ಸಂವಿಧಾನದ ಆಶಯಕ್ಕೆ ಪೂರಕವಾದ ಶಾಲಾ ಶಿಕ್ಷಣ
-

ಸರಣಿ-6 | ಭಾಗ- 01
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಸಬಲೀಕರಣಗೊಂಡರೆ ಮಾತ್ರ ಪ್ರಜಾಪ್ರಭುತ್ವ ಉಸಿರಾಡುತ್ತಿದೆ ಎಂದು ಖಚಿತವಾಗಿ ಹೇಳಬಹುದು. ವಿಭಿನ್ನ ಜಾತಿ ಸಮುದಾಯಗಳು, ಸಾಂಸ್ಕೃತಿಕ ವೈವಿಧ್ಯತೆ, ಬಹುತ್ವ, ಭಾಷಾ ವೈವಿಧ್ಯತೆಗಳನ್ನೊಳಗೊಂಡ ಇಂಡಿಯಾದಂತಹ ದೇಶದಲ್ಲಿ ಅವುಗಳ ಅಸ್ಮಿತೆ ಮತ್ತು ಗುರುತುಗಳು ಜೀವಂತವಾಗಿ ಉಳಿಯಬೇಕೆಂದರೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ನೆಲೆಗಳಲ್ಲಿ ಸಂವಿಧಾನಬದ್ಧವಾದ ನಾಗರಿಕ ಹಕ್ಕುಗಳು ಯಾವ ಕಾಲಕ್ಕೂ ಮೊಟಕುಗೊಳ್ಳಬಾರದು ಎನ್ನುವುದು ಸಂವಿಧಾನ ರೂಪಿಸಿದ ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು.
ಶಿಕ್ಷಣದಲ್ಲಿ ‘ಸಾಮಾಜಿಕ ನ್ಯಾಯ’ದ ಕಡ್ಡಾಯ ಅನುಷ್ಠಾನ, ಪ್ರತ್ಯೇಕತೆ ಮತ್ತು ತಾರತಮ್ಯ ನೀತಿಗಳನ್ನು ಕೊನೆಗೊಳಿಸುವುದು, ದೇಶವೊಂದರ ಪ್ರತಿಯೊಂದು ಮಗುವೂ ಸಮುದಾಯ, ಜಾತಿ, ವರ್ಗ, ಲಿಂಗಗಳ ಭೇದ ಭಾವವಿಲ್ಲದೆ ಒಂದೇ ಸೂರಿನಡಿ, ಸಮಾನ ಪಠ್ಯಗಳನ್ನು, ಸಮಾನ ಭಾಷಾ ನೀತಿ, ಬಹುತ್ವದ, ಸಮಾನ ಗುಣಮಟ್ಟದ ಶಿಕ್ಷಣವನ್ನು ಅಧ್ಯಯನ ಮಾಡುವುದು, ಸಮಾನ ಶಾಲಾ ವ್ಯವಸ್ಥೆ, ನೆರೆಹೊರೆ ಶಾಲಾ ಪದ್ಧತಿಯು ಪ್ರಜಾಪ್ರಭುತ್ವದ ಪ್ರಮುಖ ಮೌಲ್ಯಗಳಾಗಿವೆ.
ಸಂವಿಧಾನದ ಆಶಯಗಳಿಗೆ ಬದ್ಧರಾಗಿರುತ್ತೇವೆ
ಭಾರತ ಸಂವಿಧಾನದಲ್ಲಿ ಮಕ್ಕಳ ಶಿಕ್ಷಣ, ಆರೈಕೆ, ರಕ್ಷಣೆ, ಪೋಷಣೆಗೆ ಸಂಬಂಧಿಸಿದಂತೆ ಶಿಕ್ಷಣದ ಮುಲಭೂತ ಹಕ್ಕು (ಪರಿಚ್ಛೇದ 21ಎ), ಬಾಲ ಕಾರ್ಮಿಕ ಪದ್ದತಿ ನಿಷೇಧ (ಪರಿಚ್ಛೇದ 24), ಮಕ್ಕಳು ಆರೋಗ್ಯಕರ ವಾಗಿ ಅಬಿವೃದ್ದಿ ಹೊಂದಲು ಅವಕಾಶ ಮತ್ತು ಸೌಲಭ್ಯ (ಪರಿಚ್ಛೇದ 39 ಎಫ್), ಬಾಲ್ಯಪೂರ್ವ ಆರೈಕೆಗಳಾದ ಪೌಷ್ಟಿಕಾಂಶ, ಆರೋಗ್ಯ (ಪರಿಚ್ಛೇದ 45), ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ದುರ್ಬಲ ವರ್ಗಗಳ ಶೈಕ್ಷಣಿಕ ಹಿತಾಸಕ್ತಿ ರಕ್ಷಣೆ (ಪರಿಚ್ಛೇದ, 15(4), 46), ಸಮಾನ ಶಿಕ್ಷಣ, ಕೆಜಿ-ಪಿಜಿವರೆಗೆ ಉತ್ತಮ ಗುಣಮಟ್ಟದ ಉಚಿತ, ಕಡ್ಡಾಯ ಶಿಕ್ಷಣಕ್ಕೆ ಪೂರಕವಾಗಿ, ಒತ್ತಾಸೆಯಾಗಿವೆ. ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 29ರ ಅನುಸಾರ ಪಠ್ಯಕ್ರಮ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಸಂವಿಧಾನದ ಮೌಲ್ಯಗಳನ್ನು ಒಳಗೊಂಡಿರಬೇಕು. ಜನ ಪ್ರಣಾಳಿಕೆಯು ಸಂವಿಧಾನದ ಮೇಲಿನ ಎಲ್ಲಾ ವಿಧಿಗಳಿಗೆ ಬದ್ಧವಾಗಿರುತ್ತದೆ.
ಮೂಲಭೂತ ಹೊಣೆಗಾರಿಕೆ ಮತ್ತು ಕರ್ತವ್ಯಗಳು
► ಸಂವಿಧಾನದ 7ನೇ ಶೆಡ್ಯೂಲ್‌ನ ಸಮವರ್ತಿ ಪಟ್ಟಿಯಲ್ಲಿರುವ 1 ರಿಂದ 12ನೇ ತರಗತಿವರೆಗಿನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ರಾಜ್ಯದ ಪಟ್ಟಿಗೆ ವರ್ಗಾಯಿಸಬೇಕೆಂದು ಮತ್ತು ಉನ್ನತ ಶಿಕ್ಷಣವನ್ನು ಸಮವರ್ತಿ ಪಟ್ಟಿಯಲ್ಲಿ ಮುಂದುವರಿಸಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತೇವೆ ಮತ್ತು ಈ ಕುರಿತು ರಾಜ್ಯ ಸರಕಾರಗಳೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತೇವೆ.
► ಶಿಕ್ಷಣವನ್ನು ವ್ಯಾಪಾರೀಕಣ, ಬ್ರಾಹ್ಮಣೀಕರಣ, ಕೇಂದ್ರೀಕರಣಗೊಳಿ ಸುವ ಮತ್ತು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗುಳಿಸುವ ‘ಹೊಸ ಶಿಕ್ಷಣ ನೀತಿಯನ್ನು’ (ಎನ್‌ಇಪಿ 2020) ಜಾರಿಗೊಳಿಸುವುದಿಲ್ಲ.
► ಪ್ರಜಾಪ್ರಭುತ್ವದಲ್ಲಿ ಶಿಕ್ಷಣದ ವಿಕೇಂದ್ರೀಕರಣ, ಆ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವುದು ಜನರಿಂದ ಆಯ್ಕೆ ಯಾದ ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಇದನ್ನು ರಕ್ಷಿಸಲು ಕೇಂದ್ರ ಶಿಕ್ಷಣ ಇಲಾಖೆಯು ‘ಶಿಕ್ಷಣ ನೀತಿ’ಯನ್ನು ರೂಪಿಸಲು ಅನುವಾಗುವಂತೆ ಸಂವಿಧಾನದ ಚೌಕಟ್ಟಿಗೆ ಬದ್ಧವಾಗಿರುವ ಮಾರ್ಗಸೂಚಿ ಗಳ ನೀತಿ ನಿರೂಪಣೆಯನ್ನು ಪ್ರಕಟಿಸಬೇಕು. ಇದಕ್ಕೆ ಅನುಗುಣವಾಗಿ ರಾಜ್ಯ ಸರಕಾರಗಳು ತಮ್ಮದೇ ಅದ ‘ರಾಜ್ಯ ಶಿಕ್ಷಣ ನೀತಿ’ಯನ್ನು ರೂಪಿಸಬೇಕು ಎಂದು ಶಿಫಾರಸು ಮಾಡುತ್ತೇವೆ ಮತ್ತು ಈ ಕುರಿತು ರಾಜ್ಯ ಸರಕಾರಗಳೊಂದಿಗೆ ನಿರಂತರ ಸಮಾಲೊಚನೆ ನಡೆಸುತ್ತೇವೆ.
► ದೇಶದ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರನ್ನು ಒಳಗೊಂಡು ಸಮಾಲೋಚನೆ ನಡೆಸುವ ‘ಶಿಕ್ಷಣದ ಕೇಂದ್ರ ಸಲಹಾ ಮಂಡಳಿ’ (ಕೇಬ್)ಯನ್ನು ಬಲಗೊಳಿಸಬೇಕು ಮತ್ತು ನಿಗದಿತವಾಗಿ ಸಭೆಗಳನ್ನು ನಡೆಸಬೇಕು ಎಂದು ಕೇಂದ್ರ ಶಿಕ್ಷಣ ಇಲಾಖೆಗೆ ಒತ್ತಾಯ ಮಾಡುತ್ತೇವೆ.
►ಹಿಂದಿ ಹೇರಿಕೆಯನ್ನು ಪ್ರತಿಪಾದಿಸುವ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ ತಾಯ್ನುಡಿ/ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಕಲಿಕೆಯನ್ನು ಒಳಗೊಂಡ ದ್ವಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲಾಗುವುದು.
► ರಾಜ್ಯ ಪಠ್ಯಕ್ರಮ, ಸಿಬಿಎಸ್‌ಸಿ ಪಠ್ಯಕ್ರಮ, ಐಸಿಎಸ್‌ಸಿ ಎಂಬಂತಹ ವಿವಿಧ ಪಠ್ಯಕ್ರಮಗಳ ವ್ಯವಸ್ಥೆಯಿದೆ. ಇದರ ಸಾಧಕ ಬಾಧಕಗಳ ಕುರಿತು ನಿರ್ಧರಿಸಲು ಶಿಕ್ಷಣ ತಜ್ಞರ ಸಮಿತಿ ನೇಮಿಸಲಾಗುವುದು ಮತ್ತು ಆ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
► ರಾಜ್ಯದಲ್ಲಿ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಶಿಕ್ಷಣದ ಭಾಗೀದಾರರನ್ನು ಒಳಗೊಂಡ ‘ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣ ಆಯೋಗ’ವನ್ನು ರಚಿಸುತ್ತೇವೆ.
► ಶಿಕ್ಷಣ ಮೂಲಭೂತ ಹಕ್ಕು ಮತ್ತು ಅದನ್ನು ಕಲ್ಪಿಸುವುದು ಪ್ರಭುತ್ವದ ಜವಾಬ್ದಾರಿ ಎಂದು ಒಪ್ಪಿಕೊಂಡು ಅದನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ‘ಶಿಕ್ಷಣದ ಸಾರ್ವತ್ರೀಕರಣ’ ಮತ್ತು ‘ಸಮಾನ ಶಿಕ್ಷಣ’ ನಮ್ಮ ಧ್ಯೇಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ‘ವಂಚಿತ ಸಮುದಾಯಗಳ ಪ್ರಾತಿನಿಧ್ಯ ಮತ್ತು ಸಬಲೀಕರಣಕ್ಕೆ’ ಮೊದಲ ಆದ್ಯತೆ ಕೊಡಲಾಗುತ್ತದೆ. ಶಿಕ್ಷಣದಲ್ಲಿ ಜಾತಿ ಮತ್ತು ವರ್ಗ ತಾರತಮ್ಯ ವನ್ನು ಕೊನೆಗೊಳಿಸುವುದು ಮುಖ್ಯ ಗುರಿಯಾಗಿದೆ.
► ಅಸಮಾನ ಶಿಕ್ಷಣ ವ್ಯವಸ್ಥೆಯನ್ನು ಕೊನೆಗೊಳಿಸಲು ‘ನೆರೆಹೊರೆ ಶಾಲಾ ಪದ್ಧತಿ’ಯನ್ನು ಅಳವಡಿಸಿಕೊಳ್ಳಲಾಗುವುದು. ಸರಕಾರಿ ಶಾಲೆಗಳು, ಅನುದಾನ ಪಡೆಯುವ, ಅನುದಾನರಹಿತ ಶಾಲೆಗಳು ಕಡ್ಡಾಯವಾಗಿ ನೆರೆಹೊರೆಯ ಶಾಲೆಗಳಾಗಿರಬೇಕು.
► ರಾಜ್ಯದ ಪ್ರತಿಯೊಂದು ಶಾಲೆಯು ಒಳಗೊಳ್ಳುವಿಕೆಯ, ತಾರತಮ್ಯ ರಹಿತ ಶಾಲೆಗಳಾಗಿರಬೇಕೆನ್ನುವುದು ಜನ ಪ್ರಣಾಳಿಕೆಯ ಮುಖ್ಯ ಆಶಯವಾಗಿದೆ.
► ದಲಿತ, ಆದಿವಾಸಿ, ಮುಸ್ಲಿಮ್, ಅಲೆಮಾರಿ, ತಳ ಸಮುದಾಯಗಳ ಮಕ್ಕಳು, ಹೆಣ್ಣು ಮಕ್ಕಳ ಶಿಕ್ಷಣಕ್ಕಿರುವ ಸಾಮಾಜಿಕ ಮತ್ತು ಆರ್ಥಿಕ ಅಡೆತಡೆಗಳನ್ನು ಕೊನೆಗೊಳಿಸುವುದು ಜನ ಪ್ರಣಾಳಿಕೆಯ ಆದ್ಯತೆಯಾಗಿದೆ.
► ಕೊಠಾರಿ ಆಯೋಗವು ಸಮಾನ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸುತ್ತ ‘‘ವಿವಿಧ ಸಾಮಾಜಿಕ ಜಾತಿ, ವರ್ಗಗಳು ಮತ್ತು ಸಮೂಹ ಗಳನ್ನು ಒಟ್ಟಿಗೆ ತಂದು ಸಮಾನತೆಯುಳ್ಳ ಐಕ್ಯ ಸಮಾಜವನ್ನು ನಿರ್ಮಾಣ ಮಾಡಬೇಕೆಂದು’’ ಹೇಳಿದೆ. ಜನ ಪ್ರಣಾಳಿಕೆ ಈ ಆಶಯವನ್ನು ಅಳವಡಿಸಿಕೊಳ್ಳುತ್ತದೆ.
► ಸಮಾನ ಶಿಕ್ಷಣದ ಆಶಯವನ್ನು ಅನುಸರಿಸುವ ಜನ ಪ್ರಣಾಳಿಕೆ ಯು ‘ಶಿಕ್ಷಣವು ಲಾಭ ಗಳಿಸುವ ಉದ್ಯಮವಲ್ಲ, ಶಾಂತಿ, ಸೌಹಾರ್ದತೆ ಯನ್ನು ಕೆಡಿಸುವ, ಜಾತಿ ತಾರತಮ್ಯವನ್ನು ಬೋಧಿಸುವ ಸಂಸ್ಥೆಯೂ ಅಲ್ಲ’ ಎಂದು ನಂಬುತ್ತದೆ.
► ಪರೀಕ್ಷೆ ವ್ಯವಸ್ಥೆಯನ್ನು ಶಿಕ್ಷಣದ ಮೌಲ್ಯ ಮಾಪನ ಎಂದು ಪರಿಗಣಿಸುವುದಿಲ್ಲ. ಗ್ರೇಡ್ ಮಾದರಿಯ ಪರೀಕ್ಷಾ ವ್ಯವಸ್ಥೆಯನ್ನು ಜನ ಪ್ರಣಾಳಿಕೆಯು ನಿರಾಕರಿಸುತ್ತದೆ. ‘ಒಳಗೊಳ್ಳುವ’ ಶಿಕ್ಷಣ ಪದ್ಧತಿ ನಮ್ಮ ಮೂಲ ಆಶಯವಾಗಿದೆ. ಮಕ್ಕಳನ್ನು ‘ಶಿಕ್ಷಣದ ಸಹ ನಿರ್ಮಾತೃಗಳು’ ಎಂದು ನಂಬಿದ್ದೇವೆ ಮತ್ತು ಕಲಿಕಾ ಆಧಾರಿತ ಶಿಕ್ಷಣವೇ ಮುಖ್ಯ ಗುರಿಯಾಗಿದೆ
► ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ, ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆಯಾಗಿರುವ 5 ಮತ್ತು 8ನೇ ತರಗತಿಗಳ ಪಬ್ಲಿಕ್ ಪರೀಕ್ಷೆಗಳನ್ನು ರದ್ದುಪಡಿಸಲಾಗುವುದು.
► ಶಿಕ್ಷಣ ಹಕ್ಕು ಕಾಯ್ದೆಯ ಶಿಫಾರಸಿನ ಪ್ರಕಾರ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗುವುದು. ಇದರ ಮೂಲಕ ಮಕ್ಕಳ ಕಲಿಕಾ ಮಟ್ಟ ಮತ್ತು ನ್ಯೂನತೆ ಯನ್ನು ಮೌಲ್ಯ ಮಾಪನ ಮಾಡಲಾಗುವುದು.
► ಸಾರ್ವಜನಿಕ ಮೌಲ್ಯಾಂಕನವು ಶಿಕ್ಷಣದಲ್ಲಿ ಅಸಮಾನತೆಯನ್ನು ಹೆಚ್ಚಿಸುವ ಕಾರಣಕ್ಕೆ ಅದನ್ನು ರದ್ದುಪಡಿಸಲಾಗುವುದು.
ಶಿಕ್ಷಣ ಮೂಲಭೂತ ಹಕ್ಕು - ಮಕ್ಕಳ ದಾಖಲಾತಿ
► ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾ ಗುವುದು.
► ‘ಕುಟುಂಬ ಉದ್ಯಮ, ಕುಲ ಕಸುಬು’ ನೆಪದಲ್ಲಿ ಮತ್ತೆ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ ದುಡಿತಕ್ಕೆ ದೂಡುವ ಬಾಲ ಕಾರ್ಮಿಕ ಪದ್ಧತಿಯ ಸೆಕ್ಷನ್ 3ಕ್ಕೆ ಮಾಡಿರುವ ತಿದ್ದುಪಡಿಯನ್ನು ತೆಗೆದು ಹಾಕಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ.
► ಉನ್ನಿಕೃಷ್ಣನ್ ವರ್ಸಸ್ ಸ್ಟೇಟ್ ಆಫ್ ಅಂಧ್ರಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ‘ಬದುಕುವ ಹಕ್ಕನ್ನು ಪ್ರತಿಪಾದಿಸುವ ಅನುಚ್ಚೇದ 21ರ ಅಡಿಯಲ್ಲಿ 14ನೇ ವಯಸ್ಸಿನವರಗೆ ಉಚಿತ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಸಹ ಪರಿಗಣಿಸಬೇಕು’ ಎಂದು ತೀರ್ಪು ಕೊಟ್ಟಿದೆ. ಈ ತೀರ್ಪಿಗೆ ಜನ ಪ್ರಣಾಳಿಕೆ ಬದ್ಧವಾಗಿರುತ್ತದೆ.
► ಸಂವಿಧಾನದ ಪರಿಚ್ಛೇದ 21ಎ ಆಶಯವಾದ ‘ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣ’ವನ್ನು ಸಂಪೂರ್ಣವಾಗಿ ಜಾರಿಗೊಳಿಸುತ್ತೇವೆ. ಶಿಕ್ಷಣ ಮೂಲಭೂತ ಹಕ್ಕಿನ ಅಡಿಯಲ್ಲಿ ಈಗಿರುವ 6-14ನೆ ವಯಸ್ಸಿನ ಮಿತಿಯನ್ನು 0-18 ವಯಸ್ಸಿನ ಹಂತಕ್ಕೆ ವಿಸ್ತರಿಸಬೇಕೆಂದು ಮತ್ತು ಇದಕ್ಕಾಗಿ ‘ಶಿಕ್ಷಣ ಹಕ್ಕು ಕಾಯ್ದೆ 2009’ನ್ನು ತಿದ್ದುಪಡಿ ಮಾಡಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುತ್ತೇವೆ.
► ಬಡತನದ ಕಾರಣಕ್ಕೆ ಶೇ.23ರಷ್ಟು ಬಾಲಕರು, ಶೇ.15.2ರಷ್ಟು ಬಾಲಕಿಯರು, ಮನೆಗೆಲಸ ಮತ್ತಿತರ ಸ್ಥಳೀಯ ಕೆಲಸಗಳಲ್ಲಿ ತೊಡಗಿಕೊಳ್ಳುವ ಕಾರಣಕ್ಕೆ ಶೇ.5ರಷ್ಟು ಬಾಲಕರು, ಶೇ.29.7ರಷ್ಟು ಬಾಲಕಿಯರು, ಬಾಲ ಕಾರ್ಮಿಕ ಪದ್ಧತಿಯ ಕಾರಣಕ್ಕೆ ಶೇ.31ರಷ್ಟು ಬಾಲಕರು, ಶೇ.4.9ರಷ್ಟು ಬಾಲಕಿಯರು, ಲಿಂಗ ತಾರತಮ್ಯದ ಕಾರಣಕ್ಕೆ ಶೇ.30ರಷ್ಟು ಬಾಲಕಿಯರು, ಶಾಲೆಗಳು ಊರಿಂದ ದೂರವಿರುವ ಕಾರಣಕ್ಕೆ 1ರಷ್ಟು ಬಾಲಕರು, 3.4ರಷ್ಟು ಬಾಲಕಿಯರು, ಬಾಲ್ಯ ವಿವಾಹದ ಕಾರಣಕ್ಕೆ ಶೇ.13ರಷ್ಟು ಬಾಲಕ/ ಬಾಲಕಿಯರು, ಇತರೆ ಕಾರಣಗಳಾದ ಶಿಕ್ಷಕರ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ, ಶಾಲೆಗಳಲ್ಲಿ ಆಚರಿಸಲಾಗುವ ಜಾತಿ ತಾರತಮ್ಯ, ಬಾಲಕಿಯರ ಶೌಚಾಲಯದ ಕೊರತೆ, ಇತ್ಯಾದಿಗಳ ಕಾರಣಕ್ಕೆ ಶೇ.5.1 ರಷ್ಟು ಬಾಲಕರು, ಶೇ.6.2ರಷ್ಟು ಬಾಲಕಿಯರು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ.
► ಮೇಲಿನ ಸಾಮಾಜಿಕ ಬಿಕ್ಕಟ್ಟುಗಳನ್ನು ಸಂಪೂರ್ಣವಾಗಿ ನಿವಾರಿಸಿ 1-12ನೇ ತರಗತಿಯವರೆಗೆ ಶೇ.100ರಷ್ಟು ದಾಖಲಾತಿ ಸಾಧಿಸುವುದಕ್ಕೆ ಮತ್ತು ಅದನ್ನು ನಿರಂತರವಾಗಿ ಮುಂದುವರಿಸುವುದಕ್ಕೆ ಎಲ್ಲಾ ಬಗೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಲಾಗುವುದು. ಮಕ್ಕಳು ಶಿಕ್ಷಣದಿಂದ ಹೊರಗುಳಿಯದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು
► ‘ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ’ (ಎನ್‌ಸಿಪಿಸಿಆರ್)ಗೆ ಸಂಪೂರ್ಣ ಸ್ವಾಯತ್ತತೆ ಕೊಡಲಾಗುವುದು ಮತ್ತು ಅಲ್ಲಿ ಯಾವುದೇ ಬಗೆಯ ರಾಜಕೀಯ ಹಸ್ತಕ್ಷೇಪವಿರದಂತೆ ಎಚ್ಚರ ವಹಿಸಲಾಗುವುದು
► ‘ಮಕ್ಕಳ ಹಕ್ಕುಗಳ ವಿಶ್ವಸಂಸ್ಥೆ ಸಮಾವೇಶ’ (ಯುಎನ್‌ಆರ್‌ಸಿ) 1992ರ ‘ಬದುಕುಳಿಯುವ ಹಕ್ಕು, ವಿಕಸನದ ಹಕ್ಕು, ರಕ್ಷಣೆಯ ಹಕ್ಕು, ಪಾಲ್ಗೊಳ್ಳುವ ಹಕ್ಕು’ಗಳ ನಾಲ್ಕು ನಿರ್ಣಯಗಳಿಗೆ ಭಾರತವು ಬದ್ಧವಾಗಿರುತ್ತದೆ. ಜನ ಪ್ರಣಾಳಿಕೆಯೂ ಇದಕ್ಕೆ ಬದ್ಧವಾಗಿರುತ್ತದೆ.
► ಮಕ್ಕಳನ್ನು ಫೇಲು ಮಾಡುವ ಪರೀಕ್ಷಾ ಪದ್ಧತಿಯನ್ನು ರದ್ದುಪಡಿಸಲಾಗುವುದು.
ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ
► ಮಹಿಳೆ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯೊಂದಿಗೆ (ಐಸಿಡಿಎಸ್) ಮಾತುಕತೆ ನಡೆಸಿ ಈ ಕೂಡಲೇ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು (ಎಲ್ ಕೆಜಿ/ಯು ಕೆಜಿ) ಪ್ರಾರಂಭಿಸಲಾಗುವುದು.
► ಪೂರ್ವ ಪ್ರಾಥಮಿಕ ಶಿಕ್ಷಣ ಬೋಧಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ಕೊಡುವ ವ್ಯವಸ್ಥೆ ಮಾಡಲಾಗುವುದು. ಈ ಶಾಲೆಗಳಿಗೆ ಶಿಕ್ಷಕಿ, ಸಹಾಯಕಿಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಇವರ ವೇತನವನ್ನು ಹೆಚ್ಚಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
► ಅಂಗನವಾಡಿಯ ಪ್ರತೀ ಮಗುವಿಗೆ ಪ್ರತೀ ವರ್ಷಕ್ಕೆ 32,000 ರೂ. ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಪ್ರತೀ ಮಗುವಿಗೆ ಪ್ರತೀ ವರ್ಷಕ್ಕೆ 45,000 ರೂ. ವೆಚ್ಚ ಮಾಡಲಾಗುವುದು. ಇದಕ್ಕಾಗಿ ಯಾವುದೇ ಸಂದರ್ಭದಲ್ಲಿಯೂ ಹಣಕಾಸಿನ ಕೊರತೆಯಾಗದಂತಹ ವ್ಯವಸ್ಥೆ ರೂಪಿಸಲಾಗುವುದು.
► ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಈಗಿರುವ 34:1 ಶಿಕ್ಷಕ ಮತ್ತು ಮಕ್ಕಳ ಅನುಪಾತವನ್ನು ಇಸಿಸಿಇ ಶಿಫಾರಸಿಗೆ ಅನುಗುಣವಾಗಿ 20:1ಕ್ಕೆ ಬದಲಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು.
► ಉತ್ತಮ ಗುಣಮಟ್ಟ ಮತ್ತು ಉಚಿತವಾದ ‘ಆರಂಭದ ಬಾಲ್ಯ ಆರೈಕೆ ಮತ್ತು ಶಿಕ್ಷಣ’ (ಇಸಿಸಿಇ) ಒದಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. 2013ರ ರಾಷ್ಟ್ರೀಯ ಇಸಿಸಿಇ ನೀತಿಯನ್ನು ಮುಂದುವರಿಸಲಾಗುವುದು.
► ಶಿಶುಪಾಲನೆ ಹಂತದಲ್ಲಿ ಸಮತೆ ಮತ್ತು ಒಳಗೊಳ್ಳುವಿಕೆಯನ್ನು ಕಡ್ಡಾಯವಾಗಿ ಪಾಲಿಸಲಾಗುವುದು.
► ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಾಲಾ ಶಿಕ್ಷಣದೊಂದಿಗೆ ಜೋಡಿಸದೆ ಪ್ರತ್ಯೇಕವಾಗಿ ಉಳಿಸಿಕೊಳ್ಳಲಾಗುವುದು.
► ಅಂಗನವಾಡಿ ಶಾಲೆಗಳಲ್ಲಿ ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರವನ್ನು ನೀಡಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುವುದು. ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಯನ್ನು ಒಳಗೊಂಡಂತೆ ಪೌಷ್ಟಿಕಾಂಶದ ಆಹಾರವನ್ನು ಕಡ್ಡಾಯಗೊಳಿಸಲಾಗುವುದು.
ಶಾಲಾ ವ್ಯವಸ್ಥೆ ಮತ್ತು ಆಡಳಿತ
► ಪ್ರತೀ ಶಾಲೆಯಲ್ಲಿಯೂ ಎಸ್‌ಡಿಎಂಸಿ ರಚನೆಯಾಗುವಂತೆ ಕ್ರಮ ತೆಗೆದುಕೊಳ್ಳಲಾಗುವುದು.
► ಎಸ್‌ಡಿಎಂಸಿಯನ್ನು ಸಬಲೀಕರಣಗೊಳಿಸಲು ಸೂಕ್ತ ತರಬೇತಿಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. ರಾಜಕೀಯ ಹಸ್ತಕ್ಷೇಪವಿರ ದಂತೆ ಕ್ರಮ ತೆಗೆದುಕೊಳ್ಳಲಾಗುವುದು.
► ಶಾಲೆಗಳಿಗೆ ಹಂಚಿಕೆಯಾಗುವ ಸಮವಸ್ತ್ರ, ಸೈಕಲ್, ಪಠ್ಯಪುಸ್ತಕಗಳು ಮತ್ತಿತರ ಕಲ್ಯಾಣ ಯೋಜನೆಗಳು ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ದೊರಕುವಂತಹ ವ್ಯವಸ್ಥೆ ಕಲ್ಪಿಸಲಾಗುವುದು.
► ಶಾಲಾ ತರಗತಿಗಳ ಸ್ಥಿತಿಯನ್ನು ಉತ್ತಮಗೊಳಿಸಲು ಸೂಕ್ತ ಕಾರ್ಯ ಯೋೀಜನೆಗಳನ್ನು ಜಾರಿಗೊಳಿಸಲಾಗುವುದು. ‘ಕ್ಲಸ್ಟರ್ ಸಂಪನ್ಮೂಲ ಕೇಂದ್ರ’(ಸಿಆರ್‌ಸಿ)ಗಳನ್ನು ಬಲಗೊಳಿಸಲಾಗುವುದು.
► ಪ್ರತೀ ಶಾಲೆಯ ಮೂಲಭೂತ ಸೌಕರ್ಯ ಒಳಗೊಂಡಂತೆ ಸಮಗ್ರ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ ‘ಕ್ಷೇತ್ರ ಶಿಕ್ಷಣ ಅಧಿಕಾರಿ’ (ಬಿಐಒ) ಮತ್ತು ‘ಕ್ಷೇತ್ರ ಸಂಪನ್ಮೂಲ ಕೇಂದ್ರ’ (ಬಿಆರ್‌ಸಿ)ಗೆ ಇರುತ್ತದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಮತ್ತು ಇವರು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
► ಸರಕಾರಿ ಶಾಲೆಗಳ ಆಡಳಿತ ಮಂಡಳಿಯು ತಮಗೆ ದೊರಕುವ ಅನುದಾನದಲ್ಲಿ ವಿದ್ಯುಚ್ಛಕ್ತಿ ಬಿಲ್ ಕಟ್ಟುವ ವ್ಯವಸ್ಥೆಯನ್ನು ರದ್ದುಗೊಳಿಸಲಾಗುವುದು ಮತ್ತು ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು.
► ಮಧ್ಯಾಹ್ನದ ಬಿಸಿಯೂಟವನ್ನು ಹೊರಗುತ್ತಿಗೆಗೆ ನೀಡುವ ಪದ್ಧತಿಯನ್ನು ರದ್ದುಗೊಳಿಸಲಾಗುವುದು.
► ಐದು ವರ್ಷಗಳ ಅವಧಿಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಯನ್ನು ಪೂರ್ಣಗೊಳಿಸಲಾಗುವುದು. ಖಾಯಂ ಶಿಕ್ಷಕರ ನೇಮಕಾತಿಗೆ ಮೊದಲ ಆದ್ಯತೆ ಕೊಡಲಾಗುವುದು ಮತ್ತು ಹಂತ ಹಂತವಾಗಿ ಅತಿಥಿ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಲಾಗುವುದು.
► ಏಕೋಪಾಧ್ಯಾಯ ಶಾಲೆಗಳ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು.
► 1-5ರವರೆಗೆ ತರಗತಿಗೊಬ್ಬ ಶಿಕ್ಷಕ ಮತ್ತು 6-12 ತರಗತಿಗಳವರೆಗೆ ವಿಷಯಕ್ಕೊಬ್ಬ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. 1ನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಅತ್ಯುತ್ತಮವಾಗಿ ಕಲಿಸುವಂತಹ ವ್ಯವಸ್ಥೆ ರೂಪಿಸಲಾಗುವುದು. ಇದಕ್ಕಾಗಿ ಇಂಗ್ಲಿಷ್ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
► ಸಮಗ್ರ ವ್ಯಾಸಂಗಕ್ರಮನ್ನು (ಪೆಡಗಾಜಿ) ರೂಪಿಸಲು ರಂಗ ಶಿಕ್ಷಕರನ್ನು, ದೈಹಿಕ ಶಿಕ್ಷಕರನ್ನು, ಚಿತ್ರಕಲೆ, ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು
► ಹಾಲಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ನೀತಿಯನ್ನು ಪರಿಷ್ಕರಿಸಲಾಗುವುದು. ಈ ಪಬ್ಲಿಕ್ ಶಾಲೆಗಳಿಂದ ಸ್ಥಳೀಯ ಶಾಲೆಗಳು ಮುಚ್ಚಿಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಿಕ್ಕಟ್ಟನ್ನು ತುರ್ತಾಗಿ ಸರಿಪಡಿಸಲಾಗುವುದು.
► ಆನ್‌ಲೈನ್ ಬೋಧನೆ ಮತ್ತು ಕಲಿಕೆಯನ್ನು ಮುಖ್ಯ ಯೋಜನೆ ಯಾಗಿ ಅಳವಡಿಸಿಕೊಳ್ಳುವುದಿಲ್ಲ. ಬದಲಾಗಿ ಅಗತ್ಯಕ್ಕೆ ತಕ್ಕಂತೆ ಪೂರಕವಾಗಿ ಯೋಜಿಸಲಾಗುವುದು.
► ಶಾಲೆಗಳನ್ನು ಮುಚ್ಚುವ, ವಿಲೀನಗೊಳಿಸುವ ನಿರ್ಧಾರವನ್ನು ಹಿಂಪಡೆಯಲಾಗುವುದು. ಇದನ್ನು ಪರಿಶೀಲಿಸಲು ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ನೇಮಕಾತಿ ಮಾಡಲಾಗುವುದು. ಈ ಸಮಿತಿಗೆ ಹಿಂದಿನ ಸರಕಾರಗಳು ವಿಲೀನಗೊಳಿಸಲು ಬಯಸಿದ ಶಾಲೆಗಳ ಕುರಿತು, ವಿಲೀನ ಮಾಡಿಕೊಳ್ಳಲಿರುವ ಶಾಲೆಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಹೊಣೆಗಾರಿಕೆ ಇರುತ್ತದೆ. ಅದರ ವರದಿಯ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
► ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ವೇತನ, ಸಮತೆ ಮತ್ತು ಒಳಗೊಳ್ಳುವಿಕೆ, ದಲಿತ ಮಕ್ಕಳ ವಿದ್ಯಾರ್ಥಿ ವೇತನಗಳ ಹಂಚಿಕೆಯಲ್ಲಿ ಎಲ್ಲಿಯೂ ಲೋಪವಾಗದಂತೆ ಮತ್ತು ಆ ಮೂಲಕ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು.
ಶಿಕ್ಷಕರು, ತರಬೇತಿ ಮತ್ತು ಪೋಷಕರು
► ಶಿಕ್ಷಕರ ಗುಣಮಟ್ಟದ ತರಬೇತಿ ಮತ್ತು ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ಕೊಡಲಾಗುವುದು.
► ಶಿಕ್ಷಕರ ತರಬೇತಿ ಸಂಶೋಧನೆಗಾಗಿ ಖಾಸಗಿ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡುವ ವ್ಯವಸ್ಥೆಯನ್ನು ಹಂತ ಹಂತವಾಗಿ ರದ್ದುಪಡಿಸಿ ‘ಶಿಕ್ಷಣ ಮತ್ತು ತರಬೇತಿಗಾಗಿ ಜಿಲ್ಲಾ ಸಂಸ್ಥೆ’ (ಡಯೆಟ್) ಯನ್ನು ಬಲಪಡಿಸಲಾಗುವುದು.
► ಶಿಕ್ಷಕರ ತರಬೇತಿ ವ್ಯಾಸಂಗಕ್ರಮವನ್ನು (ಪೆಡಗಾಜಿ) ಆಧುನೀಕರಣಗೊಳಿಸಲಾಗುವುದು ಮತ್ತು ಕಾಲ ಕಾಲಕ್ಕೆ ಪರಿಷ್ಕರಿಸಲಾಗುವುದು. ಎಲ್ಲರನ್ನೂ ಒಳಗೊಳ್ಳುವ, ತಾರತಮ್ಯ ವಿರೋಧಿ ವ್ಯಾಸಂಗಕ್ರಮಕ್ಕೆ ಆದ್ಯತೆ ಕೊಡಲಾಗುವುದು.
► ಶಿಶುಪಾಲನೆಯ ಘಟ್ಟದಿಂದಲೇ ಪೋಷಕರು ನೇರವಾಗಿ ಮಕ್ಕಳ ಶಿಕ್ಷಣದ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳವಂತಹ ವ್ಯವಸ್ಥೆ ಕಲ್ಪಿಸಲಾಗುವುದು.
► ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣದ ಪ್ರತೀ ಹಂತದಲ್ಲೂ ಪೋಷಕರು ಒಳಗೊಳ್ಳುತ್ತಾ, ಶಿಕ್ಷಕರೊಂದಿಗೆ ಸಮಾಲೋಚಿಸಿ ಉತ್ತಮ ‘ಗುಣಮಟ್ಟದ ಕಲಿಕೆಯನ್ನು’ ತಮ್ಮ ಮಕ್ಕಳಲ್ಲಿ ರೂಪಿಸುವುದಕ್ಕೆ ಅವಕಾಶ ಕಲ್ಪಿಸಲಾಗುವುದು.
► ಪೂರ್ವ ಪ್ರಾಥಮಿಕ ಹಂತದಿಂದಲೇ ಪೋಷಕರು ಸರಕಾರಿ ಶಾಲೆಗಳೊಂದಿಗೆ ಒಡನಾಟ ಆರಂಭಿಸುವುದರಿಂದ ಅವರಿಗೆ ಅಲ್ಲಿ ಮೂಲಭೂತ ಸೌಕರ್ಯದ, ಶೈಕ್ಷಣಿಕ ಗುಣಮಟ್ಟದ ಕೊರತೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಪೋಷಕರಿಗೆ ಅಲ್ಲಿನ ಆಡಳಿತ ಮಂಡಳಿಯೊಂದಿಗೆ ನೇರವಾಗಿ ಈ ಕುರಿತು ಚರ್ಚಿಸಲು ಮತ್ತು ಆ ಕೊರತೆಯನ್ನು ನಿವಾರಿಸುವ ಉತ್ತರದಾಯಿತ್ವದ ಅವಕಾಶ ದೊರಕುತ್ತದೆ. ಇದು ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಸಾಮಾಜಿಕ ಜವಬ್ದಾರಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಮರಸ್ಯವನ್ನು ಉಂಟುಮಾಡುತ್ತದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.