-

ತರಾತುರಿಯ ಮೀಸಲಾತಿ ಬದಲಾವಣೆ: ಸಾಧಕ-ಬಾಧಕಗಳೇನು?

-

ಜಸ್ಟಿಸ್ ಚಿನ್ನಪ್ಪ ರೆಡ್ಡಿ ಆಯೋಗದ ಶಿಪಾರಸಿನಂತೆ ಮುಸ್ಲಿಮ್ ಸಮುದಾಯವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿತ್ತು.

ಈಗಿನ ಆರೆಸ್ಸೆಸ್ ಸರಕಾರ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣ ನೀಡಿ ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ಪಟ್ಟಿಯಿಂದ ತೆಗೆದದ್ದು ಅಸಾಂವಿಧಾನಿಕ ಅಲ್ಲವೆ? ಹಾಗಾದರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಇತರ ಧಾರ್ಮಿಕ ಅಲ್ಪಸಂಖ್ಯಾತರಾದ ಕ್ರೈಸ್ತ, ಬೌದ್ಧ್ದ, ಜೈನ್, ಸಿಖ್ ಧರ್ಮೀಯರ ಸ್ಥಾನಮಾನ ಏನು?

ಸಾಮಾಜಿಕ ನ್ಯಾಯಕ್ಕೆ ವಿರುದ್ಧ

ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ

ಮುಸ್ಲಿಮ್ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2 ‘ಬಿ’ ಅಡಿಯಲ್ಲಿ ನೀಡಿದ್ದ ಶೇ.೪ರಷ್ಟು ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರಕಾರ ರದ್ದುಪಡಿಸಿರುವುದು‘ಒಬ್ಬರ ತಲೆ ಉಳಿಸಲು ಇಬ್ಬರ ತಲೆ ಕಡಿದಂತೆ’ ಆಗಿದೆ. ಇದು ಸಂಪೂರ್ಣವಾಗಿ ಸಂವಿಧಾನ ಬಾಹಿರ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು.

ಮುಸ್ಲಿಮ್ ಸಮುದಾಯಕ್ಕೆ ಪ್ರವರ್ಗ 2 ‘ಬಿ’ ಅಡಿಯಲ್ಲಿ ಸಾಚಾರ್ ಸಮಿತಿ ವರದಿಗೂ ಮೊದಲೇ ರಾಜ್ಯದಲ್ಲಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗವನ್ನು ಮೊದಲ ಬಾರಿಗೆ ರಚಿಸಿ ಅದರ ಅಂದಿನ ಅಧ್ಯಕ್ಷ ಕೆ.ರೆಹ್ಮಾನ್ ಖಾನ್ ಅವರಿಂದ ಮುಸ್ಲಿಮ್ ಸಮದಾಯದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ವರದಿಯನ್ನು ಪಡೆದುಕೊಳ್ಳಲಾಗಿತ್ತು.

ಆ ಬಳಿಕ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಹಾಗೂ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಮೊಟ್ಟ ಮೊದಲ ಬಾರಿಗೆ ಶೇ.೬ರಷ್ಟು ಮೀಸಲಾತಿ ಕಲ್ಪಿಸಿದ್ದು ನನ್ನ ಅವಧಿಯಲ್ಲಿ. ಆದರೆ, ಮೀಸಲಾತಿ ಮಿತಿ ಶೇ.೫೦ರಷ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾದ ಕಾರಣ ಮುಸ್ಲಿಮರಿಗೆ ಶೇ.೪ರ ಮಿತಿಯಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಇಂದು ಎಚ್.ಡಿ. ದೇವೇಗೌಡರು ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದ್ದು ತಾವು ಎಂದು ಹೇಳಿಕೊಳ್ಳುತ್ತಿದ್ದಾರೆ.

ನಾವು ಮುಸ್ಲಿಮ್ ಸಮುದಾಯಕ್ಕೆ ಪ್ರವರ್ಗ 2 ‘ಬಿ’ ಅಡಿಯಲ್ಲಿ ಮೀಸಲಾತಿ ಕಲ್ಪಿಸಿದ್ದರ ಪ್ರತಿಫಲವಾಗಿ ಮುಸ್ಲಿಮ್ ಸಮುದಾಯದ ನೂರಾರು ಮಂದಿಗೆ ಶಿಕ್ಷಕರು, ಡಿವೈಎಸ್ಪಿಗಳು, ತಹಶೀಲ್ದಾರರು ಸೇರಿದಂತೆ ಸರಕಾರದ ಹಲವು ಉದ್ಯೋಗಗಳಲ್ಲಿ ಅವಕಾಶ ಸಿಕ್ಕಿತು. ಆದರೆ, ಇಂದು ರಾಜ್ಯ ಬಿಜೆಪಿ ಸರಕಾರ ಮುಸ್ಲಿಮ್ ಸಮುದಾಯದ ಮೀಸಲಾತಿ ರದ್ದುಪಡಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಕೊಳ್ಳಿ ಇಟ್ಟಿದೆ.

ಮುಸ್ಲಿಮ್ ಸಮುದಾಯದ ಮೀಸಲಾತಿ ರದ್ದುಪಡಿಸಿರುವುದಕ್ಕೆ ಯಾವುದೇ ಕಾನೂನು ಆಧಾರವಿಲ್ಲ. ಯಾರಾದರೂ ಈ ವಿಚಾರವನ್ನು ಕೈಗೆತ್ತಿಕೊಂಡು ಕೋರ್ಟ್ ಮೆಟ್ಟಿಲೇರಿದರೆ ಸರಕಾರಕ್ಕೆ ನಿಶ್ಚಿತವಾಗಿಯೂ ಮುಖಭಂಗವಾಗಲಿದೆ.

ಬಿಜೆಪಿ, ಆರೆಸ್ಸೆೆಸ್‌ನ ಮತೀಯವಾದದ ಹಿಡನ್ ಅಜೆಂಡಾ ಭಾಗವಾಗಿಯೇ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-2 ‘ಬಿ’ ಅಡಿಯಲ್ಲಿನ ಮುಸ್ಲಿಮ್ ಸಮುದಾಯದ ಮೀಸಲಾತಿ ರದ್ದುಪಡಿಸಲಾಗಿದೆ. ಒಕ್ಕಲಿಗರು ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಇಚ್ಛೆ ಸರಕಾರಕ್ಕೆ ನಿಜಕ್ಕೂ ಇದ್ದಿದ್ದರೆ ಮೀಸಲಾತಿ ಪ್ರಮಾಣ ಹೆಚ್ಚಿಸಬಹುದಿತ್ತು. ಅದು ಬಿಟ್ಟು ಮುಸ್ಲಿಮ್ ಸಮುದಾಯದ ಮೀಸಲಾತಿ ಕಡಿತ ಮಾಡಿದ್ದು ಸರಿಯಲ್ಲ.

‘ಆರ್ಥಿಕವಾಗಿ ಹಿಂದುಳಿದವರಿಗೆ(ಇಡಬ್ಲ್ಯೂಎಸ್)ಕಲ್ಪಿಸಿರುವ ಮೀಸಲಾತಿ ಅಡಿಯಲ್ಲಿ ಬೇರೆ ಸಮುದಾಯಗಳನ್ನು ಸೇರ್ಪಡೆ ಮಾಡಿದರೆ ಯಾವುದೇ ಕಾರಣಕ್ಕೂ ನ್ಯಾಯ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಆಧರಿಸಿ ಕಲ್ಪಿಸಿರುವ ಮೀಸಲಾತಿಯಿಂದ ಮಾತ್ರವೇ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯ.

******************

ಕೊಟ್ಟಂಗಿರಬೇಕು.. ಕೊಡಬಾರದು..

ಸಿ.ಎಸ್.ದ್ವಾರಕಾನಾಥ್, ಮಾಜಿ ಅಧ್ಯಕ್ಷರು,

ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಕರ್ನಾಟಕದ ಮೀಸಲಾತಿ ಎಂಬ ಸಾಮಾಜಿಕ ನ್ಯಾಯದ ಮೌಲ್ಯದ ಹಿನ್ನೆಲೆ ಚರಿತ್ರಾರ್ಹವಾ ದುದು, ಮೀಸಲಾತಿಯ ಕಾನ್ಸೆಪ್ಟ್ ಟಿಪ್ಪುವಿನಿಂದ ಪರೋಕ್ಷ ವಾಗಿ ಆರಂಭವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಲೋಚನೆಯಲ್ಲಿ ಹರಳುಗಟ್ಟುತ್ತದೆ. ಅಲ್ಲಿಂದ ಆರಂಭವಾದ ಮೀಸಲಾತಿ ಎಂಬ ಸಾಮಾಜಿಕ ನ್ಯಾಯದ ಅಭಿಯಾನ ದೇವರಾಜ ಅರಸು ಕಾಲದಲ್ಲಿ ಆರಂಭವಾದ ಹಾವನೂರು ವರದಿ, ಜಸ್ಟಿಸ್ ಚಿನ್ನಪ್ಪ ರೆಡ್ಡಿ ವರದಿ, ವೆಂಕಟಸ್ವಾಮಿ ವರದಿ ಮುಂತಾಗಿ  ವಿಕಾಸ ಹೊಂದುತ್ತಾ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಡೀ ದೇಶಕ್ಕೆ ಮಾದರಿಯಾಗಿತ್ತು. ಕೇಂದ್ರದಲ್ಲಿ ಬಂದ ಮಂಡಲ್ ವರದಿ ಕೂಡ ಕರ್ನಾಟಕದ ಮೀಸಲಾತಿ ನೀತಿಗಳ ಬಗ್ಗೆ ನೋಡಿಯೇ ರಚಿಸಬೇಕಾಯಿತು. ಇಂತಹ ಹಿನ್ನೆಲೆಯ ಮೀಸಲಾತಿ ಇಂದು ಬೀದಿ ಹರಾಜಾಗಿ ತನ್ನ ಎಲ್ಲಾ ಮೌಲ್ಯಗಳನ್ನು ಕಳಕೊಂಡು ನಗಣ್ಯವಾಗಿದೆ!!

ನಿನ್ನೆ ಆರೆಸ್ಸೆಸ್ ಸರಕಾರ (ಬಿಜೆಪಿಯಲ್ಲಿ ಆರೆಸ್ಸೆೆಸ್ ಅಷ್ಟೇ ನಿರ್ಣಾಯಕ, ಆರೆಸ್ಸೆೆಸ್ ಹಿನ್ನೆಲೆಯಿಲ್ಲದ ರಾಜಕಾರಣಿಗಳದು ಇಲ್ಲಿ ಏನೂ ನಡೆಯಲ್ಲ, ಬೊಮ್ಮಾಯಿ ಸೇರಿದಂತೆ) ಪ್ರಕಟಿಸಿದ ಮೀಸಲಾತಿ ನೀತಿಯನ್ನು ನೋಡಿ ದಂಗುಬಡಿದು ಹೋದೆ!

ಮೊದಲಿಗೆ ನ್ಯಾ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸುತ್ತೇವೆಂದು ಅಸ್ಪಶ್ಯ ಎಡ ಮತ್ತಿತರ ಒಳಜಾತಿಗಳಿಗೆ ಶೇ.6, ಅಸ್ಪಶ್ಯ ಬಲಿ ಮತ್ತಿತರ ಒಳಜಾತಿಗಳಿಗೆ ಶೇ.5 ಮತ್ತು ಸ್ಪಶ್ಯ ಜಾತಿಗಳಿಗೆ ಶೇ.4.5 ಕೊಟ್ಟಿದ್ದಾರೆ. ಸದಾಶಿವ ಆಯೋಗದಲ್ಲಿ ಸ್ಪಶ್ಯರಿಗೆ ಶೇ.3 ಇದ್ದದ್ದು, ಇಲ್ಲಿ ಒಂದೂವರೆ ಪರ್ಸೆಂಟ್
ಹೆಚ್ಚಾಗಲು ಕಾರಣಗಳೇನು? ಇದಕ್ಕೆ ಪೂರಕವಾದ ದಾಖಲೆಗಳೇನಾದರೂ ಇವೆಯೆ? ಎಂಬ ಪ್ರಶ್ನೆಗೆ ಉತ್ತರವಿದೆಯೆ..? ಇನ್ನು ರಾಜ್ಯ ಸರಕಾರ ಕಳಿಸಲಾಗುವ ಈ ಶಿಫಾರಸನ್ನು ಕೇಂದ್ರ ಸರಕಾರ ಪರಿಗಣಿಸಿ ಇದನ್ನು 9ನೇ ಶೆಡ್ಯೂಲ್‌ನಲ್ಲಿ ಅನ್ವಯಿಸಲು ಈಗಿನ ಪರಿಸ್ಥಿತಿಯಲ್ಲಿ ಅವಕಾಶವಿದೆಯೆ? ಇದು ಎಡ ಮತ್ತು ಬಲ ಸಮುದಾಯಗಳಿಗೆ ಮತ್ತು ಸ್ಪಶ್ಯ ಸಮುದಾಯಗಳಿಗೆ ಮಾಡುತ್ತಿರುವ ಸ್ಪಷ್ಟ ವಂಚನೆಯಲ್ಲವೆ?

ಇನ್ನು ಹಿಂದುಳಿದ ವರ್ಗಗಳ ಪಟ್ಟಿ 2(ಬಿ)ನಲ್ಲಿರುವ ಮುಸ್ಲಿಮ್ ಸಮುದಾಯವನ್ನು ಪಟ್ಟಿಯಿಂದ ಕಿತ್ತು ಹಾಕಿ, ಮುಸ್ಲಿಮ್ ಸಮುದಾಯಕ್ಕಿದ್ದ ಶೇ.೪ರಷ್ಟು ಮೀಸಲಾತಿಯನ್ನು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಎರಡು ಪರ್ಸೆಂಟ್ ನಂತೆ ಹಂಚಿರುವುದು ಯಾವ ಸಾಮಾಜಿಕ ನ್ಯಾಯದ ಆಧಾರದ ಮೇಲೆ? ಇದಕ್ಕೆ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇದೆಯೆ? ಹೀಗೆ ಆಯೋಗದ ಶಿಫಾರಸು ಇಲ್ಲದೆ ತನ್ನ ಇಷ್ಟಕ್ಕೆ ಬಂದಂತೆ ಮಾಡುವುದು ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ನೀಡಿರುವ ಇಂದ್ರ ಸಾಹ್ನಿ v/s ಯೂನಿಯನ್ ಆಫ್ ಇಂಡಿಯಾ ಪ್ರಕರಣದ ಸ್ಪಷ್ಟ ಉಲ್ಲಂಗನೆಯಲ್ಲವೆ?

ಜಸ್ಟಿಸ್ ಚಿನ್ನಪ್ಪ ರೆಡ್ಡಿ ಆಯೋಗದ ಶಿಪಾರಸಿನಂತೆ ಮುಸ್ಲಿಮ್ ಸಮುದಾಯವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿತ್ತು. ಈಗಿನ ಆರೆಸ್ಸೆಸ್ ಸರಕಾರ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣ ನೀಡಿ ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ಪಟ್ಟಿ ಯಿಂದ ತೆಗೆದದ್ದು ಅಸಾಂವಿಧಾನಿಕ ಅಲ್ಲವೆ? ಹಾಗಾದರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಇತರ ಧಾರ್ಮಿಕ ಅಲ್ಪಸಂಖ್ಯಾತರಾದ ಕ್ರೈಸ್ತ, ಬೌದ್ಧ್ದ, ಜೈನ್, ಸಿಖ್ ಧರ್ಮೀಯರ ಸ್ಥಾನಮಾನ ಏನು? ನಿನ್ನೆ ಆರೆಸ್ಸೆಸ್ ಸರಕಾರ ಪ್ರಕಟಿಸಿದ ಮೀಸಲಾತಿ ಪಟ್ಟಿ ಅತ್ಯಂತ ಅವೈಜ್ಞಾನಿಕ, ಅಸಾಂವಿಧಾನಿಕ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಮಾಡಿದ ದೊಡ್ಡ ವಂಚನೆ. ಇದರಿಂದ ಅನುಕೂಲವಾಗಿದೆ ಎಂದು ಯಾರಾದರೂ ಅಂದುಕೊಂಡರೆ ಅವರು ಸ್ಪಷ್ಟವಾಗಿ ಮೋಸ ಹೋಗಿದ್ದಾರೆ ಎಂದರ್ಥ. ಇದು ಚುನಾವಣೆಗಾಗಿ ಸಮುದಾಯಗಳನ್ನು ವಂಚಿಸಿ ಓಟು ಪಡೆಯುವ ದುಷ್ಟ ಹುನ್ನಾರವಲ್ಲದೆ ಬೇರೇನೂ ಅಲ್ಲ.

******************

ಕೋಮುವಾದಿ ಮತ್ತು ನಯವಂಚಕ ಮೀಸಲಾತಿ ಸೂತ್ರ

ಶಿವಸುಂದರ್, ಅಂಕಣಕಾರರು

ಅವಧಿ ಮುಗಿಯುವ ಕೊನೆಯ ಗಳಿಗೆಯಲ್ಲಿ ಬೊಮ್ಮಾಯಿ ಸರಕಾರ ಘೋಷಿಸಿರುವ ಮೀಸಲಾತಿ ಸೂತ್ರ ಅತ್ಯಂತ ಕುತಂತ್ರಿಯೂ, ಕೋಮುವಾದಿ ದುಷ್ಟತನದಿಂದಲೂ ಕೂಡಿದ್ದು, ನಿಷ್ಪಕ್ಷಪಾತಿ ನ್ಯಾಯಾಲಯದಲ್ಲಿ ಮೊದಲ ಅಹವಾಲಿನಲ್ಲಿ ಅನೂರ್ಜಿತಗೊಳ್ಳುತ್ತದೆ.

ಮುಸ್ಲಿಮರಿಗೆ ಹಿಂದುಳಿದ ವರ್ಗಗಳಡಿ ಮೀಸಲಾತಿ ರದ್ದತಿ- ಅಕ್ಷಮ್ಯ ಕೋಮುವಾದಿ ಕ್ರಮ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ 2(ಬಿ) ಪ್ರವರ್ಗ ದಡಿ ಮುಸ್ಲಿಮರು ಪಡೆಯುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ EWS ಮೀಸಲಾತಿಯಡಿ ತರಲಾಗಿದೆ. ಸಾಚಾರ್ ವರದಿಯ ಪ್ರಕಾರ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ದಲಿತರಿಗಿಂತಲೂ ಹಿಂದುಳಿದಿರುವ ಮುಸ್ಲಿಮರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಮುಂದುವರಿದಿರುವ ಬ್ರಾಹ್ಮಣರ ಜೊತೆ ಪೈಪೋಟಿಗಿಳಿಸಿ ಮುಸ್ಲಿಮರನ್ನು ಸಾರ್ವಜನಿಕ ಕ್ಷೇತ್ರದಿಂದ ಸಂಪೂರ್ಣವಾಗಿ ಅದೃಶ್ಯಗೊಳಿಸುವ ಹಿಂದುತ್ವದ ಹುನ್ನಾರವಿದು... ಆದರೆ ಮುಸ್ಲಿಮರಿಗೆ 2(ಬಿ) ಪ್ರವರ್ಗದಡಿ ಮೀಸಲಾತಿ ಕೊಟ್ಟಿರುವುದು ಧರ್ಮದ ಆಧಾರ ದಲ್ಲಲ್ಲ. ಇತರ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಮ್ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ ಒಬಿಸಿ-ಇತರ ಹಿಂದುಳಿದ ವರ್ಗ- ಮೀಸಲಾತಿಯನ್ನು ನೀಡಲಾಗಿದೆ.

1920 ರ ಮಿಲ್ಲರ್ ಸಮಿತಿಯಿಂದಲೂ ಕರ್ನಾಟಕದ ಮುಸ್ಲಿಮ್ ಸಮುದಾಯ ವನ್ನು ಅಬ್ರಾಹ್ಮಣ ಹಿಂದುಳಿದ ಸಮುದಾಯವೆಂದು ಪರಿಗಣಿಸಿ ಮೀಸಲಾತಿ ಒದಗಿಸಲಾಗಿದೆ.

ಸ್ವಾತಂತ್ರ್ಯಾ ನಂತರದಲ್ಲಿ 1961 ರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು 1990 ರ ಚಿನ್ನಪ್ಪ ರೆಡ್ಡಿ ಆಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ಎತ್ತಿ ಹಿಡಿದಿದೆ.

2013 ರಲ್ಲಿ ಬಿಜೆಪಿ ಸರಕಾರವು ಸಹ ಮುಸ್ಲಿಮರಿಗೆ ಒಬಿಸಿ ಪ್ರಮಾಣ ಪತ್ರ ಕೊಡುವ ವಿವಾದವೊಂದರಲ್ಲಿ ಸುತ್ತೋಲೆ ಕ್ರಮಾಂಕ No:BCW 68 BCA 2013-2013 ಪ್ರಕಾರ ಎಲ್ಲಾ ಮುಸ್ಲಿಮರಿಗೂ ಒಬಿಸಿ ಸರ್ಟಿಫಿಕೇಟ್ ಕೊಡಲು ಅದೇಶಿಸಿತ್ತು.

ಮುಸ್ಲಿಮರನ್ನು ಯಾವುದೇ ಅಧ್ಯಯನವಿಲ್ಲದೆ ಏಕಾಏಕಿ ಮುಂದುವರಿದ ಪಟ್ಟಿಗೆ ಸೇರಿಸಲು ಅವಕಾಶವಿಲ್ಲ. ಹಾಗೂ ಧರ್ಮದ ಮೀಸಲಾತಿ ಸಲ್ಲ ಎನ್ನುವ ಬಿಜೆಪಿ ಸರಕಾರ 3 (ಬಿ) ಈಗ 2 (ಡಿ)ಯಲ್ಲಿರುವ ಕ್ರಿಶ್ಚಿಯನ್ ಮೀಸಲಾತಿ ಮುಂದುವರಿಸಿರುವುದು ಬಿಜೆಪಿಯ ಕೋಮುವಾದಕ್ಕೆ ಮತ್ತೊಂದು ಉದಾಹರಣೆ

ಒಳಮೀಸಲಾತಿ ಆದೇಶ- ಒಣಮಾತಿನ ನಯವಂಚನೆ

ರಾಜ್ಯದ ಶಾಸನ ಸಭೆಗಳಿಗೆ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಒಳ ವರ್ಗೀಕರಣ ಮಾಡುವ ಶಾಸನಾತ್ಮಕ ಅಧಿಕಾರವಿಲ್ಲವೆಂದು ೨೦೦೪ರಲ್ಲಿ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಆದೇಶಿಸಿದೆ. ೨೦೨೦ರಲ್ಲಿ ಮತ್ತೊಂದು ಸಾಂವಿಧಾನಿಕ ಪೀಠ ಅದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ನೀಡಿದ್ದರೂ ಅದೂ ಕೂಡ ಐವರು ಸದಸ್ಯರ ಪೀಠವಾಗಿದ್ದರಿಂದ ಏಳು ಸದಸ್ಯರ ಪೀಠಕ್ಕೆ ಶಿಫಾರಸು ಮಾಡಲಾಯಿತು. ಈವರೆಗೆ ಅಂಥಾ ಉನ್ನತ ಪೀಠ ರಚನೆಯಾಗಿಲ್ಲ.

ಮತ್ತೊಂದು ಮಾರ್ಗ: ಸಂವಿಧಾನದ ೩೪೧ ನೇ ಕಲಮಿಗೆ ೩೪೧ (೩) ತಿದ್ದುಪಡಿ ತಂದು ರಾಜ್ಯ ಶಾಸನ ಸಭೆಗಳಿಗೆ ಒಳಮೀಸಲಾತಿಯ ಅಧಿಕಾರ ಕಲ್ಪಿಸುವುದು. ಅಹೋರಾತ್ರಿ ಸಂವಿಧಾನ ತಿದ್ದುಪಡಿ ಮಾಡಿ ಮೇಲ್ಜಾತಿಗಳಿಗೆ EWS ಮೀಸಲಾತಿ ಕಲ್ಪಿಸಿದ ಬಿಜೆಪಿಗೆ ರಾಜಕೀಯ ಇಚ್ಛಾಶಕ್ತಿ ಇದ್ದರೆ ಸುಲಭದ ಕೆಲಸ. ಆದರೆ ಕೇಂದ್ರದ ಬಿಜೆಪಿಯ ಮುಂದೆ ಜಸ್ಟಿಸ್ ಉಷಾ ಮೆಹ್ರಾ ಆಯೋಗದ ವರದಿಯನ್ನು ಒಳಗೊಂಡಂತೆ ಈಗಾಗಲೇ ಆಂಧ್ರ, ಪಂಜಾಬ್ ಇನ್ನಿತರ ರಾಜ್ಯಗಳು ಈ ಬಗೆಯ ಸಂವಿಧಾನ ತಿದ್ದುಪಡಿ ಮಾಡ ಬೇಕೆಂಬ ಆಗ್ರಹಗಳಿದ್ದರೂ ಅದನ್ನು ಮೋದಿ ಸರಕಾರ ಪರಿಗಣಿಸುತ್ತಿಲ್ಲ. ಹೆಚ್ಚೆಂದರೆ ಈಗಾಗಲೇ ಮೋದಿ ಸರಕಾರದ ಕಸದ ಬುಟ್ಟಿಗೆ ಹಾಕಿರುವ ಇಂಥಾ ಶಿಫಾರಸುಗಳ ಜೊತೆಗೆ ಕರ್ನಾಟಕ ಸರಕಾರದ ಶಿಫಾರಸು ಸೇರಿಕೊಳ್ಳುತ್ತದೆ. ಹೀಗಾಗಿ ಒಳಮೀಸಲಾತಿ ಸದ್ಯಕ್ಕೆ ಜಾರಿಯಾಗು
ವುದಿಲ್ಲ. ಇದಲ್ಲದೆ ಎಸ್‌ಸಿ-ಎಸ್‌ಟಿ ಮೀಸಲಾತಿಯ ಹೆಚ್ಚಳವನ್ನು ಒಂಭತ್ತನೇ ಶೆಡ್ಯೂಲಿಗೆ ಸೇರಿಸಲು ಸಂಸತ್ತು ಒಂದು ಕಾನೂನು ಮಾಡಬೇಕು. ಅದರ ಬಗ್ಗೆ ಯಾವುದೇ ಪ್ರಸ್ತಾಪ ವಿಲ್ಲವೆಂದು ಮೊನ್ನೆ ಸಮಾಜ ಕಲ್ಯಾಣ ಸಚಿವರೇ ಹೇಳಿದ್ದಾರೆ. ಎಸ್‌ಸಿ ಒಳಮೀಸಲಾತಿ ಪ್ರಮಾಣವನ್ನು ಈಗ ಸರಕಾರದ ಆದೇಶ ಹೆಚ್ಚಿಸಿರುವ ರೀತಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಹೀಗಾಗಿಯೂ ಅದು ಊರ್ಜಿತವಾಗುವುದಿಲ್ಲ.

ಲಿಂಗಾಯತ-ಒಕ್ಕಲಿಗ ಮೀಸಲಾತಿ ಹೆಚ್ಚಳದ ಮೋಸ

ಮುಸ್ಲಿಮ್ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು ಒಕ್ಕಲಿಗ ಮತ್ತು ಲಿಂಗಾಯತ ಗುಂಪಿಗೆ ತಲಾ ಎರಡೆರಡು ಹಂಚಿರುವುದರ ಹಿಂದೆ ಯಾವುದೇ ವೈಜ್ಞಾನಿಕ ಬುನಾದಿ ಯಿಲ್ಲ. ಏಕೆಂದರೆ ಅದೇ ರೀತಿಯಲ್ಲಿ ೨ (ಎ) ಪ್ರವರ್ಗಕ್ಕೆ ಏಕೆ ಯಾವುದೇ ಹೆಚ್ಚಳವಿಲ್ಲ ಎಂಬುದಕ್ಕೆ ಚುನಾವಣೆಗೆ ಮುಂಚೆ ಬಲಾಡ್ಯ ಜಾತಿಗಳನ್ನು ತುಷ್ಟೀಕರಿಸುವ ಉದ್ದೇಶವನ್ನು ಬಿಟ್ಟರೆ ಬೇರೆ ಯಾವುದೇ ಕಾನೂನು ಸಮಜಾಯಿಷಿ ಇಲ್ಲ. ಹೀಗಾಗಿ ಇದು ಆರಂಭದಲ್ಲೇ ಅನೂರ್ಜಿತಗೊಳ್ಳುವ ಸೂತ್ರವಾಗಿದೆ. ಒಕ್ಕಲಿಗರಿಗೂ, ಲಿಂಗಾಯತರಿಗೂ ಮೋಸವಾಗಿದೆ. ಶೇ.೫೦ರ ಮೀಸಲಾತಿಯ ಮೇಲ್ಮಿತಿಯನ್ನು ಹೆಚ್ಚಿಸದೆ ಇದಕ್ಕೆ ಪರಿಹಾರವಿಲ್ಲ. ಆದರೆ ಬಿಜೆಪಿ ಸರಕಾರ ತನ್ನ ಕೋಮುವಾದಿ ಪಾಪದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರನ್ನು ಒಳಗೊಳ್ಳುತ್ತಿದೆ.

******************

ಅವಕಾಶ ವಂಚಿತವಾಗಲಿರುವ ಮುಸ್ಲಿಮ್ ಸಮುದಾಯ

ಡಾ.ಮುಜಾಫರ್ ಅಸ್ಸಾದಿ

ಮೊದಲನೆಯದಾಗಿ, ಸರಕಾರ ಮಾಡಿರುವ ದೊಡ್ಡ ತಪ್ಪು ಎಂದರೆ ಮುಸ್ಲಿಮ್ ಎಂಬುದನ್ನು ಸಮುದಾಯವೆಂದು ನೋಡದೆ ಧರ್ಮವೆಂದು ನೋಡಿರುವುದು. ಮುಸ್ಲಿಮ್ ಎಂಬುದು ಸಮುದಾಯ.

ಇಸ್ಲಾಮ್ ಎಂಬುದು ಧರ್ಮ. ಆದರೆ ಇಲ್ಲಿ ಅವೆರಡನ್ನೂ ಒಂದೇ ಎಂದುಕೊಳ್ಳಲಾಗಿದೆ. ಈ ವ್ಯತ್ಯಾಸದ ಬಗ್ಗೆ ಸರಕಾರಕ್ಕೆ ತಿಳಿದಿಲ್ಲವೊ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ತಿಳಿದಿಲ್ಲವೊ ಗೊತ್ತಿಲ್ಲ.

ಮುಸ್ಲಿಮರನ್ನು ಸಾಮಾಜಿಕ ಮತ್ತು ಆರ್ಥಿಕ ವರ್ಗವಾಗಿ ಮೊದಲು ಪರಿಗಣಿಸಿದ್ದು ದೇವೇ ಗೌಡರು. ಮುಸ್ಲಿಮರಲ್ಲಿ ಹಲವಾರು ಪ್ರಭೇದಗಳಿವೆ, ಜಾತಿಗಳಿವೆ. ಹಾವನೂರು ಆಯೋಗ ಸೇರಿದಂತೆ ಹಲವಾರು ಆಯೋಗಗಳು ಇದನ್ನು ಸ್ಪಷ್ಟವಾಗಿ ಹೇಳಿವೆ. ಒಂದು ಸಮುದಾಯದಲ್ಲಿ ನೂರಾರು ಜಾತಿಗಳು ಬರುತ್ತವೆ. ಅಲ್ಲಿಯೂ ಮೇಲ್ಜಾತಿ, ಕೆಳಜಾತಿಗಳಿರುತ್ತವೆ. ಮದುವೆ ಮೊದಲಾದ ಆಚರಣೆಗಳು ಜಾತಿಯಿಂದ ಜಾತಿಗೆ ಬೇರೆ ಬೇರೆಯಾಗಿರುತ್ತವೆ. ರೀತಿ ರಿವಾಜುಗಳಲ್ಲಿ ವ್ಯತ್ಯಾಸಗಳಿರುತ್ತವೆ. ಆದರೆ ಧರ್ಮವೆಂಬುದು ಇವೆಲ್ಲವನ್ನೂ ಒಂದೆಡೆಗೆ ತರುವಂಥದ್ದಾಗಿದೆ. ಅದಕ್ಕೊಂದು ತತ್ವವಿರುತ್ತದೆ. ಜಾತಿಯಿಂದ ಬೇರೆಬೇರೆಯಾದವರು ಒಂದು ನಿರ್ದಿಷ್ಟ ಧರ್ಮದಡಿಯಲ್ಲಿ ಒಂದೇ ಆಗುತ್ತಾರೆ. ಆದರೆ ಧರ್ಮ ಮತ್ತು ಸಮುದಾಯದ ನಡುವಿನ ಈ ವ್ಯತ್ಯಾಸವನ್ನೇ ಅರಿಯದೆ ಮಾಡಿರುವ ಈ ತೀರ್ಮಾನ ಅರ್ಥಹೀನ ತೀರ್ಮಾನವಾಗಿದೆ.

ಎರಡನೆಯದಾಗಿ, 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿ ರದ್ದುಗೊಳಿಸಿ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಅಡಿಯಲ್ಲಿ ತಂದಿರುವುದು ಇನ್ನೊಂದು ಬಗೆಯ ವೈರುದ್ಧ್ಯ. EWS ಎಂಬುದು ಆರ್ಥಿಕ ವರ್ಗವೇ ಹೊರತು ಸಾಮಾಜಿಕ ವರ್ಗವಲ್ಲ. ಯಾರಾದರೂ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಲ್ಲಿಯೂ ಅವಕಾಶ ತಪ್ಪುತ್ತದೆ. ಹಾಗಾಗಿ ಮುಸ್ಲಿಮರಿಗೆ ೨ಬಿ ಅಡಿಯಲ್ಲೂ ಮೀಸಲಾತಿಯಿರದೆ, ಇಲ್ಲಿಯೂ ಸಿಗದೆ ಹೋಗುತ್ತದೆ.

EWS ನಲ್ಲಿ ಬ್ರಾಹ್ಮಣರು ಮೊದಲಾದವರೊಡನೆ ಸ್ಪರ್ಧಿಸಿ ಅವಕಾಶ ಪಡೆಯುವುದು ಮುಸ್ಲಿಮರಿಗೆ ಸಾಧ್ಯವಿಲ್ಲ. ಉತ್ತಮ ಓದಿನ ಅವಕಾಶವಿರುವ ಮತ್ತು ಅತೀ ಹೆಚ್ಚು ಅಂಕ ಗಳಿಸುವ ಅಂಥ ಜಾತಿಗಳೊಡನೆ, ಸ್ಲಂನಲ್ಲಿ ಬದುಕುವ ಬಡ ಮುಸ್ಲಿಮ್ ಸಮುದಾಯದ ಮಕ್ಕಳು ಮತ್ತು ಉದ್ಯೋಗಾರ್ಥಿಗಳು ಸ್ಪರ್ಧಿಸಲಾರರು. ಹಾಗಾಗಿ ಶಿಕ್ಷಣ, ಉದ್ಯೋಗವೆರಡರಲ್ಲಿಯೂ ಮುಸ್ಲಿಮ್ ಸಮುದಾಯ ಅವಕಾಶ ವಂಚಿತವಾಗ ಬೇಕಾಗುತ್ತದೆ.

ಎಲ್ಲಾ ಸಮುದಾಯಗಳೊಂದಿಗೆ ಇಲ್ಲಿ ಸ್ಪರ್ಧಿಸಬೇಕಾಗುತ್ತದೆ. ಮೇಲ್ಜಾತಿಗಳಲ್ಲಿನ ಬಡವರ ಜೊತೆಗೂ ಸ್ಪರ್ಧಿಸಬೇಕು, ಇತರ ಬಡವರ ಜೊತೆಗೂ ಸ್ಪರ್ಧಿಸಬೇಕು. ಈ ಸ್ಪರ್ಧಾತ್ಮಕ ಸ್ಥಿತಿ ಮುಸ್ಲಿಮ್ ಸಮುದಾಯವನ್ನು ಇನ್ನಷ್ಟು ಅಂಚಿಗೆ ತಳ್ಳಲಿದೆ. ಹಾಗಾಗಿ ಸರಕಾರದ ಈ ತೀರ್ಮಾನದಿಂದ ಮುಸ್ಲಿಮ್ ಸಮುದಾಯಕ್ಕೆ ನಷ್ಟವೇ ಹೆಚ್ಚು.

******************

ಮುಸ್ಲಿಮರು ಹಿಂದುಳಿದ ವರ್ಗವಲ್ಲವೇ?

ಕೆ.ಎನ್.ಲಿಂಗಪ್ಪ, ಮಾಜಿ ಸದಸ್ಯರು,
ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಇತ್ತೀಚಿನ ಸಚಿವ ಸಂಪುಟದಲ್ಲಿ ಮೀಸಲಾತಿ ಸಂಬಂಧ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿರುವುದು ವರದಿ ಯಾಗಿದೆ. ಅದರಲ್ಲಿ ಅತಿ ಮುಖ್ಯವಾಗಿ ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈ ಬಿಟ್ಟಿರುವುದು. ಯಾವುದೇ ಜಾತಿ ಅಥವಾ ಕೋಮು ಅಥವಾ

ಸಮೂಹಗಳು ಮಾನದಂಡಗಳಿಗೆ ಅನುಗುಣವಾಗಿದ್ದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಧರ್ಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಸೇರಿಸಬಹುದು. ಆ ಪ್ರಕಾರವಾಗಿ ಮುಸ್ಲಿಮ್ ಸಮುದಾಯದ ಅಂಥ ವರ್ಗಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿರುವುದು ನಮ್ಮ ಕಣ್ಮುಂದಿದೆ.

ಡಿ. ದೇವರಾಜ ಅರಸು ಮುಸ್ಲಿಮ್ ಸಮುದಾಯವನ್ನು ಸಂಪೂರ್ಣವಾಗಿ ಹಿಂದುಳಿದ ಕೋಮು ಎಂದು ಪರಿಗಣಿಸಿ ಒಕ್ಕಲಿಗ ಮುಂತಾದ ಜಾತಿಗಳೊಡನೆ ಸೇರಿಸಿ ಶೇ.18ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿದ್ದರು ಎಂಬುದು ಇಲ್ಲಿ ಉಲ್ಲೇಖನಿಯ.

ಸೋಮಶೇಖರಪ್ಪ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯ, ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿರುವುದರ ಬಗ್ಗೆ ಈ ರೀತಿ ಅಭಿಪ್ರಾಯ ಪಡುತ್ತದೆ: ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದ ಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗೆ ಇಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಮ್ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ.

ನ್ಯಾ. ಚಿನ್ನಪ್ಪ ರೆಡ್ಡಿಯವರು ಮುಸ್ಲಿಮರು ವಾಸಿಸುವ ಹಲವು ಗ್ರಾಮಗಳಿಗೆ ಭೇಟಿ ನೀಡಿ ಅವರಲ್ಲಿ ಶ್ರೀಮಂತ ಮತ್ತು ಬಡವರ ನಡುವಿನ ಅಗಾಧ ಅಂತರವನ್ನು ಗುರುತಿಸಿ ಅವರಲ್ಲಿರುವ ಅತಿ ಹೆಚ್ಚಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಡತನದ ಮಟ್ಟವನ್ನು ತಿಳಿಸಿಕೊಟ್ಟಿರುವರು. ಹಾಗೆಯೇ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವರು ಪಡೆದಿರುವ ಪ್ರಾತಿನಿಧ್ಯವನ್ನು ದತ್ತಾಂಶಗಳ ಹಿನ್ನೆಲೆಯಲ್ಲಿ ಚಿನ್ನಪ್ಪ ರೆಡ್ಡಿ ಅವರು ಮುಸ್ಲಿಮ್ ಸಮುದಾ ಯವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ, ಎಂದು ಪರಿಗಣಿಸಿ ಅದನ್ನು ೨ನೇ ಪ್ರವರ್ಗದಲ್ಲಿ ಇನ್ನಿತರ ೧೩ ಜಾತಿಗಳೊಡನೆ ಸೇರಿಸಿ ಶೇ.೨೮ರಷ್ಟು ಮೀಸಲಾತಿ ಕೋಟಾ ನಿಗದಿಗೊಳಿಸಿದ್ದರು.

1994 ರಲ್ಲಿ ಸರಕಾರ ವರದಿ ಜಾರಿಗೆ ಕೊಡುವ ಸಂದರ್ಭದಲ್ಲಿ, ಮುಸ್ಲಿಮ್ ಸಮುದಾಯವನ್ನು ಪ್ರತ್ಯೇಕಿಸಿ 2ಆ ಪ್ರವರ್ಗವೆಂದು ಕರೆದು ಶೇ.4 ರಷ್ಟು(ಕಡಿಮೆ ನಿಗದಿ) ಮೀಸಲಾತಿ ನೀಡಿತ್ತು. ಈ ಪ್ರಕ್ರಿಯೆ ಕಳೆದ 29 ವರ್ಷಗಳಿಂದ ಮುಂದುವರಿದಿದೆ. ಪ್ರಸಕ್ತ ಸರಕಾರ,
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ, 1995 ಕಲಂ 11ರ ಪ್ರಕಾರ ನ್ಯಾಯೋಚಿತ ಕ್ರಮವನ್ನು ಬಿಟ್ಟು ಸರಕಾರವೇ,
ರಾಜ್ಯ ಹಿಂದುಳಿದ ವರ್ಗಗಳ ಅಭಿಪ್ರಾಯ ಪಡೆಯದೆ, ಹಿಂದುಳಿದ ವರ್ಗಗಳ ಪಟ್ಟಿಯಿಂದ ಮುಸ್ಲಿಮ್ ಸಮುದಾಯವನ್ನು ಕೈ ಬಿಟ್ಟಿರು ವುದು ರಾಜಕೀಯ ಕಾರಣ ಇರಬಹುದು ಎಂದು ಅನುಮಾನ ಪಡು ವಂತಾಗಿದೆ. ರಾಜ್ಯದಲ್ಲಿ EWS ಜಾರಿಗೆ ಬಂದಿಲ್ಲ. ಸದ್ಯ ಯಾವುದೇ ಮೀಸಲಾತಿ ಯ ವರ್ಗಕ್ಕೆ ಸೇರದ ಬೆರಳೆಣಿಕೆಯ ಜಾತಿಗಳೊಡನೆ ಮುಸ್ಲಿಮರನ್ನೂ ಸೇರಿಸಿ ಯಾವ ಪರಿಮಾಣದ ಮೀಸಲಾತಿ ಕೊಡಲು ಸರಕಾರದ ಬಳಿ ಜಾತಿ ದತ್ತಾಂಶಗಳು ಎಲ್ಲಿವೆ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top