ನಾಗರಿಕ ಮೌಲ್ಯಗಳು ಮತ್ತು ವ್ಯಕ್ತಿಗತ ನೈತಿಕತೆಗಳ ನಡುವೆ
-

ಅತ್ಯಾಚಾರವನ್ನು ಸಮರ್ಥಿಸುವ, ಹಿಂಸೆಯನ್ನು ಪ್ರಚೋದಿಸುವ, ಜೀವ ಹರಣವನ್ನೂ ಸಮರ್ಥಿಸುವ ಮತ್ತು ಸಮಾಜದ ಬುನಾದಿಯನ್ನೇ ಬುಡಮೇಲು ಮಾಡುವ ಭ್ರಷ್ಟಾಚಾರದ ವಾಮ ಮಾರ್ಗಗಳನ್ನು ಕಿಂಚಿತ್ತೂ ಸಂಕೋಚ, ಮುಜುಗರ ಇಲ್ಲದೆ ಕಾಪಾಡಿಕೊಂಡುಬರುವ ಒಂದು ಸಮಾಜ ಯಾವ ಮೌಲ್ಯವನ್ನು ರಕ್ಷಿಸಲು ಅಥವಾ ಪ್ರತಿಪಾದಿಸಲು ಸಾಧ್ಯ?
ಬಹಳ ತಡವಾಗಿಯೇ ಆದರೂ ನಮ್ಮ ಸಾಮಾಜಿಕ ಹಾಗೂ ರಾಜಕೀಯ ಸಂಕಥನಗಳಲ್ಲಿ 'ಮೌಲ್ಯ'ವನ್ನು ಕುರಿತ ಚರ್ಚೆಗಳು ಕಂಡುಬರುತ್ತಿವೆ. ಅಧಿಕಾರಾರೂಢ ಸರಕಾರಗಳ ದೃಷ್ಟಿಯಲ್ಲಿ ಮೌಲ್ಯ ಎನ್ನುವುದು ಸಹ ರಾಜಕೀಯ ಅಸ್ತ್ರವಾಗುವುದು ಸಹಜವೂ, ಸಾರ್ವತ್ರಿಕ ಸತ್ಯವೂ ಆಗಿರುತ್ತದೆ. ಹಾಗಾಗಿಯೇ ರಾಜಕೀಯ ನೆಲೆಯಲ್ಲಿ ಮೌಲ್ಯ ಎನ್ನುವುದು ಸಾಪೇಕ್ಷತೆಯನ್ನು ಪಡೆದಂತೆಯೇ ಸಾಂದರ್ಭಿಕತೆಯನ್ನೂ ಪಡೆದುಕೊಳ್ಳುತ್ತದೆ. ತತ್ಪರಿಣಾಮ ಪರಿಭಾವಿತ ಮೌಲ್ಯಗಳು ಸಾರ್ವಕಾಲಿಕವಾಗಿ ನೆಲೆಗಾಣುವುದಿಲ್ಲ. ಅಧಿಕಾರ ರಾಜಕಾರಣದ ವಾರಸುದಾರರು, ಉತ್ತರಾಧಿಕಾರಿಗಳು ಮತ್ತು ಸಾಂಸ್ಕೃತಿಕ ರಾಯಭಾರಿಗಳು ತಮ್ಮ ತಾತ್ವಿಕ, ಸೈದ್ಧಾಂತಿಕ ಅವಶ್ಯಕತೆಗಳಿಗನುಗುಣವಾಗಿ, ರಾಜಕೀಯ ಅನಿವಾರ್ಯತೆಗಳಿಗನುಗುಣವಾಗಿ, ಸಮಾಜದಲ್ಲಿ ಕಾಣಬೇಕಾದ ಮೌಲ್ಯವನ್ನೂ ವಿಭಿನ್ನ ನೆಲೆಗಳಲ್ಲಿ ನಿರ್ವಚಿಸುತ್ತಿರುತ್ತಾರೆ. ಆದ್ದರಿಂದಲೇ ಮೌಲ್ಯ ಎನ್ನುವ ಮನುಷ್ಯ ಕೇಂದ್ರಿತ ಬೌದ್ಧಿಕ-ಭೌತಿಕ ಅಭಿವ್ಯಕ್ತಿಗೆ ಜಾತಿ, ಧರ್ಮ, ಪಂಥ ಇತ್ಯಾದಿ ಸೋಂಕುಗಳು ಅಂಟಿಕೊಳ್ಳುತ್ತವೆ.
ವರ್ತಮಾನದ ಸಮಾಜವನ್ನು ಕಣ್ಣೆತ್ತಿ ನೋಡಿದಾಗ ನಮಗೆ ಶಿಥಿಲವಾಗುತ್ತಿರುವ ಮೌಲ್ಯಗಳು ಸಾಲುಗಟ್ಟಿ ನಿಂತಿರುವುದು ಕಾಣುತ್ತದೆ. ಸಾಂವಿಧಾನಿಕ, ರಾಜಕೀಯ, ನಾಗರಿಕ, ಶೈಕ್ಷಣಿಕ, ಬೌದ್ಧಿಕ, ಸಾರ್ವಜನಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕೊನೆಯದಾಗಿ ಮಾನವೀಯ- ಈ ಎಲ್ಲ ನೆಲೆಗಳಲ್ಲೂ ನಾವು ಸಾಗಿ ಬಂದ ಚಾರಿತ್ರಿಕ ಮಾರ್ಗಗಳ ನೆಲೆಯಲ್ಲಿ ನಿಂತು ಮೌಲ್ಯಗಳು ಶಿಥಿಲವಾಗುತ್ತಿರುವುದನ್ನು ಕಂಡು ಮರುಗುತ್ತಿದ್ದೇವೆ. ಈ ಪ್ರತಿಯೊಂದೂ ಮೌಲ್ಯವನ್ನು ನಿರ್ವಚಿಸುವಾಗಲೂ ನಮಗೆ ಗತಕಾಲದ ವೈಭವ ಅಥವಾ ಆಗಿಹೋದ ಮಹಾನ್ ಚಿಂತಕರ ಜೀವನ ಮತ್ತು ಸಂದೇಶಗಳು ನೆನಪಾಗುತ್ತವೆ. ಯಾವ ಮೌಲ್ಯಗಳು ಶಿಥಿಲವಾಗುತ್ತಿವೆ ಎನ್ನುವುದಕ್ಕಿಂತಲೂ ಏಕೆ ಶಿಥಿಲವಾಗುತ್ತಿವೆ ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ, ನಮಗೆ ನಾವು ನಡೆದು ಬಂದ ಹಾದಿಯಲ್ಲಿ ನಾವೇ ಎಸಗಿರುವಂತಹ ಚಾರಿತ್ರಿಕ-ಸಮಕಾಲೀನ ಪ್ರಮಾದಗಳು ಗೋಚರಿಸುತ್ತವೆ. ಆದರೆ ಈ ಆತ್ಮಾವಲೋಕನದ ಮಾರ್ಗವನ್ನು ನಾವು ಪರಿಗಣಿಸುವುದೇ ಇಲ್ಲ. ಹಾಗಾಗಿಯೇ ಮೌಲ್ಯಗಳೂ ಸಾಪೇಕ್ಷವಾಗುತ್ತಿದ್ದು, ಎಲ್ಲ ತಾತ್ವಿಕ ಮೌಲ್ಯಗಳನ್ನೂ ಮಾರುಕಟ್ಟೆಯ ಚೌಕಟ್ಟಿನಲ್ಲೇ ಅಳೆಯುವಂತಾಗಿದೆ.
ಮೌಲ್ಯ ಮತ್ತು ನೈತಿಕತೆಯ ನಿಷ್ಕರ್ಷೆ
ಭಾರತೀಯ ಸಮಾಜದಲ್ಲಿ ಪಾರಂಪರಿಕವಾಗಿ ಮೌಲ್ಯ ಎನ್ನುವುದು ಕೆಲವೇ ನಿರ್ದಿಷ್ಟ ಚೌಕಟ್ಟುಗಳಲ್ಲಿ ನಿರ್ವಚಿಸಲ್ಪಡುತ್ತಿದೆ. ಸಮಾಜದ ಪ್ರಬಲ ವರ್ಗಗಳು ಅಥವಾ ಬೌದ್ಧಿಕವಾಗಿ ಸಮಾಜದ ಮೇಲೆ ತಮ್ಮ ಆಧಿಪತ್ಯ ಸಾಧಿಸಿರುವ ಅಲ್ಪಸಂಖ್ಯೆಯ ವರ್ಗಗಳು ಇಡೀ ಸಮಾಜದ ಮೇಲೆ ಕೆಲವು ಮೌಲ್ಯಗಳನ್ನು ಹೇರುವುದನ್ನು ಇತಿಹಾಸದುದ್ದಕ್ಕೂ ಗುರುತಿಸುತ್ತಾ ಬಂದಿದ್ದೇವೆ. ಸಾಮಾಜಿಕ ಜನಜೀವನದ ಮೌಲ್ಯೀಕರಣವಾದಂತೆಯೇ ಮನುಷ್ಯನ ಸ್ವಭಾವ, ವರ್ತನೆ, ಗುಣಲಕ್ಷಣಗಳು ಮತ್ತು ಸಾಮಾಜಿಕ ಅಭಿವ್ಯಕ್ತಿಗಳನ್ನೂ ಈ ಹೇರಲಾದ ಮೌಲ್ಯಗಳ ಚೌಕಟ್ಟಿನಲ್ಲೇ ನಿರ್ವಚಿಸುತ್ತಾ, ವ್ಯಕ್ತಿಯ ನಿತ್ಯ ಜೀವನದ ನಡೆನುಡಿಗಳಲ್ಲೂ ಇದೇ ಮೌಲ್ಯಗಳನ್ನು ಗುರುತಿಸುವ ಒಂದು ಪರಂಪರೆಯನ್ನು ಭಾರತೀಯ ಸಮಾಜ ರೂಢಿಸಿಕೊಂಡುಬಂದಿದೆ. ಹಾಗಾಗಿಯೇ ಇಂದಿಗೂ ಮೌಲ್ಯ ಎಂದ ಕೂಡಲೇ ಅದು ಸಮಾಜದ ಪ್ರಧಾನ ವರ್ಗಗಳ ಮೌಲ್ಯಗಳೇ ಎಂಬ ಅರ್ಥದಲ್ಲಿ ವಾದ ಮಂಡಿಸಲಾಗುತ್ತದೆ.
ಆದರೆ ಯಾವುದೇ ಸಮಾಜ, ಯಾವ ಕಾಲಘಟ್ಟದಲ್ಲೂ ಈ ರೀತಿಯಲ್ಲಿ ರೂಪುಗೊಂಡಿರುವುದಿಲ್ಲ. ಸಾಮಾಜಿಕ, ಸಾಂಸ್ಕೃತಿಕ ಮತ್ತು ಲೌಕಿಕ ಎಂದು ವಿಂಗಡಿಸಬಹುದಾದ ವಿಶಾಲ ತಳಹದಿಯ ಮೇಲೆ ನಿಂತು ನೋಡಿದಾಗ, ಮೌಲ್ಯ ಎನ್ನುವುದು ಸಾಪೇಕ್ಷವಾಗಿಬಿಡುವ ಸಾಧ್ಯತೆಗಳೇ ಹೆಚ್ಚು. ಭಾರತದಂತಹ ಬಹುಸಾಂಸ್ಕೃತಿಕ ಸಮಾಜದಲ್ಲಿ ಈ ಸಾಪೇಕ್ಷತೆ ಇನ್ನೂ ವಿಸ್ತರಿಸುತ್ತಾ ಹೋಗುತ್ತದೆ. ಲೌಕಿಕ ಜಗತ್ತಿನ ಮೇಲೆ ನಿಯಂತ್ರಣ ಸಾಧಿಸಲೆತ್ನಿಸುವ ಪ್ರಬಲ ಜಾತಿ ಅಥವಾ ಮತದ ವಾರಸುದಾರರು, ತಮ್ಮ ಧಾರ್ಮಿಕ ಚಿಂತನೆಗಳಿಗನುಸಾರವಾಗಿಯೇ ಈ ಸಾಪೇಕ್ಷತೆಯನ್ನು ಮತ್ತಷ್ಟು ಹಿಗ್ಗಿಸಲು ಪ್ರಯತ್ನಿಸುತ್ತಿರುತ್ತಾರೆ. ಸಮಾಜದ ವಿಭಿನ್ನ ನೆಲೆಗಳಲ್ಲಿ ತಮ್ಮ ಆಧಿಪತ್ಯ ಸಾಧಿಸುವ ಜಾತಿ ಗುಂಪುಗಳು, ಮತ ಸಮೂಹಗಳು, ಧಾರ್ಮಿಕ/ಆಧ್ಯಾತ್ಮಿಕ ಚಿಂತಕರು ಈ ಸಾಪೇಕ್ಷ ಮೌಲ್ಯಗಳನ್ನೇ ಸಾಮಾನ್ಯೀಕರಿಸಲು ಅಥವಾ ಸಾರ್ವತ್ರೀಕರಿಸಲು ಪ್ರಯತ್ನಿಸುತ್ತಿರುತ್ತವೆ. ಈ ಹೇರಲ್ಪಡುವ ಮೌಲ್ಯಗಳಿಗನುಸಾರ ಸಮಾಜವನ್ನು ಮುನ್ನಡೆಸಬೇಕಾದ ಬೌದ್ಧಿಕ ನೆಲೆಗಳನ್ನೂ ರೂಪಿಸಲು ಸಕಲ ಪ್ರಯತ್ನಗಳೂ ನಡೆಯುತ್ತವೆ.
ಸಂಸ್ಕೃತಿ ಮತ್ತು ಮೌಲ್ಯ ಇವೆರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ಸಮೀಕರಿಸುವ ಮೂಲಕ ಪ್ರಬಲ ಜಾತಿ/ಮತದ ವರ್ಗಗಳು ತಮ್ಮ ಸಾಂಸ್ಕೃತಿಕ ಬೇರುಗಳಲ್ಲಿ ಕಾಣಲಾಗದಂತಹ ಮೌಲ್ಯಗಳನ್ನೂ ಸಮಕಾಲೀನ ಸಂದರ್ಭದಲ್ಲಿ, ಪಾರಂಪರಿಕ ಎಂದು ಬಿಂಬಿಸಲು ಯತ್ನಿಸುತ್ತವೆ. ಹಾಗಾಗಿಯೇ ವರ್ತಮಾನದ ಸಂದರ್ಭದಲ್ಲಿ 'ಮಾನವೀಯ ಮೌಲ್ಯಗಳು' ಚರ್ಚೆಯ ಮುನ್ನೆಲೆಗೆ ಬಂದಾಗಲೆಲ್ಲಾ, ಪ್ರಾಚೀನ ಅಥವಾ ಮಧ್ಯಕಾಲೀನ ಯುಗದಲ್ಲೂ ತಮ್ಮ ಸಾಂಸ್ಕೃತಿಕ-ಜೀವನಶೈಲಿಯ ಮೌಲ್ಯಗಳನ್ನಾಧರಿಸಿಯೇ ಮನುಷ್ಯ ಸಮಾಜದ ಅಮಾನುಷ ಎನ್ನಬಹುದಾದ ತರತಮಗಳನ್ನು ಸೃಷ್ಟಿಸಿದ ಒಂದು ಸಾಮಾಜಿಕ ವ್ಯವಸ್ಥೆಯೂ ಅದನ್ನು ವಶಪಡಿಸಿಕೊಳ್ಳಲೆತ್ನಿಸುತ್ತವೆ. ಹುಟ್ಟು, ಆಹಾರ, ಚರ್ಮ ಮತ್ತು ಕಸುಬು ಇವುಗಳನ್ನಾಧರಿಸಿ ಮನುಷ್ಯನ ನೋಟ, ಸಾಮೀಪ್ಯ, ಸ್ಪರ್ಶವನ್ನೂ ತಿರಸ್ಕಾರದಿಂದ ನೋಡುತ್ತಾ ಇಡೀ ಜನಸಮುದಾಯಗಳನ್ನು ಬಾಹ್ಯ ಜಗತ್ತಿನಲ್ಲಿರಿಸಿದ್ದ ಭಾರತದ ಜಾತಿ ಸಮಾಜ, ಇಂದಿಗೂ ಬೌದ್ಧಿಕ ನೆಲೆಯಲ್ಲಿ ಮೂಲ ಅಂಶಗಳನ್ನು ಉಳಿಸಿಕೊಂಡೇ ಬಂದಿದ್ದರೂ, ಮಾನವೀಯ ಮೌಲ್ಯಗಳನ್ನು ನಿರ್ವಚಿಸುವಾಗ ಇವೆಲ್ಲ ಅಪಸವ್ಯಗಳನ್ನೂ ಮರೆಮಾಚಲೆತ್ನಿಸುತ್ತದೆ. ಸಾಮಾಜಿಕ ನೆಲೆಯಲ್ಲಿ ಮೌಲ್ಯಗಳನ್ನು ನಿರ್ವಚಿಸುವ ಸಂದರ್ಭದಲ್ಲಿ ವ್ಯಕ್ತಿಗತ ನೆಲೆಯಲ್ಲಿನ ನೈತಿಕತೆಯು ಸಮಾಜ ನಿರ್ಮಾಣದಲ್ಲಿ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವುದೊಂದೇ ಮುಖ್ಯವಾಗುವುದಿಲ್ಲ. ಬದಲಾಗಿ ಸಮಾಜವು ಸಮಷ್ಟಿ ನೆಲೆಯಲ್ಲಿ ತಾನು ರೂಪಿಸಿಕೊಂಡಿರುವ ಸಾರ್ವಜನಿಕ ಅಥವಾ ಸಾರ್ವತ್ರಿಕೀಕರಣಗೊಳಿಸಲಾದ ಮೌಲ್ಯಗಳನ್ನು ಸಮಾಜದ ಸದಸ್ಯರಲ್ಲಿ ಯಾವ ನೆಲೆಯಲ್ಲಿ ಕಾಣಲು ಬಯಸುತ್ತದೆ ಎನ್ನುವುದೂ ಅಷ್ಟೇ ಮುಖ್ಯವಾಗುತ್ತದೆ. ವ್ಯಕ್ತಿಗತ ನೆಲೆಯಲ್ಲಿ ನೈತಿಕತೆಯನ್ನೇ ಕಳೆದುಕೊಂಡ ಯಾವುದೇ ಸಮಾಜವು, ಉನ್ನತ ಸ್ತರದಲ್ಲಿ ಒಂದು ಮೌಲ್ಯಯುತ ವಾತಾವರಣವನ್ನು ಕಲ್ಪಿಸಲೂ ಸಾಧ್ಯವಾಗುವುದಿಲ್ಲ. ಈ ವ್ಯಕ್ತಿ ನೆಲೆಯ ನೈತಿಕತೆಯನ್ನು ನಿರ್ವಚಿಸುವಾಗ ಸಹಜವಾಗಿಯೇ ಮಾನವ ಸಮಾಜದೊಳಗಿನ ಪರಸ್ಪರ ಸಂಬಂಧಗಳು, ಕೊಡುಕೊಳ್ಳುವಿಕೆ, ಕೂಡಿ ಬಾಳುವ ಮನೋಭಾವ, ಭಿನ್ನತೆಯನ್ನು ಸಹಿಸಿಕೊಳ್ಳುವ ಸ್ವಭಾವ, ಅನುಭೂತಿ ಮತ್ತು ಸಹಾನುಭೂತಿಯ ಲಕ್ಷಣಗಳು, ಜೀವಪರ ಅನುಕಂಪ ಮತ್ತು ಕಾಳಜಿ ಇವೆಲ್ಲವೂ ಪ್ರಧಾನ ಅಂಶಗಳಾಗುತ್ತವೆ.
ಸಮಾಜ-ನೈತಿಕತೆ ಮತ್ತು ಮೌಲ್ಯಗಳು
ಒಂದು ಸಮಾಜ ತನ್ನ ಅಭ್ಯುದಯದ ಹಾದಿಯಲ್ಲಿ ರೂಢಿಸಿಕೊಳ್ಳುವ ಜೀವನ ಮೌಲ್ಯಗಳನ್ನು ವಿಶಾಲ ಸಮಾಜದ ನೆಲೆಯಲ್ಲಿ ಶೋಧಿಸುವುದಕ್ಕೂ ಮುನ್ನ, ವಿಭಿನ್ನ ಕಾಲಘಟ್ಟಗಳಲ್ಲಿ ವ್ಯಕ್ತಿಗತ ನೆಲೆಯಲ್ಲಿ ಇದೇ ಮೌಲ್ಯಗಳನ್ನು ರೂಪಿಸಲು ನೆರವಾಗುವಂತಹ ವ್ಯಕ್ತಿನಿಷ್ಠ ನೈತಿಕತೆಯ ಪರಿಮಾಣವನ್ನೂ ಅಳೆಯಬೇಕಾಗುತ್ತದೆ. ಏಕೆಂದರೆ ಸಮಷ್ಟಿ ನೆಲೆಯಲ್ಲಿ ಸಮಾಜದ ಪ್ರಧಾನ/ಪ್ರಬಲ ವರ್ಗಗಳು ನಿರ್ವಚಿಸುವ ಸಾಂಸ್ಕೃತಿಕ ಅಥವಾ ನಾಗರಿಕ ಮೌಲ್ಯಗಳ ಮೂಲ, ಸಮಾಜದ ವಿವಿಧ ಸ್ತರಗಳಲ್ಲಿ ಜನಜೀವನದ ನಡುವೆಯೇ ಉಗಮಿಸುವ ವ್ಯಕ್ತಿಗತ ನೈತಿಕತೆಯಲ್ಲೇ ಇರಲು ಸಾಧ್ಯ. ಈ ನೈತಿಕತೆಯನ್ನು ರೂಪಿಸುವುದು ಅದೇ ವಿಶಾಲ ಸಮಾಜವು ಅನುಸರಿಸುವಂತಹ ಸಾಂಸ್ಕೃತಿಕ/ಆಧ್ಯಾತ್ಮಿಕ/ಧಾರ್ಮಿಕ ಮೌಲ್ಯಗಳು ಎನ್ನುವುದು ಸರ್ವವಿದಿತ. ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಅಸಮಾನತೆ ಮತ್ತು ಭೌತಿಕ ಪ್ರತ್ಯೇಕತೆಯ ಸೂಕ್ಷ್ಮ ಬೇಲಿಗಳು ವಿಧ್ಯುಕ್ತವಾಗಿಯೇ ಸದಾ ಜೀವಂತವಾಗಿರುವುದರಿಂದ, ಇಲ್ಲಿ ವ್ಯಕ್ತಿಗತ ನೈತಿಕತೆಯೂ ಆಯಾ ಚೌಕಟ್ಟುಗಳಲ್ಲೇ ನಿರ್ಧರಿಸಲ್ಪಡುತ್ತವೆ.
ಹಾಗಾಗಿಯೇ ಅಸ್ಪೃಶ್ಯತೆಯನ್ನು ವಿಧಿವತ್ತಾಗಿ ಆಚರಿಸುವ ಮೇಲ್ಜಾತಿಯ ವ್ಯಕ್ತಿಗೆ ತಾನು ಮಾನವೀಯ ಮೌಲ್ಯಗಳಿಗೆ ವ್ಯತಿರಿಕ್ತವಾಗಿ ನಡೆಯುತ್ತಿದ್ದೇನೆ ಎಂಬ ಭಾವನೆ ಮೂಡುವುದೇ ಇಲ್ಲ ಅಥವಾ ಕುಟುಂಬದ ಚೌಕಟ್ಟಿನ ಒಳಗೇ ಮಹಿಳೆಯನ್ನು ಸಂಕೋಲೆಗಳಲ್ಲಿ ಬಂಧಿಸಿಡುವಾಗ, ಸ್ತ್ರೀಸೂಕ್ಷ್ಮತೆಯ ಮೌಲ್ಯಗಳನ್ನು ಉಲ್ಲಂಘಿಸುತ್ತಿದ್ದೇನೆ ಎಂದು ಭಾಸವಾಗುವುದಿಲ್ಲ. ಏಕೆಂದರೆ ಅದು ವಿಶಾಲ ಸಮಾಜ ಸೃಷ್ಟಿಸಿರುವ ಮೌಲ್ಯಗಳ ಅನುಸಾರ ಸ್ವೀಕೃತ ಅಥವಾ ನ್ಯಾಯಯುತ ಎನಿಸುತ್ತದೆ. ಭಾರತದಂತಹ ಬಹುಸಾಂಸ್ಕೃತಿಕ ದೇಶದಲ್ಲಿ ಇದೇ ಪ್ರಮೇಯವನ್ನು ಜಾತಿ/ಮತ/ಪಂಥ/ಪಂಗಡ ಮತ್ತು ಆರ್ಥಿಕ ನೆಲೆಗಳಿಗೂ ವಿಸ್ತರಿಸುತ್ತಾ ಹೋಗಬಹುದು. ಸಹಿಷ್ಣುತೆಯನ್ನು ತನ್ನ ಪಾರಂಪರಿಕ ಮೌಲ್ಯ ಎಂದು ಪ್ರತಿಪಾದಿಸುವ ಒಂದು ಸಮಾಜವೇ ಜಾತಿ/ಮತ/ಲಿಂಗ/ಅಂತಸ್ತು ಹಾಗೂ ಆಧ್ಯಾತ್ಮಿಕ ನೆಲೆಗಳಲ್ಲೂ ಎದ್ದು ಕಾಣುವ ಅಸಹಿಷ್ಣುತೆಯ ನೆಲೆಗಳನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತದೆ. ಹಾಗೆಯೇ ಕಣ್ಣೆದುರು ನಡೆಯುವ ದೌರ್ಜನ್ಯ, ಅನ್ಯಾಯಗಳನ್ನು ಸಹಿಸಿಕೊಳ್ಳುವುದಕ್ಕೂ ಸಹ ಇದೇ ತಳಹದಿಯನ್ನು ಅವಲಂಬಿಸುತ್ತೇವೆ. ಹಾಗಾಗಿಯೇ ನಮಗೆ ಹಿಂಸೆ, ಕ್ರೌರ್ಯ, ದೌರ್ಜನ್ಯ ಮತ್ತು ಅತ್ಯಾಚಾರ-ಅಸ್ಪೃಶ್ಯತೆಯಂತಹ ಅಮಾನುಷ ಚಟುವಟಿಕೆಗಳೂ ಸಹನೀಯ ಎನಿಸಿಬಿಡುತ್ತವೆ. ವ್ಯಕ್ತಿಗತ ಹಸಿವು ಮತ್ತು ಬಡತನ ಸೃಷ್ಟಿಸುವಂತಹ ಆಕ್ರೋಶ, ಸಮಾಜದ ಹಸಿವು ಸೃಷ್ಟಿಸುವುದಿಲ್ಲ. ಅನ್ಯರ ಹಸಿವು ನಮ್ಮಿಳಗೆ ಯಾವುದೇ ರೀತಿಯ ಸಂವೇದನಾಶೀಲ ಭಾವನೆಯನ್ನೂ ಉದ್ದೀಪನಗೊಳಿಸುವುದಿಲ್ಲ. ಹಾಗೆಯೇ ಅನ್ಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ಹಿಂಸೆಯೂ ನಗಣ್ಯ ಎನಿಸಿಬಿಡುತ್ತದೆ. ಕುಟುಂಬದ ಚೌಕಟ್ಟಿನಿಂದಾಚೆಗೆ ನಡೆಯುವ ಮಹಿಳೆಯರ ಮೇಲಿನ ಅತ್ಯಾಚಾರಗಳು ನಮ್ಮಾಳಗಿನ ಮೌಲ್ಯಾಧಾರಿತ ಸಂಸ್ಕೃತಿಯನ್ನು ರೊಚ್ಚಿಗೇಳಿಸುವುದಿಲ್ಲ. ಚಲನಚಿತ್ರಗಳ ಪರದೆಯ ಮೇಲೆ ನಡೆಯುವ ಅತ್ಯಾಚಾರ, ಕೊಲೆ, ಹತ್ಯಾಕಾಂಡಗಳನ್ನೂ ಮನರಂಜನೆಯ ರೂಪದಲ್ಲಿ ಸಂಭ್ರಮಿಸುವ ಸಮಾಜಕ್ಕೆ, ಅಂತಹ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಿವೆ ಎಂಬ ಪರಿವೆಯೂ ಮೂಡುವುದಿಲ್ಲ. ಇದಕ್ಕೆ ಕಾರಣ ನಮಗೆ ಈ ಅಪಸವ್ಯಗಳೆಲ್ಲವೂ ಸಾಪೇಕ್ಷ ನೆಲೆಯಲ್ಲೇ ಕಂಡುಬರುತ್ತವೆ. 'ನಮ್ಮದಲ್ಲದ' ವಿಷಯ ಆಗಿಬಿಡುತ್ತದೆ !!
ಈ ಸಾಪೇಕ್ಷತೆಯನ್ನು ಸೃಷ್ಟಿಸುವುದು ಯಾರು? ಮತ್ತದೇ ಸಮಾಜದ ಪ್ರಬಲ ವರ್ಗಗಳು. ಆದ್ದರಿಂದಲೇ ಗೋಧ್ರಾ ರೈಲಿನಲ್ಲಿ ಸುಡಲ್ಪಟ್ಟ ಅಮಾಯಕರೂ, ಆನಂತರದ ಹತ್ಯಾಕಾಂಡದಲ್ಲಿ ಬಲಿಯಾದ ಸಾವಿರಾರು ಅಮಾಯಕರೂ ನಮ್ಮಲ್ಲಿ ಪರ-ವಿರೋಧದ ಬೌದ್ಧಿಕ ನೆಲೆಗಳನ್ನು ಸೃಷ್ಟಿಸುವುದೇ ಹೊರತು, ಇಂತಹ ಘಟನೆಗಳ ಹಿಂದಿನ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ನೆಲೆಗಳು ಶೋಧಿಸಲ್ಪಡುವುದಿಲ್ಲ. ಮತ್ತೊಂದು ಆಯಾಮದಲ್ಲಿ ನೋಡುವು ದಾದರೆ, ಭೋಪಾಲ್ ಅನಿಲ ದುರಂತದಲ್ಲಿ ಬಲಿಯಾದ ಸಾವಿರಾರು ಜೀವಗಳು, ಇಂದಿಗೂ ನೋವು ಅನುಭವಿಸುತ್ತಿರುವ ಲಕ್ಷಾಂತರ ಜನರು ನಮ್ಮ ಗಮನಕ್ಕೇ ಬರುವುದಿಲ್ಲ. ಭೋಪಾಲ್‌ನಲ್ಲಿ ನಮಗೆ ಕ್ರೌರ್ಯ, ಅಸಹಿಷ್ಣುತೆ, ದ್ವೇಷ ಇದ್ಯಾವುದೂ ಕಾಣುವುದಿಲ್ಲ. ಬಂಡವಾಳಶಾಹಿಯ ಮಾರುಕಟ್ಟೆ ಮೌಲ್ಯಗಳು ಇನ್ನಿತರ ಎಲ್ಲ ಮನುಜ ರೂಪಿತ ಮೌಲ್ಯಗಳನ್ನೂ ನುಂಗಿಹಾಕಿಬಿಡುತ್ತದೆ. ತತ್ಪರಿಣಾಮ ಭೋಪಾಲ್‌ನಂತಹ ಪ್ರಕರಣಗಳು ಇತಿಹಾಸದ ವಿಸ್ಮತಿಗೆ ಜಾರುತ್ತಾ ಮರೆಯಾಗಿಬಿಡುತ್ತವೆ. ಇತ್ತೀಚಿನ ಉದಾಹರಣೆಯಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲದೆ ಮಡಿದ 35 ಜೀವಗಳತ್ತ ನೋಡಬಹುದು.
ಬದುಕು-ಮೌಲ್ಯಗಳ ಸಂಬಂಧ
ಮೌಲ್ಯಗಳು ಶಿಥಿಲವಾಗುತ್ತಿವೆ ಎಂಬ ಸಾರ್ವಜನಿಕ ಕೂಗು ನಮ್ಮಿಳಗಿನ ಪ್ರಜ್ಞೆಯನ್ನು ಕೊಂಚ ಮಟ್ಟಿಗಾದರೂ ಎಚ್ಚರಿಸುತ್ತಿರುವುದು ಸ್ವಾಗತಾರ್ಹವೇ. ಆದರೆ ಈ ಮನುಷ್ಯ ಕೇಂದ್ರಿತ ಮೌಲ್ಯಗಳನ್ನು ಮತ್ತು ವಿಶಾಲ ಸಮಾಜದಲ್ಲಿನ ವ್ಯಕ್ತಿಗತ ನೈತಿಕತೆಯನ್ನು ಹೇಗೆ ಸಂರಕ್ಷಿಸಬೇಕು, ಹೇಗೆ ಪ್ರೋತ್ಸಾಹಿಸಿ ಪೋಷಿಸಬೇಕು, ಹೇಗೆ ನಿರ್ವಚಿಸಬೇಕು ಎನ್ನುವ ಸ್ಪಷ್ಟ ಗ್ರಹಿಕೆ ಇದ್ದಾಗ ಮಾತ್ರ ಶೈಕ್ಷಣಿಕ ವಲಯದಲ್ಲಿ ಮೌಲ್ಯಗಳ ಬಗ್ಗೆ ಚರ್ಚೆ ನಡೆಸಲು ಸಾಧ್ಯ. ವ್ಯಕ್ತಿಗತ ನೈತಿಕತೆ ಮತ್ತು ಸಾಮಾಜಿಕ ಮೌಲ್ಯ ಇವೆರಡೂ ಪರಸ್ಪರ ಪೂರಕವಾದ ಅಂಶಗಳು ಎನ್ನುವುದನ್ನು ಮನಗಾಣಬೇಕು. ಆಗ ಮೌಲ್ಯ ಪ್ರತಿಪಾದಕರ ವೈಯಕ್ತಿಕ ನೈತಿಕತೆಯೂ ಮುನ್ನೆಲೆಗೆ ಬರುತ್ತದೆ. ಅತ್ಯಾಚಾರವನ್ನು ಸಮರ್ಥಿಸುವ, ಹಿಂಸೆಯನ್ನು ಪ್ರಚೋದಿಸುವ, ಜೀವ ಹರಣವನ್ನೂ ಸಮರ್ಥಿಸುವ ಮತ್ತು ಸಮಾಜದ ಬುನಾದಿಯನ್ನೇ ಬುಡಮೇಲು ಮಾಡುವ ಭ್ರಷ್ಟಾಚಾರದ ವಾಮ ಮಾರ್ಗಗಳನ್ನು ಕಿಂಚಿತ್ತೂ ಸಂಕೋಚ, ಮುಜುಗರ ಇಲ್ಲದೆ ಕಾಪಾಡಿಕೊಂಡುಬರುವ ಒಂದು ಸಮಾಜ ಯಾವ ಮೌಲ್ಯವನ್ನು ರಕ್ಷಿಸಲು ಅಥವಾ ಪ್ರತಿಪಾದಿಸಲು ಸಾಧ್ಯ? ಮನುಷ್ಯನ ಭೌತಿಕ ಬೆಳವಣಿಗೆಯ ಮಾರ್ಗದಲ್ಲಿ ನಾವು ಸೃಷ್ಟಿಸುವ ಬೌದ್ಧಿಕ ವಾತಾವರಣದಲ್ಲಿ ಇರುವ ಮಾಲಿನ್ಯಗಳನ್ನು ತೊಡೆದುಹಾಕದೆ, ತಿನ್ನುವ ಅನ್ನದಲ್ಲಿ, ಕುಡಿಯುವ ನೀರಿನಲ್ಲಿ, ಓದುವ ಪಠ್ಯಗಳಲ್ಲಿ ನೈತಿಕತೆ ಮತ್ತು ಮೌಲ್ಯಗಳ ಸರಕುಗಳನ್ನು ಶೋಧಿಸುತ್ತಿರುವುದು ನಮ್ಮ ಬೌದ್ಧಿಕ ದಾರಿದ್ರ್ಯದ ಸಂಕೇತ ಎಂದೇ ಹೇಳಬಹುದು. ಕ್ರೌರ್ಯ ಮತ್ತು ಹಿಂಸೆ ಎನ್ನುವ ಮನುಷ್ಯ ಲಕ್ಷಣಗಳನ್ನು ಸಾಮುದಾಯಿಕ ನೆಲೆಯಲ್ಲಿ ಸಾರ್ವತ್ರೀಕರಿಸುವ/ಆರೋಪಿಸುವ ಆಲೋಚನಾ ಮಾದರಿಯನ್ನೇ ನಾವು ಪ್ರಶ್ನಿಸಬೇಕಿದೆ. ಇದೇ ವೇಳೆ ಸಮಾಜದಲ್ಲಿ ನಿತ್ಯ ನಡೆಯುತ್ತಿರುವ ಅಮಾನುಷ ಚಟುವಟಿಕೆಗಳನ್ನು ಇದೇ ಸಾಮುದಾಯಿಕ ನೆಲೆಯಲ್ಲಿ ನಿಷ್ಕರ್ಷೆ ಮಾಡುವ ವಿಧಾನವನ್ನೂ ಪ್ರಶ್ನಿಸಬೇಕಿದೆ. ಆಗ ನಮಗೆ ಯಾವುದೇ ಆಹಾರದಲ್ಲಿ ಹಿಂಸೆ ಅಥವಾ ಕ್ರೌರ್ಯದ ಧಾತುಗಳಾಗಲೀ, ಸಾತ್ವಿಕ, ರಾಜಸ ಅಥವಾ ತಾಮಸ ಗುಣಗಳ ಬೀಜಗಳಾಗಲೀ ಕಾಣುವುದಿಲ್ಲ.
ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡುವ ಉದಾತ್ತ ಚಿಂತನೆಯನ್ನು ಸಾಕಾರಗೊಳಿಸಬೇಕಾದರೆ, ಶಿಥಿಲವಾಗುತ್ತಿರುವ ಮೌಲ್ಯಗಳ ಮೂಲ ಬೇರುಗಳನ್ನು ಪರಿಶೋಧಿಸಬೇಕಾಗುತ್ತದೆ. ಹಾಗೆಯೇ ಮಾನವೀಯ ನೆಲೆಗಳನ್ನೇ ಕಳೆದುಕೊಳ್ಳುತ್ತಿರುವ ಸಮಾಜಗಳಲ್ಲಿ 'ಮಾನವೀಯ ಮೌಲ್ಯಗಳು' ಹೇಗೆ ನಿರ್ವಚಿಸಲ್ಪಡಬೇಕು ಎಂದೂ ಯೋಚಿಸಬೇಕಾಗುತ್ತದೆ. ಸಮಾಜದ ಕಿರಿಯ/ಎಳೆಯ ಮನಸ್ಸುಗಳಲ್ಲಿ ಬಿತ್ತುವ ಮೌಲ್ಯಗಳ ಬೀಜಗಳು ಅದೇ ಸಮಾಜದ ಹಿರಿಯ/ಬಲಿತ ಮನಸ್ಸುಗಳಲ್ಲಿ ಆರೋಗ್ಯಕರ ಸ್ಥಿತಿಯಲ್ಲಿರಬೇಕು. ನೈತಿಕತೆ ಮತ್ತು ಜೀವನ ಮೌಲ್ಯಗಳನ್ನು ಕಟ್ಟಲಾಗುವುದಿಲ್ಲ, ಬಿತ್ತಬೇಕು, ಬಿತ್ತಿರುವುದನ್ನು ಪೋಷಿಸಬೇಕು, ಸುತ್ತ ಬೆಳೆದಿರುವ ಕಳೆಯನ್ನು ಕಿತ್ತೊಗೆಯಬೇಕು. ಇಂದಿನ ಪರಿಸ್ಥಿತಿಯಲ್ಲಿ ಇದರ ಸಾಧ್ಯತೆಗಳ ಬಗ್ಗೆ ಗಂಭೀರ ಆಲೋಚನೆ ಅತ್ಯಗತ್ಯವಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.