ಸಿಬಿಐ ತನಿಖೆಯ ಕಲ್ಲು - ಮುಳ್ಳಿನ ಹಾದಿ...
-

ಭಾರೀ ವಿವಾದ ಹಾಗೂ ಹಿಂಸೆಗೆ ಕಾರಣವಾಗಿದ್ದ ಹೊನ್ನಾವರದ ಪರೇಶ್ ಮೇಸ್ತ್ತಾ ಸಾವಿನ ತನಿಖೆ ಮುಗಿಸಿ ಸಿಬಿಐ ವರದಿ ಸಲ್ಲಿಸಿದ್ದು ಈಗ ಸುದ್ದಿಯಲ್ಲಿದೆ.ಸಿಬಿಐ ತನಿಖೆಗೆ ವಹಿಸಲಾಗಿರುವ ಕರ್ನಾಟಕದ ಪ್ರಕರಣಗಳು ಬಹಳಷ್ಟಿವೆ. ಹಲವು ಪ್ರಕರಣಗಳಲ್ಲಿ ಸಿಬಿಐ ಸೋತಿದೆ. ಕೋರ್ಟ್‌ನ ಟೀಕೆಯನ್ನೂ ಎದುರಿಸಿದೆ. ಅಂಥ ಪ್ರಕರಣಗಳಲ್ಲಿ ಪ್ರಮುಖವಾದವುಗಳು ಯಾವುವು? ಯಾವ ಸರಕಾರವಿದ್ದಾಗ ಯಾವ ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಡಲಾಯಿತು. ಆ ಪ್ರಕರಣಗಳ ಕಥೆ ಏನಾಗಿದೆ?ಇವುಗಳನ್ನು ನೋಡಿಕೊಂಡಾಗ ಕಳೆದ ಹಲವು ವರ್ಷಗಳ ಅವಧಿಯಲ್ಲಿನ ರಾಜಕೀಯ ಮೇಲಾಟಗಳ ಚಿತ್ರವೂ ಕಣ್ಣೆದುರು ಬರುತ್ತದೆ.
ಸಿಬಿಐ ತನಿಖೆಗೆ ಹೋದ ಪ್ರಕರಣಗಳಲ್ಲಿ ಸಾವಿರಗಟ್ಟಲೆ ಪ್ರಕರಣಗಳು ಯಾವ ಗತಿಯನ್ನೂ ಕಾಣದೆ ಹಾಗೆಯೇ ಬಾಕಿಯಿವೆ. 2021ರ ಡಿಸೆಂಬರ್ 31ರವರೆಗಿನ ಅಂಕಿಅಂಶಗಳನ್ನು ಪರಿಗಣಿಸಿ ಕೇಂದ್ರ ಜಾಗೃತ ಆಯೋಗ ನೀಡಿರುವ ವರದಿ ಪ್ರಕಾರ, ಹೀಗೆ ಬಾಕಿಯಿರುವ ದೇಶಾದ್ಯಂತದ ಭ್ರಷ್ಟಾಚಾರ ಪ್ರಕರಣಗಳ ಸಂಖ್ಯೆಯೇ 6,700. ಇವೆಲ್ಲವೂ ವಿಚಾರಣಾ ನ್ಯಾಯಾಲಯಗಳಲ್ಲಿಯೇ ಬಾಕಿಯುಳಿದ ಪ್ರಕರಣಗಳಾಗಿವೆ. ಇವುಗಳಲ್ಲಿ 275 ಪ್ರಕರಣಗಳಂತೂ 20 ವರ್ಷಗಳಿಗೂ ಹೆಚ್ಚು ಸಮಯದಿಂದ ಬಾಕಿಯಿವೆ. 1,939 ಪ್ರಕರಣಗಳು 10ರಿಂದ 20 ವರ್ಷಗಳಷ್ಟು ಹಳೆಯವು. 2,273 ಪ್ರಕರಣಗಳು 5ರಿಂದ 10 ವರ್ಷಗಳಷ್ಟು ಸಮಯದಿಂದ ಬಾಕಿಯಿರುವಂಥವು. 811 ಪ್ರಕರಣಗಳು 3ರಿಂದ 5 ವರ್ಷದವು. 1,399 ಪ್ರಕರಣಗಳು 3 ವರ್ಷಗಳಿಗಿಂತ ಕಡಿಮೆ ಅವಧಿಯವು. 10,974 ಪ್ರಕರಣಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಮೇಲ್ಮನವಿ ಮತ್ತು ಪರಿಷ್ಕರಣೆಯ ಹಂತದಲ್ಲಿರುವಂಥವು. ದಾಖಲಾದ ಪ್ರಕರಣಗಳ ತನಿಖೆ ಪೂರ್ಣಗೊಳಿಸಲು ಸಿಬಿಐಗೆ ಸಾಮಾನ್ಯವಾಗಿ ಒಂದು ವರ್ಷ ಬೇಕಾಗುತ್ತದೆ. ಆದರೆ ಬಹಳಷ್ಟು ಪ್ರಕರಣಗಳಲ್ಲಿ ತನಿಖೆ ವಿಳಂಬವಾಗುತ್ತದೆ. ತನಿಖೆ ವಿಳಂಬವಾಗುವುದು ಒಂದೆಡೆಯಾದರೆ, ತನಿಖೆ ರಾಜಕೀಯ ಕಾರಣಗಳಿಗಾಗಿ ಹಳಿ ತಪ್ಪುವುದೂ ಇದೆ. ಬಹಳಷ್ಟು ಹೈಪ್ರೊಫೈಲ್ ಕೇಸ್‌ಗಳಲ್ಲಿ ಇದು ನಡೆಯುತ್ತದೆ ಮತ್ತು ಸಿಬಿಐ ಎಂಬ ಸ್ವಾಯತ್ತ ಸಂಸ್ಥೆ ಇದೇ ಕಾರಣದಿಂದ ಕಳಂಕವನ್ನೂ ಮೆತ್ತಿಸಿಕೊಂಡಾಗಿದೆ. ಸಿಬಿಐ ಬಗೆಹರಿಸಲಿಕ್ಕಾಗದ ಮತ್ತು ನ್ಯಾಯಾಂಗದ ವಿಮರ್ಶಾತ್ಮಕ ಪರಿಶೀಲನೆಗೆ ಒಳಗಾದ ಕೆಲವು ಹೈಪ್ರೊಫೈಲ್ ಕೇಸ್‌ಗಳತ್ತ ಒಮ್ಮೆ ನೋಡೋಣ.
ಹರ್ಷದ್ ಮೆಹ್ತಾ ಹಗರಣದಲ್ಲಿ ಸಿಬಿಐಗೆ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ ಆರೋಪ ಸುತ್ತಿಕೊಂಡಿತು. 2ಜಿ ತರಂಗಾಂತರ ಪ್ರಕರಣದಲ್ಲಿಯೂ ಯಾರೊಬ್ಬರ ವಿರುದ್ಧವೂ ಆರೋಪ ಸಾಬೀತು ಮಾಡಲು ಸಿಬಿಐನಿಂದ ಸಾಧ್ಯವಾಗಲಿಲ್ಲ. ಅದು ಸಲ್ಲಿಸಿದ ಆರೋಪಪಟ್ಟಿ ಅಸಮರ್ಪಕವಾದುದೆಂದೂ ಉತ್ಪ್ರೇಕ್ಷೆಯ ಆರೋಪಗಳುಳ್ಳದ್ದೆಂದೂ ಟೀಕೆ ಎದುರಿಸಿತು. ಇವಲ್ಲದೆ, 1988ರಲ್ಲಿ ನಡೆದ ಗಾಯಕ ಅಮರ್ ಸಿಂಗ್ ಚಮ್ಕಿಲಾ, ಆತನ ಪತ್ನಿ ಮತ್ತಿಬ್ಬರ ಹತ್ಯೆ ಪ್ರಕರಣ, 2014ರ ಚೆನ್ನೈ ರೈಲ್ವೆ ಬಾಂಬಿಂಗ್ ಪ್ರಕರಣ, 1997ರಲ್ಲಿ ನಡೆದ ಸಿಪಿಐ(ಎಂ) ನಾಯಕ ಚಂದ್ರಶೇಖರ ಪ್ರಸಾದ್ ಕೊಲೆ ಪ್ರಕರಣಗಳ ನಿಗೂಢತೆಯನ್ನು ಭೇದಿಸುವಲ್ಲಿಯೂ ಸಿಬಿಐ ವಿಫಲವಾಗಿತ್ತು.
ಕರ್ನಾಟಕದ ಹಲವು ಪ್ರಕರಣಗಳು ಸಿಬಿಐ ತನಿಖೆಗೆ ಒಳಪಟ್ಟಿದ್ದವು ಮತ್ತು ಈಗಲೂ ಕೆಲವು ಪ್ರಕರಣಗಳ ತನಿಖೆ ಜಾರಿಯಲ್ಲಿದೆ. ಪ್ರಸಕ್ತ ಸುದ್ದಿಯಲ್ಲಿರುವುದು ಉತ್ತರ ಕನ್ನಡದ ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೇಸ್ತಾ ಸಾವು ಪ್ರಕರಣ. 2017ರ ಡಿಸೆಂಬರ್ 6ರಂದು ಉತ್ತರ ಕನ್ನಡದ ಹೊನ್ನಾವರದಲ್ಲಿ ನಡೆದ ಗಲಭೆ ವೇಳೆ ನಾಪತ್ತೆಯಾಗಿದ್ದ ಮೀನುಗಾರ ಯುವಕ ಪರೇಶ್ ಮೇಸ್ತಾ ಶವ ಎರಡು ದಿನಗಳ ಬಳಿಕ ಹೊನ್ನಾವರ ನಗರದ ಶನಿದೇವಸ್ಥಾನದ ಹಿಂಬದಿ ಶೆಟ್ಟಿ ಕೆರೆಯಲ್ಲಿ ಪತ್ತೆಯಾಗಿತ್ತು. ಆದರೆ ಇನ್ನೊಂದು ಕೋಮಿನವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಿಜೆಪಿ ಆಗ್ರಹದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗ ಪ್ರಕರಣದ ತನಿಖಾ ವರದಿಯನ್ನು ಸಲ್ಲಿಸಿರುವ ಸಿಬಿಐ, ಹತ್ಯೆ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವೈದ್ಯಕೀಯ ವರದಿಗಳು ದೃಢಪಡಿಸಿವೆ ಎಂದು ಹೇಳಿದೆ.
ಮೇಸ್ತಾ ಸಾವಿನ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು, ಶವಯಾತ್ರೆಯಲ್ಲಿ ಅನಂತ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮೊದಲಾದ ಬಿಜೆಪಿ ನಾಯಕರೆಲ್ಲ ಭಾಗವಹಿಸಿ ಆಗಿನ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. 2018ರ ಎಪ್ರಿಲ್‌ನಿಂದ ಸಿಬಿಐ ತನಿಖೆ ಆರಂಭವಾಗಿತ್ತು. ನಾಲ್ಕೂವರೆ ವರ್ಷಗಳ ಬಳಿಕ ತನ್ನ ವರದಿ ಸಲ್ಲಿಸಿರುವ ಸಿಬಿಐ, ಆಕಸ್ಮಿಕ ಸಾವೆಂದು ಹೇಳಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಮೇಸ್ತಾ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಅದು ಈಗ ತೀವ್ರ ಮುಜುಗರಕ್ಕೆ ಸಿಲುಕಿದೆ. 2017ರಲ್ಲಿಯೇ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣವೂ ದೊಡ್ಡ ಸುದ್ದಿಯಾಯಿತು. ಉತ್ತರ ಪ್ರದೇಶದ ಲಕ್ನೊದಲ್ಲಿ ಅನುರಾಗ್ ತಿವಾರಿ ನಿಗೂಢ ಸಾವಿಗೀಡಾದ ಪ್ರಕರಣದ ತನಿಖೆ ನಡೆಸಿದ ಸಿಬಿಐ ಅದನ್ನು ಆಕಸ್ಮಿಕ ಸಾವೆಂದು ಪ್ರಕರಣ ಮುಗಿಸಲು ಕೋರಿ 2019ರಲ್ಲಿಯೇ ವರದಿ ಸಲ್ಲಿಸಿತ್ತು. ಆದರೆ ಅದನ್ನು ತಿರಸ್ಕರಿಸಿದ್ದ ಕೋರ್ಟ್ ಮರು ತನಿಖೆ ನಡೆಸುವಂತೆ ಆದೇಶಿಸಿತ್ತು. ಅದಾದ ಬಳಿಕ 2021ರ ಜನವರಿಯಲ್ಲಿ ಎರಡನೇ ವರದಿಯನ್ನು ಸಿಬಿಐ ಸಲ್ಲಿಸಿತ್ತು. ಆ ಎರಡನೇ ವರದಿಯನ್ನೂ ಕೋರ್ಟ್ ಮೊನ್ನೆ ಸೆಷ್ಟಂಬರ್‌ನಲ್ಲಿ ತಿರಸ್ಕರಿಸಿದೆ. ಈ ಪ್ರಕರಣದಲ್ಲಿಯೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಲವುಬಗೆಯ ಟೀಕೆಗಳನ್ನು ಮಾಡಿತ್ತು. ಇನ್ನೊಂದು ಸಾವಿನ ಪ್ರಕರಣ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರದ್ದು. 2015ರಲ್ಲಿ ಡಿ.ಕೆ.ರವಿ ಸಾವು ದೊಡ್ಡ ಸದ್ದು ಮಾಡಿತ್ತು. ಸರಕಾರದ ಕಿರುಕುಳದಿಂದ ರವಿ ಬಲಿಯಾಗಿದ್ದಾರೆ ಎಂದು ಬಿಜೆಪಿ ಹಾಗೂ ಟಿವಿ ಚಾನಲ್‌ಗಳು ಆರೋಪಿಸಿದವು. ಬಿಜೆಪಿ ಆಗ್ರಹದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ರವಿ ಸಾವು ವೈಯಕ್ತಿಕ ಕಾರಣಗಳಿಂದ ನಡೆದ ಆತ್ಮಹತ್ಯೆ ಎಂಬುದನ್ನು ದೃಢಪಡಿಸಿತ್ತು. ಸಾವುಗಳನ್ನು ಕೊಲೆ ಎಂದು ಅನುಮಾನಿಸಿ ಸಿಬಿಐ ತನಿಖೆಗೆ ವಹಿಸಲು ರಾಜಕೀಯ ಒತ್ತಡಗಳು ಬಂದುದು ಒಂದೆಡೆಯಾದರೆ, ಹತ್ಯೆಗಳೇ ನಡೆದಾಗ ಅಂಥ ಪ್ರಕರಣಗಳ ತನಿಖೆಯನ್ನು ವಹಿಸಿದಾಗ ಸಿಬಿಐ ಸೋತಿರುವುದು ಇನ್ನೊಂದೆಡೆ. ಕರ್ನಾಟಕದ ಅಂಥ ಕೆಲವು ಪ್ರಮುಖ ಪ್ರಕರಣಗಳತ್ತ ನೋಡುವುದಾದರೆ, ಧಾರವಾಡ ಜಿಪಂನ ಬಿಜೆಪಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ. 2016ರಲ್ಲಿ ನಡೆದ ಪ್ರಕರಣ ಇದು. ಸಪ್ತಾಪುರದಲ್ಲಿರುವ ತಮ್ಮ ಜಿಮ್‌ನಲ್ಲಿ ವ್ಯಾಯಾಮ ಮುಗಿಸಿ ಹೊರಗಡೆ ಬಂದ ಸಂದರ್ಭದಲ್ಲಿ ಕಾದು ಕುಳಿತಿದ್ದ ಇಬ್ಬರು ಸುಪಾರಿ ಹಂತಕರು ಯೋಗೇಶ್ ಗೌಡ ಮೇಲೆ ದಾಳಿ ನಡೆಸಿ ಹತ್ಯೆ ಮಾಡುತ್ತಾರೆ. ಪ್ರಕರಣ ಧಾರವಾಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಅಷ್ಟೇ ಅಲ್ಲ, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸಾಲು ಸಾಲು ಪ್ರತಿಭಟನೆಗಳು ನಡೆದಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪೊಲೀಸರು ಎಫ್‌ಐಆರ್ ದಾಖಲಿಸಿ ಆರು ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ನಡುವೆ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇದೆ ಎಂಬ ಆರೋಪ ಕೇಳಿಬರತೊಡಗಿತು. ಆದರೆ ಈ ಆರೋಪವನ್ನು ವಿನಯ್ ನಿರಾಕರಣೆ ಮಾಡಿದ್ದರು. ಕಡೆಗೆ 2020ರಲ್ಲಿ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ 2021ರಲ್ಲಿ ವಿನಯ್ ಕುಲಕರ್ಣಿಯವರಿಗೆ ಜಾಮೀನು ನೀಡಿದೆ. 1996ರಲ್ಲಿ ಉತ್ತರಕನ್ನಡ ಜಿಲ್ಲೆ ಭಟ್ಕಳದ ಬಿಜೆಪಿ ಶಾಸಕರಾಗಿದ್ದ ಡಾ. ಚಿತ್ತರಂಜನ್ ಅವರನ್ನು ಅವರ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆಗಿನ ಸಿಎಂ ದೇವೇಗೌಡರು ಕೇಸನ್ನು ಸಿಬಿಐಗೆ ಹಸ್ತಾಂತರಿಸಿದ್ದರು. ಆದರೆ ಕೊಲೆಗಡುಕರ ಯಾವುದೇ ಸುಳಿವು ಸಿಗದೆ, ಕೇಸ್ ಕ್ಲೋಸ್ ಮಾಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಸಿಬಿಐ ಅರ್ಜಿ ಸಲ್ಲಿಸಿತ್ತು. ಆದರೆ, ಕೋರ್ಟ್ ಸಿಬಿಐ ಅರ್ಜಿಯನ್ನು ತಿರಸ್ಕರಿಸಿ ಕೇಸಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವಂತೆ ಆದೇಶ ನೀಡಿತ್ತು.
1987ರಲ್ಲಿ ಭಾರೀ ಸಂಚಲನ ಮೂಡಿಸಿದ್ದ ಕೇರಳ ಮೂಲದ ವಕೀಲ ಎಚ್.ಅಬ್ದುಲ್ ರಷೀದ್ ಕೊಲೆ ಪ್ರಕರಣವನ್ನು ಆಗಿನ ಸಿಎಂ ರಾಮಕೃಷ್ಣ ಹೆಗಡೆ ಸಿಬಿಐಗೆ ವಹಿಸಿದ್ದರು. ಆಗ ಸಚಿವರಾಗಿದ್ದ ಆರ್.ಎಲ್.ಜಾಲಪ್ಪ, ಹಲವು ಐಪಿಎಸ್ ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದರು ಎಂದು ಸಿಬಿಐ ವರದಿ ನೀಡಿತ್ತು. ನಂತರ ನ್ಯಾಯಾಲಯ ಸಾಕ್ಷಾಧಾರದ ಕೊರತೆಯಿಂದ ಎಲ್ಲರನ್ನೂ ನಿರ್ದೋಷಿಗಳೆಂದು ತೀರ್ಪು ಪ್ರಕಟಿಸಿತ್ತು.
ಈಗ ನಡೆಯುತ್ತಿರುವ ಪ್ರಕರಣಗಳಲ್ಲಿ ಪ್ರಮುಖವಾಗಿರುವುದು ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣ. 2020ರಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ದಾಳಿ, ವಿಚಾರಣೆ ನಡೆದಿದೆ. ಈ ನಡುವೆ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಿದ್ದು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಕ್ಕೆ ಸಿಬಿಐ ಮನವಿ ಮಾಡಿದೆ. ತನಿಖೆ ನಡೆಯುತ್ತಿದೆ ಎಂದು ಅದು ಕೋರ್ಟ್‌ಗೆ ಹೇಳಿದೆ. ಐಟಿ ದಾಳಿಯಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಎರಡು ಫ್ಲಾಟ್‌ಗಳಲ್ಲಿ 6.5 ಕೋಟಿ ರೂ. ಹಣ ಪತ್ತೆಯಾಗಿ, ದಾಖಲೆ ಹಾಜರುಪಡಿಸಲು ವಿಫಲರಾದಾಗ ಪ್ರಕರಣ ಈ.ಡಿ. ತನಿಖೆಗೆ ಹೋಗಿತ್ತು. ಈ.ಡಿ. ವಿಚಾರಣೆ ಬಳಿಕ ಡಿಕೆಶಿ ತಿಹಾರ್ ಜೈಲುವಾಸ ಅನುಭವಿಸಬೇಕಾಯಿತು. ಅಲ್ಲಿಂದ ಜಾಮೀನು ಪಡೆದು ಬಂದರೂ ಆಸ್ತಿ ಮೂಲದ ತನಿಖೆಯನ್ನು ಅವರ ವಿರುದ್ಧ ಸಿಬಿಐ ನಡೆಸುತ್ತಿದೆ. ಕಳೆದ ತಿಂಗಳು ಸಿಬಿಐ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರ ರಾಮನಗರದ ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದ್ದಾರೆ. ಇವಲ್ಲದೆ ಹಲವು ಹೊಸ ಪ್ರಕರಣಗಳು ಸಿಬಿಐ ತನಿಖೆಗೆ ಹೋಗಿವೆ. ಉದ್ಯಮಿ ಆದಿಕೇಶವುಲು ಆಪ್ತ ಕೆ.ರಘುನಾಥ್ ಸಾವಿನ ಪ್ರಕರಣ ಸಂಬಂಧ ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ವಿರುದ್ಧ ಸಿಬಿಐ ತನಿಖೆಗೆ ಕಳೆದ ತಿಂಗಳಷ್ಟೇ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದ್ದು, 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಿದೆ. ಎಷ್ಟೋ ಪ್ರಕರಣಗಳು ಇನ್ನೇನು ಸಿಬಿಐ ತನಿಖೆಗೆ ಹೋಗಲಿವೆ ಎಂಬ ಹಂತದವರೆಗೂ ಸುದ್ದಿಯಾಗಿ, ಕಡೆಗೆ ಸಿಬಿಐ ತನಿಖೆಗೆ ಒಪ್ಪಿಸದೇ ಇದ್ದುದೂ ಇದೆ. ಅಂಥ ಪ್ರಕರಣಗಳಲ್ಲಿ ಮುಖ್ಯವಾದುದು ತೀರ್ಥಹಳ್ಳಿಯ ನಂದಿತಾ ಪ್ರಕರಣ. 2014ರಲ್ಲಿ ಸಂಭವಿಸಿದ ನಂದಿತಾ ನಿಗೂಢ ಸಾವು ಪ್ರಕರಣ ಭಾರೀ ಸಂಚಲನವನ್ನುಂಟು ಮಾಡಿತ್ತು. 2014ರ ಅಕ್ಟೋಬರ್ 29ರಂದು ತನ್ನ ಶಾಲೆಗೆ ತೆರಳಿದ್ದ ನಂದಿತಾ, ಅದೇ ದಿನ ಮಧ್ಯಾಹ್ನ ತೀರ್ಥಹಳ್ಳಿಯಿಂದ 1.5 ಕಿ.ಮೀ. ದೂರದ ಆನಂದಗಿರಿ ಗುಡ್ಡದ ಸಮೀಪ ಒಂಟಿಯಾಗಿ ಪತ್ತೆಯಾಗಿದ್ದರು. ಮರುದಿನ ಅಸ್ವಸ್ಥಳಾಗಿದ್ದ ಆಕೆಯನ್ನು ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ, ನಂತರ ಉಡುಪಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಕ್ಟೋಬರ್ 31ರಂದು ನಂದಿತಾ ಮೃತಪಟ್ಟಿದ್ದಳು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಆದರೆ ಸಿದ್ದರಾಮಯ್ಯ ಸರಕಾರ ಸಿಐಡಿಗೆ ವಹಿಸಿತ್ತು. ಸಿಐಡಿ ಅದೊಂದು ಆತ್ಮಹತ್ಯೆ ಪ್ರಕರಣ ಎಂದು ವರದಿ ನೀಡಿತ್ತು.
2018ರಲ್ಲಿ ರಾಜ್ಯಾದ್ಯಂತ 50 ಸಾವಿರ ಮನೆಗಳ ನಿರ್ಮಾಣಕ್ಕಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನೀಡಲಾದ 2,500 ಕೋಟಿ ರೂ. ಹಣ ದುರ್ಬಳಕೆಯಾಗಿದ್ದು, 250 ಕೋಟಿ ರೂ. ಕಮಿಷನ್‌ಗಾಗಿ ಭ್ರಷ್ಟ ಗುತ್ತಿಗೆದಾರರಿಗೆ ವಹಿಸಲಾಗಿದೆ ಎಂದು ಆರೋಪಿಸಿದ್ದ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸಿತ್ತು. ಬಿಟ್ ಕಾಯಿನ್ ಹಗರಣದಲ್ಲಿಯೂ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು ಎನ್ನುವ ಮಟ್ಟಕ್ಕೆ ಸರಕಾರ ಹೋಗಿತ್ತು. ಆದರೆ ಅದನ್ನು ಸಿಬಿಐಗೆ ವಹಿಸಲೇ ಇಲ್ಲ. ನಮ್ಮ ಪೊಲೀಸರೇ ತನಿಖೆ ನಡೆಸುತ್ತಾರೆ ಎಂದು ಬಿಜೆಪಿ ಸರಕಾರ ಹೇಳಿತ್ತು. ಹೀಗೆ ಸಿಬಿಐಗೆ ವಹಿಸಬೇಕಾದಂಥ ಅದೆಷ್ಟೋ ಪ್ರಕರಣಗಳು ರಾಜಕೀಯ ಆಟದಲ್ಲಿ ಸಿಬಿಐ ಕೈಗೆ ಹೋಗದೇ ಇರುವುದು ನಡೆಯುವ ಹಾಗೆಯೇ, ಸಿಬಿಐ ತನಿಖೆಗೆ ವಹಿಸಲಾದ ಪ್ರಕರಣಗಳಲ್ಲೂ ರಾಜಕೀಯ ಹಸ್ತಕ್ಷೇಪದ ಕಾರಣಕ್ಕಾಗಿ ತನಿಖೆ ಹಳಿ ತಪ್ಪುವುದೂ ನಡೆಯುತ್ತಿರುತ್ತದೆ. ಸಾವು, ಹತ್ಯೆ, ಭ್ರಷ್ಟಾಚಾರ ಎಲ್ಲ ಪ್ರಕರಣಗಳನ್ನೂ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಕೊನೆಗೆ ತನಿಖೆ ಮತ್ತದರ ಫಲಿತಾಂಶದ ಮೇಲೆಯೂ ರಾಜಕೀಯದ ನೆರಳು ಬೀಳುತ್ತಿರುತ್ತದೆ. ಹೀಗಾಗಿ ಶುದ್ಧವೆನ್ನುವುದೇ ವ್ಯವಸ್ಥೆಯಲ್ಲಿ ಇಲ್ಲವಾಗಿದೆ. ಹಾಗೆ ಹೇಳುವುದು ಕೂಡ ಶೋಕಿ ಮತ್ತು ರಾಜಕಾರಣದ ಭಾಗವೇ ಆಗಿದೆ. ಹಾಗಾಗಿಯೇ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ತನ್ನ ಗಾಂಭೀರ್ಯ ಕಳೆದುಕೊಂಡು ಕೇಂದ್ರದ ಪಂಜರದ ಗಿಣಿ, ಆಳುವವರ ಕೈಗೊಂಬೆ ಎಂಬಂತಹ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದೆ.
ಆರುಷಿ ಹತ್ಯೆ ಪ್ರಕರಣ: ನೊಯ್ಡದಲ್ಲಿ 2008ರಲ್ಲಿ ನಡೆದಿದ್ದ 13 ವರ್ಷದ ಹುಡುಗಿ ಆರುಷಿ ಮತ್ತು ಮನೆಗೆಲಸದವನಾಗಿದ್ದ ಹೇಮರಾಜ್ ಕೊಲೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಆರುಷಿಯ ಪೋಷಕರ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ಸಿಬಿಐ ವೈಫಲ್ಯ ಮತ್ತು ವೃತ್ತಿಪರವಲ್ಲದ ತನಿಖೆ ಕಟುಟೀಕೆಗೆ ತುತ್ತಾಯಿತು.
2009ರಲ್ಲಿ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಗಾಲಿ ಜನಾರ್ದನ ರೆಡ್ಡಿ ಹಾಗೂ ಇತರ 9 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. 35 ಸಾವಿರ ಕೋಟಿ ರೂ. ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೂಡ ಸಿಬಿಐ ನಡೆ ತೀವ್ರ ಟೀಕೆಗೆ ತುತ್ತಾಯಿತು. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸಿಬಿಐ ಕೈಚೆಲ್ಲಿದ ಪರಿಣಾಮ ಪ್ರಕರಣ ಮುಚ್ಚಿ ಹೋಯಿತು. ಯಡಿಯೂರಪ್ಪ ಹೆಸರೂ ಈ ಪ್ರಕರಣದಲ್ಲಿತ್ತು. 2011ರ ಸೆಷ್ಟ್ಟಂಬರ್ 5ರಂದು ಜನಾರ್ದನ ರೆಡ್ಡಿಯನ್ನು ಬಂಧಿಸಲಾಯಿತು. ಬಳಿಕ ಸಾಕ್ಷ ನಾಶ ಮಾಡುವ ಶಂಕೆಯ ಮೇಲೆ ಕರ್ನಾಟಕದ ಬಳ್ಳಾರಿ, ಕಡಪ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡುವಂತಿಲ್ಲ ಎಂಬ ಷರತ್ತಿನೊಂದಿಗೆ ಸುಪ್ರೀಂಕೋರ್ಟ್ 2015ರ ಜನವರಿ 20ರಂದು ಜಾಮೀನು ನೀಡಿತ್ತು. ಆದರೆ ಕೇಸ್‌ಗಳ ವಿಚಾರಣೆ 12 ವರ್ಷಗಳಾದರೂ ಮುಗಿದಿಲ್ಲ. ಪ್ರಕರಣಗಳ ತನಿಖೆ ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಚಾರಣೆ ಯಾವ ಹಂತದಲ್ಲಿದೆ ಎಂಬುದರ ಕುರಿತು ವರದಿ ನೀಡಲು ಸೂಚಿಸಿದೆ.
2012ರಲ್ಲಿ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಕುಟುಂಬದ ಸದಸ್ಯರ ಹೆಸರು ಕೇಳಿಬಂದಿತ್ತು. ಭಾರೀ ಒತ್ತಡದ ನಂತರ ಆಗಿನ ಸಿಎಂ ಸಿದ್ದರಾಮಯ್ಯ ನವೆಂಬರ್ 2013ರಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಸಿಬಿಐ 2016ರಲ್ಲಿ ಸಲ್ಲಿಸಿದ ದೋಷಾರೋಪ ಪಟ್ಟಿ ಸೂಕ್ತವಾಗಿಲ್ಲ ಎಂದು ಆರೋಪಿಸಿ ಸೌಜನ್ಯಾ ತಂದೆ ಹೆಚ್ಚಿನ ತನಿಖೆಗೆ ಕೋರಿದ್ದರು. ಹೆಚ್ಚಿನ ತನಿಖೆಗೆ ಸಿಬಿಐ ನ್ಯಾಯಾಲಯ 2017ರಲ್ಲಿ ಆದೇಶ ನೀಡಿತ್ತು. ಆದರೆ ಈ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ಮೂವರು ಅರ್ಜಿ ಸಲ್ಲಿಸಿದ್ದರು. ಸಿಬಿಐ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣ ಮರು ತನಿಖೆಗೆ ಕೋರಿ ಈ ಮಧ್ಯೆ ಸೌಜನ್ಯಾ ತಂದೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕಳೆದ ವರ್ಷದ ಜನವರಿಯಲ್ಲಿ ಮರು ತನಿಖೆಗೆ ನಿರಾಕರಿಸಿ, ಅರ್ಜಿ ವಜಾಗೊಳಿಸಿತು.
ಬೋಫೋರ್ಸ್ ಪ್ರಕರಣ: ಸಿಬಿಐನ ಅಸಮರ್ಪಕ ತನಿಖೆಯಿಂದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವಾಗಿದೆ ಎಂದು ದಿಲ್ಲಿ ಹೈಕೋರ್ಟ್ ಟೀಕಿಸಿತ್ತು. ಕಳಪೆ ಚಾರ್ಜ್‌ಶೀಟ್ ಪರಿಣಾಮವಾಗಿ ಹಿಂದೂಜಾ ಸಹೋದರರಾದ ಗೋಪಿಚಂದ್ ಪ್ರಕಾಶ್‌ಚಂದ್, ಶ್ರೀಚಂದ್ ಮತ್ತು ಬೋಫೋರ್ಸ್ ಕಂಪೆನಿಯ ಮೇಲಿನ ಎಲ್ಲಾ ಆರೋಪಗಳನ್ನು ರದ್ದುಗೊಳಿಸಲಾಯಿತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.