-

ಬಾಳು ಬೆಳಗುವ ರಮಝಾನ್

-

ರಮಝಾನ್ ತಿಂಗಳಲ್ಲಿ ಕೇವಲ ಹಸಿವು, ದಾಹಗಳನ್ನು ಸಹಿಸುವ ತರಬೇತಿ ಮಾತ್ರವಲ್ಲ, ಬುದ್ಧಿ, ಮನಸ್ಸುಗಳ ಸಹಿತ ದೇಹದ ಎಲ್ಲ ಅವಯವಗಳನ್ನು ಚಿತ್ತದ ದಾಸ್ಯದಿಂದ ಬಿಡಿಸಿ ಅವುಗಳನ್ನು ಸತ್ಯ ನಿಷ್ಠೆ ಹಾಗೂ ತತ್ವನಿಷ್ಠೆಗೆ ಒಗ್ಗಿಸುವ ತರಬೇತಿಯನ್ನೂ ಒದಗಿಸಲಾಗುತ್ತದೆ. ಹಸಿವು, ದಾಹಗಳ ಮೂಲಕ ಮಾತ್ರವಲ್ಲದೆ ಮೌನ, ಏಕಾಂತ, ಜಾಗರಣೆ, ಪಠಣ, ಅಧ್ಯಯನ, ಆಲಿಕೆಗಳ ಮೂಲಕವೂ ಇಂದ್ರಿಯಗಳ ನಿಯಂತ್ರಣದ ತರಬೇತಿ ನೀಡಲಾಗುತ್ತದೆ. ಏಕಾಂತದಲ್ಲಿ ಒಂದಷ್ಟು ಆತ್ಮಾವಲೋಕನ, ಪಶ್ಚಾತ್ತಾಪ, ತಪ್ಪೊಪ್ಪಿಗೆ, ಚಿಂತನೆ, ದೇವನಾಮಗಳ ಧ್ಯಾನ ಮತ್ತು ಜಪ ಇತ್ಯಾದಿ ಚಟುವಟಿಕೆಗಳಲ್ಲಿ ಜನರು ಮಗ್ನರಾಗಿರುತ್ತಾರೆ. ಹಾಗೆಯೇ ನಿತ್ಯ 5 ಹೊತ್ತು ಸಾಮೂಹಿಕ ನಮಾಝ್‌ನಲ್ಲಿ ಭಾಗವಹಿಸುವ ಜನರು ಕಡ್ಡಾಯ ನಮಾಝ್ ಸಲ್ಲಿಸುವ ಜೊತೆ ಹೆಚ್ಚುವರಿ ಐಚ್ಛಿಕ ನಮಾಝ್‌ಗಳಲ್ಲೂ ನಿರತರಾಗಿರುತ್ತಾರೆ. ಒಟ್ಟಿನಲ್ಲಿ ಕೆಡುಕನ್ನು ಕಾಣಬೇಡ, ಕೇಳಬೇಡ ಮತ್ತು ಆಲಿಸಬೇಡ ಎಂಬ ಧೋರಣೆಯನ್ನು ಪಾಲಿಸುವ ಸಾಮೂಹಿಕ ಶ್ರಮವೊಂದು ರಮಝಾನ್ ತಿಂಗಳಲ್ಲಿ ನಡೆಯುತ್ತದೆ. 

ಈಜಗತ್ತಿನಲ್ಲಿ ಕಣ್ಣು ತೆರೆಯುವ ಪ್ರತಿಯೊಬ್ಬ ಮಾನವನ ಮುಂದೆ ತಾನು ಹೇಗೆ ಬದುಕಬೇಕು ಎಂಬ ಪ್ರಶ್ನೆಗುತ್ತರವಾಗಿ ಎರಡು ಆಯ್ಕೆಗಳಿರುತ್ತವೆ. 

1. ಇಚ್ಛಾನುಸಾರ ಬದುಕುವುದು 2. ನಿಯಮಾನುಸಾರ ಬದುಕುವುದು. 

ಇಚ್ಛಾನುಸಾರ ಬದುಕಿಗೆ ಯಾವುದೇ ಶಿಕ್ಷಣ, ತರಬೇತಿ, ಅಭ್ಯಾಸಗಳ ಅಗತ್ಯವಿರುವುದಿಲ್ಲ. ಅದಕ್ಕೆ ಬೇಕಾಗಿರುವುದು ಅವಕಾಶಗಳು ಮಾತ್ರ. ಮನದಲ್ಲಿ ಮೂಡುವ ಇಚ್ಛೆಯೇ ಗುರು, ಇಚ್ಛೆಯೇ ಮಾರ್ಗದರ್ಶಿ, ಇಚ್ಛೆಯೇ ನ್ಯಾಯಾಧೀಶ, ಇಚ್ಛೆಯೇ ದೊರೆ. ಮೊದಲ ನೋಟಕ್ಕೆ ಇದು ತುಂಬಾ ರೋಚಕವಾಗಿ ತೋರುತ್ತದೆ. ಆದ್ದರಿಂದಲೇ ಹಲವರು ಆ ನಿಟ್ಟಿನಲ್ಲಿ ಪ್ರಯೋಗಗಳನ್ನು ಮಾಡಿದ್ದಾರೆ. ಆದರೆ, ಸ್ವಲ್ಪಚಿಂತಿಸಿ ನೋಡಿದರೆ ಇಚ್ಛಾನುಸಾರ ಬದುಕುವುದು ಎಂಬುದು ಒಂದು ಅಪೇಕ್ಷೆ ಮತ್ತು ಭ್ರಮೆ ಮಾತ್ರ. ಸ್ವೇಚ್ಛಾಚಾರಿಗಳಾಗಿ, ಮನಬಂದಂತೆ ಬದುಕುತ್ತೇವೆ ಎಂದು ಹೊರಟ ಯಾರಿಗೂ ಹಾಗೆ ಬದುಕಲು ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಅವಕಾಶಗಳು ಸಿಕ್ಕಿಲ್ಲ. ಏಕೆಂದರೆ ಇಚ್ಛೆಗಳ ಜಗತ್ತು ಮತ್ತು ನಿಜ ಜೀವನದ ನಡುವೆ ಅಪಾರ ಅಂತರವಿರುತ್ತದೆ. ಇಚ್ಛೆಗಳಿಗೆ ಗಡಿ, ಗೋಡೆ ಇತ್ಯಾದಿ ಯಾವುದೂ ಇರುವುದಿಲ್ಲ. ಆದರೆ ಆ ಇಚ್ಛೆಗಳನ್ನೆಲ್ಲ ಈಡೇರಿಸಲು ಹೊರಟಾಗ ಹಲವು ಇತಿಮಿತಿಗಳು ಎದುರಾಗುತ್ತವೆ. ಪ್ರಥಮವಾಗಿ ಮಾನವನ ಶರೀರದ ಇತಿಮಿತಿಗಳು ಅವನ ಇಚ್ಛೆಗಳಿಗೆ ಬೇಲಿ ಹಾಕುತ್ತವೆ. ಶರೀರಕ್ಕೆ ಒಗ್ಗದ್ದನ್ನು ತಿಂದರೆ ಅಥವಾ ಏನನ್ನೇ ಆಗಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ತಿಂದರೆ ಶರೀರವು ವಿವಿಧ ರೀತಿಯಲ್ಲಿ ಬಂಡಾಯಕ್ಕಿಳಿದು ಬಿಡುತ್ತದೆ. ಶರೀರದ ಪ್ರಾಶಸ್ತ್ಯಗಳು ಬದಲಾಗುತ್ತಲೂ ಇರುತ್ತವೆ. ಇಂದು ಒಗ್ಗಿದ್ದು ನಾಳೆ ಒಗ್ಗುವುದಿಲ್ಲ. ಹೀಗೆ ಸ್ವೇಚ್ಛಾಚಾರಿಯ ಮನಸ್ಸಿನ ಇಚ್ಛೆಗಳು ಅವನದೇ ಶರೀರದ ಇಚ್ಛೆಗಳ ಮುಂದೆ ಮೊಣಕಾಲೂರಬೇಕಾಗುತ್ತದೆ. 

ಶರೀರದ ಸ್ವರೂಪ, ಅದರ ಪ್ರಕೃತಿ ಮತ್ತು ಧಾರಣಾ ಶಕ್ತಿಯ ಇತಿಮಿತಿಗಳು ಕೂಡ ಸ್ವೇಚ್ಛಾಚಾರಿಯ ಇಚ್ಛೆಗಳ ಸುತ್ತ ಸರಪಣಿಗಳಾಗಿ ಬಿಡುತ್ತವೆ. ಈಜುವ ಮೀನುಗಳನ್ನು ಕಂಡಾಗ ಮಾನವನಿಗೆ ಈಜಬೇಕೆನಿಸುತ್ತದೆ. ಆದರೆ ಸಾಕಷ್ಟು ತರಬೇತಿ ಪಡೆದ ಬಳಿಕ ಒಂದಿಷ್ಟು ಈಜಲು ಸಾಧ್ಯವಾದರೂ ಈಜಿನಲ್ಲಿ ಮೀನಿಗೆ ಸಾಟಿಯಾಗಲು ಅವನಿಗೆ ಸಾಧ್ಯವಾಗುವುದಿಲ್ಲ. ಕೆಲವು ಕ್ಷಣಗಳಿಗಿಂತ ಹೆಚ್ಚು ಕಾಲ ನೀರಿನೊಳಗೆ ಮುಳುಗಿರಲು ಅವನಿಗೆ ಸಾಧ್ಯವಿಲ್ಲ. ಕೊನೆಗೆ ತನ್ನ ಶರೀರದ ಇತಿಮಿತಿಗಳನ್ನು ಒಪ್ಪಿ ಇಚ್ಛೆಯನ್ನು ಮಣಿಸಬೇಕಾಗುತ್ತದೆ. ಹಾರುವ ಹಕ್ಕಿಗಳನ್ನು ಕಂಡಾಗಲೆಲ್ಲ ಅವುಗಳಂತೆ ಹಾರಬೇಕೆನಿಸುತ್ತದೆ. ಆದರೆ ಕೆಲವು ಅಡಿಗಳಾಚೆಗೆ ಹಾರಲು ಅವನಿಗೆ ಸಾಧ್ಯವಾಗುವುದಿಲ್ಲ. ಇಲ್ಲೂ ಮಾನವನ ಶರೀರ ಅವನ ಇಚ್ಛೆಯನ್ನು ಸೋಲಿಸಿಬಿಡುತ್ತದೆ. 

ಸ್ವಂತ ಶರೀರದ ಸ್ಥಿತಿ ಹೀಗಿದ್ದರೆ ಹೊರಜಗತ್ತಿನ ಸ್ಥಿತಿ ಏನು? ಮಾನವ ಸಮಾಜ ಜೀವಿ. ಸಮಾಜವೆಂದ ಮೇಲೆ ಅಲ್ಲಿ ಹಲವರು, ಹಲವು ಬಗೆಯವರು ಇರುತ್ತಾರೆ. ಎಲ್ಲರ ಇಚ್ಛೆಗಳು ಸಮಾನವಾಗಿರುವುದಿಲ್ಲ. ಇಚ್ಛೆಗಳು ಭಿನ್ನವಾದಾಗ ಅವುಗಳ ಮಧ್ಯೆ ಘರ್ಷಣೆಗಳು ಸಂಭವಿಸುತ್ತವೆ. ಬಲಿಷ್ಠನ ಇಚ್ಛೆ ಗೆಲ್ಲುತ್ತದೆ. ದುರ್ಬಲನು ತನ್ನ ಇಚ್ಛೆಯನ್ನು ಬಲಿಕೊಡಬೇಕಾಗುತ್ತದೆ. ಇನ್ನು ನಾಗರಿಕ ಸಮಾಜವೆಂದ ಮೇಲೆ ಅಲ್ಲಿ ಒಂದಷ್ಟು ಕಾನೂನು, ಸಂಪ್ರದಾಯ, ಕಟ್ಟಳೆಗಳೆಲ್ಲ ಇರುತ್ತವೆ. ಸಾಮಾಜಿಕ ಒತ್ತಡ, ನಿರ್ಬಂಧಗಳಿರುತ್ತವೆ. ಹಕ್ಕು-ಅಧಿಕಾರ ಮತ್ತು ಕರ್ತವ್ಯ, ಹೊಣೆಗಾರಿಕೆಗಳು ಇರುತ್ತವೆ. ಅವೆಲ್ಲಾ ಹಲವರ ಹಲವು ಇಚ್ಛೆಗಳ ಪಾಲಿಗೆ ತಡೆಗೋಡೆಗಳಾಗಿ ಬಿಡುತ್ತವೆ. ಇಚ್ಛೆಗಳ ಬೆನ್ನು ಹತ್ತಿ ಸಂಪ್ರದಾಯಗಳನ್ನು ಮುರಿದಾಗ ಪ್ರತಿರೋಧ ಎದುರಿಸಬೇಕಾಗುತ್ತದೆ. ಕಾನೂನುಗಳನ್ನು ಮುರಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕೌಟುಂಬಿಕ ನಿಯಮಗಳನ್ನು ಮುರಿಯಲು ಹೊರಟರೆ ಕುಟುಂಬ ನುಚ್ಚು ನೂರಾಗುತ್ತದೆ. 

ಹೀಗೆ ಸಂಪೂರ್ಣ ಸ್ವೇಚ್ಛಾಚಾರ ಎಂಬುದು ಭ್ರಮೆ ಮತ್ತು ಖಯಾಲಿಗಳ ಆಚೆ ನಿಜಜೀವನದಲ್ಲಿ ಅವಕಾಶವೇ ಇಲ್ಲದ ಒಂದು ಅಪೇಕ್ಷೆ ಮಾತ್ರವಾಗಿ ಉಳಿಯುತ್ತದೆ. ಆದ್ದರಿಂದ ಮಾನವನ ಪಾಲಿಗೆ ಅನಿರ್ಬಂಧಿತ ಸ್ವೇಚ್ಛಾಚಾರ ಎಂಬುದೊಂದು ಆಯ್ಕೆಯೇ ಅಲ್ಲ. ಅವನ ಮುಂದಿರುವುದು ನಿಯಮಾನುಸಾರ ಬದುಕುವ ಆಯ್ಕೆ ಮಾತ್ರ. ಒಬ್ಬನ ಬಳಿ ಕೇವಲ ಒಂದು ಆಯ್ಕೆ ಮಾತ್ರ ಉಳಿದಾಗ ಅದನ್ನು ಆಯ್ಕೆ ಎಂದು ಕರೆಯಲಿಕ್ಕಾಗುವುದಿಲ್ಲ. ಅದು ಅನಿವಾರ್ಯವಾಗಿ ಬಿಡುತ್ತದೆ. ಆದ್ದರಿಂದ ನಿಯಮಾನುಸಾರ ಬದುಕುವುದು ಮಾನವ ಜನ್ಮದ ಅನಿವಾರ್ಯತೆ ಎಂಬುದನ್ನು ಒಪ್ಪಿಮುಂದುವರಿಯುವುದೇ ಜಾಣತನ. 

ನಿಯಮಾನುಸಾರ ಬದುಕಬೇಕಾದ ಅನಿವಾರ್ಯತೆಯನ್ನು ಒಪ್ಪಿಕೊಂಡೊಡನೆ ಸಮಸ್ಯೆ ಮುಗಿದು ಬಿಡುವುದಿಲ್ಲ. ಒಬ್ಬ ವ್ಯಕ್ತಿ ತಾನು ನಿಯಮಾನುಸಾರ ಬದುಕಬೇಕು ಎಂದು ನಿರ್ಧರಿಸಿದ ಬಳಿಕವೂ ಬದುಕು ಯಾವ ನಿಯಮಗಳ ಅನುಸಾರವಿರಬೇಕು? ಎಷ್ಟು ನಿಯಮಬದ್ಧವಾಗಿರಬೇಕು? ಪ್ರಸ್ತುತ ನಿಯಮಗಳನ್ನು ನಿರ್ಧರಿಸುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳು ತಲೆದೋರುತ್ತವೆ. ಮಾತ್ರವಲ್ಲ, ಇಚ್ಛೆಗಳ ಅನುಷ್ಠಾನದ ಹಾದಿಯಲ್ಲಿ ಸಾವಿರ ಅಡೆ ತಡೆಗಳು ಇರುವಂತೆ ನಿಯಮಗಳ ಅನುಸರಣೆಯ ಮಾರ್ಗದಲ್ಲೂ ಸಾವಿರಾರು ತಡೆಗೋಡೆಗಳಿರುತ್ತವೆ. ತನ್ನ ಸುತ್ತ ಮುತ್ತ ಹಾಗೂ ಅಕ್ಕ ಪಕ್ಕದಲ್ಲಿರುವ ನೂರಾರು ನಿಯಮಗಳ ಪೈಕಿ ಸರಿಯಾದುದನ್ನು ಆರಿಸುವುದು ಒಂದು ಸವಾಲಾದರೆ ತಾನು ಆರಿಸಿಕೊಂಡ ನಿಯಮವನ್ನು ಪಾಲಿಸಲು ಹೊರಟಾಗ ಆಸುಪಾಸಿನ ಇತರ ನಿಯಮಗಳು, ಪರಂಪರೆ, ಸಂಪ್ರದಾಯಗಳು, ಸಾಮಾಜಿಕ ನಿರ್ಬಂಧಗಳು ಇತ್ಯಾದಿಗಳ ಕಡೆಯಿಂದ ಬರುವ ಅಡೆತಡೆಗಳನ್ನು ನಿಭಾಯಿಸುವುದು ಇನ್ನೊಂದು ಸವಾಲಾಗಿ ಬಿಡುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ ನಿಯಮದ ಉಲ್ಲಂಘನೆಗೆ ಸದಾ ಕಾತರಿಸುತ್ತಿರುವ ಮತ್ತು ನಿಯಮಗಳನ್ನು ಭೇದಿಸಿ ಹೊರನಡೆಯುವುದಕ್ಕೆ ಸಾವಿರ ದಾರಿಗಳನ್ನು ಕಂಡು ಕೊಳ್ಳುವ ಮನುಷ್ಯನೊಳಗಿನ, ಸ್ವತಃ ಅವನದೇ ಚಿತ್ತವನ್ನು ಹದ್ದು ಬಸ್ತಿನಲ್ಲಿಡುವುದು ಹೇಗೆ ಎಂಬುದು ಅತಿದೊಡ್ಡ ಸವಾಲಾಗಿ ಬಿಡುತ್ತದೆ. 

ಈ ಎಲ್ಲ ಸವಾಲುಗಳನ್ನು ಎದುರಿಸುವುದಕ್ಕೆ ವಿವಿಧ ರೀತಿಯಲ್ಲಿ ಮಾನವನಿಗೆ ನೆರವಾಗುವುದು ಮತ್ತು ಆ ನಿಟ್ಟಿನಲ್ಲಿ ಅವನನ್ನು ಸಂಪೂರ್ಣ ಸಜ್ಜುಗೊಳಿಸುವುದೇ ರಮಝಾನ್ ತಿಂಗಳ ಉದ್ದೇಶವಾಗಿದೆ. 

ಚಂದ್ರಮಾನ ಆಧಾರಿತ ಹಿಜರಿ ಕ್ಯಾಲೆಂಡರ್‌ನ 9ನೇ ಮಾಸದ ಹೆಸರು ರಮದಾನ್ ಅಥವಾ ರಮಝಾನ್. ಇದಕ್ಕೆ ಸುಡುವ ವಸ್ತು, ತೀವ್ರ ಬಿಸಿಲ ತಾಪಕ್ಕೆ ಬೆಂದುಹೋದ ವಸ್ತು ಎಂಬಿತ್ಯಾದಿ ಶಬ್ದಾರ್ಥಗಳಿವೆ. ಇದು ಜನರಿಂದ ಸತ್ಕರ್ಮಗಳನ್ನು ಮಾಡಿಸುವ ಮೂಲಕ ಅವರ ಪಾಪಗಳನ್ನು ಸುಟ್ಟುಹಾಕುವ ತಿಂಗಳಾದ್ದರಿಂದ ಇದನ್ನು ಈ ರೀತಿ ಕರೆಯಲಾಗುತ್ತದೆಂದು ಹಲವರು ವ್ಯಾಖ್ಯಾನಿಸಿದ್ದಾರೆ. ನಾವಿಲ್ಲಿ ರಮಝಾನ್ ತಿಂಗಳ ಕೆಲವು ನಿರ್ದಿಷ್ಟ ವಿಶೇಷತೆಗಳನ್ನು ಕ್ರಮವಾಗಿ ಚರ್ಚಿಸೋಣ:

ನಿಯಮಾನುಸಾರ ಬದುಕಬಯಸುವವರಿಗೆ ರಮಝಾನ್ ತಿಂಗಳ ಪ್ರಥಮ ಕೊಡುಗೆ - ಪವಿತ್ರ ಕುರ್‌ಆನ್ ಎಂಬ ಚೈತನ್ಯ ದಾಯಕ ಮಾರ್ಗದರ್ಶಿ ಗ್ರಂಥ. ಕುರ್‌ಆನ್ ಎಂಬ ಪದಕ್ಕೆ, ಪಠಣ, ಅಧ್ಯಯನ, ಸದಾ ಪಠಿಸಲಾಗುವ ಗ್ರಂಥ, ಪದೇ ಪದೇ ಪಠಿಸಲಾಗುವ ಗ್ರಂಥ ಇತ್ಯಾದಿ ಅರ್ಥಗಳಿವೆ. 

ಅದು, ನಿಯಮ ಬದ್ಧ ಬದುಕಿನ ಕುರಿತಂತೆ ಯಾರ ನಿಯಮ? ಯಾವ ನಿಯಮ? ಯಾಕೆ ನಿಯಮ? ಎಂಬಿತ್ಯಾದಿ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಗ್ರಂಥ. ಹಾಗೆಯೇ ಅದು ಸರ್ವ ಮಾನವರ ಮಾತ್ರವಲ್ಲ ಸರ್ವಲೋಕಗಳ, ಸರ್ವ ಜೀವಿ - ನಿರ್ಜೀವಿಗಳ, ಸೃಷ್ಟಿಕರ್ತ, ಪಾಲಕ ಮತ್ತು ಪೋಷಕನ ಕಡೆಯಿಂದ ಬಂದ ಸಂಹಿತೆ. ನಿಯಮಬದ್ಧ ಬದುಕಿಗೆ ಬೇಕಾದ ತಳಹದಿಗಳನ್ನು ಒದಗಿಸಿ, ಸರಳ ಮತ್ತು ಸಮಗ್ರವಾದ ಮಾರ್ಗ ದರ್ಶನ ಒದಗಿಸುವ ಗ್ರಂಥ. ಓದುಗರ ಅನುಕೂಲಕ್ಕಾಗಿ ಇದರಲ್ಲಿ 7 ಪರ್ವ (ಮ್ಯಾನ್ ಝಿಲ್)ಗಳು, 30 ಕಾಂಡ (ಜುಝು)ಗಳು, 114 ಅಧ್ಯಾಯ(ಸೂರಃ)ಗಳು, 540 ಪರಿಚ್ಛೇದ (ರುಕೂ)ಗಳು ಮತ್ತು ಆರು ಸಾವಿರಕ್ಕೂ ಮಿಕ್ಕಿ ದಿವ್ಯ ವಾಕ್ಯಗಳಿವೆ. ಇದರ ಪಠಣ ಯಾರ ಪಾಲಿಗೂ ನಿಷಿದ್ಧವಲ್ಲ. ‘ಹುದಲ್ಲಿನ್ನಾಸ್’ (ಎಲ್ಲ ಮಾನವರಿಗೆ ಮಾರ್ಗದರ್ಶಿ) ಎಂದು ತನ್ನನ್ನು ಪರಿಚಯಿಸುವ ಕುರ್‌ಆನ್ ಸದಾ ಎಲ್ಲರಿಗೆ ಮುಕ್ತವಾಗಿ ಲಭ್ಯವಿರುವ ಗ್ರಂಥ ಅದು. ಅದರಲ್ಲಿ ಆದೇಶಗಳಿವೆ, ಉಪದೇಶಗಳಿವೆ, ನಿಷೇಧಗಳ ಪಟ್ಟಿ ಇದೆ, ಇತಿಹಾಸವಿದೆ, ಎಚ್ಚರಿಕೆಗಳಿವೆ, ಉಪಮೆಗಳಿವೆ, ಪ್ರಕೃತಿಯ ಚಿತ್ರಣವಿದೆ ಮತ್ತು ಕುಟುಂಬ, ಸರಕಾರ, ನೆರೆಯವರು, ಸಮಾಜ ಇತ್ಯಾದಿ ಎಲ್ಲರ ಕುರಿತಾಗಿರುವ ಹಕ್ಕು-ಬಾಧ್ಯತೆಗಳ ವಿವರಗಳಿವೆ. ಪರಮಾರ್ಥ ಹಾಗೂ ಅಧ್ಯಾತ್ಮದ ಚರ್ಚೆ ಇದೆ. ಮುಖ್ಯವಾಗಿ ಮಾನವ ಬದುಕಿನ ಸಾಮಾಜಿಕ ಮತ್ತು ಆಧ್ಯಾತ್ಮಿಕ ಆಯಾಮಗಳ ಬಗ್ಗೆ ಕಣ್ಣು ತೆರೆಸುವ ಮಾಹಿತಿಗಳು ಇವೆ. ಕುರ್‌ಆನ್ ಎಷ್ಟು ಸರಳವೋ ಅಷ್ಟೇ ಪ್ರಾಯೋಗಿಕವಾಗಿದೆ. ಜನಸಾಮಾನ್ಯನಿಗೆ ಪಾಲಿಸಲಾಗದ ಯಾವ ಆದೇಶವೂ ಅದರಲ್ಲಿಲ್ಲ. ಪಾಲಿಸಲು ಸಾಧ್ಯವಿರುವಷ್ಟನ್ನು ಮಾತ್ರ ಪಾಲಿಸಿ ಎಂಬ ಉದಾರ ಸಮ್ಮತಿಯೂ ಇದೆ. ಇಹಲೋಕದ ಬದುಕನ್ನು ಒಂದು ತಾತ್ಕಾಲಿಕ ಪರೀಕ್ಷಾವಧಿ ಎಂದು ಪರಿಚಯಿಸುವ ಕುರ್‌ಆನ್, ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪಾಲಿಸಬೇಕಾದ ಸಂಹಿತೆಯೊಂದನ್ನು ಮುಂದಿಡುತ್ತದೆ. ಸೃಷ್ಟಿಕರ್ತನಿಗೆ ಮತ್ತು ಸೃಷ್ಟಿಗಳಿಗೆ ಸಂಬಂಧಿಸಿದಂತೆ ಮಾನವನಿಗೆ ಇರುವ ಹೊಣೆಗಾರಿಕೆಗಳನ್ನು ಅದು ಸವಿಸ್ತಾರವಾಗಿ ಪರಿಚಯಿಸುತ್ತದೆ. ಸಾವಿರ ಪಾಪಗಳನ್ನು ಮಾಡಿದ್ದರೂ ಸರಿದಾರಿಗೆ ಮರಳಲು ಮುಕ್ತ ಅವಕಾಶವಿದೆ ಎಂಬ ಆಶಾಜನಕ ಮಾಹಿತಿ ಇದೆ. ದೇವರನ್ನು ಸರಳವಾದ ಹಲವು ಗುಣಾನಾಮಗಳ ಮೂಲಕ ಪರಿಚಯಿಸಲಾಗಿದೆ. ಶಿಕ್ಷೆಯ ಬೆದರಿಕೆಯ ಜೊತೆ ಕ್ಷಮಾದಾನದ ಮತ್ತು ಶಾಶ್ವತ ಸುಖಜೀವನದ ಆಶ್ವಾಸನೆ ಇದೆ. ನಿರಾಶೆ ಹತಾಶೆಗಳನ್ನು ನೀಗಿಸಿ ಸಾಂತ್ವನ ನೀಡುತ್ತಾ ಆಶಾವಾದ ಚಿಗುರಿಸುವ, ಹೊಸ ಹುಮ್ಮಸ್ಸು ಮತ್ತು ಚೈತನ್ಯ ಒಗದಿಸುವ ಧಾಟಿ ಕುರ್‌ಆನ್‌ನ ಉದ್ದಕ್ಕೂ ಎದ್ದು ಕಾಣುತ್ತದೆ. 

ಕುರ್‌ಆನ್‌ನಲ್ಲಿ ಕಂಡು ಬರುವ ಅದರ ಕೆಲವು ಬಿರುದುಗಳು ಕುರ್‌ಆನ್‌ನ ಸ್ವರೂಪವನ್ನು ಮತ್ತು ಅದರ ಹಲವು ಆಯಾಮಗಳನ್ನು ಗ್ರಹಿಸುವುದಕ್ಕೆ ಬಹಳ ಸಹಾಯಕವಾಗಿವೆ. ಉದಾ;

ಕಿತಾಬ್ (ಗ್ರಂಥ), ಕಲಾಮ್ (ಮಾತು), ನೂರ್ (ಪ್ರಕಾಶ), ಹುದಾ (ಮಾರ್ಗದರ್ಶಿ), ರಹ್ಮಃ (ಅನುಗ್ರಹ), ಫುರ್ಕಾನ್ (ಸತ್ಯ-ಮಿಥ್ಯಗಳನ್ನು ಪ್ರತ್ಯೇಕಿಸಿ ಗುರುತಿಸಲು ನೆರವಾಗುವ ಒರೆಗಲ್ಲು), ಶಿಫಾ (ಉಪಶಮನ), ಮೌಯಿಝ (ಉಪದೇಶ), ಝಿಕ್ರ್ (ನೆನಪಿಸುವ ಗ್ರಂಥ), ಕರೀಮ್ (ಗೌರವಾನ್ವಿತ), ಅಲೀ (ಶ್ರೇಷ್ಠ), ಹಿಕ್ಮಃ (ಯುಕ್ತಿಪೂರ್ಣ), ಹಕೀಮ್ (ಯುಕ್ತಿವಂತ), ಮುಬಾರಕ್ (ಪಾವನ), ಹಬ್ಲ್ (ಆಧಾರ ಪಾಶ), ಅಸ್ಸಿರಾತ್ ಅಲ್ ಮುಸ್ತಕೀಮ್ (ನೇರ ಮಾರ್ಗ), ಅಲ್ ಖಯ್ಯಿಮ್ (ನೇರ), ಫಸ್ಲ್ (ಖಚಿತವಾದ ಅಂತಿಮ ತೀರ್ಪು ತಿಳಿಸುವ), ಅಹಸನ್ ಅಲ್ ಹದೀಸ್ (ಅತ್ಯುತ್ತಮ ಹೇಳಿಕೆ, ಮಾತು), ತನ್‌ಝೀಲ್ (ಮೇಲಿಂದ ಇಳಿಸಿಕೊಡಲಾದ), ರೂಹ್ (ಚೇತನ), ವಹ್ಯ್ (ಪ್ರಣೀತ), ಅಲ್ ಮಸಾನೀ (ಆವರ್ತಿತ), ಕ್ಹೌಲ್ (ವಚನ), ಬಸಾಯಿರ್ (ಕಣ್ತೆರೆಸುವ ನಿದರ್ಶನ), ಬಯಾನ್ (ಪ್ರಕಟಣೆ), ಇಲ್ಮ್ (ಜ್ಞಾನ), ಬಲಾಗ್ (ಸ್ಪಷ್ಟ ಸಂದೇಶ), ಹಖ್ (ಸತ್ಯ), ಅಲ್ ಹಾದಿ (ದಾರಿ ತೋರಿಸುವ), ಅಜಬ್ (ವಿಸ್ಮಯಕಾರಿ), ತಜ್ಕಿರಃ (ಜ್ಞಾಪಿಸುವ), ಅಲ್ ಉರ್ವತುಲ್ ಉಸ್ಕಾ (ಬಲಿಷ್ಠ ಆಧಾರ), ಸಿದ್ಕ್ (ಸತ್ಯ), ಅದ್ಲ್ (ನ್ಯಾಯ), ಈಮಾನ್ (ವಿಶ್ವಾಸ), ಅಮ್ರ್ (ಆದೇಶ), ಬುಶ್ರಾ (ಸುವಾರ್ತೆ), ಮುಬೀನ್ (ಸುಸ್ಪಷ್ಟ), ಮುತಹ್ಹರಃ (ಪರಿಶುದ್ಧ, ನಿರ್ಮಲ), ಮುಕರ‌್ರಮ್ (ಆದರಣೀಯ)..... 

ರಮಝಾನ್ ತಿಂಗಳ ಎರಡನೇ ಕೊಡುಗೆಯೇನೆಂದರೆ ಕುರ್‌ಆನ್ ಎಂಬ ಸಮಗ್ರ ನೀತಿ ಸಂಹಿತೆ ಬಂದ ಈ ತಿಂಗಳನ್ನೇ ಕಠಿಣ ತರಬೇತಿಯ ತಿಂಗಳಾಗಿ ಬಳಸಲಾಗಿದೆ. ನಿಯಮಾನುಸಾರವಾದ, ತತ್ವಬದ್ಧ, ಶಿಸ್ತುಪೂರ್ಣ ಬದುಕೆಂದರೆ ಅದು ಸ್ವೇಚ್ಛಾಚಾರದ ಉಂಡಾಡಿಬದುಕಿನಂತಲ್ಲ. ಅದಕ್ಕೆ ಜ್ಞಾನ, ವಿಶ್ವಾಸ, ಶ್ರದ್ಧೆ, ಸ್ಪಷ್ಟತೆ, ಬದ್ಧತೆ, ಸಹನೆ, ಶಿಸ್ತು, ಸಂಯಮ, ಸ್ಥಿರತೆ, ದೂರದೃಷ್ಟಿ, ತ್ಯಾಗ ಮನೋಭಾವ, ಔದಾರ್ಯ, ಕ್ಷಮಾಶೀಲತೆ, ವಿನಯ, ಸೌಜನ್ಯ ಮುಂತಾದ ಕೆಲವು ವಿಶೇಷ ಗುಣ ಸಾಮರ್ಥ್ಯಗಳ ಅಗತ್ಯವಿರುತ್ತದೆ. ಈ ಗುಣ ಸಾಮರ್ಥ್ಯಗಳನ್ನು ಚಾರಿತ್ರ್ಯದ ಅವಿಭಾಜ್ಯ ಅಂಗಗಳಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಪ್ರಸ್ತುತ ಗುಣಗಳೆಲ್ಲಾ ನಿತ್ಯದ ಮಾತ್ರವಲ್ಲ, ಅನುಕ್ಷಣದ, ಎಂದೂ ಅಗಲಿಹೋಗದ ಸಂಗಾತಿಗಳಾಗಿ ಸದಾ ತಮ್ಮ ಜೊತೆ, ತಮ್ಮೊಳಗೆ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಅದು ಸುಲಭದ ಕೆಲಸವೇನಲ್ಲ. ಬಹಳಷ್ಟು ಶಿಕ್ಷಣ, ತರಬೇತಿ, ಸತತ ಪುನರಾವರ್ತನೆ ಮತ್ತು ಕಠಿಣ ಅಭ್ಯಾಸ ಅದಕ್ಕೆ ಅನಿವಾರ್ಯವಾಗಿದೆ. ಕುರ್‌ಆನ್ ಅನಾವರಣಗೊಂಡ ರಮಝಾನ್ ತಿಂಗಳಲ್ಲಿ, ಕುರ್‌ಆನ್ ಪ್ರತಿಪಾದಿಸುವ ಆದರ್ಶ ಬದುಕನ್ನು ಬದುಕಲು ಬಯಸುವವರಿಗಾಗಿ, ಆ ನಿಟ್ಟಿನಲ್ಲಿ ಸಹಾಯಕವಾಗುವಂತಹ ಒಂದು ಸಮಗ್ರ ತರಬೇತಿ ಕಾರ್ಯಕ್ರಮವನ್ನು ಒದಗಿಸಲಾಗಿದೆ. 

ಪ್ರಸ್ತುತ ತರಬೇತಿಯ ಅತ್ಯಂತ ಪ್ರಧಾನ ಅಂಗ ‘ಸೌಮ್’ ಅಥವಾ ಪ್ರಾತಃ ಪೂರ್ವಕಾಲದಿಂದ ಸಂಪೂರ್ಣ ಸೂರ್ಯಾಸ್ತಮಾನದ ವರೆಗಿನ ಉಪವಾಸ. ಇದು ಸಾಂಕೇತಿಕವೇನಲ್ಲ. ಭಾರತದಲ್ಲಿ ಹೆಚ್ಚಿನೆಡೆ ರಮಝಾನ್ ತಿಂಗಳು ಚಳಿಗಾಲದಲ್ಲಿ ಬಂದರೆ ಉಪವಾಸ ಸುಮಾರು 13 ಗಂಟೆಗಳಷ್ಟು ಮತ್ತು ಬೇಸಿಗೆಯಲ್ಲಾದರೆ ಸುಮಾರು 14 ಗಂಟೆಗಳಷ್ಟು ದೀರ್ಘವಾಗಿರುತ್ತದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಆಹಾರ-ಪಾನೀಯಗಳ ಸೇವನೆ ನಿಷಿದ್ಧ. ಈ ರೀತಿಯ ಉಪವಾಸವನ್ನು ರಮಝಾನ್ ತಿಂಗಳುದ್ದಕ್ಕೂ ನಿತ್ಯ ಆಚರಿಸಬೇಕು. ಜೊತೆಗೆ ಇತರ ದಿನಗಳಲ್ಲಿ ನಿತ್ಯ ಪಾಲಿಸಬೇಕಾದ ಹಲವಾರು ನೈತಿಕ ನಿಯಮಗಳನ್ನು ಮತ್ತು ಧಾರ್ಮಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಕರ್ತವ್ಯಗಳನ್ನು ರಮಝಾನ್ ತಿಂಗಳಲ್ಲಿ ನೂರಾರು ಪಟ್ಟು ಹೆಚ್ಚು ಕಟ್ಟುನಿಟ್ಟಿನೊಂದಿಗೆ ಪಾಲಿಸಬೇಕು. ಮೂಲತಃ ಉಪವಾಸವೆಂಬುದು, ದೇವರು ತಮಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಅವನಿಗೆ ಕೃತಜ್ಞತೆ ಸಲ್ಲಿಸುವ ಕ್ರಿಯೆಯಾಗಿದೆ. ಈ ಕ್ರಿಯೆಯನ್ನೇ, ಮಾರ್ಗದರ್ಶನವನ್ನು ಅನುಸರಿಸುತ್ತ ಬದುಕುವುದಕ್ಕೆ ಬೇಕಾದ ಸನ್ನದ್ಧತೆಯನ್ನು ಬೆಳೆಸುವ ಕ್ರಿಯೆಯಾಗಿ ಬಳಸಲಾಗಿದೆ. ಆದ್ದರಿಂದಲೇ ಉಪವಾಸಿಗನು ಕೇವಲ ಅನ್ನ ನೀರು ತ್ಯಜಿಸಿದರೆ ಸಾಲದು, ತನ್ನ ದೃಷ್ಟಿ, ಶ್ರವಣ ಮತ್ತು ಮಾತುಗಳ ಮೇಲೂ ಹತೋಟಿ ಇಟ್ಟುಕೊಳ್ಳಬೇಕಾಗುತ್ತದೆ. 

ಕುರ್‌ಆನ್‌ನಲ್ಲಿ ಉಪವಾಸದ ಆದೇಶ ನೀಡುವ ಜೊತೆಗೆ, ಇದು ಹೊಸ ಬಗೆಯ ಆಚರಣೆಯೇನಲ್ಲ, ಈ ಹಿಂದೆ ಧರ್ಮದ ಪೂರ್ವ ಆವೃತ್ತಿಗಳಲ್ಲಿ ಇದ್ದ ಆಚರಣೆಯ ಮುಂದುವರಿಕೆ ಮಾತ್ರವಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. (2:183) 

ನಿಜವಾಗಿ, ಯಾವುದಾದರೂ ನಿಯಮ ಅಥವಾ ಸಂಹಿತೆಯನ್ನು ಮಾನವರ ಮುಂದಿಟ್ಟು ಅದನ್ನು ಅವರು ಪಾಲಿಸಬೇಕೆಂದು ಉಪದೇಶಿಸುವ ಎಲ್ಲ ಧರ್ಮ ಮತ್ತು ಪಂಥಗಳಲ್ಲಿ ಉಪವಾಸದ ಆಚರಣೆ ಇದೆ. ಕ್ರೈಸ್ತ ಮತ್ತು ಯೆಹೂದಿ ಧರ್ಮಗಳಲ್ಲಿ ಮಾತ್ರವಲ್ಲ ವೈದಿಕ, ಬೌದ್ಧ ಮತ್ತು ಜೈನ ಧರ್ಮಗಳಲ್ಲೂ ಉಪವಾಸ ಒಂದು ಮಹತ್ವದ ಆಚರಣೆಯಾಗಿದೆ. ಎಲ್ಲೆಡೆಯೂ ಅದನ್ನು ಅಂತರ್ಮುಖಿ ಚಿಂತನೆ, ಆತ್ಮಾವಲೋಕನ, ಆತ್ಮ ಸಂಸ್ಕರಣೆ ಮತ್ತು ಆಧ್ಯಾತ್ಮಿಕ ಔನ್ನತ್ಯ ಸಾಧಿಸುವ ಉಪಾಧಿಯೆಂದು ಪರಿಗಣಿಸಲಾಗಿದೆ. ಉಪವಾಸಕ್ಕೆ ಸಂಬಂಧಿಸಿದ ನಿಬಂಧನೆಗಳು ವಿವಿಧ ಸಮಾಜಗಳಲ್ಲಿ ಭಿನ್ನವಾಗಿರಬಹುದು. ಆದರೆ ಅದರ ಉದ್ದೇಶ ಬಹುತೇಕ ಎಲ್ಲೆಡೆಯೂ ಸಮಾನವಾಗಿದೆ. ಚಿತ್ತವನ್ನು ಮಣಿಸಬೇಕು ಎಂಬುದೇ ಆ ಸಮಾನ ಉದ್ದೇಶ. ಒಬ್ಬ ವ್ಯಕ್ತಿ  ಒಂದು ನಿರ್ದಿಷ್ಟ ಸಂಹಿತೆಯನ್ನು ಒಪ್ಪಿಅದಕ್ಕೆ ನಿಷ್ಠವಾಗಿ ಬದುಕಲು ಹೊರಟಾಗ ಪ್ರಥಮವಾಗಿ ಅವನು ತನ್ನ ಚಿತ್ತದ ವಿರುದ್ಧ ಘರ್ಷಣೆಗೆ ಇಳಿಯ ಬೇಕಾಗುತ್ತದೆ. ಯಾಕೆಂದರೆ ಚಿತ್ತವೆಂಬುದು ಸ್ವಭಾವತಃ ನಿರಂಕುಶವಾದಿ. ಅದಕ್ಕೆ ಯಾವುದೇ ಕಟ್ಟುಪಾಡುಗಳು ಜೀರ್ಣವಾಗುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವ ಒಲವು ಚಿತ್ತದ ಅವಿಭಾಜ್ಯ ಸ್ವಭಾವವಾಗಿರುತ್ತದೆ. 

ಉಪವಾಸ ಆಚರಿಸುವವನು ಕೇವಲ ಕೊಬ್ಬು ವಿಸರ್ಜನೆ, ಸಂಪ್ರದಾಯ ಪಾಲನೆ ಅಥವಾ ಪುಣ್ಯ ಸಂಪಾದನೆಯನ್ನಷ್ಟೇ ಉದ್ದೇಶಿಸುವ ಬದಲು ಚಿತ್ತವನ್ನು ಮಣಿಸುವ ಹೊಣೆಯ ಬಗ್ಗೆ ಜಾಗೃತನಾಗಿದ್ದರೆ ಉಪವಾಸವು ಅವನ ಪಾಲಿಗೆ ಚಿತ್ತವನ್ನು ಕಟ್ಟಿಡುವ ಅತ್ಯಂತ ಪರಿಣಾಮಕಾರಿ ಸಾಧನವಾಗಿ ಬಿಡುತ್ತದೆ. ಉಪವಾಸದ ವೇಳೆ ಚಿತ್ತವು ಆಹಾರ ಪಾನೀಯಗಳ ಸೇವನೆಗೆ ಪದೇ ಪದೇ ಪ್ರಚೋದಿಸುತ್ತಿರುತ್ತದೆ. ಚಿತ್ತ ನಿಷ್ಠನಲ್ಲದ ಉಪವಾಸಿಗನು ಪ್ರತಿಬಾರಿಯೂ ಚಿತ್ತದ ಪ್ರಚೋದನೆಯನ್ನು ಪ್ರತಿರೋಧಿಸಿ, ಅದರ ಆದೇಶಗಳನ್ನು ಉಲ್ಲಂಘಿಸುವ ಮೂಲಕ ತನ್ನ ದೇವನಿಷ್ಠೆ ಹಾಗೂ ತತ್ವ ನಿಷ್ಠೆಯನ್ನು ಉಳಿಸಿಕೊಳ್ಳುತ್ತಾನೆ. ಈ ಪ್ರಕ್ರಿಯೆ ಪ್ರತಿದಿನ ಹಲವು ಬಾರಿ ನಡೆಯುತ್ತದೆ ಮತ್ತು ಸತತ ಒಂದು ತಿಂಗಳ ತನಕ ನಿತ್ಯ ನಡೆಯುತ್ತಿರುತ್ತದೆ. ಈ ಮೂಲಕ ಚಿತ್ತವನ್ನು ಪ್ರತಿರೋಧಿಸುವ ಅಭ್ಯಾಸ ಉಂಟಾಗುತ್ತದೆ. 

ಇದೆಲ್ಲಾ, ಉಪವಾಸದ ಒಂದು ಭಾಗ ಮಾತ್ರ. ರಮಝಾನ್ ತಿಂಗಳಲ್ಲಿ ಕೇವಲ ಹಸಿವು, ದಾಹಗಳನ್ನು ಸಹಿಸುವ ತರಬೇತಿ ಮಾತ್ರವಲ್ಲ, ಬುದ್ಧಿ, ಮನಸ್ಸುಗಳ ಸಹಿತ ದೇಹದ ಎಲ್ಲ ಅವಯವಗಳನ್ನು ಚಿತ್ತದ ದಾಸ್ಯದಿಂದ ಬಿಡಿಸಿ ಅವುಗಳನ್ನು ಸತ್ಯ ನಿಷ್ಠೆ ಹಾಗೂ ತತ್ವನಿಷ್ಠೆಗೆ ಒಗ್ಗಿಸುವ ತರಬೇತಿಯನ್ನೂ ಒದಗಿಸಲಾಗುತ್ತದೆ. ಹಸಿವು, ದಾಹಗಳ ಮೂಲಕ ಮಾತ್ರವಲ್ಲದೆ ಮೌನ, ಏಕಾಂತ, ಜಾಗರಣೆ, ಪಠಣ, ಅಧ್ಯಯನ, ಆಲಿಕೆಗಳ ಮೂಲಕವೂ ಇಂದ್ರಿಯಗಳ ನಿಯಂತ್ರಣದ ತರಬೇತಿ ನೀಡಲಾಗುತ್ತದೆ. ಏಕಾಂತದಲ್ಲಿ ಒಂದಷ್ಟು ಆತ್ಮಾವಲೋಕನ, ಪಶ್ಚಾತ್ತಾಪ, ತಪ್ಪೊಪ್ಪಿಗೆ, ಚಿಂತನೆ, ದೇವನಾಮಗಳ ಧ್ಯಾನ ಮತ್ತು ಜಪ ಇತ್ಯಾದಿ ಚಟುವಟಿಕೆಗಳಲ್ಲಿ ಜನರು ಮಗ್ನರಾಗಿರುತ್ತಾರೆ. ಹಾಗೆಯೇ ನಿತ್ಯ 5 ಹೊತ್ತು ಸಾಮೂಹಿಕ ನಮಾಝ್‌ನಲ್ಲಿ ಭಾಗವಹಿಸುವ ಜನರು ಕಡ್ಡಾಯ ನಮಾಝ್ ಸಲ್ಲಿಸುವ ಜೊತೆ ಹೆಚ್ಚುವರಿ ಐಚ್ಛಿಕ ನಮಾಝ್‌ಗಳಲ್ಲೂ ನಿರತರಾಗಿರುತ್ತಾರೆ. ಒಟ್ಟಿನಲ್ಲಿ ಕೆಡುಕನ್ನು ಕಾಣಬೇಡ, ಕೇಳಬೇಡ ಮತ್ತು ಆಲಿಸಬೇಡ ಎಂಬ ಧೋರಣೆಯನ್ನು  ಪಾಲಿಸುವ ಸಾಮೂಹಿಕ ಶ್ರಮವೊಂದು ರಮಝಾನ್ ತಿಂಗಳಲ್ಲಿ ನಡೆಯುತ್ತದೆ. ರಮಝಾನ್ ತಿಂಗಳಲ್ಲಿ ನಡೆಸುವ ದಾನ ಧರ್ಮ, ಅರಾಧನಾಕರ್ಮ, ಜನ ಸೇವಾ ಚಟುವಟಿಕೆ ಇತ್ಯಾದಿ ವಿವಿಧ ಸತ್ಕಾರ್ಯಗಳಿಗೆ, ವರ್ಷದ ಇತರ ದಿನಗಳಲ್ಲಿ ಸಿಗುವುದಕ್ಕಿಂತ ಹತ್ತಾರು ಪಟ್ಟು ಅಧಿಕ ಪುಣ್ಯ ಮತ್ತು ಪ್ರತಿಫಲ ಸಿಗುತ್ತದೆಂಬ ಸುವಾರ್ತೆಯ ಮೂಲಕ ಈ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಎಲ್ಲ ಬಗೆಯ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಲಾಗಿದೆ. 

ರಮಝಾನ್ ತಿಂಗಳ ಮೂರನೇ ಪ್ರಮುಖ ಕೊಡುಗೆ, ತಮ್ಮ ಬದುಕನ್ನು ತಿದ್ದಿಕೊಳ್ಳಲು, ಸಂಸ್ಕರಿಸಲು ಬಯಸುವವರಿಗಾಗಿ ಅದು ಸಮಾಜದಲ್ಲಿ ಒಂದು ಪೂರಕ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ಈ ಮಾಸದಲ್ಲಿ ಉಪವಾಸಿಗರ ಮುಖ್ಯ ಗುರಿ, ಇದೇ ತಿಂಗಳಲ್ಲಿ ಬಂದ ಕುರ್‌ಆನ್ ಎಂಬ ದಿವ್ಯ ಮಾರ್ಗದರ್ಶನವನ್ನು ಓದಿ, ಅರಿತು, ಅಂಗೀಕರಿಸಿ ಅದನ್ನೇ ವಿಶ್ವಾಸ, ಚಾರಿತ್ರ್ಯ ಮತ್ತು ಬದುಕಿನ ಹಾದಿಯಾಗಿ ಅಳವಡಿಸಿಕೊಳ್ಳಲು ಶ್ರಮಿಸುವುದಾಗಿರುತ್ತದೆ. ಅದಕ್ಕಾಗಿ ಚಿತ್ತವನ್ನು ಮಣಿಸುವ, ಆತ್ಮಾವಲೋಕನ ಮತ್ತು ಪಶ್ಚಾತ್ತಾಪದ ಮೂಲಕ ಗತ ಪಾಪಗಳ ಹೊರೆಯಿಂದ ಮುಕ್ತರಾಗಿ ಹೊಸ ಹುಮ್ಮಸ್ಸಿನಿಂದ ಸನ್ಮಾರ್ಗ ನಿಷ್ಠ ಬದುಕು ಆರಂಭಿಸುವ ಶ್ರಮ ನಡೆಯುತ್ತದೆ. ಈ ಶ್ರಮ ಎಲ್ಲೋ ಮೂಲೆಯಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ನಡೆಸುವ ಶ್ರಮವಾಗಿರುವುದಿಲ್ಲ. ಸಂಪೂರ್ಣ ಮುಸ್ಲಿಮ್ ಸಮಾಜವೇ ಈ ಕಾರ್ಯದಲ್ಲಿ ತೊಡಗಿರುತ್ತದೆ. ಜಗತ್ತಿನೆಲ್ಲೆಡೆ ರಮಝಾನ್ ತಿಂಗಳ ಜೊತೆ ಮುಸ್ಲಿಮ್ ಸಮಾಜಕ್ಕೆ ವಿಶೇಷ ಭಾವನಾತ್ಮಕ ಸಂಬಂಧವಿದೆ. ಮಕ್ಕಳು, ಮಹಿಳೆಯರು ಸೇರಿದಂತೆ ಸಮುದಾಯದ ಎಲ್ಲ ಸದಸ್ಯರು ರಮಝಾನ್ ತಿಂಗಳ ಆಗಮನಕ್ಕಾಗಿ ಹಲವು ದಿನಗಳ ಮುನ್ನವೇ ಕಾತರದಿಂದ ಕಾಯಲಾರಂಭಿಸುತ್ತಾರೆ. ಅದಕ್ಕಾಗಿ ಸಿದ್ಧತೆ ನಡೆಸುತ್ತಾರೆ. ಅದು ಬಂದಾಗ ಭಾರೀ ಉತ್ಸಾಹದಿಂದ ಅದನ್ನು ಸ್ವಾಗತಿಸುತ್ತಾರೆ. 

ರಮಝಾನ್ ತಿಂಗಳಲ್ಲಿ ಮುಸ್ಲಿಮ್ ಸಮಾಜದ ಹೆಚ್ಚಿನೆಲ್ಲಾ ಸದಸ್ಯರು ಉಪವಾಸ ಆಚರಿಸುತ್ತಾರೆ. ಕೆಲವರು ಕೇವಲ ಔಪಚಾರಿಕವಾಗಿ ಪುಣ್ಯ ಸಂಪಾದನೆಯ ಸಂಕಲ್ಪದೊಂದಿಗೆ ಕುರ್‌ಆನ್ ಪಠಿಸುತ್ತಾರೆ. ಕೆಲವರು ಕನಿಷ್ಠ ದಿನಕ್ಕೊಂದು ಕಾಂಡವನ್ನು ಓದಿ ತಿಂಗಳೊಳಗೆ ಪೂರ್ಣ ಕುರ್‌ಆನ್ ಓದಿ ಮುಗಿಸುತ್ತಾರೆ. ಹಲವರು ಸಣ್ಣ ತಂಡಗಳನ್ನು ರಚಿಸಿಕೊಂಡು ತಜ್ಞರ ಮಾರ್ಗದರ್ಶನದಲ್ಲಿ ಕುರ್‌ಆನ್‌ನ ಅರ್ಥ ವ್ಯಾಖ್ಯಾನಗಳ ಅಧ್ಯಯನ ನಡೆಸುತ್ತಾರೆ. ವರ್ಷಾದ್ಯಂತ ಧರ್ಮದಿಂದ ದೂರ ಉಳಿದಿದ್ದವರು ರಮಝಾನ್ ಬಂತೆಂದರೆ ಧಾರ್ಮಿಕರಾಗಿ ಬಿಡುತ್ತಾರೆ. ಸಾಮಾನ್ಯವಾಗಿ ಮಸೀದಿಗಳಿಂದ ದೂರ ಇರುವವರು ಈ ತಿಂಗಳಲ್ಲಿ ಮಸೀದಿಗಳಲ್ಲಿ ಕಂಡು ಬರುತ್ತಾರೆ. ಎಲ್ಲೆಡೆ ಉಪದೇಶ, ಪ್ರವಚನ ಇತ್ಯಾದಿಗಳು ನಡೆಯುತ್ತಿರುತ್ತವೆ. ಜನರು ಪರಸ್ಪರರಿಗೆ ಸತ್ಯ, ನ್ಯಾಯ, ಸೌಜನ್ಯ, ಔದಾರ್ಯಗಳ ಪಾಠ ಹೇಳುತ್ತಿರುತ್ತಾರೆ. ಜನರಿಗೆ ಅವರ ಸಾಮಾಜಿಕ, ಆಧ್ಯಾತ್ಮಿಕ ಕರ್ತವ್ಯಗಳನ್ನು ನೆನಪಿಸಲಾಗುತ್ತದೆ. ಎಷ್ಟೋ ಮಂದಿ ಗಂಟೆಗಟ್ಟಲೆ ಆರಾಧನಾ ಕರ್ಮಗಳಲ್ಲಿ ನಿರತರಾಗಿರುತ್ತಾರೆ. ರಾತ್ರಿ ಸುಮಾರು 60ರಿಂದ 90 ನಿಮಿಷಗಳವರೆಗೆ ನಡೆಯುವ ‘ತರಾವೀಹ್’ ಎಂಬ ವಿಶೇಷ ಐಚ್ಛಿಕ ಸಾಮೂಹಿಕ ನಮಾಝ್‌ನಲ್ಲಿ ಪಾಲುಗೊಳ್ಳುತ್ತಾರೆ. ಕೆಲವರು ಪ್ರಾತಃ ಪೂರ್ವದಲ್ಲಿ ಸುಮಾರು 3 ಗಂಟೆಯ ಹೊತ್ತಿಗೆ ಒಂಟಿಯಾಗಿ ಅಥವಾ ಕುಟುಂಬ ಸಹಿತ ‘ಖಿಯಾಮುಲ್ಲೈಲ್’ ಅಥವಾ ‘ತಹಜ್ಜುದ್’ ನಮಾಝ್‌ನಲ್ಲಿ ತೊಡಗುತ್ತಾರೆ. 

ರಮಝಾನ್‌ನಲ್ಲಿ ತರಬೇತಿಯ ಭಾಗವಾಗಿ, ಸಾಮಾನ್ಯವಾಗಿ ಉಣ್ಣುವ ಸಮಯಗಳಲ್ಲಿ ಆಹಾರ ಬಿಟ್ಟು ಉಪವಾಸವಿರಬೇಕಾಗುತ್ತದೆ ಮತ್ತು ಸಾಮಾನ್ಯವಾಗಿ ನಿದ್ರಿಸುವ ಸಮಯದಲ್ಲಿ ನಿದ್ದೆ ಬಿಟ್ಟು ಆಹಾರ ಸೇವಿಸಬೇಕಾಗುತ್ತದೆ. ಉಪವಾಸ ಸಾರ್ಥಕವಾಗಬೇಕಿದ್ದರೆ ಕೇವಲ ಅನ್ನ, ನೀರು, ನಿದ್ದೆಗಳನ್ನು ತ್ಯಜಿಸಿದರೆ ಸಾಲದು. ಬಹಳ ಕಟ್ಟುನಿಟ್ಟಾಗಿ ಕಣ್ಣು, ಬಾಯಿ ಮತ್ತು ಮನಸ್ಸನ್ನು ಕೂಡ ಎಲ್ಲ ಬಗೆಯ ಅಕ್ರಮ, ಅನೈತಿಕ ಮತ್ತು ಅಶ್ಲೀಲ ಆಲೋಚನೆ, ಮಾತು, ದೃಶ್ಯ, ಶ್ರವಣ ಮತ್ತು ಚಟುವಟಿಕೆಗಳಿಂದ ದೂರ ಉಳಿದಿರಬೇಕಾಗುತ್ತದೆ. ಕಿಂಚಿತ್ತಾದರೂ ಧಾರ್ಮಿಕ ಪ್ರಜ್ಞೆ ಇರುವವರ ಮುಂದೆ ಯಾರಾದರೂ ಇನ್ನೊಬ್ಬರನ್ನು ದೂಷಿಸುವ ಮಾತುಗಳನ್ನಾಡಿದರೆ ಅವರು ಪ್ರವಾದಿ ವಚನಗಳನ್ನು ಉದ್ಧರಿಸಿ, ‘‘ಅಣ್ಣಾ, ನೀವು ಈ ರೀತಿಯ ಮಾತುಗಳನ್ನಾಡುವುದಾದರೆ ಸುಮ್ಮನೆ ಅನ್ನ ನೀರು ತ್ಯಜಿಸಿ ಕಷ್ಟ ಪಡಬೇಡಿ. ಉಪವಾಸ ಬಿಟ್ಟು ಬಿಡಿ. ಇಂತಹ ಉಪವಾಸದಿಂದ ನಿಮಗೆ ಯಾವ ಲಾಭವೂ ಇಲ್ಲ’’ ಎಂದು ಎಚ್ಚರಿಸುತ್ತಾರೆ.   

ಈ ತಿಂಗಳಲ್ಲಿ ಜನರು ದೇವರ ಜೊತೆಗಿನ ಸಂಬಂಧವನ್ನು ಮಾತ್ರವಲ್ಲ, ಸಹಜೀವಿಗಳ ಜೊತೆಗಿನ ತಮ್ಮ ಸಂಬಂಧಗಳನ್ನೂ ಸುಧಾರಿಸಿಕೊಳ್ಳುತ್ತಾರೆ. ಯಾರಿಂದಾದರೂ ಸಾಲ ಪಡೆದು ಪಾವತಿಸಿಲ್ಲದವರು ಈ ತಿಂಗಳಲ್ಲಿ ಅದನ್ನು ಪಾವತಿಸುತ್ತಾರೆ. ಎಷ್ಟೋ ಮಂದಿ ತಮ್ಮಿಂದ ಸಾಲ ಪಡೆದವರು ಸಂಕಷ್ಟದಲ್ಲಿದ್ದರೆ ಅವರ ಸಾಲವನ್ನು ಕ್ಷಮಿಸಿ ಬಿಡುತ್ತಾರೆ. ಇದು ದೇವರ ಬಳಿ ಕ್ಷಮೆ ಯಾಚಿಸುವ ಮತ್ತು ದೇವರಿಂದ ಕ್ಷಮೆಯನ್ನು ನಿರೀಕ್ಷಿಸುವ ತಿಂಗಳು. ಯಾರಿಗಾದರೂ ಬೈದಿದ್ದರೆ, ಯಾರನ್ನಾದರೂ ನಿಂದಿಸಿದ್ದರೆ ಅಥವಾ ಬೇರೇನಾದರೂ ಅನ್ಯಾಯ ಮಾಡಿದ್ದರೆ ಸಂಕೋಚಬಿಟ್ಟು ಅವರ ಬಳಿ ಹೋಗಿ ಕ್ಷಮೆ ಕೇಳುತ್ತಾರೆ. ವರ್ಷವಿಡೀ ಜಿಪುಣರಾಗಿದ್ದವರು ಕೂಡಾ ಈ ತಿಂಗಳು ಬಂತೆಂದರೆ ಉದಾರಿಗಳಾಗಿ ಬಿಡುತ್ತಾರೆ. ಝಕಾತ್ (ಕಡ್ಡಾಯ ದಾನ) ಮತ್ತು ಸದಕಃ (ಐಚ್ಛಿಕ ದಾನ) ಪಾವತಿಸುತ್ತಾರೆ. ಎಷ್ಟೋ ಮಂದಿಯ ಬದುಕು ಶಾಶ್ವತವಾಗಿ ಬದಲಾಗುವುದಕ್ಕೆ, ಶಿಸ್ತು ಬದ್ಧವಾಗುವುದಕ್ಕೆ, ದುಶ್ಚಟಗಳಿಂದ ಮುಕ್ತವಾಗುವುದಕ್ಕೆ ಮತ್ತು ಸಮಾಜದ ಬಗ್ಗೆ ಹೆಚ್ಚು ಸಂವೇದನಾಶೀಲವಾಗುವುದಕ್ಕೆ ಈ ತಿಂಗಳು ನೆಪವಾಗುತ್ತದೆ.

ರಮಝಾನ್‌ನಲ್ಲಿ ತರಬೇತಿಯ ಭಾಗವಾಗಿ, ಸಾಮಾನ್ಯವಾಗಿ ಉಣ್ಣುವ ಸಮಯಗಳಲ್ಲಿ ಆಹಾರ ಬಿಟ್ಟು ಉಪವಾಸವಿರಬೇಕಾಗುತ್ತದೆ ಮತ್ತು ಸಾಮಾನ್ಯವಾಗಿ ನಿದ್ರಿಸುವ ಸಮಯದಲ್ಲಿ ನಿದ್ದೆ ಬಿಟ್ಟು ಆಹಾರ ಸೇವಿಸಬೇಕಾಗುತ್ತದೆ. ಉಪವಾಸ ಸಾರ್ಥಕವಾಗಬೇಕಿದ್ದರೆ ಕೇವಲ ಅನ್ನ, ನೀರು, ನಿದ್ದೆಗಳನ್ನು ತ್ಯಜಿಸಿದರೆ ಸಾಲದು. ಬಹಳ ಕಟ್ಟುನಿಟ್ಟಾಗಿ ಕಣ್ಣು, ಬಾಯಿ ಮತ್ತು ಮನಸ್ಸನ್ನು ಕೂಡ ಎಲ್ಲ ಬಗೆಯ ಅಕ್ರಮ, ಅನೈತಿಕ ಮತ್ತು ಅಶ್ಲೀಲ ಆಲೋಚನೆ, ಮಾತು, ದೃಶ್ಯ, ಶ್ರವಣ ಮತ್ತು ಚಟುವಟಿಕೆಗಳಿಂದ ದೂರ ಉಳಿದಿರಬೇಕಾಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top