-

ತಿರುಗುಬಾಣವಾದ ಉರಿಗೌಡನ ಟೂಲ್‌ಕಿಟ್!!

-

''ಟಿಪ್ಪುವನ್ನು ಕೊಂದವರು ನಾವೇ'' ಎಂದು ಹೇಳಿಕೊಳ್ಳುವ ಧೀರರು ಯಾರೂ ಇಲ್ಲ. ಬದಲಾಗಿ ಇನ್ನೊಂದು ಸಮುದಾಯದ ಹಣೆಗೆ ಅದನ್ನು ಕಟ್ಟಿ, ಉರಿ ಹಚ್ಚಿ; ಅದರ ಕಾವಿನಲ್ಲಿ ಬೇಸುಣ್ಣುವವರು ಚುನಾವಣಾ ಕಾಲದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪ್ರತೀ ಚುನಾವಣೆ ಹೊತ್ತಿಗೆ ಏನಾದರೊಂದು ಮೊಂಡು ಅಸ್ತ್ರವನ್ನೇ ಸೃಷ್ಟಿಸಿ, ಬ್ರಹ್ಮಾಸ್ತ್ರವೆಂದು ಪ್ರಯೋಗಿಸಿ, ಜನರಿಗೆ ಮಂಕುಬೂದಿ ಎರಚುವ ಶಕ್ತಿಗಳ ಆಟಾಟೋಪ ಕಳೆದ ದಶಕದಿಂದ ಹೆಚ್ಚಾಗಿದೆ. ಮಹಾತ್ಮಾ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದ್ದನ್ನೂ ಸಮರ್ಥಿಸಿಕೊಳ್ಳುವ ಶಕ್ತಿಗಳೇ ಬಹುಶ: ಉರಿಗೌಡನನ್ನೂ ಸೃಷ್ಟಿಸಿರಬಹುದು, ಸಮರ್ಥಿಸಬಹುದು.


ಮುಚ್ಚಿಹೋದ ಐತಿಹಾಸಿಕ ಸತ್ಯದ ಶೋಧನೆಯನ್ನು ಮಾಡಿ ತೋರುತ್ತೇವೆ ಎಂದು ಕೆಲವರು ಹೇಳುವುದು ಅತ್ಯುತ್ಸಾಹದ್ದು ಅಥವಾ ಕೇವಲ ವೈಯಕ್ತಿಕ ಹಿತಾಸಕ್ತಿಯದ್ದು ಮಾತ್ರ. ಸತ್ಯದ ಶೋಧನೆ ಅಷ್ಟು ಸುಲಭವಲ್ಲ. ಅದು ಕುರುಡರು ಆನೆ ಮುಟ್ಟಿ ಹೇಳಿದಂತೆ. ಶಿವಗಂಗೆ ಬೆಟ್ಟ ಎಲ್ಲರಿಗೂ ಕಂಡರೂ ಒಂದೊಂದು ನೆಲೆಯಿಂದ ನೋಡಿದವರಿಗೆ ಒಂದೊಂದು ರೀತಿಯೇ ಭಾಸವಾಗುವುದಲ್ಲವೇ? ಈಗ ಕಣ್ಣಿಗೆ ಕಾಣುವ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಪ್ರಧಾನಿಯಾದಿಯಾಗಿ ಹಲವರು ಅದು ದಶಪಥವೆಂದೂ, ಇತರ ಅನೇಕರು ಅದು ಬರೀ ಷಟ್ಪಥದ್ದೆಂದೂ, ರಸ್ತೆ ಅಲ್ಲಲ್ಲಿ ಆಗಲೇ ಕಿತ್ತಿದೆ, ಮೊದಲ ಮಳೆಗೇ ಹಳ್ಳದಂತಾಗಿ ವಾಹನ ಓಡಾಟಕ್ಕೆ ತೊಂದರೆಯಾಗಿದೆ ಎಂದೂ, ಆದರೆ, ಅಭಿಮಾನಿಗಳು ಮಾತ್ರ ಅದು ಅತ್ಯದ್ಭುತವಾಗಿದೆಯೆಂದೂ ವರ್ಣಿಸುತ್ತಿರುವಾಗ, ಇನ್ನು ನೂರಾರು ವರ್ಷಗಳ ಹಿಂದೆ ಆದದ್ದನ್ನು ಅದು ಹೀಗೇ ಆಗಿದ್ದು ಎಂದು ವಕಾಲತ್ತು ವಹಿಸುವುದಕ್ಕೆ ಅರ್ಥವಿದೆಯೇ? ಇಂತಹ ವಿಚಾರಗಳ ಸಮರ್ಥನೆಯ ಔಚಿತ್ಯವನ್ನು ಅವರವರೇ ವಿಮರ್ಶಿಸಿಕೊಂಡರೆ ಎಷ್ಟೋ ಸಮಸ್ಯೆಗಳು ಹುಟ್ಟುವುದೇ ಇಲ್ಲ. ಸಮಸ್ಯೆ ಹುಟ್ಟು ಹಾಕುವುದಕ್ಕಾಗಿಯೇ ಗೋರಿ ಅಗೆಯ ಹೋಗುವವರ ಬಗ್ಗೆ ಜನ ಸಾಮಾನ್ಯರೇ ಎಚ್ಚರವಾಗಿರುವುದೊಂದೇ ಉಪಾಯವಾದೀತು.

ಹಳೆಯ ಪುರಾಣಗಳನ್ನೇ ಸನಾತನ ಭವ್ಯ 'ಇತಿಹಾಸ'ವೆಂದು ಕೊಂಡಾಡುತ್ತಿದ್ದವರು ಈಗ ಗ್ರಾಮೀಣರ ಲಾವಣಿಗಳನ್ನೂ ಅಮೂಲ್ಯ ಐತಿಹಾಸಿಕ ದಾಖಲೆಗಳೆಂದು ದೊಡ್ಡ ದನಿಯಲ್ಲಿ ಪ್ರಚುರಪಡಿಸುತ್ತಿರುವುದನ್ನು ಎಷ್ಟರ ಮಟ್ಟಿಗೆ ತಿದ್ದಬಹುದು ಎಂಬುದು ನಿಜವಾದ ಅಧ್ಯಯನಕಾರರ ಚಿಂತೆಯಾಗಿದೆ; ಕತೆ, ನಾಟಕಕಾರರಿಗೂ ಈ ಜವಾಬ್ದಾರಿ ಬೇಕಿಲ್ಲವೇ. ಅವರೂ ರಾಜಕಾರಣಿಗಳಂತೇ ಆದರೆ ಇತಿಹಾಸ ಉಳಿಯುವುದು ಹೇಗೆ!
'ಇತಿಹಾಸ'ವೆಂಬುದು ಎಂದೋ ಆಗಿಹೋದ ಘಟನೆಗಳ, ಅಡಗಿಹೋದ ವಾಸ್ತವಗಳ ಶೋಧಕ್ಕೆ ಸಂಬಂಧಿಸಿದ್ದು. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಯಾವ್ಯಾವುದೋ ಕಾಲದಲ್ಲಿ, ಯಾವ್ಯಾವುದೋ ಸ್ಥಳದಲ್ಲಿ ಕಣ್ಣಿಗೆ ಬೀಳಬಹುದು. ಆ ಮೂಲಕ ಹಳೆಯ ತಿಳಿವಿನ ಮೇಲೆ ಹೊಸ ಬೆಳಕು ಚೆಲ್ಲಬಹುದು. ಒಂದು ವೇಳೆ ಅದರಲ್ಲಿಯೂ ಹೊಸ ಸತ್ಯಗಳು ಸಿಕ್ಕಿದವೆನ್ನಿ, ಅದನ್ನು ಹೇಗೆ ಬಳಸಬೇಕು? ಸತ್ಯಂ ಬ್ರೂಯಾತ್.. ಸತ್ಯವನ್ನೇ ಹೇಳು, ಆದರೆ ಅಪ್ರಿಯವಾದ, ಅಂದರೆ ವ್ಯಕ್ತಿಯ, ಸಮಾಜದ ಹಿತಕ್ಕೆ ಭಂಗ ತರುವುದಾದರೆ, ಆ ಸತ್ಯವನ್ನು ಹೇಳಲೇಬೇಡ ಎಂಬ ಸಂಸ್ಕೃತದ ಹಿತೋಕ್ತಿ ಎಲ್ಲರಿಗೂ, ಎಲ್ಲ ಕಾಲಕ್ಕೂ ಪಾಠವಾಗಬೇಕಲ್ಲವೇ.
ಪ್ರಜಾಪ್ರಭುತ್ವ, ಸಂವಿಧಾನ, ಕೋರ್ಟುಗಳ ಹಿಡಿತದ ಈ ಕಾಲದಲ್ಲೂ ಅನೇಕರು ತಾವೇ ಸರಕಾರಗಳಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಇನ್ನು ದೊರೆಯೇ ಸರ್ವಾಧಿಕಾರಿಯಾಗಿದ್ದಾಗ! ಜನಾನುರಾಗಿಯಾಗಿ, ಜನತಾ ನ್ಯಾಯವನ್ನು ಪಾಲನೆ ಮಾಡಿ ಮಾದರಿಯಾದ ದೊರೆಗಳು ತೀರಾ ಅಪರೂಪ. ಆಡಳಿತಕ್ಕಾಗಿ ಎಲ್ಲಾ ದೊರೆಗಳೂ ತನಗೆ ಅನಿಸಿದ್ದು ಮಾಡಿರುತ್ತಾನೆ. ಒಂದು ವೇಳೆ, ಯಾರಿಗೇ ಅಪ್ರಿಯವಾದರೂ ಚಿಂತೆ ಇಲ್ಲ, ನಾನು ಸತ್ಯವನ್ನೇ ಹೇಳುತ್ತೇನೆ ಎಂಬ ಧರ್ಮ ವ್ರತರು ಎಲ್ಲಾ ಸತ್ಯಗಳನ್ನೂ ತಾರತಮ್ಯವಿಲ್ಲದೆ ಸಾರ್ವಜನಿಕರ ಮುಂದೆ ಇಡಬೇಕಾದುದು ನ್ಯಾಯವಾಗುತ್ತದೆ. ಉರಿಗೌಡ ಟಿಪ್ಪುವನ್ನು ಕೊಂದ ಎಂದಾದರೆ, ಕಿತ್ತೂರು ಚೆನ್ನಮ್ಮನ ಸೋಲಿಗೆ ಮಸಲತ್ತು ಮಾಡಿದವರು, ಶೃಂಗೇರಿ, ಧರ್ಮಸ್ಥಳಗಳನ್ನು ಲೂಟಿದವರು, ಹಿಂದೂಗಳನ್ನೇ ಕೊಂದ ಹಿಂದೂ ಅರಸರು, ಕಲ್ಯಾಣದಲ್ಲಿಯೂ, ನಂಜನಗೂಡಿನಲ್ಲಿಯೂ ಅಸಂಖ್ಯ ಶರಣರ ಹತ್ಯೆಗೆ ಕಾರಣರಾದವರು, ಗಾಂಧೀಜಿ ಹತ್ಯೆ ಮಾಡಿದವರು, ಇಲ್ಲಿನ ಹೆಣ್ಣು ಮಕ್ಕಳನ್ನು, ಬಡವರನ್ನು ಶೋಷಿಸಿದ ಧಣಿಗಳ ಬಗೆಗೂ ಮುಕ್ತವಾಗಿಯೇ ಮಾತಾಡುವುದು ಧರ್ಮವಾಗುತ್ತದೆಯಲ್ಲವೇ. ಅವನ್ನೆಲ್ಲಾ ಮುಚ್ಚಿಟ್ಟುಕೊಂಡು, ಆ ಪ್ರಶ್ನೆಗಳನ್ನು ಹಾಕುವವರಿಗೂ ಜೀವ ಬೆದರಿಕೆ ಒಡ್ಡಿ, ಇದೀಗ ಉರಿಗೌಡನನ್ನು ಟೂಲ್ ಕಿಟ್ ಮಾಡಿಕೊಂಡು ಅಬ್ಬರಿಸಿ ಮೆರೆವವರಿಗೆ ಏನೆನ್ನಬೇಕು?
ಟಿಪ್ಪುಗೆ 'ಟೈಗರ್' ಎಂದು ಬಿರುದು ಕೊಟ್ಟವರು ಯಾರೆಂದು ಕೇಳಿದವರಿಗೆ, ಸಾವರ್ಕರ್‌ಗೆ 'ವೀರ' ಎಂದು ಪ್ರಚುರಪಡಿಸಿ ದವರು ಯಾರು? ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಕೊಟ್ಟು ಜೀವ ಉಳಿಸಿಕೊಂಡದ್ದೇ ಶೌರ್ಯವೇ ಎಂದು ಕೇಳಿದವರಿಗೆ ಯಾವ ಸಮರ್ಥನೆ ಸಿಕ್ಕೀತು.
ಟಿಪ್ಪುವನ್ನು ಕೊಂದವರಾರೆಂದು ಎಲ್ಲಿಯೂ ಸ್ಪಷ್ಟ ದಾಖಲೆಯೇ ಇಲ್ಲವೆಂದೇ ಅಧ್ಯಯನಕಾರರು ಹೇಳುತ್ತಿದ್ದಾರೆ(ಹೆಣ್ಣುಮಕ್ಕಳ ಎದೆ ಮೇಲೆ ಬಟ್ಟೆ ಹಾಕಿಕೊಳ್ಳುವಂತೆ ಮಾಡಿದ್ದಕ್ಕೆ ಸಿಟ್ಟಾದ ಸಂಪ್ರದಾಯಸ್ಥ ಯುವಕರು ಟಿಪ್ಪುವನ್ನು ಕೊಂದರೆಂದು ಈಗ ಮಲೆಯಾಳಿಗಳು ಹಕ್ಕು ಮಂಡಿಸಿದ್ದಾರೆ). ಟಿಪ್ಪುವಿನ ದುರಂತ ಮರಣ ಕುರಿತ ಅನೇಕ ಲಾವಣಿಗಳು ಅವನ ಹತ್ತಿರದ ಕಾಲಾವಧಿಯಲ್ಲೇ ರಚಿತವಾಗಿವೆ. ನನಗೆ ಸಿಕ್ಕ, ಸರಕಾರದ ಪುಸ್ತಕಗಳಲ್ಲಿ ಪ್ರಕಟವಾಗಿರುವ ಕೆಲವು ಲಾವಣಿಗಳ ಆಯ್ದ ಸಾಲುಗಳನ್ನು ಯಥಾವತ್ತಾಗಿ ಇಲ್ಲಿ ಓದುಗರ ಮುಂದಿಟ್ಟಿದ್ದೇನೆ:
ಶ್ರೀರಂಗಪಟ್ಟಣ ಯುದ್ಧದಲ್ಲಿನ ಟಿಪ್ಪುವಿನ ಹಾವಳಿಯನ್ನು ನೋಡಿದ ಕರ್ನಲ್ ಅಪ್ಪಣೆ ಕೊಟ್ಟ:
 ''ಸುಡಿರಿ ಬಂದೂಕದಿಂದ ಟೀಪುವಿಗೆ..
ಚಟ್ ಚಟ್ ಗೋಲಿ ಚಲಾಯಿಸಿದರು ತುಂಬಿಕೊಂಡಿತು
ಹೊಗೆ ಊರೊಳಗೆ
ಕವಿದಿತು ಕತ್ತಲೆ ಪವುಜು ಕಾಣದಂಗೆ, ಬಂದನು ಉಲ್ಲೇ
ಬಾಗಿಲಿಗೆ''
ಕುದುರೆಯು ಸುಸ್ತಾಗಲು ಇಳಿದನು ರಾಜ, ಮಲಗಿಕೊಂಡ ಹುಲ್ಲೇ ಗವಿಯೊಳಗೆ. ಅವನ ಮೈಮೇಲೆ ರತ್ನದ ಕಂಠಿ ಚಿನ್ನದ ಕತ್ತಿ ವಜ್ರದ ಕಲ್ಲಿ ಎಲ್ಲವೂ ಹಾಗೆಯೇ ಇರುತ್ತದೆ. ಆಗ ಯಾರೋ ಅನಾಮಿಕ ಸಿಪಾಯಿ ಬತೇರಿ ಇಳಿದು ಬರುತ್ತಿದ್ದವನು, ಆ ನೆರಳೊಳಗೂ ಥಳ ಥಳ ಗುಟ್ಟುತ್ತಿದ್ದದ್ದನ್ನು ಕಂಡು ಚಕಿತನಾಗಿ ತಿರುಗಿ ನೋಡಿ, ಯಾರೋ ವಜೀರ ಮಡಿದಿಹನೆಂದು ಅವನ ಡವಾಲಿಗೆ ಕೈಹಾಕುತ್ತಾನೆ. ಆ ಆಯಾಸದ ಮಂಪರಿನಲ್ಲೂ ಮೈಯೆಲ್ಲಾ ಅರಿವಾಗಿದ್ದ ಟಿಪ್ಪು 'ತಟ್ಟನೆ ನೇತ್ರವ ಬಿಟ್ಟು ರೌದ್ರಾಕಾರದಿ ಕತ್ತರಿಸಿದ ಸೋಜರ್ ಕೈಗೆ'
''ಆಗ, ಮಡಿದಿಹನೆಂದು ಅರಿಯದೆ ಹೋದೆ ಕಡಿದನಲ್ಲಾ
ಯನ್ನ ಕೈಗಳ, ಕಡುಕೋಪಿಯನು ಬಿಡಲು ಬಾರದೆಂದು ಹೊಡೆದನು ಗೋಲಿ ದೊರೆ ಮೈಯಿಗೆ''

ಅಂದರೆ, ಹಾಗೆ ಬಿದ್ದಿದ್ದು ಯಾರೋ ಸೈನಿಕ, ಅವನ ಮೈಮೇಲಿಂದ ಸಿಕ್ಕಿದ್ದು ದೋಚಬಹುದು (ಯುದ್ಧಭೂಮಿಯಲ್ಲಿ ಇದೆಲ್ಲಾ ಸಹಜವಾಗಿತ್ತು) ಎಂದು ಈ ಸಾಮಾನ್ಯ ಸೈನಿಕ ಕೈ ಹಾಕಿದನೇ ಹೊರತು ಅವನೇ ಟಿಪ್ಪುಎಂಬ ಅರಿವಿರಲಿಲ್ಲ. ಬಳಿಕ, ಫರಂಗಿಯವರ ಕೈಯಿಂದ ಟಿಪ್ಪು ಶವ ರಕ್ಷಿಸಲು, ಇತರ ಹೆಣಗಳಿಂದ ಮುಚ್ಚುತ್ತಾರೆ (ಇದನ್ನೇ ಒಬ್ಬ ನಾಟಕಕಾರ ನಾಮಾಂಕಿತರು, ಅಡ್ಡಡ್ಡವಾಗಿ ತಿರುಚಿ, ಹೇಡಿ ಟಿಪ್ಪು ಸಾಮಾನ್ಯ ಸೈನಿಕನಂತೆವೇಷ ಧರಿಸಿ, ಹೆಣಗಳ ಮೈಮೇಲೆ ಎಳೆದುಕೊಂಡು ಜೀವ ಉಳಿಸಿಕೊಂಡಿದ್ದನೆಂದು ವರ್ಣಿಸಿದ್ದಾರೆ. ತನ್ನ ಮಗಳ ಮೇಲೆ ಕಣ್ಣುಹಾಕಿದ್ದರಿಂದ ಪೂರ್ಣಯ್ಯನೇ ಟಿಪ್ಪುಸಾವಿಗೆ ಕಾರಣನಾದ ಎಂದೂ ಹೇಳಿದವರುಂಟು. ಆದರೆ ಲಾವಣಿಯಲ್ಲಿ, ಆಕೆಯ ಕಾವಲಿಗೆ ಇದ್ದ ಸೈನಿಕನೇ ಅವಳಿಗೆ ಕೇಡು ಮಾಡಿದ್ದರಿಂದ ಪೂರ್ಣಯ್ಯ ಸಿಟ್ಟಾದ ಎಂದಿದೆ) ಸುದ್ದಿ ತಿಳಿದು, ''ಹಿಂದೂ-ಮುಸಲ್ಮಾನ್ ಒಂದಾಗಿ ಬಂದು ನಮ್ಮ ದೊರೆ ಎಲ್ಲೆಂದು ಹುಡುಕುತ್ತಾರೆ; ಪಟ್ಟಣದ ಪ್ರಜೆಗಳು ಅನ್ನ ಬಿಟ್ಟು ಬಂದು ಎದೆ ಬಡಿದುಕೊಳ್ಳುತ್ತಾರೆ'' ಎಷ್ಟೋ ಜನ ತಮಗಿನ್ನಾರು ದಿಕ್ಕು ಎಂದು ಮರಗಳನ್ನು ಏರಿ, 'ಕಾವೇರಿಯೊಳ್ ಧುಮುಕಿ' ಜೀವ ತ್ಯಜಿಸುತ್ತಾರೆ. ಧರ್ಮಜನಂತಿದ್ದ ತಮ್ಮ ಒಡೆಯನ ಮೃತ್ಯುವಿಗೆ ಕಾರಣ ಯಾರೆಂದು ಹುಡುಕಿ, ಮುದುಕ ಮೀರ್‌ಸಾಧಿಕನ ಮೂಳೆ ಮುರಿದು ಕೊಲ್ಲುತ್ತಾರೆ. ಟಿಪ್ಪುವಿನ ಮರಣಕ್ಕೆ ಹಿಂದೂ, ಮುಸ್ಲಿಮ್, ಆಂಗ್ಲರಾದಿ ಅನೇಕರು ಕಣ್ಣೀರಿಟ್ಟರೆಂದೂ ಲಾವಣಿಕಾರ ಮನದುಂಬಿ ಹಾಡಿದ್ದಾನೆ.

''ಹೆತ್ತಯ್ಯನೆಂದು ಪೂರ್ಣಯ್ಯನೊಳು ಟೈಗರ್‌ಗೆ ಬಹಳ ನಂಬಿಕೆ ಇತ್ತು. ಆದರೆ, ಮರಾಠರು, ಹೈದರಾಬಾದ್ ನಿಜಾಮರು, ಕೊಡಗಿನ ರಾಜರೂ ಫರಂಗೇರ ಸೇರಿ ಪಿತೂರಿ ಮಾಡಿ ಟಿಪ್ಪು ಸಾವಿಗೆ ಕಾರಣರಾದರು'' ಎಂದೂ ಲಾವಣಿಕಾರ ಅಲವತ್ತುಕೊಂಡಿದ್ದಾನೆ. ಎಂದರೆ, ಟಿಪ್ಪುವಿನ ಸೋಲಿನಲ್ಲಿ ಪೂರ್ಣಯ್ಯನಂತಹವರ ಪಾತ್ರವೂ ಇತ್ತೇ ಎಂಬುದರ 'ಸತ್ಯಶೋಧನೆ'ಯೂ ಆಗಬೇಕಾಗುತ್ತದೆಯಲ್ಲವೇ.

ಟಿಪ್ಪು ಎಂತಹವನೆಂದರೆ,
''ಸ್ವರಾಜ್ಯ ರಕ್ಷಣೆಗೋಸ್ಕರ ಸುಲ್ತಾನ ರಣಾಗ್ರ ಹೊರಟನು ರೋಷದಲಿ/
ಫರಂಗಿ ಸೋಲ್ಜರ ತರಂಗ ಮಧ್ಯದಿ ತುರಂಗ ಬಿಟ್ಟನು ತ್ವರಿತದಲಿ//
ಟೀಪು ಸುಲ್ತಾನನ ಹದಿನೇಳು ವರುಷದ ಆಡಳಿತ ಕೊನೆಯಾಯ್ತು/
ಟೀಪು ರಾಜ್ಯದೊಳು ಶರಾಬ, ಸೇಂದಿ, ಗಾಂಜಾ, ಅಫೀಮು ಇರಲಿಲ್ಲ/
ಟೀಪುವಿನ ಕಾಲದೊಳು ಜೂಜಿನಾಟ ಮೇಣ್ ವ್ಯಭಿಚಾರದ ಸುಳಿವಿಲ್ಲ/
ಜ್ಞಾಪಕವಿದ್ದಿತು ಸಬ್ಬಲ್ ರಾಣಿಯ ದಿಣ್ಣೆಯ ಭೀತಿಯು
ಜನಕೆಲ್ಲಾ//''
-ಇದು ಹರಿದಾಸ ಪುಟ್ಟಣ್ಣನ ಶಿಷ್ಯ, ಶ್ರೀಗುರು ದಾಸ ನಂಜಣ್ಣನ ಸುತ ಪ್ರಸಿದ್ಧ ಲಾವಣಿಕಾರ ನೀಲ್ಕಂಠನ ಪದವಾಯಿತು.

''ಬೇಡಿದ ದ್ವಿಜರಿಗೆ ಬಿಡದೆ ದಾನ ನೀಡಿದ್ದ; ಅವನು
ಹಿಂದೂ ಮುಸಲ್ಮಾನರ ಉದ್ಧಾರಿ, ಅನಾಥ ಜನರಿಗೆ
ಆಧಾರಿಯಾಗಿದ್ದ; ಕರೆದು ಒಕ್ಕಲಿಗರಿಗೇ ಅಷ್ಟಗ್ರಾಮವೆಂದು
ಗೌಡರ ವ್ಯವಸಾಯಕ್ಕೆ ಜಹಗೀರು ಜಮೀನು ಕೊಟ್ಟಿದ್ದ;
ಹಿಡಿದು ಮಲೆಯಾಳರ ಲಂಗದಾವಣಿವುಡಿಸಿದ್ದ; ನುಡಿಕೇಳದ
ಜನರಿಗೆ ಉರಿಯಿಕ್ಕಿ ಕೊಂದಿದ್ದ.''

ಮೈಸೂರಿನ ಶ್ರೀರಾಂಪೇಟೆಯ ನಿವಾಸಿಯಾಗಿದ್ದಿರಬಹುದಾದ ರಾಜೋಜಿ ಎಂಬಾತ ಈ ಲಾವಣಿ ಕಟ್ಟಿ ಹಾಡಿದ್ದಾನೆ. ಈ ಲಾವಣಿಕಾರರಾರೂ ಮುಸ್ಲಿಮರಲ್ಲ ಎಂಬುದೂ ಗಮನಾರ್ಹ. ಆ ಯಾವ ಲಾವಣಿಯಲ್ಲೂ ಬಹುಶ: ಇದ್ದಿರದ ಉರಿಗೌಡ ಎಲ್ಲಿಂದ ಈಗ ಪ್ರತ್ಯಕ್ಷನಾದನೋ! ಅಷ್ಟಕ್ಕೂ ಕೊಂದವರಾರೆಂದು ತಿಳಿದಿದ್ದರೆ ಬ್ರಿಟಿಷ್ ಇತಿಹಾಸಕಾರರೇ ದಾಖಲಿಸದೆ ಬಿಡುತ್ತಿದ್ದರೆ? ಪಟ್ಟಣವನ್ನು ಟೈಗರ್‌ನಂತೆ ರಕ್ಷಿಸಿದ್ದ ಟಿಪ್ಪು ಸಾವಿನ ಬಳಿಕ ರಾಜ್ಯದ ಭೌಗೋಳಿಕ ಚಹರೆಯೇ ವ್ಯತ್ಯಯವಾಗುತ್ತದೆ; ''ಇರುಳಲಿ ಕಾಣುವ ಕನಸಿನ ರೀತಿ'' ಪಟ್ಟಣದ ಕಾಂತಿ ಮಾಯವಾಗುತ್ತದೆ.
ಟಿಪ್ಪುವಿನ ಜನಕಲ್ಯಾಣಪರ ಕನಸುಗಳಿಂದ ಮೈಸೂರು ಸಂಸ್ಥಾನ ಹೊಸ ಬೆಳಕು, ಕಸುವು ಪಡೆದಿತ್ತು. ಅವನ ಕೆಲಸಗಳ ಅನೇಕ ಫಲಗಳನ್ನು ನಾವು ಈಗಲೂ ಉಣ್ಣುತ್ತಿರುವುದನ್ನು ಮರೆಯಬಾರದಲ್ಲವೇ. ಅವನ ಕೀರ್ತಿಯಿಂದ ಮಂಕಾಗಿದ್ದವರು ಕೇವಲ ಬ್ರಿಟಿಷರಲ್ಲ; ಅವನ ಸುತ್ತುಮುತ್ತಲೇ ಅಧಿಕಾರ ಲಾಲಸೆಯ ಹಲವರಿದ್ದ ಸೂಚನೆಗಳಿವೆ. ಇಂದಿನ ಕೆಲವರ ಹಾಗೇ ಅಂದೂ ಅನೇಕರ ಪ್ರತಿರೋಧವನ್ನು ಅವನು ಅನುಭವಿಸಿದ್ದಲ್ಲಿ ಅಚ್ಚರಿ ಏನಿಲ್ಲ.
ಟಿಪ್ಪುವಿಗೆ ಪರಮ ವೈರಿಗಳೆನಿಸಿದ್ದವರು, ಬಹುಶಃ, ಹಿಂದೂ-ಮುಸ್ಲಿಮ್ ದೊರೆಗಳಿಗಿಂತ ಹೆಚ್ಚಾಗಿ ಬ್ರಿಟಿಷರು. ಸ್ಥಳೀಯರೆಲ್ಲರೂ ಒಂದಾಗಿದ್ದರೆ ಬ್ರಿಟಿಷರು ಅಷ್ಟು ಕಾಲ ಈ ದೇಶದಲ್ಲಿರುವುದು ಸಾಧ್ಯವೇ ಇರಲಿಲ್ಲ. ನಮ್ಮ ದೊರೆಗಳಲ್ಲೇ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ, ಯಾವ ವೈರಿ ಜೊತೆ ಬೇಕಾದರೂ ಸೇರುವ ಹಪಾಹಪಿಯವರೂ ಅನೇಕರಿದ್ದರು, ಇಂದಿನ ಅನೇಕ ರಾಜಕಾರಣಿಗಳಂತೆ. ಜಗದ್ವಿಖ್ಯಾತ ಆಡಳಿತಗಾರ ಕೃಷ್ಣದೇವರಾಯನನ್ನೇ ಬಿಡದ ದಾಯಾದಿಗಳು, ಧಾರ್ಮಿಕರು ಇಡೀ ಹಂಪೆಯೇ ಹಾಳಾಗಲು ಕಾರಣವಾಗುತ್ತಾರಲ್ಲಾ! ಹಂಪಿಯಲ್ಲಿ ವೈಷ್ಣವ ದೇವಾಲಯಗಳು ಮಾತ್ರ ಹಾಳಾಗಿ, ಶೈವ ದೇವಾಲಯಗಳು ಕೆಲವಾದರೂ ಉಳಿದಿರುವುದಕ್ಕೆ ಕೇವಲ ಪರಕೀಯರು ಕಾರಣವೇ? ಎಂಬ ಕೆಲವು ವಿದ್ವಾಂಸರ ಪ್ರಶ್ನೆಗೆ ಕಾಣುವ ಉತ್ತರ ಒಪ್ಪಬಲ್ಲೆವೇ?

''ಟಿಪ್ಪುವನ್ನು ಕೊಂದವರು ನಾವೇ'' ಎಂದು ಹೇಳಿಕೊಳ್ಳುವ ಧೀರರು ಯಾರೂ ಇಲ್ಲ. ಬದಲಾಗಿ ಇನ್ನೊಂದು ಸಮುದಾಯದ ಹಣೆಗೆ ಅದನ್ನು ಕಟ್ಟಿ, ಉರಿ ಹಚ್ಚಿ; ಅದರ ಕಾವಿನಲ್ಲಿ ಬೇಸುಣ್ಣುವವರು ಚುನಾವಣಾ ಕಾಲದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪ್ರತೀ ಚುನಾವಣೆ ಹೊತ್ತಿಗೆ ಏನಾದರೊಂದು ಮೊಂಡು ಅಸ್ತ್ರವನ್ನೇ ಸೃಷ್ಟಿಸಿ, ಬ್ರಹ್ಮಾಸ್ತ್ರವೆಂದು ಪ್ರಯೋಗಿಸಿ, ಜನರಿಗೆ ಮಂಕುಬೂದಿ ಎರಚುವ ಶಕ್ತಿಗಳ ಆಟಾಟೋಪ ಕಳೆದ ದಶಕದಿಂದ ಹೆಚ್ಚಾಗಿದೆ. ಮಹಾತ್ಮಾ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿದ್ದನ್ನೂ ಸಮರ್ಥಿಸಿಕೊಳ್ಳುವ ಶಕ್ತಿಗಳೇ ಬಹುಶ: ಉರಿಗೌಡನನ್ನೂ ಸೃಷ್ಟಿಸಿರಬಹುದು, ಸಮರ್ಥಿಸಬಹುದು. ಉರಿಗೌಡ ಮಾಡಿದ್ದು ದೇಶೋದ್ಧಾರದ ಕಾರ್ಯ ಎಂದಾಗಿದ್ದರೆ ಅವನಿಗೆ ಅರ್ಧ ರಾಜ್ಯವೋ, ದೊಡ್ಡ ಪಾರಿತೋಷಕವೋ ಅಂದೇ ಸಿಗಬೇಕಾಗಿತ್ತಲ್ಲವೇ.

ಇಂದು ಅವನ ಹೆಸರಲ್ಲಿ ಪ್ರತಿಮೆ ಮಾಡುವವರು ಸ್ವಂತ ಹಣದಲ್ಲೇನೂ ಮಾಡುವುದಿಲ್ಲ. ಅಲ್ಲದೆ, ಇದು ಗೌಡರಿಗೆ ಅವಮಾನ ಮಾಡುವುದೋ, ಕೊಂಡಾಡುವುದೋ? ಇವರ ಈ ಹುನ್ನಾರಕ್ಕೆ ಮಂಡ್ಯ, ಮೈಸೂರು, ಬೆಂಗಳೂರು ಮತ್ತಿತರ ಜಿಲ್ಲೆಗಳಿಂದ ತೀವ್ರ ಪ್ರತಿರೋಧ ಬಂದಿದೆ. ಬಹುಶ: ದಿಲ್ಲಿ ಹೈಕಮಾಂಡೂ ಛೀಮಾರಿ ಹಾಕಿರಬಹುದು. ಸಿನೆಮಾ ಮಾಡುತ್ತೇವೆ ಎಂದು ಅಬ್ಬರಿಸಿದವರದೂ ಕೇವಲ ಗಿಮಿಕ್, ಸರಕಾರದ ವೈಫಲ್ಯಗಳಿಂದ ಜನರನ್ನು ಬೇರೆಡೆ ಸೆಳೆವ ತಂತ್ರವೆಂಬ ಮಾತುಗಳೂ ಕೇಳಿಬರುತ್ತಿವೆ. ಪರಿಣಾಮವಾಗಿ, ಸಿನೆಮಾದ ಚಿತ್ರಕತೆ ರಚನೆಕಾರರೆಂದು ದೊಡ್ಡದಾಗಿ ಜಾಹೀರುಗೊಂಡಿದ್ದ ಸಚಿವರು ಈಗ ಸಿನೆಮಾಕ್ಕೂ ತನಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ತಮ್ಮ ಟೂಲ್‌ಕಿಟ್ ಉರಿ ತಮ್ಮನ್ನೇ ಸುಡುವ ಬಗ್ಗೆ ಎಚ್ಚರವಾಗಿರಬಹುದು. ಸಿನೆಮಾದ ಶ್ರೀಮಂತ ನಿರ್ಮಾಪಕರೂ, ಘನ ಸಚಿವರೂ, ''ನಾನು ಕೇವಲ ನಿರ್ಮಾಪಕ ಅಷ್ಟೇ, ಕತೆಗೂ ನನಗೂ ಸಂಬಂಧವಿಲ್ಲ'' ಎಂದಿರುವುದಲ್ಲದೆ, ಚುಂಚನಗಿರಿ ಶ್ರೀಯವರ ಆಣತಿಯಂತೆ ಸಿನೆಮಾ ನಿರ್ಮಾಣ ಮಾಡುವುದಿಲ್ಲ ಎಂಬ ನೆಪ ಮಾಡಿ ಮತದಾರರ ಆಕ್ರೋಶದಿಂದ ಬಚಾವಾಗುವ ಪ್ರಯತ್ನ ಮಾಡಿದ್ದಾರೆ. ಅಂದರೆ, ಮಾಧ್ಯಮಗಳ ಮುಂದೆ ಅಬ್ಬರಿಸಿ ಬಂದ ಹುರಿಯಾಳುಗಳ ವಿಕೆಟ್ ತಾವೇ ಬೋಲ್ಡ್ ಆಗಿ ಬಿದ್ದಿವೆ. ಇವರಿಗೆ ಇದೇನೂ ಹೊಸದಲ್ಲ. ಏನೇ ಆಗಲಿ, ಸಾರ್ವಜನಿಕರ ಭಾವನೆಗಳೊಂದಿಗೆ ಚೆಲ್ಲಾಟವಾಡುವ ದುಷ್ಕೃತ್ಯವನ್ನು ಯಾವ ಜನಪ್ರತಿನಿಧಿಗಳೂ ಮಾಡಬಾರದಲ್ಲವೇ.

'ಉರಿ' ಇಲ್ಲಿಗೆ ತಣ್ಣಗಾಗಬೇಕಿತ್ತು. ಕೆಲವು ಬುದ್ಧಿವಂತ ಎಂಪಿ, ಸಚಿವರು 'ಗೊತ್ತಿಲ್ಲದ ವಿಷಯದ ಬಗ್ಗೆ ಮಾತಾಡುವುದಿಲ್ಲ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಆದರೆ ಕೆಲವರಂತೂ, ಸತ್ಯದ ಮೇಲೆ ಸಂಶೋಧನೆ ಮಾಡಿ ಸಾಕ್ಷಿಗಳನ್ನು ಸ್ವಾಮೀಜಿ ಮುಂದಿಡುವುದಾಗಿ ಶಪಥ ಮಾಡಿದರು. ಚುನಾವಣಾ ಕಾಲದ ಈ ಉರಿಯನ್ನು ಜ್ವಾಲೆಯೇ ಮಾಡಿಬಿಡಬೇಕೆಂಬ ಉದ್ದೇಶದಿಂದಲೋ ಎಂಬಂತೆ ಏಕಾಏಕಿ ರಂಗಕ್ಕೆ ನುಗ್ಗಿದ ಬಣ್ಣದ ವೇಷವೊಂದು ಬಿಜೆಪಿಯಲ್ಲೂ ಒಕ್ಕಲಿಗ ಸಚಿವರಿದ್ದಾರೆ, ಸ್ವಾಮಿಯವರು ಪಕ್ಷಪಾತ ಮಾಡಿದ್ದು ಸರಿಯಲ್ಲ ಎಂಬಂತೆ ದೊಡ್ಡ ದನಿಯಲ್ಲಿ ಮಾತಾಡಿದ್ದಕ್ಕೆ ಸಮುದಾಯದ ಹಲವರು ರಂಗಾಯಣಕ್ಕೆ ಮುತ್ತಿಗೆ ಹಾಕಿದರು. ಅದರ ಉರಿಗೆ ಜಾಗೃತರಾದ ಆ ನಿರ್ದೇಶಕ ತಾವು 'ಅಡ್ಡಡ್ಡ ಆಡಿದ್ದರೆ' ಕ್ಷಮೆ ಕೋರುವೆ ಎಂದರು. ಈ ವಿದ್ಯಮಾನ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಜಾನಪದ ಅಭಿವ್ಯಕ್ತಿಗಳಿಗೂ ಪ್ರೇರಣೆಯಾಯಿತು. ಹಾಗೆ ಪ್ರಕಟವಾದವುಗಳಲ್ಲಿ ಒಂದು: 'ಹುಟ್ಟಿದವರು ಸಾಯಲೇ ಬೇಕು. ಆದರೆ ಹುಟ್ಟದೇ ಸತ್ತವರು ಉರಿಗೌಡ, ನಂಜೇಗೌಡರು.' ಕ್ಷುಲ್ಲಕ ರಾಜಕಾರಣವೆಂದರೆ ಸತ್ತ ಹೆಣ ಹೊತ್ತು ಅದರ ಗುಣಗಾನ ಮಾಡುತ್ತಾ ಊರೂರಲ್ಲಿ ವೋಟು ಕೇಳುವುದು

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top