-

ವಾರ್ತಾಭಾರತಿ ಅವಲೋಕನ

ಅಧ್ಯಕ್ಷೀಯ ಚುನಾವಣೆ ಕಾಂಗ್ರೆಸ್ ಗೆ ತಿರುವು?

-

ಎರಡು ದಶಕಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮತ್ತೆ ಗಾಂಧಿ ಕುಟುಂಬಕ್ಕೆ ಹೊರತಾದವರೊಬ್ಬರು ಪಕ್ಷದ ಚುಕ್ಕಾಣಿ ಹಿಡಿಯುವ ಸಮಯ ಸನ್ನಿಹಿತವಾಗಿದೆ. ಈ ಹೊತ್ತಲ್ಲಿ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆಗಳು ಹೇಗಿರುತ್ತವೆ? ಗಾಂಧಿ ಕುಟುಂಬದವರು ಅಧ್ಯಕ್ಷರಾಗುವುದು ಇಲ್ಲವೆ ಅಧ್ಯಕ್ಷರಾಗದೆ ಇರುವುದರ ಪರಿಣಾಮಗಳು, ರಾಹುಲ್ ಅವರು ದೂರ ನಿಂತಿರುವುದರ ಕಾರಣಗಳು ಇವನ್ನೆಲ್ಲ ನೋಡುವುದು ಅಗತ್ಯ. ಕರ್ನಾಟಕದ ನಾಯಕರೊಬ್ಬರ ಪಾಲಿಗೆ ಮತ್ತೊಮ್ಮೆ ಕಾಂಗ್ರೆಸ್ ನಾಯಕತ್ವದ ಅವಕಾಶ ಸಿಗಲಿರುವುದು ಮತ್ತೊಂದು ಕುತೂಹಲ.

137 ವರ್ಷಗಳ ಇತಿಹಾಸವುಳ್ಳ ಪಕ್ಷ ಕಾಂಗ್ರೆಸ್. ಬ್ರಿಟಿಷ್ ಆಡಳಿತದಲ್ಲಿ ಸುಶಿಕ್ಷಿತ ಭಾರತೀಯರ ಪಾಲ್ಗೊಳ್ಳುವಿಕೆಯ ದೃಷ್ಟಿಯಿಂದ ಐಸಿಎಸ್ ಅಧಿಕಾರಿ ಎ.ಒ. ಹ್ಯೂಮ್ ತಂದ ಪರಿಕಲ್ಪನೆ ಕಾಂಗ್ರೆಸ್. 1883ರಿಂದ ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ ಅವರು 1885ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನ್ನು ಸಂಸ್ಥಾಪಿಸಿದರು. ಲಾರ್ಡ್ ಡಫೆರಿನ್ ವೈಸರಾಯಿ ಆಗಿದ್ದ ಅವಧಿ ಅದು. ಕಾಂಗ್ರೆಸ್‌ನ ಮೊದಲ ಸಭೆ 1885ರ ಡಿಸೆಂಬರ್ 28ರಂದು ಮುಂಬೈಯಲ್ಲಿ ನಡೆಯಿತು. ದಾದಾಭಾಯಿ ನವರೋಜಿ, ಸ್ಕಾಟಿಷ್ ಐಸಿಎಸ್ ಅಧಿಕಾರಿ ವಿಲಿಯಮ್ ವೆಡ್ಡರ್‌ಬರ್ನ್, ಗಣೇಶ್ ವಾಸುದೇವ್‌ಜೋಶಿ, ಫಿರೋಝ್‌ಷಾ ಮೆಹ್ತಾ, ಗೋಪಾಲ್ ಗಣೇಶ್ ಮೊದಲಾದ 72 ನಾಯಕರು ಪಾಲ್ಗೊಂಡಿದ್ದರು. ಕಾಂಗ್ರೆಸ್‌ನ ಮೊದಲ ಅಧ್ಯಕ್ಷರು ವೂಮೇಶ್ ಚಂದ್ರ ಬ್ಯಾನರ್ಜಿ. ಕಾಂಗ್ರೆಸ್‌ನ 2ನೇ ಅಧ್ಯಕ್ಷರಾಗಿದ್ದವರು ದಾದಾಭಾಯಿ ನವರೋಜಿ. ಆನಂತರ 1887ರಲ್ಲಿ ಬದ್ರುದ್ದೀನ್ ತಯ್ಯಬ್ ಜಿ ಈ ಸ್ಥಾನಕ್ಕೆ ಬಂದರು. ಅವರು ಕಾಂಗ್ರೆಸ್ ಅಧ್ಯಕ್ಷರಾದ ಮೊದಲ ಮುಸ್ಲಿಮ್ ವ್ಯಕ್ತಿ. 1888ರಲ್ಲಿ ಕಾಂಗ್ರೆಸ್‌ನ ಅಧ್ಯಕ್ಷರಾದ ಜಾರ್ಜ್ ಯ್ಯೂಲ್ ಈ ಹುದ್ದೆಗೆ ಬಂದ ಮೊದಲ ವಿದೇಶಿ ವ್ಯಕ್ತಿ. ಮೊದಲ ಮಹಿಳಾ ಅಧ್ಯಕ್ಷರು ಡಾ. ಆ್ಯನಿ ಬೆಸೆಂಟ್. ಕಾಂಗ್ರೆಸ್ ಅಧ್ಯಕ್ಷರಾದ ಮೊದಲ ಭಾರತೀಯ ಮಹಿಳೆ ಸರೋಜಿನಿ ನಾಯ್ಡು.

 ಬ್ರಿಟಿಷ್ ಅಧಿಕಾರಿಯಿಂದ ಸ್ಥಾಪನೆಯಾದ ಕಾಂಗ್ರೆಸ್, ಬ್ರಿಟಿಷ್ ಆಡಳಿತದ ವಿರುದ್ಧದ ಸಂಘಟನೆಯಾಗಿ ಮಾರ್ಪಾಟಾದದ್ದು ಆನಂತರದ ವರ್ಷಗಳಲ್ಲಿ. ಅಂದರೆ 1905ರಿಂದ ಕಾಂಗ್ರೆಸ್ ಸ್ವರೂಪ ಬದಲಾಗತೊಡಗಿತು. ಕಾಂಗ್ರೆಸ್‌ನ ಬೇಡಿಕೆಗಳಿಗೆ ಬ್ರಿಟಿಷ್ ಸರಕಾರ ವಿರೋಧ ವ್ಯಕ್ತಪಡಿಸತೊಡಗಿದಾಗ, ಕಾಂಗ್ರೆಸ್‌ನಲ್ಲಿನ ಮೃದು ಧೋರಣೆಯ ನಾಯಕರ ಗುಂಪಿಗೆ ವಿರುದ್ಧವಾದ ಮತ್ತೊಂದು ಗುಂಪು ಹುಟ್ಟಿಕೊಂಡಿತು. 1907ರಲ್ಲಿ ಸೂರತ್‌ನಲ್ಲಿ ನಡೆದ ಅಧಿವೇಶನದಲ್ಲಿ ಈ ಒಡಕು ಸ್ಪಷ್ಟವಾಗಿ, ಗೋಖಲೆಯವರ ನೇತೃತ್ವದ ಮಂದಗಾಮಿಗಳು ಮತ್ತು ತಿಲಕರ ನೇತೃತ್ವದ ತೀವ್ರಗಾಮಿಗಳು ಎಂದು ಕಾಂಗ್ರೆಸ್ ಮೊದಲ ಬಾರಿಗೆ ವಿಭಜನೆಗೊಂಡಿತು. ಗಾಂಧೀಜಿಯವರ ನಾಯಕತ್ವ ಕಾಂಗ್ರೆಸ್‌ಗೆ ಸಿಕ್ಕಿದ ಮೇಲೆ ದೇಶಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಅದು ನಿರ್ವಹಿಸಿದ ಪಾತ್ರ ಚಾರಿತ್ರಿಕ ವಾದದ್ದು. ಸ್ವಾತಂತ್ರಾನಂತರ ಇನ್ನು ಕಾಂಗ್ರೆಸ್ ವಿಸರ್ಜನೆಗೊಳ್ಳುವುದು ಸೂಕ್ತ ಎಂದು ಗಾಂಧೀಜಿ ಬಯಸಿದ್ದರು. ಆದರೆ ಅದು ದೇಶದ ರಾಜಕೀಯ ಪಕ್ಷವಾಗಿ ಮತ್ತೊಂದು ಆಯಾಮವನ್ನು ಪಡೆಯಿತು.

ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯನ್ನೊಮ್ಮೆ ನೋಡಿಕೊಂಡರೆ ಪ್ರಮುಖರು:

ದಾದಾಭಾಯಿ ನವರೋಜಿ, ಎನ್.ಜಿ. ಚಂದಾವರ್ಕರ್, ಸುರೇಂದ್ರನಾಥ್ ಬ್ಯಾನರ್ಜಿ, ಗೋಪಾಲ ಕೃಷ್ಣ ಗೋಖಲೆ, ಲಾಲಾ ಲಜಪತ್ ರಾಯ್, ರಾಸ್‌ಬಿಹಾರಿ ಬೋಸ್, ಮದನ್ ಮೋಹನ್ ಮಾಳವೀಯ, ಸಯ್ಯದ್ ಹಸನ್ ಇಮಾಮ್, ಮೋತಿಲಾಲ್ ನೆಹರು, ದೇಶಬಂಧು ಚಿತ್ತರಂಜನ್‌ದಾಸ್, ಮಹಾತ್ಮಾ ಗಾಂಧಿ, ವಲ್ಲಭಭಾಯಿ ಪಟೇಲ್, ಡಾ. ರಾಜೇಂದ್ರ ಪ್ರಸಾದ್, ಸುಭಾಷ್‌ಚಂದ್ರ ಬೋಸ್, ಅಬ್ದುಲ್ ಕಲಾಮ್ ಅಝಾದ್, ಪಟ್ಟಾಭಿ ಸೀತಾರಾಮಯ್ಯ, ಜವಾಹರ ಲಾಲ್ ನೆಹರೂ, ಇಂದಿರಾ ಗಾಂಧಿ, ಕೆ. ಕಾಮರಾಜ್, ಎಸ್. ನಿಜಲಿಂಗಪ್ಪ, ಜಗಜೀವನ್ ರಾಮ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ.

1929ರಿಂದ ಕಾಂಗ್ರೆಸ್ ನಾಯಕತ್ವದ ಹೊಣೆಯನ್ನು ಮತ್ತೆ ಮತ್ತೆ ನಿರ್ವಹಿಸಿದ ಜವಾಹರಲಾಲ್ ನೆಹರೂ 1951ರಿಂದ 1964ರಲ್ಲಿ ನಿಧನರಾಗುವವರೆಗೂ ಕಾಂಗ್ರೆಸ್‌ನಲ್ಲಿ ಪ್ರಶ್ನಾತೀತ ನಾಯಕರಾಗಿದ್ದರು. ನಾಲ್ಕು ಬಾರಿ ಚುನಾಯಿತ ಅಧ್ಯಕ್ಷರಾಗಿದ್ದರು. ಉಳಿದಂತೆ ಇವರು ಪ್ರಧಾನಿಯಾಗಿದ್ದ ಕಾಲದಲ್ಲಿಯೂ ಅಧ್ಯಕ್ಷರುಗಳು ಬೇರೆಯಿದ್ದರೂ ಪಕ್ಷದ ಸೂತ್ರ ಇವರ ಕೈಯಲ್ಲೇ ಇತ್ತು.

ನೆಹರೂ ಕಾಲದಲ್ಲಿ 1959ರಲ್ಲಿಯೇ ಒಮ್ಮೆ ಕಾಂಗ್ರೆಸ್ ವಿಶೇಷ ಅಧಿವೇಶನದ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿಯವರು ನಂತರದ ದಿನಗಳಲ್ಲಿ ಪಕ್ಷದ ಹಲವಾರು ಮುಖಂಡರನ್ನು ಎದುರು ಹಾಕಿಕೊಂಡಿದ್ದರು. ಪಕ್ಷ ಎರಡು ಬಣವಾಗುವುದಕ್ಕೂ ಇದೆಲ್ಲ ಕಾರಣವಾಯಿತು. ಆನಂತರ 1978ರಿಂದ 1984ರಲ್ಲಿ ಹತ್ಯೆಯಾಗುವ ತನಕ ಕಾಂಗ್ರೆಸ್‌ನಲ್ಲಿ ಅವರೇ ಎಲ್ಲವೂ ಆಗಿದ್ದರು.

ಇಂದಿರಾ ಹತ್ಯೆ ಬಳಿಕ ಕಾಂಗ್ರೆಸ್ ಅಧ್ಯಕ್ಷರಾದವರು ರಾಜೀವ್ ಗಾಂಧಿ. ಪ್ರಧಾನಿಯಾದ ಬಳಿಕವೂ ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಮುಂದು ವರಿದಿದ್ದರು. 1991ರಲ್ಲಿ ಎಲ್‌ಟಿಟಿಇ ಉಗ್ರರ ಬಾಂಬ್ ದಾಳಿಗೆ ಅವರು ಬಲಿಯಾದರು. ರಾಜೀವ್ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬಂದವರು ಪಿ.ವಿ. ನರಸಿಂಹರಾವ್. 1991ರಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾದರು. 1996ರಲ್ಲಿ ರಾಜೀನಾಮೆ ನೀಡಿದರು.

ಕಾಂಗ್ರೆಸ್ ಅಧ್ಯಕ್ಷರಾಗಿ ಅತ್ಯಧಿಕ ಕಾಲ ಹೊಣೆ ನಿರ್ವಹಿಸಿದ ಹೆಚ್ಚುಗಾರಿಕೆ ಸೋನಿಯಾ ಗಾಂಧಿ ಅವರದು. 1998ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇವಲ 141 ಸ್ಥಾನ ಬಂದಾಗ, ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಲು, ಸೋನಿಯಾರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸೋನಿಯಾ ಅಧ್ಯಕ್ಷರಾಗುವ ಸೂಚನೆ ದೊರೆತಾಗ, ಅಧ್ಯಕ್ಷಗಿರಿಯ ಆಕಾಂಕ್ಷಿಯಾಗಿದ್ದ ಶರದ್ ಪವಾರ್, ಪಿ.ಎ.ಸಂಗ್ಮಾ ಮತ್ತು ತಾರಿಕ್ ಅನ್ವರ್ ಬಂಡೆದ್ದರು. ಪ್ರಧಾನ ಮಂತ್ರಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಹುದ್ದೆಗಳಿಗೆ ‘ವಿದೇಶಿ ಮೂಲ’ದ ವ್ಯಕ್ತಿಗಳು ಸ್ಪರ್ಧಿಸದಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಕರೆ ನೀಡಿದರು. ಇದರಿಂದ ನೊಂದುಕೊಂಡ ಸೋನಿಯಾ, ಕಾಂಗ್ರೆಸ್ ಕಮಿಟಿಗೆ ರಾಜೀನಾಮೆ ನೀಡಿದರು. ಆದರೆ ಕಾಂಗ್ರೆಸ್ ಕಮಿಟಿ ಈ ಮೂವರನ್ನು ಉಚ್ಚಾಟಿಸಿತು. ಮುಂದೆ ಇವರು ಸೇರಿಕೊಂಡು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಸ್ಥಾಪಿಸಿದರು. ಕಾಂಗ್ರೆಸ್ ಯುಪಿಎ ಮೈತ್ರಿಕೂಟವನ್ನು ಸೋನಿಯಾ ನೇತೃತ್ವದಲ್ಲಿ ರಚಿಸಿಕೊಂಡು 2004 ಹಾಗೂ 2009ರ ಮಹಾ ಚುನಾವಣೆಗಳಲ್ಲಿ ಹೆಚ್ಚಿನ ಸಂಸತ್ ಸ್ಥಾನಗಳನ್ನು ಪಡೆದು ಸರಕಾರ ರಚಿಸಿತು. 2004ರಲ್ಲಿ ಪಕ್ಷದ ಒತ್ತಾಯವಿದ್ದರೂ ಪ್ರಧಾನಿಯಾಗಲು ಸೋನಿಯಾ ನಿರಾಕರಿಸಿ, ಅಧ್ಯಕ್ಷರಾಗಿಯೇ ಉಳಿದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೊನೆಯ ಬಾರಿಗೆ ಚುನಾವಣೆ ನಡೆದದ್ದು 2000ನೇ ವರ್ಷ ನವೆಂಬರ್‌ನಲ್ಲಿ. ಸೋನಿಯಾ ಅವರು ಸುದೀರ್ಘ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿ ಉಳಿಯಲು ಕಾರಣವಾದ ಚುನಾವಣೆ ಇದು. ಜಿತೇಂದ್ರ ಪ್ರಸಾದ್ ಎದುರು ಸೋನಿಯಾ ಗೆದ್ದಿದ್ದರು. 2000ದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದೇ ಇಲ್ಲ. 2017 ಮತ್ತು 2019ರಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು ಬಿಟ್ಟರೆ ಸೋನಿಯಾ ಅವರೇ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ.

ಕಳೆದ ಸುಮಾರು 50 ವರ್ಷಗಳಲ್ಲಿ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗಳು ನಿಜವಾದ ಅರ್ಥದಲ್ಲಿ ಎರಡು ಬಾರಿ ಮಾತ್ರ ನಡೆದಿವೆ. 2000ನೇ ಇಸವಿಯಲ್ಲಿ ಜಿತೇಂದ್ರ ಪ್ರಸಾದ್ ವಿರುದ್ಧ ಸೋನಿಯಾ ಗಾಂಧಿ ಮುಖಾಮುಖಿಯಾದಾಗ ಸೋನಿಯಾ ಗಾಂಧಿ ಗೆದ್ದರು. ಅದಕ್ಕೂ ಮೊದಲು, 1997 ರಲ್ಲಿ ಸೀತಾರಾಮ್ ಕೇಸರಿ, ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೋಲಿಸಿದ್ದರು. ಸೋನಿಯಾ ಗಾಂಧಿ 1998ರಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ನೇಮಕ ಗೊಂಡರು ಮತ್ತು ನಂತರ, 2000ನೇ ವರ್ಷದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಂದಾಗ ಗಾಂಧಿ ಕುಟುಂಬಕ್ಕೆ ಯಾವುದೇ ಸವಾಲು ಇರಲಿಲ್ಲ.

ಸೋನಿಯಾ ಅವರು 2017ರವರೆಗೆ ಪಕ್ಷದ ಅಧ್ಯಕ್ಷರಾಗಿದ್ದರು, ಬಳಿಕ ರಾಹುಲ್ ಗಾಂಧಿ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆ ಯಾದರು, ಅವರು ನಾಮಪತ್ರ ಸಲ್ಲಿಸುವ ಮೊದಲೇ ಎಲ್ಲಾ ಪಿಸಿಸಿಗಳು ಅವರ ಪರವಾಗಿ ನಿರ್ಣಯವನ್ನು ಅಂಗೀಕರಿಸಿದವು. ರಾಹುಲ್ ರಾಜೀನಾಮೆ ನೀಡಿದಾಗ ಸೋನಿಯಾ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿತ್ತು.

ಈಗ ದಶಕಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಬಹು ದೊಡ್ಡ ಕಾಲಾವಧಿಯ ನಂತರ ಅಧ್ಯಕ್ಷ ಹುದ್ದೆ ಗಾಂಧಿ ಕುಟುಂಬದವರ ಲ್ಲದ ನಾಯಕರೊಬ್ಬರ ಪಾಲಾಗಲಿದೆ. ಕಣದಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಹಾಗೂ ಭಿನ್ನಮತೀಯ ಜಿ23 ಬಣದಲ್ಲಿ ಗುರುತಿಸಿಕೊಂಡಿದ್ದ ಶಶಿ ತರೂರ್ ಇದ್ದಾರೆ.

ಈ ಸಂದರ್ಭದಲ್ಲಿ, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡುವುದಾದರೆ, ಕಾಂಗ್ರೆಸ್ ಸಂವಿಧಾನದ 18ನೇ ವಿಧಿ ಮೂಲಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದ ಸದಸ್ಯರು ಈ ಚುನಾವಣೆಯಲ್ಲಿ ಮತ ಹಾಕುತ್ತಾರೆ. ಅದರ ಜೊತೆಗೆ ಎಐಸಿಸಿ ಸದಸ್ಯರು, ವರ್ಷಕ್ಕೂ ಹೆಚ್ಚು ಕಾಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪಕ್ಷದ ಸದಸ್ಯರಾಗಿ ಮುಂದುವರಿದವರು ಚುನಾವಣೆಯಲ್ಲಿ ಭಾಗವಹಿಸುತ್ತಾರೆ. ಸುಮಾರು 9,000ಕ್ಕೂ ಹೆಚ್ಚು ಪ್ರತಿನಿಧಿಗಳು ಕಾಂಗ್ರೆಸ್‌ನ ಎಲೆಕ್ಟೋರಲ್ ಕಾಲೇಜ್‌ನಲ್ಲಿದ್ದು, ಇವರೆಲ್ಲಾ ಮತ ಚಲಾಯಿಸಲು ಅರ್ಹರು. ಪ್ರತೀ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ಕಚೇರಿಯಲ್ಲಿ ಚುನಾವಣೆ ನಡೆಯುತ್ತದೆ. ಮತ ಎಣಿಕೆ ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆಯುತ್ತದೆ.

ಈ ಬಾರಿ ಇರುವ 9,000ಕ್ಕಿಂತ ಹೆಚ್ಚು ಪ್ರತಿನಿಧಿಗಳಲ್ಲಿ ಶೇ.30 ಪ್ರತಿನಿಧಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಶೇ.46 ಪ್ರತಿನಿಧಿಗಳು 45ರಿಂದ 65 ವರ್ಷದವರು. ಶೇ.24 ಪ್ರತಿನಿಧಿಗಳು 65 ವರ್ಷಕ್ಕಿಂತ ಮೇಲ್ಪಟ್ಟವರು. ಶೇ.70ಕ್ಕೂ ಹೆಚ್ಚು ಮತದಾರರು ಪುರುಷರೇ ಆಗಿದ್ದಾರೆ.

ರಾಜ್ಯವಾರು ನೋಡುವುದಾದರೆ, 1,100ಕ್ಕೂ ಹೆಚ್ಚು ಪ್ರತಿನಿಧಿಗಳುಉತ್ತರ ಪ್ರದೇಶದವರು. ಹಾಗಾಗಿ ಇಲ್ಲಿನ ಟ್ರೆಂಡ್ ಅಧ್ಯಕ್ಷರ ಗೆಲುವು ಮತ್ತು ಸೋಲಿನಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದೇ ವಿಶ್ಲೇಷಿಸಲಾ ಗುತ್ತದೆ. ಮಹಾರಾಷ್ಟ್ರ ಮತ್ತು ಮುಂಬೈನಿಂದ 800ಕ್ಕೂ ಹೆಚ್ಚು ಪ್ರತಿನಿಧಿಗಳು, ಪಶ್ಚಿಮ ಬಂಗಾಳದಿಂದ ಸುಮಾರು 740,ತಮಿಳುನಾಡಿನಿಂದ 700, ಬಿಹಾರದಿಂದ 600ಮತ್ತು ಮಧ್ಯಪ್ರದೇಶದಿಂದ 502 ಪ್ರತಿನಿಧಿಗಳು ಇದ್ದಾರೆ. ಕರ್ನಾಟಕದಿಂದ 503 ಪ್ರತಿನಿಧಿ ಗಳಿದ್ದಾರೆ. ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಹಿಡಿತ ಪ್ರಬಲವಾಗಿಯೇ ಇದೆ. ಇನ್ನೊಂದೆಡೆಯಿಂದ, ಸೋನಿಯಾ ಅಥವಾ ರಾಹುಲ್ ಅವರೇ ಪಕ್ಷದ ಅಧ್ಯಕ್ಷರಾಗಬೇಕೆಂದು, ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತೆಂದು ಬಯಸುವ ಒಂದು ದೊಡ್ಡ ಗುಂಪೇ ಕಾಂಗ್ರೆಸ್‌ನಲ್ಲಿದೆ. ಇದೆಲ್ಲದರ ಹೊರ ತಾಗಿಯೂ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಡಿದು ನಿಂತಿದ್ದು ಜಿ23 ಬಣ. ಹೀಗೆ ಗಾಂಧಿ ಕುಟುಂಬದಿಂದ ಮಾತ್ರವೇಕಾಂಗ್ರೆಸ್ ಅಸ್ತಿತ್ವ ಸಾಧ್ಯ ಎಂಬವರು ಒಂದು ಕಡೆಯಾದರೆ, ಗಾಂಧಿ ಕುಟುಂಬದ ಹಿಡಿತದಿಂದ ಬಿಡಿಸಿಕೊಳ್ಳದೇ ಹೋದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂಬ ವಾದವೂ ಇನ್ನೊಂದೆಡೆ ಅಷ್ಟೇ ಪ್ರಬಲ ವಾಗಿದೆ. 2014ರಿಂದ ಶುರುವಾದ ಪಕ್ಷದ ದುರ್ದೆಸೆಗೆ ಕಳಪೆ ನಾಯಕತ್ವವೇ ಕಾರಣ ಎಂಬುದು ಎರಡನೇ ಗುಂಪಿನ ವಾದ. ಅಧಿಕೃತವಾಗಿ ಪಕ್ಷದ ಯಾವುದೇ ಹುದ್ದೆಯಲ್ಲಿರ ದಿದ್ದರೂ ಪಕ್ಷದ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ರಾಹುಲ್ ನಡೆಗೂ ಈ ಗುಂಪಿನ ಆಕ್ಷೇಪ ತೀವ್ರವಾಗಿದೆ.

ಪಕ್ಷದಲ್ಲಿ ಅನೇಕ ಹಿರಿಯ ನಾಯಕರನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿಯ ಬಗ್ಗೆಯೂ ಟೀಕೆಗಳು ಕೇಳಿ ಬರುತ್ತಲೇ ಇವೆ. ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಅಂಥವರನ್ನು ಕೆಟ್ಟದಾಗಿ ನಡೆಸಿಕೊಂಡಿರುವಲ್ಲಿ ಸೋನಿಯಾ ಅವರಿಗಿಂತ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರ ಪಾತ್ರ ಇದೆಯೆಂಬುದು ಕಾಂಗ್ರೆಸ್ ನಾಯಕತ್ವದ ವಿರುದ್ಧ ನಿಂತವರ ಆರೋಪ ವಾಗಿದೆ. ಸೋನಿಯಾ ಅವರ ಕೈಮೀರಿ ಕೆಲವು ನಿರ್ಧಾರಗಳು ಹೊರ ಬೀಳುತ್ತಿವೆ ಎಂಬುದು ಅವರ ತಕರಾರು. ಹಿರಿಯ ನಾಯಕರುಗಳಾದ ಕಪಿಲ್ ಸಿಬಲ್, ಆನಂದ್ ಶರ್ಮಾ, ಶಶಿ ತರೂರ್, ಮನಿಶ್ ತಿವಾರಿ, ಗುಲಾಂ ನಬಿ ಆಝಾದ್ ಮೊಲಾದವರೆಲ್ಲ ನಾಯಕತ್ವವನ್ನು ಪ್ರಶ್ನಿಸಿದವರೇ ಆಗಿದ್ದಾರೆ. ಗಾಂಧಿ ಕುಟುಂಬದ ಪರ ನಿಲ್ಲುವ ಗುಂಪಿನಲ್ಲಿ ಎ.ಕೆ. ಆ್ಯಂಟನಿ, ಮಲ್ಲಿಕಾರ್ಜುನ ಖರ್ಗೆಯವರಂಥ ಹಿರಿಯ ನಾಯಕರಿದ್ದಾರೆ. ಗಾಂಧಿ ಕುಟುಂಬದ ಕೈಯಲ್ಲಿ ಇಲ್ಲದಿದ್ದರೆ ಕಾಂಗ್ರೆಸ್ ಒಡೆದು ಹೋಳಾಗುತ್ತದೆ ಎಂಬ ಭಯ ಅವರದ್ದು.

ಸೋನಿಯಾ ಗಾಂಧಿಯವರು ತಮ್ಮ ಅಧ್ಯಕ್ಷತೆ ಅವಧಿಯಲ್ಲಿ ಪಕ್ಷಕ್ಕೆ ಬಲ ತುಂಬಿದರೆಂಬುದರ ಬಗ್ಗೆ ಬಹುಶಃ ಯಾವ ನಾಯಕರಲ್ಲಿಯೂ ಅನುಮಾನವಿಲ್ಲ. ಆದರೆ, ಪಕ್ಷಕ್ಕೆ ದೊಡ್ಡ ಹೊಡೆತ ಕೊಟ್ಟಿರುವ 2014 ಮತ್ತು 2019ರ ಮಹಾ ಚುನಾವಣೆಗಳಲ್ಲಿನ ದಯನೀಯ ಸೋಲು ಪಕ್ಷದ ನಾಯಕತ್ವದ ಬಗೆಗಿನ ಇಂಥದೊಂದು ಅಸಮಾಧಾನಕ್ಕೆ ಕಾರಣ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ ಎಂದು ಹಲವಾರು ನಾಯಕರು ಟೀಕಿಸುವಾಗಲೂ ಅವರ ದೃಷ್ಟಿಯಲ್ಲಿರುವುದು ರಾಹುಲ್, ಪ್ರಿಯಾಂಕಾ ಅವರ ನಡೆಯೇ ಆಗಿದೆ. 2021ರಲ್ಲಿ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನದಿಂದ ಹುಟ್ಟಿಕೊಂಡ ಜಿ23 ಗುಂಪು ಪಕ್ಷದೊಳಗೆ ಆಮೂಲಾಗ್ರ ಬದಲಾವಣೆಯಾಗಬೇಕಾದ ಅಗತ್ಯವನ್ನು ಒತ್ತಿಹೇಳಿತು. ಮಾತ್ರವಲ್ಲದೆ, ಅಧ್ಯಕ್ಷೀಯ ಚುನಾವಣೆ ಯಲ್ಲಿ ಪಾರದರ್ಶಕತೆ ತರಬೇಕೆಂದೂ ಒತ್ತಾಯಿಸಿತು.

ಪಕ್ಷದ ಅಧ್ಯಕ್ಷರಾಗಿದ್ದ ನಾಯಕರ ಸಾಲನ್ನೊಮ್ಮೆ ನೋಡಿಕೊಂಡರೆ, ಗಾಂಧಿ ಕುಟುಂಬದವರಲ್ಲದ ಹಲವರು ಕೂಡ ಪಕ್ಷದ ನಾಯಕತ್ವದ ಹೊಣೆಯನ್ನು ಸಮರ್ಥವಾಗಿಯೇ ನಿಭಾಯಿಸಿದ್ದರೆಂಬುದು ಗೊತ್ತಾಗುತ್ತದೆ. ಕಾಂಗ್ರೆಸ್‌ಗೆ ಗಾಂಧಿ ಕುಟುಂಬದವರೇ ಅನಿವಾರ್ಯ ವಲ್ಲ ಎಂಬುದನ್ನು ನಿರೂಪಿಸಿರುವ ಸಂಗತಿ ಇದು. ನೆಹರೂ, ಇಂದಿರಾ ಅವರ ಕಾಲಘಟ್ಟದಲ್ಲಿ ಪಕ್ಷದ ಮೇಲೆ ಗಾಂಧಿ ಕುಟುಂಬದ ಹಿಡಿತ ಹೇಗೇ ಇದ್ದರೂ ಅದಕ್ಕೊಂದು ಸಮರ್ಥನೆಯಾದರೂ ಸಿಗುವುದಕ್ಕೆ ಅವಕಾಶವಿತ್ತು. ಆದರೆ ಇಂದಿನ ಸ್ಥಿತಿ ಹಾಗಿಲ್ಲ. ಪಕ್ಷವು ಮತ್ತೆ ಮತ್ತೆ ಸೋಲು ಅನುಭವಿಸಿ ನೆಲ ಕಚ್ಚಿರುವುದು, ತನ್ನ ಆಡಳಿತದಲ್ಲಿದ್ದ ರಾಜ್ಯಗಳನ್ನೆಲ್ಲ ಒಂದೊಂದಾಗಿ ಕಳೆದುಕೊಳ್ಳುತ್ತ ಬಂದಿರುವುದು ನಾಯಕತ್ವದ ತಪ್ಪು ನಿರ್ಧಾರಗಳ ಕಾರಣದಿಂದ ಎಂಬುದು ಭಿನ್ನಮತೀಯ ನಾಯಕರುಗಳ ವಾದ. ಹೀಗೆ ಸೋಲಿನ ಹೊತ್ತಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತರಲು ಮತ್ತು ಗಾಂಧಿ ಕುಟುಂಬದ ಹಿಡಿತ ಕುರಿತ ಆರೋಪದಿಂದ ಮುಕ್ತವಾಗಲು ಕಾಂಗ್ರೆಸ್ ಚುಕ್ಕಾಣಿಯನ್ನು ಗಾಂಧಿ ಕುಟುಂಬಕ್ಕೆ ಹೊರತಾದ ನಾಯಕರ ಕೈಗೆ ಕೊಡುವ ಅನಿವಾರ್ಯತೆಯನ್ನು ಈ ಗುಂಪು ಪ್ರತಿಪಾದಿಸುತ್ತಿದೆ.

ಇವೆಲ್ಲದರ ಹಿನ್ನೆಲೆಯಲ್ಲಿ ಈಗ ಚುನಾವಣೆ ನಡೆಯುತ್ತಿದೆ ಯಾದರೂ, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಖರ್ಗೆಯವರನ್ನು ಕಣಕ್ಕಿಳಿಸಿರುವುದಕ್ಕೆ, ಮುಂದಿನ ದಿನಗಳಲ್ಲೂ ಪಕ್ಷದ ಮೇಲೆ ಹಿಡಿತ ಉಳಿಸಿಕೊಂಡಿರಬೇಕೆನ್ನುವ ಗಾಂಧಿ ಕುಟುಂಬದ ಇರಾದೆಯೇ ಕಾರಣ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಹೊಸ ಅಧ್ಯಕ್ಷರಾಗಿ ಬರುವವರೂ ಕೂಡ ಗಾಂಧಿ ಕುಟುಂಬದವರ ಕೈಯಲ್ಲಿರುವ ರಿಮೋಟ್ ನಿಂದ ನಡೆಯಬಲ್ಲ ಕೈಗೊಂಬೆ ಆಗಲಿದ್ದಾರೆ ಎಂಬ ಟೀಕೆಗಳು ಆಗಲೇ ಕೇಳಿಬಂದಿವೆ. ಮಾತ್ರವಲ್ಲ, ಚುನಾವಣೆ ಪಾರದರ್ಶಕತೆಯ ಬಗ್ಗೆಯೂ ಜಿ23 ಗುಂಪಿನ ನಾಯಕರು ಒತ್ತಾಯಿಸಿ, ಪ್ರತಿನಿಧಿಗಳ ಪಟ್ಟಿ ಬಹಿರಂಗಕ್ಕೆ ಕೇಳಿಕೊಂಡಿರುವುದನ್ನು ಗಮನಿಸಬೇಕು.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಿಂದ ದೂರ ನಿಂತಿರುವ ರಾಹುಲ್ ನಡೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯನ್ನು ದಶಕಗಳ ಬಳಿಕ ಸಾಧ್ಯಗೊಳಿಸಿದೆ ಎಂಬುದಂತೂ ನಿಜ. ಇದು ಕೇಳಿಬರುತ್ತಿರುವ ಅನೇಕ ಅಪಸ್ವರಗಳಂತೆ ಪಕ್ಷದ ಮೇಲೆ ಹಿಡಿತವಿಟ್ಟುಕೊಳ್ಳುವ ಆಸೆಯಿಂದಲೂ ದೂರವಾಗುವ ನಡೆಯಾಗಿದ್ದರೆ ಅದಕ್ಕೆ ಹೆಚ್ಚಿನ ಅರ್ಥ ಬರಲಿದೆ ಎಂಬುದು ಪರಿಣಿತರ ಅಭಿಮತ. ಯಾಕೆಂದರೆ ಅಧ್ಯಕ್ಷನಾಗುವವನ ಸಾಮರ್ಥ್ಯವನ್ನು ತಿಂದುಹಾಕುವ ಹಾಗೆ ಸೂತ್ರವೊಂದು ಗಾಂಧಿ ಕುಟುಂಬದ ಕೈಯಲ್ಲೇ ಇರುವುದಾದರೆ ಆಗ ಅಂಥ ವ್ಯತ್ಯಾಸವೇನೂ ಇರುವುದಿಲ್ಲ.

ಇದೊಂದು ಸಂಧಿಕಾಲದಂತಿರುವ ಹೊತ್ತು. ಈ ಚುನಾವಣೆಯಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧಿಸಿರುವುದು ಸಮರ್ಥ ನಾಯಕರೊಬ್ಬರ ಕೈಗೆ ಕಾಂಗ್ರೆಸ್ ಚುಕ್ಕಾಣಿ ಬಂದೀತೆಂಬ ನಿರೀಕ್ಷೆಗೆ ಎಡೆ ಮಾಡಿಕೊಟ್ಟಿದೆ. ಇತಿಹಾಸವನ್ನು ನೋಡಿಕೊಂಡರೆ ಕರ್ನಾಟಕದಿಂದ ಆಯ್ಕೆಯಾದ ಕಾಂಗ್ರೆಸ್‌ನ ಏಕೈಕ ಅಧ್ಯಕ್ಷರೆಂದರೆ ಎಸ್. ನಿಜಲಿಂಗಪ್ಪ. 1969ರಲ್ಲಿ ಇಂದಿರಾ ಅವರನ್ನು ಪಕ್ಷದಿಂದ ಉಚ್ಚಾಟಿಸಿ ದಿಟ್ಟತನ ಮೆರೆದಿದ್ದರು ಅವರು. ಖರ್ಗೆ ಕೂಡ ನಾಯಕತ್ವದ ವಿಚಾರದಲ್ಲಿ ಸ್ವಯಂ ಸಮರ್ಥರು. ಗಾಂಧಿ ಕುಟುಂಬದ ನಿಷ್ಠರೆಂಬುದೇ ಅವರ ದೌರ್ಬಲ್ಯವಾದೀತೆಂದೇನೂ ಇಲ್ಲ. ನಾಳೆಯ ಚುನಾವಣೆ ಮತ್ತು 19ರಂದು ಹೊರಬೀಳಲಿರುವ ಫಲಿತಾಂಶ ಕಾಂಗ್ರೆಸ್ ದೆಸೆಯನ್ನು ಹೇಗೆ ಬದಲಿಸಬಹುದೆಂಬುದನ್ನು ಕಾದುನೋಡುವುದಷ್ಟೇ ಈಗ ಬಾಕಿ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top