-

ಹಗರಣಗಳ ಆಗರ ಉನ್ನತ ಶಿಕ್ಷಣ

-

ಉನ್ನತ ಶಿಕ್ಷಣದ ಮೂಲಕ ದೇಶದ ಬೆಳಕಾಗಬೇಕಿದ್ದ ವಿಶ್ವವಿದ್ಯಾನಿಲಯಗಳಲ್ಲಿ ಕೊಳಕು ತುಂಬಿಹೋಗಿದೆ. ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಕುಲಪತಿಯಂಥ ಹುದ್ದೆಗಳು ಕೋಟಿ ಕೋಟಿ ಲೆಕ್ಕದಲ್ಲಿ ಮಾರಾಟಕ್ಕಿವೆ. ಡಿಗ್ರಿಗಳ ವ್ಯಾಪಾರ ನಡೆಯುತ್ತಿದೆ. ಅತೀ ಅಪಾಯಕಾರಿ ರಾಜಕಾರಣ ಅಬ್ಬರಿಸುತ್ತಿದೆ. ಇದೆಲ್ಲದರ ಮಧ್ಯೆ ಶಿಕ್ಷಣದ ಗುಣಮಟ್ಟ ಅಧೋಗತಿಗಿಳಿದಿದೆ. ವಿವಿಗಳಲ್ಲಿ ಶಿಕ್ಷಣ ವೊಂದನ್ನು ಬಿಟ್ಟು ಬೇರೆಲ್ಲ ಇದೆ ಎನ್ನುವಂಥ ಸ್ಥಿತಿ ತಲೆದೋರಿದೆ.

ಹತ್ತು ದಿನಗಳ ಹಿಂದೆ ರಾಜ್ಯ ವಿಧಾನಸಭೆಯಲ್ಲಿ ಒಂದು ಮಹತ್ವದ ಮತ್ತು ಅಷ್ಟೇ ಗಂಭೀರ ಚರ್ಚೆ ನಡೆಯಿತು. ಅದು ವಿಶ್ವವಿದ್ಯಾನಿಲಯ ಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಪೂರ್ತಿಯಾಗಿ ಕುಸಿದಿರುವ ಕುರಿತದ್ದು. ಸರಕಾರ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲೇ ಯಾವುದೂ ಸರಿಯಿಲ್ಲದೇ ಇರುವುದನ್ನು ಶಾಸಕರೇ ಪಕ್ಷಭೇದ ಮರೆತು ಖಂಡಿಸಿದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ತಿದ್ದುಪಡಿ ಮಸೂದೆ- 2022ಕ್ಕೆ ಅಂಗೀಕಾರ ದೊರೆಯುವ ಮೊದಲು ನಡೆದ ಚರ್ಚೆಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿನ ಎಲ್ಲ ಅನಾಚಾರ, ಅತಿರೇಕಗಳೂ ಚರ್ಚೆಗೆ ಬಂದವೆಂಬುದು ಗಮನಾರ್ಹ. ಶೈಕ್ಷಣಿಕ ವಾತಾವರಣವೇ ಇಲ್ಲವಾಗಿ, ಗುಣಮಟ್ಟ ಪೂರ್ತಿ ಕುಸಿದಿರುವುದರ ಬಗ್ಗೆ ಶಾಸಕರೇ ಕಳವಳ ವ್ಯಕ್ತಪಡಿಸಿದರು ಮಾತ್ರವಲ್ಲ, ಅಲ್ಲಿನ ಭ್ರಷ್ಟಾಚಾರದ ಬಗ್ಗೆಯೂ ಧ್ವನಿಯೆ ತ್ತಿದರು. ವಿಶ್ವವಿದ್ಯಾನಿಲಯಗಳಲ್ಲಿನ ನೇಮಕಾತಿ, ಭಡ್ತಿ, ಖರೀದಿ ಈ ಯಾವ ಪ್ರಕ್ರಿಯೆಗಳೂ ಅವ್ಯವಹಾರದಿಂದ ಹೊರತಾಗಿಲ್ಲವೆಂಬುದು ಚರ್ಚೆಗೆ ಬಂತು. ಕುಲಪತಿಯಂಥ ಹುದ್ದೆಯೊಂದು 5 ಕೋಟಿಯಿಂದ 20 ಕೋಟಿ ರೂ. ವರೆಗೂ ಮಾರಾಟವಾಗುತ್ತಿರುವುದು, ಅನುಭವ ಮತ್ತು ಅರ್ಹತೆಯೇ ಇಲ್ಲದವರು ನೇಮಕಗೊಳ್ಳುತ್ತಿರುವುದು ಕಟು ವಿಮರ್ಶೆಗೆ ಒಳಗಾಯಿತು. ಆಯ್ಕೆ ಸಮಿತಿಯೇ ಇಲ್ಲದೆ ನೇಮಕ ಪ್ರಕ್ರಿಯೆ ನಡೆಯುತ್ತಿರುವುದನ್ನು ಶಾಸಕರು ಕಟುವಾಗಿ ಟೀಕಿಸಿದರು. NET, SET ಪಾಸಾಗದೇ ಇರುವವರು, ಪಿಎಚ್.ಡಿ.ಯನ್ನೇ ಮಾಡದವರು ನೇಮಕವಾಗುತ್ತಿರುವುದರ ಬಗ್ಗೆ, ಭಡ್ತಿಯಲ್ಲಿ ಯುಜಿಸಿ ನಿಯಮಗಳು, ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ ಮತ್ತು ಸರಕಾರಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿರುವ ಬಗ್ಗೆ ಶಾಸಕರು ಪ್ರಶ್ನೆಗಳನ್ನೆತ್ತಿದರು. ಬಹಳಷ್ಟು ಶಾಸಕರೇ ಕುಲಪತಿ ಹುದ್ದೆಗೆ ಹೆಸರು ಶಿಫಾರಸು ಮಾಡುವ ಬಗ್ಗೆಯೂ, ಕುಲಪತಿಯು ಕುಲಾಧಿಪತಿಯಾದ ರಾಜ್ಯಪಾಲರಿಗೆ ಸುಳ್ಳು ವರದಿ ಸಲ್ಲಿಸಿ ಅಕ್ರಮಗಳನ್ನೆಲ್ಲ ಸಕ್ರಮ ಗೊಳಿಸುವುದರ ಬಗ್ಗೆಯೂ ಪ್ರಸ್ತಾಪವಾಯಿತು. 26 ವಿವಿಗಳಲ್ಲಿ ಎಷ್ಟೋ ಅಧ್ಯಾಪಕ ಹುದ್ದೆಗಳು ಭರ್ತಿಯಾಗದಿರುವ ವಿಚಾರ, ಖಾಸಗಿ ಡೀಮ್ಡ್ ವಿವಿಗಳು ಡೊನೇಷನ್ ತೆಗೆದುಕೊಳ್ಳುತ್ತಿರುವುದು ಮತ್ತು ಹೆಚ್ಚು ಅಂಕಕ್ಕಾಗಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಕಲ್ಪಿಸುತ್ತಿ ರುವುದು ಚರ್ಚೆಯಾಯಿತು. ಕಟ್ಟಡವೂ ಇಲ್ಲದ, ಅಧ್ಯಾಪಕರೂ ಇಲ್ಲದ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ವಿಚಾರವೂ ಪ್ರಸ್ತಾಪಕ್ಕೆ ಬಂತು. ಇದು ಕೇವಲ ಸಮಾಧಾನಗೊಳಿಸುವ ಮಸೂದೆ ಮಾತ್ರ ವಾಗಿದ್ದು, ಹೊಸ ಶಿಕ್ಷಣ ನೀತಿ ಕಾರ್ಯಕ್ರಮಗಳನ್ನು ಒದಗಿಸಲು ಸರಕಾರ ಅಸಮರ್ಥವೆಂಬ ಅಭಿಪ್ರಾಯ ವ್ಯಕ್ತವಾಯಿತು. ಮಸೂದೆ ಹಿಂದೆಗೆದುಕೊಳ್ಳಬೇಕೆಂಬ ಒತ್ತಾಯವೂ ಬಲವಾಗಿಯೇ ಕೇಳಿಬಂತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ರಾಜ್ಯ ವಿವಿಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಶೋಚನೀಯವಾಗಿದೆ. ರಾಜ್ಯದ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕೆನಡ ಮತ್ತಿತರ ದೇಶಗಳಿಗೆ ಹೋಗುತ್ತಿದ್ದಾರೆ ಎಂದರು. 

ಇದಿಷ್ಟೂ ವಿಚಾರಗಳು ರಾಜ್ಯದ ವಿವಿಗಳಲ್ಲಿನ ವಾಸ್ತವ ಎಷ್ಟು ಕಟುವಾದದ್ದಾಗಿದೆ ಮತ್ತು ಕರಾಳವಾದುದಾಗಿದೆ ಎಂಬುದಕ್ಕೆ ಸಾಕ್ಷಿ. ವಿಶ್ವವಿದ್ಯಾನಿಲಯ ಕಾಯ್ದೆ ರೂಪುಗೊಂಡು 22 ವರ್ಷಗಳಾಗಿರು ವುದರ ನಡುವೆಯೇ ಇದೀಗ ಎಲ್ಲಾ ಸವಾಲುಗಳನ್ನು ಎದುರಿಸಲು ಮತ್ತು ವಿವಿಗಳಲ್ಲಿನ ನೇಮಕಾತಿ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಪಾರದರ್ಶಕತೆ ಖಾತ್ರಿಪಡಿಸಿಕೊಳ್ಳಲು ಹೊಸ ವಿಶ್ವವಿದ್ಯಾನಿಲಯ ಕಾಯ್ದೆ ಯನ್ನು ಹೊರತರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಆದರೆ ಒತ್ತು ನೀಡಬೇಕಾಗಿರುವುದು ಕಾನೂನಿಗಿಂತ ಹೆಚ್ಚಾಗಿ ನೈತಿಕ ಧೋರಣೆಯೊಂದು ಮೂಡಬೇಕಾ ಗಿರುವ ಜರೂರಿನ ಬಗ್ಗೆ. ಇಡೀ ಶಿಕ್ಷಣ ವ್ಯವಸ್ಥೆಯೇ ಉದ್ಯಮವಾಗಿ ಮಾರ್ಪಾಡಾಗಿರುವ ಹೊತ್ತಿನಲ್ಲಿ ಉನ್ನತ ಶಿಕ್ಷಣದ ಕೇಂದ್ರಗಳಾದ ವಿವಿಗಳನ್ನು ಕೂಡ ವ್ಯವಹಾರದ ಭಾಗವಾಗಿಯೇ ನೋಡುವ ರಾಜಕಾರಣವೇ ಎಲ್ಲವನ್ನೂ ಭ್ರಷ್ಟಗೊಳಿಸಿರುವುದರ ಹಿಂದೆ ಇದೆ ಎಂಬುದು ತಿಳಿಯದೇ ಇರುವ ವಿಚಾರವೇನೂ ಅಲ್ಲ.

ವಿಶ್ವವಿದ್ಯಾನಿಲಯಗಳಲ್ಲಿನ ವ್ಯವಸ್ಥೆ ಕುಸಿದಿರುವುದರ ಚರ್ಚೆ ಯೇನೋ ನಡೆದರೂ, ಏಳು ಹೊಸ ವಿವಿಗಳ ಸ್ಥಾಪನೆಗೂ ವಿಧಾನ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಬೀದರ್, ಹಾವೇರಿ, ಕೊಡಗು, ಚಾಮರಾಜನಗರ, ಹಾಸನ, ಕೊಪ್ಪಳ ಹಾಗೂ ಬಾಗಲಕೋಟೆ ವಿವಿಗಳನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸುವ ವಿಚಾರಕ್ಕೆ ಒಪ್ಪಿಗೆ ದೊರೆತಿದೆ. ಆದರೆ ಪ್ರಶ್ನೆಯಿರುವುದು, ಈಗಿರುವ ವಿವಿಗಳ ಸ್ಥಿತಿಯೇ ಇಷ್ಟೊಂದು ಹದಗೆಟ್ಟಿರುವಾಗ ಇನ್ನು ಹೊಸ ವಿವಿಗಳ ಸ್ಥಾಪನೆಗೊಂದು ಘನತೆ ಗಾಂಭೀರ್ಯ ಬೇಡವೆ ಎಂಬುದರ ಕುರಿತು.

ದೇಶಾದ್ಯಂತದ ಮತ್ತು ಕೆಲವು ಹೊರದೇಶಗಳ ವಿದ್ಯಾರ್ಥಿಗಳೂ ಶಿಕ್ಷಣ ಪಡೆಯಲು ಆದ್ಯತೆ ನೀಡುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಪ್ರತೀ ವರ್ಷವೂ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳ ಸಾಲಿನಲ್ಲೂ ಕರ್ನಾಟಕ ಮುಂದಿದೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಸರಕಾರದ ವಿವಿಗಳಲ್ಲಿ ಮೂಲಸೌಕರ್ಯ ಕೊರತೆ ಢಾಳಾಗಿದೆ. ಬೋಧಕ ಸಿಬ್ಬಂದಿ ಅಗತ್ಯಕ್ಕಿಂತ ಕಡಿಮೆ. ಶೈಕ್ಷಣಿಕ ಗುಣಮಟ್ಟವಂತೂ ಪಾತಾಳಕ್ಕಿಳಿದಿದೆ. ಇದೆಲ್ಲಕ್ಕೆ ಸಾಕ್ಷಿಯೆಂಬಂತಿರುವ ಈಗಿರುವ ಹಲವು ವಿವಿಗಳ ಕಥೆಯೇನು ಎಂಬುದರ ಕುರಿತು ಕೆಲವು ವರದಿಗಳನ್ನು ಆಧರಿಸಿ ಸ್ಥೂಲ ನೋಟವನ್ನು ಕೊಡುವುದಾದರೆ,

ಅಕ್ರಮಗಳಲ್ಲಿ ಮುಳುಗಿರುವ ವಿವಿಗಳು:

ಬೆಂಗಳೂರು ವಿವಿಯನ್ನು ಸತತವಾಗಿ ಕಾಡುತ್ತಿರುವುದು ಕುಲಪತಿ ಮತ್ತು ಸಿಂಡಿಕೇಟ್ ಸದಸ್ಯರ ನಡುವಿನ ಘರ್ಷಣೆ. ಸದಾ ಒಂದಲ್ಲ ಒಂದು ವಿವಾದದ ಕರಿನೆರಳು ಆವರಿಸಿಯೇ ಇರುತ್ತದೆ. ನಿಧಿ ದುರು ಪಯೋಗದಂಥ ಅಕ್ರಮಗಳಿಂದಲೂ ಇದು ಸದಾ ಸುದ್ದಿಯಲ್ಲಿರುತ್ತದೆ. ಕುಲಪತಿ ನೇಮಕ, ಸಿಂಡಿಕೇಟ್ ಸದಸ್ಯರ ನಾಮಕರಣ ವಿಚಾರದಲ್ಲೂ ರಾಜಕೀಯ ಹಸ್ತಕ್ಷೇಪದ ಆರೋಪಗಳು ಇದ್ದೇ ಇರುತ್ತವೆ.

ಜೂನ್ 2022 - ಕುಲಪತಿ ವೇಣುಗೋಪಾಲ್ ಬೆಂಗಳೂರು ವಿವಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಇದರ ಹಿಂದೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ಕಮಿಷನ್ ವ್ಯವಹಾರ ಇರಬಹುದೆಂದು ಸಿಂಡಿಕೇಟ್ ಸದಸ್ಯರು ಗಂಭೀರ ಆರೋಪ ಮಾಡಿದ್ದರು.

ನವೆಂಬರ್ 2021 - 2019 ರ ಜೂನ್‌ನಲ್ಲಿ ಹೊರಡಿಸಲಾಗಿದ್ದ ಪಿಎಚ್.ಡಿ ಪ್ರವೇಶ ಅಧಿಸೂಚನೆಗೆ 2019ರ ಅಂತ್ಯಕ್ಕೆ ಪ್ರವೇಶ ಮುಗಿಯ ಬೇಕಿತ್ತು. ಆದರೆ 2021ರ ಅಂತ್ಯದವರೆಗೂ ಅದೇ ಅಧಿಸೂಚನೆಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತಿದೆ ಮಾತ್ರವಲ್ಲ, ಎರಡನೇ ಸುತ್ತಿಗೆ ಪಿಎಚ್‌ಡಿಗೆ ಪ್ರವೇಶ ಪಡೆದವರಲ್ಲಿ ಬಹುತೇಕ ಅಭ್ಯರ್ಥಿಗಳು ಅನರ್ಹ ರಾಗಿದ್ದಾರೆ ಎಂದು ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರೇ ಆರೋಪಿಸಿದ್ದರು.

ಜನವರಿ 2021 - 2020ರ ಸೆಪ್ಟಂಬರ್ ಮತ್ತು ಅಕ್ಟೋಬರ್‌ನಲ್ಲಿ ನಡೆದ ಬೆಂಗಳೂರು ವಿವಿ ಪದವಿ ಪರೀಕ್ಷೆಗಳಲ್ಲಿ 804 ಉತ್ತರ ಪತ್ರಿಕೆ ಗಳಲ್ಲಿನ ಅಂಕಗಳನ್ನು ತಿರುಚಲಾಗಿರುವ ಹಗರಣ ನಡೆದಿರುವುದು ಬಯಲಾಗಿತ್ತು. ಇದಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸುಮಾರು 30 ಲಕ್ಷ ಮೌಲ್ಯದ ಪುಸ್ತಕ ಖರೀದಿಗೆ ಸಂಬಂಧಿಸಿ ಅಕ್ರಮ ನಡೆದಿದೆ ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಆರೋಪಿಸಿದ್ದರು.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವೂ ವಿವಾದದಲ್ಲಿ ಸಿಲುಕಿಕೊಂಡಿದೆ. ಕುಲಸಚಿವ ಡಾ.ರಾಮಕೃಷ್ಣ ರೆಡ್ಡಿ ವಿರುದ್ಧ ಐದು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಕ್ಕಾಗಿ ಮತ್ತು ಎಲ್ಲಾ ಹುದ್ದೆಗಳಿಗೆ ಸಂಬಳ ಪಡೆಯುವ ಸಂಬಂಧ ದೂರು ಇದೆ. ಇದಲ್ಲದೆ, ಸ್ನಾತಕೋತ್ತರ ಪ್ರವೇಶ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಉದ್ದೇಶಪೂರ್ವಕವಾಗಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ತಿದ್ದಿದ ಆರೋಪದ ಮೇಲೆ ಸಿಬಿಐ ಆಗಿನ ಕುಲಪತಿ, ರಿಜಿಸ್ಟ್ರಾರ್ ಅಲ್ಲದೆ ಇತರ 30 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಶಿಫಾರಸು ಮಾಡಿತ್ತು.

ಯುಜಿಸಿಯಿಂದ ಮರು ಮಾನ್ಯತೆ ಪಡೆದ 1992ರಲ್ಲಿ ಸ್ಥಾಪನೆ ಯಾದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಅಧಿಕಾರಿಗಳ ನಡುವಿನ ಆಂತರಿಕ ಜಗಳ, ಹಣದ ದುರ್ಬಳಕೆ ಮತ್ತು ಅಕ್ರಮಗಳ ಆರೋಪಗಳ ಸುಳಿಯಲ್ಲಿ ಸಿಲುಕಿದೆ.

ಮಹಿಳಾ ವಿಶ್ವವಿದ್ಯಾನಿಲಯದಲ್ಲಿನ ನೇಮಕಾತಿಯಲ್ಲಿ ವಿವಿಯ ಮೊದಲ ಕುಲಪತಿಯಾಗಿದ್ದ ಸಯೀದಾ ಅಖ್ತರ್ ಬಹಳ ದೊಡ್ಡ ಪ್ರಮಾ ಣದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವುದನ್ನು ನ್ಯಾಯ ಮೂರ್ತಿ ಚಿನ್ನಪ್ಪ ಅಧ್ಯಕ್ಷತೆಯ ಏಕ ಸದಸ್ಯ ಆಯೋಗ ಪತ್ತೆ ಹಚ್ಚಿತ್ತು.

ತುಮಕೂರು ವಿವಿಯ ಹಿಂದಿನ ಉಪಕುಲಪತಿ ಒ. ಅನಂತರಾಮಯ್ಯ ವಿವಿ ಖಾತೆಯಲ್ಲಿ ಭಾರಿ ವೈಯಕ್ತಿಕ ಬಿಲ್‌ಗಳನ್ನು ಮಾಡಿರುವ ಆರೋಪಕ್ಕೆ ಗುರಿಯಾಗಿದ್ದರು. ಮೊಬೈಲ್ ಫೋನ್‌ಗೆ ರೂ.38,000, ಟೆಲಿವಿಷನ್ ಸೆಟ್ ರೂ.31,102 ಮತ್ತು ಗೃಹ ಕಚೇರಿಗೆ ಪೀಠೋಪಕರಣಗಳಿಗೆ ರೂ.4 ಲಕ್ಷ ಇವು ಅದರಲ್ಲಿ ಸೇರಿದ್ದವು..

ತುಮಕೂರು ವಿವಿಗೆ ಈ ವರ್ಷದ ಜುಲೈನಲ್ಲಿ ನೂತನ ಕುಲಪತಿ ಯಾಗಿ ಎಂ.ವೆಂಕಟೇಶ್ವರಲು ನೇಮಕಗೊಂಡಾಗ ಅದರ ಹಿಂದೆ ಅವರ ಆರ್ಯವೈಶ್ಯ ಸಮುದಾಯದ ಒತ್ತಡ ಹಾಗೂ ಸಂಘ ಪರಿವಾರದ ಒತ್ತಡವೂ ನೇಮಕಕ್ಕೆ ಕಾರಣ ಎಂದು ವರದಿಯಾಗಿತ್ತು.

ಇದೆಲ್ಲವೂ ವಿವಿ ಆಡಳಿತದಲ್ಲಿ ರಾಜಕೀಯ ಪ್ರಭಾವವು ಕೆಲಸ ಮಾಡುತ್ತಿರುತ್ತದೆ ಎಂಬುದಕ್ಕೆ ಸಾಕ್ಷಿ.

ರಾಜ್ಯದ ವಿವಿಗಳು ಮಾತ್ರವಲ್ಲ, ದೇಶಾದ್ಯಂತ ವಿವಿಗಳು ಒಂದಲ್ಲ ಒಂದು ಅಕ್ರಮದಲ್ಲಿ ತೊಡಗಿವೆ. ರಾಜಕಾರಣದ ಅನಾಚಾರದ ಆಡುಂ ಬೊಲವಾಗಿಯೂ ಅದೆಷ್ಟೋ ವಿವಿ ಕ್ಯಾಂಪಸ್‌ಗಳು ಮಾರ್ಪಟ್ಟಿವೆ.

ಹಲವಾರು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು.

ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳದ ಆರೋಪ ದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ತಮಿಳುನಾಡು ಕೃಷಿ ಕಾಲೇಜಿನ ಪ್ರೊಫೆಸರ್ ಒಬ್ಬರನ್ನು ಬಂಧಿಸಲಾಗಿತ್ತು. ಮಧುರೈ ಕಾಮರಾಜ್ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಚುನಾವಣೆ ಫಲಿತಾಂಶದ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷಾ ಅಕ್ರಮ ಮತ್ತು ಹಣಕ್ಕಾಗಿ ಅನರ್ಹರ ಭಡ್ತಿ ಆರೋಪವನ್ನು ಆಗಿನ ಕುಲಪತಿ ಎದುರಿಸಿದ್ದರು. ಇವೆಲ್ಲವೂ ಬೆಳಕಿಗೆ ಬಂದಿರುವ ದುರುಪಯೋಗ ಮತ್ತು ಭ್ರಷ್ಟಾಚಾರದ ಕೆಲವು ನಿದರ್ಶನಗಳು ಮಾತ್ರ. ಅಧ್ಯಾಪಕರ ನೇಮಕಾತಿಗಳು ಮತ್ತು ಭಡ್ತಿಗಳಿಗೆ ಸಂಬಂಧಿಸಿದಂತೆ, ತಮಿಳುನಾಡಿನ 18 ವಿಶ್ವವಿದ್ಯಾನಿಲಯ ಗಳು ಮತ್ತು 600 ಕಾಲೇಜುಗಳಲ್ಲಿ ಭ್ರಷ್ಟಾಚಾರವೇ ತುಂಬಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಕಾನೂನೇ ಇಲ್ಲವೆನ್ನುವಂಥ ಸ್ಥಿತಿಯಿರುವ ಉತ್ತರಪ್ರದೇಶವಂತೂ ಕ್ಯಾಂಪಸ್ ಹಿಂಸೆಗಳಿಗೂ ಅಷ್ಟೇ ಕುಖ್ಯಾತ. ಲಕ್ನೊದಲ್ಲಿ ಶಿಕ್ಷಕ-ಕಮ್-ಗುತ್ತಿಗೆದಾರನೊಬ್ಬನ ನಿರ್ಮಾಣ ಕಾರ್ಯವನ್ನು ಟೀಕಿಸಿದ್ದಕ್ಕಾಗಿ ಶಿಕ್ಷಣಾಧಿಕಾರಿಯನ್ನೇ ಗುಂಡಿಕ್ಕಿ ಕೊಲ್ಲಲಾಗಿತ್ತು.

ಉಜ್ಜಯಿನಿ ವಿಶ್ವವಿದ್ಯಾನಿಲಯದ ಅಡಿಯ ಕಾಲೇಜೊಂದರ ಪ್ರಾಧ್ಯಾಪಕ ಪ್ರೊ. ಎಚ್.ಎಸ್. ಸಬರ್ವಾಲ್ ಅವರನ್ನು ಎಬಿವಿಪಿ ಕಾರ್ಯಕರ್ತರು ಹಾಡಹಗಲೇ ಹೊಡೆದು ಕೊಂದಿದ್ದರು.

2005ರಲ್ಲಿ ಬರೇಲಿಯ ಮಹಾತ್ಮಾ ಜ್ಯೋತಿಬಾ ಫುಲೆ ವಿವಿ, ಜೌನ್ಪುರ್‌ನ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿವಿ, ಮೋದಿನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ಮತ್ತು ತಂತ್ರಜ್ಞಾನ ವಿವಿ ಮತ್ತು ಕಾನ್ಪುರದ ಚಂದ್ರಶೇಖರ್ ಆಝಾದ್ ಕೃಷಿ ಮತ್ತು ತಂತ್ರಜ್ಞಾನ ವಿವಿಗಳ ಕುಲಪತಿಗಳನ್ನು ಭ್ರಷ್ಟಾಚಾರ ಆರೋಪದ ಮೇಲೆ ರಾಜ್ಯಪಾಲರು ವಜಾಗೊಳಿಸಿದ್ದರು.

ಭ್ರಷ್ಟಾಚಾರದ ಮಹಾಮಾರಿಯ ದುಷ್ಪರಿಣಾಮಗಳು ಭಾರತೀಯ ಶೈಕ್ಷಣಿಕ ವಲಯದಲ್ಲಿ ಹೆಚ್ಚು ತೀವ್ರವಾಗಿ ಅನುಭವಿಸುತ್ತಿರುವುದು ಮಹಾರಾಷ್ಟ್ರ. ಇದು ಒಂದು ಕಾಲದಲ್ಲಿ ಶೈಕ್ಷಣಿಕ ಉತ್ಕೃಷ್ಟತೆಗೆ ಹೆಸರಾಗಿತ್ತು. ಬಾಂಬೆ ಮತ್ತು ಪೂನಾ ವಿಶ್ವವಿದ್ಯಾನಿಲಯಗಳು ಸುಧಾರಿತ ಕಲಿಕೆಯ ಕೋಟೆಗಳಾಗಿದ್ದವು. ಆದರೆ ತಮ್ಮ ಆಡಳಿತದಲ್ಲಿ ಪಟ್ಟುಬಿಡದ ರಾಜ್ಯ ಸರಕಾರದ ಹಸ್ತಕ್ಷೇಪದಿಂದ - ವಿಶೇಷವಾಗಿ ಕುಲಪತಿಗಳು, ರಿಜಿಸ್ಟ್ರಾರ್‌ಗಳು ಮತ್ತು ಅಧ್ಯಾಪಕರ ನೇಮಕದ ವಿಷಯದಲ್ಲಿ ಇವು ಪೂರ್ತಿಯಾಗಿ ದಾರಿ ತಪ್ಪಿವೆ. ಇಂದು ಮಹಾರಾಷ್ಟ್ರದಲ್ಲಿ ಉನ್ನತ ಶಿಕ್ಷಣ ವನ್ನು ರಾಜ್ಯ ಸರಕಾರವು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದರೂ, ಇನ್ನೊಂದೆ ಡೆಯಿಂದ ಇದೇ ರಾಜಕಾರಣಿಗಳನ್ನು ಸಂರಕ್ಷಿಸುವ ದಾರಿಯೂ ಆಗಿ ಬದಲಾಗಿದೆ.ಹಲವು ಹಗರಣಗಳು ಸ್ಫೋಟಗೊಳ್ಳುತ್ತಲೇ ಇವೆ.

ಬಾಂಬೆ ವಿವಿಯ ಕುಲಪತಿಯಾಗಿದ್ದ ಎಸ್.ಡಿ ಕಾರ್ಣಿಕ್ ಅವರು 2002ರಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರದ ಹಲವಾರು ದೂರುಗಳ ನಂತರ ವಜಾಗೊಂಡರು. ವಿಪರ್ಯಾಸವೆಂದರೆ ಅದಾದ ಕೆಲವೇ ಸಮಯದಲ್ಲಿ ಅವರು ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡರು. ಆ ಅವಧಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕಾಗಿ ಭ್ರಷ್ಟಾಚಾರ ವಿರೋಧಿ ಬ್ಯೂರೋ ದಿಂದ ಬಂಧಿಸಲ್ಪ ಡುವ ಮೊದಲು ಕೇಂದ್ರ ಸಾರ್ವಜನಿಕ ಸೇವಾ ಆಯೋಗಕ್ಕೆ ಅವರು ಭಡ್ತಿ ಪಡೆದಿದ್ದರು.

1948ರ ರಾಧಾಕೃಷ್ಣನ್ ಆಯೋಗವು ಉನ್ನತ ಶಿಕ್ಷಣದ ಉದ್ದೇಶ ಗಳನ್ನು ವ್ಯಕ್ತಿಗಳ ಸಹಜ ಗುಣಗಳನ್ನು ಕಂಡುಹಿಡಿಯುವುದು ಮತ್ತು ಸೂಕ್ತ ತರಬೇತಿಯ ಮೂಲಕ ಅವರನ್ನು ಅಭಿವೃದ್ಧಿಪಡಿಸುವುದು, ರಾಷ್ಟ್ರೀಯ ಶಿಸ್ತು, ಅಂತರ್‌ರಾಷ್ಟ್ರೀಯ ಅರಿವು, ಬೌದ್ಧಿಕ ಬೆಳವಣಿಗೆ, ನ್ಯಾಯ, ಸ್ವಾತಂತ್ರ, ಸಮಾನತೆ ಮತ್ತು ಸಹೋದರತ್ವದ ಭಾವನೆ ಗಳನ್ನು ಸೃಷ್ಟಿಸುವುದು ಎಂದಿತ್ತು. ಅದೇ ರೀತಿಯಲ್ಲಿ, 1968ರ ಶಿಕ್ಷಣದ ರಾಷ್ಟ್ರೀಯ ನೀತಿಯು ಶಿಕ್ಷಣದ ಉದ್ದೇಶವನ್ನು ರಾಷ್ಟ್ರೀಯ ಪ್ರಗತಿಯನ್ನು ಉತ್ತೇಜಿಸುವುದು ಎಂದು ವ್ಯಾಖ್ಯಾನಿಸಿತ್ತು. ಉನ್ನತ ಶಿಕ್ಷಣದ ಅಂತಿಮ ಉದ್ದೇಶವು ಹೆಚ್ಚು ಅರ್ಹವಾದ ಮಾನವ ಸಂಪನ್ಮೂಲಗಳನ್ನು ಉತ್ಪಾದಿಸುವುದು, ಸಕಾರಾತ್ಮಕ ರೀತಿಯ ಬೋಧನೆ-ಕಲಿಕೆ ಪರಿಸರವನ್ನು ನಿರ್ಮಿಸುವುದು ಮತ್ತು ಉತ್ತಮ ಸಂಶೋಧಕರನ್ನು ಸಜ್ಜುಗೊಳಿಸುವುದು. ಆದರೆ ಅದರ ಬದಲು ವಿವಿಗಳು ಡಿಗ್ರಿಗಳನ್ನು ದುಡ್ಡಿಗೆ ಮಾರುವ ಕೇಂದ್ರಗಳಾಗಿಬಿಡುತ್ತಿರುವುದು ಈಗಿನ ಅಪಾಯ.

ದೇಶಾದ್ಯಂತ ವಿಶ್ವವಿದ್ಯಾನಿಲಯಗಳಲ್ಲಿ ಭ್ರಷ್ಟಾಚಾರದ ಸಾಂಕ್ರಾಮಿಕವು ಸಮಕಾಲೀನ ಭಾರತದ ಕಠೋರ ವಾಸ್ತವವಾಗಿದೆ. ರಾಜಕೀಯ ಭ್ರಷ್ಟಾಚಾರದ ಪ್ರತಿಬಿಂಬವಾಗಿದೆ. ಶಿಕ್ಷಣ ಕ್ಷೇತ್ರದೊಳಕ್ಕೂ ರಾಜಕೀಯ ನುಸುಳಿ ಬಹಳ ಕಾಲವೇ ಆಗಿರುವುದರಿಂದ, ರಾಜಕಾರಣಿಗಳು ಶಿಕ್ಷಣ ಕ್ಷೇತ್ರವನ್ನೂ ದುಡ್ಡು ಮಾಡಲು ಬಳಸಿಕೊಳ್ಳುತ್ತಿರುವುದು ಹಾಗೂ ಶಿಕ್ಷಣತಜ್ಞರು ತಮ್ಮ ರಾಜಕೀಯ ಸಂಪರ್ಕಗಳನ್ನು ಬಳಸಿಕೊಂಡು ಅಧಿಕೃತ ಸ್ಥಾನಗಳನ್ನು ಖರೀದಿಸುವ ಮೂಲಕ ಪ್ರಬಲರಾಗುವುದು ಈ ಬಗೆಯ ಅನೈತಿಕ ಕೊಡುಕೊಳ್ಳುವಿಕೆಯೊಂದು ಅವ್ಯಾಹತವಾಗಿ ನಡೆಯುತ್ತಿದೆ. ಕಳೆದ ದಶಕದಲ್ಲಿ ಶಿಕ್ಷಣದ ತ್ವರಿತ ವ್ಯಾಪಾರೀಕರಣದಿಂದ ಈ ಪ್ರವೃತ್ತಿಯು ವೇಗಗೊಂಡಿದೆ. ವೃತ್ತಿಪರ ಶಿಕ್ಷಣದ ಬೇಡಿಕೆಯ ಹೆಚ್ಚಳದೊಂದಿಗೆ - ಇಂಜಿನಿಯರಿಂಗ್, ವೈದ್ಯಕೀಯ, ಜೈವಿಕ ತಂತ್ರಜ್ಞಾನ, ಐಟಿ ಇತ್ಯಾದಿ - ಪರವಾನಿಗೆ ವ್ಯವಸ್ಥೆಯ ಮರ್ಮ ಬಲ್ಲ ರಾಜಕಾರಣಿಗಳು ಶಿಕ್ಷಣವನ್ನು ಗಮನಾರ್ಹ ಪ್ರಮಾಣದಲ್ಲಿ ವ್ಯಾಪಾರವಾಗಿ ಪರಿವರ್ತಿಸಿದ್ದಾರೆ. ರಾಜಕೀಯದಲ್ಲಿ ಹಣ ಮಾಡುವ ಸಂಸ್ಕೃತಿಯನ್ನು ಅವರು ಶಿಕ್ಷಣ ಕ್ಷೇತ್ರಕ್ಕೂ ತಂದುಬಿಟ್ಟಿದ್ದಾರೆ. ಹೀಗಿರುವಾಗ ಉನ್ನತ ಶಿಕ್ಷಣದ ಉನ್ನತಿಗೆ ದಾರಿಯೆಲ್ಲಿ?

ಬೋಧಕ ಸಿಬ್ಬಂದಿ ಕೊರತೆ

ಬೋಧಕ ಸಿಬ್ಬಂದಿ ಕೊರತೆ ಕೂಡ ಬಹುತೇಕ ವಿವಿಗಳಲ್ಲಿನ ಬಗೆಹರಿಯಲಾರದ ಸಮಸ್ಯೆಯಾಗಿಯೇ ಉಳಿದಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ 10 ವರ್ಷಗಳಿಂದ ಹಂಗಾಮಿ ಉಪನ್ಯಾಸಕರೇ ಇದ್ದಾರೆ.

ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿಯೂ ನೇಮಕಾತಿಗೆ ಸಂಬಂಧಿಸಿದಂತೆ ದೀರ್ಘಕಾಲದ ಸಮಸ್ಯೆ ಇದೆ. ಕಳೆದ ಕೆಲವು ವರ್ಷಗಳಿಂದ, ವಿಶ್ವವಿದ್ಯಾನಿಲಯವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅರ್ಧದಷ್ಟು ಮಂಜೂರಾದ ಸಿಬ್ಬಂದಿ ಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಅರೆಕಾಲಿಕ ಅಥವಾ ಗುತ್ತಿಗೆಆಧಾರಿತ ಉಪನ್ಯಾಸಕರಿಂದಲೇ ಬೋಧನೆ ನಡೆಯುತ್ತಿದೆ.

ಶತಮಾನದಷ್ಟು ಹಳೆಯದಾದ ಮೈಸೂರು ವಿಶ್ವವಿದ್ಯಾನಿಲ ಯವು ಒಟ್ಟು 660 ಬೋಧಕ ಹುದ್ದೆಗಳನ್ನು ಹೊಂದಿದ್ದು, 280 ರಷ್ಟು ಮಾತ್ರ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತರ ಹುದ್ದೆಗಳು ಖಾಲಿ ಇವೆ. ಅತಿಥಿ ಅಧ್ಯಾಪಕರ ಮೇಲೆಯೇ ವಿವಿ ಸಂಪೂರ್ಣವಾಗಿ ಅವಲಂಬಿತವಾಗಿದೆ.

ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲಾವಿಶ್ವವಿದ್ಯಾನಿಲಯದಲ್ಲಿಯೂ ಹೆಚ್ಚಿನವರು ತಾತ್ಕಾಲಿಕ ಬೋಧಕ ಸಿಬ್ಬಂದಿಯೇ ಆಗಿದ್ದಾರೆ. ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲ ಯವು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ ಎದುರಿ ಸುತ್ತಿದೆ. ಈ ವಿವಿ ಅಡಿಯಲ್ಲಿ ಒಟ್ಟು ಒಂಭತ್ತು ತೋಟಗಾರಿಕಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ವಿಶ್ವವಿದ್ಯಾನಿಲಯದ ಚಟುವಟಿಕೆಗಳು ರಾಜ್ಯದ 26 ಜಿಲ್ಲೆಗಳಲ್ಲಿ ವ್ಯಾಪಿಸಿವೆ. ಆದರೆ ಬೋಧಕ ಸಿಬ್ಬಂದಿ ಕೊರತೆ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಮಹಿಳಾ ವಿಶ್ವವಿದ್ಯಾನಿಲಯ ಸ್ಥಾಪನೆ ಯಾಗಿ, ಎರಡು ದಶಕಗಳು ಕಳೆದರೂ ಹಲವು ವಿಜ್ಞಾನ ವಿಭಾಗಗಳಿಗೆ ಖಾಯಂ ಬೋಧಕ ಸಿಬ್ಬಂದಿಯಿಲ್ಲ.

ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಬೋಧಕ ಸಿಬ್ಬಂದಿಗೆ ಮಂಜೂರಾದ 248 ಹುದ್ದೆಗಳಲ್ಲಿ 129 ಹುದ್ದೆಗಳು ಖಾಲಿ ಇವೆ. ನಿಯಮಗಳ ಪ್ರಕಾರ, ಪ್ರತೀ ವಿಭಾಗದಲ್ಲಿ ಒಬ್ಬರು ಪ್ರಾಧ್ಯಾಪಕರು, ಇಬ್ಬರು ಸಹ ಪ್ರಾಧ್ಯಾಪಕರು ಮತ್ತು ನಾಲ್ಕು ಸಹಾಯಕ ಪ್ರಾಧ್ಯಾಪ ಕರು ಇರಬೇಕು. ಗುಲ್ಬರ್ಗ ವಿಶ್ವವಿದ್ಯಾನಿಲಯದ 39 ವಿಭಾಗಗಳಲ್ಲಿ ಯಾವುದರಲ್ಲೂ ಈ ಮಾನದಂಡ ಪಾಲನೆಯಾಗುವ ಸ್ಥಿತಿ ಯಿಲ್ಲ. 15 ವರ್ಷಗಳಿಂದ ವಿಶ್ವವಿದ್ಯಾನಿಲಯದಲ್ಲಿ ನೇಮಕಾತಿ ಯೇ ನಡೆದಿಲ್ಲ. ಪ್ರಸಕ್ತ 247 ಅತಿಥಿ ಶಿಕ್ಷಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಾವೇರಿಯ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆಯಾದದ್ದು 2011ರಲ್ಲಿ. ಕಳೆದ 11 ವರ್ಷಗಳಲ್ಲಿ ರಾಜ್ಯ ಸರಕಾರ ಒಬ್ಬ ಸಿಬ್ಬಂದಿ ಯನ್ನೂ ನೇಮಕ ಮಾಡಿಲ್ಲ. ಕುಲಪತಿಯಿಂದ ಹಿಡಿದು ಕಚೇರಿಯ ಗುಮಾಸ್ತರವರೆಗೆ ಈಗಿರುವವರೆಲ್ಲರೂ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top