-

ಕರಾವಳಿಯ ಪರ್ಣಕುಟೀರಗಳ ಆತ್ಮ ಕಥೆಯ ಒಂದು ಪುಟ

-

ಮನೆಯಲ್ಲೇ ಇದ್ದು ಮೂರು ಹೊತ್ತು ಗೆಯ್ಮೆಯನ್ನಷ್ಟೇ ಮಾಡಿಕೊಂಡಿದ್ದ ಮನೆಮಗ ಈ 'ನ್ಯಾಯ ತೀರ್ಮಾನ'ದಿಂದ ಕುಸಿದುಹೋದ, ಕ್ರುದ್ಧನಾದ. ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹೊಳೆಗೆ ಹೋಗಿ, ತಲೆಸ್ನಾನ ಮುಗಿಸಿ, ಒದ್ದೆ ಮೈಯಲ್ಲಿ, ಉಟ್ಟ ಬಟ್ಟೆಯಲ್ಲಿ 'ಮಲರಾಯ ದೈವ'ದ ಮುಂದೆ ಆವೇಶಕ್ಕೊಳಗಾದವನಂತೆ ನಿಂತು ಪಂಚಾಯಿತಿ ಮಾಡಿದ ದೊಡ್ಡವರಿಗೂ, ನ್ಯಾಯವನ್ನು ಖರೀದಿಸಿದ ತಮ್ಮನಿಗೂ 'ನೆಲಕ್ಕಾಯಿ' ಹಾಕಿದ.


1950ರ ದಶಕ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸೀಮೆಯ ಕಲೆಂಜಿಮಲೆ ಎಂಬ ದಟ್ಟ ಅರಣ್ಯ ಪ್ರದೇಶದ ಅಂಚಿನಲ್ಲಿದ್ದ ಬಂಟ ಸಮುದಾಯಕ್ಕೆ ಸೇರಿದ ಗುತ್ತಿನಮನೆ ಪರ್ತಿಪ್ಪಾಡಿ. ಸುತ್ತಮುತ್ತಲಿನ ನಾಲ್ಕು ಗ್ರಾಮಗಳಿಗೆ ಸೇರಿದ ಮಲರಾಯ ದೈವದ ನೇಮ (ವಾರ್ಷಿಕ ಆರಾಧನೆ) ಆಗುವಾಗ ದೈವದ ಬಂಡಿ (ರಥ)ಯೇರುವಂಥ 'ವಿಶೇಷ ಗೌರವ ಮತ್ತು ಸಾಮಾಜಿಕ ಮನ್ನಣೆ'ಯನ್ನು ಪಡೆದಿದ್ದ ಮನೆ ಅದು. ಮೊದಲಿಗೆ ಐವರು ಗಂಡುಮಕ್ಕಳು ಮತ್ತು ಕೊನೆಯಲ್ಲಿ ಓರ್ವ ಹೆಣ್ಣುಮಗಳನ್ನು ಹೊಂದಿದ್ದ ಆ ಸಂಸಾರಕ್ಕೆ ಬಡತನವೇನೂ ಇರಲಿಲ್ಲ. ಮಕ್ಕಳೆಲ್ಲರಿಗೂ ಮದುವೆಯಾಗಿತ್ತು. ಮೊದಲ ಇಬ್ಬರು ಗಂಡುಮಕ್ಕಳು ಕಾಡಿನ ಮರ ಕಡಿದು ನಾಟ ಮಾಡಿ ಮಾರುವ ಕೆಲಸ-ವ್ಯವಹಾರ ಮಾಡುತ್ತಿದ್ದರು. ನಾಲ್ಕನೆಯವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾಗಿದ್ದರು. ಐದನೆಯ ಮಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ಎಂ.ಎ. ಪದವಿ ಮುಗಿಸಿ ವಿಟ್ಲ, ಬಂಟ್ವಾಳ ಇತ್ಯಾದಿ ಕಡೆಗಳ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿದ್ದರು. ಕರ್ನಾಟಕ ಸರಕಾರದಲ್ಲಿ ಸಚಿವರಾಗಿದ್ದ ಬಿ. ರಮಾನಾಥ ರೈಗಳು ಪಿಯುಸಿ ಓದುತ್ತಿದ್ದಾಗ ಇವರ ಶಿಷ್ಯರಾಗಿದ್ದರು. ಮನೆಯಲ್ಲಿದ್ದ ಮಧ್ಯಮ, ತಾಯ್ತಂದೆಯರ ನಿರ್ದೇಶನದಂತೆ ಸಾಗುವಳಿ-ತೋಟ ಮಾಡಿಕೊಂಡು ಇದ್ದ.

ಇಂತಿರಲು, ಆ ಗುತ್ತಿನ ಮನೆಯ ಹಿರಿಯರು ನಿಧನರಾದ ಬಳಿಕ ಸ್ವಾರ್ಜಿತ ಆಸ್ತಿ ಹಿಸ್ಸೆಯಾಗುವ ಪರಿಸ್ಥಿತಿ ಬಂತು. ಯಕ್ಷಗಾನ ಮೇಳದಲ್ಲಿದ್ದು ನಾಲ್ಕೂರು ತಿರುಗಾಟ ಮಾಡಿ ನಯ-ನಾಜೂಕಿನ ಮಾತಿನ ಮಲ್ಲನಾಗಿ ರೂಪುಗೊಂಡಿದ್ದ ಕಲಾವಿದ ತಮ್ಮ, ಪಂಚಾಯಿತಿದಾರರ ಜೊತೆ ಒಳಒಪ್ಪಂದ ಮಾಡಿಕೊಂಡು ನಡೆಸಿದ 'ನ್ಯಾಯ ತೀರ್ಮಾನ'ದ ಫಲಿತಾಂಶ ಹೀಗಿತ್ತು. ನಾಲ್ವರು ಗಂಡುಮಕ್ಕಳಿಗೆ ವರ್ಷಕ್ಕೊಂದೇ ಬೆಳೆಯಾಗುವ ಬೆಟ್ಟು ಗದ್ದೆಗಳು. ಯಕ್ಷಗಾನ ಕಲಾವಿದನಿಗೆ ಮತ್ತು ಏಕೈಕ ಹೆಣ್ಣುಮಗಳಿಗೆ ವರ್ಷಕ್ಕೆ ಮೂರು ಬೆಳೆ ಬೆಳೆಯಬಲ್ಲ ಬೈಲು ಗದ್ದೆಗಳು ಮತ್ತು 200 ಅಡಿಕೆ ಗಿಡಗಳಿರುವ ತೋಟ. ಮನೆಯಲ್ಲೇ ಇದ್ದು ಮೂರು ಹೊತ್ತು ಗೆಯ್ಮೆಯನ್ನಷ್ಟೇ ಮಾಡಿಕೊಂಡಿದ್ದ ಮನೆಮಗ ಈ 'ನ್ಯಾಯ ತೀರ್ಮಾನ'ದಿಂದ ಕುಸಿದುಹೋದ, ಕ್ರುದ್ಧನಾದ. ಮನೆಯ ಪಕ್ಕದಲ್ಲೇ ಹರಿಯುತ್ತಿದ್ದ ಹೊಳೆಗೆ ಹೋಗಿ, ತಲೆಸ್ನಾನ ಮುಗಿಸಿ, ಒದ್ದೆ ಮೈಯಲ್ಲಿ, ಉಟ್ಟ ಬಟ್ಟೆಯಲ್ಲಿ 'ಮಲರಾಯ ದೈವ'ದ ಮುಂದೆ ಆವೇಶಕ್ಕೊಳಗಾದವನಂತೆ ನಿಂತು ಪಂಚಾಯಿತಿ ಮಾಡಿದ ದೊಡ್ಡವರಿಗೂ, ನ್ಯಾಯವನ್ನು ಖರೀದಿಸಿದ ತಮ್ಮನಿಗೂ 'ನೆಲಕ್ಕಾಯಿ' ಹಾಕಿದ. ('ನೆಲಕ್ಕಾಯಿ' ಅಂದರೆ ಭೂಮಿಗೆ ಮೂರುಮೂರು ಬಾರಿ ಅಂಗೈ ಬಡಿದು ಹಾಕುವ ಶಾಪ. ಇದು ಹೇಗಿರುತ್ತದೆ ಎಂದು ತಿಳಿಯುವ ಕುತೂಹಲ ಇರುವವರು ತಮಿಳ್ನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾರವರ ನಿಧನದ ನಂತರ ಅವರ ಆಪ್ತಸಖಿ ಶಶಿಕಲಾ ಅವರು ಅಕ್ರಮ ಆಸ್ತಿ ಸಂಪಾದನೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ತನಗೆ ಜೈಲು ಶಿಕ್ಷೆ ವಿಧಿಸಿದಾಗ ಜಯಲಲಿತಾ ಅವರ ಸಮಾಧಿ ಮುಂದೆ ಹೀಗೆಯೇ ಮಣ್ಣಿಗೆ ಮೂರು ಮೂರು ಬಾರಿ ಅಂಗೈ ಬಡಿದು 'ನೆಲಕ್ಕಾಯಿ' ಹಾಕಿದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.)

'ನೆಲಕ್ಕಾಯಿ' ಹಾಕಿದ ಬಳಿಕ; ಹುಟ್ಟಿದ ಮನೆಯಲ್ಲಿ ತೊಟ್ಟು ನೀರೂ ಕುಡಿಯುವುದಿಲ್ಲವೆಂದು, ಬೆವರು ಸುರಿಸಿ ದುಡಿದು ಎದೆ ಮಟ್ಟಕ್ಕೆ ಬೆಳೆಸಿರುವ ಅಡಿಕೆ ತೋಟಕ್ಕೆ ಮತ್ತೊಮ್ಮೆ ಕಾಲೂ ಇಡುವುದಿಲ್ಲವೆಂದು, ಪಾಲಿಗೆ ಬಂದ ಬೆಟ್ಟು ಗದ್ದೆಯಲ್ಲಿ ನನ್ನ ಹೆಣವನ್ನೂ ಸುಡಬಾರದೆಂದು ಕಿಕ್ಕಿರಿದು ನೆರೆದಿದ್ದ ಬಂಧು-ಬಾಂಧವ-ಊರ ಜನರ ಮುಂದೆ ಗದ್ಗದಿತನಾಗಿ ಘೋಷಿಸಿದ 'ಮನೆಮಗ' ಹುಟ್ಟೂರು ತ್ಯಜಿಸಿ ಹೆಂಡತಿ ಮತ್ತು ಮಕ್ಕಳನ್ನು ಎಳೆೆದುಕೊಂಡು ಉಳ್ಳಾಲ ಮಾಗಣೆಯಲ್ಲಿದ್ದ ಅತ್ತೆಮನೆಗೆ ಮನೆಯಳಿಯನಾಗಿ ಬಂದು ಸೇರಿದ. ಬಂಟ ಸಮುದಾಯದಲ್ಲಿದ್ದ 'ಅಳಿಯಕಟ್ಟು' ಪದ್ಧತಿಯ ಪ್ರಕಾರ ಕುಟುಂಬದ ಆಸ್ತಿಯಲ್ಲಿ ಹೆಣ್ಣಿಗಷ್ಟೇ ಪಾಲು ಇದ್ದುದರಿಂದ ಈ ಸಂಸಾರ ತವರುಮನೆಯಲ್ಲಿ ನೆಲೆ ಊರಿದ್ದರಲ್ಲಿ ಅಸಹಜವಾದುದೇನೂ ಇರಲಿಲ್ಲ. ಭೂ-ವ್ಯಾಜ್ಯಕ್ಕೆ ಬಲಿಯಾಗಿ, ವಸ್ತುಶಃ ಅ-ಸಹಾಯಕರಾಗಿ ಬಂದು ತಾಯಿಮನೆ ಸೇರಿದ ಹೆಣ್ಣುಮಗಳ ಸಂಸಾರಕ್ಕೆ ಆಶ್ರಯ ಕಲ್ಪಿಸುವಷ್ಟು, ಎರಡು ಹೊತ್ತು ಗಂಜಿ ಊಟ ಕೊಡುವಷ್ಟು ಸ್ಥಿತಿವಂತವಾಗಿತ್ತು ತವರು ಮನೆ.

ಈ ಮನೆಯ ಹಿರಿತಲೆಮಾರಲ್ಲಿದ್ದವರು ಇಬ್ಬರು ಗಂಡುಮಕ್ಕಳು ಮತ್ತು ಐವರು ಹೆಣ್ಣುಮಕ್ಕಳು.ಗಂಡು ಮಕ್ಕಳೋ, ಕೈ-ಕಾಲುಗಳ ಬೆರಳುಗಳು ಸಂಪೂರ್ಣ ಕರಗಿ ಹೋಗಿದ್ದಂತಹ ಕುಷ್ಠರೋಗ ಪೀಡಿತರು. ಅದು ಕಾರಣವಾಗಿ ಅವರು ಅವಿವಾಹಿತರಾಗಿಯೇ ಉಳಿದರು. ಐವರು ಹೆಣ್ಣುಮಕ್ಕಳಲ್ಲಿ ಮೊದಲನೆಯವರ ಮಗಳೇ ಈಗ ತವರುಮನೆ ಸೇರಿದ ನಮ್ಮ ಕಥಾನಾಯಕಿ. ಕಷ್ಟದಲ್ಲಿರುವ ಮಗಳ ಸಂಸಾರಕ್ಕೆ ಆಶ್ರಯ ನೀಡಿದರೂ, ಇಲ್ಲೂ ಕೌಟುಂಬಿಕ ರಾಜಕಾರಣ ತುರೀಯಾವಸ್ಥೆಗೆ ತಲುಪಿತು. ದುಡಿಯುವ ಕೈ ನಾಲ್ಕಾಗಿ; ತಿನ್ನುವ ಬಾಯಿ ನಲ್ವತ್ತಿದ್ದರೆ ಸಮಸ್ಯೆ ಏಳದಿರುತ್ತದೆಯೇ? ಅದೃಷ್ಟಹೀನ ಈ ಕುಟುಂಬ ಈಗ ತವರುಮನೆಯನ್ನೂ ತೊರೆದು ಯಾರ ಹಂಗೂ ಇಲ್ಲದೆ ಬದುಕುವ ನಿಶ್ಚಯ ಮಾಡಿತು. ತನ್ನ ಕುಟುಂಬಕ್ಕೇ ಸೇರಿದ್ದ, ಆದರೆ ಯಾರೂ ವಾಸವಿಲ್ಲದ, 'ಅರಸು ಮಂಜಿಷ್ಣಾರ್ ದೈವ'ಗಳ ಮಣಿಮಂಚವಿದ್ದ ಚೌಕಿಮನೆಯೊಂದು ಖಾಲಿ ಇತ್ತು. ಮನೆಯೇನೋ ಸಿಕ್ಕಿತು. ಹೊಟ್ಟೆಯ ಕಥೆ? ಶೇಕಬ್ಬ ಎಂಬೊಬ್ಬರು ಬ್ಯಾರಿ. ಮೂಲತಃ ದೇರಳಕಟ್ಟೆಯವರು. ಕಾಸರಗೋಡು -ಮಂಗಳೂರು ರಸ್ತೆ ಮಾರ್ಗದಿಂದ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೋಗುವವರು ಈ ದೇರಳಕಟ್ಟೆಯನ್ನು ಹಾದು ಹೋಗಲೇಬೇಕು. ಶೇಕಬ್ಬ ಬೀಡಿ ಕಂಟ್ರಾಕ್ಟ್‌ದಾರರು. ಈ ಬ್ಯಾರಿಯ ತೈನಾತಿ (ಆಪ್ತ ಸಹಾಯಕ) ಬಿಲ್ಲವ ಜಾತಿಯ ಜನಾರ್ದನ ಪೂಜಾರಿ. ಶೇಕಬ್ಬ ಮತ್ತು ಜನಾರ್ದನರಿಬ್ಬರೂ ಊರವರ ಬಾಯಲ್ಲಿ ಸೇಕೆಬ್ಯಾರಿ ಮತ್ತು ಜನ್ನಣ್ಣ ಆಗಿದ್ದರು. ಈ ಬ್ಯಾರಿ ಮತ್ತು ಪೂಜಾರಿ ಪುಟ್ಟ ಪೇಟೆಯೂ ಅಲ್ಲದ, ನೆಟ್ಟಗೆ ಹಳ್ಳಿಯೂ ಅಲ್ಲದ ಮಾಡೂರು ಎಂಬ ಊರಿನಲ್ಲಿ ಬೀಡಿಬ್ರಾಂಚ್ ತೆರೆದರು.

ಬೀಡಿ ಉದ್ಯಮವನ್ನು ಮಾಡೂರಲ್ಲಿ ಮೊತ್ತಮೊದಲಿಗೆ ಆರಂಭಿಸಿದ ಈ ಜೋಡಿ ಕೊನೆಯವರೆಗೂ ಒಂದು ಜೀವ ಎರಡು ದೇಹಗಳಂತೆ ಬದುಕಿತ್ತು. ಸೇಕೆ ಬ್ಯಾರಿ-ಜನ್ನಣ್ಣರ ಜೋಡಿ, ಬೀಡಿ ಬ್ರಾಂಚ್ ತೆರೆದ ತಿಂಗಳೊಪ್ಪತ್ತಿನಲ್ಲಿ; ಪ್ರಾಯಶಃ, ಕರಾವಳಿಯ ಬಂಟ ಸಮುದಾಯದ ಇತಿಹಾಸದಲ್ಲೇ ಮೊತ್ತಮೊದಲಬಾರಿಗೆ ದೊಡ್ಡ ಮನೆತನಕ್ಕೆ ಸೇರಿದ ಈ ನಮ್ಮ ಕಥಾನಾಯಕಿ ಹೆಚ್ಚೂ? ಕಮ್ಮಿ ತನ್ನದೇ ವಯಸ್ಸಿನ ಈ ಇಬ್ಬರು ಗಂಡಸರ ಮುಂದೆ ಬೀಡಿಎಲೆ, ಹೊಗೆಸೊಪ್ಪು, ಎಲೆ-ಅಚ್ಚು, ಕತ್ತರಿ-ಕುತ್ತೊಲು, ನೂಲು-ರೀಲು ಬೇಡಿ ಹೋಗಿದ್ದಳು. ತಂಗೀಸ್‌ನ ಚೀಲವೊಂದರಲ್ಲಿ ಇವೆಲ್ಲವನ್ನಿಟ್ಟು ತಂಗಿಯಂತಹ ಹೆಣ್ಣುಮಗಳ ಉಡಿ ತುಂಬುವಂತೆ ತುಂಬಿಸಿ ಕಳಿಸಿದವರು ಬ್ಯಾರಿ ಮತ್ತು ಪೂಜಾರಿ. ನಮ್ಮ ಹಿರೀಕರು ಹೇಳುತ್ತಿದ್ದ 'ಯಾವ ಕಾಲದಲ್ಲಿ ಧರ್ಮದೇವತೆ ಧೇನುವಿನ ರೂಪದಲ್ಲಿ ತನ್ನ ನಾಲ್ಕೂ ಕಾಲುಗಳಲ್ಲಿ ನೆಟ್ಟಗೆ ನಿಂತಿರುತ್ತಾಳೋ ಅದುವೇ ಪುಣ್ಯದ ಕಾಲ' ಎಂಬ ನುಡಿಗಟ್ಟೊಂದು ಈಗ ನೆನಪಾಗುತ್ತಿದೆ. ಅಂತಹ ಕಾಲ ಅದು. ಆ ಪುಣ್ಯದ ಕಾಲದಲ್ಲಿ ಈ ಪಾಪಿಗಳ ಲೋಕದ ಜಾತಿ-ಧರ್ಮಗಳ ನಡುವೆ ಅಂತರವನ್ನು ಕಾಯುವ 'ನೈತಿಕ ಪೊಲೀಸ್‌ಗಿರಿಯ ಪುಂಡರು' ಇನ್ನೂ ಹುಟ್ಟಿಯೇ ಇರಲಿಲ್ಲ.

ಬೀಡಿಯ ಎಲೆಗೆ ನೀರು ಸಿಂಪಡಿಸಿ, ಅಚ್ಚು ಹಿಡಿದು ಹೆಂಗೆಂಗೋ ಕತ್ತರಿಸಿ, ಹೊಗೆಸೊಪ್ಪು ತುಂಬಿ, ಎಲೆಯನ್ನು ಸುರುಟಿಸಿ, ಬೀಡಿಯನ್ನು ಹೆಣೆದು, ಬೀಡಿಯ ತಲೆಯನ್ನು ಕುತ್ತೊಲಿನಿಂದ (ಕಿರು ದಬ್ಬಣ) ಮೊಟಕಿ ಒಪ್ಪಗೊಳಿಸಿ, ಬಾಲದ ತುದಿಯನ್ನು ಮಡಚಿ ಕೆಳಭಾಗವನ್ನು ಹಳದಿ ನೂಲಿನಿಂದ ಬಿಗಿದು ಓರಣ ಮಾಡಿ ಇಪ್ಪತ್ತೈದು ಬೀಡಿಗಳ ಒಟ್ಟು ಏಳು ಕಟ್ಟುಗಳನ್ನು ಸಿದ್ಧಪಡಿಸಿದ ಈ ನಮ್ಮ ಕಥಾನಾಯಕಿ ಅವನ್ನು ಮರುದಿನ ಸೇಕೆ ಬ್ಯಾರಿಯ ಮುಂದಿಟ್ಟಳು. ಬ್ಯಾರಿ ಒಮ್ಮೆ ನೋಡಿ ಪೆಚ್ಚುನಗೆ ನಕ್ಕು ಗೆಳೆಯನತ್ತ ಚೀಲ ತಳ್ಳಿದರು. ತನ್ನ ಸೂಪು (ಮೊರ)ವಿನಲ್ಲಿ ಬೀಡಿಕಟ್ಟುಗಳನ್ನು ಸುರಿದು ಬೀಡಿಗಳನ್ನು ಅಚ್ಚುಕಟ್ಟು ಮಾಡಹೊರಟ ಜನ್ನಣ್ಣನಿಗೆ ದಿಗಿಲೋ ದಿಗಿಲು. ಹೆಣೆದ 175 ಬೀಡಿಗಳಲ್ಲಿ 15 ಮಾತ್ರ ನೆಟ್ಟಗಿವೆ. ಉಳಿದೆಲ್ಲವೂ ಮುಖ ಸೊಟ್ಟಗೆ ಮಾಡಿ ದಶದಿಕ್ಕುಗಳನ್ನೂ ನೋಡುತ್ತಿವೆ.

ಕೋಪಿಸಿಕೊಂಡರೇ ಜನ್ನಣ್ಣ ಮತ್ತು ಸೇಕಬ್ಬ?

ಈ ತಾಯಿಯನ್ನು ಹತ್ತಿರ ಕರೆದರು. ಇತರ ಕೆಳಜಾತಿ ಹೆಂಗಸರು ಅ-ವಾಕ್ ಆಗಿ ನೋಡುತ್ತಿರುವಂತೆ ಕುಕ್ಕುರುಗಾಲಿನಲ್ಲಿ ಕುಳಿತು ಬೀಡಿ ಸುರುಟುವ ಕಲೆಯನ್ನು ತಾಳ್ಮೆಯಿಂದ ಹೇಳಿಕೊಟ್ಟರು. ಎಲೆ ವ್ಯರ್ಥವಾಗದಂತೆ ಕತ್ತರಿಸುವ ವಿದ್ಯೆಯನ್ನು ಕಲಿಸಿದರು. ಎಲೆಯಲ್ಲಿ ಹರುಕು-ಮುರುಕು ಇದ್ದರೆ ಆ ಬಿರುಕು ಮುಚ್ಚುವ ಉಪಾಯವನ್ನೂ ತಿಳಿಸಿದರು. ಉಡುವ ಸೀರೆ ಹರಿದು ಹೋಗಿದ್ದಲ್ಲಿ ಅಲ್ಲಿಯ ತೂತುಗಳು ಕಾಣದಂತೆ ನೆರಿಗೆಯಲ್ಲೋ-ಸೆರಗಲ್ಲೋ ಊನವನ್ನು ಮುಚ್ಚಿಕೊಳ್ಳುವ ಗುಣವನ್ನು, ಹುಟ್ಟುತ್ತಲೇ ಕಲಿತ ಅಥವಾ ಕಲಿತೇ ಹುಟ್ಟಿದ ಜಾಣೆಯರು ಹರಕು ಎಲೆಯನ್ನು ಮುಚ್ಚಲಾರರೇ?

ನಮ್ಮ ಕಥಾ ನಾಯಕಿಯ ಮನೆಯಲ್ಲಿ ಮೆಲ್ಲನೆ ಬೀಡಿ ಸುರುಟ ತೊಡಗಿತು, ಬದುಕು ನಿಧಾನಕ್ಕೆ ಅರಳತೊಡಗಿತು.

ಇದು ನಾನು ಬಲುಹತ್ತಿರದಿಂದ ಗಮನಿಸಿದ ಸಂಸಾರವೊಂದರ ಕಥೆ. ಇದಕ್ಕಿಂತಲೂ ಕಡುಕಷ್ಟವಾಗಿ ಬಾಳಿ-ಬದುಕಿದ ಸಂಸಾರಗಳು ಕರಾವಳಿಯಲ್ಲೇ ಅಸಂಖ್ಯಾತವಾಗಿವೆ. ಏಳು ಹೊಟ್ಟೆಗಳಿರುವ ಮನೆಯಲ್ಲಿ ಒಂದು ಪಾವಕ್ಕಿಯ ಗಂಜಿ ಬೇಯಿಸಿ, ಉಪ್ಪು-ಮೆಣಸನ್ನು ನುರಿದು ಅಥವಾ ಕೆಂಡದಲ್ಲಿ ಸುಟ್ಟ ಒಣಮೀನನ್ನು ನೆಂಚಿಕೊಂಡು, ಅನ್ನಕ್ಕಿಂತ ಮೂರುಪಟ್ಟು ಹೆಚ್ಚು ಗಂಜಿತಿಳಿ ಕುಡಿದೇ ಹಸಿವು ನೀಗಿಕೊಂಡವರು ಇಲ್ಲಿ ಅನೇಕರು. ಹಾಗಿದ್ದೂ ರಾತ್ರಿ ಜಠರಾಗ್ನಿ ಧಗಧಗಿಸಿದರೆ ಹಸಿಬೀಡಿಯನ್ನೇ ಸೇದಿ ಹೊಟ್ಟೆಯ ಸಂಕಟವನ್ನು ಎದೆಗೂಡಲ್ಲಿ ತುಂಬಿಸಿದ ಹೊಗೆಯಲ್ಲಿ ನೀಗಿಕೊಂಡ ಎಷ್ಟೋ ಹೆಂಗಸರು ಇಂದಿಗೂ ನಾನು ಒಮ್ಮೆ ಕಣ್ಣು ಮುಚ್ಚಿದರೆ ಸಾಕು, ಪ್ರತ್ಯಕ್ಷವಾಗಿ ಕಾಡತೊಡಗುತ್ತಾರೆ.

ಕರ್ನಾಟಕದ ಕರಾವಳಿಯ ಆತ್ಮಕಥೆಯನ್ನು ಬರೆದರೆ, ಅದರ ಬಹುಪಾಲು ಪುಟಗಳನ್ನು ತುಂಬುವುದು ಬೀಡಿಯ ಎಲೆಗಳಿಂದ ತಮ್ಮ ಬದುಕು ಕಟ್ಟಿಕೊಂಡ,
ಮಾನ ಮುಚ್ಚಿಕೊಂಡ ಜನರ ಕಷ್ಟ-ಕಾರ್ಪಣ್ಯಗಳ ಕಥೆಗಳೇ. ಬೀಡಿ ಸುರುಟು ವಂತಹ ಕೆಲಸವೊಂದು ೫೦ರ ದಶಕದಿಂದ ಇಲ್ಲಿ ಆರಂಭವಾಗದಿರುತ್ತಿದ್ದರೆ ಈ ಜಿಲ್ಲೆಯ ಜನ ಸಮುದಾಯದ ಕಥೆಯಲ್ಲಿ ಆತ್ಮವೇ ಇರುತ್ತಿರಲಿಲ್ಲ. ವಸಾಹತು ಕಾಲದ ಕಂಪೆನಿಗಳು ಆರಂಭಿಸಿದ ಹೆಂಚಿನ ಕಾರ್ಖಾನೆಗೆ ಹೋಗುತ್ತಿದ್ದ ಗಂಡಸರ
ನೇಕರು, ವಾರಕ್ಕೊಮ್ಮೆ ತರುತ್ತಿದ್ದ ಮಜೂರಿಯಲ್ಲಿ ಅರ್ಧದಷ್ಟನ್ನು ಸಾರಾಯಿಗೆ ಹಾಕುತ್ತಿದ್ದಾಗ, ಕುಸಿದು ಬಿದ್ದು ಹೋಗಬಹುದಾಗಿದ್ದ ಅವೆಷ್ಟೋ ಮನೆಗಳನ್ನು ನೆಟ್ಟಗೆ ನಿಲ್ಲಿಸಿದ ಕಂಬಗಳೆಂದರೆ ಈ ಚೋಟುದ್ದದ ಬೀಡಿಗಳೇ. ವಯಸ್ಸಿಗೆ ಬಂದ ಕರಾವಳಿಯ ಹೆಣ್ಣುಗಳ ಬದುಕನ್ನು ಬಿಡಾಡಿ ದನಗಳ ಬದುಕು ಆಗದಂತೆ ತಡೆದು ನಿಲ್ಲಿಸಿದ್ದು ಕೂಡ ಬೀಡಿ. ಮದುವೆಗೆ, ಬಾಣಂತನಕ್ಕೆ, ಸ್ಕೂಲ್ ಫೀಸ್‌ಗೆ, ಕೊನೆಗೆ ಕಾಡುತ್ತಿದ್ದ ಕ್ಷಯ ರೋಗದ ಔಷಧಗೆ ನೆರವಾದದ್ದೂ ಇದೇ ಬೀಡಿ.

ಬೀಡಿ ಉದ್ಯಮ ಇಲ್ಲಿಯ ಜನರ ರಾಜಕೀಯ ಬದುಕಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದುದರಿಂದಲೇ ಸಿಪಿಐ(ಎಂ) ಪಕ್ಷದ ಕೃಷ್ಣ ಶೆಟ್ಟರು, ಪಿ. ರಾಮಚಂದ್ರ ರಾಯರುಉಳ್ಳಾಲ ವಿಧಾನಸಭಾ ಕ್ಷೇತ್ರವನ್ನು ಮತ್ತೆಮತ್ತೆ ಗೆಲ್ಲುವುದಕ್ಕೆ ಸಾಧ್ಯವಾಯಿತು. ಇವರ ಪೋಲಿಂಗ್ ಬೂತ್ ಏಜೆಂಟರುಗಳಾಗಿ ನಮ್ಮ ಊರಲ್ಲಿ ಕೆಲಸ ಮಾಡಿದವರು ಸೇಕೆಬ್ಯಾರಿ ಮತ್ತು ಜನ್ನಪೂಜಾರಿ. ಮುಸ್ಲಿಮ್ ಬಾಹುಳ್ಯದ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಬಂಟ-ಬ್ರಾಹ್ಮಣ ಸಮುದಾಯದ ಈ ಅಭ್ಯರ್ಥಿಗಳು ಸೋಲಿಸಿದ್ದು ಕಾಂಗ್ರೆಸ್‌ನ ಈಗಿನ ಯುವನಾಯಕ ಯು.ಟಿ. ಖಾದರ್‌ರವರ ತಂದೆಯವರಾದ ಯು.ಟಿ. ಫರೀದ್‌ರವರನ್ನು.

ಇಂತಿಪ್ಪ ಕಾಲದೊಳ್, ೧೯೯೦ರ ದಶಕದಲ್ಲಿ ಮಹತ್ವದ ಸಾಂಸ್ಕೃತಿಕ ಪಲ್ಲಟ ವೊಂದು ಸಂಭವಿಸಿತು. ಬೀಡಿ ಕಟ್ಟಿ ನೆಟ್ಟಗೆ ನಿಂತ ಮನೆಯ ಉಪ್ಪನ್ನವನ್ನು ಉಂಡು ಬೆಳೆದ ಕರಾವಳಿಯ ಶೂದ್ರ-ದಲಿತ ಸಮುದಾಯಗಳ ತರುಣರು ‘ಶ್ರೀರಾಮ ಶಿಲಾಪೂಜನ ಸಮಿತಿ’ಯ ಕಾರ್ಯಕರ್ತರಾಗಿವ ಇಟ್ಟಿಗೆಯನ್ನು ಎದೆ ಗವಚಿಕೊಂಡು, ತಲೆಯ ಮೇಲೆ ಹೊತ್ತುಕೊಂಡು ಮನೆ-ಮನೆ ತಿರುಗತೊಡಗಿ ದರು. ನನಗಿನ್ನೂ ನೆನಪಿದೆ, ಎಲ್.ಕೆ. ಆಡ್ವಾಣಿಯವರ ರಥಯಾತ್ರೆಯ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ನಡೆದಾಗ ಮಂಗಳೂರಲ್ಲಿ ಪ್ರಚಾರ ಭಾಷಣ ಮಾಡಿದ್ದ ನಟ ಶತ್ರುಘ್ನ ಸಿನ್ಹಾ, ಬಿಜೆಪಿಯ ಪರ ದೇಶದಲ್ಲಿ ‘‘ತರಂಗ್ ನಹೀಂ, ತೂಫಾನ್ ಹೈ’’ ಎಂದಿದ್ದರು.

ಶತ್ರುಘ್ನರು ಹೇಳಿದ್ದು ನಿಜವಾಗಿದೆ. ಹೌದು, ತೂಫಾನ್ ಅಪ್ಪಳಿಸಿದೆ; ಬೀಡಿ ಎಲೆಗಳಿಂದಲೇ ಕಟ್ಟಲ್ಪಟ್ಟ ಕರಾವಳಿಯ ಜನಬದುಕಿನ ಪರ್ಣಕುಟೀರಗಳು
ಈ ಬಿರು ಗಾಳಿಗೆ ಸಿಲುಕಿ ಧೂಳೀಪಟವಾಗಿವೆ. ಬೀಡಿಯ ಹೊಗೆ ದೇಹಕ್ಕೆ ಹಾನಿಕರವಾಗಿದ್ದಿರಲೂಬಹುದು. ಆದರೆ ಅದಕ್ಕಿಂತಲೂ ಘಾತುಕವಾದ ವಿಷಾನಿಲ ಕೋಮುವಾದವೇ ಆಗಿದೆ. ಅದು ದೇಹಕ್ಕೆ ಮಾತ್ರವಲ್ಲ, ದೇಶಕ್ಕೂ ಕಂಟಕಪ್ರಾಯವಾಗಿದೆ. ಕೋಮು ದ್ವೇಷದ ಹೊಗೆ ಹಿಂದೂ-ಮುಸ್ಲಿಮ್ ಎಂಬ ಭೇದವಿಲ್ಲದೆ ಅವಿಭಜಿತ ದಕ್ಷಿಣ ಕನ್ನಡದ ಜನಸಮುದಾಯದ ಮನಸ್ಸನ್ನು ಇಂದು ದಟ್ಟವಾಗಿ ವ್ಯಾಪಿಸಿದೆ, ಮಾತ್ರವಲ್ಲ ಇಡೀ ಸಮಾಜವನ್ನು ಅಡ್ಡಡ್ಡ-ಉದ್ದುದ್ದ
ಸೀಳಿ ಸಿಗಿದು ಹಾಕಿದೆ. ಈ ನಾಲ್ಕು ದಶಕಗಳ ಅಂತರದಲ್ಲಿ; ಹೊಟ್ಟೆಯಲ್ಲಿ ಸಹಜವಾಗಿ ಹುಟ್ಟಿದ ಹಸಿವಿಗಿಂತ, ರಣವ್ಯೆಹವೊಂದರ ಭಾಗವಾಗಿ ಎದೆಯಲ್ಲಿ ಕೃತಕವಾಗಿ ನಾಟಿ ಮಾಡಿದ ನಂಬಿಕೆ ಬಹಳ ಬಲಿಷ್ಠವಾಗಿದೆ. ಹುಟ್ಟು ವಾಗಲೇ ಇದ್ದ ಮೂಗಿಗಿಂತ, ತಾರುಣ್ಯ ಸ್ಥಿತಿಗೆ ತಲುಪಿದಾಗ ಮೂಡಿಬರುವ ಮೀಸೆಯೇ ದೊಡ್ಡದೆಂದು ಭ್ರಮಿಸಿರುವ ಜನರು ಇಲ್ಲಿ ನಿಧಾನವಾಗಿ ತಲೆಯೆತ್ತತೊಡಗಿದರು. ಕರಾವಳಿ ಬದಲಾಗುವುದಕ್ಕೆ ತೊಡಗಿತು.

ಅದುವರೆಗಿನ ಭಾರತದ ರಾಜಕಾರಣದಲ್ಲಿ ಜನಸಮುದಾಯಗಳ ಆಸೆ-ಆಕಾಂಕ್ಷೆಗಳು, ದುಗುಡ-ದುಮ್ಮಾನಗಳು ರಾಜಕೀಯ ಅಜೆಂಡಾಗಳಾಗಿ ಸಂಸದೀಯ ಕಾರ್ಯ-ಕಲಾಪಗಳಲ್ಲಿ ಪ್ರತಿಫಲನಗೊಳ್ಳುತ್ತಿದ್ದವು. ನಮ್ಮ ಹೆಮ್ಮೆಯ ಸಂವಿಧಾನ ಮತ್ತು ಎಂಟು ವರ್ಷಗಳ ಹಿಂದೆಯಷ್ಟೇ ಜಾರಿಗೊಳಿಸ ಲಾದ, ನರೇಗಾ, ಆರ್‌ಟಿಇ ಮತ್ತು ಆರ್‌ಟಿಐಯಂತಹ ಶಾಸನಗಳೂ ಸೇರಿದಂತೆ, ಬ್ಯಾಂಕ್ ರಾಷ್ಟ್ರೀಕರಣ, ಭೂ ಮಸೂದೆಯಂತಹ ಅನೇಕ ಮಹತ್ವದ ಶಾಸನಗಳು-ಕಾರ್ಯಕ್ರಮಗಳು ಇದಕ್ಕೆ ಜೀವಂತ ನಿದರ್ಶನಗಳು. ಅಂದರೆ ಆ ಕಾಲದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಲನೆ, ಜನರ ಬೇಕು-ಬೇಡಗಳನ್ನು ಗಮನಿಸುತ್ತ, ಜನಸಮುದಾಯಗಳ ಕಲ್ಯಾಣವನ್ನು ಹಂಬಲಿಸುತ್ತ, ಜನರೇ ದೇಶ ಎಂದು ಭಾವಿಸುತ್ತ ಕೆಳಗಿನಿಂದ ಆರಂಭವಾಗಿ ಮೇಲೆ ಹೋಗುತ್ತಿತ್ತು.

ಸಮಸ್ಯೆಗಳು ಇರಲಿಲ್ಲವೆಂದಲ್ಲ, ಖಂಡಿತವಾಗಿಯೂ ಇದ್ದವು, ಅನುಕೂಲ ಸಿಂಧು ರಾಜಕಾರಣವೂ, ಭ್ರಷ್ಟಾಚಾರವೂ ಹೇರಳವಾಗಿಯೇ ಇತ್ತು. ಆದರೆ ಆ ಎಲ್ಲ ಅನಿಷ್ಟಗಳನ್ನು ನಿವಾಳಿಸುವಂತಹ ‘ಕಲ್ಯಾಣ ರಾಜ್ಯ’ದ ಕಾರ್ಯಕ್ರಮಗಳು ಮುಂಚೂಣಿಯಲ್ಲಿರುತ್ತಿದ್ದುವು. ಜನ-ಜೀವನದ ಕುರಿತಾದ ಸಾಮುದಾಯಿಕ ಕಾಳಜಿಯೇ ಅಗ್ರಪೀಠದಲ್ಲಿರುತ್ತಿತ್ತು. ಆದರೆ ೯೦ರ ದಶಕದ ನಂತರ ಇದು ತಿರುವು-ಮುರುವು ಆಯಿತು. ಈ ಕಾಲದಲ್ಲಿ ರಾಜಕೀಯವಾಗಿ ಮುಂಚೂಣಿಗೆ
ಬಂದ ಕೆಲ ರಾಜಕೀಯ ಸಂಘ-ಸಂಘಟನೆ-ಪಕ್ಷಗಳು ತಮ್ಮ ಸಾಂಸ್ಕೃತಿಕ ಐಡಿಯಾಲ ಜಿಗಳನ್ನು ಜನ ಸಮುದಾಯದ ಬದುಕು-ಭಾವದ ಭಾಗವಾಗಿಸುವಲ್ಲಿ ಯಶಸ್ವಿಯಾದವು. ಆಗ ಸಾಂಸ್ಕೃತಿಕ ನೀತಿ-ನಿರೂಪಣೆಯ ಕಾರ್ಯಕ್ರಮಗಳ ಮತ್ತು ರಾಜಕೀಯ ಮಹತ್ವಾಕಾಂಕ್ಷೆಗೆ ಹೆಣೆಯಲಾದ ಭೀಕರ ರಣತಂತ್ರಗಳ ರಥ ಧರ್ಮದ ಮುಖವಾಡವನ್ನು ಧರಿಸಿ ಮೇಲಿನಿಂದ ಕೆಳಮುಖವಾಗಿ ರಭಸದಿಂದ ಚಲಿಸತೊಡಗಿತು. ತನ್ನ ದಾರಿಗಡ್ಡ ಇರುವ ಎಲ್ಲವನ್ನು ಅದು ನುಗ್ಗುನುರಿ ಮಾಡುತ್ತಲೇ ಹೋಯಿತು.

ಮೇಲಿನಿಂದ ಕೆಳಕ್ಕೆ ಇಳಿಯುವುದು ರಾಜಪ್ರಭುತ್ವದ ಮರ್ಜಿ; ಕೆಳಗಿನಿಂದ ಮೇಲಕ್ಕೆ ಚಲಿಸುವುದು ಪ್ರಜಾಪ್ರಭುತ್ವದ ಧರ್ಮ. ತುರ್ತುಪರಿಸ್ಥಿತಿಯ ನಂತರ ನನ್ನ ಪ್ರೀತಿಯ ಈ ದೇಶದಲ್ಲಿ, ಪ್ರಜಾತಂತ್ರದ ಆಶಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳು ಉಸಿರುಗಟ್ಟಿ ನಿರಂತರವಾಗಿ ಬಿಕ್ಕಳಿಸತೊಡಗಿದ್ದು ಇದೇ ೯೦ರ ದಶಕದ ನಂತರದಿಂದ. ಈ ಉಬ್ಬಸ ಖಾಯಿಲೆ ಈಗ ದಿನೇದಿನೇ ವಿಷ-ಮಗೊಳ್ಳುತ್ತಿದೆ.

ಇದುವರೆಗೆ ಚಿತ್ರಿಸಿದ ಈ ನನ್ನ ನಿರೂಪಣೆಯಲ್ಲಿರುವ ಬಹುತೇಕರು ಇಂದು ಕಾಲವಾಗಿದ್ದಾರೆ. ಕಾಲವಾದವರ ಬಾಳ್ವೆಯಿಂದ, ಇಂದಲ್ಲ ನಾಳೆಯಾದರೂ ಕಾಲವಾಗಲೇ ಬೇಕಾದ ನಾವು ಕಲಿಯುವಂಥದ್ದೇನಾದರೂ ಇದೆಯೇ?.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top