ಒಡಕಿನ ಬಡಿತದ ಹುನ್ನಾರಗಳ ಕಾಣೊ ಓ ಕರ್ನಾಟಕ ಹೃದಯ ಶಿವ!

ರಾಜ್ಯವೊಂದು ವಿಭಜನೆಗೊಂಡಾಗ ಅಭಿವೃದ್ಧಿಗೆ ಆರ್ಥಿಕ ಮೂಲವೆಲ್ಲಿ? ಒಂದನ್ನೊಂದು ಅವಲಂಬಿಸಿಯೇ ಇರಬೇಕಾದ ರಾಜ್ಯದ ಭಾಗಗಳು ಪ್ರತ್ಯೇಕತೆಯ ಪ್ರಲೋಭನೆಗೆ ಸಿಕ್ಕಿಬಿಟ್ಟರೆ ತಮಗೆ ತಾವೇ ಗಂಡಭೇರುಂಡದ ಸ್ಥಿತಿಯನ್ನು ತಂದುಕೊಳ್ಳುತ್ತವೆ. ಇಂಥ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳದೇ ಹೋದರೆ, ಕರ್ನಾಟಕದಂಥ ರಾಜ್ಯವೊಂದರ ಅಖಂಡತ್ವಕ್ಕೆ ಕಡೆಗೆ ಒದಗುವುದು ಇನ್ನಾರದೋ ಕೈಯಲ್ಲಿ ಒಡಕಿನ ಬಿಂಬವಾಗಬಹುದಾದ ವಿಷಾದಯೋಗವಷ್ಟೆ.
ಮತ್ತೆ ಪ್ರತ್ಯೇಕತೆಯ ಕೂಗು ಕೇಳಿಬಂದಿದೆ. ರಾಜ್ಯೋತ್ಸವ ಆಚರಣೆ ವೇಳೆ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಧ್ವಜಾರೋಹಣಕ್ಕೆ ಯತ್ನಿಸಿದ ಪ್ರಸಂಗ ನಡೆದಿದೆ.
ಪ್ರತ್ಯೇಕತೆ ಕೂಗು ಎಂಬುದು ಕರ್ನಾಟಕದ ಒಡಲೊಳಗೇ ಇರುವ ಡವಡವ; ಏಳುತ್ತಲೇ ಇರುವ ಅಪಸ್ವರ. ಎಷ್ಟೋ ಸಲ ಅದು ನ್ಯಾಯಕ್ಕಾಗಿ ಕೇಳುವುದರ ಭಾಗವಾಗಿ ವ್ಯಕ್ತವಾಗುವ ದನಿ ಎನ್ನಿಸಿದರೂ, ಜನರ ಭಾವನೆಗಳನ್ನು ತಮಗೆ ಬೇಕಾದಂತೆ ಬಳಸಿಕೊಂಡು ಪ್ರಚೋದಿಸುವವರ ರಾಜಕೀಯವೂ ಹಿಂದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಒಡೆದು ಆಳುವ, ಎಲ್ಲವನ್ನೂ ದುರ್ಬಲವಾಗಿಸುತ್ತ ಪ್ರಾಬಲ್ಯ ಸಾಧಿಸುವ ಹುನ್ನಾರಗಳು ದೇಶಾದ್ಯಂತ ಸದ್ದು ಮಾಡುತ್ತಿರುವ ಹೊತ್ತಲ್ಲಿ, ಅಖಂಡ ಕರ್ನಾಟಕದೊಳಗಿನ ಪ್ರತ್ಯೇಕತೆಯ ಅಪಸ್ವರವೂ ಗೊಂದಲಕ್ಕೆಡೆ ಮಾಡುವಂತೆ ಕಾಣಿಸುವುದುಂಟು.
ಹಿಂದೆಲ್ಲ ಕೊಡವ ಪ್ರತ್ಯೇಕ ರಾಜ್ಯದ ಕೂಗು ಜೋರಾಗಿತ್ತು. ಈಗಲೂ ಅದು ಆಗೀಗ ಕೇಳಿಬರುತ್ತಲೇ ಇದೆ. ಉತ್ತರ ಕರ್ನಾಟಕವನ್ನೇ ಪ್ರತ್ಯೇಕ ರಾಜ್ಯವಾಗಿಸಬೇಕೆಂಬ ಒತ್ತಾಯ ಪ್ರಬಲವಾಗುವುದು ಒಂದೆಡೆಯಾದರೆ, ತುಳುನಾಡಿಗೆ ಪ್ರತ್ಯೇಕ ರಾಜ್ಯ ಕೊಡಿ ಎಂದು ಕರಾವಳಿಯಲ್ಲೂ ಕೂಗೇಳುತ್ತಿರುತ್ತದೆ. ಹೈದರಾಬಾದ್ ಕರ್ನಾಟಕದಲ್ಲೂ ಕಳೆದ ಕೆಲ ವರ್ಷಗಳಿಂದ ಪ್ರತ್ಯೇಕತೆ ಕುರಿತ ಆಗ್ರಹ ಕೇಳಿಸುತ್ತಿದೆ. ಪ್ರತ್ಯೇಕತೆ ಕೂಗಿನ ಹಿಂದಿನ ರಾಜಕೀಯ ಪ್ರಚೋದನೆ, ಪ್ರಲೋಭಗಳೇನೇ ಇದ್ದರೂ, ಅಲ್ಲಿ ವ್ಯಕ್ತವಾಗುವ ಮಲತಾಯಿ ಧೋರಣೆ ಕುರಿತ ಆಕ್ಷೇಪವನ್ನು ಬಹಳ ಸಲ ನಿರಾಕರಿಸಲಿಕ್ಕಾಗುವುದಿಲ್ಲ ಎಂಬುದೇ ಕಟುವಾಸ್ತವ. ಹಿಂದುಳಿದ ಪ್ರದೇಶಗಳ ಪಟ್ಟಿ ನೋಡಿಕೊಂಡರೆ ಹೆಚ್ಚಿನವು ಇರುವುದು ಹೈದರಾಬಾದ್ ಕರ್ನಾಟಕದಲ್ಲಿ. ಲಾಗಾಯ್ತಿನಿಂದಲೂ ಇರುವ ಈ ಅವಸ್ಥೆ ಇಂದಿಗೂ ಬದಲಾಗಿಲ್ಲವೆಂಬುದೇ ಆಕ್ರೋಶದ ಹಿಂದಿನ ಕಾರಣವಾಗುವುದಿದೆ.
ತಿಳಿದವರು ಗುರುತಿಸುವ ಒಂದು ವಿಪರ್ಯಾಸವನ್ನು ಗಮನಿಸಬೇಕು. ಇತಿಹಾಸವನ್ನು ನೋಡಿಕೊಂಡರೆ, ಕರ್ನಾಟಕ ಏಕೀಕರಣದ ಧ್ವನಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿದ್ದಷ್ಟು ಹಳೇ ಮೈಸೂರು ಪ್ರಾಂತದಲ್ಲಿರಲಿಲ್ಲ. ಒಗ್ಗೂಡುವ ತುರ್ತು ಕಾಣಿಸದಂಥ ಒಳ್ಳೆಯ ಆಳ್ವಿಕೆಗಳನ್ನು ಅನುಭವಿಸಿದ ಪ್ರಾಂತ ಅದಾಗಿತ್ತು. ಆದರೆ ಏಕೀಕರಣಕ್ಕೆ ಪ್ರೇರಣೆಯಾಗಿ ಯಾವುದು ಕೆಲಸ ಮಾಡಿತ್ತೊ ಆ ಅಭಿವೃದ್ಧಿಯ ಹಂಬಲ ಇಷ್ಟು ಕಾಲದ ಬಳಿಕವೂ ಈಡೇರದೆ ಇರುವುದು ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳ ಬೇಗುದಿಯನ್ನು ಹೆಚ್ಚಿಸುತ್ತಲೇ ಇದೆ. ಈ ಬೇಗುದಿಯೇ ಒಡಕಿನ ದನಿಯಾಗುವುದು. ರಾಜಕಾರಣಿಗಳಿಗಂತೂ ತಾತ್ಕಾಲಿಕ ರಾಜಕೀಯ ಆಕಾಂಕ್ಷೆಯಷ್ಟೇ ಮುಖ್ಯವಾಗುವುದರಿಂದ, ಅವರಿಗೆ ಇತ್ತ ಅಖಂಡ ಕರ್ನಾಟಕದ ಪರಿಕಲ್ಪನೆಯೂ ಇಲ್ಲ; ಅತ್ತ ಅಭಿವೃದ್ಧಿಯ ಪರಿಕಲ್ಪನೆಯೂ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಿನ ತಾರತಮ್ಯದ ಚಿತ್ರವೇ ಈ ಅಂಶವನ್ನು ಹೇಳುತ್ತಿದೆ. ಹಾಗಾಗಿ, ಕಡೆಗಣನೆಗೆ ತುತ್ತಾಗಿರುವ ಭಾವನೆಯೇ ಸಾಕಾಗುತ್ತದೆ, ಪ್ರಚೋದನೆಗೆ ಒಳಗಾಗುವುದಕ್ಕೆ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲ ಜಿಲ್ಲೆಗಳೂ ಒಂದೇ ಮಟ್ಟದಲ್ಲಿ ಬರುವಂತಾಗುವ ನಿಟ್ಟಿನ ಇಚ್ಛಾಶಕ್ತಿಯನ್ನು ಸರಕಾರಗಳು ತೋರದ ಹೊರತು ಈ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಅನುಮಾನವೇನೆಂದರೆ, ಈ ಬಿಕ್ಕಟ್ಟು ಬಗೆಹರಿಯಕೂಡದೆಂಬುದೇ ರಾಜಕಾರಣದ ಉದ್ದೇಶವೇ ಎಂಬುದು.
ಯಾಕೆಂದರೆ, ರಾಜಕಾರಣವು ಜನರ ವಿಚಾರದಲ್ಲಿ ತೋರುವ ತಾರತಮ್ಯ ಒಮ್ಮೊಮ್ಮೆ ಯಾವ ಭಾಗದವರು ತಮಗೆ ಮತ ಹಾಕಿದರು ಮತ್ತು ಯಾರು ಹಾಕಲಿಲ್ಲ ಎಂಬುದರ ಲೆಕ್ಕಾಚಾರದಲ್ಲೂ ನಿರ್ಧರಿತವಾಗುತ್ತದೆ. ಅಷ್ಟರ ಮಟ್ಟಿಗಿನ ನೀಚ ಮನಃಸ್ಥಿತಿ ಉಳಿದೆಲ್ಲವನ್ನೂ ಪ್ರಭಾವಿಸುತ್ತಿದೆ. ಪ್ರತ್ಯೇಕತೆಯ ಕೂಗು ಇಂತಹ ಮನಃಸ್ಥಿತಿಯದ್ದೇ ಭಾಗವಾಗಿಬಿಡುವ ಅಪಾಯವೂ ಇಲ್ಲದೇ ಇಲ್ಲ. ಸಾತ್ವಿಕ ಕೂಗೊಂದು ಯಾವುದೋ ಸ್ವಾರ್ಥದ ದಾಳವಾಗಿಬಿಡಬಹುದಾದ ಅಪಾಯವಿದು.
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿನ ಭಾಷಾವಾರು ಪ್ರಾಂತಗಳ ಬಂಧ, ಸಾಂಸ್ಕೃತಿಕ ವೈವಿಧ್ಯತೆಯ ಸೊಗಸು, ವಿಶಿಷ್ಟ ಕೊಡುಕೊಳ್ಳುವಿಕೆಯಲ್ಲಿರುವ ಬಂಧುರತೆ ಇವಾವುದೂ ಇಂದಿನ ರಾಜಕಾರಣದ ಅಜೆಂಡಾಕ್ಕೆ ಬೇಕಿರುವ ಸಂಗತಿಗಳಲ್ಲ. ಒಂದು ದೇಶ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ತೆರಿಗೆ ಎಂದು ಹೊರಟಿರುವ ಈ ನಡೆಗೆ ಮುಖ್ಯವಾಗಿರುವುದು ಕೇಂದ್ರವು ಬಲಿಷ್ಠಗೊಂಡು, ರಾಜ್ಯಗಳು ದುರ್ಬಲಗೊಳ್ಳುವ ಸ್ಥಿತಿ. ರಾಜ್ಯವೊಂದು ವಿಭಜನೆಗೊಂಡಾಗ ಅಭಿವೃದ್ಧಿಗೆ ಆರ್ಥಿಕ ಮೂಲವೆಲ್ಲಿ? ಒಂದನ್ನೊಂದು ಅವಲಂಬಿಸಿಯೇ ಇರಬೇಕಾದ ರಾಜ್ಯದ ಭಾಗಗಳು ಪ್ರತ್ಯೇಕತೆಯ ಪ್ರಲೋಭನೆಗೆ ಸಿಕ್ಕಿಬಿಟ್ಟರೆ ತಮಗೆ ತಾವೇ ಗಂಡಭೇರುಂಡದ ಸ್ಥಿತಿಯನ್ನು ತಂದುಕೊಳ್ಳುತ್ತವೆ. ಇಂತಹ ಸ್ಥಿತಿಗೆ ಅವನ್ನು ದೂಡಿ, ಕಡೆಗೆ ಪೂರ್ತಿಯಾಗಿ ತನ್ನನ್ನೇ ಅವಲಂಬಿಸುವಂತೆ ಮಾಡುವುದು ಕೇಂದ್ರದ ಧೋರಣೆಯಾಗಿದೆಯೆಂಬ ಅನುಮಾನ ಮತ್ತೆ ಮತ್ತೆ ಕಾಡುತ್ತಲೇ ಇದೆ. ಇಂತಹ ಸೂಕ್ಷ್ಮಗಳನ್ನು ಪ್ರಜಾಪ್ರಭುತ್ವದ ನಿಜವಾದ ಪ್ರಭುಗಳಾದ ಜನರು ಅರ್ಥ ಮಾಡಿಕೊಳ್ಳದೇ ಹೋದರೆ, ಕರ್ನಾಟಕದಂತಹ ರಾಜ್ಯವೊಂದರ ಅಖಂಡತ್ವಕ್ಕೆ ಕಡೆಗೆ ಒದಗುವುದು ಇನ್ನಾರದೋ ಕೈಯಲ್ಲಿ ಒಡಕಿನ ಬಿಂಬವಾಗಬಹುದಾದ ವಿಷಾದಯೋಗವಷ್ಟೆ.







