-

ತನಿಖಾ ಸಂಸ್ಥೆಗಳ ಅಣಕ!

-

ತನಿಖಾ ಸಂಸ್ಥೆಗಳ ದುರ್ಬಳಕೆ ವಿಚಾರ ತೀವ್ರ ಚರ್ಚೆಯಲ್ಲಿದೆ ಈಚಿನ ವರ್ಷಗಳಲ್ಲಿ. ತನಿಖಾ ಸಂಸ್ಥೆಗಳನ್ನು ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಹೆಚ್ಚುತ್ತಿದೆ. ಹಾಗಾಗಿಯೇ ರಾಜಕಾರಣಿಗಳ ಮೇಲೆ ಅದರಲ್ಲೂ ಪ್ರತಿಪಕ್ಷ ನಾಯಕರ ಮೇಲೆಯೇ ಸಿಬಿಐ, ಆದಾಯ ತೆರಿಗೆ ಇಲಾಖೆ, ಈ.ಡಿ.ಯಂಥವುಗಳ ದಾಳಿ ಮತ್ತೆ ಮತ್ತೆ ಆಗುತ್ತಿರುವುದು. ತನಿಖಾ ಸಂಸ್ಥೆಗಳಿಗೆ ಇದಕ್ಕಿಂಥ ದುಃಸ್ಥಿತಿ ಬೇಕೆ? ಕಳೆದ ಕೆಲವು ವರ್ಷಗಳಲ್ಲಿ ದಾಳಿಗಳು ಹೆಚ್ಚಿದ್ದರೂ ಅಪರಾಧ ಸಾಬೀತುಪಡಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿರುವುದೇಕೆ? ತನಿಖಾ ಸಂಸ್ಥೆಗಳ ದಾಳಿ ಆಗದವರನ್ನು ಬೆದರಿಸುವ ಆಟವೆ? ಇಂಥ ಹಲವು ಪ್ರಶ್ನೆಗಳು ಕಾಡುತ್ತವೆ.

ದೇಶದ ತನಿಖಾ ಸಂಸ್ಥೆಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರದ ಕೈಗೊಂಬೆಗಳಂತೆ ವರ್ತಿಸುವುದು ನಡೆದೇಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಬಂದ ಮೇಲಂತೂ ಅದು ಇನ್ನಷ್ಟು ತೀವ್ರವಾಗಿದೆ. ದ್ವೇಷ ರಾಜಕಾರಣಕ್ಕೂ, ಚುನಾಯಿತ ಸರಕಾರವನ್ನೇ ಉರುಳಿಸುವುದಕ್ಕೂ ಚುನಾವಣಾ ಫಲಿತಾಂಶಗಳನ್ನೇ ಬದಲಿಸುವುದಕ್ಕೂ ಈ ಸಂಸ್ಥೆಗಳನ್ನು ಬಳಸಿಕೊಳ್ಳುವ ಕೆಲಸವೂ ನಡೆಯುತ್ತಿದೆ. ಆಗದವರನ್ನು ಆಟವಾಡಿಸುವುದಕ್ಕೆ, ಬೆದರಿಸುವುದಕ್ಕೆ ಹಣ್ಣುಗಾಯಿ ನೀರುಗಾಯಿ ಮಾಡುವುದಕ್ಕೆ ಈ ತನಿಖಾ ಸಂಸ್ಥೆಗಳೇ ಕೇಂದ್ರ ಸರಕಾರದ ಪಾಲಿಗೆ ಸೂತ್ರವಾಗಿಬಿಟ್ಟಿರುವ ವಿಪರ್ಯಾಸವನ್ನು ಕಾಣುತ್ತಿದ್ದೇವೆ.

ತನಿಖಾ ಸಂಸ್ಥೆಗಳು ಎಂದೊಡನೆ ಪ್ರಮುಖವಾಗಿ ಉಲ್ಲೇಖಿಸ ಬೇಕಾದವುಗಳು ನಾಲ್ಕು. ಸಿಬಿಐ, ಆದಾಯ ತೆರಿಗೆ ಇಲಾಖೆ, ಈ.ಡಿ ಅಥವಾ ಜಾರಿ ನಿರ್ದೇಶನಾಲಯ ಮತ್ತು ಎನ್‌ಐಎ ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ.

ಸಿಬಿಐ ದೇಶದ ಅತ್ಯುನ್ನತ ತನಿಖಾ ಸಂಸ್ಥೆ. 1941ರಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂತು. ಎರಡನೇ ಜಾಗತಿಕ ಯುದ್ಧದ ವೇಳೆ ದೇಶದ ಯುದ್ಧ ಮತ್ತು ಪೂರೈಕೆ ವ್ಯವಹಾರ ಗಳಲ್ಲಿನ ಅವ್ಯವಹಾರ ತನಿಖೆ ಇದರ ಕಾರ್ಯವಾಗಿತ್ತು. ಬಳಿಕ ಕೇಂದ್ರ ಸರಕಾರಿ ನೌಕರರ ಭ್ರಷ್ಟಾಚಾರ ತನಿಖೆಗಾಗಿ 1945ರಲ್ಲಿ ದಿಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆ ಜಾರಿಗೆ ಬಂದಾಗ ಇದು ದಿಲ್ಲಿ ಪೊಲೀಸ್ ಹಿಡಿತಕ್ಕೆ ಬಂತು. 1963ರ ಎಪ್ರಿಲ್ 1ರಂದು ಸಿಬಿಐ ಎಂದು ನಾಮಕರಣವಾಯಿತು. ರಾಜ್ಯ ಸರಕಾರಗಳ ಅನುಮತಿ ಯೊಂದಿಗೆ ತನಿಖೆಯನ್ನು ಕೈಗೊಳ್ಳಬಹುದಾದ ಅದರ ಅಧಿಕಾರ ವ್ಯಾಪ್ತಿ ದೇಶಾದ್ಯಂತ ವಿಸ್ತರಿಸಿತು. ಸಿಬಿಐ ಮುಖ್ಯವಾಗಿ ಭ್ರಷ್ಟಾಚಾರ, ಆರ್ಥಿಕ ಅಪರಾಧ ಮತ್ತು ವಿಶೇಷ ಅಪರಾಧಗಳ ತನಿಖೆಯನ್ನು ನಡೆಸುತ್ತದೆ. ಕೆಲವು ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವುದಿದೆ.

ಆದಾಯ ತೆರಿಗೆ ಇಲಾಖೆಯ ಪರಿಕಲ್ಪನೆ ಹುಟ್ಟಿದ್ದು ಬ್ರಿಟಿಷ್ ಭಾರತದ ಮೊದಲ ಅರ್ಥಸಚಿವನಾಗಿದ್ದ ಜೇಮ್ಸ್ ವಿಲ್ಸನ್‌ನ ಕಾಲದಲ್ಲಿ 1860ರ ಫೆಬ್ರವರಿಯಲ್ಲಿ ಮೊದಲ ಆದಾಯ ತೆರಿಗೆ ಕಾಯ್ದೆ ಪರಿಚಯಿಸಲ್ಪಟ್ಟು ಅದೇ ಜುಲೈನಲ್ಲಿ ಜಾರಿಗೆ ಬಂದಾಗ. ಪ್ರಸಕ್ತ ಐಟಿ ಇಲಾಖೆಯು ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ.

ಇನ್ನು ಜಾರಿ ನಿರ್ದೇಶನಾಲಯ. ವಿದೇಶಿ ವಿನಿಮಯ ಕಾಯ್ದೆ- 1947ರ ಸಮರ್ಪಕ ಜಾರಿಗಾಗಿ 1956ರ ಮೇ 1ರಂದು ಕೇಂದ್ರ ಸರಕಾರ ಸ್ಥಾಪಿಸಿದ ಜಾರಿ ಘಟಕವೇ ಮುಂದೆ 1957ರಲ್ಲಿ ಜಾರಿ ನಿರ್ದೇಶನಾಲಯ ಎಂದಾಯಿತು. ಆರ್ಥಿಕ ಕಾನೂನುಗಳಾದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಹಾಗೂ ಮನಿ ಲಾಂಡರಿಂಗ್ ತಡೆ ಕಾಯ್ದೆಗಳ ಸಮರ್ಪಕ ಜಾರಿ ಮತ್ತು ಅವುಗಳ ಪಾಲನೆ ಕುರಿತು ನಿಗಾ ವಹಿಸುವುದು ಇದರ ಕೆಲಸ.

ರಾಷ್ಟ್ರೀಯ ತನಿಖಾ ಸಂಸ್ಥೆ 2008ರ ಡಿಸೆಂಬರ್ 31ರಂದು ರಚನೆಯಾಯಿತು. ಭಯೋತ್ಪಾದಕ ಕೃತ್ಯ ಸಂಬಂಧ ದೇಶದ ಯಾವುದೇ ಮೂಲೆಯಲ್ಲೂ ರಾಜ್ಯ ಸರಕಾರಗಳ ಅನುಮತಿಯಿಲ್ಲದೆ ತನಿಖೆ ನಡೆಸುವ ಮತ್ತು ಕಾನೂನಾತ್ಮಕ ಕ್ರಮ ಜರುಗಿಸಲು ಶಿಫಾರಸು ಮಾುವ ಅಧಿಕಾರವನ್ನು ಇದು ಹೊಂದಿದೆ.

ಈ ತನಿಖಾ ಸಂಸ್ಥೆಗಳು ತಮ್ಮ ಕಾರ್ಯದಲ್ಲಿ ನಿಷ್ಪಕ್ಷಪಾತವಾಗಿವೆಯೆ? ಸ್ವಾಯತ್ತ ಎಂಬುದು ಇವುಗಳ ಹಣೆಪಟ್ಟಿ ಮಾತ್ರ ವಾಗುಳಿದು, ಮೂಗುದಾರ ಹಿಡಿದು ಆಡಿಸುವ ವ್ಯವಸ್ಥೆಯೇ ಬೇರೆ ಎಂಬುದು ರಹಸ್ಯವಾಗಿಲ್ಲದ ಈ ಹೊತ್ತಲ್ಲಿ, ಇವುಗಳ ನಡೆಯೂ, ನಿಷ್ಕ್ರಿಯತೆಯೂ ಅನುಮಾನಕ್ಕೆ ಎಡೆಮಾಡಿಕೊಟ್ಟು ತುಂಬ ಕಾಲವೇ ಆಗಿದೆ.

ಕಾಂಗ್ರೆಸ್ ಆಳ್ವಿಕೆ ಕಾಲದಲ್ಲೂ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ ಇಲ್ಲದೇ ಇಲ್ಲ. ಆದರೆ ಹಿಂದೆಂದೂ ಇಲ್ಲದ ರೀತಿಯಲ್ಲಿ ತನಿಖಾ ಸಂಸ್ಥೆಗಳನ್ನು ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಎನ್‌ಡಿಎ ಸರಕಾರ ಎಂಬುದು ಕೂಡ ಅಷ್ಟೇ ನಿಚ್ಚಳ. ಪ್ರತಿಪಕ್ಷಗಳ ನಾಯಕರನ್ನು ಮಣಿಸುವುದಕ್ಕೂ, ಬೇರೆ ಪಕ್ಷಗಳ ಶಾಸಕರನ್ನು ತಮ್ಮತ್ತ ಸೆಳೆಯುವುದಕ್ಕೂ ತನಿಖಾ ಸಂಸ್ಥೆಗಳನ್ನೇ ಛೂ ಬಿಡುವ ದುಷ್ಟ ನಡೆಯು ಮಿತಿ ಮೀರಿರುವುದು ನಿಜ. ಕೆಲ ದಿನಗಳ ಹಿಂದೆ ಪಶ್ಚಿಮಬಂಗಾಳದ ಮಂತ್ರಿ ಪಾರ್ಥಾ ಚಟರ್ಜಿ ಮನೆ ಮೇಲೆ ತನಿಖಾ ಸಂಸ್ಥೆಗಳ ದಾಳಿಯಾಯಿತು. ಮಹಾರಾಷ್ಟ್ರದ ಶಿವಸೇನೆ ನಾಯಕ ಸಂಜಯ್ ರಾವುತ್ ನಿವಾಸದ ಮೇಲೂ ದಾಳಿ ನಡೆದಿತ್ತು. ಅದರ ಬೆನ್ನಲ್ಲೇ ದಿಲ್ಲಿಯ ಅರವಿಂದ ಕೇಜ್ರಿವಾಲ್ ಮತ್ತವರ ಆಪ್ತ ಸಚಿವ ಸಿಸೋಡಿಯಮೇಲೆಯೂ ಮೋದಿ ಸರಕಾರದ ಕಣ್ಣು ಬಿತ್ತು. ಸಿಸೋಡಿಯ ಮನೆ ಮೇಲೆ ಸಿಬಿಐ ದಾಳಿಯೂ ಆಯಿತು. ಸಿಸೋಡಿಯ ಮನೆಯಲ್ಲಿಯಾವುದೇ ಅಕ್ರಮ ಹಣ ದೊರಕದಿದ್ದರೂ ಪ್ರಕರಣ ದಾಖಲಿಸಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸಲಿಲ್ಲ. ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಎದುರಿಸಲಾಗದ್ದಕ್ಕೆ ಹೀಗೆ ಆಟವಾಡಲಾಗುತ್ತಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ. ಎಲ್ಲ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು, ಸಂಘಪರಿವಾರದ ಕೋಮುವಾದಿ ನೀತಿಯ ಟೀಕಾಕಾರರನ್ನು ಹಣಿಯುವುದಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಸೇರಿದರೆ ಎಲ್ಲ ಪ್ರಕರಣಗಳನ್ನು ಕೈಬಿಡುತ್ತೇವೆ ಎಂಬ ಆಮಿಷವೊಡ್ಡುವ ಮತ್ತೊಂದು ಅಡ್ಡದಾರಿಯನ್ನೂ ಬಳಸುವ ಭಂಡತನ ಬೇರೆ.

ಮೂರು ಪ್ರಮುಖ ತನಿಖಾ ಸಂಸ್ಥೆಗಳಾದ ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಇವುಗಳಲ್ಲಿ ಸಿಬಿಐ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದೂ ಪಂಜರದ ಗಿಳಿ ಎಂದೂ ಬಿಜೆಪಿಯ ಜಮೈ ಅಂದರೆ ಅಳಿಯ ಎಂದೂ ಕರೆಯಿಸಿ ಕೊಂಡಿದೆ. ಕೇಂದ್ರದಲ್ಲಿರುವ ಸರಕಾರಗಳ ತಾಳಕ್ಕೆ ಕುಣಿಯುವ ಕಾರಣದಿಂದಾಗಿ ಅದಕ್ಕೆ ಸಿಕ್ಕಿರುವ ವಿಶೇಷಣಗಳು ಇವೆಲ್ಲ.

ಕಳೆದ 18 ವರ್ಷಗಳಲ್ಲಿ, ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ಸರಕಾರಗಳು ಹಲವಾರು ರಾಜಕಾರಣಿಗಳ ವಿರುದ್ಧ ಸಿಬಿಐ ಪ್ರಕರಣಗಳನ್ನು ದಾಖಲಿಸಿವೆ. ಬಂಧಿಸಿವೆ, ದಾಳಿ ನಡೆಸಿವೆ, ಪ್ರಶ್ನಿಸಿವೆ. ಬಹುತೇಕ ಪ್ರಕರಣಗಳು ಪ್ರತಿಪಕ್ಷ ನಾಯಕರುಗಳ ವಿರುದ್ಧವೇ ಎಂಬುದನ್ನು ಹೇಳಲೇಬೇಕು. 2014ರ ಬಳಿಕವಂತೂ ಇದು ತೀವ್ರವಾಗಿ ಎದ್ದುಕಾಣುತ್ತಿರುವ ಪ್ರವೃತ್ತಿಯಾಗಿದೆ.

2004ರಿಂದ 2014ರ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ 10 ವರ್ಷಗಳಲ್ಲಿ ಕನಿಷ್ಠ 72 ರಾಜಕೀಯ ನಾಯಕರು ಸಿಬಿಐ ಸ್ಕ್ಯಾನರ್‌ಗೆ ಒಳಗಾದರು. ಅವರಲ್ಲಿ 43 ನಾಯಕರು ಅಂದರೆ ಶೇ. 60ರಷ್ಟು ಪ್ರತಿಪಕ್ಷದವರು. ಬಿಜೆಪಿ ನೇತೃತ್ವದ ಎನ್‌ಡಿಎ ಎಂಟು ವರ್ಷಗಳ ಅಧಿಕಾರದಲ್ಲಿ, ಕನಿಷ್ಠ 124 ಪ್ರಮುಖ ನಾಯಕರು ಸಿಬಿಐ ತನಿಖೆಯನ್ನು ಎದುರಿಸಿದ್ದು, ಅವರಲ್ಲಿ 118 ನಾಯಕರು ವಿರೋಧ ಪಕ್ಷದವರೇ ಆಗಿದ್ದಾರೆ. ಅಂದರೆ ಇದು ಶೇ.95ರಷ್ಟು. ಸಿಬಿಐ ಕೊಕ್ಕೆಗೆ ಸಿಕ್ಕಿದ ನಾಯಕ ಪಕ್ಷಾಂತರ ಮಾಡಿದೊಡನೆಯೇ ಆತನ ವಿರುದ್ಧದ ಪ್ರಕರಣಗಳನ್ನು ಸಿಬಿಐ ಹಿಂದೆೆಗೆದುಕೊಳ್ಳುವುದು ಯುಪಿಎ ಅವಧಿಯಲ್ಲೂ ಇತ್ತು. ಎನ್‌ಡಿಎ ಾಲದಲ್ಲೂ ಎಗ್ಗಿಲ್ಲದೆ ಮುಂದುವರಿದಿದೆ.

‘‘ಪಂಜರದ ಗಿಣಿ ತನ್ನ ಮಾಲಕನ ಧ್ವನಿಯಲ್ಲಿ ಮಾತನಾಡುತ್ತಿದೆ.’’ - ಇದು 2013ರಲ್ಲಿ ಸಿಬಿಐ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದ ಮಾತು. ಆಗ ಕೇಂದ್ರದಲ್ಲಿ ಯುಪಿಎ ಸರಕಾರವಿತ್ತು. 2013ರ ಮೇ ತಿಂಗಳಲ್ಲಿ ಅನೇಕ ಭ್ರಷ್ಟಾಚಾರ ಹಗರಣಗಳು ನಡೆದ ಹೊತ್ತಿನಲ್ಲಿ ಸಿಬಿಐ ನಡೆ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇೃತ್ವದ ಪೀಠವು ಹೇಳಿದ ಮಾತಿದು.

ಆದರೆ ಒಂದು ವಿಚಾರ ಗಮನಿಸಬೇಕು. ತನ್ನ 10 ವರ್ಷಗಳ ಆಡಳಿತದಲ್ಲಿ ಯುಪಿಎ ಸರಕಾರ ಸಿಬಿಐ ತನಿಖೆಗೆ ಒಳಪಡಿಸಿದ್ದ 72 ನಾಯಕರುಗಳಲ್ಲಿ 29 ನಾಯಕರು ಕಾಂಗ್ರೆಸ್ ಅಥವಾ ಡಿಎಂಕೆ ಯಂಥ ಅದರ ಮೈತ್ರಿಪಕ್ಷಗಳ ನಾಯಕರಾಗಿದ್ದರು. ಅಷ್ಟರ ಮಟ್ಟಿಗೆ ಯುಪಿಎ ಅವಧಿಯಲ್ಲಿ ಪಾರದರ್ಶಕತೆಯಿತ್ತು. ಆದರೆ ಎನ್‌ಡಿಎ ಅವಧಿಯಲ್ಲಿ ಸಿಬಿಐ ಬಲೆಗೆ ಬಿದ್ದವರೆಲ್ಲ ಎನ್‌ಡಿಎಗೆ ಹೊರತಾದ ಪಕ್ಷಗಳ ನಾಯಕರೇ. ಬಿಜೆಪಿಯ ಆರು ನಾಯಕರು ಮಾತ್ರವೇ ಸಿಬಿಐ ತನಿಖೆ ಎದುರಿಸುತ್ತಿರುವುದು.

ಯುಪಿಎ ಅವಧಿಯಲ್ಲಿ ಸಿಬಿಐ ತನಿಖೆಗೆ ಒಳಗಾಗಿದ್ದ 43 ಪ್ರತಿಪಕ್ಷ ನಾಯಕರಲ್ಲಿ 12 ಮಂದಿ ಬಿಜೆಪಿಯವರೇ ಆಗಿದ್ದರು. ಆಗ ಗುಜರಾತ್ ಮಂತ್ರಿಯಾಗಿದ್ದ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿತರಾಗಿದ್ದರು. ಬಿ.ಎಸ್. ಯಡಿಯೂರಪ್ಪ, ಗಾಲಿ ಜನಾರ್ದನ ರೆಡ್ಡಿ, ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಇವರೆಲ್ಲ ಸಿಬಿಐ ತನಿಖೆ ಎದುರಿಸಿದವರೇ. 2012ರ 2ಜಿ ಸ್ಪೆಕ್ಟ್ರಮ್ ಹಂಚಿಕೆ ತನಿಖೆಯಲ್ಲಿ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ವಿರುದ್ಧ ಅವರ ಸಾವಿನ ನಂತರವೂ ಸಿಬಿಐ ತನಿಖೆ ಮುಂದುವರಿಸಿತ್ತು. ಎನ್‌ಡಿಎ ಅವಧಿಯಲ್ಲಿ 2014ರಿಂದ ಸಾಲಾಗಿ ರಾಜಕೀಯ ನಾಯಕರ ವಿರುದ್ಧ ಸಿಬಿಐ ತನಿಖೆ ಶುರುವಾಯಿತು. ಈ ಅವಧಿಯಲ್ಲಿ ಸಿಬಿಐ ಕೆಂಗಣ್ಣಿಗೆ ಗುರಿಯಾದವರಲ್ಲಿ ಮೊದಲ ಸ್ಥಾನದಲ್ಲಿದ್ದದ್ದು ಟಿಎಂಸಿ ನಾಯಕರು. ಅವರ ಸಂಖ್ಯೆ ಒಟ್ಟು 30. ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ನ 26 ನಾಯಕರು. ಕಾಂಗ್ರೆಸ್‌ನ ಪ್ರಮುಖ ನಾಯಕರುಗಳಾದ ಸೋನಿಯಾ ಗಾಂಧಿ, ಅಶೋಕ್ ಗೆಹ್ಲೋಟ್, ಕಮಲ್ ನಾಥ್, ಕ್ಯಾಪ್ಟನ್ ಅಮರೀಂದರ್ ಸಿಂಗ್ ಮೊದಲಾದವರ ಸಂಬಂಧಿಗಳ ವಿರುದ್ಧವೂ ಸಿಬಿಐ ತನಿಖೆ ನಡೆದಿತ್ತು. ಟಿಎಂಸಿ ಮತ್ತು ಕಾಂಗ್ರೆಸ್ ನಾಯಕರ ಬಳಿಕ ಎನ್‌ಡಿಎ ಅವಧಿಯಲ್ಲಿ ಸಿಬಿಐ ತನಿಖೆಗೆ ಒಳಗಾದವರು ಆರ್‌ಜೆಡಿ ಮತ್ತು ಬಿಜೆಡಿ ನಾಯಕರು. ಎರಡೂ ಪಕ್ಷಗಳ ತಲಾ 10 ನಾಯಕರನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು. ಹೀಗೆ ಈ ಎರಡೂ ಪಕ್ಷಗಳ ನಾಯಕರು ತನಿಖೆಗೆ ಒಳಪಟ್ಟ ಅವಧಿಯಲ್ಲಿ ಆ ಪಕ್ಷಗಳು ಕ್ರಮವಾಗಿ ಬಿಹಾರ ಮತ್ತು ಒಡಿಶಾಗಳಲ್ಲಿ ಪ್ರತಿಪಕ್ಷ ಸ್ಥಾನದಲ್ಲಿದ್ದವು. ವೈಎಸ್‌ಆರ್‌ಸಿಪಿಯ 6 ನಾಯಕರು, ಬಿಎಸ್ಪಿಯ ಐವರು, ಟಿಡಿಪಿಯ ಐವರು, ಎಎಪಿಯ ನಾಲ್ವರು, ಎಸ್ಪಿಯ ನಾಲ್ವರು, ಎಐಎಡಿಎಂಕೆಯ ನಾಲ್ವರು, ಸಿಪಿಎಂನ ನಾಲ್ವರು, ಎನ್‌ಸಿಪಿಯ ಮೂವರು, ಎನ್‌ಸಿಯ ಇಬ್ಬರು, ಡಿಎಂಕೆಯ ಇಬ್ಬರು, ಪಿಡಿಪಿಯ ಒಬ್ಬರು, ಟಿಆರ್‌ಎಸ್‌ನ ಒಬ್ಬರು ಹಾಗೂ ಪಕ್ಷೇತರ ಒಬ್ಬರು ಸಿಬಿಐ ತನಿಖೆಗೆ ಒಳಗಾಗಿದ್ದರು.

ಜಾರಿ ನಿರ್ದೇಶನಾಲಯದ ಕಥೆಯೂ ಇದಕ್ಕಿಂತ ಭಿನ್ನವಿಲ್ಲ. ಕಳೆದ 17 ವರ್ಷಗಳಲ್ಲಿ ಕ್ರಿಮಿನಲ್ ಕಾನೂನನ್ನು ಜಾರಿಗೊಳಿಸಿದಾಗಿನಿಂದ, ಜಾರಿ ನಿರ್ದೇಶನಾಲಯವು 5,400 ಕ್ಕೂ ಹೆಚ್ಚು ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲಿಸಿದೆ. ಆದರೆ ಇದುವರೆಗೆ ಅದಕ್ಕೆ ಅಪರಾಧಿಗಳೆಂದು ಘೋಷಿಸಲು ಸಾಧ್ಯವಾಗಿರುವುದು 23 ಜನರ ವಿರುದ್ಧ ಮಾತ್ರವೇ. ಈ.ಡಿ. ದಾಳಿಗಳಲ್ಲಿ ನಾಟಕೀಯ ಹೆಚ್ಚಳವಾಗಿದ್ದರೂ ಅಪರಾಧ ಘೋಷಣೆ ಪ್ರಮಾಣವು ಶೇ. 0.5ಕ್ಕಿಂತಲೂ ಕಡಿಮೆಯಾಗಿದೆ.

2004ರಿಂದ 2014ರವರೆಗಿನ ಅವಧಿಗೆ ಹೋಲಿಸಿಕೊಂಡರೆ 2014ರಿಂದ 2022ರ ಅವಧಿಯಲ್ಲಿ ಈ.ಡಿ. ದಾಳಿ 27 ಪಟ್ಟು ಹೆಚ್ಚಿದೆ.

ಯುಪಿಎ ಅವಧಿಯಲ್ಲಿ 112 ದಾಳಿಗಳನ್ನು ಈ.ಡಿ. ನಡೆಸಿತ್ತು. 5,316.40 ಕೋಟಿ ರೂ. ಅಕ್ರಮದ ವಿಚಾರ ಪ್ರಸ್ತಾಪವಾಗಿತ್ತು. 104 ಪ್ರಾಸಿಕ್ಯೂಷನ್ ದೂರುಗಳು ದಾಖಲಾಗಿದ್ದವು. ಆದರೆ ವಿಚಾರಣೆ ವೇಳೆ ಯಾವುದೇ ಆರೋಪಿಗಳ ವಿರುದ್ಧವೂ ಮನಿ ಲಾಂಡರಿಂಗ್ ಆರೋಪ ಸಾಬೀತಾಗಲಿಲ್ಲ.

ಹಳೇ ಪ್ರಕರಣಗಳಲ್ಲಿನ ಬಾಕಿ ಇರುವ ತನಿಖೆಯ ವಿಲೇವಾರಿ ಮತ್ತು ತನಿಖೆ ಪೂರ್ಣಗೊಳಿಸುವುದಕ್ಕಾಗಿ ಕಳೆದ ಎಂಟು ವರ್ಷಗಳಲ್ಲಿ ಅಂದರೆ ಬಿಜೆಪಿ ಆಡಳಿತದಲ್ಲಿ 3,010 ದಾಳಿಗಳನ್ನು ಈ.ಡಿ. ನಡೆಸಿದೆ. 99,356 ಕೋಟಿ ರೂ. ಅಕ್ರಮದ ವಿಚಾರಕ್ಕೆ ಸಂಬಂಧಿಸಿದ ದಾಳಿಗಳಾಗಿವೆ ಇವು. 888 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಾಗಿದೆ. 23 ಆರೋಪಿಗಳ ವಿರುದ್ಧವಷ್ಟೇ 869.31 ಕೋಟಿ ರೂ. ಅಕ್ರಮ ವಿಚಾರವಾಗಿ ಆರೋಪ ಸಾಬೀತಾಗಿದೆ.

ಅರ್ಥ ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಕಳೆದ ಜುಲೈನಲ್ಲಿ ರಾಜ್ಯಸಭೆಗೆ ನೀಡಿದ ಮಾಹಿತಿ ಇದು. ದಾಳಿಗಳ ಪ್ರಮಾಣ ಇಷ್ಟೊಂದು ಪಟ್ಟು ಹೆಚ್ಚಿದ್ದರೂ ಅಪರಾಧ ಸಾಬೀತು ಮಾಡುವಲ್ಲಿ ಈ.ಡಿ. ಸೋಲುವುದೇಕೆ? ಈ ಪ್ರಶ್ನೆಗೆ ಉತ್ತರ ತಿಳಿಯುವುದಕ್ಕೆ ಮೊದಲು 2022ರಲ್ಲಿನ ಜಾರಿ ನಿರ್ದೇಶನಾಲಯದ ಹೈಪ್ರೊಫೈಲ್ ಪ್ರಕರಣ ಗಳನ್ನು ಒಮ್ಮೆ ಗಮನಿಸೋಣ.

* ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರರು ಆರೋಪಿಗಳಾಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಮತ್ತಿತರೆಡೆಗಳಲ್ಲಿ ದಾಳಿ. 2013ರಲ್ಲಿ ಸುಬ್ರಮಣಿಯನ್ ಸ್ವಾಮಿ ದಾಖಲಿಸಿದ ಖಾಸಗಿ ದೂರಿನ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ತನಿಖೆಯ ಮುಂದುವರಿಕೆಯಾಗಿ ಈ.ಡಿ. ಪ್ರವೇಶ.

* ಮರಳು ಗಣಿಗಾರಿಕೆ ಪ್ರಕರಣದಲ್ಲಿ ಪಂಜಾಬ್ ಮಾಜಿ ಸಿಎಂ ಚರಣ್‌ಜಿತ್ ಸಿಂಗ್ ಚಿನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಆಸ್ತಿ ಮೇಲೆ ದಾಳಿ. ಭೂಪಿಂದರ್ ಸಿಂಗ್ ಬಂಧನ, 2022ರ ಬಹುದೊಡ್ಡ ದಾಳಿಗಳಲ್ಲಿ ಇದು ಒಂದು.

* ಜಾರ್ಖಂಡ್ ಗಣಿಗಾರಿಕೆ ಪ್ರಕರಣದಲ್ಲಿ ಸಿಎಂ ಹೇಮಂತ್ ಸೊರೇನ್ ಆಪ್ತ ಸಹಾಯಕರಾದ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ನಿವಾಸದ ಮೇಲೆ ಮನಿ ಲಾಂಡರಿಂಗ್ ಆರೋಪ ಸಂಬಂಧ ದಾಳಿ. 20 ಕೋಟಿ ರೂ. ವಶ, ಪೂಜಾ ಬಂಧನ.

* ಪಶ್ಚಿಮ ಬಂಗಾಳದ ಎಸ್‌ಎಸ್‌ಸಿ ನೇಮಕಾತಿ ಹಗರಣದಲ್ಲಿ ಬಂಗಾಳ ಸಚಿವ ಪಾರ್ಥಾ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸಗಳ ಮೇಲೆ ದಾಳಿ, ಆಭರಣ, 50 ಕೋಟಿ ನಗದು ವಶ. ಬಂಧನ.

* ಮನಿ ಲಾಂಡರಿಂಗ್ ಕೇಸ್‌ನಲ್ಲಿ ಆಪ್ ನಾಯಕ, ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಬಂಧನ.

* ಚೈನೀಸ್ ವೀಸಾ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವಶಕ್ಕೆ.

* ಭೂ ಅವ್ಯವಹಾರ ಆರೋಪದಲ್ಲಿ ಶಿವಸೇನಾ ನಾಯಕ ಸಂಜಯ್ ರಾವುತ್ ನಿವಾಸದ ಮೇಲೆ ದಾಳಿ, ಬಂಧನ.

* 415 ಕೋಟಿ ರೂ. ಮೌಲ್ಯದ ಆಸ್ತಿಯ ಯಸ್ ಬ್ಯಾಂಕ್-ಡಿಎಚ್‌ಇಎಲ್ ವಂಚನೆ ಪ್ರಕರಣದಲ್ಲಿ ಸಂಜಯ್ ಛಾಬ್ರಿಯಾ, ಅವಿನಾಶ್ ಭೋಸ್ಲೆ ಬಂಧನ.

* ದಾವೂದ್ ಇಬ್ರಾಹೀಂನ ಡಿ-ಕಂಪೆನಿ ಜೊತೆಗಿನ ಅಕ್ರಮ ಹಣ ವರ್ಗಾವಣೆ ಮತ್ತು ಆಸ್ತಿ ವ್ಯವಹಾರ ಸಂಬಂಧ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಆಸ್ತಿ ಮೇಲೆ ದಾಳಿ, ಬಂಧನ.

* ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಅವ್ಯವಹಾರ ಸಂಬಂಧ ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರುಕ್ ಅಬ್ದುಲ್ಲಾ ವಿರುದ್ಧ ಪ್ರಕರಣ.

ಇವಿಷ್ಟೂ ಪ್ರಕರಣಗಳಲ್ಲಿ ಈ.ಡಿ. ಅಬ್ಬರ ನೋಡಿದ್ದೇವೆ. ದಿನ ಬೆಳಗಾದರೆ ಅಲ್ಲೊಬ್ಬ ರಾಜಕಾರಣಿ, ಇಲ್ಲೊಬ್ಬ ಉದ್ಯಮಿ ಹೀಗೆ ನಿರಂತರ ಈ.ಡಿ. ದಾಳಿಯ ಸುದ್ದಿಗಳನ್ನು ಟಿವಿ ಚಾನೆಲ್‌ಗಳು ದಿನವೆಲ್ಲ ಬಿತ್ತರಿಸುತ್ತವೆ. ಆದರೆ ಅಪರಾಧ ಸಾಬೀತಿನ ಪ್ರಮಾಣ ಕಡಿಮೆ ಏಕೆ ಎಂದು ಅವು ಪ್ರಶ್ನಿಸುವುದೇ ಇಲ್ಲ. ಆದರೆ ಉತ್ತರ ಸ್ಪಷ್ಟ. ಇಲ್ಲಿ ಅಪರಾಧ ಸಾಬೀತುಪಡಿಸುವುದಕ್ಕಿಂತ ಹೆಚ್ಚಾಗಿ ರಾಜಕೀಯ ಪ್ರತಿಸ್ಪರ್ಧಿಗಳು, ಭಿನ್ನಮತೀಯರನ್ನು ಬೆದರಿಸುವುದಷ್ಟೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಉದ್ದೇಶ. ಸರಕಾರದ ಆ ಉದ್ದೇಶ ಸಾಧಿಸುವುದಕ್ಕೆ ಈ.ಡಿ.ಯಂಥ ತನಿಖಾ ಸಂಸ್ಥೆ ಒಂದು ಅಸ್ತ್ರ ಮಾತ್ರ. ಕಳೆದ ಎಂಟು ವರ್ಷಗಳಲ್ಲಿ ಈ.ಡಿ.ಸ್ಕಾನರ್‌ಗೆ ಒಳಗಾಗಿರುವ ರಾಜಕೀಯ ನಾಯಕರು ಯಾರು ಎಂಬುದನ್ನು ಗಮನಿಸಿದರೆ, ಈ.ಡಿ. ದಾಳಿಯ ಉದ್ದೇಶ ಅರ್ಥವಾಗುತ್ತದೆ.

ಬಿಜೆಪಿಗೆ ಸೇರುವ ಪ್ರತಿಪಕ್ಷ ನಾಯಕರನ್ನು ಆರೋಪಗಳಿಂದ ಕೈಬಿಡುವುದು, ಚುನಾವಣೆ ಸಂದರ್ಭ ಪ್ರತಿಸ್ಪರ್ಧಿ ಪಕ್ಷಗಳ ನಾಯಕರ ಮೇಲೆ ಸಿಬಿಐ ದಾಳಿ ಮಾಡಿಸುವುದು ಈಗ ವಾಡಿಕೆಯಾಗಿದೆ.

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಹಿರಿಯ ಕಾಂಗ್ರೆಸ್ ನಾಯಕ , ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಸಹಿತ ಹತ್ತು ಹಲವು ನಾಯಕರು ವಿಪಕ್ಷದಲ್ಲಿದ್ದು ತನಿಖೆ, ಬಂಧನ ಎದುರಿಸಿ ಬಳಿಕ ಬಿಜೆಪಿ ಸೇರಿ ಎಲ್ಲ ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ.

 ಇದಕ್ಕಿಂತ ಹೆಚ್ಚು ಲಜ್ಜೆಗೇಡಿ ನಡೆ ಇನ್ನೊಂದಿರಲಾರದು. ಈ.ಡಿ. ರಾಜಕೀಯ ಕಿರುಕುಳದ ಸಾಧನವಾಗಿ ಬಳಕೆಯಾಗುತ್ತಿದೆ ಎಂಬುದು ನಿಜ, ಕಳೆದ ಎಂಟು ವರ್ಷಗಳಲ್ಲಂತೂ ಅದರ ದುರುಪಯೋಗದ ಪ್ರಮಾಣಕ್ಕೆ ಸಾಟಿಯೇ ಇಲ್ಲ.

ಎಲ್ಲರಿಗೂ ಈ.ಡಿ. ಭಯ ತುಂಬಾ ಹೆಚ್ಚಾಗಿದೆ. ಏಕೆಂದರೆ ವಿಚಾರಣೆಯ ಸಮಯದಲ್ಲಿ ಆರೋಪಿಯನ್ನು ಸ್ವಯಂ ದೋಷಾ ರೋಪ ಮಾಡುವಂತೆ ಒತ್ತಾಯಿಸಲು ವಿಶೇಷ ಅಧಿಕಾರವನ್ನು ಅದು ಹೊಂದಿದೆ. ಈ ಅಧಿಕಾರವನ್ನು ಅಸಾಂವಿಧಾನಿಕ ಎಂದು ಪ್ರಶ್ನಿಸಲಾಗಿದ್ದರೂ, ಸುಪ್ರೀಂ ಕೋರ್ಟ್ ಈಗ ಅದರ ಸಿಂಧುತ್ವವನ್ನು ಎತ್ತಿಹಿಡಿದಿದೆ. ವಿಚಾರಣೆಯ ಸಮಯದಲ್ಲಿ ತೆಗೆದುಕೊಂಡ ಹೇಳಿಕೆಗಳನ್ನು ಸಾಕ್ಷವಾಗಿ ಬಳಸಬಹುದಾಗಿದೆ. ಇದು ಸಾಮಾನ್ಯ ಕ್ರಿಮಿನಲ್ ಕಾನೂನು ಅನುಮತಿಸುವುದಿಲ್ಲ ಏಕೆಂದರೆ ಇದು ಮೂಲಭೂತವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಈ.ಡಿ.ಯ ಅಸ್ತಿತ್ವವಿರುವುದೇ ಅದು ರಾಜಕೀಯವಾಗಿ ಬಳಕೆಯಾಗುತ್ತಿರುವಲ್ಲಿ. ಆದರೆ ವೃತ್ತಿಪರವಾಗಿ ಅದಕ್ಕೆ ಸ್ವಂತ ಬಲವಿಲ್ಲ ಎಂಬುದಕ್ಕೆ ಅಪರಾಧ ಸಾಬೀತಿನಲ್ಲಿ ಅದು ಸೋಲುತ್ತಿರುವುದೆೀ ಸಾಕ್ಷಿ ಎಂಬುದು ಪರಿಣಿತರ ಅಭಿಮತ.

ಆರಂಭದ ವರ್ಷಗಳಲ್ಲಿ ಅಪಾರ ಜನ ವಿಶ್ವಾಸ ಗಳಿಸಿದ್ದ ಸಿಬಿಐ ಬರಬರುತ್ತಾ ರಾಯರ ಕುದುರೆ ಕತ್ತೆಯಾಯಿತು ಎಂಬ ಸ್ಥಿತಿಗೆ ಮುಟ್ಟಿತು. ಅತಿಯಾದ ರಾಜಕೀಯ ಹಸ್ತಕ್ಷೇಪಗಳು ಸಿಬಿಐನಲ್ಲಿರುವುದನ್ನು ಅದರ ಹಿಂದಿನ ಕೆಲವು ಮುಖ್ಯಸ್ಥರುಗಳೇ ಬಹಿರಂಗಪಡಿಸಿದ್ದಿದೆ. ಅಂಥವರ ಪ್ರಕಾರ, ಸ್ವಜನ ಪಕ್ಷಪಾತ, ನಿರ್ವಹಣೆಯಲ್ಲಿ ನ್ಯೂನತೆ, ಭ್ರಷ್ಟಾಚಾರ ಇವೆಲ್ಲವೂ ಸಿಬಿಐನ ಭಾಗವೇ ಆಗಿಬಿಟ್ಟಿವೆ. ಸಿಬಿಐನ ಜಂಟಿ ನಿರ್ದೇಶಕರಾಗಿದ್ದ ಬಿ.ಆರ್. ಲಾಲ್ ಅವರು ‘ಹೂ ಒನ್ಸ್ ಸಿಬಿಐ’ ಎಂಬ ತಮ್ಮ ಪುಸ್ತಕದಲ್ಲಿ, ತನಿಖೆ ಯನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಹಳಿತಪ್ಪಿಸುವುದು ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸಿದ್ದಾರೆ.

ಎನ್‌ಐಎ ನಡೆಸುವ ತನಿಖೆ, ದಾಳಿ, ಬಂಧನಗಳ ಬಗ್ಗೆಯೂ ವ್ಯಾಪಕ ಆರೋಪಗಳು, ದೂರುಗಳು ಕೇಳಿ ಬಂದಿವೆ. ಅನುಮಾನ ಗಳು ವ್ಯಕ್ತವಾಗಿವೆ. ರಾಜಕೀಯ ಲೆಕ್ಕಾಚಾರ, ಸ್ಥಳೀಯ ಒತ್ತಡ ಇತ್ಯಾದಿಗಳನ್ನು ನೋಡಿ ರಾಜಕೀಯ ವಿರೋಧಿಗಳು, ಟೀಕಾಕಾರರು, ಸಾಮಾಜಿಕ ಕಾರ್ಯಕರ್ತರ, ಸಂಘಟನೆಗಳ ಜನರಿಗೆ ಸಂಬಂಧಿಸಿದ ಕೇಸುಗಳನ್ನು ಹಿಂದೆ ಮುಂದೆ ನೋಡದೆ ಎನ್‌ಐಎ ಗೆ ವಹಿಸಿ ಬಿಡುವುದು , ಅದು ದಾಳಿ ನಡೆಸಿ ಕೆಲವರನ್ನು ಬಂಧಿಸುವುದು, ಅದನ್ನು ಒಂದಷ್ಟು ಮೀಡಿಯಾಗಳು ದೊಡ್ಡ ಸುದ್ದಿ ಮಾಡುವುದು, ಬಿಜೆಪಿ ನಾಯಕರು ತಮ್ಮ ಬೆನ್ನನ್ನು ತಾವೇ ತಟ್ಟಿ ಕೊಳ್ಳುವುದು ಇಷ್ಟಕ್ಕೇ ಎನ್‌ಐಎ ಸೀಮಿತವಾಗಿ ಬಿಟ್ಟಿದೆ. ನಿಜವಾದ ಆರೋಪಿಗಳನ್ನು ಹಿಡಿದು ಶಿಕ್ಷಿಸುವು ದು ಅದರ ಆದ್ಯತೆಯೇ ಅಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top