-

ಕೋಲಾಹಲಕ್ಕೆ ಕಾರಣವಾದ ರಾಹುಲ್ ಗಾಂಧಿ ಭಾಷಣದ ಪೂರ್ಣ ಪಾಠ

​ಅದಾನಿಗೂ ಪ್ರಧಾನಿ ಮೋದಿಗೂ ಇರುವ ನಂಟೇನು ?

-

ರಾಹುಲ್ ಗಾಂಧಿ (PTI)

(ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನಾರ್ಪಣೆ ಚರ್ಚೆಯಲ್ಲಿ ಭಾಗವಹಿಸಿ ಮಂಗಳವಾರ ರಾಹುಲ್ ಗಾಂಧಿ ಮಾಡಿದ ಭಾಷಣದ ಲಿಖಿತ ರೂಪ)

ಗೌರವಾನ್ವಿತ ಸಭಾಧ್ಯಕ್ಷರೆ,

ರಾಷ್ಟ್ರಪತಿಯವರ ಭಾಷಣದ ಕುರಿತು ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ಈ ದಿನ ಈ ಸದನದಲ್ಲಿ ಮಾತನಾಡಲು ನನಗೆ ಅವಕಾಶ ದೊರೆತಿರುವುದು ಒಂದು ಗೌರವವಾಗಿದೆ. ನಿಮಗೆಲ್ಲ ತಿಳಿದಿರುವಂತೆ ಕಳೆದ ನಾಲ್ಕು ತಿಂಗಳಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು 'ಭಾರತ್ ಜೋಡೊ' ಯಾತ್ರೆ ಮಾಡಿದ್ದೇವೆ. ಈ ಯಾತ್ರೆಯು ಸುಮಾರು 3,600 ಕಿಮೀ ಕ್ರಮಿಸಿತು. ಈ ಯಾತ್ರೆಯಿಂದ ಸಾಕಷ್ಟು ಕಲಿಯಲು ಅವಕಾಶ ದೊರೆಯಿತು. ಈ ಯಾತ್ರೆಯಲ್ಲಿ ಜನರ ದನಿಯನ್ನು, ಭಾರತದ ದನಿಯನ್ನು ಸಾವಧಾನವಾಗಿ ಕೇಳುವ ಅವಕಾಶ ದೊರೆಯಿತು. ಯಾತ್ರೆ ಶುರುವಾದಾಗ, 3,500 ಕಿಮೀ ನಡೆಯುವುದು ಕಷ್ಟವೆನ್ನಿಸಿತ್ತಾದರೂ, ಸಾಧ್ಯ ಎಂದು ಯೋಚಿಸಿದೆ.

ನೀವೂ ರಾಜಕೀಯ ನಾಯಕರು, ನಾವೂ ರಾಜಕೀಯ ನಾಯಕರು. ಆದರೆ ಬೇರೆ ಬೇರೆ. ಸಾಮಾನ್ಯವಾಗಿ ಇಂದಿನ ರಾಜನೀತಿಯಲ್ಲಿ, ಈ ಹಿಂದಿನ ಕಾಲದಲ್ಲಿನ ಕಾಲ್ನಡಿಗೆಯ ಸಂಪ್ರದಾಯವನ್ನು ನಾವು, ನೀವು ಇಬ್ಬರೂ ಬಹುಶಃ ಮರೆತು ಹೋಗಿದ್ದೇವೆ ಅಥವಾ ಅವುಗಳ ಪಾಲನೆ ಮಾಡುತ್ತಿಲ್ಲ. ನಾನೂ ಇದರಲ್ಲಿ ಪಾಲುದಾರ, ನೀವೂ ಪಾಲುದಾರರಾಗಿದ್ದೀರಿ. ನಾವೆಲ್ಲರೂ ಕೆಲವರು ವಾಹನದಲ್ಲಿ ಹೋಗುತ್ತೇವೆ, ಕೆಲವರು ವಿಮಾನದಲ್ಲಿ ಹೋಗುತ್ತೇವೆ, ಕೆಲವರು ಹೆಲಿಕಾಪ್ಟರ್ ನಲ್ಲಿ ಹೋಗುತ್ತೇವೆ. ಆದರೆ, ಕಾಲ್ನಡಿಗೆಯಲ್ಲಿ ಯಾವಾಗ ಹೋಗುತ್ತೇವೆ? ನಾನು ಒಂದು ಕಿಮೀ ಕುರಿತು ಮಾತನಾಡುತ್ತಿಲ್ಲ, ಹತ್ತು ಕಿಮೀ ಕುರಿತು ಮಾತನಾಡುತ್ತಿಲ್ಲ, ಇಪ್ಪತ್ತೈದು ಕಿಮೀ ಕುರಿತು ಮಾತನಾಡುತ್ತಿಲ್ಲ. ಇನ್ನೂರು ಮುನ್ನೂರು, ನಾನೂರು ಕಿಮೀ ಕಾಲ್ನಡಿಗೆಯ ವಿಚಾರ ಮಾತನಾಡುತ್ತಿದ್ದೇನೆ. ಇಷ್ಟು ನಡೆದಾಗ ದೇಹಕ್ಕೆ ದಣಿವಾಗುತ್ತದೆ, ನೋವಾಗುತ್ತದೆ. ಸಮಸ್ಯೆ ಶುರುವಾಗುತ್ತದೆ.

ಇದನ್ನೂ ಓದಿ: ಪ್ರಧಾನಿ-ಅದಾನಿ ಸಂಬಂಧದ ಕುರಿತ ರಾಹುಲ್‌ ಗಾಂಧಿಯ ಯಾವೆಲ್ಲಾ ಹೇಳಿಕೆಗಳನ್ನು ಲೋಕಸಭೆ ಕಡತದಿಂದ ತೆಗೆದುಹಾಕಲಾಗಿದೆ?

ಆರಂಭದಲ್ಲಿ ನಾವು ನಡೆಯುವಾಗ ಜನರ ಮಾತುಗಳನ್ನು ಆಲಿಸುತ್ತಿದ್ದೆವು. ಆದರೆ, ನಾವೂ ನಮ್ಮ ಮಾತನ್ನು ಹೇಳಬೇಕು ಎಂಬ ಆಸೆ ಮನಸ್ಸಿನಲ್ಲಿತ್ತು. ಯಾರಾದರೂ ನಮ್ಮ ಬಳಿ ಬಂದು ನಾನು ನಿರುದ್ಯೋಗಿಯಾಗಿದ್ದೇನೆ ಎಂದು ಹೇಳುತ್ತಿದ್ದರು. ಆಗ, ನೀವ್ಯಾಕೆ ನಿರುದ್ಯೋಗಿಯಾಗಿದ್ದೀರಿ? ಕಾರಣವೇನು? ಅದರಲ್ಲಿ ವಿರೋಧ ಪಕ್ಷಗಳ ಪಾತ್ರವೇನು? ಎಂದು ಕೇಳಬೇಕೆನ್ನಿಸುತ್ತಿತ್ತು. ಅವರು ನಿಮ್ಮನ್ನು ದೂರುತ್ತಿದ್ದರು, ನಾವೂ ದೂರುತ್ತಿದ್ದೆವು. ಆದರೆ, ಸ್ವಲ್ಪ ದೂರ ನಡೆದ ನಂತರ ಸ್ವಲ್ಪ ಪರಿವರ್ತನೆ ಕಂಡುಬಂದಿತು. ನಿರುದ್ಯೋಗ ಈ ಕಾರಣಕ್ಕಾಗಿದೆ, ಬೆಲೆಯೇರಿಕೆ ಈ ಕಾರಣಕ್ಕೆ ಆಗಿದೆ ಎಂದು ನಮ್ಮ ಮಾತನ್ನೂ ಹೇಳುವ ಇಚ್ಛೆ ಸಂಪೂರ್ಣವಾಗಿ ಇಲ್ಲವಾಯಿತು.

ನಾವೆಷ್ಟು ಜನರೊಂದಿಗೆ ಮಾತನಾಡಿದವೆಂದರೆ, ಸಾವಿರಾರು ಜನರು, ಮಕ್ಕಳು, ಯುವಕರು, ಮಹಿಳೆಯರು, ತಾಯಂದಿರು, ಸಹೋದರಿಯರೊಂದಿಗೆಲ್ಲ ಮಾತನಾಡಿದೆವು. ಕೆಲವೇ ಸಮಯದಲ್ಲಿ ನಮ್ಮ ಮಾತುಗಳು ನಿಂತು ಹೋದವು. ನಂತರ ಅವರ ಮಾತುಗಳನ್ನು ಸಾವಧಾನವಾಗಿ ಕೇಳತೊಡಗಿದೆವು. ನಾನು ಮುಕ್ತವಾಗಿ ಹೇಳುತ್ತೇನೆ. ನನ್ನ ಮಟ್ಟಿಗೆ ನಾನು ಬದುಕಿನಲ್ಲಿ ಈ ರೀತಿ ಜನರ ಮಾತನ್ನು ಎಂದೂ ಕೇಳಿರಲಿಲ್ಲ. ಯಾಕೆಂದರೆ, ನಮ್ಮೆಲ್ಲರಲ್ಲೂ ನಮ್ಮಮಾತನ್ನೇ ಹೇಳುವ ಕೊಂಚ ಅಹಂಕಾರವಿರುತ್ತದೆ. ನಾವು ಐನೂರು, ಆರು ನೂರು ಕಿಮೀ ನಡೆಯುತ್ತಿದ್ದಂತೆಯೇ ಜನರ ಧ್ವನಿಯು ಸಾವಧಾನವಾಗಿ ಕೇಳಿಸತೊಡಗಿತು. ಒಂದು ರೀತಿಯಲ್ಲಿ ವ್ಯಕ್ತಿಗಳಲ್ಲ, ಯಾತ್ರೆಯೇ ನಮಗೆಲ್ಲರಿಗೂ ಹೇಳತೊಡಗಿತು. ಇದು ಮುಖ್ಯ ಸಂಗತಿ.

ಯುವಕರು ಬಂದು ನಮ್ಮ ಬಳಿ ನಾನು ನಿರುದ್ಯೋಗಿಯಾಗಿದ್ದೇನೆ ಎಂದು ಹೇಳುತ್ತಿದ್ದರು. ನಾವು ಅವರನ್ನು ನೀವು ಓದಿದ್ದೀರಾ? ಇಂಜಿನಿಯರಿಂಗ್ ಓದಿದ್ದೀರಾ? ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನೆ ಕೇಳುತ್ತಿದ್ದೆವು. ಕೆಲವರು, "ನಾನು ನಿರುದ್ಯೋಗಿ" ಎಂದು ಹೇಳಿದರೆ, ಮತ್ತೆ ಕೆಲವರು "ನಾನು ಉಬರ್ ವಾಹನ ಓಡಿಸುತ್ತೇನೆ" ಎನ್ನುತ್ತಿದ್ದರು. ಮತ್ತೆ ಕೆಲವರು "ಕೂಲಿ ಕೆಲಸ ಮಾಡುತ್ತೇನೆ" ಎಂದು ಹೇಳುತ್ತಿದ್ದರು.

ಸಾವಿರಾರು ಸಂಖ್ಯೆಯಲ್ಲಿ ರೈತರು ಬಂದು, "ಪ್ರಧಾನ ಮಂತ್ರಿ ಫಸಲ್ ಬಿಮಾ" ಯೋಜನೆಯ ಬಗ್ಗೆ ಮಾತನಾಡುತ್ತಿದ್ದರು. ಅರ್ಜಿ ಭರ್ತಿ ಮಾಡಿ, ದುಡ್ಡು ಕಟ್ಟಿದರೆ, ದುಡ್ಡು ಇಲ್ಲವಾಗುತ್ತಿದೆ" ಎಂದು ದೂರುತ್ತಿದ್ದರು. ನಮ್ಮ ಜಮೀನನ್ನು ಕಿತ್ತುಕೊಳ್ಳಲಾಗುತ್ತಿದೆ. ಅದಕ್ಕೆ ಬೆಲೆಯನ್ನೂ ನೀಡುವುದಿಲ್ಲ ಎಂದೂ ರೈತರು ಹೇಳುತ್ತಿದ್ದರು. ಭೂಸ್ವಾಧೀನ ಕಾಯ್ದೆಯನ್ನು ಜಾರಿ ಮಾಡಲಾಗುತ್ತಿರಲಿಲ್ಲ. ಈಗ ವನವಾಸಿ ಎಂದು ಕರೆಯಲಾಗುತ್ತಿರುವ ಆದಿವಾಸಿಗಳಿಗೆ ಬುಡಕಟ್ಟು ಜನಾಂಗಗಳ ಮಸೂದೆ ವ್ಯಾಪ್ತಿಗೆ ಸೇರಲು ಅವಕಾಶ ನೀಡುತ್ತಿಲ್ಲ ಎಂದು ಆದಿವಾಸಿಗಳು ಹೇಳಿದರು. ಇಂತಹ ಹಲವಾರು ಮಾತುಗಳನ್ನು ಕೇಳಲು ನಮಗೆ ಅವಕಾಶ ದೊರೆಯಿತು. ಆದರೆ, ಮೂರು ಮುಖ್ಯ ಸಮಸ್ಯೆಗಳು ನಿರುದ್ಯೋಗ, ಬೆಲೆಯೇರಿಕೆ ಮತ್ತು ರೈತರ ಸಮಸ್ಯೆ. ಅದರಲ್ಲಿ ಕನಿಷ್ಠ ಬೆಂಬಲ ಬೆಲೆಯ ಸಮಸ್ಯೆ ಇತ್ತು, ಬೀಜದ ಸಮಸ್ಯೆ ಇತ್ತು, ರೈತ ಮಸೂದೆಯ ಸಮಸ್ಯೆ ಇತ್ತು.

ನೀವೀಗ ಹೇಳಿದಿರಿ; 'ಅಗ್ನಿವೀರ್' ಯೋಜನೆಯಿಂದ ದೇಶಕ್ಕೆ ಲಾಭವಾಯಿತು ಎಂದು. ಆದರೆ, ಭಾರತೀಯ ಯುವಕರು ಸೇನೆಗೆ ಸೇರ್ಪಡೆಯಾಗಲು ಮುಂಜಾನೆ ನಾಲ್ಕು ಗಂಟೆಗೇ ಓಡುತ್ತಾರೆ. ಅವರು ನಿಮ್ಮ ಮಾತಿನೊಂದಿಗೆ ಸಹಮತ ಹೊಂದಿಲ್ಲ. ಅವರು ನಮಗೆ ಹೇಳಿದರು: ಮೊದಲು ನಮಗೆ 15 ವರ್ಷದ ಸೇವಾವಧಿ ದೊರೆಯುತ್ತಿತ್ತು, ನಿವೃತ್ತಿಯ ನಂತರ ಪಿಂಚಣಿ ದೊರೆಯುತ್ತಿತ್ತು. ಈಗ ನಾಲ್ಕು ವರ್ಷಗಳ ನಂತರ ನಮ್ಮನ್ನು ತೆಗೆದು ಹಾಕಲಾಗುತ್ತದೆ. ನಮಗೆ ಏನೂ ಸಿಗುವುದಿಲ್ಲ. ಪಿಂಚಣಿ ದೊರೆಯುವುದಿಲ್ಲ. ಹಿರಿಯ ಸೇನಾ ಅಧಿಕಾರಿಗಳ ಪ್ರಕಾರ, 'ಅಗ್ನಿವೀರ್' ಯೋಜನೆ ಸೇನೆಯಿಂದ ಬಂದಿಲ್ಲ; ಬದಲಿಗೆ ಬೇರೆ ಎಲ್ಲಿಂದಲೋ ಬಂದಿದೆ. ಇದು ಆರೆಸ್ಸೆಸ್ ನಿಂದ ಬಂದಿದೆ, ಗೃಹ ಸಚಿವಾಲಯದಿಂದ ಬಂದಿದೆ. ಇದು ಹಿರಿಯ ಸೇನಾಧಿಕಾರಿಗಳು ಹೇಳುತ್ತಿರುವುದು, ನಾನಲ್ಲ.

ನಮಗನ್ನಿಸುತ್ತದೆ: ಈ ಯೋಜನೆಯನ್ನು ಸೇನೆಯ ಮೇಲೆ ಹೇರಲಾಗಿದೆ ಮತ್ತು ಸೇನೆಯನ್ನು ದುರ್ಬಲಗೊಳಿಸುತ್ತದೆ ಎಂದು. ನಿವೃತ್ತ ಸೇನಾಧಿಕಾರಿಯೊಬ್ಬರು ನನಗೆ ಹೇಳಿದರು: "ರಾಹುಲ್ಜೀ, ಸಾವಿರಾರು ಜನರಿಗೆ ನಾವು ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದೇವೆ. ನಂತರ ಕೆಲವೇ ವರ್ಷಗಳಲ್ಲಿ ಅವರನ್ನು ವಾಪಸ್ ಕಳಿಸುತ್ತೇವೆ. ಅವರು  ನಿರುದ್ಯೋಗಿಗಳಾಗುತ್ತಾರೆ. ಇದರಿಂದ ಸಮಾಜದಲ್ಲಿ ಹಿಂಸೆ ಹೆಚ್ಚುತ್ತದೆ." ಅವರ ಮನಸ್ಸಿನಲ್ಲಿತ್ತು, 'ಅಗ್ನಿವೀರ್' ಯೋಜನೆ ಸೇನೆಯೊಳಗಿಂದ ಬಂದಿಲ್ಲ ಎಂದು. ಅಜಿತ್ ಧೋವಲ್ ಅವರು ಆ ಯೋಜನೆಯನ್ನು ಸೇನೆಯ ಮೇಲೆ ಹೇರಿದ್ದಾರೆ ಎಂದು ಅವರು ಹೆಸರನ್ನೂ ಹೇಳಿದರು.

ಆಸಕ್ತಿಕರ ಸಂಗತಿ ಏನೆಂದರೆ, ನಾನು ರಾಷ್ಟ್ರಪತಿಗಳ ಭಾಷಣವನ್ನು ಓದಿದೆ. ದೇಶದ ಪ್ರತಿಯೊಬ್ಬರೂ ಅಗ್ನಿವೀರ್ ಅಗ್ನಿವೀರ್ ಎಂದು ಮಾತನಾಡುತ್ತಿದ್ದಾರೆ ಎಂದು. ಆದರೆ, ಈ ಯೋಜನೆಯನ್ನು ಸೇನೆಯ ಮೇಲೆ ಹೇರಲಾಗಿದೆ. ನಮಗಿದು ಬೇಕಿಲ್ಲ ಎಂದು ಸೇನೆಯವರೇ ಹೇಳುತ್ತಾರೆ. ಬಹುಶಃ ಗೃಹ ಇಲಾಖೆಯು ಈ ಯೋಜನೆಯನ್ನು ಸೇನೆಯ ಮೇಲೆ ಹೇರಿರಬಹುದು, ಆರೆಸ್ಸೆಸ್ ಹೇರಿರಬಹುದು ಎಂದು ಹೇಳುತ್ತಿದ್ದಾರೆ. ಇಂತಹ ಮಾತುಗಳು ಕೇಳಿಬರುತ್ತಿವೆ.

ನನಗೊಂದು ವ್ಯತ್ಯಾಸ ಕಂಡಿತು. ರಾಷ್ಟ್ರಪತಿಗಳ ಭಾಷಣದಲ್ಲಿ ಹಲವಾರು ವಿಷಯಗಳನ್ನು ಹೇಳಲಾಗಿದೆ. ಆದರೆ, ಅಗ್ನಿವೀರ್ ಬಗ್ಗೆ ಒಂದು ಸಾಲಿನಲ್ಲಿ ಪದಪ್ರಯೋಗ ಮಾತ್ರ ಮಾಡಲಾಗಿದೆ. ಅಗ್ನಿವೀರ್ ಯೋಜನೆಯನ್ನು ನಾವು ಜಾರಿಗೆ ತಂದೆವು ಎಂದು ಮಾತ್ರ ಹೇಳಲಾಗಿದೆ. ಆದರೆ, ಈ ಯೋಜನೆ ಎಲ್ಲಿಂದ ಬಂತು? ಯಾರು ತಂದರು? ಯಾರಿಗೆ ಲಾಭವಾಗಲಿದೆ? ಎಂಬ ಬಗ್ಗೆ ಒಂದು ಮಾತನ್ನೂ ಹೇಳಲಾಗಿಲ್ಲ. ನಿರುದ್ಯೋಗದ ಕುರಿತ ಪ್ರಸ್ತಾಪವೇ ಅದರಲ್ಲಿಲ್ಲ. ಬೆಲೆಯೇರಿಕೆಯ ಶಬ್ದವೇ ಅದರಲ್ಲಿರಲಿಲ್ಲ.

ಹೀಗಾಗಿ ಯಾತ್ರೆಯ ಸಂದರ್ಭದಲ್ಲಿ ನಾವು ಕೇಳಿಸಿಕೊಂಡ ಅಗ್ನಿವೀರ್, ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆ ಇವಾವುವೂ ರಾಷ್ಟ್ರಪತಿಗಳ ಭಾಷಣದಲ್ಲಿ ಇರಲೇ ಇಲ್ಲ. ಇದು ನನಗೆ ಸ್ವಲ್ಪ ವಿಚಿತ್ರವಾಗಿ ಕಂಡಿತು. ಜನ ಒಂದು ಹೇಳುತ್ತಿದ್ದರೆ, ರಾಷ್ಟ್ರಪತಿ ಭಾಷಣದಲ್ಲಿ ಇನ್ನೊಂದು ಕೇಳಿಸುತ್ತಿದೆಯಲ್ಲ ಎಂದು.

ಸರಿ. ನಾನು ಇನ್ನೊಂದು ವಿಷಯವನ್ನು ತಿಳಿಸುತ್ತೇನೆ. ತಮಿಳುನಾಡಿನಿಂದ ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ ಮುಂತಾದ ಎಲ್ಲ ಕಡೆಯೂ ನಮಗೆ ಒಂದು ಹೆಸರು ಕೇಳಲು ಸಿಕ್ಕಿತು - ಅದಾನಿ. ಈ ಹೆಸರು ಪೂರ್ತಿ ಭಾರತದಲ್ಲಿ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಹಿಮಾಚಲ ಪ್ರದೇಶ, ಕಾಶ್ಮೀರ ಎಲ್ಲ ಕಡೆಯೂ ಅದಾನಿ.. ಅದಾನಿ.. ಅದಾನಿ.. ಅದಾನಿ.. ಅದಾನಿ. ಮತ್ತು ಈ ಹೆಸರನ್ನು ಪ್ರಸ್ತಾಪಿಸುವಾಗ ಜನರು ಎರಡು-ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಅದಾನಿ ಯಾವ ಉದ್ಯಮ ಮಾಡಿದರೂ ಸಫಲರಾಗಿಬಿಡುತ್ತಾರೆ. ಅವರು ಯಾವತ್ತೂ ವಿಫಲರಾಗುವುದಿಲ್ಲ. ಅವರು ಮತ್ತೂ ಕೇಳುತ್ತಿದ್ದರು: ನಾವೂ ಅದಾನಿಯಂತೆ ಆಗಲು ಏನು ಮಾಡಬೇಕು? ನಾವೂ ಅದನ್ನು ಕಲಿಯುತ್ತೇವೆ. ಮೋದಿ ಹೇಳುತ್ತಿದ್ದರು, ನವೋದ್ಯಮ ಶುರು ಮಾಡಿ ಮತ್ತು ಯಶಸ್ವಿಯಾಗಿ ಎಂದು. ಯಾವುದೇ ಉದ್ಯಮವನ್ನು ಶುರು ಮಾಡಿದ ಕೂಡಲೇ ಯಶಸ್ವಿಯಾಗಲು ಸಾಧ್ಯವೆ? ಎಂದು ಕೇಳುತ್ತಿದ್ದರು. ಇದು ಅವರ ಮೊದಲ ಪ್ರಶ್ನೆಯಾಗಿತ್ತು.

ಎರಡನೆಯ ಪ್ರಶ್ನೆ: ಅದಾನಿ ಯಾವುದೇ ವ್ಯಾಪಾರೋದ್ಯಮಕ್ಕೂ ನುಸುಳಿ ಬಿಡುತ್ತಾರೆ. ಮೊದಲು ಒಂದೆರಡು ಉದ್ಯಮದಲ್ಲಿದ್ದ ಅವರು ಇದೀಗ ಎಂಟ್ಹತ್ತು ವಲಯದಲ್ಲಿ ಕೆಲಸ ಮಾಡುತ್ತಾರೆ. ವಿಮಾನ ನಿಲ್ದಾಣಗಳು, ದತ್ತಾಂಶ ಕೇಂದ್ರಗಳು, ಸಿಮೆಂಟ್, ಸೌರ ಶಕ್ತಿ, ಪವನ ಶಕ್ತಿ, ಬಾಹ್ಯಾಕಾಶ ಮತ್ತು ರಕ್ಷಣೆ, ಗ್ರಾಹಕರ ಸಾಲ, ನವೀಕೃತ ಇಂಧನ, ಮಾಧ್ಯಮ. ಅವರು ನನ್ನನ್ನು ಪ್ರಶ್ನಿಸಿದರು: "ಅದಾನಿಯ ಜಾಲವೇನಿದೆ, ಮೂರು ವರ್ಷದಲ್ಲಿ… ಕ್ಷಮಿಸಿ 2014ರಿಂದ 2022ರ ವೇಳೆಗೆ 800 ಕೋಟಿ ಡಾಲರ್ನಿಂದ 140 ಶತಕೋಟಿ ಡಾಲರ್ ಹೇಗಾಯಿತು? 2014ರಲ್ಲಿ ಪ್ರಕಟವಾದ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಅವರು 609ನೇ ಸ್ಥಾನದಲ್ಲಿದ್ದರು. ಗೊತ್ತಿಲ್ಲ, ಜಾದೂ ಆಯಿತೇನೊ? ಎರಡನೆ ಸ್ಥಾನಕ್ಕೆ ತಲುಪಿಬಿಟ್ಟರು.

ಹಲವಾರು ಜನ ನನ್ನನ್ನು ಪ್ರಶ್ನಿಸಿದರು: "ರಾಹುಲ್ಜೀ, ನಮಗೆ ಹೇಳಿ, ಹಿಮಾಚಲ ಪ್ರದೇಶದಲ್ಲಿ ಸೇಬಿನ ವಿಚಾರ ಬಂದರೆ ಅಲ್ಲಿ ಅದಾನಿ, ಕಾಶ್ಮೀರದಲ್ಲಿ ಸೇಬಿನ ವಿಚಾರ ಬಂದರೆ ಅದಾನಿ, ಬಂದರು ವಿಚಾರಕ್ಕೆ ಬಂದರೆ ಅದಾನಿ, ವಿಮಾನ ನಿಲ್ದಾಣಗಳ ವಿಚಾರಕ್ಕೆ ಬಂದರೆ ಅದಾನಿ. ಮೂಲಸೌಕರ್ಯ.. ಸರಿ.. ನಾನು ನಡೆಯುವ ದಾರಿ ಯಾರು ಮಾಡಿದ್ದೆಂದರೆ ಅದಾನಿ.."

ಜನ ನನ್ನನ್ನು ಪ್ರಶ್ನಿಸಿದರು: "ರಾಹುಲ್ಜೀ, ಈ ಅದಾನಿ ಅವರು ಯಶಸ್ಸು ಗಳಿಸಿದ್ದು ಹೇಗೆ? ಅವರು ಇಷ್ಟು ಉದ್ಯಮಗಳಲ್ಲಿ ಹೇಗೆ ಬಂದರು? ಇಷ್ಟು ಯಶಸ್ಸು ಹೇಗೆ ದೊರೆಯಿತು? ಬಹು ಮುಖ್ಯವಾಗಿ, ಇವರಿಗೆ ಭಾರತದ ಪ್ರಧಾನಿಯೊಂದಿಗೆ ಏನು ಸಂಬಂಧ?"

ಇಲ್ಲಿದೆ ನೋಡಿ ಸಂಬಂಧ (ಅದಾನಿಯೊಂದಿಗೆ ಮೋದಿ ಇರುವ ಚಿತ್ರ ಪ್ರದರ್ಶಿಸಿದರು). ಹಿಂದೆ ಅದಾನಿಯ ಲೋಗೋ ಇದೆ. ರಾಷ್ಟ್ರಪತಿ ಭಾಷಣದ ಕುರಿತ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ನಡುವಿನ ಸಂಬಂಧದ ಕುರಿತು ನಿಮಗೆ ತಿಳಿಸಬಹುದೆ?

ಈ ಸಂಬಂಧ ಹಲವಾರು ವರ್ಷಗಳ ಹಿಂದೆ ಶುರುವಾಯಿತು - ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ. ಬಹುತೇಕ ಭಾರತೀಯ ಉದ್ಯಮಿಗಳು ಭಾರತದ ಪ್ರಧಾನಿಯನ್ನು (ಅವರಾಗ ಪ್ರಧಾನಿಯಾಗಿರಲಿಲ್ಲ) ಪ್ರಶ್ನಿಸುವಾಗ, ಒಬ್ಬ ವ್ಯಕ್ತಿ ಅವರ ಹೆಗಲಿಗೆ ಹೆಗಲು ನೀಡಿದ್ದರು. ಅದು ಅದ್ಭುತ, ಅದು ತಮಾಷೆಯ ಸಂಗತಿಯಲ್ಲ. ಅವರು ಪ್ರಧಾನಿಗೆ ನಿಷ್ಠರಾಗಿದ್ದರು. ಅವರೇನು ಮಾಡಿದುದೆಂದರೆ, ಅವರು ನರೇಂದ್ರ ಮೋದಿಗೆ ಪುನರುತ್ಥಾನ ಗುಜರಾತ್ ಯೋಜನೆ ರೂಪಿಸಲು ನೆರವು ನೀಡಿದರು. ಆ ಯೋಜನೆ ಉದ್ಯಮಿಗಳನ್ನು ಒಂದೆಡೆ ಸೇರಿಸಿ, ಅದನ್ನು ಪುನರುತ್ಥಾನಗೊಂಡ ಗುಜರಾತ್ ಎಂದು ಬಿಂಬಿಸುವುದಾಗಿತ್ತು. ಅದರಲ್ಲಿ ಅದಾನಿ ಬೆನ್ನೆಲುಬಾಗಿದ್ದರು. ಅದರ ಫಲಿತಾಂಶವೆಂದರೆ, ಗುಜರಾತ್ ನಲ್ಲಿ ಅವರ ವ್ಯಾಪಾರೋದ್ಯಮದ ಅದ್ಭುತ ಬೆಳವಣಿಗೆ. ಇಲ್ಲಿಂದಲೇ ನಿಜವಾದ ಜಾದೂ ಶುರುವಾಗಿದ್ದು.

ನರೇಂದ್ರ ಮೋದಿ ದಿಲ್ಲಿಗೆ ಬಂದಾಗ ಮತ್ತು 2014ರಲ್ಲಿ ಅಸಲಿ ಜಾದೂ ಶುರುವಾಗುತ್ತದೆ. ನಾನು ಹೇಳಿದೆ, 2014ರಲ್ಲಿ ಅವರು 609ನೇ ಸ್ಥಾನದಲ್ಲಿದ್ದರು. ಕೆಲವೇ ವರ್ಷಗಳಲ್ಲಿ ಅವರು 2ನೇ ಸ್ಥಾನ ತಲುಪಿದರು. ಅವರು ಹೇಗೆ ಅಲ್ಲಿಗೆ ತಲುಪಿದರು? ಅವರು ಹಲವಾರು ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಒಂದೆರಡು ಉದ್ಯಮಗಳ ಉದಾಹರಣೆ ನೀಡುತ್ತೇನೆ. ವಿಮಾನ ನಿಲ್ದಾಣಗಳ ಕುರಿತು ಮಾತನಾಡೋಣ. ಕೆಲ ವರ್ಷಗಳ ಹಿಂದೆ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಉದ್ಯಮಗಳಿಗೆ ಸರ್ಕಾರ ನೀಡಿತು. ಅದರಲ್ಲಿ ಒಂದು ನಿಯಮವಿತ್ತು. ಯಾರಿಗೆ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಮುಂಚಿತ ಅನುಭವವಿರುವುದಿಲ್ಲವೊ, ಅಂಥವರನ್ನು ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ಒಳಗೊಳಿಸಬಾರದು ಎಂಬುದು. ಈ ನಿಯಮವನ್ನು ಭಾರತದ ಸರ್ಕಾರ ಬದಲಿಸಿತು. ನಿಯಮ ಯಾರು ಮಾಡಿದ್ದರು ಎಂಬುದಲ್ಲ, ನಿಯಮ ಇತ್ತು. ನಿಯಮ ಯಾರು ಬದಲಿಸಿದರು ಎಂಬುದು ವಿಚಾರ. ನಿಯಮ ಬದಲಿಸಿದಾಗ ಈ ಕುರಿತು ಮಾಧ್ಯಮಗಳಲ್ಲೂ ಚರ್ಚೆಯಾಗಿತ್ತು. ನಿಯಮ ಬದಲಿಸಲಾಯಿತು ಮತ್ತು ಅದಾನಿಗೆ ಆರು ವಿಮಾನ ನಿಲ್ದಾಣಗಳನ್ನು ನೀಡಲಾಯಿತು.

ಇದಾದ ನಂತರ, ಭಾರತದ ಅತ್ಯಂತ ಸುಸಜ್ಜಿತ ಹಾಗೂ ಲಾಭದಾಯಕ ವಿಮಾನ ನಿಲ್ದಾಣವಾದ ಮುಂಬೈ ವಿಮಾನ ನಿಲ್ದಾಣವನ್ನು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಜಿವಿಕೆ ಸಂಸ್ಥೆಯಿಂದ ಹೈಜಾಕ್ ಮಾಡಲಾಯಿತು. ಸಿಬಿಐ, ಇಡಿ ಬಳಸಿಕೊಂಡು ಜಿವಿಕೆ ಸಂಸ್ಥೆಯ ಮೇಲೆ ಒತ್ತಡ ಹೇರಿ, ಆ ವಿಮಾನ ನಿಲ್ದಾಣವನ್ನು ಜಿವಿಕೆ ಸಂಸ್ಥೆಯಿಂದ ಕಿತ್ತುಕೊಂಡು ಅದಾನಿ ಕೈಗೆ ಹಾಕಿತು. ಇದರ ಫಲಿತಾಂಶವಾಗಿ ಈ ವಿಮಾನ ನಿಲ್ದಾಣಗಳಿಂದ ಶೇ. 24ರಷ್ಟು ಪ್ರಯಾಣಿಕರನ್ನು ಕಳಿಸುತ್ತಿದ್ದರೆ, ಶೇ. 21ರಷ್ಟು ಸರಕು ಸಾಗಣೆಗಳನ್ನು ಅದಾನಿ ಇಲ್ಲಿಂದ ಮಾಡುತ್ತಿದ್ದಾರೆ. ಈ ಅವಕಾಶವನ್ನು ಭಾರತ ಸರ್ಕಾರ ಹಾಗೂ ಭಾರತದ ಪ್ರಧಾನ ಮಂತ್ರಿ ಅದಾನಿಗೆ ಒದಗಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಕುರಿತು ಮಾತನಾಡೋಣ. ಅದರಲ್ಲಿ ರಕ್ಷಣಾ ವಲಯದಿಂದ ಪ್ರಾರಂಭಿಸೋಣ. ರಕ್ಷಣಾ ವಲಯದಲ್ಲಿ ಅದಾನಿಗೆ ಯಾವುದೇ ಅನುಭವವಿರಲಿಲ್ಲ. ಶೂನ್ಯ ಅನುಭವ. ನಿನ್ನೆ ಎಚ್ಎಎಲ್ ನಲ್ಲಿ  ಪ್ರಧಾನಿಗಳು ಹೇಳುತ್ತಿದ್ದರು, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು. ಆದರೆ, ವಾಸ್ತವವೇನೆಂದರೆ, ಎಚ್ಎಎಲ್ಗೆ ಇದ್ದ 122 ಯುದ್ಧ ವಿಮಾನಗಳ ತಯಾರಿಕಾ ಗುತ್ತಿಗೆಯನ್ನು ಅನಿಲ್ ಅಂಬಾನಿಗೆ ನೀಡಲಾಯಿತು. ಅವರು ದಿವಾಳಿಯಾದರು. ನಂತರ ಅದು ಅದಾನಿಗೆ ಹೋಯಿತು. ಅಲ್ಲಿ ಕೂಡಾ ಅನುಕೂಲ ಮಾಡಿಕೊಡಲಾಗಿತ್ತು. ಈ ಕುರಿತು ಭವಿಷ್ಯದ ಉದ್ಯಮಿಗಳು, ವ್ಯಾಪಾರೋದ್ಯಮದ ಶಾಲೆಗಳು, ಹಾರ್ವರ್ಡ್ ವಿಶ್ವವಿದ್ಯಾಲಯದವರು ಕೇಸ್ ಸ್ಟಡಿ ಮಾಡಬೇಕಿದೆ. ಖಂಡಿತ ನಡೆಯಲಿ - "ಹೇಗೆ ಸರ್ಕಾರದ ಅಧಿಕಾರವನ್ನು ಖಾಸಗಿ ವ್ಯಕ್ತಿಯ ಉದ್ಯಮಕ್ಕಾಗಿ ಬಳಸಬಹುದು" ಎಂದು.

ಅದಾನಿಯವರ ರಕ್ಷಣಾ ವಲಯದ ಆಸಕ್ತಿಯನ್ನು ಗಮನಿಸಿ. ಎಲ್ಬಿಟ್ ಸಂಸ್ಥೆಯೊಂದಿಗೆ ಅದಾನಿ ಭಾರತದಲ್ಲಿ ಡ್ರೋಣ್ ಉತ್ಪಾದಿಸುತ್ತಾರೆ ಮತ್ತು ಡ್ರೋಣ್ ಅನ್ನು ಭಾರತದ ವಿಮಾನ ನಿಲ್ದಾಣ, ಸೇನೆ, ನೌಕಾಪಡೆಗೆ ಒದಗಿಸುತ್ತಾರೆ. ಅದಾನಿ ಈ ಕೆಲಸವನ್ನು ಮೊದಲೆಂದೂ ಮಾಡಿಲ್ಲ. ಎಚ್ಎಎಲ್ ಈ ಕೆಲಸವನ್ನು ಮಾಡುತ್ತದೆ. ಭಾರತದಲ್ಲಿ ಇಂತಹ ಕೆಲಸ ಮಾಡುವ ಮತ್ತೂ ಒಂದೆರಡು ಸಂಸ್ಥೆಗಳಿವೆ. ಆದರೆ, ಪ್ರಧಾನ ಮಂತ್ರಿ ಇಸ್ರೇಲ್ಗೆ ಹೋಗುತ್ತಾರೆ ಮತ್ತು ಅದಾನಿಗೆ ಕೂಡಲೇ ಈ ಗುತ್ತಿಗೆ ದೊರೆಯುತ್ತದೆ. ಆದರೆ, ಒಂದೇ ಎಂದು ಭಾವಿಸಬೇಡಿ; ಇದರಲ್ಲಿ ಇಡೀ ಉದ್ಯಮಗಳ ವಿಷಯ ಅಡಗಿದೆ. ನಾನು ಮೊದಲೇ ಹೇಳಿದಂತೆ, ಹೇಗೆ ವಿಮಾನ ನಿಲ್ದಾಣ ವ್ಯವಸ್ಥೆಯನ್ನು ಅಪಹರಿಸಲಾಯಿತೊ ಹಾಗೆ. ವಿಮಾನ ನಿಲ್ದಾಣ ವಹಿವಾಟಿನ ಶೇ. 30ರಷ್ಟು ಪಾಲನ್ನು ಹೇಗೆ ಅಪಹರಿಸಲಾಯಿತೊ ಹಾಗೇ ರಕ್ಷಣಾ ವಲಯದ್ದೂ ಕೂಡ.

ಅದಾನಿ ಬಳಿ ನಾಲ್ಕು ರಕ್ಷಣಾ ಸಾಮಗ್ರಿ ಸಂಸ್ಥೆಗಳಿವೆ. ಅವರು ಈ ಹಿಂದೆ ಎಂದೂ ಈ ಕೆಲಸ ಮಾಡಿಲ್ಲ. ವಿಶೇಷ ಪಡೆಗಳು ಹಾಗೂ ಸೇನೆ ಬಳಕೆ ಮಾಡುವ ಸಣ್ಣ ಶಸ್ತ್ರಾಸ್ರಗಳು, ದಾಳಿ ರೈಫಲ್ಗಳು ಇವೆಲ್ಲ ಅದಾನಿಗೇ ದೊರೆಯುತ್ತವೆ. ಪ್ರಧಾನಿ ಸೀದಾ ಇಸ್ರೇಲ್ಗೆ ಹೋಗುತ್ತಾರೆ. ಪ್ರಧಾನಿಗಳೊಂದಿಗೆ ಅದಾನಿ ನಡೆಯುತ್ತಾರೆ. ಹಿಂದಿನಿಂದ ಜಾದೂ ನಡೆದು, ಭಾರತದ ಪ್ರಪ್ರಥಮ ಸಮಗ್ರ ಎಂಆರ್ಒ ದೊರೆಯುತ್ತದೆ, ವಿಮಾನಗಳ ನಿರ್ವಹಣಾ ವ್ಯವಹಾರ ದೊರೆಯುತ್ತದೆ, ಸಣ್ಣ ಶಸ್ತ್ರಾಸ್ತ್ರಗಳ ವ್ಯವಹಾರ ದೊರೆಯುತ್ತದೆ, ಡ್ರೋಣ್ ವ್ಯವಹಾರ ದೊರೆಯುತ್ತದೆ. ಇದರರ್ಥ, ಇಸ್ರೇಲ್-ಭಾರತದ ನಡುವಿನ ರಕ್ಷಣಾ ವ್ಯವಹಾರವೆಲ್ಲ ಪೂರ್ತಿಯಾಗಿ ಅದಾನಿಯ ಕೈವಶವಾಗುತ್ತದೆ. ಅಲ್ಲಿಗೆ ಮುಗಿಯಿತು. ಪೆಗಾಸಸ್ ಕೂಡ ಅದರಲ್ಲಿದೆ. ಗೊತ್ತಿಲ್ಲ, ಪೆಗಾಸಸ್ ಹೇಗೆ ಬಂತು, ಏನಾಯಿತು, ಯಾರು ಕೊಟ್ಟರು?

ಮತ್ತೊಂದು ಆಸಕ್ತಿಕರ ವಿಷಯವಿದೆ: ಒಂದು ಸಂಸ್ಥೆಯಿದೆ. ಆಲ್ಫಾ ಡಿಫೆನ್ಸ್. ಈ ಸಂಸ್ಥೆ ರಕ್ಷಣಾ ಎಲೆಕ್ಟ್ರಾನಿಕ್ಸ್ ಸಾಧನಗಳ ತಯಾರಿಕೆ ಮಾಡುತ್ತದೆ. ಬಹಳ ಸಣ್ಣ ಸಂಸ್ಥೆ. ಅದನ್ನೂ ಅದಾನಿ ವಶಕ್ಕೆ ಒಪ್ಪಿಸಲಾಯಿತು. ಇದರೊಂದಿಗೆ ವಿಮಾನ ನಿಲ್ದಾಣಗಳ ಮಾರುಕಟ್ಟೆ ವಹಿವಾಟಿನ ಶೇ. 30ರಷ್ಟು ಪಾಲು ಹಾಗೂ ಇಸ್ರೇಲ್ ಮತ್ತು ಭಾರತದ ನಡುವಿನ ಶಸ್ತ್ರಾಸ್ತ್ರ ವ್ಯವಹಾರದಲ್ಲಿ ಶೇ. 90ರಷ್ಟು ಮಾರುಕಟ್ಟೆ ಪಾಲನ್ನು ಕೊಡಲಾಯಿತು. ಒಂದೇ ಭೇಟಿಯಲ್ಲಿ. ಇದು ವಿದೇಶಾಂಗ ನೀತಿಯಾಗಿದೆ.

ನಾವೀಗ ಆಸ್ಟ್ರೇಲಿಯಾ ವಿಚಾರಕ್ಕೆ ಹೋಗೋಣ. ಪ್ರಧಾನ ಮಂತ್ರಿ ಆಸ್ಟ್ರೇಲಿಯಾಕ್ಕೆ ಹೋಗುತ್ತಾರೆ. ಅದರ ಬೆನ್ನಿಗೇ ಜಾದೂ ರೀತಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಾನಿಗೆ ನೂರು ಕೋಟಿ ಡಾಲರ್ ಸಾಲ ನೀಡುತ್ತದೆ. ಇದಾದ ನಂತರ ಬಾಂಗ್ಲಾದೇಶಕ್ಕೆ ಹೋಗುತ್ತಾರೆ. ಅದು ಮೋದಿಯವರ ಪ್ರಥಮ ಬಾಂಗ್ಲಾದೇಶ ಭೇಟಿಯಾಗಿರುತ್ತದೆ. ಅಲ್ಲಿ ವಿದ್ಯುಚ್ಛಕ್ತಿ ಮಾರುವ ನಿರ್ಣಯ ಕೈಗೊಳ್ಳಲಾಗುತ್ತದೆ. ಕೆಲವೇ ದಿನಗಳಲ್ಲಿ ಬಾಂಗ್ಲಾದೇಶದ ವಿದ್ಯುಚ್ಛಕ್ತಿ ಅಭಿವೃದ್ಧಿ ಮಂಡಳಿ 25 ವರ್ಷದ ಗುತ್ತಿಗೆಗಾಗಿ ಅದಾನಿ ಜೊತೆ ಸಹಿ ಹಾಕುತ್ತದೆ. 1,500 ಮೆ.ವ್ಯಾ. ವಿದ್ಯುಚ್ಛಕ್ತಿ ಪೂರೈಕೆಗೆ ಗುತ್ತಿಗೆ ಅದಾನಿ ಪಾಲಾಗುತ್ತದೆ.

ಅಲ್ಲಿಂದ ಶ್ರೀಲಂಕಾ ವಿಚಾರಕ್ಕೆ ಬರೋಣ. ಜೂನ್, 2022ರಲ್ಲಿ ಶ್ರೀಲಂಕಾದ ಸಿಲೋನ್ ವಿದ್ಯುಚ್ಛಕ್ತಿ ಮಂಡಳಿ ಅಧ್ಯಕ್ಷ ಎಂ.ಎನ್.ಸಿ. ಫರ್ನಾಂಡೊ ಅವರು ಶ್ರೀಲಂಕಾ ಸದನ ಸಮಿತಿಯ ಬಹಿರಂಗ ವಿಚಾರಣೆ ಸಂದರ್ಭದಲ್ಲಿ, ಪವನ ವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೇರವಾಗಿ ಅದಾನಿಗೇ ನೀಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೇಲೆ ಒತ್ತಡ ಹೇರಿದ್ದರೆಂದು ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ತಮಗೆ ಹೇಳಿದ್ದಾಗಿ ತಿಳಿಸುತ್ತಾರೆ. ಇದು ಭಾರತದ ವಿದೇಶಾಂಗ ನೀತಿಯಲ್ಲ; ಅದಾನಿಯ ವಿದೇಶಾಂಗ ನೀತಿ. ಅವರ ವ್ಯವಹಾರವನ್ನು ವೃದ್ಧಿಸುವ ವಿದೇಶಾಂಗ ನೀತಿಯಾಗಿದೆ.

ಯಾತ್ರೆಯಲ್ಲಿ ನನಗೆ ಇನ್ನೂ ಎರಡು ಮೂರು ಪ್ರಶ್ನೆಗಳನ್ನು ಕೇಳಲಾಯಿತು. "ರಾಹುಲ್ಜೀ, ಅದಾನಿಗೆ ಸಹಾಯ ಮಾಡಲು ಎಲ್ಐಸಿ ಹಣವನ್ನು ಏಕೆ ಹೂಡಿಕೆ ಮಾಡಲಾಗುತ್ತಿದೆ? ಅದಾನಿ ಶೇರುಗಳ ಅಸ್ಥಿರವಾಗಿದ್ದರೂ, ಅವುಗಳಲ್ಲಿ ಎಲ್ಐಸಿ ಹಣವನ್ನು ಏಕೆ ಹೂಡಿಕೆ ಮಾಡಲಾಗುತ್ತಿದೆ ಎಂದೂ ಪ್ರಶ್ನಿಸಿದರು. ನಾನು ಹೇಳುವುದೇನೆಂದರೆ, ಅದಾನಿಗೆ ಭಾರತ ಸರ್ಕಾರ ಮತ್ತು ನರೇಂದ್ರ ಮೋದಿ ಹೇಗೆ ನೆರವು ನೀಡುತ್ತಿದ್ದಾರೆ? ಭಾರತದ ಸಾರ್ವಜನಿಕ ಬ್ಯಾಂಕ್ಗಳ ಸಾವಿರಾರು ಕೋಟಿ ರೂಪಾಯಿ ಹಣ ಅದಾನಿಗೆ ದೊರೆಯುತ್ತದೆ. ಎಸ್ಬಿಐ 27,000 ಕೋಟಿ ರೂಪಾಯಿ, ಪಿಎನ್ಬಿ 7,000 ಕೋಟಿ ರೂಪಾಯಿ, ಬ್ಯಾಂಕ್ ಆಫ್ ಬರೋಡಾ 5,500 ಕೋಟಿ ರೂಪಾಯಿ ಹೀಗೆ ಪಟ್ಟಿ ಬೆಳೆಯುತ್ತದೆ. ಎಲ್ಐಸಿ ಹೂಡಿಕೆ 36,000 ಕೋಟಿ ರೂಪಾಯಿ. 3ಕೋಟಿ ಎಸ್ಬಿಐ ಹಾಗೂ ಪಾಲುದಾರರ ಹಣ ಅದಾನಿ ಸಾಲದ ಸಂಸ್ಥೆಗೆ ಹೋಗುತ್ತಿದೆ.

ಖಂಡಿತ, ಇನ್ನೊಂದು ಪ್ರಶ್ನೆಯಿದೆ. ನೆರವು ಹೇಗೆ ನೀಡಲಾಗುತ್ತಿದೆ? ಎಲ್ಐಸಿ ಹಾಗೂ ಸಾರ್ವಜನಿಕ ಬ್ಯಾಂಕುಗಳ ಹಣವನ್ನು ನರೇಂದ್ರ ಮೋದಿಯವರು ಅದಾನಿಗೆ ನೀಡುತ್ತಿದ್ದಾರೆ. ಬೇರೆ ಯಾರಾದರೂ ಪ್ರತಿರೋಧ ತೋರಿದರೆ ಅವರೆದುರು ಐಟಿ, ಇಡಿ, ಸಿಬಿಐಗಳನ್ನು ನಿಲ್ಲಿಸಲಾಗುತ್ತದೆ.

ಎಲ್ಲಕ್ಕಿಂತ ಕುತೂಹಲಕರ ಪ್ರಶ್ನೆಯೊಂದನ್ನು ಕೇಳುತ್ತೇನೆ: ಕೆಲವು ದಿನಗಳ ಹಿಂದೆ ಹಿಂಡೆನ್ಬರ್ಗ್ ವರದಿ ಬಂತು. ಭಾರತದ ಹೊರಗೆ ಅದಾನಿಯ ಶೆಲ್ ಕಂಪನಿಗಳಿವೆ ಎಂದು ಆ ವರದಿಯಲ್ಲಿ ಬರೆಯಲಾಗಿತ್ತು. ಎಲ್ಲಕ್ಕಿಂತ ಮೊದಲ ಪ್ರಶ್ನೆಯೆಂದರೆ, ಅವು ಯಾರ ಶೆಲ್ ಕಂಪನಿಗಳು? ಮಾರಿಷಸ್ನಲ್ಲಿರುವ ಶೆಲ್ ಕಂಪನಿಗಳು ಯಾರವು? ಈ ಶೆಲ್ ಕಂಪನಿಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಭಾರತಕ್ಕೆ ಕಳಿಸುತ್ತಿವೆ. ಇದು ಯಾರ ಹಣ? ಅದಾನಿ ಈ ಕೆಲಸವನ್ನು ಉಚಿತವಾಗಿ ಮಾಡುತ್ತಿದ್ದಾರೆಯೆ? ನಾನು ಈ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೇನೆಂದರೆ, ಅದಾನಿ ವ್ಯೂಹಾತ್ಮಕ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಾನಿ ಭಾರತದ ಬಂದರುಗಳನ್ನು ನಡೆಸುತ್ತಾರೆ. ಭಾರತದ ವಿಮಾನ ನಿಲ್ದಾಣಗಳನ್ನು ನಡೆಸುತ್ತಾರೆ. ಭಾರತದ ರಕ್ಷಣಾ ಉದ್ಯಮಗಳನ್ನು ನಡೆಸುತ್ತಾರೆ. ಮೊದಲಿಗೆ ನನ್ನದೊಂದು ಸಣ್ಣ ಪ್ರಶ್ನೆ: ಶೆಲ್ ಕಂಪನಿಗಳ ವಿಚಾರದಲ್ಲಿ ಭಾರತ ಸರ್ಕಾರ ಪ್ರಶ್ನೆ ಮಾಡಲಿಲ್ಲವೆ? ಅವರು ಯಾರು? ಅವು ಯಾರ ಕಂಪನಿಗಳು? ಇದು ವ್ಯೂಹಾತ್ಮಕ ವಿಚಾರ. ಅಂಥದ್ದರಲ್ಲಿ ಕೆಲಸ ಮಾಡುವ ಕಂಪನಿಗಳ ಬಗ್ಗೆ ನಿಮಗೆ ತಿಳಿದೇ ಇಲ್ಲವೆ? ಇದು ರಾಷ್ಟ್ರೀಯ ಭದ್ರತೆಯ ವಿಚಾರ. ಈ ಶೆಲ್ ಕಂಪನಿಗಳು ಯಾರವು, ಎಷ್ಟು ದುಡ್ಡು ಬರುತ್ತಿದೆ ಎಂದು ನಿಮಗೆ ಗೊತ್ತೇ ಇಲ್ಲ.

ಇನ್ನೊಂದು ಮಹತ್ವದ ಪ್ರಶ್ನೆ: ಈ ಹಣ ಯಾರದು? ಈ ಶೆಲ್ ಕಂಪನಿಗಳು ಯಾರವು? ಯಾರ ದುಡ್ಡು ದೇಶದೊಳಕ್ಕೆ ಬರುತ್ತಿದೆ? ಇದನ್ನು ತಿಳಿಸುವುದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ.

ಈಗ ಬಜೆಟ್ ಕುರಿತು ಸ್ವಲ್ಪ ಮಾತನಾಡುತ್ತೇನೆ.  2022ರಲ್ಲಿ ಅದಾನಿ ಘೋಷಿಸುತ್ತಾರೆ - 15 ಶತಕೋಟಿ ಡಾಲರ್ ಹೂಡಿಕೆ ಮಾಡಿ ಜಗತ್ತಿನ ಅತಿ ದೊಡ್ಡ ಹಸಿರು ಜಲಜನಕ ಪರಿಸರ ವಲಯವನ್ನು ನಿರ್ಮಿಸಲಾಗುವುದು ಎಂದು. ಆದರೆ, ಈ ಬಜೆಟ್ನಲ್ಲಿ ಬಿಜೆಪಿ ಸರ್ಕಾರ ಮತ್ತು ನಿರ್ಮಲಾ ಸೀತಾರಾಮನ್ ಅವರು ಹಸಿರು ಜಲಜನಕ ಇಂಧನ ವಲಯಕ್ಜೆ ಭಾರಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಘೋಷಿಸಿದ್ದು, ಅದಕ್ಕಾಗಿ ತೆಗೆದಿರಿಸಿರುವ ರೂ. 19,750 ಕೋಟಿಯನ್ನು ಅದಕ್ಕಾಗಿ ನೀಡುತ್ತೇವೆ. ಅಂದರೆ ಪೂರ್ಣವಾಗಿ ಅದಾನಿಗೇ ನೀಡುತ್ತಿದ್ದಾರೆ. ಬಜೆಟ್ನಲ್ಲಿ ಅದಾನಿಗೆ ಹೊಸದಾಗಿ 50 ವಿಮಾನ ನಿಲ್ದಾಣಗಳು, ಕರಾವಳಿ ಶಿಪ್ಪಿಂಗ್, ತೋಟಗಾರಿಕೆ, ಮಳೆ ನೀರು ಸಂಗ್ರಹಣೆ ಎಲ್ಲವನ್ನೂ ನೀಡುತ್ತಿದ್ದೀರಿ.

ನನಗೆ ಪ್ರಧಾನ ಮಂತ್ರಿ ಬಳಿ ಎರಡು ಮೂರು ಪ್ರಶ್ನೆಗಳಿವೆ: ಮೊದಲು ಮೋದಿಯವರು ಅದಾನಿಯ ವಿಮಾನದಲ್ಲಿ ಹೋಗುತ್ತಿದ್ದರು. ಈಗ ಮೋದಿ ವಿಮಾನದಲ್ಲಿ ಅದಾನಿ ಹೋಗುತ್ತಾರೆ. ಮೊದಲು ಸ್ಥಳೀಯ ವಿಷಯವಾಗಿತ್ತು. ನಂತರ ರಾಷ್ಟ್ರೀಯ ವಿಷಯವಾಯಿತು. ಇದೀಗ ಅಂತರರಾಷ್ಟ್ರೀಯ ವಿಷಯವಾಗಿದೆ. ಅದಾನಿ ಸಂಸ್ಥೆಯಲ್ಲಿ ಬೋರಿಸ್ ಜಾನ್ಸನ್ ಪುತ್ರ ಕೆಲಸ ಮಾಡುತ್ತಾನೆ. ಸಹೋದರ ಕೆಲಸ ಮಾಡುತ್ತಾನೆ. ಹೀಗಾಗಿ ಈ ವಿಷಯ ಮೊದಲು ಗುಜರಾತ್ ವಿಷಯವಾಗಿತ್ತು. ನಂತರ ಭಾರತದ ವಿಷಯವಾಯಿತು. ಈಗ ಅಂತರರಾಷ್ಟ್ರೀಯ ವಿಷಯವಾಗಿದೆ. ಪ್ರಧಾನಿಯವರಿಗೆ ನನ್ನ ಒಂದೆರಡು ಸರಳ ಪ್ರಶ್ನೆಗಳು: ಪ್ರಧಾನ ಮಂತ್ರಿಗಳೆ, ನೀವು ವಿದೇಶ ಪ್ರವಾಸ ಕೈಗೊಂಡಾಗ, ನೀವು ಮತ್ತು ಅದಾನಿ ಎಷ್ಟು ಬಾರಿ ಜೊತೆಯಾಗಿ ಹೋಗಿದ್ದಿರಿ? ಎಷ್ಟು ಬಾರಿ ನೀವು ವಿದೇಶಕ್ಕೆ ಭೇಟಿ ನೀಡಿದ ನಂತರ ಅದಾನಿ ನಿಮ್ಮ ಜೊತೆಗೂಡಿಕೊಂಡರು? ಎಷ್ಟು ಬಾರಿ ನೀವು ವಿದೇಶ ಪ್ರವಾಸ ಮಾಡಿದ ಕೂಡಲೇ ಅದಾನಿ ಪ್ರವಾಸ ಮಾಡಿದರು? ಕೊನೆಗೆ ಎಷ್ಟು ದೇಶಗಳು ನೀವು ಭೇಟಿ ನೀಡಿದ ನಂತರ ಅದಾನಿಗೆ ಗುತ್ತಿಗೆ ನೀಡಿದವು?

ಮತ್ತೊಂದು ಅತ್ಯಗತ್ಯ ಪ್ರಶ್ನೆ: ಅದಾನಿ ಈ ಹಿಂದಿನ 20 ವರ್ಷಗಳಲ್ಲಿ ಬಿಜೆಪಿಗೆ ಎಷ್ಟು ಹಣ ನೀಡಿದ್ದಾರೆ? ಎಲೆಕ್ಟೋರಲ್ ಬಾಂಡ್ಗಳ ಮೂಲಕ ಎಷ್ಟು ಹಣ ಕೊಟ್ಟಿದ್ದಾರೆ? ಯುವಕರು ನನ್ನನ್ನು ಪ್ರಶ್ನಿಸಿದಂತೆ, ಅದಾನಿ ಇಷ್ಟು ಬೇಗ ಇಷ್ಟೆಲ್ಲ ಉದ್ಯಮಗಳ ಒಡೆಯ ಹೇಗಾದರು? ಬೇರೆ ಬೇರೆ ವಲಯಗಳಲ್ಲಿ ಅದಾನಿಗೆ ಹೇಗೆ ಯಶಸ್ಸು ಸಿಕ್ಕಿತು? ರಾಜಕೀಯ ಮತ್ತು ಉದ್ಯಮಪತಿಗಳ ನಡುವೆ ಹೇಗೆ ಸಂಬಂಧ ಕುದುರುತ್ತದೆ ಅನ್ನುವುದರ ಬಗ್ಗೆ ಬಿಸಿನೆಸ್ ಶಾಲೆಗಳು, ಹಾರ್ವರ್ಡ್ ವಿಶ್ವವಿದ್ಯಾನಿಲಯ ಅಧ್ಯಯನ ಮಾಡಲು ಸೂಕ್ತ ವಿಷಯವಾಗಿದೆ. ಭಾರತ ಕೇಸ್ ಸ್ಟಡಿಯಾಗಿದೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಚಿನ್ನದ ಪದಕ ಕೊಡಬೇಕು.

ನನಗಿಂತ ಮೊದಲು ಮಾತಾಡಿದ ಬಿಜೆಪಿ ಸದಸ್ಯರು ಬಹಳ ಸುಂದರವಾಗಿ ನನ್ನ ಮಾತುಗಳ ಸಾರಾಂಶವನ್ನು ಹೇಳಿದರು. ನಾನು ಯೋಚಿಸಿದ್ದನ್ನು ಅದಕ್ಕಿಂತ ಚೆನ್ನಾಗಿ ಅವರು ಹೇಳಿದರು. ಅದೇನೆಂದರೆ coming together is a beginning, keeping together is progress, working together is success ( ಜೊತೆಗೂಡುವುದು ಆರಂಭ, ಜೊತೆಯಾಗಿ ಸಾಗುವುದು ಅಭಿವೃದ್ಧಿ, ಜೊತೆಗೂಡಿ ಪ್ರಯತ್ನಿಸುವುದು ಯಶಸ್ಸು). ಅದಾನಿಯವರೆ, ನರೇಂದ್ರ ಮೋದಿಯವರೆ, ಧನ್ಯವಾದಗಳು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top