ಭಾರತದ ಆರ್ಥಿಕತೆಯ ವಾಸ್ತವಗಳ ಸುತ್ತ...
-

ಭಾರತದ ಮೂಲ ಸಂರಚನೆಗಳು ಪ್ರಬಲವಾಗಿರುವುದರಿಂದ ಮತ್ತು ಅಗಾಧವಾದ ಕೌಶಲ್ಯವೂ ಇರುವುದರಿಂದ, ಇಷ್ಟೊಂದು ವಿಶಾಲವಾಗಿರುವ ಅರ್ಥವ್ಯವಸ್ಥೆಯು ಏಕೆ ಹಿಂದುಳಿಯಬೇಕು? ಇಷ್ಟು ಬೃಹತ್ ಸಂಖ್ಯೆಯ ಜನರ ಆದಾಯ ಏಕೆ ಕ್ಷೀಣಿಸಬೇಕು? ನಮ್ಮ ಆಡಳಿತ ನೀತಿಗಳು, ಕೆಲವೇ ಶ್ರೀಮಂತ ಉದ್ದಿಮೆಗಳ ಬದಲು ಜನಸಂಖ್ಯೆಯ ಬೃಹತ್ ಜನಸಮುದಾಯಗಳನ್ನು, ಅಂದರೆ ಸಣ್ಣ ವ್ಯಾಪಾರ, ರೈತರು, ಸಾಮಾನ್ಯ ಕಾರ್ಮಿಕರನ್ನು, ಗುರಿಯಾಗಿಸಬೇಕಿದೆ. ಕಳೆದ ಹಲವು ವರ್ಷಗಳಲ್ಲಿ ಭಾರತದಲ್ಲಿ ಅಸಮಾನತೆಯೂ ಅಸಮಂಜಸವಾಗಿ ಹೆಚ್ಚಾಗಿರುವುದರಿಂದ ಇದಕ್ಕೆ ವಿಪುಲವಾದ ಅವಕಾಶಗಳೂ ಇವೆ.
ಕೋವಿಡ್-19 ಸಾಂಕ್ರಾಮಿಕವು ಕ್ರಮೇಣ ಮಸುಕಾಗುತ್ತಿದ್ದು ಎಲ್ಲ ದೇಶಗಳೂ, ಸಮಾಜಗಳೂ ಸಹಜ ಸ್ಥಿತಿಗೆ ಮರಳುವ ಭರವಸೆಯನ್ನು ಕಾಣುತ್ತಿವೆ. ನಾವು ಎಲ್ಲಿ ನಿಂತಿದ್ದೇವೆ ಮತ್ತು ನಮ್ಮ ಭವಿಷ್ಯ ಹೇಗಿರುತ್ತದೆ ಎಂದು ಅರಿಯುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲೇ ಭಾರತವು ಆರ್ಥಿಕ ಕ್ಷೇತ್ರದಲ್ಲಿ ಕಳೆದ ಹಲವು ವರ್ಷಗಳಲ್ಲಿ ಯಾವ ರೀತಿಯ ಪ್ರಗತಿ ಸಾಧಿಸಿವೆ ಎಂದು ಅವಲೋಕನ ಮಾಡಲಿಚ್ಛಿಸುತ್ತೇನೆ. ನಾವು ಧ್ರುವೀಕರಣದ ಕಾಲಘಟ್ಟದಲ್ಲಿರುವುದರಿಂದ ಒಂದು ಗುಂಪು ಭಾರತದ ಆರ್ಥಿಕತೆಯ ನೀರಸ ಬೆಳವಣಿಗೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದರೆ ಮತ್ತೊಂದು ವಲಯದಲ್ಲಿ ಆರ್ಥಿಕತೆಯು ಅಪಾರ ಮುನ್ನಡೆ ಸಾಧಿಸಿದೆ ಎಂಬ ವಾದ ಮಂಡಿಸಲಾಗುತ್ತಿದೆ. ಆದರೆ ವಾಸ್ತವತೆಯು ಇವೆರಡರ ನಡುವೆಯೇ ಕಂಡುಬರುತ್ತದೆ. ಭಾರತದ ರೂಪಾಯಿ ಸತತವಾಗಿ ದುರ್ಬಲವಾಗುತ್ತಿರುವುದು ಸತ್ಯ. (ರೂಪಾಯಿಯನ್ನು ಬಲಪಡಿಸುವ ನಮ್ಮ ರಾಜಕೀಯ ನಾಯಕರ ಆಶ್ವಾಸನೆಗಳ ಹೊರತಾಗಿಯೂ ಇದು ವಾಸ್ತವ). ಹಾಗೆಯೇ ಹಣದುಬ್ಬರವೂ ಶೇ. 7.4ರಷ್ಟು ತಲುಪಿದ್ದು ಏರುಗತಿಯಲ್ಲೇ ಸಾಗಿದೆ. ಆದರೆ ಇವೆಲ್ಲವೂ ಜಾಗತಿಕ ಸಮಸ್ಯೆಗಳು. ಅಮೆರಿಕದ ಡಾಲರ್ ಎದುರು ಎಲ್ಲ ದೇಶಗಳ ಕರೆನ್ಸಿಗಳೂ ಅಪಮೌಲ್ಯಗೊಳ್ಳುತ್ತಿವೆ. ಇಂದು ಹಣದುಬ್ಬರ ಎನ್ನುವುದು ಜಾಗತಿಕ ವಿದ್ಯಮಾನವಾಗಿದೆ. ಭಾರತದ ಕಳಪೆ ಸಾಧನೆ ಮುಖ್ಯವಾಗಿ ಕಂಡುಬರುವುದು ಉದ್ಯೋಗ ಸೃಷ್ಟಿಸುವುದರಲ್ಲಿ. ಭಾರತದ ನಿರುದ್ಯೋಗ ಪ್ರಮಾಣ ಅಕ್ಟೋಬರ್‌ನಲ್ಲಿ ಶೇ. 7.8ರಷ್ಟಾಗಿದೆ. ಇಲ್ಲಿ ಚಿಂತೆಗೀಡುಮಾಡುವ ವಿಚಾರ ಎಂದರೆ ಯುವ ಸಮುದಾಯದಲ್ಲಿರುವ ನಿರುದ್ಯೋಗ ಪ್ರಮಾಣ. ವಿಶ್ವ ಬ್ಯಾಂಕ್ ಸಿದ್ಧಪಡಿಸಿ ಪ್ರಕಟಿಸುವ ಐಎಲ್‌ಒ ದತ್ತಾಂಶಗಳ ಅನುಸಾರ ಭಾರತದಲ್ಲಿ ಯುವ ಪೀಳಿಗೆಯ ನಿರುದ್ಯೋಗ ಪ್ರಮಾಣ, ಅಂದರೆ 15ರಿಂದ 24 ವಯೋಮಾನದೊಳಗಿದ್ದು ಉದ್ಯೋಗವನ್ನು ಅರಸುತ್ತಿರುವವರ ಪ್ರಮಾಣ, ಶೇ. 28.3ರಷ್ಟಾಗಿದೆ. ಇದು ಭಾರತವನ್ನು ಇದೇ ಪ್ರಮಾಣದ ನಿರುದ್ಯೋಗ ಎದುರಿಸುತ್ತಿರುವ ಇರಾನ್ (ಶೇ. 27.2), ಈಜಿಪ್ಟ್ (ಶೇ. 24.3) ಮತ್ತು ಸಿರಿಯಾ (ಶೇ. 26.2) ದೇಶಗಳ ಗುಂಪಿನಲ್ಲಿರಿಸುತ್ತದೆ. ಏಶ್ಯದ ಕೆಲವು ರಾಷ್ಟ್ರಗಳಿಗೆ ಹೋಲಿಸಿದಾಗ, ಉದಾಹರಣೆಗೆ ಇಂಡೋನೇಶ್ಯ (ಶೇ. 16), ಮಲೇಶ್ಯಾ (ಶೇ. 15.6) ಮತ್ತು ಬಾಂಗ್ಲಾದೇಶ (ಶೇ. 14.7), ಭಾರತದ ಸ್ಥಿತಿ ಇನ್ನೂ ಹೀನಾಯವಾಗಿ ಕಾಣುತ್ತದೆ.
ಬೆಳವಣಿಗೆ ಕುರಿತ ಮಿಶ್ರ ಪ್ರತಿಪಾದನೆ
ಭಾರತದ ಬೆಳವಣಿಗೆಯ ಕತೆಯೇ ಮಿಶ್ರ ಪ್ರತಿಪಾದನೆಯಾಗಿದೆ. 2021-22ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 8.7ರಷ್ಟಿದೆ. ಇದು ವಿಶ್ವದಲ್ಲೇ ಗರಿಷ್ಠ ಪ್ರಮಾಣವೂ ಆಗಿದೆ. ಇದು ಉತ್ತಮ ಸಾಧನೆಯೇ. ಆದರೆ ಮತ್ತೊಂದು ಬದಿಯಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಈ ಬೆಳವಣಿಗೆಯು ನಾವು ಕಳೆದ ವರ್ಷ ಕುಸಿದಿದ್ದ ಪಾತಾಳದಿಂದ ಮೇಲೇರಿರುವುದನ್ನು ಪ್ರತಿನಿಧಿಸುತ್ತದೆ. 2020-21ರಲ್ಲಿ ಭಾರತದ ಬೆಳವಣಿಗೆಯ ದರ ಮೈನಸ್ ಶೇ. 6.6ರಷ್ಟಿತ್ತು. ಅಂದರೆ ಜಾಗತಿಕ ಬೆಳವಣಿಗೆಯ ಕೋಷ್ಟಕದಲ್ಲಿ ಭಾರತ ಕೆಳಹಂತದಲ್ಲಿತ್ತು. 2022-23ರಲ್ಲಿ ಭಾರತದ ಬೆಳವಣಿಗೆಯು ಶೇ. 6.1ರಷ್ಟಾಗಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಅಂಶಗಳು ಚಿಂತೆಗೀಡುಮಾಡುತ್ತವೆ. ಮೊದಲನೆಯದಾಗಿ, ಭಾರತದ ಬೆಳವಣಿಗೆಯು ಬಹುತೇಕವಾಗಿ ಮೇಲ್‌ಸ್ತರದಲ್ಲೇ ದಾಖಲಾಗುತ್ತಿರುವುದರಿಂದ ಕೆಲವೇ ಉದ್ದಿಮೆಗಳು, ಕಾರ್ಪೋರೇಶನ್‌ಗಳು ವಿಷಮ ಪ್ರಮಾಣದ ಲಾಭಾಂಶವನ್ನು ಬಾಚಿಕೊಳ್ಳುತ್ತಿವೆ. ಮತ್ತೊಂದೆಡೆ ನಿರುದ್ಯೋಗವು ತೀವ್ರ ಹೆಚ್ಚಳ ಕಂಡಿದೆ. ಈ ಹಿನ್ನೆಲೆಯಲ್ಲಿ ಬಹುಸಂಖ್ಯೆಯ ಜನರು ಋಣಾತ್ಮಕ ಬೆಳವಣಿಗೆಯನ್ನು ಎದುರಿಸುತ್ತಿದ್ದಾರೆ. ಎರಡನೇ ಅಂಶವೆಂದರೆ, ಜಾಗತಿಕ ಮಟ್ಟದಲ್ಲಿ ಭಾರತದ ಶ್ರೇಣಿ ಕುಸಿಯುತ್ತಿರುವುದಕ್ಕಿಂತಲೂ ಹೆಚ್ಚಾಗಿ, ತನ್ನದೇ ಹಿಂದಿನ ಸಾಧನೆಗಳಿಗೆ ಹೋಲಿಸಿದರೆ ಭಾರತದ ಸಾಧನೆ ಕ್ರಮೇಣ ಕುಸಿಯುತ್ತಲೇ ಇದೆ.
ಭಾರತದ ವಾಸ್ತವ ಚಿತ್ರಣವನ್ನು ಸಂಕ್ಷಿಪ್ತವಾಗಿ ಹೀಗೆ ಬಣ್ಣಿಸಬಹುದು: ಸ್ವಾತಂತ್ರ್ಯಾನಂತರ ನಾಲ್ಕು ದಶಕಗಳ ಕಾಲ ಮಂದಗತಿಯ ಬೆಳವಣಿಗೆಯ ನಂತರ ಭಾರತದ ಆರ್ಥಿಕ ಬೆಳವಣಿಗೆಯು 1990ರ ದಶಕದಲ್ಲಿ, 1991-93ರ ಆರ್ಥಿಕ ಸುಧಾರಣೆಗಳ ಪರಿಣಾಮ, ಚೇತರಿಕೆ ಕಂಡಿತ್ತು. 2003ರ ನಂತರದಲ್ಲಿ ಮತ್ತಷ್ಟು ಬೆಳವಣಿಗೆ ದಾಖಲಾಗಿತ್ತು. ಭಾರತ ಏಶ್ಯದ ಅತ್ಯುತ್ತಮ ಸಾಧಕರ ನಡುವೆ ಗುರುತಿಸಿಕೊಂಡಿತ್ತು. 2005-08ರ ಅವಧಿಯಲ್ಲಿ ಬಹುತೇಕ ಸೂಚ್ಯಂಕಗಳ ಪಟ್ಟಿಯಲ್ಲಿ ಭಾರತ ಉನ್ನತ ಸ್ಥಾನವನ್ನು ಪಡೆದು ಪ್ರಶಂಸೆಗೊಳಗಾಗಿತ್ತು. ಸತತ ಮೂರು ವರ್ಷಗಳ ಕಾಲ ಭಾರತ ಕ್ರಮವಾಗಿ ಶೇ. 9.3, ಶೇ. 9.2 ಮತ್ತು ಶೇ .10.2ರಷ್ಟು ಬೆಳವಣಿಗೆಯನ್ನು ಕಂಡಿತ್ತು. ಇತ್ತೀಚಿನ ಸಮಯಗಳಲ್ಲಿ ಈ ವರ್ಷಗಳ ಅಧಿಕೃತ ಅಂದಾಜುಗಳನ್ನು ಕೆಳಮುಖವಾಗಿ ಪರಿಷ್ಕರಿಸಲಾಗಿದೆ ಎನ್ನುವುದನ್ನು ಗಮನಿಸಬೇಕಿದೆ. ಇತ್ತೀಚಿನ ಆರ್ಥಿಕ ಸಮೀಕ್ಷೆಯಲ್ಲಿ ಈ ಬೆಳವಣಿಗೆಯ ದರವನ್ನು ಕ್ರಮವಾಗಿ ಶೇ. 7.9, ಶೇ. 8.0 ಮತ್ತು ಶೇ. 8.0ಕ್ಕೆ ಪರಿಷ್ಕರಿಸಲಾಗಿದೆ.
ಇದರ ಹೊರತಾಗಿಯೂ ಭಾರತದ ಸಾಧನೆ ಉತ್ತಮವಾಗಿಯೇ ಕಾಣುತ್ತದೆ. 2003ರಿಂದ 2011ರವರೆಗೆ, ಜಾಗತಿಕ ಆರ್ಥಿಕ ಹಿಂಜರಿತ ಎದುರಾದ 2008-09ರ ಒಂದು ವರ್ಷವನ್ನು ಹೊರತುಪಡಿಸಿದರೆ, ಭಾರತ ಜಾಗತಿಕ ಶ್ರೇಣಿಯಲ್ಲಿ ಉನ್ನತ ಮಟ್ಟವನ್ನೇ ಕಾಪಾಡಿಕೊಂಡಿದ್ದು ಉತ್ತಮ ಬೆಳವಣಿಗೆಯನ್ನು ಕಂಡಿದೆ. ವರ್ತಮಾನದ ಪರಿಸ್ಥಿತಿ ಗಂಭೀರವಾಗಿ ಕಾಣುವುದು, ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಭಾರತ ಇತರ ಬಹುಪಾಲು ರಾಷ್ಟ್ರಗಳಿಗೆ ಹೋಲಿಸಿದರೆ ನಿಧಾನಗತಿಯ ಬೆಳವಣಿಗೆಯನ್ನು ಕಂಡಿದೆ ಎನ್ನುವ ಅಂಶವೊಂದೇ ಅಲ್ಲ. ಆ ಪ್ರಕ್ಷುಬ್ಧ ಸಮಯದಲ್ಲಿ ಅನೇಕ ರಾಷ್ಟ್ರಗಳು ತಪ್ಪು ಹೆಜ್ಜೆಗಳನ್ನಿಟ್ಟಿವೆ. ಭಾರತದ ಬೆಳವಣಿಗೆಯ ಹಾದಿಯಲ್ಲಿ ಚಿಂತೆಗೀಡುಮಾಡುವ ವಿಚಾರ ಎಂದರೆ, ಇಲ್ಲಿ ಕುಂಠಿತ ಬೆಳವಣಿಗೆಯು ಕೋವಿಡ್-19 ಸಾಂಕ್ರಾಮಿಕದ ದಾಳಿಗೂ ಮುನ್ನವೇ ಆರಂಭವಾಗಿದೆ. ಇದು ಆರಂಭವಾದದ್ದು 2016ರಲ್ಲಿ ಮತ್ತು ಆನಂತರದ ನಾಲ್ಕು ವರ್ಷಗಳು ಸತತವಾಗಿ ಪ್ರತಿವರ್ಷದ ಬೆಳವಣಿಗೆಯ ದರವು ಹಿಂದಿನ ವರ್ಷಕ್ಕಿಂತಲೂ ಕಡಿಮೆಯೇ ದಾಖಲಾಗಿದೆ. 2016-17ರಲ್ಲಿ ಬೆಳವಣಿಗೆಯು ಶೇ. 8.3ರಷ್ಟಿತ್ತು, ತದನಂತರ ಕ್ರಮವಾಗಿ ಶೇ. 6.9, ಶೇ. 6.6, ಶೇ. 4.8 ಮತ್ತು ಮೈನಸ್ ಶೇ. 6.6ಷ್ಟು ದಾಖಲಾಗಿದೆ. ಈ ಕೆಳಮುಖಿ ಚಲನೆಯು ನಾಲ್ಕು ವರ್ಷಗಳ ಕಾಲ ಮುಂದುವರಿದಿದ್ದು, ಇದು 1947ರ ನಂತರದ ಸ್ವತಂತ್ರ ಭಾರತದಲ್ಲಿ ಎಂದೂ ಸಂಭವಿಸಿರಲಿಲ್ಲ.
ಏಕೆ ಹೀಗಾಗುತ್ತಿದೆ? ಕಳೆದ ಆರು-ಏಳು ವರ್ಷಗಳ ಅವಧಿಯಲ್ಲಿ ನಾವು ಭಾರತದ ಆಡಳಿತ ನೀತಿಗಳತ್ತ ಗಮನಹರಿಸಿದರೆ ಕೆಲವು ಉತ್ತಮವಾದ ಮತ್ತು ಕೆಲವು ತಪ್ಪು ಹೆಜ್ಜೆಗಳನ್ನು ಗುರುತಿಸಬಹುದು. ದಿವಾಳಿಯಾದ ಉದ್ದಿಮೆಗಳು ತಮ್ಮ ವ್ಯಾಪಾರವನ್ನು ಮುಚ್ಚಿ ಮುನ್ನಡೆಯಲು ಭಾರತ ಸುಗಮ ಹಾದಿಯನ್ನು ಕಲ್ಪಿಸಬೇಕಿತ್ತು. ಇದಿಲ್ಲದೆ ಬೆಳವಣಿಗೆಯು ಕುಂಠಿತವಾಗಿತ್ತು. ಆದ್ದರಿಂದ ಭಾರತವು 2016ರಲ್ಲಿ ನೂತನ ದಿವಾಳಿತನ ಮತ್ತು ಪಾಪರುಗಿರಿ ಸಂಹಿತೆಯನ್ನು ಜಾರಿಗೊಳಿಸಿದ್ದು ಉತ್ತಮ ಕ್ರಮವಾಗಿತ್ತು. ಮತ್ತೊಂದೆಡೆ 2016ರ ನೋಟು ಅಮಾನ್ಯ ದೊಡ್ಡ ಪ್ರಮಾದವಾಗಿತ್ತು. ಈ ಕುರಿತು ಸಾಕಷ್ಟು ಬರೆಯಲಾಗಿದ್ದು, ಹೆಚ್ಚು ವಿಸ್ತರಿಸುವ ಅವಶ್ಯಕತೆ ಇಲ್ಲ.
ಭಾರತದ ಬಂಡವಾಳ ಹೂಡಿಕೆಯ ದರ
ಕಳೆದ ಆರು ವರ್ಷಗಳಲ್ಲಿ ಭಾರತದ ಬೆಳವಣಿಗೆಯು ಕುಂಠಿತವಾಗಿರುವುದನ್ನು ಬಹುಪಾಲು ನಿರ್ಲಕ್ಷಿಸುತ್ತಲೇ ಬರಲಾಗಿದ್ದು, ಈ ಕುರಿತು ಗಮನಹರಿಸಲಿಚ್ಛಿಸುತ್ತೇನೆ. ಪಠ್ಯಪುಸ್ತಕಗಳ ಅರ್ಥಶಾಸ್ತ್ರ ಮಾದರಿಗಳಿಂದ ನಮಗೆ ಅರ್ಥವಾಗಿರುವುದೇನೆಂದರೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಬಹುಮುಖ್ಯ ಅಂಶವೆಂದರೆ ಬಂಡವಾಳ ಹೂಡಿಕೆಯ ಪ್ರಮಾಣ. ಅಂದರೆ ಬಂಡವಾಳ ಹೂಡಿಕೆಗಳ ಮೇಲೆ. ರಸ್ತೆ, ಸೇತುವೆಗಳು, ಕಾರ್ಖಾನೆಗಳು ಮತ್ತು ಮಾನವ ಬಂಡವಾಳದ ಮೇಲೆ ಖರ್ಚು ಮಾಡಲಾಗುವ ರಾಷ್ಟ್ರೀಯ ಆದಾಯದ ಒಂದು ಭಾಗ. ಬಹಳ ವರ್ಷಗಳ ಕಾಲ ಈ ನಿಟ್ಟಿನಲ್ಲಿ ಭಾರತದ ಬಂಡವಾಳ ಹೂಡಿಕೆಯ ದರ ಕಡಿಮೆಯೇ ಆಗಿತ್ತು. ಹಾಗಾಗಿ, ಪಠ್ಯಪುಸ್ತಕ ಅರ್ಥಶಾಸ್ತ್ರದ ದೃಷ್ಟಿಯಿಂದ ಭಾರತದ ಬೆಳವಣಿಗೆಯೂ ನಿಧಾನಗತಿಯದ್ದಾಗಿತ್ತು. ಆನಂತರ ಬಂಡವಾಳ ಹೂಡಿಕೆಯ ಪ್ರಮಾಣವು ನಿಧಾನವಾಗಿ ಹೆಚ್ಚಾಗತೊಡಗಿ, 2004-05ರಲ್ಲಿ ಪ್ರಪ್ರಥಮ ಬಾರಿ ಶೇ. 30ರಷ್ಟನ್ನು ದಾಟಿತ್ತು. 2007-08ರ ವೇಳೆಗೆ ಇದು ಶೇ. 39.1ರಷ್ಟು ತಲುಪಿತ್ತು. ಪ್ರಪ್ರಥಮ ಬಾರಿ ಭಾರತವು ಪೂರ್ವ ಏಶ್ಯದ ಮೇರು ಸಾಧಕರಂತೆ ಕಾಣತೊಡಗಿತ್ತು. ಈ ದೇಶಗಳಿಗಿಂತಲೂ ಭಾರತ ವೇಗವಾಗಿ ಬೆಳೆಯುತ್ತಿತ್ತು.
ಆರು ವರ್ಷಗಳ ಕಾಲ ಬಂಡವಾಳ ಹೂಡಿಕೆಯ ಪ್ರಮಾಣ ಶೇ. 40ಕ್ಕಿಂತಲೂ ಕೊಂಚ ಕಡಿಮೆ ಮಟ್ಟದಲ್ಲಿತ್ತು. ಆನಂತರ ಕುಸಿತ ಆರಂಭವಾಗಿತ್ತು. 2019-20ರ ವೇಳೆಗೆ ಇದು ಶೇ. 32.2ಕ್ಕೆ ಕುಸಿದಿತ್ತು. ಬಂಡವಾಳ ಹೂಡಿಕೆಯ ಪ್ರಮಾಣವು ಯಾವುದರಿಂದ ನಿರ್ಧಾರವಾಗುತ್ತದೆ ಎಂದು ಯಾರಿಗೂ ಸಮರ್ಪಕವಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅನೇಕ ಚಾಲಕ ಶಕ್ತಿಗಳಿವೆ. ಹಣಕಾಸು ನೀತಿಯ ಕ್ರಮಗಳು ಮತ್ತು ರಾಜ್ಯಾದಾಯದ ನೀತಿಗಳೂ ಮುಖ್ಯವಾಗುತ್ತವೆ. ಅಷ್ಟೇ ಅಲ್ಲದೆ ಜನರು ಎಷ್ಟು ಬಂಡವಾಳ ಹೂಡಿಕೆ ಮಾಡುತ್ತಾರೆ ಎನ್ನುವುದು ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಬಂಡವಾಳ ಹೂಡಿಕೆಯ ಬಹುಮಖ್ಯ ಚೋದಕ ಶಕ್ತಿ ವಿಶ್ವಾಸ ಮತ್ತು ನಂಬಿಕೆ ಎಂದು ಹೇಳಬಹುದು. ಸಮಾಜದಲ್ಲಿ ವಿಶ್ವಾಸದ ಮಟ್ಟ ಕುಸಿಯುತ್ತಿರುವಂತೆಲ್ಲಾ ಬಂಡವಾಳ ಹೂಡಿಕೆಯೂ ಕುಸಿಯುತ್ತಲೇ ಇರುತ್ತದೆ.
ಭಾರತದ ಬಂಡವಾಳ ಹೂಡಿಕೆಯ ಪ್ರಮಾಣದಲ್ಲಿ ಕುಸಿತ ಉಂಟಾಗಲು ಕಾರಣಗಳೇನು ಎಂದು ಅರಿಯಲು ನಾವಿನ್ನೂ ಸಂಶೋಧನೆಗಳನ್ನು ನಡೆಸಬೇಕಿದೆ. ಆದಾಗ್ಯೂ ರಾಜಕೀಯ ಧ್ರುವೀಕರಣ ಹೆಚ್ಚಾಗುತ್ತಿರುವುದರಿಂದ ಹಾಗೂ ಒಡೆದು ಆಳುವ ನೀತಿಗಳ ಪರಿಣಾಮ ಸಮಾಜದಲ್ಲಿ ವಿಶ್ವಾಸಾರ್ಹತೆಯು ಕ್ಷೀಣಿಸುತ್ತಿದ್ದು ಇದು ಬಂಡವಾಳ ಹೂಡಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ತತ್ಪರಿಣಾಮ, ಕುಸಿಯುತ್ತಿರುವ ಬಂಡವಾಳ ಹೂಡಿಕೆಯು ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಆಡಳಿತ ನೀತಿ ಸರಿಹೋಗಬೇಕಿದೆ
ಭಾರತದ ಮೂಲ ಸಂರಚನೆಗಳು ಪ್ರಬಲವಾಗಿರುವುದರಿಂದ ಮತ್ತು ಅಗಾಧವಾದ ಕೌಶಲ್ಯವೂ ಇರುವುದರಿಂದ, ಇಷ್ಟೊಂದು ವಿಶಾಲವಾಗಿರುವ ಅರ್ಥವ್ಯವಸ್ಥೆಯು ಏಕೆ ಹಿಂದುಳಿಯಬೇಕು? ಇಷ್ಟು ಬೃಹತ್ ಸಂಖ್ಯೆಯ ಜನರ ಆದಾಯ ಏಕೆ ಕ್ಷೀಣಿಸಬೇಕು? ನಮ್ಮ ಆಡಳಿತ ನೀತಿಗಳು, ಕೆಲವೇ ಶ್ರೀಮಂತ ಉದ್ದಿಮೆಗಳ ಬದಲು ಜನಸಂಖ್ಯೆಯ ಬೃಹತ್ ಜನಸಮುದಾಯಗಳನ್ನು, ಅಂದರೆ ಸಣ್ಣ ವ್ಯಾಪಾರ, ರೈತರು, ಸಾಮಾನ್ಯ ಕಾರ್ಮಿಕರನ್ನು, ಗುರಿಯಾಗಿಸಬೇಕಿದೆ. ಕಳೆದ ಹಲವು ವರ್ಷಗಳಲ್ಲಿ ಭಾರತದಲ್ಲಿ ಅಸಮಾನತೆಯೂ ಅಸಮಂಜಸವಾಗಿ ಹೆಚ್ಚಾಗಿರುವುದರಿಂದ ಇದಕ್ಕೆ ವಿಪುಲವಾದ ಅವಕಾಶಗಳೂ ಇವೆ. ಕೊನೆಯದಾಗಿ, ವಿಭಜಿತ ಸಮಾಜದ ಆಳ್ವಿಕೆ ನಡೆಸುವುದು ಸುಲಭವೇ ಆದರೂ, ನಾವು ಇದರಿಂದ ಹಿಮ್ಮೆಟ್ಟಿ ಎಲ್ಲರನ್ನೂ ಒಳಗೊಳ್ಳುವ ವಿಶ್ವಾಸಾರ್ಹತೆಯ ವಾತಾವರಣವನ್ನು ಸೃಷ್ಟಿಸಬೇಕಿದೆ. ಇದು ಕ್ಷೀಣಿಸುತ್ತಿರುವುದರಿಂದಲೇ ಬಂಡವಾಳ ಹೂಡಿಕೆಯೂ ಮಂದಗತಿಯಲ್ಲಿ ಸಾಗುತ್ತಿದೆ. ಇದು ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
(ಲೇಖಕರು: ಅರ್ಥಶಾಸ್ತ್ರ ಪ್ರಾಧ್ಯಾಪಕರು- ಇತಾಕಾ ಮತ್ತು ನ್ಯೂಯಾರ್ಕ್ ನಲ್ಲಿರುವ ಜಾನ್ಸನ್ ಕಾಲೇಜ್ ಆಫ್ ಬ್ಯುಸಿನೆಸ್-ಅಂತರ್‌ರಾಷ್ಟ್ರೀಯ ಅಧ್ಯಯನಗಳ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು)
ಕೃಪೆ: thehindu
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.