ಇರುವಿಕೆ ಮತ್ತು ಆಗುವಿಕೆ
-

- ಪ್ರೊ. ಎನ್. ಮನು ಚಕ್ರವರ್ತಿ
----------------------------------------------
ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ಧತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ಧಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು. ಇಂತಹ ದೃಢ ನಿರಾಕರಣೆಗೆ ಕಾರಣವಾದ ವ್ಯಷ್ಟಿಗಳ ಚೈತನ್ಯವೇ ಸೃಜನಶೀಲ ಲೇಖಕನಿಗೆ ತನ್ನ ಅನ್ವೇಷಣೆಯ ಕೇಂದ್ರವಾಗುತ್ತದೆ. ಎಂ.ಎಸ್. ಮೂರ್ತಿಯವರ ‘ಬೌಲ್’ ಕಾದಂಬರಿಯು ವ್ಯಷ್ಟಿಗಳ ಸತ್ಯಾನ್ವೇಷಣೆಯ ವಿಭಿನ್ನ ಬಗೆಗಳ ನಿಗೂಢ ಲೋಕಗಳಿಗೆ ನಮ್ಮನ್ನು ಕರೆದೊಯ್ದು ನಮ್ಮ ವ್ಯಕ್ತಿತ್ವದ ವಾಸ್ತವ ಸತ್ಯವನ್ನು ವೈವಿಧ್ಯಮಯ ರೀತಿಯಲ್ಲಿ ಶೋಧಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಈ ಕಾದಂಬರಿಯು ಸ್ಥಳೀಯ ಇಹಜೀವನದ ಸತ್ಯ ಕೇಂದ್ರಿತವಾಗಿದ್ದು ನಮ್ಮೆಲ್ಲರಿಗೆ ಪರಿಚಿತವಿರುವ ನಗರ ಸ್ಥಳಗಳಿಂದ ದೂರವಾಗಿರುವ ಹಾಗೂ ನಮಗೆ ಚಿರಪರಿಚಿತವಾದ ಮಹಾನಗರ ಕೇಂದ್ರಗಳಿಂದಲೂ ದೂರವಾದಂತಹ ಸ್ಥಳೀಯ-ಪ್ರಾಪಂಚಿಕ ವಾಸ್ತವದಲ್ಲಿ ನೆಲೆಗೊಂಡಿರುವ ಕಾದಂಬರಿಯಾಗಿದೆ. ಕಾದಂಬರಿಯ ಪಾತ್ರಗಳು ಕೂಡ, ನಾವು ತಲೆತಲಾಂತರದಿಂದ ಸಹಜವಾಗಿ ಬಾಳಿ ಬದುಕಿದ ಸಮಾಜ ಹಾಗೂ ಬೆಳೆದುಬಂದ ಸಂಸ್ಕೃತಿಗಿಂತಲೂ ಸಂಪೂರ್ಣವಾಗಿ ಭಿನ್ನವಾಗಿರುವ ಅನನ್ಯ ಹಾಗೂ ಅಪರಿಚಿತವಾಗಿರುವ ವ್ಯಕ್ತಿತ್ವಗಳಾಗಿವೆ.
ಎಂ.ಎಸ್. ಮೂರ್ತಿ
ಈ ಕಾದಂಬರಿಯ ಮೂಲಕ ಮೂರ್ತಿಯವರು ನಮ್ಮ ಅರಿವಿಗೆ ಬಂದಿರದ ಅನುಭಾವದ ಲೋಕವೊಂದನ್ನು ಸೃಷ್ಟಿಸಿದ್ದಾರೆ. ನಮ್ಮ ಅರಿವಿಗೆ ಬಂದಿರದ ಅನೇಕ ಅನುಭವಗಳನ್ನು ಎದುರುಗೊಳ್ಳುವ ಕುತೂಹಲದೊಂದಿಗೇ ನಾವು ಇಲ್ಲಿ ಪ್ರವೇಶಿಸಬೇಕಿದೆ. ಇಂತಹ ಅನ್ಯತಾಭಾವದ ಗುಣಲಕ್ಷಣಗಳು ಈ ಕಾದಂಬರಿಯ ಅತ್ಯಂತ ಚೋದಕ ಗುಣಗಳಾಗಿವೆ.
ನಮ್ಮ ಕಾಲದ ಪ್ರಮುಖ ಸಮಾಜೋ-ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳು ಹಾಗೂ ಸೃಜನಾತ್ಮಕ ಚೈತನ್ಯವನ್ನು ಹತ್ತಿಕ್ಕುವ ಸಂದರ್ಭದಲ್ಲಿ, ತಾತ್ವಿಕ, ಬೌದ್ಧಿಕ ದಿವಾಳಿತನದ ಸನ್ನಿವೇಶದಲ್ಲಿ, ಮೂರ್ತಿಯವರ ‘ಬೌಲ್’ ನಮ್ಮ ದೈನಂದಿನ ವಾಸ್ತವಗಳಿಂದ ದೂರವಿರುವ ವಿಶಾಲ ಜಗತ್ತೊಂದನ್ನು ನಮಗೆ ಪರಿಚಯಿಸುತ್ತದೆ.
‘ಬೌಲ್’ ಎಂತಹ ಕೃತಿಯೆಂದರೆ ಅದು ‘ಪ್ರಗತಿಪರ’ ವಿಮರ್ಶಕರು ಮತ್ತು ಚಿಂತಕರಿಂದ ಅಪ್ರಸ್ತುತ, ಅಸ್ಪಷ್ಟ, ಅಸಂಗತ ಎಂದೆಲ್ಲ ಕರೆಸಿಕೊಳ್ಳುವ ಅಪಾಯವನ್ನು ಎದುರಿಸುವಂತಹ ಪಾತ್ರಗಳನ್ನು ಮತ್ತು ಸನ್ನಿವೇಶಗಳ ಜಗತ್ನನ್ನು ಸೃಷ್ಟಿಸಿಕೊಂಡಿದೆ. ಕೃತಿಕಾರರ ಈ ಧೀಮಂತಿಕೆ ‘ಬೌಲ್’ ಕೃತಿಯಲ್ಲಿ ವ್ಯಕ್ತವಾಗುತ್ತವೆ. ಇತಿಹಾಸದ ಅನಂತ ಸಾಧ್ಯತೆಗಳನ್ನು ಐತಿಹಾಸಿಕ ದೃಷ್ಟಿಕೋನದಲ್ಲಿಯೇ ನೋಡುವಂತೆ ‘ಬೌಲ್’ ನಮ್ಮನ್ನು ಒತ್ತಾಯಿಸುತ್ತದೆ. ಆದರೆ ಆಧುನಿಕ ಇತಿಹಾಸದ ನಮ್ಮ ರಚನೆಗಳನ್ನು ಮೀರಿ ಚಲಿಸುವುದು, ವಿಭಿನ್ನ ಇತಿಹಾಸಗಳನ್ನು ಅಳವಡಿಸಿಕೊಳ್ಳುವ ಕಲ್ಪನೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಇತಿಹಾಸದ ಬಗ್ಗೆ ನಮ್ಮ ಏಕರೂಪದ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳುವುದು ನಮಗೆ ಬಿಟ್ಟದ್ದು. ‘ಬೌಲ್’ ಕಾದಂಬರಿಯ ಈ ಪ್ರಜ್ಞೆಯು ವೃತ್ತಾಕಾರವಾಗಿದ್ದು, ನಾಗರಿಕತೆಯ ಕಥನವಾಗಿದ್ದು ಸಮಕಾಲೀನ ವಿಚಾರಗಳಿಂದಾಗಲಿ, ರಾಜಕಾರಣದಿಂದಾಗಲಿ ನಿಯಂತ್ರಿಸಲ್ಪಡುವುದಿಲ್ಲ.
‘ಬೌಲ್’ ಕಾದಂಬರಿಯ ಬಗ್ಗೆ ಮತ್ತೊಂದು ದೋಷಾರೋಪಣೆ ಏನಾಗಬಹುದೆಂದರೆ ಅದರ ಸೈದ್ಧಾಂತಿಕ ಸಮಸ್ಯೆಗಳು ಹಾಗೂ ಅತೀಂದ್ರಿಯ ಮತ್ತು ಆಧ್ಯಾತ್ಮಿಕ ಕಾಳಜಿಗಳೊಂದಿಗೆ ಲಕ್ಷಾಂತರ ಜನರ ಸಂಕಟಗಳು, ಅಧಿಕಾರ ಮತ್ತು ಅಧಿಕಾರ ಕೇಂದ್ರಿತ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನವೀಯತೆಗಳು ಈ ಆಧುನಿಕ ಜಗತ್ತಿನ ಪ್ರಮುಖ ವಿಪತ್ತುಗಳು ಎಂದು ಭಾವಿಸಿದವರಿಂದಲೂ ಈ ಕೃತಿ ನಮ್ಮ ಕಾಲಕ್ಕೆ ಅಪ್ರಸ್ತುತವೆನಿಸಬಹುದು. ಎಲ್ಲೆಲ್ಲಿ ಅನೈತಿಕ ರಾಜಕಾರಣವು ಶಕ್ತಿಮೀರಿ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡು ಆಧುನಿಕ ನಾಗರಿಕತೆಯನ್ನು ಅರಾಜಕತೆಯತ್ತ ದೂಡುತ್ತಿದೆಯೋ ‘ಬೌಲ್’ ಅಂತಹ ನಾಗರಿಕತೆಯನ್ನು ತನ್ನದೇ ವಿಶಿಷ್ಟವಾದ ರೀತಿಯಲ್ಲಿ ತೀಕ್ಷ್ಣವಾಗಿ ಟೀಕಿಸುತ್ತದೆ. ‘ಬೌಲ್’ ಯಾವುದೇ ದೃಷ್ಟಿಯಿಂದಲೂ ರಾಜಕೀಯ ಕಾದಂಬರಿಯಲ್ಲ, ಆದರೆ ಯಾವುದೇ ಸಂವೇದನಾಶೀಲ ಓದುಗರು ಇದರಲ್ಲಿ ಬರುವ ಪ್ರಭುತ್ವದ ಅಧಿಕಾರದ ಕಟುಟೀಕೆಗಳನ್ನು ಗ್ರಹಿಸದೆ ಇರಲಾರರು. ಹಾಗೆಯೇ ಈ ಕೃತಿಯು ವ್ಯಕ್ತಿಗಳು ಆಕ್ರಮಣಕಾರಿಯಾಗಿ, ಇತರರ ಬಗ್ಗೆ ಭಾವುಕರಾಗದೆ ಸ್ವಯಂಕೇಂದ್ರಿತರಾಗಿ ಮನಸೋಇಚ್ಛೆ ಬದುಕುವುದನ್ನು ರೂಢಿಸಿಕೊಂಡ ರೀತಿಯ ಸ್ವಾಧೀನ ಪ್ರಪಂಚವೊಂದರ ಸ್ವರೂಪದ ಬಗೆಗೆ ಗಹನವಾಗಿ ಚಿಂತಿಸುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ‘ಬೌಲ್’ ಬಂಡವಾಳದ ಶಕ್ತಿ ಕೇಂದ್ರದಂತೆ ನಿರ್ಮಿಸಲಾದ ಈ ಪ್ರಪಂಚದ ಸಂವೇದನಾಶೂನ್ಯ ಮಾರ್ಗಗಳ ಮೇಲೆ ದಾಳಿ ಮಾಡುತ್ತದೆ. ಇನ್ನೂ ವಿಸ್ತರಿಸಿ ಹೇಳುವುದಾದರೆ, ನಮ್ಮ ಸುತ್ತಲೂ ಅಸ್ತಿತ್ವದಲ್ಲಿರುವ ಈ ಸ್ಥಳೀಯ ಜಗತ್ತುಗಳನ್ನು ಈ ಕೃತಿ ಸ್ಥಾಪಿಸುತ್ತದೆ. ಕಾರ್ಪೊರೇಟ್ ಜಗತ್ತಿನ ಯೋಜನೆಗಳ ಆಳವಾದ ಉದ್ದೇಶಗಳನ್ನು ಪರೋಕ್ಷವಾಗಿ ಈ ಕೃತಿಯು ಸೂಕ್ಷ್ಮವಾಗಿ ಬಗೆದು ತೋರಿಸುತ್ತದೆ. ಬಲಶಾಲಿ ಕಾರ್ಪೊರೇಟ್ ಜಗತ್ತು ತನ್ನೆಲ್ಲ ಶಕ್ತಿಯನ್ನು ಕ್ರೋಡೀಕರಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಮೂಲಕ ಎಲ್ಲವನ್ನು ಹೇಗೆ ಸ್ವಾಧೀನಪಡಿಸಿಕೊಳ್ಳುತ್ತದೆ ಎಂಬ ವಿಚಾರವೂ ಇಲ್ಲಿ ವ್ಯಕ್ತವಾಗುತ್ತದೆ. ಇವುಗಳಲ್ಲಿ ಯಾವುದನ್ನೂ ಈ ಕೃತಿಯಲ್ಲಿ ನೇರವಾಗಿ, ಸ್ಪಷ್ಟವಾಗಿ ಹೇಳಲಾಗಿಲ್ಲ. ‘ಬೌಲ್’ ಈ ಎಲ್ಲ ಅಂಶಗಳನ್ನು ಸೂಚ್ಯ ರೀತಿಯಲ್ಲಿ ಮುನ್ನೆಲೆಗೆ ತರುತ್ತದೆ. ಇಂತಹ ರಚನಾತ್ಮಕ ನಿರೂಪಣೆಗೆ ಸಂವೇದನಾಶೀಲರಾಗುವ ಮೂಲಕ ಅಂತಹ ಚಿಂತನೆ ಮತ್ತು ಕಾಳಜಿಗಳ ಕಡೆಗೆ ಮುಖಮಾಡುವುದು ನಮಗೆ ಬಿಟ್ಟಿದ್ದು. ಇಡೀ ಕೃತಿಯಲ್ಲಿ ಯಾವುದನ್ನೂ ವಿವರವಾಗಿ ಹೇಳಲಾಗಿಲ್ಲ. ಪ್ರಾಸಂಗಿಕ ಘಟನೆಗಳಲ್ಲಿ ಮತ್ತು ನಿರ್ಣಾಯಕ ಕ್ಷಣಗಳಲ್ಲಿ ಪಾತ್ರಗಳು ಮಾಡುವ ನಿರ್ಧಾರಗಳ ಮೂಲಕ ಕಾದಂಬರಿಯು ತನ್ನ ಆಳದ ವಿಷಯಾಧಾರಿತ ಕಾಳಜಿಗಳನ್ನು ವಿಶದಪಡಿಸುತ್ತದೆ. ಮನುಷ್ಯರ ನಿರ್ಣಾಯಕ ನಿರ್ಧಾರಗಳು ಕೇವಲ ಅವರ ವೈಯಕ್ತಿಕ ಆದ್ಯತೆಗಳು ಮತ್ತು ವ್ಯಕ್ತಿಗಳ ಇಷ್ಟಾನಿಷ್ಟಗಳ ಬಗೆಗಷ್ಟೇ ಸೀಮಿತಗೊಂಡಿರುವುದಿಲ್ಲ. ಇಲ್ಲಿ ವ್ಯಕ್ತಿಗಳ ಅಸ್ತಿತ್ವವಾದದ ಆಯ್ಕೆಗಳು ಮತ್ತು ಆಘಾತಕಾರಿಯಾದ ಅನಿರೀಕ್ಷಿತ ಸಂದರ್ಭಗಳು ಮತ್ತು ವಿನಾಶಕಾರಿ ಅನುಭವಗಳನ್ನು ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಉದಾಹರಿಸಿ ಹೇಳಲಾಗಿದೆ. ಆಧುನಿಕ ಬದುಕು ಎಂತಹ ಗೊಂದಲ, ಆತಂಕ ಮತ್ತು ಅಸಹನೀಯತೆಯಿಂದ ಕೂಡಿದೆ ಎಂಬುದನ್ನು ಈ ಕಾದಂಬರಿಯ ಚಿಂತನೆಯ ಮೂಲಕವೂ ಗಮನಿಸಬಹುದು.
‘ಬೌಲ್’ನ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಅದೊಂದು ಶುದ್ಧತೆಯ ಕೃತಿಯಾಗಿಲ್ಲದಿರುವುದು. ಅಂದರೆ ಕೇವಲ ರೂಪಕಗಳ ಮೂಲಕ ಒಳಾರ್ಥಗಳನ್ನು ಹೇಳುವ ಪಠ್ಯವೂ ಅಲ್ಲದಿರುವುದು. ಸಾಂಕೇತಿಕ ಮತ್ತು ಒಳಾರ್ಥ ನೀಡುವ ಕೃತಿಗಳು ನೈಜ ಪ್ರಪಂಚದೊಂದಿಗೆ ಗಂಭೀರ ಮತ್ತು ತೀವ್ರವಾದ ಮಾತುಕತೆಗಳನ್ನು ಸ್ಥಾಪಿಸುವುದಿಲ್ಲ. ಜಗತ್ತಿನ ಪ್ರಕ್ಷುಬ್ಧತೆ ಮತ್ತು ಗದ್ದಲಗಳನ್ನು ತಮ್ಮ ಸಾಂಕೇತಿಕ ವಿಧಾನಗಳ ಮೂಲಕ ಸೆರೆಹಿಡಿಯಲು ಫ್ರಾನ್ಸ್ ಕಾಫ್ಕಾನಂತಹ ಅಸಾಮಾನ್ಯರಿಗೆ ಮಾತ್ರವೇ ಸಾಧ್ಯ. ವಾಸ್ತವಿಕತೆಯನ್ನು ನೋಡುವ ಪ್ರವೃತ್ತಿಯು ಆಲೋಚನೆ, ಭಾವನೆ ಮತ್ತು ಸೌಂದರ್ಯೋಪಾಸನೆಯ ವಿಷಯಗಳನ್ನು ಕೀಳು ಎನ್ನುವುದಲ್ಲದೆ ಆಡಂಬರದ ಮತ್ತು ನಿರರ್ಥಕವಾದ ವಿಚಾರವೆಂದು ಪರಿಗಣಿತವಾಗುತ್ತಿದೆ. ನಿಜ ಹೇಳಬೇಕೆಂದರೆ, ವಾಸ್ತವಿಕತೆಯ ಆಧುನಿಕ ಇತಿಹಾಸದ ಶಕ್ತಿಗಳ ದಟ್ಟವಾದ ಮತ್ತು ಸಂಕೀರ್ಣವಾದ ಚಲನೆಗಳನ್ನು ಈ ಕೃತಿ ಸೆರೆಹಿಡಿಯುತ್ತದೆ. ಸಾಮಾನ್ಯ ಕೆಲಸ ಕಾರ್ಯಗಳ ರಚನೆಯನ್ನು ರೂಪಿಸುವಂತಹ ಅಸಾಮಾನ್ಯ ಕಥೆ ಹೇಳುವ ‘ಬೌಲ್’ ನಮ್ಮ ಕಾಲದ ಅತ್ಯಂತ ಮಹತ್ವದ ಕೃತಿಯಾಗಿದೆ. ಇಡೀ ಕೃತಿಯು ಸನ್ಯಾಸಿಯಾದ ಭಿಕುವಿನ ಸುತ್ತ ಸುತ್ತುತ್ತದೆ. ತನ್ನ ಗುರು ಉಡುಗೊರೆಯಾಗಿ ನೀಡಿದ ಕೇವಲ ಒಂದು ಬಟ್ಟಲನ್ನೇ ಹಿಂಬಾಲಿಸುತ್ತ ಈ ಕೃತಿ ಸಾಗುತ್ತದೆ. ಸ್ವತಃ ಆತನೇ ಜೀವನವು ವಿಧಿಸಿದ ಮಿತಿ ಮತ್ತು ನಿರ್ಬಂಧಗಳಿಂದ ಪರಿಪೂರ್ಣವಾದ ಮೀರುವಿಕೆಯನ್ನು ಬಯಸುತ್ತಲೇ ಇರುತ್ತಾನೆ. ಆತ ಹುಡುಕುವ ಪರಿಪೂರ್ಣ ಶೂನ್ಯತೆಯು ಆತನ ನಿರ್ವಾಣವಾಗಿದೆ. ಜಗತ್ತಿಗೆ ಸೇರಿದ ಎಲ್ಲವನ್ನೂ ನಿರಾಕರಿಸುವುದು ಮತ್ತು ಬಿಡಿಸಿಕೊಳ್ಳುವುದು ಆತನಿಗೆ ಅನಿವಾರ್ಯವಾಗಿದೆ.
ಆ ತಪಸ್ವಿಯು ಬಳಸುವ ದಾರಿಗಳು ಮತ್ತು ಆತನ ಭಿಕ್ಷಾಪಾತ್ರೆಯನ್ನು ಹೊರತುಪಡಿಸಿದರೆ ಬದುಕುಳಿಯಲು ಆತನಲ್ಲಿ ಬೇರೇನೂ ಇಲ್ಲ. ವಾಸ್ತವವಾಗಿ ತನ್ನ ಭೌತಿಕ ಉಳಿವಿಗಾಗಿ ಮೂಲಭೂತವಾಗಿ ಅಗತ್ಯವಿಲ್ಲದ ಎಲ್ಲವನ್ನೂ ಆತ ಬರಿದುಮಾಡಿಕೊಳ್ಳಬೇಕು. ಕಾದಂಬರಿಯ ನಿರೂಪಣಾ ರಚನೆಯಲ್ಲಿ ಮತ್ತು ಭಿಕುವಿನ ದಿನನಿತ್ಯದ ಅಸ್ತಿತ್ವದಲ್ಲಿ ಸಾಹಿತ್ಯಿಕ ಮತ್ತು ಶೂನ್ಯತೆಯ ರೂಪಕಗಳ ಅರ್ಥವನ್ನು ಒಟ್ಟಿಗೆ ಹೆಣೆಯಲಾಗಿದೆ. ‘ಭಿಕು’ ಎಂಬ ಹೆಸರೇ ಬೌದ್ಧ ಸನ್ಯಾಸಿಯ ಮಾರ್ಗಗಳನ್ನು ಸೂಚಿಸುತ್ತದೆ. ಭಿಕುವಿನ ಪರಿಪೂರ್ಣತೆ ಮತ್ತು ಅಂತಿಮ ಸ್ಥಿತಿಯು ಆತನ ಸಂಪೂರ್ಣ ಶೂನ್ಯತೆಯಲ್ಲಿಯೇ ಕಾಣಬಹುದು. ಪೂರ್ಣತೆ ಎಂಬುದು ಶೂನ್ಯತೆಯಲ್ಲಿಯೇ ಅಡಗಿರುವಂಥದ್ದು. ದುರಾಸೆ, ಅಸೂಯೆ, ಈರ್ಷ್ಯೆಗಳು ಹೇಗೆ ವ್ಯಕ್ತಿ ಮತ್ತು ಸಮಾಜಗಳ ಪ್ರಜ್ಞೆಯ ಮೇಲೆ ತಮ್ಮ ನಿಯಂತ್ರಣ ಸಾಧಿಸಿಕೊಂಡು ಆಧುನಿಕತೆಯ ಸೋಗಿನಲ್ಲಿ ಜಗತ್ತನ್ನು ಬಂಜರನ್ನಾಗಿಸುತ್ತವೆ ಎಂಬುದನ್ನು ಸೂಚ್ಯವಾಗಿ ಈ ಕೃತಿಯು ಸುಳಿವು ನೀಡುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.