ನೆಹರೂ ಮತ್ತು ಇಂದಿನ ಭಾರತ
-

ಮನುಷ್ಯ ಪಡೆದ ಅತಿ ದೊಡ್ಡ ಆಸ್ತಿ ಎಂದರೆ ಅದು ಆತನ ಬದುಕು, ಆ ಬದುಕನ್ನು ಹೇಡಿಯಾಗಿ, ಕಳೆದುಹೋದ ಜೀವನದ ದುರಂತ ನೆನಪುಗಳಿಂದ ಕಳೆಯಬಾರದು. ಉದ್ದೇಶಗಳೇ ಇಲ್ಲದೇ ಕೊರಗಬಾರದು. ಬದಲಿಗೆ ಸಾಯುವ ಕೊನೆ ಗಳಿಗೆಯಲ್ಲೂ ಪ್ರತೀ ವ್ಯಕ್ತಿ ನನ್ನ ಎಲ್ಲ ಜೀವನ ಮತ್ತು ಶಕ್ತಿಯನ್ನು ಜಗತ್ತಿನ ಮೂಲ ಸಿದ್ಧಾಂತವಾದ ಮನುಕುಲದ ಉದ್ಧಾರಕ್ಕೆ ಬಿಡುಗಡೆಗೆ ಶ್ರಮಿಸಿದ್ದೇನೆ ಎಂದು ಅಂದುಕೊಳ್ಳುವಂತೆ ಜೀವಿಸಬೇಕು ಎಂದಿದ್ದಾರೆ ನೆಹರೂ.
‘‘ಆಧುನಿಕ ಜಗತ್ತಿನಲ್ಲಿ ಒಂದು ರಾಷ್ಟ್ರವನ್ನು ಸಶಕ್ತ ರಾಷ್ಟ್ರ ವನ್ನಾಗಿ ಯಾವುದು ಮಾಡಬಲ್ಲದೆಂದರೆ, ಅದು ವಿಜ್ಞಾನ, ತಂತ್ರಜ್ಞಾನ ಮತ್ತು ಅದರಿಂದ ನಿಷ್ಪನ್ನಗೊಂಡ ಸಂಗತಿಗಳು’’ ಎಂದಿದ್ದರು ನೆಹರೂ. ಈ ಅಂತರ್‌ರಾಷ್ಟ್ರೀಯತೆ ಎಂದರೆ ಮೂಲ ವನ್ನು ಮರೆತು ಬದುಕುವುದಲ್ಲ. ಬುಡವನ್ನು ಆಶ್ರಯಿಸದೇ ಇದ್ದರೆ ಏನೂ ಉಳಿಯಲು ಸಾಧ್ಯವಿಲ್ಲ. ಆದರೆ ಸಂಕುಚಿತ ನಿಲುವುಗಳ ಮಧ್ಯೆ ಬಂಧಿಯಾಗಕೂಡದು ಎಂಬ ಎಚ್ಚರವೂ ಅವರದಾಗಿತ್ತು. ಜಗತ್ತಿನ ಎಲ್ಲ ಪ್ರಸಿದ್ಧ ಪುರುಷರ ಬಗ್ಗೆ ಇರುವ ಎರಡು ಭಿನ್ನ ಅಭಿಪ್ರಾಯಗಳನ್ನು ಒಪ್ಪಿಯೂ, ಅವರುಗಳ ಶ್ರಮ, ನೀಡಿದ ಕೊಡುಗೆ ಮತ್ತು ಘನವಾದ ನಿಲುವುಗಳನ್ನು ಗೌರವಿಸುವ, ಪಾಲಿಸುವ ಜರೂರತ್ತನ್ನೂ ಕೂಡಾ ಅಷ್ಟೇ ಸಹಜವೆಂಬಂತೆ ಮನು ಕುಲ ಭಾವಿಸಿದೆ.
ಹಾಗಾಗಿ ಭಿನ್ನ ಸಿದ್ಧಾಂತಗಳ ಹೊರತಾಗಿಯೂ ದೇಶ ಕಟ್ಟಿದ ಹಲವು ನಾಯಕರನ್ನು, ಗಣ್ಯರನ್ನು ಆ ದೇಶದ ಸಮಸ್ತ ಜನತೆ ಗೌರವಿಸುತ್ತದೆ ಆಧರಿಸುತ್ತದೆ. ಅವಿಚ್ಛಿನ್ನತೆಯ ಅನನ್ಯತೆಯನ್ನು ಮಾನ್ಯ ಮಾಡುತ್ತದೆ. ಅಂತಹ ಅನುಪಮವಾದ ವ್ಯಕ್ತಿತ್ವಕ್ಕೆ ಗೌರವಕ್ಕೆ ಕಳಸಪ್ರಾಯದಂತಿದ್ದರು ದಿ.ಪಂಡಿತ ಜವಾಹರಲಾಲ್ ನೆಹರೂ. ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅತೀ ದೀರ್ಘಕಾಲ ಪ್ರಧಾನಿಯಾಗಿ ದೇಶವನ್ನು ಆಳಿದ ಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆಗೆ ಅದು ಜವಾಹರಲಾಲ್ ನೆಹರೂ ಎಂಬುದು ಉತ್ತರ. ಸರಿಸುಮಾರು 17 ವರ್ಷಗಳ ಸುದೀರ್ಘ ಆಳ್ವಿಕೆ, ಅಂತರ್‌ರಾಷ್ಟ್ರೀಯ ವಿಷಯಗಳಲ್ಲಿ ಅಧಿಕೃತವಾಗಿ ಮಾತನಾಡಬಲ್ಲಷ್ಟು ಆಳವಾದ ಪಾಂಡಿತ್ಯ, ಅದಮ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ.
ಹೀಗೆ ಕರೆಯಿಸಿಕೊಳ್ಳುವ ಜವಾಹರಲಾಲ್ ನೆಹರೂ ಅವರು ಕುಟುಂಬದ ಏಕೈಕ ಪುತ್ರರತ್ನ. ಪ್ರಾಥಮಿಕ ಹಂತದ ಶಿಕ್ಷಣವನ್ನು ಮನೆಯಲ್ಲಿಯೇ ಆಂಗ್ಲ ಭಾಷೆಯಲ್ಲಿ ಪಡೆದ ನೆಹರೂ, 15ನೇ ವಯಸ್ಸಿಗೆ ಕುಟುಂಬದೊಂದಿಗೆ ಇಂಗ್ಲೆಂಡಿಗೆ ಶಿಕ್ಷಣದ ಕಾರಣಕ್ಕಾಗಿಯೇ ಹೋಗುತ್ತಾರೆ. ಅಲ್ಲಿ ಎರಡು ವರ್ಷಗಳ ಕಾಲ ಹ್ಯಾರೋ ಶಾಲೆಯಲ್ಲಿ ಕಲಿತು ನಂತರ ಇಂಗ್ಲೆಂಡಿನ ‘ಪ್ರಧಾನಿಗಳನ್ನು ತಯಾರು ಮಾಡುವ ಶಾಲೆ’ ಎಂದೇ ಪ್ರಸಿದ್ಧವಾಗಿದ್ದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ‘ಟ್ರಿನಿಟಿ’ ಕಾಲೇಜು ಸೇರುತ್ತಾರೆ.
1910ರಲ್ಲಿ ಪದವೀಧರರಾಗುತ್ತಾರೆ. 1912ರಲ್ಲಿ ಭಾರತಕ್ಕೆ ಬಂದು ಸ್ವಲ್ಪಕಾಲ ನ್ಯಾಯವಾದಿಯಾಗಿ ಕೆಲಸ ಮಾಡಿ, ಆನಂತರ ರಾಜಕೀಯದಲ್ಲಿ ಆಸಕ್ತರಾಗಿ ಗಾಂಧೀಜಿಯವರ ಸಿದ್ಧಾಂತಗಳಿಂದ ಪ್ರಭಾವಿತಗೊಂಡು ಸ್ವಾತಂತ್ರ ಸಂಗ್ರಾಮದಲ್ಲಿ ತೊಡಗಿಸಿಕೊಳ್ಳುತ್ತಾರೆ. 1919ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿ ಹತ್ತೇ ವರ್ಷಗಳಲ್ಲಿ ತಮ್ಮ ಪ್ರಭಾವೀ ಮತ್ತು ಬುದ್ಧಿವಂತಿಕೆಯ ನಡೆಗಳಿಂದ 1929ರಲ್ಲಿ ಅದರ ಅಧ್ಯಕ್ಷರಾಗುತ್ತಾರೆ. ಆಗಸ್ಟ್ 15, 1947ರಲ್ಲಿ ಮೊದಲ ಪ್ರಧಾನಿಯಾಗಿ ಆಯ್ಕೆಯಾದ ನೆಹರೂ ತಮ್ಮ ಸಾವಿನವರೆಗೂ ಅಂದರೆ 1964ರವರೆಗೆ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.
‘‘ನಾವು ಬದುಕುತ್ತಿರುವ ಈ ಜಗತ್ತು ಅದೆಷ್ಟು ಸೌಂದರ್ಯ, ಸೊಬಗು, ಸಾಹಸಗಳಿಂದ ತುಂಬಿದೆ ಎಂದರೆ ಆ ದಿಶೆಯಲ್ಲಿ ನಡೆಸುವ ಯಾವ ಪ್ರಯತ್ನಕ್ಕೂ ಕೊನೆ ಇರದು. ಆದರೆ ಆ ಪ್ರಯತ್ನ ಗಳನ್ನು ನಾವು ತೆರೆದ ಕಣ್ಣುಗಳ ಮೂಲಕ ಮಾಡುವಂತಾಗಬೇಕು, ಸಾಧನೆಯ ಛಲ ಬೇಕು’’ ಎನ್ನುತ್ತಾರೆ ನೆಹರೂ. ಯುವ ಜನಾಂಗ ಈ ಮಾತುಗಳನ್ನು ಮನನ ಮಾಡಿಕೊಳ್ಳುವಂತಾಗಬೇಕು. ಅಂದಾಗ ಮಾತ್ರ ಯುವ ಶಕ್ತಿಗಳು ದೇಶದ ಚುಕ್ಕಾಣಿ ಹಿಡಿಯಲು ಸಮರ್ಥವಾಗಬಲ್ಲವು.
ಭಾರತಕ್ಕೆ ಅದರದೇ ಆದ ಭೌಗೋಳಿಕ ಮತ್ತು ಆರ್ಥಿಕ ಅಸ್ತಿತ್ವವಿದೆ. ವಿವಿಧತೆಯಲ್ಲಿ ಏಕತೆಯನ್ನು ತೋರುವ ಸಾಂಸ್ಕೃತಿಕ ಹಿನ್ನೆಲೆ ಇದೆ. ಹಲವು ವಿರೋಧಾಭಾಸಗಳ ನಡುವೆಯೂ ಅದರೊಳಗೊಂದು ಕಣ್ಣಿಗೆ ಕಾಣದ, ಆದರೆ ಗಟ್ಟಿಯಾದ ಬಂಧವಿದೆ ಎಂದು ನೆಹರೂ ತಮ್ಮ ‘ಡಿಸ್ಕೃವರಿ ಆಫ್ ಇಂಡಿಯಾ’ ಕೃತಿಯಲ್ಲಿ ಉಲ್ಲೇಖಿಸಿ ದ್ದಾರೆ. ಈ ಮಾತಿನ ವಾಸ್ತವತೆ ಎಲ್ಲರ ಅನುಭವವೂ ಆಗಿದೆ. ಎಷ್ಟೋ ಸವಾಲುಗಳು, ಸಂಘರ್ಷಗಳನ್ನು ಎದುರಿಸಿಯೂ ಶತಶತಮಾನ ಗಳಿಂದ ಭಾರತ ತನ್ನ ಸಮಗ್ರತೆಯನ್ನು ಕಾಯ್ದುಕೊಂಡಿದೆ. ಹಲವು ದಾಳಿಗಳಿಗೆ ಬಲಿಯಾಗಿಯೂ ಅವಿಚ್ಛಿನ್ನತೆಯನ್ನು ಉಳಿಸಿಕೊಂಡಿದೆ.
ಇಂದಿನ ಯುವ ಜನತೆ ಕನಸು ಕಂಡಿದ್ದನ್ನು ನನಸಾಗಿಸುವ ನೆಲೆಯಲ್ಲಿ ನಡೆಸುವ ವಿಳಂಬ ನೀತಿ ಮತ್ತು ಅನಾಸಕ್ತಿಗೆ ಈ ಮಾತು ಚೇತನವನ್ನು ತುಂಬಬಲ್ಲದು. ಇಂದಿನ ಯುವಕರು ಖಾದಿ ತೊಡದಿರಬಹುದು. ಜೀನ್ಸ್ ತೊಟ್ಟಿರಬಹುದು ಆದರೆ ಅವರಲ್ಲಿ ಅದಮ್ಯ ಚೇತನಗಳಿವೆ, ಆದರೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ನೆಲೆ ತಪ್ಪಿ ಕುರುಡಾಗಿ ವರ್ತಿಸುತ್ತಿದ್ದಾರೆ. ಈ ಕಾರಣದಿಂದ ನೆಹರೂ ಅಂದಿಗಿಂತ ಇಂದಿಗೆ ಪ್ರಸ್ತುತವೆನಿಸುತ್ತಾರೆ. ಇಂದಿನ ಯುವ ಜನಾಂಗಕ್ಕೆ ಸರಿಯಾದ ಮಾರ್ಗದಲ್ಲಿ ನಡೆಯಲು ಮತ್ತು ನಡೆಸಲು ನೆಹರೂ ಅಂತಹ ವ್ಯಕ್ತಿತ್ವದ ಅನಿವಾರ್ಯತೆ ಇದೆ.
ಆದರೆ ದುರದೃಷ್ಟವಶಾತ್ ನಾವು ಹಳದಿ ಕಣ್ಣಿನಲ್ಲಿ ನೋಡುತ್ತಾ ಧರ್ಮಗಳ ಕಟ್ಟಾ ಅಭಿಮಾನಿಗಳಾಗುತ್ತಾ ಮನುಷ್ಯ ಧರ್ಮವನ್ನು ಮೀರಿ ನಡೆಯುತ್ತಿದ್ದೇವೆ. ಪ್ರೀತಿ ವಿಶ್ವಾಸಗಳಿಗಿಂತ ದ್ವೇಷ ಅಸೂಯೆಗಳು ಮೂಂಚೂಣಿಯಲ್ಲಿವೆ. ಮನುಷ್ಯ ಮನುಷ್ಯನಾಗಿ ಉಳಿದಿಲ್ಲ. ದ್ವೇಷ ಅನ್ಯಾಯ, ದಗಾಕೋರತನವನ್ನೇ ನಿತ್ಯದ ಕಸುಬು ಎಂಬಂತೆ ಮಾಡುತ್ತಿದ್ದಾನೆ. ‘‘ದ್ವೇಷ ಅಸೂಯೆಗಳು ನಮ್ಮಿಳಗಿನ ಚೈತನ್ಯವನ್ನು ದಮನಿಸುತ್ತವೆ. ಸತ್ಯ ಒಪ್ಪಿಕೊಳ್ಳುವ ಮನೋಗುಣವನ್ನು ನಾಶಪಡಿಸುತ್ತವೆ’’ ಎಂದಿದ್ದರು ನೆಹರೂ.
‘‘ಆಧುನಿಕ ಜಗತ್ತಿನಲ್ಲಿ ಒಂದು ರಾಷ್ಟ್ರವನ್ನು ಸಶಕ್ತ ರಾಷ್ಟ್ರವನ್ನಾಗಿ ಯಾವುದು ಮಾಡಬಲ್ಲದೆಂದರೆ, ಅದು ವಿಜ್ಞಾನ, ತಂತ್ರಜ್ಞಾನ ಮತ್ತು ಅದರಿಂದ ನಿಷ್ಪನ್ನಗೊಂಡ ಸಂಗತಿಗಳು’’ ಎಂದಿದ್ದರು ನೆಹರೂ, 1960 ಎಪ್ರಿಲ್ 10ರಂದು ಸತಾರಾದಲ್ಲಿ. ನೆಹರೂ ಭಾರತದ ಜನರಲ್ಲಿಯ ಮೌಢ್ಯವನ್ನು ಜಾಡಿಸಲು ವಿಜ್ಞಾನವೊಂದೆ ಅಸ್ತ್ರವೆಂದು ನಂಬಿದ್ದರು. ಅವರಂದು ಆಡಿದ ಪ್ರತೀ ನುಡಿಯೂ ಆಧುನಿಕತೆಯಲ್ಲಿ ದಾಪುಗಾಲು ಹಾಕುತ್ತಿರುವ ಇಂದಿನ ಭಾರತಕ್ಕೆ ಚಿರಪರಿಚಿತವಾಗಿದೆ.
ಯಾಕೆಂದರೆ ಇಂದು ಭಾರತ ಹೊಳೆಯುತ್ತದೆ. ವಿದೇಶಿ ಉತ್ಪನ್ನಗಳು, ಮಾರುಕಟ್ಟೆ ವ್ಯವಸ್ಥೆ, ಬಂಡವಾಳಗಾರರು ಮೊನ್ನೆ ಮೊನ್ನೆಯಷ್ಟೇ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶ ಎಲ್ಲವೂ ಭಾರತದ ಅಭಿವೃದ್ಧಿ ಮೂಲದ ಮೂಲ ಪ್ರೇರಕ ಶಕ್ತಿ ಯಾರೆಂಬುದನ್ನು ತೋರಿಸಿಕೊಡುತ್ತಿದೆ. ದೇಶದ ಬೌದ್ಧಿಕ ಮತ್ತು ಯುವ ವಲಯವನ್ನು ಅಭಿವೃದ್ಧಿ ಕಾರ್ಯದ ಮುಂಚೂಣಿಯಲ್ಲಿ ತರುವುದು ಅವರ ಆದ್ಯತೆಯಾಗಿತ್ತು.
ಆಧುನಿಕತೆಯನ್ನು ಮೈತುಂಬಾ ಹೊದ್ದುಕೊಂಡಿರುವ ನಾವು ಮೂಲದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಆದರೆ ನೆಹರೂ ಹೀಗೆ ಹೇಳುತ್ತಿದ್ದರು: ‘‘ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಾವು ನಮ್ಮ ಪಾತ್ರವನ್ನು ಇಂದಿಗೆ ನಿರ್ವಹಿಸಲೇಬೇಕು. ಅದಕ್ಕಾಗಿ ಹೊಸಹೊಸ ಜನರನ್ನು ಸಂಪರ್ಕಿಸಬೇಕು, ದೂರ ಪ್ರಯಾಣಿಸಬೇಕು, ಇತರರಿಂದ ಕಲಿಯಬೇಕು, ಅರ್ಥ ಮಾಡಿಕೊಳ್ಳಬೇಕು ಆದರೆ ಈ ಅಂತರ್‌ರಾಷ್ಟ್ರೀಯತೆ ಎಂದರೆ ಮೂಲವನ್ನು ಮರೆತು ಬದುಕುವುದಲ್ಲ. ಬುಡವನ್ನು ಆಶ್ರಯಿಸದೇ ಇದ್ದರೆ ಏನೂ ಉಳಿಯಲು ಸಾಧ್ಯವಿಲ್ಲ.
ಇದು ರಾಷ್ಟ್ರೀಯ ನೆಲದಲ್ಲಿ ನಮ್ಮ ಸಾಂಸ್ಕೃತಿಕ ತಳಹದಿಯಲ್ಲಿ ಚಿಗಿತು ಸ್ವಾತಂತ್ರ ಸಮಾನತೆಗಳ ಮೂಲಕ ಅರಳಬಲ್ಲದು. ನಾವು ಕೇವಲ ದೇಶದ ಪ್ರಜೆಗಳು ಎಂಬ ಸಂಕುಚಿತ ರಾಷ್ಟ್ರೀಯ ನಿಲುವುಗಳ ಮಧ್ಯೆ ಬಂಧಿಯಾದ ಬಾವಿಕಪ್ಪೆಗಳು ಆಗಕೂಡದು. ಇದರರ್ಥ ನಮ್ಮ ನೆಲ, ನಮ್ಮ ಜಲ, ಜನ ಸಂಸ್ಕೃತಿ, ಸಂಪ್ರದಾಯಗಳಿಂದ ದೂರ ಸರಿಯಕೂಡದು.’’ ಇಂದಿನ ಯುವ ಜನಾಂಗಕ್ಕೆ ಈ ಮಾತುಗಳು ತಮ್ಮತನವನ್ನು ಉಳಿಸಿ, ಬೆಳೆಸಿಕೊಳ್ಳುವಲ್ಲಿ ಕನ್ನಡಿಯಾಗಬಲ್ಲದು.
ಗಾಂಧೀಜಿ ಮತ್ತು ನೆಹರೂ ನಡುವೆ ಹತ್ತಾರು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಆದರೆ ಗುರು ಶಿಷ್ಯ ಸಂಬಂಧಗಳು ಗಟ್ಟಿಯಾಗಿದ್ದವು. ಗಾಂಧೀಜಿ ಸತ್ಯ ಅಹಿಂಸೆಯನ್ನು ಬದುಕಿನ ಧ್ಯೇಯವಾಗಿಸಿಕೊಂಡಿದ್ದರೆ, ಜವಾಹರರಿಗೆ ಅದು ಗುರಿ ಸಾಧನೆಯ ಮಾರ್ಗವಾಗಿತ್ತು. ಗಾಂಧಿ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದರೆ ನೆಹರೂ ಬೃಹತ್ ಯಂತ್ರೋದ್ಯಮದ ಪರವಾಗಿದ್ದರು. ಮಹಾತ್ಮಾ ಗಾಂಧಿ ಅಸಹಕಾರ ಚಳುವಳಿಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಗೋರಖ್ಪುರದ ಚೌರಿಚೌರ ಎಂಬಲ್ಲಿ ಗಲಭೆಕೋರರು 21 ಜನ ಪೊಲೀಸರನ್ನು ಸುಟ್ಟುಹಾಕಿದರು. ದುಃಖಿತರಾದ ಗಾಂಧೀಜಿ ಅಸಹಕಾರ ಚಳವಳಿಯನ್ನು ಮೊಟಕುಗೊಳಿಸಿದರು. ಆದರೆ ನೆಹರೂ ಅವರಿಗೆ ಅದು ಸರಿ ಎನ್ನಿಸಲಿಲ್ಲ.
ನೇರವಾಗಿ ‘‘ಇದೇನು ವಿಶಾಲ ಭಾರತದ ಯಾವುದೋ ಮೂಲೆಯಲ್ಲಿ ಗಲಭೆಯಾದರೆ, ಹಿಂಸಾಚಾರ ನಡೆಯಿತೆಂದರೆ ಚಳವಳಿಯನ್ನು ನಿಲ್ಲಿಸಿಬಿಡುವುದೇ? ಇದು ಸರಿಯೇ? 33 ಕೋಟಿ ಭಾರತೀಯ ಪ್ರಜೆಗಳು ನಡೆಸುತ್ತಿರುವ ಅಹಿಂಸಾತ್ಮಕ ಚಳವಳಿಯನ್ನು ನಿಲ್ಲಿಸಿರುವುದು ಸರಿಯಲ್ಲ ಎಂದು ಸಿಟ್ಟಾಗಿದ್ದರು ನೆಹರೂ. ಭಾರತದ ಸಮಗ್ರತೆಯನ್ನು ಬೆಂಬಲಿಸುತ್ತಿದ್ದ ನೆಹರೂ ಗಾಂಧೀಜಿಯವರ ಅಪ್ಪಟ ಶಿಷ್ಯನಾಗಿಯೂ ಮುಸ್ಲಿಮ್ ಲೀಗ್ ಪ್ರಸ್ತಾಪಿಸಿದ ಧರ್ಮದ ಆಧಾರದ ಮೇಲೆ ಭಾರತವನ್ನು ಬೇರ್ಪಡಿಸುವ ನಿಲುವಿಗೆ ಅವರ ಸಹಮತವಿರಲಿಲ್ಲ. ಗಾಂಧೀಜಿಯವರ ಧಾರ್ಮಿಕ ಮತ್ತು ಸಾಂಪ್ರದಾಯಿಕ ನಡೆಯನ್ನು ಬೆಂಬಲಿಸುತ್ತಿದ್ದ ನೆಹರೂ ಜಾತ್ಯತೀತ ಮತ್ತು ಆಧುನಿಕ ಮನೋಧರ್ಮವನ್ನು ಪರಿಕಲ್ಪನೆಗಳನ್ನು ಹೊಂದಿದವರಾಗಿದ್ದರು.
ನಿರ್ದಾಕ್ಷಿಣ್ಯವಾಗಿ ಗಟ್ಟಿ ಅಭಿಪ್ರಾಯಗಳನ್ನು ಸಂಕೋಚವಿಲ್ಲದೆ ವ್ಯಕ್ತಪಡಿಸುತ್ತಿದ್ದ ಅವರು ಗಾಂಧೀಜಿಯವರ ಅಪ್ಪಟ ಶಿಷ್ಯನಾಗಿಯೂ ತಮಗೆ ಸರಿಹೊಂದದ ಗಾಂಧಿ ನಿಲುವನ್ನು ತಿರಸ್ಕರಿಸುತ್ತಿದ್ದರು. ಗುರು ಎಂದು ಕಣ್ಣುಮುಚ್ಚಿ ಎಲ್ಲವನ್ನೂ ಪಾಲಿಸುತ್ತಿರಲಿಲ್ಲ. ಹಾಗೆಂದು ಗುರುವಿಗೇ ಬೆನ್ನು ತಿರುಗಿಸಿ ನಡೆಯುವ ಧಿಮಾಕನ್ನು ಎಂದೂ ತೋರಿದವರಲ್ಲ. ಇದಕ್ಕೆ ಹಲವಾರು ಉದಾಹರಣೆಗಳಿವೆ. ಗಾಂಧೀಜಿ ಹತ್ಯೆಯಾದಾಗ ‘‘ಎಲ್ಲ ಸಂಕಟ, ಜಟಿಲ ಸಂದರ್ಭದಲ್ಲೂ ಬೆಳಕು ಬೀರುತ್ತಿದ್ದ ದೀಪ ಆರಿಹೋಯಿತು. ಇಲ್ಲ, ಅದು ಆರಿದರೂ ಅದರ ಕಾಂತಿ ಪ್ರಪಂಚದ ಅಂತ್ಯದವರೆಗೂ ಪ್ರಜ್ಞಲಿಸುತ್ತದೆ’’ ಎಂದಿದ್ದರು. ಈ ಬದ್ಧ್ಧತೆ ಇಂದಿನ ಯುವ ನಾಯಕರಿಗೆ ಅಗತ್ಯವಾಗಿದೆ.
ಮನುಷ್ಯ ಪಡೆದ ಅತಿ ದೊಡ್ಡ ಆಸ್ತಿ ಎಂದರೆ ಅದು ಆತನ ಬದುಕು, ಆ ಬದುಕನ್ನು ಹೇಡಿಯಾಗಿ, ಕಳೆದುಹೋದ ಜೀವನದ ದುರಂತ ನೆನಪುಗಳಿಂದ ಕಳೆಯಬಾರದು. ಉದ್ದೇಶಗಳೇ ಇಲ್ಲದೇ ಕೊರಗಬಾರದು. ಬದಲಿಗೆ ಸಾಯುವ ಕೊನೆ ಗಳಿಗೆಯಲ್ಲೂ ಪ್ರತೀ ವ್ಯಕ್ತಿ ನನ್ನ ಎಲ್ಲ ಜೀವನ ಮತ್ತು ಶಕ್ತಿಯನ್ನು ಜಗತ್ತಿನ ಮೂಲ ಸಿದ್ಧಾಂತವಾದ ಮನುಕುಲದ ಉದ್ಧಾರಕ್ಕೆ ಬಿಡುಗಡೆಗೆ ಶ್ರಮಿಸಿದ್ದೇನೆ ಎಂದು ಅಂದುಕೊಳ್ಳುವಂತೆ ಜೀವಿಸಬೇಕು ಎಂದಿದ್ದಾರೆ ನೆಹರೂ.
ನೆಹರೂ ಅವರ ಬಗ್ಗೆ ಒಂದು ಮಾತಿದೆ. “Nehru was gifted with both the vision of a dreamer and the wisdom of a builder.”
ಅದೇ ರೀತಿ ನೆಹರೂ ಅವರ ಒಂದು ಮಾತಿದೆ. “India is a dream and a vision, yet very real.”
ಹೌದು. ಭಾರತದ ಆ ಕನಸು ಮತ್ತು ದೃಷ್ಠಿಕೋನಗಳು ನಿಜವಾದದ್ದೇ ಆಗಿವೆ. ಅವುಗಳನ್ನು ನಾವೆಲ್ಲ ಸೇರಿ ಸಾಕಾರಗೊಳಿಸಬೇಕಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.