-

ಸಂವಿಧಾನದ ಆಶಯಕ್ಕೆ ಪೂರಕವಾದ ಶಾಲಾ ಶಿಕ್ಷಣ

-

►►ಸರಣಿ-6 | ಭಾಗ- 02

ವ್ಯಾಸಂಗಕ್ರಮ (ಪೆಡಗಾಜಿ) 

► ಬಹು ಸಂಸ್ಕೃತಿಯ, ವೈವಿಧ್ಯತೆಯನ್ನುಳ್ಳ, ಬಹುತ್ವದ ಕಥನವನ್ನು ನಿರೂಪಿಸುವ ಪಠ್ಯಗಳ ಆಯ್ಕೆ, ಪಠ್ಯಪುಸ್ತಕಗಳ ರಚನೆಗೆ ಆದ್ಯತೆ ಕೊಡಲಾಗುವುದು.  

► ಬಹುತ್ವವನ್ನು ನಿರಾಕರಿಸುವ ಏಕರೂಪಿ ಪಠ್ಯಕ್ರಮವನ್ನು ತಿರಸ್ಕರಿಸಲಾಗುವುದು. ಪಠ್ಯಪುಸ್ತಕಗಳ ಪರಿಷ್ಕರಣೆಯ ನೆಪದಲ್ಲಿ ಶಿಕ್ಷಣದ ಬ್ರಾಹ್ಮಣೀಕರಣ ಮತ್ತು ಮತೀಯವಾದೀಕರಣಕ್ಕೆ ಯಾವುದೇ ಬಗೆಯ ಅವಕಾಶ ಕೊಡುವುದಿಲ್ಲ ಎಂದು ಶಪಥ ಮಾಡುತ್ತೇವೆ.

► ಸಾಂವಿಧಾನಿಕ ನೈತಿಕತೆ, ಆಧುನಿಕತೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಧರ್ಮವನ್ನು ಒಳಗೊಂಡ ವ್ಯಾಸಂಗಕ್ರಮವನ್ನು (ಪೆಡಗಾಜಿ) ರೂಪಿಸಲಾಗುವುದು.

► ನೈತಿಕ ಶಿಕ್ಷಣದ ಹೆಸರಿನಲ್ಲಿ ಮರಳಿ ಚಾತುರ್ವರ್ಣ ವ್ಯವಸ್ಥೆಯನ್ನು ಜಾರಿಗೊಳಿಸುವ ಯಾವುದೇ ಬಗೆಯ ಪ್ರಯತ್ನಗಳನ್ನು ವಿರೋಧಿಸಲಾಗುವುದು.

► ಪೂರ್ವಗ್ರಹಪೀಡಿತ, ಏಕಪಕ್ಷೀಯ ಇತಿಹಾಸ ಬೋಧನೆ ಮತ್ತು ಕಲಿಕೆಯನ್ನು ಅಳವಡಿಸಿಕೊಳ್ಳುವುದಿಲ್ಲ.

► ಸಮಾನ ಶಿಕ್ಷಣದಲ್ಲಿ ಪಠ್ಯಗಳ ಆಯ್ಕೆ, ಪಠ್ಯಗಳ ರಚನೆ ಆಯಾ ಗ್ರಾಮ, ಹೋಬಳಿ, ತಾಲೂಕುಗಳ ಸಂಸ್ಕೃತಿ, ಬದುಕುಗಳನ್ನು ಒಳಗೊಂಡಂತೆ ಬಹುರೂಪಿಯಾಗಿರುತ್ತದೆ. ಈ ವ್ಯಾಸಂಗಕ್ರಮವು (ಪೆಡಗಾಜಿ) ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ವೈವಿಧ್ಯತೆಯಿಂದ ಕೂಡಿರುತ್ತದೆ. ಇದೆಂದೂ ಏಕರೂಪಿಯಲ್ಲ. ವಂಚಿತ ಸಮುದಾಯಗಳ ವ್ಯಾಸಂಗಕ್ರಮ (ಪೆಡಗಾಜಿ) ರೂಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ.

► ಗ್ರಾಮೀಣ ಭಾಗದ, ವಂಚಿತ ಸಮುದಾಯಗಳ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವ 6ನೇ ತರಗತಿಯಿಂದ (12ನೇ ವಯಸ್ಸು) ವೃತ್ತಿಪರ ತರಬೇತಿ ಕೊಡುವ ಪದ್ಧತಿಯನ್ನು ಅಳವಡಿಸಿಕೊಳ್ಳುವುದಿಲ್ಲ. ಬದಲಾಗಿ ಅನೌಪಚಾರಿಕ ಶಿಕ್ಷಣವನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸಲು ಅದರ ಸಾಧಕ ಬಾಧಕಗಳನ್ನು ಮೌಲ್ಯಮಾಪನ ಮಾಡಿ, ಶಿಕ್ಷಣ ತಜ್ಞರಿಂದ ಅಭಿಪ್ರಾಯ ಪಡೆದುಕೊಳ್ಳಲಾಗುವುದು.

ಹಣಕಾಸು ಹಂಚಿಕೆ
► ಪ್ರಸಕ್ತ ಸಂದರ್ಭದಲ್ಲಿ ರಾಜ್ಯ ಸರಕಾರಗಳು ತಮ್ಮ ಬಜೆಟ್ ವೆಚ್ಚದ ಸರಾಸರಿ ಶೇ.11ರಷ್ಟು ಮತ್ತು ಜಿಡಿಪಿಯ ಸರಾಸರಿ ಶೇ.2.3ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಆದರೆ ಜನ ಪ್ರಣಾಳಿಕೆಯು ಮೊದಲ ಮೂರು ವರ್ಷಗಳಲ್ಲಿ ಬಜೆಟ್ ವೆಚ್ಚದ ಸರಾಸರಿ ಶೇ.18ರಷ್ಟು ಮತ್ತು ಜಿಡಿಪಿಯ ಸರಾಸರಿ ಶೇ.4.5ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗುವುದು. ನಾಲ್ಕನೇ ವರ್ಷದಲ್ಲಿ ಬಜೆಟ್ ವೆಚ್ಚದ ಸರಾಸರಿ ಶೇ.20ರಷ್ಟು ಮತ್ತು ಜಿಡಿಪಿಯ ಸರಾಸರಿ ಶೇ.5ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗುವುದು. ಐದನೇ ವರ್ಷದಲ್ಲಿ ಬಜೆಟ್ ವೆಚ್ಚದ ಸರಾಸರಿ ಶೇ.24ರಷ್ಟು ಮತ್ತು ಜಿಡಿಪಿಯ ಸರಾಸರಿ ಶೇ.6ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗುವುದು. ಹಂಚಿಕೆಯಾದ ಮೊತ್ತವು ಎಲ್ಲಿಯೂ ಸೋರಿಕೆಯಾಗದಂತೆ, ದುರ್ಬಳಕೆಯಾಗದಂತೆ ಜಾಗೃತ ದಳ ವ್ಯವಸ್ಥೆಯನ್ನು ರೂಪಿಸಲಾಗುವುದು.

► ಶಿಕ್ಷಣದಲ್ಲಿ ಸಾರ್ವಜನಿಕ ವೆಚ್ಚವು ಕಡಿಮೆ ಪ್ರಮಾಣದಲ್ಲಿರುವುದಕ್ಕೆ ಸಂಪನ್ಮೂಲ ಕೊರತೆ ಕಾರಣವೆಂದು ಹೇಳುತ್ತಾರೆ. ಆದರೆ ಇದು ತಪ್ಪಾದ ಅಭಿಪ್ರಾಯ. ಶಿಕ್ಷಣಕ್ಕೆ ಜಿಡಿಪಿಯ ಶೇ.6ರಷ್ಟು ಹಣಕಾಸು ಅನುದಾನ ನೀಡದಿರಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಒಂದೆಡೆ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿ ಸೂಚ್ಯಂಕ ಹೆಚ್ಚಾಗಿದೆ ಎಂದು ಹೇಳಿಕೊಳ್ಳುವ ಸರಕಾರವು ಅದರ ಪಾಲನ್ನು ಶಿಕ್ಷಣಕ್ಕೆ ಯಾಕೆ ವಿನಿಯೋಗಿಸುವುದಿಲ್ಲ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.

► ಶಾಲಾ ಶಿಕ್ಷಣದ ವೆಚ್ಚವು ಸಂಪೂರ್ಣವಾಗಿ ಸರಕಾರದ ಜವಾಬ್ದಾರಿ ಎಂದು ಜನ ಪ್ರಣಾಳಿಕೆ ಪ್ರತಿಪಾದಿಸುತ್ತದೆ ಮತ್ತು ಅದನ್ನು ಜಾರಿಗೊಳಿಸುತ್ತದೆ.

► ಆರ್‌ಟಿಇ ಕಾಯ್ದೆ 2009ರ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ಮಕ್ಕಳಿಗೆ ಶೇ.25ರಷ್ಟು ಸೀಟುಗಳನ್ನು ಉಚಿತವಾಗಿ ಹಂಚಿಕೆ ಮಾಡಬೇಕು ಮತ್ತು ಅದಕ್ಕೆ ತಗಲುವ ವೆಚ್ಚವನ್ನು ಸರಕಾರವು ಭರಿಸುತ್ತದೆ. ಅನೇಕರು ಇದೇ ಹಣವನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಬಹುದಲ್ಲವೇ ಎಂದು ಪ್ರಶ್ನಿಸುತ್ತಾರೆ. ಇದರ ಕುರಿತು ಕೂಲಂಕಶವಾಗಿ ಅಧ್ಯಯನ ಮಾಡಲಾಗುವುದು. 

► ಶಿಕ್ಷಣದ ಮೇಲಿನ ವೆಚ್ಚಕ್ಕೆ ಅಗತ್ಯವಾದ ಹಣಕಾಸಿನ ಕ್ರೋಡೀಕರಣಕ್ಕೆ ಕಾರ್ಯಯೋಜನೆ ರೂಪಿಸಲಾಗುವುದು. ಯಾವುದೇ ಹಂತದಲ್ಲಿಯೂ ಆರ್ಥಿಕ ಅನುದಾನಕ್ಕೆ ತೊಂದರೆಯಾಗದಂತೆ ಹಣಕಾಸು ಇಲಾಖೆಯೊಂದಿಗೆ ಜೊತೆಗೂಡಿ ‘ಜಂಟಿ ಕಾರ್ಯ ಸಮಿತಿ’ಯನ್ನು ರಚಿಸಲಾಗುವುದು. 

► ಸ್ಥಳೀಯ ಮಟ್ಟದಲ್ಲಿ ಪೋಷಕರು, ಶಾಲಾ ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ಪಂಚಾಯತ್ ಶಿಕ್ಷಣ ಸಮಿತಿ, ನಗರಸಭೆ ಶಿಕ್ಷಣ ಸಮಿತಿ, ಜಿಲ್ಲಾ ಶಿಕ್ಷಣ ಸಮಿತಿ ಮುಂತಾದವುಗಳನ್ನು ಪುನಾರಚಿಸಿ ಅವುಗಳಿಗೆ ಸಂಪನ್ಮೂಲ ಸಂಗ್ರಹದ ಜವಾಬ್ದಾರಿಯನ್ನು ವಹಿಸುವುದರ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು.

► ಸಮಗ್ರ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಮೂಲಕ ಕೇಂದ್ರ:ರಾಜ್ಯದ 60:40 ಅನುಪಾತದಲ್ಲಿ ಕೇಂದ್ರ ಸರಕಾರದಿಂದ ಸಿಗುವ ಅನುದಾನ ಮತ್ತು ಸ್ಥಳೀಯ ಸಂಸ್ಥೆಗಳಿಂದಲೂ ದೊರಕುವ ಅನುದಾನವು ಎಲ್ಲಿಯೂ ಸೋರಿಕೆಯಾಗದಂತೆ ಕಟ್ಟುನಿಟ್ಟಾಗಿ ಶಿಕ್ಷಣಕ್ಕೆ ಮಾತ್ರ ಹರಿದು ಬರುವಂತಹ ವ್ಯವಸ್ಥೆ ರೂಪಿಸಲಾಗುವುದು. 

► ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಆದಿವಾಸಿ ಕಲ್ಯಾಣ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಾರ್ವಜನಿಕ ಕ್ಷೇತ್ರಗಳ ಇಲಾಖೆ, ಸಾರ್ವಜನಿಕ ಉದ್ಯಮಗಳು, ಯೋಜನಾ ಇಲಾಖೆಗಳಿಂದ ಶಿಕ್ಷಣದ ವೆಚ್ಚಕ್ಕಾಗಿ ಅಗತ್ಯವಾದ ಅನುದಾನವನ್ನು ಕ್ರೋಡೀಕರಿಸಲಾಗುವುದು.

► ಬಂಡವಾಳಶಾಹಿಗಳು, ಉದ್ಯಮಿಗಳಿಂದ ದೊರಕುವ ‘ಕಾರ್ಪೊರೇಟ್ ಸಾಮಾಜಿಕ ಭದ್ರತೆ’ (ಸಿಎಸ್‌ಆರ್)ಯ ಶೇ.2 ಪ್ರಮಾಣದ ಮೊತ್ತವನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ಸಮವಾಗಿ ಹಂಚಿಕೆ ಮಾಡಲಾಗುವುದು.

► ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ)ಯಿಂದ ಸಂಚಯವಾಗುವ ನೇರ ತೆರಿಗೆ ಮೊತ್ತದ ಶೇ.30ರಷ್ಟು ಭಾಗವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗುವುದು.

► ಇತರ ಕಲ್ಯಾಣ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ಆಸ್ತಿ ತೆರಿಗೆ, ಮತ್ತಿತರ ತೆರಿಗೆಯಿಂದ ಸಂಚಯವಾಗುವ ಮೊತ್ತದ ಭಾಗವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಲಾಗುವುದು.  
ಶಿಕ್ಷಣಕ್ಕೆ ಸಾರ್ವಜನಿಕ ವೆಚ್ಚದ ಮೊತ್ತವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಅತಿ ಶ್ರೀಮಂತರ ಮೇಲೆ ಶೇ.2ರಷ್ಟು ಸಂಪತ್ತು ತೆರಿಗೆ ವಿಧಿಸಬೇಕು ಮತ್ತು ಕಾರ್ಪೊರೇಟ್ ತೆರಿಗೆಯನ್ನು ಶೇ.22ರಿಂದ ಶೇ.30ಕ್ಕೆ ಏರಿಸಬೇಕೆಂದು ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಾಡುತ್ತೇವೆ. ಈ ಕುರಿತು ರಾಜ್ಯ ಸರಕಾರಗಳೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತೇವೆ.
ಶೇ.4 ಪ್ರಮಾಣದಲ್ಲಿರುವ ಶಿಕ್ಷಣ ಸೆಸ್‌ನಿಂದ ಸಂಗ್ರಹವಾದ ಮೊತ್ತವನ್ನು ಇತರ ಇಲಾಖೆಗಳ ವೆಚ್ಚಕ್ಕೆ ಬಳಸದೆ ಸಂಪೂರ್ಣವಾಗಿ ಶಾಲಾ ಶಿಕ್ಷಣಕ್ಕೆ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಾಡುತ್ತೇವೆ.

► ಸರಕಾರಿ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕಾರಣಕ್ಕೆ ರಾಜ್ಯ ಬೊಕ್ಕಸಕ್ಕೆ ಅಂದಾಜು ಶೇ.30ರಷ್ಟು ಪ್ರಮಾಣದ ಆರ್ಥಿಕ ನಷ್ಟ ಉಂಟಾಗುತ್ತಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಅಸಮತೋಲನಗೊಳಿಸುತ್ತದೆ ಹಾಗೂ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯದ ವೆಚ್ಚದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಭ್ರಷ್ಟಾಚಾರದಿಂದ ಉಂಟಾಗುವ ಶೇ.30ರಷ್ಟು ಪ್ರಮಾಣದ ನಷ್ಟವನ್ನು ನಿಲ್ಲಿಸಿ ಆ ಹಣವನ್ನು ಶಿಕ್ಷಣದ ವೆಚ್ಚಕ್ಕೆ ದೊರಕುವಂತೆ ಮತ್ತು ಬೊಕ್ಕಸಕ್ಕೆ ಹೊರೆಯಾಗದಂತೆ ಕಟ್ಟುನಿಟ್ಟಾದ ಜಾಗೃತ ವ್ಯವಸ್ಥೆ ರೂಪಿಸಲಾಗುವುದು ಎಂದು ಭರವಸೆ ಕೊಡುತ್ತೇವೆ. 

► ಶಾಸಕರ ನಿಧಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್‌ನಿಂದ ಬರುವ ಅನುದಾನಗಳು ಎಸ್‌ಡಿಎಂಸಿ ಮುಖಾಂತರವೇ ದೊರಕುವಂತಹ ಸ್ವಾಯತ್ತತೆ ಕೊಡಲಾಗುವುದು ಮತ್ತು ನಿಗದಿತವಾಗಿ ಸೂಕ್ತ ಅನುದಾನ ದೊರಕುವಂತಹ ವ್ಯವಸ್ಥೆಯನ್ನು ರೂಪಿಸಲಾಗುವುದು. 

► ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ(ಯುಎನ್‌ಡಿಪಿ), ಯೂನಿಸೆಫ್ ಮುಂತಾದ ವಿದೇಶಿ ಸಂಸ್ಥೆಗಳಿಂದ ಶಾಲಾ ಶಿಕ್ಷಣಕ್ಕೆ ಹಣಕಾಸಿನ ಅನುದಾನ ದೊರಕುತ್ತದೆ. ಇದನ್ನು ಭಾರತ ಸರಕಾರದ ‘ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ’(ಡಿಪಿಇಪಿ) ನಿರ್ವಹಿಸುತ್ತದೆ. ಈ ಪ್ರಾಧಿಕಾರದಿಂದಲೂ ಶಾಲಾ ಶಿಕ್ಷಣ ವೆಚ್ಚಕ್ಕೆ ಅಗತ್ಯವಿರುವ ಆರ್ಥಿಕ ಅನುದಾನ ಪಡೆದುಕೊಳ್ಳಲಾಗುವುದು. ಆದರೆ ಈ ನೆರವಿನ ಮೇಲಿನ ಅವಲಂಬನೆಯು ಕನಿಷ್ಠ ಮಟ್ಟದಲ್ಲಿರುತ್ತದೆ ಮತ್ತು ಇದನ್ನು ಹಂತ ಹಂತವಾಗಿ ಕಡಿಮೆಗೊಳಿಸಲಾಗುವುದು. 

► ಸ್ಥಳೀಯ ಶಾಲೆಗಳಲ್ಲಿ ವ್ಯಾಸಂಗ ಮಾಡಿ ದೇಶ, ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಹಳೆ ಶಾಲಾ ವಿದ್ಯಾರ್ಥಿಗಳಿಂದಲೂ ಅನುದಾನ ಪಡೆದುಕೊಳ್ಳುವುದರ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು. 

ಶಿಕ್ಷಣದ ಖಾಸಗೀಕರಣದ ನೀತಿ

► ಜನ ಪ್ರಣಾಳಿಕೆಯು ಶಿಕ್ಷಣದ ಖಾಸಗೀಕರಣವನ್ನು, ಸಾರ್ವಜನಿಕ-ಖಾಸಗಿ ಪಾಲುದಾರಿಕೆಯನ್ನು ವಿರೋಧಿಸುತ್ತದೆ. ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ಜನರಿಂದ ಆಯ್ಕೆಯಾದ ಸರಕಾರದ ಹೊಣೆಗಾರಿಕೆ ಮತ್ತು ಹಕ್ಕು ಎಂದು ಪ್ರತಿಪಾದಿಸುತ್ತದೆ

► ಆದರೆ ಶಿಕ್ಷಣದ ರಾಷ್ಟ್ರೀಕರಣವೂ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲದಿರುವುದರಿಂದ ಸಂವಿಧಾನದ ಅನುಚ್ಛೇದಗಳಿಗೆ ಬದ್ಧವಾಗಿ ಮತ್ತು ಸರಕಾರಿ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಮುಂದುವರಿಸಲಾಗುತ್ತದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಏಕಾಧಿಪತ್ಯಕ್ಕೆ, ಸುಲಿಗೆ ಮತ್ತು ಲಾಬಿಗೆ ಯಾವುದೇ ಹಂತದಲ್ಲಿಯೂ ಅವಕಾಶ ಕೊಡುವುದಿಲ್ಲ. ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ. 

► ಶಿಕ್ಷಣದ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕಲಾಗುವುದು. ಕ್ಯಾಪಿಟೇಷನ್ ಶುಲ್ಕ ಮತ್ತು ಮಕ್ಕಳನ್ನು ಸಂದರ್ಶನ ಮಾಡುವುದನ್ನು ನಿಷೇಧಿಸುವ ಆರ್‌ಟಿಇ ಕಾಯ್ದೆಯ ಅಧ್ಯಾಯ 4ರ ಸೆಕ್ಷನ್ 13ನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು.  

► ಶಾಲೆಗೆ ಮಕ್ಕಳ ಪ್ರವೇಶ ನಿರಾಕರಿಸುವುದನ್ನು ನಿಷೇಧಿಸುವ ಅರ್‌ಟಿಇ ಕಾಯ್ದೆಯ ಅಧ್ಯಾಯ4ರ ಸೆಕ್ಷನ್ 15ನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. 

► ಶಾಲೆಗಳಲ್ಲಿ ತಾರತಮ್ಯವಿರದಂತೆ ನೋಡಿಕೊಳ್ಳಬೇಕೆಂದು ಹೇಳುವ ಅರ್‌ಟಿಇ ಕಾಯ್ದೆಯ ಸೆಕ್ಷನ್ 8ಸಿ ಮತ್ತು 9ಸಿಯನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು.

► ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉತ್ತರದಾಯಿತ್ವವನ್ನು ಕಡ್ಡಾಯಗೊಳಿಸಲಾಗುವುದು.

► ರಾಜ್ಯದಲ್ಲಿ ಮುಂದಿನ ಐದು ವರ್ಷ ಯಾವುದೇ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ.

► ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ವಸೂಲಿಯನ್ನು ನಿಗ್ರಹಿಸಲಾಗು ತ್ತದೆ. ಶಾಲಾ ಶುಲ್ಕವು ಪೋಷಕರ ಕೈಗೆಟಕುವಂತೆ ನಿಯಂತ್ರಿಸಲು ‘ಶುಲ್ಕ ನಿಯಂತ್ರಣ ಪ್ರಾಧಿಕಾರ’ವನ್ನು ರಚಿಸುತ್ತೇವೆ. ಶುಲ್ಕವನ್ನು ನಿಯಂತ್ರಿಸುವ ಸಂಪೂರ್ಣ ಅಧಿಕಾರವನ್ನು, ಕಾನೂನು ಬದ್ಧವಾದ ಎಲ್ಲಾ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಈ ಪ್ರಾಧಿಕಾರಕ್ಕೆ ಕೊಡಲಾಗುತ್ತದೆ. ಸರಕಾರವು ಪ್ರಾಧಿಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ

► ಖಾಸಗಿ ಶಾಲೆಗಳ ಶುಲ್ಕ ಪರಿಶೀಲನೆ ಕುರಿತಂತೆ ಈಗ ನಿಷ್ಕ್ರಿಯವಾಗಿರುವ ‘ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ವನ್ನು (ಡೇರಾ) ಮರಳಿ ಪುನಶ್ಚೇತನಗೊಳಿಸಲಾಗುವುದು. 

► ಖಾಸಗಿ ಸಂಸ್ಥೆಗಳಿಗೆ ದತ್ತು ಕೊಡುವ ನೀತಿಯನ್ನು ಕೈ ಬಿಡಲಾಗುವುದು. ಈ ದತ್ತು ಕೊಡುವ ನೀತಿಯು ಸರಕಾರಿ ಶಾಲೆಗಳ ಖಾಸಗೀಕರಣಕ್ಕೆ ಕಾರಣವಾಗುತ್ತದೆ. 

ಪ್ರಾಥಮಿಕ, ಪ್ರೌಢ ಶಿಕ್ಷಣದ ಸಬಲೀಕರಣಕ್ಕೆ

ನಿರಂತರ ಸುಧಾರಣಾ ಯೋಜನೆಗಳು

► 6-14 ಮತ್ತು 15-18ನೇ ಭಿನ್ನ ವಯೋಮಾನದ ವಿದ್ಯಾರ್ಥಿಗಳ ಓದು ಮತ್ತು ಕಲಿಕೆಗೆ ಅನುಗುಣವಾಗಿ ಸಂವಿಧಾನ ವಿಧಿಗಳನ್ನು ಒಳಗೊಂಡ ವ್ಯಾಸಂಗಕ್ರಮವನ್ನು (ಪೆಡಗಾಜಿ) ರೂಪಿಸಲಾಗುವುದು. ಇದನ್ನು ಪಠ್ಯಗಳಾಗಿ ಬೋಧಿಸಲಾಗುವುದು

► ಆಯಾ ತರಗತಿಯ ಪಠ್ಯಗಳಿಗೆ ಅನುಗುಣವಾಗಿ ಮಾದರಿ ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು. ಈ ಗ್ರಂಥಾಲಯದಲ್ಲಿ ನೆಲ ಸಂಸ್ಕೃತಿ, ಸಾಹಿತ್ಯ, ರಂಗಭೂಮಿ, ಜನಪದ, ಅದೇ ಊರಿನ ಮೂಲ ನಿವಾಸಿಗಳು, ಅವೈದಿಕ ಪರಂಪರೆ, ಶ್ರಮಣ ಪರಂಪರೆಯ ಅನುಭವದ ಕಥನಗಳು, ಸ್ಥಳೀಯ ಜ್ಞಾನ ಶಿಸ್ತುಗಳು, ನೆಲಗುರುತುಗಳನ್ನು ಒಳಗೊಂಡಿರುತ್ತದೆ.

► ಶಾಲೆಗಳಲ್ಲಿ ಆಧುನಿಕ ಶಿಕ್ಷಣದ ಅಗತ್ಯವಾಗಿರುವ ಕಂಪ್ಯೂಟರ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು.

► ಮೂಲ ವಿಜ್ಞಾನ ಕಲಿಕೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು.

► ಅತ್ಯುತ್ತಮ ಗುಣಮಟ್ಟದ ವಿಜ್ಞಾನ ಪ್ರಯೋಗಾಲಯಗಳನ್ನು (ಲ್ಯಾಬೊರೇಟರಿ) ಪ್ರಾರಂಭಿಸಲಾಗುವುದು.

► ನೆಲ ಸಂಸ್ಕೃತಿ ಶಿಕ್ಷಣಕ್ಕೆ ಪೂರಕವಾಗುವಂತಹ ದೇಸಿ ಕಲಾಪರಿಕರ ಗಳನ್ನು ಮತ್ತು ನೇಗಿಲು, ಕೂರಿಗೆ, ಇನ್ನಿತರ ವ್ಯವಸಾಯ ಉಪಕರಣಗಳ ಮಾದರಿಗಳನ್ನು ಒಳಗೊಂಡ ಸಾಂಸ್ಕೃತಿಕ ತಾಣವನ್ನು ಕಟ್ಟಲಾಗುವುದು.

► ಈ ಸಂಸ್ಕೃತಿ ತಾಣದಲ್ಲಿ ನಿಗದಿತವಾಗಿ ಪೋಷಕರು ತಮ್ಮ ಮಕ್ಕಳೊಂದಿಗೆ ಬೆರೆತು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಸಂಭ್ರಮಿಸುವ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು.

► ಮಕ್ಕಳಲ್ಲಿ ಹುದುಗಿರುವ ಅನ್ವೇಷಕ ಗುಣವನ್ನು ಅಭಿವ್ಯಕ್ತಿಗೊಳಿಸಲು ದಾರಿಯಲ್ಲಿ ಬರುವಾಗ ತೆನೆ, ಹಣ್ಣು, ಹೂ, ಕಾಯಿ, ಬೀಜ, ಮುಂತಾದವುಗಳನ್ನು ಹೆಕ್ಕಿ ತಂದು ಶೇಖರಿಸಿಡುವಂತಹ ಮತ್ತು ಆ ಮೂಲಕ ತಮ್ಮದೇ ಆಲೋಚನೆಗಳನ್ನು ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗುವುದು.

► ನಮ್ಮ ನೆಲದ ಒಗಟು, ಗಾದೆ, ಜನಪದ, ಕತೆ, ಗೀತೆಗಳನ್ನು ಕಿರಿಯ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪೂರಕವಾಗುವಂತೆ ಕಲಿಸಲಾಗುವುದು.

► ಮಕ್ಕಳಲ್ಲಿ ಹುದುಗಿರುವ ಕೀಳರಿಮೆಯನ್ನು ಹೋಗಲಾಡಿಸಲು ರಂಗ ಮುಖೇನ ಶಿಕ್ಷಣವನ್ನು ಕೊಡಲಾಗುವುದು.

► ಮಕ್ಕಳಲ್ಲಿ ಹುದುಗಿರುವ ಪ್ರದರ್ಶನ ಕಲೆಯ ಆಸಕ್ತಿಯನ್ನು ಗುರುತಿಸಲು ಅವರಿಗೆ ಸಾಮಾಜಿಕ ಸಂವಹನ ಕುರಿತಾಗಿ ತರಬೇತಿ ನೀಡಲಾಗುವುದು. ಇಲ್ಲಿ ಬೋಧನೆಗೆ ಹೆಚ್ಚು ಒತ್ತು ಕೊಡದೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸುವ ಮಕ್ಕಳ ಕಮ್ಮಟಗಳನ್ನು ಏರ್ಪಡಿಸಲಾಗುವುದು.

► ಮಕ್ಕಳ ಜ್ಞಾನ ವಿಸ್ತರಣೆಗಾಗಿ, ಅವರ ವಿಸ್ಮಯ ಲೋಕಕ್ಕೆ ಪೂರಕವಾಗುವಂತೆ ಜ್ಞಾನವನ್ನು, ದೇಸಿ ಜ್ಞಾನ ಸಂಪನ್ಮೂಲವನ್ನು ಬಳಸಿಕೊಂಡು ಗ್ರಾಮದ ಸ್ಥಳೀಯತೆಯನ್ನು, ಸಾಂಸ್ಕೃತಿಕ ವಿಶಿಷ್ಟತೆಯನ್ನು, ಆಧುನಿಕತೆಯನ್ನು, ವಿಜ್ಞಾನ ಬೋಧನೆಯನ್ನು ಒಳಗೊಂಡಂತೆ ಪೂರಕ ಪಠ್ಯಗಳನ್ನು ರೂಪಿಸಲಾಗುವುದು. 

ಉಪಸಂಹಾರ
ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಮೂಲಭೂತ ಗುಣಲಕ್ಷಣವೆಂದರೆ ಶಿಕ್ಷಣದ ಅವಕಾಶಗಳಲ್ಲಿ ಸಮಾನತೆಯನ್ನು ಸಾಧಿಸುವುದು. 1964-1966ರಲ್ಲಿ ಶಿಕ್ಷಣದ ಕುರಿತಾಗಿ ನೇಮಕಗೊಂಡ ಕೊಠಾರಿ ಆಯೋಗವು ‘‘ಶೈಕ್ಷಣಿಕ ಅವಕಾಶಗಳಲ್ಲಿ ಸಮಾನತೆ ಸಾಧಿಸುವ ನೀತಿಗಳನ್ನು ಮತ್ತು ತತ್ವಗಳನ್ನು ಅಳವಡಿಸಿಕೊಂಡರೆ ಅದು ಶಿಕ್ಷಣ ಕ್ಷೇತ್ರದಲ್ಲಿ ಉಂಟಾದ ಕ್ರಾಂತಿಯನ್ನು ಸರಿಯಾಗಿ ಗ್ರಹಿಸಿದಂತೆ. ಮಾನವೀಯ, ಸಮತಾವಾದದ ಸಮಾಜದ ನಿರ್ಮಾಣ ಕನಸು ಖಾತರಿಯಾದಂತೆ. ಶಿಕ್ಷಣವು ಕೆಲವೇ ಜನರ ಸ್ವತ್ತಾದರೆ ಅವರು ಉಳಿದ ಬಹುಸಂಖ್ಯಾತ ದುರ್ಬಲ ವರ್ಗದ ಮೇಲೆ ಅಧಿಕಾರ ಚಲಾಯಿಸಲು ಅದನ್ನು ಬಳಸುತ್ತಾರೆನ್ನುವುದನ್ನು ಭಾರತದ ಚರಿತ್ರೆ ಸಾಬೀತು ಮಾಡಿದೆ. ಆದ್ದರಿಂದ ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲಾದರೂ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಶಿಕ್ಷಣದಲ್ಲಿ ಸಮಾನ ಅವಕಾಶಗಳು ಲಭ್ಯವಾಗಲೇಬೇಕು’’ ಎಂದು ಸ್ಪಷ್ಟವಾಗಿ ಹೇಳಿದೆ.

ಸಮಾಜದ ನೈತಿಕ ಮೌಲ್ಯಗಳಿಗೆ, ಚಲನಶೀಲತೆಗೆ, ಆಧುನಿಕತೆಯೆ ಡೆಗಿನ ನಡೆಗಳಿಗೆ, ವಿಕೇಂದ್ರೀಕೃತ ವ್ಯವಸ್ಥೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಸಮಾನ ಶಿಕ್ಷಣ ನೀತಿ ಅತ್ಯಂತ ಪ್ರಮುಖವಾದ ಅಂಶಗಳು. ಈ ಅಂಶಗಳು ಒಂದು ರಾಜ್ಯದ, ಜಿಲ್ಲೆಯ, ಗ್ರಾಮದ ಸ್ಥಳೀಯ ಭಾಷೆ, ಸಂಸ್ಕೃತಿ, ವೈವಿಧ್ಯತೆಯನ್ನು ಒಳಗೊಂಡಿರುತ್ತವೆ. ಇವು ಗಳನ್ನು ಆಧರಿಸಿಯೇ ರಚಿಸಲ್ಪಡುವ ಪಠ್ಯ ಪುಸ್ತಕಗಳು, ಪೂರಕ ಪಠ್ಯಗಳು ಜ್ಞಾನದ ಪರಿಧಿಯನ್ನು ವಿಸ್ತರಿಸುತ್ತಾ ಜೊತೆ ಜೊತೆಗೆ ಪ್ರತಿಯೊಬ್ಬನಿಗೂ ಅಗತ್ಯವಾದ ಸಂವಹನ ಮಾಧ್ಯಮಗಳನ್ನು ಸೃಷ್ಟಿಸುತ್ತಾ ಹೋಗುತ್ತವೆ. ಕಡೆಗೆ ಶಿಕ್ಷಕರು, ಪೋಷಕರು ಇಂದು ಚಣ ಕಾಲ ಒಟ್ಟಿಗೆ ಧ್ಯಾನಿಸಬೇಕಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಅವಸಾನ ಪ್ರಜಾಪ್ರಭುತ್ವದ ಅವನತಿ ಎನ್ನುವ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top