-

ಇವಿಎಂ: ವೈಜ್ಞಾನಿಕ ವಲಯದ ಅನುಮಾನಗಳಿಗೆ ಉತ್ತರಿಸುವುದೇ ಚುನಾವಣಾ ಆಯೋಗ?

-

ಚುನಾವಣೆ ಹತ್ತಿರ ಬಂದಂತೆಲ್ಲ ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು, ತಜ್ಞರು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಇದ್ದಾರೆ. ಈಸಲದ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆ ತೀವ್ರಗೊಳ್ಳುತ್ತಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಿತಾಸಕ್ತಿಯಲ್ಲಿ ಇವಿಎಂಗಳು ನಿಖರವಾಗಿರಬೇಕು ಮತ್ತು ಅವುಗಳ ಪರಿಣಾಮಕಾರಿತ್ವದ ಬಗ್ಗೆ ಇರುವ ಸಂದೇಹಗಳನ್ನು ಮುಖ್ಯ ಚುನಾವಣಾ ಆಯುಕ್ತರು ಪರಿಹರಿಸಬೇಕು ಎಂಬುದು ನಾಯಕರ ಒತ್ತಾಯ.

ಚಿಪ್ ಇರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು ಎನ್ನುತ್ತಾರೆ ತಜ್ಞರು. ಹೀಗಿರುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವಿಎಂ ಬಳಕೆ ಎಷ್ಟು ಸುರಕ್ಷಿತ ಮತ್ತು ಸೂಕ್ತ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಲೇ ಇದೆ.

ಇವಿಎಂ ಬಳಕೆಗೆ ಆಡಳಿತ ಪಕ್ಷ ಅಥವಾ ಚುನಾವಣಾ ಆಯೋಗದ ಸಮರ್ಥನೆ, ವಿಪಕ್ಷಗಳ ದೂಷಣೆ ನಡೆಯುತ್ತಲೇ ಬಂದಿದೆ. ಇವಿಎಂನಲ್ಲಿ ಸಮಸ್ಯೆಯಿಲ್ಲ ಎಂದು ಕಣ್ಮುಚ್ಚಿಕೊಳ್ಳುವ ಆಯೋಗ ಮತ್ತು ಇವಿಎಂನಿಂದಲೇ ಎಲ್ಲ ಸಮಸ್ಯೆ ಎನ್ನುವವರ ಹೊರತಾಗಿ ತಜ್ಞರೇ ಇವಿಎಂಗಳ ಬಗ್ಗೆ ತಕರಾರೆತ್ತಿರುವುದು ವಿಶೇಷ. ಕಳೆದ ಜನವರಿಯಲ್ಲಿ 112 ತಾಂತ್ರಿಕ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಮಾಜಿ ಅಧಿಕಾರಿಗಳು ಮುಖ್ಯ ಚುನಾವಣಾ ಆಯುಕ್ತರಿಗೊಂದು ಮನವಿ ಕೊಟ್ಟರು. ಅದರಲ್ಲಿ ಅವರು ಎತ್ತಿದ ಅನುಮಾನಗಳು ಹೀಗಿವೆ:

1. ಗುಂಡಿ ಒತ್ತುವ ಮೂಲಕ ಮತ ದಾಖಲಿಸುವ ಮತದಾರ, ತಾನು ಅಂದುಕೊಂಡಂತೆಯೇ ಮತ ಚಲಾವಣೆ ಆಗಿದೆಯೇ ಎಂದು ಪರಿಶೀಲಿಸಲು ಸಾಧ್ಯವಿಲ್ಲ. ಇದು ಹ್ಯಾಕಿಂಗ್, ಟ್ಯಾಂಪರಿಂಗ್ ಮತ್ತು ನಕಲಿ ಮತದಾನದ ವಿರುದ್ಧ ಯಾವುದೇ ಖಾತರಿ ಕೊಡುವುದಿಲ್ಲ. ಇವಿಎಂಗಳನ್ನು ತಿರುಚಬಹುದು ಮತ್ತು ಫಲಿತಾಂಶಗಳನ್ನು ಬದಲಾಯಿಸಬಹುದು ಎಂಬ ಅನುಮಾನಕ್ಕೆ ಆಸ್ಪದವಿದೆ. ಹಾಗಿದ್ದಲ್ಲಿ, ಇವಿಎಂ ಮೂಲಕ ನಡೆಸುವ ಚುನಾವಣೆಗಳು ಹೇಗೆ ಪ್ರಜಾಸತ್ತಾತ್ಮಕವಾಗಲು ಸಾಧ್ಯ?

2. ಇವಿಎಂಗಳ ವಿನ್ಯಾಸ ಮತ್ತು ಅನುಷ್ಠಾನ ಹಾಗೂ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎರಡರ ಫಲಿತಾಂಶಗಳು ಸಾರ್ವಜನಿಕ ಪರಿಶೀಲನೆ ಮತ್ತು ಸ್ವತಂತ್ರ ವಿಮರ್ಶೆಗೆ ಮುಕ್ತವಾಗಿಲ್ಲ. ಹೀಗಿರುವಾಗ ಚುನಾವಣೆಗಳನ್ನು ನ್ಯಾಯಸಮ್ಮತವೆಂದು ಪರಿಗಣಿಸುವುದು ಹೇಗೆ?

3. ಎಲ್ಲಾ ಇವಿಎಂಗಳಲ್ಲಿ ವಿವಿಪ್ಯಾಟ್ ಪರಿಚಯಿಸುವುದರೊಂದಿಗೆ ಈಗ ಎರಡು ಮತಗಳಿವೆ ಒಂದು ಇವಿಎಂ ಮೆಮೊರಿಯಲ್ಲಿ ದಾಖಲಾಗುತ್ತದೆ ಮತ್ತು ಇನ್ನೊಂದು ವಿವಿಪ್ಯಾಟ್‌ನಿಂದ ಮುದ್ರಿಸಲ್ಪಡುತ್ತದೆ. ಪಾರದರ್ಶಕತೆಗೋಸ್ಕರವೇ ವಿವಿಪ್ಯಾಟ್ ತರಲಾಗಿದ್ದರೂ, ಆಯೋಗ ಯಾಕೆ ಶೇ. 100ರಷ್ಟು ವಿವಿಪ್ಯಾಟ್ ಸ್ಲಿಪ್ ಎಣಿಕೆಯನ್ನು ನಿರಾಕರಿಸುತ್ತದೆ ಮತ್ತು ನಿಜವಾದ ಮತವಲ್ಲದ ಇವಿಎಂ ಮೆಮೊರಿಯನ್ನಷ್ಟೇ ಎಣಿಸುವುದಕ್ಕೆ ಒತ್ತು ಕೊಡುತ್ತದೆ?

4. ಚುನಾವಣೆ ಘೋಷಣೆ ಬಳಿಕ ಇವಿಎಂ - ವಿವಿಪ್ಯಾಟ್ ಯಾವುದೇ ಬಾಹ್ಯ ಸಾಧನಕ್ಕೆ ಸಂಪರ್ಕಗೊಂಡಿದೆಯೇ? ಹಾಗಿದ್ದಲ್ಲಿ ಆ ಬಾಹ್ಯ ಸಾಧನಗಳು ಯಾವುವು ಮತ್ತು ಯಾವ ಸಂವಹನ ಪ್ರೋಟೋಕಾಲ್ ಬಳಸಲಾಗುತ್ತದೆ?

5. ವಿವಿಪ್ಯಾಟ್ ಪ್ರೊಗ್ರಾಮೆಬಲ್ ಮೆಮೊರಿಯನ್ನು ಹೊಂದಿದೆಯೇ? ಹೌದಾದರೆ, ಚುನಾವಣಾ ಪ್ರಕ್ರಿಯೆಯ ಯಾವ ಹಂತಗಳಲ್ಲಿ ಅದನ್ನು ಬಾಹ್ಯ ಸಾಧನದಿಂದ ತೆಗೆದುಕೊಳ್ಳಲಾಗುತ್ತದೆ? ಇಲ್ಲವೆಂದಾದರೆ, ವಿವಿಪ್ಯಾಟ್ ಸ್ಲಿಪ್‌ನಲ್ಲಿ ಮುದ್ರಿಸಲು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳನ್ನು ಎಲ್ಲಿ ಸಂಗ್ರಹಿಸಲಾಗಿದೆ?

6. ತಾನು ಹಾಕಿದ ಮತ ಸರಿಯಾಗಿಲ್ಲ ಎನ್ನಿಸಿದರೆ ಮತದಾರ ಅದನ್ನು ರದ್ದುಗೊಳಿಸಲು ಅವಕಾಶವಿಲ್ಲ. ತಕರಾರು ಎತ್ತಿದರೂ, ತಾನು ಸುಳ್ಳು ಹೇಳುತ್ತಿಲ್ಲವೆಂದು ಸಾಬೀತುಪಡಿಸಲು ಮತದಾರನಿಗೆ ಸಾಧ್ಯವೇ ಇಲ್ಲ. ಸಾಬೀತುಪಡಿಸದಿದ್ದರೆ ಜೈಲು ಎಂಬುದಂತೂ ಕ್ರೂರವಾಗಿದೆ. ಇದು ನಾಗರಿಕರ ಸಾರ್ವಭೌಮತ್ವದ ಕಲ್ಪನೆಯ ವಿರುದ್ಧವಲ್ಲವೇ?

7. ಈಗ ಇವಿಎಂಗಳನ್ನು ತಯಾರಿಸುವ ಸಾರ್ವಜನಿಕ ವಲಯದ ಸಂಸ್ಥೆಗಳಾದ ಬೆಂಗಳೂರಿನ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಹೈದರಾಬಾದ್‌ನ ಇಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಇವುಗಳ ಇವಿಎಂ ಪೇಟೆಂಟ್ ಅವಧಿ ಮುಗಿದಿದೆ. ಈ ಹಂತದಲ್ಲಿ ಮುಂದಿನ ವ್ಯವಸ್ಥೆ ಬಗ್ಗೆ ಆಯೋಗ ಪಾರದರ್ಶಕವಾಗಿರುತ್ತದೆಯೆ?

8. ಬಿಇಎಲ್ ಮತ್ತು ಇಸಿಐಎಲ್ ಚುನಾವಣಾ ಆಯೋಗದ ನಿಯಂತ್ರಣ ಅಥವಾ ಮೇಲ್ವಿಚಾರಣೆಯಲ್ಲಿಲ್ಲ. ವಿದೇಶಿ ಚಿಪ್ ತಯಾರಕರೊಂದಿಗೆ ಗೌಪ್ಯ ಸಾಫ್ಟ್‌ವೇರ್ ಪ್ರೋಗ್ರಾಂ ಹಂಚಿಕೊಳ್ಳುವುದರ ಬಗ್ಗೆ ಆರೋಪಗಳಿವೆ. ಹಾಗಾದರೆ, ಚುನಾವಣಾ ಪ್ರಕ್ರಿಯೆ ಮತ್ತು ಕಾರ್ಯವಿಧಾನದ ಮೇಲೆ ಆಯೋಗದ ನಿಯಂತ್ರಣ ಮತ್ತು ಮೇಲ್ವಿಚಾರಣೆ ಎಲ್ಲಿದೆ?

ಇದಲ್ಲದೆ, ಯಾವ ಚಿಹ್ನೆಗೆ ಮತ ಹಾಕಿದರೂ ಅದು ಬಿಜೆಪಿಗೇ ಬೀಳುತ್ತಿದ್ದುದರ ಬಗ್ಗೆಯೂ ದೂರುಗಳಿದ್ದವು. ಅದನ್ನು ತಾಂತ್ರಿಕ ದೋಷವೆನ್ನಲಾಯಿತಾದರೂ, ತಾಂತ್ರಿಕ ದೋಷ ಬಿಜೆಪಿ ಪರವೇ ಇದ್ದುದು ಹೇಗೆಂಬ ಪ್ರಶ್ನೆಗಳೂ ಎದ್ದಿದ್ದವು. ಇವೆಲ್ಲದರ ಬಗ್ಗೆ ಆಯೋಗ ಮೌನವಾಗಿದೆ. ಈ ಸಂಬಂಧ ಸಲ್ಲಿಸಲಾದ ಆರ್‌ಟಿಐ ಅರ್ಜಿಗೂ ಪ್ರತಿಕ್ರಿಯಿಸುತ್ತಿಲ್ಲ ಎನ್ನಲಾಗಿದೆ.

ಇವೆಲ್ಲದರ ನಡುವೆಯೇ, 2019ರ ಲೋಕಸಭಾ ಚುನಾವಣೆಯಲ್ಲಿ 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕೂ ಇವಿಎಂನಲ್ಲಿ ಎಣಿಕೆಯಾದ ಮತಕ್ಕೂ ತಾಳೆ ಆಗದೇ ಇರುವ ಬಗ್ಗೆ ಬಗ್ಗೆ 'ದಿ ಕ್ವಿಂಟ್' ವರದಿ ಮಾಡಿತ್ತು. ಅದಕ್ಕೆ ಸೂಕ್ತ ವಿವರಣೆ ನೀಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿತ್ತು. ಇದು ಕೊನೆಗೆ ಸುಪ್ರೀಂ ಕೋರ್ಟ್‌ಗೂ ತಲುಪಿತ್ತು.

ಆ ಲೋಕಸಭಾ ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಸಲಾಗಿತ್ತು ಎಂಬುದನ್ನು 'ದಿ ಕ್ವಿಂಟ್' ನಡೆಸಿದ ತನಿಖೆ ದೃಢಪಡಿಸಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಭಾಗಿಯಾಗಿರುವುದಿಲ್ಲ ಮತ್ತು ಹೊರಗುತ್ತಿಗೆ ನೀಡಲಾಗಿರುವುದಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಲೇ ಬಂದಿದೆ. ಆದರೆ ಇದು ಸುಳ್ಳೆಂಬುದು ಕ್ವಿಂಟ್ ತನಿಖೆಯಿಂದ ಬಯಲಾಗಿತ್ತು. ಇವಿಎಂ ಮತ್ತು ವಿವಿಪ್ಯಾಟ್ ತಯಾರಿಸುವ ಇಸಿಐಎಲ್ ಮುಂಬೈ ಮೂಲದ ಖಾಸಗಿ ಸಂಸ್ಥೆಯಾಗಿರುವ ಟಿ ಆ್ಯಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಇಂಜಿನಿಯರ್‌ಗಳನ್ನು ಕನ್ಸಲ್ಟಂಟ್ಸ್ ಎಂದು ನೇಮಿಸಿಕೊಂಡದ್ದು ಕ್ವಿಂಟ್ ತನಿಖೆಯಿಂದ ಬಹಿರಂಗವಾಗಿತ್ತು. ಆದರೆ ಚುನಾವಣಾ ಆಯೋಗ ಮಾತ್ರ ಇಲ್ಲವೆಂದೇ ಹೇಳಿತ್ತು. ಚುನಾವಣೆ ನಡೆಯುವುದಕ್ಕೆ ಕೇವಲ ಹದಿನೈದು ದಿನಗಳಿರುವವರೆಗೂ ಈ ಖಾಸಗಿ ಕನ್ಸಲ್ಟಂಟ್‌ಗಳಿಗೆ ಇವಿಎಂ ಮತ್ತು ವಿವಿಪ್ಯಾಟ್ ತೆರೆಯುವ ಅವಕಾಶವಿದ್ದು, ಅವರು ಅಭ್ಯರ್ಥಿಗಳ ಹೆಸರು, ಚಿಹ್ನೆ ಮುಂತಾದವುಗಳನ್ನು ಅಳವಡಿಸಬೇಕಾಗಿರುತ್ತದೆ. ಇಂಥ ಸೂಕ್ಷ್ಮ ಕೆಲಸಕ್ಕೆ ಹೊರಗಿನವರನ್ನು ನೇಮಿಸುವುದರಿಂದ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿಲ್ಲವೆ? ಚುನಾವಣೆ ನಡೆಯುತ್ತಿರುವಾಗಲೂ, ನಡೆದ ಬಳಿಕವೂ ಇವರನ್ನು ಬಳಸಲಾಗಿರುವಾಗ ಚುನಾವಣಾ ಆಯೋಗಕ್ಕೆ ಗೊತ್ತಿಲ್ಲದೇ ಇರುವುದು ಹೇಗೆ ಸಾಧ್ಯ? ಇಂಥ ಹಲವು ಪ್ರಶ್ನೆಗಳೆದ್ದಿದ್ದವು.

ಯಾವುದೇ ಚುನಾವಣೆಗೆ ಬಳಸಿದ ವಿವಿಪ್ಯಾಟ್ ಸ್ಲಿಪ್‌ಗಳನ್ನು ಒಂದು ವರ್ಷ ಇಟ್ಟುಕೊಳ್ಳಬೇಕು. ಆ ಬಳಿಕವೇ ಅವುಗಳನ್ನು ನಾಶ ಮಾಡಬೇಕು ಎಂದು ನಿಯಮವಿದ್ದರೂ 2019ರ ಲೋಕಸಭಾ ಚುನಾವಣೆ ಮುಗಿದ ನಾಲ್ಕೇ ತಿಂಗಳೊಳಗೆ ಚುನಾವಣಾ ಆಯೋಗ ಅಲ್ಲಿ ಬಳಸಿದ ವಿವಿಪ್ಯಾಟ್ ಸ್ಲಿಪ್‌ಗಳನ್ನು ನಾಶ ಮಾಡಿದ್ದನ್ನೂ 'ದಿ ಕ್ವಿಂಟ್' ಬಯಲಿಗೆಳೆದಿತ್ತು. ಎಲ್ಲ ಪಾರದರ್ಶಕವಾಗಿ ನಡೆದಿದ್ದರೆ ಅಷ್ಟು ತುರ್ತಿನಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ನಾಶ ಏಕೆ ಮಾಡಬೇಕಿತ್ತು?
2019ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿ ಯಾಗಿಯೂ ಕರ್ತವ್ಯ ನಿರ್ವಹಿಸಿದ್ದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ತಿರುಚುವುದು ಸಾಧ್ಯವಿದೆ ಎಂದು ಚುನಾವಣಾ ಆಯೋಗಕ್ಕೆ ದೂರಿದ್ದರು. ಇದರ ತನಿಖೆಗಾಗಿ ಆಯೋಗ ತಾಂತ್ರಿಕ ಸಮಿತಿಯೊಂದನ್ನು ರಚಿಸಿತ್ತು.

ಇನ್ನು ಚುನಾವಣೆ ವೇಳೆ ಇವಿಎಂಗಳನ್ನು ಖಾಸಗಿ ವಾಹನಗಳಲ್ಲಿ ಸಾಗಿಸಿದ್ದ ಹಲವಾರು ನಿದರ್ಶನಗಳು ಕಂಡು ಬಂದಿದ್ದವು.
ಜಗತ್ತಿನ ಹಲವಾರು ಪ್ರಮುಖ ದೇಶಗಳು ಇವಿಎಂಗಳನ್ನು ದೂರವೇ ಇಟ್ಟಿವೆ. ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ದೇಶಗಳು ಇದನ್ನು ಬಳಸಿಯೇ ಇಲ್ಲ. ಅತ್ಯಂತ ತಾಂತ್ರಿಕ ಸ್ನೇಹಿ ದೇಶ ಅಮೆರಿಕ ಕೂಡ ಇದನ್ನು ಬ್ಯಾನ್ ಮಾಡಿದೆ. ಜರ್ಮನಿ, ನೆದರ್‌ಲ್ಯಾಂಡ್ಸ್ ಕೂಡ ಇದನ್ನು ಬದಿಗೆಸೆದಿವೆ. ಆದರೆ ಭಾರತದಲ್ಲಿ ಮಾತ್ರ ಇದನ್ನು ಬಳಸಲಾಗುತ್ತಿದೆ. ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿರುವ ಬಗ್ಗೆಯಂತೂ ನಿರಂತರ ಆರೋಪಗಳಿವೆ. 2014ರ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿಯ ಅತ್ಯಂತ ಹಿರಿಯ ನಾಯಕರೇ ಇವಿಎಂಗಳ ದಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪ ಮಾಡಿ ಪುಸ್ತಕಗಳನ್ನೇ ಬರೆದಿದ್ದಾರೆ. ಆದರೆ 2014ರ ಬಳಿಕ ಅವರೆಲ್ಲರೂ ಈ ಬಗ್ಗೆ ಮೌನವಾಗಿದ್ದಾರೆ.
ಚುನಾವಣಾ ಅಕ್ರಮವನ್ನು ತಡೆಯುವಲ್ಲಿ ಪೂರ್ತಿ ದುರ್ಬಲವಾಗಿರುವ, ಹೌದಪ್ಪಗಳೇ ಆಯುಕ್ತರಾಗುವ ಚುನಾವಣಾ ಆಯೋಗ, ಅಸಹಾಯಕತೆ ಮತ್ತು ಒಂದು ಬಗೆಯ ನಿರ್ಲಜ್ಜ ಸ್ಥಿತಿ ಮುಟ್ಟಿ ಬಹಳ ಕಾಲವೇ ಆಗಿದೆ. ಹೀಗಿರುವಾಗ, ಅದು ಇವಿಎಂ ಕುರಿತ ಅನುಮಾನಗಳಿಗೆ ಉತ್ತರಿಸಬಲ್ಲುದೆ?


ಇವಿಎಂ: ಒಂದು ಹಿನ್ನೋಟ

ದೇಶದಲ್ಲಿ ಇವಿಎಂ ಬಳಕೆ ಶುರುವಾಗಿ 40 ವರ್ಷಗಳೇ ಆಗಿವೆ. ಈ ನಾಲ್ಕು ದಶಕಗಳಲ್ಲಿನ ಕೆಲವು ಹಂತಗಳನ್ನು ಒಮ್ಮೆ ಗಮನಿಸಬೇಕು.
1982 ಕೇರಳದ ಪರೂರ್ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಸಲಾಯಿತು. ಆಗ ಸಿಪಿಐ ವಿರುದ್ಧ ಸೋತ ಕಾಂಗ್ರೆಸ್ ಅಭ್ಯರ್ಥಿ ಎ.ಸಿ. ಜೋಸ್, ಇವಿಎಂಗಳ ಬಳಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಇವಿಎಂ ಬಳಕೆ ಕುರಿತು ಕಾನೂನು ನಿಬಂಧನೆಯನ್ನು ಪರಿಚಯಿಸದೆ ಅದನ್ನು ಬಳಸಕೂಡದು ಎಂದು ಕೋರ್ಟ್ ಸೂಚಿಸಿತು.

ಡಿಸೆಂಬರ್ 1988 - ಸಂಸತ್ತು ಪ್ರಜಾಪ್ರತಿನಿಧಿ ಕಾಯ್ದೆ 1951ನ್ನು ತಿದ್ದುಪಡಿ ಮಾಡಿ, ಇವಿಎಂ ಬಳಸಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವ ಸೆಕ್ಷನ್ 61ಎಯನ್ನು ಪರಿಚಯಿಸಿತು.

ಫೆಬ್ರವರಿ 1990: ಇವಿಎಂಗಳ ಪರಿಣಾಮಕಾರಿತ್ವದ ಬಗ್ಗೆ ನಿರಂತರ ಸಂದೇಹಗಳ ಹಿನ್ನೆಲೆಯಲ್ಲಿ ಸರಕಾರ ಚುನಾವಣಾ ಸುಧಾರಣಾ ಸಮಿತಿ (ಇಆರ್‌ಸಿ) ರಚಿಸಿತು. ತಾಂತ್ರಿಕ ತಜ್ಞರ ತಂಡದಿಂದ ಇವಿಎಂ ಮೌಲ್ಯಮಾಪನಕ್ಕೆ ಸಮಿತಿ ಶಿಫಾರಸು ಮಾಡಿತು.

ಎಪ್ರಿಲ್ 1990: ಇವಿಎಂಗಳನ್ನು ತಾಂತ್ರಿಕವಾಗಿ ಉತ್ತಮ, ಸುರಕ್ಷಿತ ಮತ್ತು ಪಾರದರ್ಶಕ ಎಂದು ಬಣ್ಣಿಸಿದ ತಜ್ಞರ ಸಮಿತಿ, ಅವುಗಳ ಬಳಕೆಗೆ ಸರ್ವಾನುಮತದಿಂದ ಶಿಫಾರಸು ಮಾಡಿತು.

1992: ಚುನಾವಣಾ ನಿಯಮಗಳು 1961ಕ್ಕೆ ಇವಿಎಂಗಳ ಬಳಕೆಗೆ ಸಂಬಂಧಿಸಿದಂತೆ ಅಗತ್ಯ ತಿದ್ದುಪಡಿಗಳಿಗೆ ಸರಕಾರ ಸೂಚಿಸಿತು.

2003: ಎಲ್ಲಾ ಉಪಚುನಾವಣೆಗಳು ಮತ್ತು ರಾಜ್ಯ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಯಿತು.

2004: ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ದೇಶಾದ್ಯಂತ ಇವಿಎಂ ಬಳಕೆಯಾಗುವು ದರೊಂದಿಗೆ ಐತಿಹಾಸಿಕ ಗುರುತಾಗಿ ದಾಖಲಾಯಿತು

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top