-

ಅಮೃತಕಾಲದ ಕೇಂದ್ರ ಬಜೆಟ್ ಮತ್ತು ಸಮುದ್ರ ಮಥನ

-

►► ಭಾಗ - 2

ಏಳುವ ಪ್ರಶ್ನೆಗಳು:

ಈ ಲೇಖನದ ಮೊದಲ ಭಾಗದಲ್ಲಿ ಉಲ್ಲೇಖಿಸಿದ ದೇಶದ ಅರ್ಥವ್ಯವಸ್ಥೆಯ ಮೂಲಭೂತ ಸಮಸ್ಯೆಗಳನ್ನು ಪರಿಹರಿಸು ವಲ್ಲಿ ಬಜೆಟಿನಲ್ಲಿ ಮಾಡಲಾದ ಘೋಷಣೆಗಳು ಎಷ್ಟರ ಮಟ್ಟಿಗೆಸಫಲವಾಗಬಹುದು? ಸರಕಾರವು ಮತ್ತು ಅದರ ಅಂಗಸಂಸ್ಥೆ ಗಳು ಹೇಳುವಂತೆ 2027ಕ್ಕೆ ಭಾರತವು ವಿಶ್ವದಲ್ಲಿ ಮೂರನೇ ದೊಡ್ಡ ಅರ್ಥವ್ಯವಸ್ಥೆಯಾಗಬಹುದೇ? ನಾವು ಆ ಗುರಿಯತ್ತ ಹೇಗೆ ಸಾಗುತ್ತಿದ್ದೇವೆ? 2047ರಲ್ಲಿ ದೇಶದ ಸ್ವಾತಂತ್ರ್ಯದ ಶತಮಾನದ ಆಚರಣೆಯ ಸಂದರ್ಭದಲ್ಲಿ ನಾವು ಆರ್ಥಿಕವಾಗಿ ಎಷ್ಟು ಪ್ರಬಲರಾಗಬಹುದು? ಈ ಪ್ರಶ್ನೆಗಳಿಗೆ ಬಜೆಟಿನಲ್ಲಿ ಉತ್ತರವನ್ನು ಕಾಣಬಹುದೆ? ಸಮುದ್ರಮಥನದ ಕೈಂಕರ್ಯದಲ್ಲಿ ಎಲ್ಲರೂ ಭಾಗವಹಿಸು ವುದು ಎಷ್ಟು ಅಗತ್ಯವೋ ಅಷ್ಟೇ ಅಗತ್ಯ ಅದರಲ್ಲಿ ಹುಟ್ಟುವ ಅಮೃತದ ಸಮಾನ ಹಂಚಿಕೆ. ಬಜೆಟ್ ಇದರತ್ತ ಗಮನ ಹರಿಸಿದೆಯೇ?

ಈ ಪ್ರಶ್ನೆಗಳ ಉತ್ತರಕ್ಕಾಗಿ ಬಜೆಟಿನ ಪ್ರಸ್ತಾವಗಳ ಮೌಲ್ಯ ಮಾಪನವನ್ನು ಮಾಡುವುದು ಅಗತ್ಯ. ಈ ಮೌಲ್ಯಮಾಪನವು ಈಗಾಗಲೇ ಗುರುತಿಸಿದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದಿಕ್ಕಿನಲ್ಲಿ ಆಗಬೇಕು.

ನಿರುದ್ಯೋಗ ಸಮಸ್ಯೆ:

ಈಗಿನ ಸರಕಾರಕ್ಕೆ ಸೈದ್ಧಾಂತಿಕವಾಗಿ ಖಾಸಗಿ ರಂಗದ ಮೇಲೆ ಬಹಳಷ್ಟು ವಿಶ್ವಾಸ ಮತ್ತು ನಿರೀಕ್ಷೆ ಇರುವುದು ಸಹಜ. ಆದರೆ ಬಜೆಟಿನಲ್ಲಿ ಖಾಸಗಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ನಿರ್ದಿಷ್ಟವಾದ ಕ್ರಮಗಳು ಕಾಣುವುದಿಲ್ಲ. ಈಗಾಗಲೇ ಬಂದ ಅನೇಕ ವರದಿಗಳಂತೆ ಖಾಸಗಿರಂಗದ ಉತ್ಪಾದನಾ ಕಂಪೆನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಇನ್ನೂ ಪೂರ್ಣವಾಗಿ ಬಳಸುತ್ತಿಲ್ಲ; ಸ್ಥಾಪಿತ ಸಾಮರ್ಥ್ಯವನ್ನು ಹೆಚ್ಚಿಸುವ ಆಸಕ್ತಿಯನ್ನು ತೋರಿಸುತ್ತಿಲ್ಲ.

ಕೆಲವು ತಿಂಗಳ ಹಿಂದೆ ನಿರ್ಮಲಾ ಸೀತಾರಾಮನ್‌ರವರು ದೇಶದ ಉದ್ಯೋಗಪತಿಗಳ ಸಮ್ಮೇಳನದಲ್ಲಿ ‘‘ನಿಮ್ಮಲ್ಲಿ ಅಡಗಿರುವ ಸಾಮರ್ಥ್ಯಗಳನ್ನು ನೀವು ರಾಮಾಯಣದ ಹನುಮಂತನ ಹಾಗೆ ಸರಿಯಾಗಿ ಬಳಸುತ್ತಿಲ್ಲ; ನೀವು ಮನಸ್ಸು ಮಾಡಿದರೆ ಸಮುದ್ರೋಲ್ಲಂಘನವನ್ನೂ ಮಾಡಬಹುದು’’ ಎಂದಿದ್ದರು. ಇಂದಿನ ಪರಿಸ್ಥಿತಿಯಲ್ಲಿ ಈ ಚೈತನ್ಯದ ಲಕ್ಷಣ ಕಂಡುಬರುತ್ತಿಲ್ಲ. ಉದ್ಯೋಗಪತಿಗಳು ತಮ್ಮ ಗುಂಪುಗಳ ಸಂಪತ್ತುಗಳ ಏರಿಕೆಗೆ ಆದ್ಯತೆ ಇರುವ ಕಾಲಘಟ್ಟ ಇಂದಿನದು. ಸಂಪತ್ತಿನ ಆಧಾರದಲ್ಲಿ ಅಥವಾ ಶೇರು ಮಾರುಕಟ್ಟೆಯ ವ್ಯವಹಾರದ ಮೌಲ್ಯದ ಆಧಾರದಲ್ಲಿ ಉದ್ಯೋಗಪತಿಯೊಬ್ಬರ ಸಂಪತ್ತಿನ ಶ್ರೇಣಿ (ರ್ಯಾಂಕಿಂಗ್) ಹೆಚ್ಚಾದಾಗ ಅದು ಪ್ರಮುಖ ಸುದ್ದಿಯಾಗುತ್ತದೆ. 

ಅವರ ಬಂಡವಾಳ ಹೂಡಿಕೆಯಿಂದ ದೇಶದ ಜಿಡಿಪಿಯಲ್ಲಿ ಅಥವಾ ಉದ್ಯೋಗದ ಸಂಖ್ಯೆಯಲ್ಲಿ, ಹೆಚ್ಚಳವಾಯಿತೇ ಎಂಬ ಪ್ರಶ್ನೆ ಗೌಣವಾಗಿಯೇ ಉಳಿಯುತ್ತದೆ. ಉದ್ಯೋಗಪತಿಗಳ ನಿರುತ್ಸಾಹಕ್ಕೆ ಒಂದು ಮುಖ್ಯವಾದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಗ್ರಾಹಕರ ಬೇಡಿಕೆ. ಕೋವಿಡ್ ಸಾಂಕ್ರಾಮಿಕದ ಹೊಡೆತದಿಂದಾಗಿ ಸಂಭವಿಸಿದ ಸಂಪತ್ತು ಮತ್ತು ಸಂಪಾದನೆಯ ಕಡಿತ, ಹೆಚ್ಚಿದ ನಿರುದ್ಯೋಗದಿಂದಾಗಿ ಜನರ ಕುಗ್ಗಿದ ಕೊಳ್ಳುವ ಸಾಮರ್ಥ್ಯ ಮತ್ತು ಈ ಕಾರಣಗಳಿಂದಾಗಿ ಜನಸಾಮಾನ್ಯರ ಉಳಿತಾಯದಲ್ಲಿ ಖೋತವಾಗಿ ಹೊಸ ಸಂಪಾದನೆಗೆ ದಾರಿಯೂ ಕಾಣದಾದಾಗ ಗ್ರಾಹಕರ ಕೊಳ್ಳುವ ಸಾಮರ್ಥ್ಯವು ತೀವ್ರವಾಗಿ ಕುಸಿದಿದೆ. ಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಬೇಡಿಕೆ ಹೇಗೆ ಉಂಟಾಗುತ್ತದೆ? ಎರಡನೆಯದಾಗಿ, ಉದ್ಯೋಗ ಸೃಷ್ಟಿಗೆ ಮುಖ್ಯವಾದ ರಂಗ ದೇಶದ ಎಂಎಸ್‌ಎಂಇಗಳು. ನೋಟು ರದ್ದತಿ, ಜಿಎಸ್‌ಟಿಯ ದೋಷಪೂರ್ಣ ಅನುಷ್ಠಾನ ಮತ್ತು ಸಾಂಕ್ರಾಮಿಕದ ಸಂದರ್ಭದಲ್ಲಿ ಆದ ನಷ್ಟಗಳಿಂದ ಸಾವಿರಾರು ಉದ್ದಿಮೆಗಳು ಮುಚ್ಚಿದ್ದವು. ಅವುಗಳನ್ನು ಹೊಸತಾಗಿ ಆರಂಭಿಸಲು ಬೇಕಾದ ಅನುಕೂಲಕರ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ. 

ಬ್ಯಾಂಕುಗಳು ನೀಡುವ ಸಾಲಕ್ಕೆ ಭದ್ರತೆಯನ್ನು ಸಾಂಕ್ರಾಮಿಕದ ಸಂದರ್ಭದಲ್ಲಿ ಸರಕಾರವು ಪ್ರಾರಂಭಿಸಿದ ಯೋಜನೆಯು ನೀಡುತ್ತದೆ; ಆದರೆ ಉದ್ದಿಮೆಯಲ್ಲಿ ತೊಡಗಿಸಿ ಕೊಳ್ಳುವ ಹೊಸ ಉದ್ದಿಮೆದಾರರಿಗೆ ಈಗಲೂ ಅನೇಕ ಕಾನೂನು ಗಳ ನಿಬಂಧನೆಗಳನ್ನು ಮೊದಲಾಗಿಯೇ ಪರಿಹರಿಸಿಕೊಳ್ಳುವ ಒತ್ತಡ ಇದೆ. ಉದಾಹರಣೆಗೆ ಉದ್ದಿಮೆಗೆ ಅಗತ್ಯವಾದ ಪರವಾನಿಗೆ ಗಳನ್ನು ಬೇರೆ ಬೇರೆ ಶಾಸನಬದ್ಧ ಸಂಸ್ಥೆಗಳಿಂದ ಪಡಕೊಳ್ಳಬೇಕು, ಅಲ್ಲಿ ತಮ್ಮ ಕೆಲಸವು ಬೇಗನೇ ಆಗಬೇಕಿದ್ದರೆ ನಿರ್ಧಾರಿತ ಶುಲ್ಕದೊಂದಿಗೆ ಬೇರೆ ‘ಶುಲ್ಕ’ವನ್ನು ತೆರಬೇಕಾಗುತ್ತದೆ; ದಳ್ಳಾಳಿಗಳ ಸೇವೆಯನ್ನೂ ಪಡಕೊಳ್ಳಬೇಕಾಗುತ್ತದೆ. ಈ ವ್ಯವಸ್ಥೆಯ ಸರಳೀಕರಣ ಇನ್ನೂ ಆಗಿಲ್ಲ. ಉತ್ಪಾದನೆಯಲ್ಲಿ ತೊಡಗಿಸಿಕೊಂಡ ಸಣ್ಣ ಉದ್ದಿಮೆಗಳು ತಾವು ಖರೀದಿಸುವ ಕೆಲವು ಮೂಲವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಕೊಡಬೇಕಾಗುತ್ತದೆ; ಉತ್ಪನ್ನವನ್ನು ಮಾರುವಾಗ ಮೊದಲು ಕೊಟ್ಟ ಜಿಎಸ್‌ಟಿಯ ಮರುಪಾವತಿಗೆ ಅವಕಾಶವಿದೆ; ಆದರೆ ಅದನ್ನು ಪಡೆಯುವ ಕ್ರಮ ಇನ್ನೂ ಸರಳವಾಗಿಲ್ಲ ಎಂದು ಅನೇಕ ಸಣ್ಣ ಉದ್ದಿಮೆದಾರರ ಅನುಭವ. ಒಟ್ಟಿನಲ್ಲಿ ಉದ್ಯೋಗ ಸೃಷ್ಟಿಯ ಕುರಿತಾಗಿ ಉತ್ಪಾದನಾ ಕ್ಷೇತ್ರದ ಕೈಗಾರಿಕೆಗಳಿಗೆ ಮತ್ತು ಎಂಎಸ್‌ಎಂಇ ರಂಗಗಳಿಗೆ ಬಜೆಟಿ ನಲ್ಲಿ ಸಾಕಷ್ಟು ಒತ್ತು ನೀಡಲಾಗಿಲ್ಲ. ಇದರಿಂದಾಗಿ ನಿರುದ್ಯೋಗ ಸಮಸ್ಯೆಗೆ ಪರಿಹಾರವು ಘೋಷಣೆಯಲ್ಲಿಯೇ ಉಳಿದಿದೆ.

ಸರಕಾರಿ ರಂಗದಲ್ಲಿ ಮೂಲಸೌಕರ್ಯದ ಅಭಿವೃದ್ಧಿಗೆಂದು ಬೃಹತ್ ಗಾತ್ರದ ಮೊಬಲಗನ್ನು ಬಜೆಟ್ ಕೊಡಮಾಡಿದೆ. ಆದರೆ ಇಲ್ಲಿಯೂ ನಿರ್ದಿಷ್ಟವಾದ ಯೋಜನೆಗಳಿಲ್ಲ. ರಸ್ತೆಗಳ ವಿಸ್ತರಣೆ, ಹೊಸ ವಿಮಾನ ನಿಲ್ದಾಣಗಳ ರಚನೆ ಮತ್ತು ರೈಲ್ವೆಯ ಅಭಿವೃದ್ಧಿಯಿಂದ ಬರುವ ಪ್ರಯೋಜನ ದೀರ್ಘಾವಧಿ ಯಲ್ಲಿ ತಿಳಿಯುತ್ತದೆ; ಮೂಲಸೌಕರ್ಯಗಳ ಪೂರೈಕೆ ಗುಣಮಟ್ಟದ್ದಾದಾಗ ಅವುಗಳನ್ನು ಅವಲಂಬಿಸಿದ ಕೈಗಾರಿಕೆಗಳ ಚಟುವಟಿಕೆ ವಿಸ್ತರಿಸುತ್ತದೆ, ಉತ್ಪಾದನೆಗಳೂ ಹೆಚ್ಚುತ್ತವೆ. ಆ ಸನ್ನಿವೇಶದಲ್ಲಿ ಉದ್ದಿಮೆಗಳ ಸಾಮರ್ಥ್ಯ ಹೆಚ್ಚಿ ಹೊಸ ಉದ್ಯೋಗಗಳು ಹುಟ್ಟಿಕೊಳ್ಳುತ್ತವೆ. ಆದರೆ ಅದಕ್ಕೆ ಕಡಿಮೆ ಪಕ್ಷ ಎರಡು-ಮೂರು ವರ್ಷಗಳಾದರೂ ಬೇಕಾಗಬಹುದು.

ರಸ್ತೆ, ರೈಲ್ವೆ ಸಂಪರ್ಕ ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಂಪನ್ಮೂಲಗಳು ಬೇಕು. ರಾಜ್ಯಗಳೂ ತಮ್ಮ ಪಾಲನ್ನು ಕೊಡುವ ಅಗತ್ಯವಿದೆ. ಈಗಾಗಲೇ ಸಂಪನ್ಮೂಲ ಗಳ ಕೊರತೆ ಇರುವ ರಾಜ್ಯ ಸರಕಾರಗಳು ತಮ್ಮ ಪಾಲನ್ನು ಎಲ್ಲಿಂದ ಜೋಡಿಸಬೇಕು? ಜಿಎಸ್‌ಟಿಯಿಂದ ಸಂಗ್ರಹವಾದ ಸಂಪನ್ಮೂಲಗಳಿಂದ ಕೇಂದ್ರ ಸರಕಾರವು ತಮಗೆ ನ್ಯಾಯೋಚಿತ ವಾಗಿ ಬರಬೇಕಾದ ಪಾಲನ್ನು ಕೊಡುತ್ತಿಲ್ಲ ಎಂಬ ಆರೋಪ ಗಳನ್ನು ಅನೇಕ ರಾಜ್ಯಗಳು ಮಾಡಿವೆ. ಒಂದೇ ಪಕ್ಷವು ಕೇಂದ್ರ ಮತ್ತು ರಾಜ್ಯದ ಆಡಳಿತೆಯ ಸೂತ್ರ ಹಿಡಿದಲ್ಲಿ (ಈಗಿನ ಪರಿಭಾಷೆಯಲ್ಲಿ ‘ಡಬಲ್ ಇಂಜಿನ್’ ಸರಕಾರವಿದ್ದಲ್ಲಿ) ರಾಜ್ಯ ಸರಕಾರದ ಪ್ರತಿನಿಧಿಗಳಿಗೆ ತಮ್ಮ ಬೇಡಿಕೆಗಳನ್ನು ಕೇಂದ್ರದ ಮುಂದೆ ಮಂಡಿಸುವ ಧೈರ್ಯ ಅಥವಾ ಬದ್ಧತೆ ವಿರಳವಾಗುವ ಇಂದಿನ ಸನ್ನಿವೇಶದಲ್ಲಿ ರಾಜ್ಯ ಸರಕಾರಗಳು ತಮ್ಮ ಪಾಲಿನ ಕೊಡುಗೆಯನ್ನು ಎಲ್ಲಿಂದ ಜೋಡಿಸಬೇಕು?

ಈ ಎಲ್ಲ ವಿಷಯಗಳನ್ನು ಅವಲೋಕಿಸಿದರೆ ಮೂಲ ಸೌಕರ್ಯಗಳ ಬೆಳವಣಿಗೆಗೆ ಅತ್ಯಂತ ಹೆಚ್ಚು ಹಣವನ್ನು ಹಂಚುವ ನಿರ್ಧಾರ ಸ್ವಾಗತಾರ್ಹವಾದರೂ ಅದರಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಗಳು ತೀರ ಕಡಿಮೆ. 

ಜನಕಲ್ಯಾಣ ನೇಪಥ್ಯಕ್ಕೆ?

ಸಮಾಜದ ಸರ್ವಾಂಗೀಣ ಕಲ್ಯಾಣಕ್ಕೆ ಇನ್ನೂ ಬದ್ಧವಾಗಿರುವ ರಾಷ್ಟ್ರ ಭಾರತ. ಕೇಂದ್ರ ಸರಕಾರವೂ ಸರ್ವಜನರ ವಿಕಾಸಕ್ಕೆ ತಾನು ಬದ್ಧ ಎಂದು ಆಗಾಗ ಹೇಳುತ್ತಿದೆ, ಬಜೆಟಿನ ಆರಂಭದಲ್ಲಿಯೂ ಈ ಬಗ್ಗೆ ಹೇಳಿದೆ. ಈ ಬದ್ಧತೆಯನ್ನು ಕಾರ್ಯರೂಪಕ್ಕೆ ಇಳಿಸಲು ಜನರ ಆರೋಗ್ಯ, ಮೂಲ ಶಿಕ್ಷಣ, ಆಹಾರ ಮತ್ತು ಸಾಮಾಜಿಕ ಭದ್ರತೆಗೆ ಅಗತ್ಯವಾದ ಯೋಜನೆಗಳಿಗೆ ನಿರಂತರವಾಗಿ ಬಜೆಟಿನ ಮೂಲಕ ಸಂಪನ್ಮೂಲಗಳನ್ನು ವಿನಿಯೋಗಿಸಬೇಕಾಗುತ್ತದೆ. ಉದ್ಯೋಗ ಖಾತರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ತಳಮಟ್ಟದ ನಿರುದ್ಯೋಗಿಗಳ ಜೀವನೋಪಾಯಕ್ಕೆ ದಾರಿಗಳನ್ನು ಕಲ್ಪಿಸಿಕೊಡಬೇಕಾಗುತ್ತದೆ. ಬಜೆಟಿನಲ್ಲಿ ಈ ಎಲ್ಲ ಯೋಜನೆಗಳಿಗೆ ಸಾಕಷ್ಟು ಹಣವನ್ನು ಹಂಚಬೇಕು. 

ಆದರೆ ಈ ಬಾರಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ, ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ, ಆಹಾರಕ್ಕೆ ನೀಡುವ ಸಹಾಯಧನ ಯೋಜನೆಗೆ, ಬಡಶಾಲಾಮಕ್ಕಳಿಗೆ ಪೌಷ್ಟಿಕತೆಯನ್ನು ಸುಧಾರಿಸಲು ಉಪಯೋಗವಾಗುತ್ತಿದ್ದ ‘ಪೋಷಣ’ ಯೋಜನೆಗೆ ಕೊಡುವ ಹಣಕ್ಕೆ ಕತ್ತರಿಹಾಕಲಾಗಿದೆ. ಇನ್ನೊಂದೆಡೆಯಲ್ಲಿ ಸಮಾಜದಲ್ಲಿನ ಮಧ್ಯಮ ಮತ್ತು ಮೇಲ್ಮಟ್ಟದ ವರ್ಗವನ್ನು ಓಲೈಸುವ ಕೆಲವು ನಿರ್ಧಾರಗಳನ್ನೂ ನಾವು ಗಮನಿಸಬಹುದು. ಆದಾಯ ತೆರಿಗೆಯ ಕಡಿತ, ಅದರ ಮೇಲಿನ ಉಪಕರದ ಇಳಿಕೆ, ಕೆಲವು ವಸ್ತುಗಳ ಮೇಲಿನ ಆಮದು ಸುಂಕದಲ್ಲಿ ಕಡಿತ, ಮುಂತಾದ ಕ್ರಮಗಳು ಮೇಲ್ವರ್ಗಕ್ಕೆ ಹಿತವಾದರೂ ಸರಕಾರದ ಆಯದಲ್ಲಿ ಅವುಗಳಿಂದ ನಷ್ಟವಾಗುತ್ತದೆ. ಅದೇ ರೀತಿ ಸಣ್ಣ ನಗರಗಳಲ್ಲಿ ಸ್ಥಾಪಿಸಲ್ಪಡುವ ವಿಮಾನ ನಿಲ್ದಾಣಗಳ ಉಪಯೋಗ ಸಮಾಜದ ಎಲ್ಲಾ ವರ್ಗಗಳಿಗಿಲ್ಲ. ಇದಕ್ಕೆ ಬದಲಾಗಿ ಸಾರ್ವಜನಿಕ ಸಾರಿಗೆ (ಹೊಸ ರೈಲುಗಳು, ಬಸ್ಸು ಸಂಪರ್ಕ ಇತ್ಯಾದಿ)ಯನ್ನು ಹೆಚ್ಚು ದಕ್ಷವಾಗಿ ಪೂರೈಸಲು ಒತ್ತುನೀಡಿದ್ದರೆ ಅತೀ ಹೆಚ್ಚು ಜನರಿಗೆ ಪ್ರಯೋಜನವಾಗುತ್ತಿತ್ತು. ಅವುಗಳಿಂದ ದೀರ್ಘಾವಧಿಯ ಪ್ರಗತಿಗೂ ಉತ್ತೇಜನ ಲಭಿಸುತ್ತಿತ್ತು. (ಇದಕ್ಕೆ ಎರಡು ಉದಾಹರಣೆಗಳು: ರಾಜ್ಯದ ರಾಜಧಾನಿಯನ್ನು, ಪ್ರಗತಿಯ ಹೆದ್ದಾರಿ ಎಂದು ಬಿಂಬಿಸಲಾಗುವ ಕರಾವಳಿಗೆ ಸಂಪರ್ಕಿಸುವ ಹಾಸನ ಸಕಲೇಶಪುರ ರಸ್ತೆಯ ದುರವಸ್ಥೆ ಪ್ರಯಾಣ ಮಾಡಿದವರಿಗೇ ಗೊತ್ತು; ಅಥವಾ ರೈಲುಮಾರ್ಗವಿದ್ದರೂ ಉತ್ತರ ಕರ್ನಾಟಕದಿಂದ ಕರಾವಳಿಗೆ ದೈನಂದಿನ ಪ್ರಯಾಣಕ್ಕೆ ರೈಲು ವ್ಯವಸ್ಥೆಯ ಕೊರತೆ). ಕೇಂದ್ರ ಸರಕಾರದ ಆದ್ಯತೆಗಳೇನು ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ.

ಅಂತರ್‌ರಾಷ್ಟ್ರೀಯ ವಿದ್ಯಮಾನಗಳು:

ಜಾಗತಿಕ ಮಟ್ಟದ ಮೂರು ಬೆಳವಣಿಗೆಗಳು ದೇಶದ ಅರ್ಥ ವ್ಯವಸ್ಥೆಯ ಮೇಲೆ ಒತ್ತಡವನ್ನು ಹೇರಬಹುದು. ದೈತ್ಯಗಾತ್ರದ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳು ಹೋದ ಡಿಸೆಂಬರ್‌ನಿಂದ ಉದ್ಯೋಗಕಡಿತವನ್ನು ಆರಂಭಿಸಿವೆ. ಸಾವಿರಾರು ಭಾರತೀಯರೂ ಈಗಾಗಲೇ ಉದ್ಯೋಗ ಕಳಕೊಂಡಿದ್ದಾರೆ ಮಾತ್ರವಲ್ಲ ಕೆಲವರ ವೀಸಾಗಳು ರದ್ದಾಗಿವೆ ಅಥವಾ ರದ್ದಾಗಲಿವೆ. ಇದರಿಂದಾಗಿ ಭಾರತದಲ್ಲಿ ತಾಂತ್ರಿಕ ಶಿಕ್ಷಣ ಪಡೆದ ಯುವಕ/ಯುವತಿಯರನ್ನು ಹೊಸ ಅನಿಶ್ಚಿತತೆ ಕಾಡಲಿದೆ. ಮುಂದುವರಿದ ರಾಷ್ಟ್ರಗಳು ಹಣದುಬ್ಬರವನ್ನು ತಡೆಯಲು ಬಡ್ಡಿದರಗಳನ್ನು ಏರಿಸುತ್ತಿವೆ. ಇದರಿಂದಾಗಿ ವಿದೇಶಿ ಹೂಡಿಕೆ ಸಂಸ್ಥೆಗಳು ಹೆಚ್ಚು ಸಂಪಾದನೆಗೋಸ್ಕರ ತಮ್ಮ ಹೂಡಿಕೆಗಳನ್ನು ಅಮೆರಿಕದಂತಹ ದೇಶಗಳಿಗೆ ವರ್ಗಾಯಿಸಬಹುದು. ಇದರಿಂದಾಗಿ ನಮ್ಮ ದೇಶಕ್ಕೆ ಬರಬಹುದಾದ ಹೂಡಿಕೆಗಳ ಒಳಹರಿವು ಕಡಿಮೆಯಾಗುವ ಸಾಧ್ಯತೆ ಇದೆ. ಮೂರನೆಯದಾಗಿ ರಶ್ಯ-ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳಿವೆ; ಅನೇಕ ದೇಶಗಳ ಅರ್ಥವ್ಯವಸ್ಥೆಗೆ ಹೊಡೆತ ಬೀಳಲಿದೆ. ಈ ಬೆಳವಣಿಗೆಗಳ ಜೊತೆಗೆ ಜನವರಿ ಅಂತ್ಯಕ್ಕೆ ಅದಾನಿ ಸಂಸ್ಥೆಗಳ ಬಗ್ಗೆ ಬಂದ ವರದಿಗಳು ಶೇರು ಮಾರುಕಟ್ಟೆ ಮತ್ತು ಹಣಕಾಸು ರಂಗದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಅದಾನಿ ಸಮೂಹಕ್ಕೆ ಸಾಲ ನೀಡಿದ ಮತ್ತು ಅದರ ಶೇರುಗಳಲ್ಲಿ ಬಂಡವಾಳವನ್ನು ಹೂಡಿದ ನಮ್ಮ ಹಣಕಾಸು ರಂಗಕ್ಕೂ ಬಿಸಿ ನಾಟುವ ಸಾಧ್ಯತೆ ಇದೆ. ಇದರಿಂದಾಗಿ ವಿದೇಶಿ ಹೂಡಿಕೆಗಳು ಹಿಂಜರಿಯಬಹುದು.

ಈ ವಿದ್ಯಮಾನಗಳು ದೇಶದ ಅರ್ಥವ್ಯವಸ್ಥೆಗೆ ಧಕ್ಕೆಯನ್ನು ಉಂಟುಮಾಡಬಹುದು. ಅವುಗಳನ್ನು ನಿವಾರಿಸಲು ಅಗತ್ಯ ವಾದ ಕ್ರಮಗಳ ಬಗ್ಗೆ ಬಜೆಟ್ ದಿವ್ಯ ಮೌನವನ್ನು ತಾಳಿದೆ. 

ಪ್ರಗತಿಯ ವೇಗ:

ಈಗಾಗಲೇ ಭಾರತವು ವಿಶ್ವದಲ್ಲಿ 5ನೆಯ ದೊಡ್ಡ ಆರ್ಥಿಕತೆ ಯಾಗಿ ಹೊರಹೊಮ್ಮಿದೆ. ಸರಕಾರದ ಹೇಳಿಕೆಯಂತೆ 2027ಕ್ಕೆ ನಾವು ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದ್ದೇವೆ. ಆದರೆ ಈ ಮಟ್ಟಕ್ಕೆ ಭಾರತ ತಲಪಬೇಕಿದ್ದರೆ ಅರ್ಥವ್ಯವಸ್ಥೆಯು ವಾರ್ಷಿಕವಾಗಿ ಶೇ.9ರಷ್ಟು ಬೆಳೆಯಬೇಕು. ನಾವು ಇನ್ನೂ ಶೇ.7ರ ಹಂತಕ್ಕೆ ತಲುಪಿಲ್ಲ. 1991ರಿಂದ 2014ರ ಅವಧಿಯಲ್ಲಿ ನಡೆದ ಆರ್ಥಿಕ ಸುಧಾರಣೆಗಳ ಸಂದರ್ಭದಲ್ಲಿಯೂ ನಿರಂತರವಾಗಿ ಶೇ.9ಕ್ಕೆ ತಲುಪಿರಲಿಲ್ಲ. ಅನೇಕ ಅನಿಶ್ಚಿತತೆಗಳು ಕಾಡುವ ಇಂದಿನ ವರ್ಷಗಳಲ್ಲಿ ಪ್ರಗತಿಯ ದರ ಶೇ.7ನ್ನು ತಲುಪುವುದೇ ಕಷ್ಟವಾಗಬಹುದು; ಇನ್ನು ಶೇ. 9ರ ಮಟ್ಟ ತಲುಪಲು ಪವಾಡವೇ ಆಗಬೇಕು. 

ಮುಂದುವರಿದ ಅನಿಶ್ಚಿತತೆ:

ಒಟ್ಟಿನಲ್ಲಿ ಅಮೃತಕಾಲದ ಬಜೆಟ್ ಯಾರಿಗೆ ಅಮೃತವನ್ನು ಹಂಚಲಿದೆ? ಸಮುದ್ರಮಥನದಲ್ಲಿ ಬಂದ ಅಮೃತವು ಒಂದು ವರ್ಗಕ್ಕೆ ಮಾತ್ರ ಲಭಿಸುತ್ತದೆಯೇ ಅಥವಾ ಆ ಕೈಂಕರ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಸಮಪಾಲು ಲಭಿಸುವಂತಾಗುತ್ತದೆಯೇ ಎಂದು ಮುಂದಿನ ವರ್ಷಗಳು ಹೇಳಲಿವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top