿಯ ತಾಯ್ನಾಡು ಅಂತಿಮವಾಗಿ ವಸಾಹತುಶಾಹಿಯ ಸರಪಳಿಗಳನ್ನು ಕಳಚಿಕೊಂಡು 1947ರ ಆಗಸ್ಟ್ 15ರಂದು ಸ್ವತಂತ್ರವಾದಾಗ ಈ ನಿಸ್ವಾರ್ಥ ನಾಯಕನ ಸಂತೋಷಕ್ಕೆ ಪಾರವೇ ಇರಲಿಲ್ಲ. 

ನಿರಂತರ ಹೋರಾಟ, ಸೆರೆವಾಸಗಳಿಂದ ದಣಿದುಹೋಗಿದ್ದ  ಮೆಹರಾಲಿ    ದುರ್ಬಲರಾಗಿದ್ದರು, ಹಾಸಿಗೆ ಹಿಡಿದಿದ್ದರು. ಹಾಗಿದ್ದೂ ಭಾರತದ ರೋಮಾಂಚಕ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಎತ್ತಿ ತೋರಿಸುವ ಕೆಲಸವನ್ನು ಅವರು ಮುಂದುವರೆಸಿದ್ದರು. 1949ರ ಅಕ್ಟೋಬರ್ನಲ್ಲಿ  ಮೆಹರಾಲಿ    ಒಂದು ಪ್ರದರ್ಶನವನ್ನು ಆಯೋಜಿಸಿದರು. ಅದು 1857ರಿಂದ ಭಾರತದ ಸ್ವಾತಂತ್ರ್ಯ ಹೋರಾಟದ ವಿಕಾಸವನ್ನು ಗುರುತಿಸುವ 200ಕ್ಕೂ ಹೆಚ್ಚು ಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಒಳಗೊಂಡಿತ್ತು.  

1950ರ ಜುಲೈ 2ರಂದು ಯೂಸುಫ್  ಮೆಹರಾಲಿ 47ನೇ ವಯಸ್ಸಿನಲ್ಲಿ ನಿಧನರಾದರು. ತಮ್ಮ ಪ್ರೀತಿಯ ನಾಯಕನನ್ನು ಕಳೆದುಕೊಂಡು ದಿಗ್ಭ್ರಮೆಗೊಂಡ ಬಾಂಬೆ ಸಾಮೂಹಿಕ ಶೋಕದಲ್ಲಿ ಮುಳುಗಿತು. ಮರುದಿನ ಗಡಿಯಾರವು ಮಧ್ಯಾಹ್ನವನ್ನು ಹೊಡೆಯುತ್ತಿದ್ದಂತೆ, ನಗರದಾದ್ಯಂತ ಬಸ್ಸುಗಳು, ಟ್ರಾಮ್ಗಳು ಮತ್ತು ರೈಲುಗಳು ಕೆಲವು ನಿಮಿಷಗಳ ಕಾಲ ಸ್ತಬ್ಧವಾದವು. ಎಲ್ಲಾ ಶಾಲೆಗಳು, ಕಾಲೇಜುಗಳು, ಅಂಗಡಿಗಳು, ಕಾರ್ಖಾನೆಗಳು ಮತ್ತು ಗಿರಣಿಗಳು ಮುಚ್ಚಲ್ಪಟ್ಟವು. ಆರ್ಥಿಕ ಶಕ್ತಿಯ ಅಪ್ರತಿಮ ಸಂಕೇತವಾದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಅಧಿಕೃತವಾಗಿ ತೆರೆದಿದ್ದರೂ ಯಾವುದೇ ವ್ಯವಹಾರಕ್ಕೆ ಸಾಕ್ಷಿಯಾಗಲಿಲ್ಲ. ಎಂದಿಗೂ ನಿಲ್ಲದ ನಗರಿ, ಈ ನಗರ ಮತ್ತು ದೇಶದ ಹಿತಕ್ಕಾಗಿ ಅಕ್ಷರಶಃ ತನ್ನ ಪ್ರಾಣವನ್ನು ನೀಡಿದ್ದ ವ್ಯಕ್ತಿಯ ನೆನಪಿನಲ್ಲಿ ಅಂದು ಹಾಗೆ ಒಂದಿಷ್ಟು ಕಾಲ ಚಲಿಸದೆ ನಿಂತಿತ್ತು. 

ಬ್ರಿಟಿಷ್ ಸಾಮ್ರಾಜ್ಯದಿಂದ ಮುಕ್ತವಾಗುವುದಕ್ಕಾಗಿ ಭಾರತ ನಡೆಸಿದ ಕೊನೆಯ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಕ್ವಿಟ್ ಇಂಡಿಯಾ ಚಳುವಳಿಯ ಭಾಗವಾಗಿದ್ದವರೂ, ಹಲವು ಭೂಗತ ಚಳವಳಿಗಳಲ್ಲಿ ಬ್ರಿಟಿಷರ ವಿರುದ್ಧದ ಕೆಚ್ಚಿನಿಂದ ತೊಡಗಿಸಿಕೊಂಡಿದ್ದವರೂ ಆಗಿದ್ದ ಯೂಸುಫ್ ಮೆಹರಾಲಿ ನಾವು ಮರೆತುಹೋದ ಮಹಾ ನಾಯಕ. ಆದರೆ ಚರಿತ್ರೆಯ ಗಡಿಯಾರದಲ್ಲಿ ನೆನಪಿನ ಮುಳ್ಳುಗಳು ಕೂಡಲೇಬೇಕು. ಮೆಹರಾಲಿ ಮತ್ತು ಅವರಂಥ ಅದೆಷ್ಟೋ ನಾಯಕರು ನಮ್ಮ ಮನಸ್ಸು ತುಂಬುವುದು ಹೀಗೆ. ಅವತ್ತು ಇಡೀ ಬಾಂಬೆಯೇ ಸ್ತಬ್ಧವಾಗಿ ನೆನಪಿಸಿಕೊಂಡಿತ್ತಲ್ಲ, ಹಾಗೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top