-

ಪ್ರತಿರೋಧದ 'ಕಾಂಗ್ರೆಸೀಕರಣದ' ಅಪಾಯಗಳು

-

ಇದು ಬಿಜೆಪಿ ಅಜೇಯ ಮತ್ತು ಅಭೇದ್ಯ ಎಂಬ ಸುಳ್ಳು ಜಾನಪದ ಸೃಷ್ಟಿಸುತ್ತಿದ್ದವರಿಗೆ, ಮೋದಿ-ಶಾರ ದುರಹಂಕಾರಕ್ಕೆ ಮತ್ತು ಬೊಮ್ಮಾಯಿಯವರ ದುಷ್ಟ ಹಾಗೂ ಬೇಜವಾಬ್ದಾರಿ ಸರಕಾರಕ್ಕೆ ಕೂಡ ಒಳ್ಳೆಯ ಪಾಠ ಕಲಿಸಿದೆ. ಸಹಜವಾಗಿಯೇ ಇದು ಸೌಹಾರ್ದ ಹಾಗೂ ನೆಮ್ಮದಿಯ ನಾಡಿನ ಕನಸು ಕಾಣುತ್ತಿದ್ದವರ ನೈತಿಕ ಬಲ ಹಾಗೂ ಆಶಾವಾದವನ್ನು ಹೆಚ್ಚಿಸಿದೆ. ಆದರೆ ಫಲಿತಾಂಶ ತಂದುಕೊಟ್ಟಿರುವ ನಿರಾಳತೆಯು ಬಿಜೆಪಿಯ ಸೋಲನ್ನು ಹಾಗೂ ಕಾಂಗ್ರೆಸ್‌ನ ಗೆಲುವನ್ನು ಉತ್ಪ್ರೇಕ್ಷಿತವಾಗಿ ಭಾವಿಸಿ ಸುಳ್ಳು ಸಮಾಧಾನದ ಭ್ರಾಂತಿಗೂ ದೂಡುತ್ತಿದೆ.


ಕರ್ನಾಟಕದ ಚುನಾವಣಾ ಫಲಿತಾಂಶಗಳು ಕರ್ನಾಟಕದ ಜನರಿಗಷ್ಟೆ ಅಲ್ಲದೆ ದೇಶಾದ್ಯಂತ ನೆಮ್ಮದಿಯ ನಾಳೆಯನ್ನು ಬಯಸುವವರಿಗೆ ಒಂದು ನಿರಾಳತೆಯನ್ನು ತಂದಿದೆ. ಬಿಜೆಪಿ ಮೋದಿಯನ್ನು, ಮೋದಿ ಸರಕಾರದ ಸಂಪನ್ಮೂಲಗಳನ್ನು, ಅವರಿಗೆ ಪೂರಕವಾಗಿರುವ ಮಾಧ್ಯಮಗಳು, ಅಪಪ್ರಚಾರಗಳು, ದ್ವೇಷ ರಾಜಕಾರಣ, ಹಣ-ಜಾತಿ ಸಮೀಕರಣ ಎಲ್ಲವನ್ನು ಸಂವಿಧಾನ ಬಾಹಿರವಾಗಿ ಮತ್ತು ಯಥೇಚ್ಛವಾಗಿ ಬಳಸಿದರೂ ಬಿಜೆಪಿ ಮತ್ತೆ ಸರಕಾರವನ್ನು ರಚಿಸುವಷ್ಟು ಮತಬೆಂಬಲವನ್ನು ಮತ್ತು ಸೀಟುಗಳನ್ನು ಪಡೆದುಕೊಳ್ಳದೆ ಸೋತಿದೆ.

ಇದು ಬಿಜೆಪಿ ಅಜೇಯ ಮತ್ತು ಅಭೇದ್ಯ ಎಂಬ ಸುಳ್ಳು ಜಾನಪದ ಸೃಷ್ಟಿಸುತ್ತಿದ್ದವರಿಗೆ, ಮೋದಿ-ಶಾರ ದುರಹಂಕಾರಕ್ಕೆ ಮತ್ತು ಬೊಮ್ಮಾಯಿಯವರ ದುಷ್ಟ ಹಾಗೂ ಬೇಜವಾಬ್ದಾರಿ ಸರಕಾರಕ್ಕೆ ಕೂಡ ಒಳ್ಳೆಯ ಪಾಠ ಕಲಿಸಿದೆ. ಸಹಜವಾಗಿಯೇ ಇದು ಸೌಹಾರ್ದ ಹಾಗೂ ನೆಮ್ಮದಿಯ ನಾಡಿನ ಕನಸು ಕಾಣುತ್ತಿದ್ದವರ ನೈತಿಕ ಬಲ ಹಾಗೂ ಆಶಾವಾದವನ್ನು ಹೆಚ್ಚಿಸಿದೆ. ಆದರೆ ಫಲಿತಾಂಶ ತಂದುಕೊಟ್ಟಿರುವ ನಿರಾಳತೆಯು ಬಿಜೆಪಿಯ ಸೋಲನ್ನು ಹಾಗೂ ಕಾಂಗ್ರೆಸ್‌ನ ಗೆಲುವನ್ನು ಉತ್ಪ್ರೇಕ್ಷಿತವಾಗಿ ಭಾವಿಸಿ ಸುಳ್ಳು ಸಮಾಧಾನದ ಭ್ರಾಂತಿಗೂ ದೂಡುತ್ತಿದೆ. ಈ ಫಲಿತಾಂಶದಿಂದ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಬಿಜೆಪಿ ಮುಕ್ತವಾಯಿತು ಎಂಬ ವಿಶ್ಲೇಷಣೆಯಿಂದ ಮೊದಲುಗೊಂಡು ಕೋಮುವಾದಕ್ಕೆ ಬಲವಾದ ಪೆಟ್ಟನ್ನು ಕರ್ನಾಟಕದ ಜನ ಕೊಟ್ಟಿದ್ದಾರೆ ಎಂಬವರೆಗೆ ಈ ಉತ್ಪ್ರೇಕ್ಷೆಗಳು ಹರಡಿಕೊಂಡಿವೆ. ಇದೇ ಅಂಕಣದಲ್ಲಿ ಕಳೆದ ವಾರ 'ಕಾಂಗ್ರೆಸ್ ಗೆದ್ದಿದ್ದರೂ, ಬಿಜೆಪಿ ಸೋತಿಲ್ಲ' ಎಂಬ ಅಂಶವನ್ನು ವಿವರಿಸಲಾಗಿತ್ತು. ಬಿಜೆಪಿಯು ಈ ಬಾರಿ ಕಳೆದ ಬಾರಿ ಪಡೆದುಕೊಂಡಿದ್ದ ಶೇ. 36ರಷ್ಟು ವೋಟು ಶೇರನ್ನು ಕಾಪಿಟ್ಟುಕೊಂಡಿದೆ. 2018ರಲ್ಲಿ 1.32 ಕೋಟಿ ಜನರು ಬಿಜೆಪಿಗೆ ವೋಟು ಹಾಕಿದ್ದರೆ ಈ ಬಾರಿ 1.40 ಕೋಟಿ ಜನರು ಎಂದರೆ ಹೆಚ್ಚುವರಿಯಾಗಿ 8 ಲಕ್ಷ ಜನರು ಬಿಜೆಪಿಗೆ ವೋಟು ಹಾಕಿದ್ದಾರೆ ಎಂಬ ಅಂಶವನ್ನೂ ವಿವರಿಸಲಾಗಿತ್ತು. ಹಾಗೆಯೇ ಲಿಂಗಾಯತ ಮತದಾರರು ದೊಡ್ಡ ಮಟ್ಟದಲ್ಲಿ ಬಿಜೆಪಿಯನ್ನು ತೊರೆದಿಲ್ಲ ಎಂಬುದನ್ನು ಚುನಾವಣೋತ್ತರ ವಿಶ್ಲೇಷಣೆಗಳ ಹಾಗೂ ಫಲಿತಾಂಶಗಳ ಮತಪ್ರಮಾಣಗಳನ್ನು ಆಧರಿಸಿ ವಿವರಿಸಲಾಗಿತ್ತು.

ಬಿಜೆಪಿಯ ಪ್ರದೇಶವಾರು ಮತಗಳಿಕೆಯ ವಿವರಗಳು ಹೇಳುವುದೇನು? 
ವಾಸ್ತವದಲ್ಲಿ 2018ರಲ್ಲಿ ಬಿಜೆಪಿಯು ಲಿಂಗಾಯತ ಬಾಹುಳ್ಯವಿರುವ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಶೇ.44.3ರಷ್ಟು ವೋಟುಗಳನ್ನು ಪಡೆದುಕೊಂಡಿದ್ದರೆ ಈ ಬಾರಿ ಶೇ. 40.6ರಷ್ಟು ವೋಟುಗಳನ್ನು ಪಡೆದುಕೊಂಡಿದೆ. (https://www.chunaav.co.in/vizualizations) ಅಂದರೆ ಕಡಿಮೆಯಾಗಿರುವುದು ಶೇ.3.7ರಷ್ಟು ಮತಗಳು ಮಾತ್ರ. ಅದೂ ಲಿಂಗಾಯತರಿಂದಾಗಿ ಎಂದು ಹೇಳುವಂತಿಲ್ಲ. ಈ ಬಾರಿ ಬಿಜೆಪಿಯ ಬಗ್ಗೆ ಹೆಚ್ಚು ಒಲುಮೆ ಹೊಂದಿದ್ದ ಬಂಜಾರ ಸಮುದಾಯ ಒಳಮೀಸಲಾತಿ ವಿಷಯದಿಂದಾಗಿ ದೊಡ್ಡ ಮಟ್ಟದಲ್ಲಿ ಬಿಜೆಪಿಗೆ ವಿರುದ್ಧವಾಗಿ ವೋಟು ಹಾಕಿದ್ದರೆ, ದಲಿತ ಸಮುದಾಯ- ಎಡ ಹಾಗೂ ಬಲ ವಿಭಾಗಳೆರಡೂ ಒಟ್ಟಾಗಿ ಮೊದಲಿಗಿಂತ ಹೆಚ್ಚಿಗೆ ಕಾಂಗ್ರೆಸ್‌ಗೆ ವೋಟು ಹಾಕಿರುವುದನ್ನು ಚುನಾವಣೋತ್ತರ ಅಧ್ಯಯನಗಳು ಸ್ಪಷ್ಟಪಡಿಸುತ್ತಿವೆ. ಅದೇರೀತಿ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ 2018ರಲ್ಲಿ ಶೇ.38.4 ವೋಟುಗಳನ್ನು ಪಡೆದುಕೊಂಡಿದ್ದರೆ, ಈ ಬಾರಿ ಇಷ್ಟೆಲ್ಲಾ ಆಡಳಿತ ವಿರೋಧಿ ಅಲೆಯ ನಡುವೆಯೂ ಶೇ. 35.8 ವೋಟುಗಳನ್ನು ಉಳಿಸಿಕೊಂಡು ಕೇವಲ ಶೇ. 2.7 ವೋಟುಗಳನ್ನು ಕಳೆದುಕೊಂಡಿದೆ.

ಬಿಜೆಪಿಗೆ ಅತಿ ಹೆಚ್ಚು ಪೆಟ್ಟು ಬಿದ್ದಿರುವುದು ಮಧ್ಯ ಕರ್ನಾಟಕದಲ್ಲಿ. ಅಲ್ಲಿ ಅದು 2018ಕ್ಕೆ ಹೋಲಿಸಿದಲ್ಲಿ ಶೇ. 8ರಷ್ಟು ವೋಟುಗಳನ್ನು ಕಳೆದುಕೊಂಡಿದೆ. ಇದಕ್ಕೆ ಪ್ರಧಾನ ಕಾರಣ ದಲಿತ ಸಮುದಾಯಗಳು ಮತ್ತು ಇತರ ಹಿಂದುಳಿದ ಸಮುದಾಯಗಳು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್‌ಗೆ ವೋಟು ಹಾಕಿರುವುದು. ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಶೇ. 3.5ರಷ್ಟು ಮತನಷ್ಟವಾಗಿದ್ದರೂ ಅದಕ್ಕೆ ಕಾರಣ ಹಿಂದುತ್ವದ ಬಣದಲ್ಲೇ ಇರುವ ವೈರುಧ್ಯವೇ ಹೊರತು ಅದರಿಂದ ಕಾಂಗ್ರೆಸ್‌ಗಾಗಲೀ ಅಥವಾ ಸೆಕ್ಯುಲರ್ ರಾಜಕಾರಣಕ್ಕಾಗಲೀ ವಿಶೇಷ ಲಾಭವಾಗಿಲ್ಲ. ಆದರೆ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ 2018ರಲ್ಲಿ ಕೇವಲ ಶೇ. 18.2 ವೋಟುಗಳನ್ನು ಪಡೆದುಕೊಂಡಿತ್ತು. ಅದು ಈ ಬಾರಿ ಶೇ. 3.2ರಷ್ಟು ಜಾಸ್ತಿಯಾಗಿದೆ. ಹಾಗೆಯೇ 28 ಮತಕ್ಷೇತ್ರಗಳಿರುವ ಬೆಂಗಳೂರಿನಲ್ಲಿ ಬಿಜೆಪಿ ಈ ಬಾರಿ 2018 ಕ್ಕೆ ಹೋಲಿಸಿದಲ್ಲಿ ಶೇ. 5.4ರಷ್ಟು ಹೆಚ್ಚಿಗೆ ಮತಗಳನ್ನು ಪಡೆದುಕೊಂಡಿದೆ. ಇದು ಕಾಂಗ್ರೆಸ್‌ಗಿಂತಲೂ ಜಾಸ್ತಿ. ಈ ಬಾರಿ ಬೆಂಗಳೂರಿನಲ್ಲಿ ಕೇವಲ ಶೇ. 54ರಷ್ಟು ಮತಗಳು ಮಾತ್ರ ಚಲಾವಣೆಯಾಗಿದೆ. ಇದು ಮಧ್ಯಮವರ್ಗದ ನಿರಾಸಕ್ತಿಯನ್ನೇ ತೋರಿಸುತ್ತದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಶೇ. 35-45ರಷ್ಟು ಬಡ-ಸ್ಲಂ-ಬಡಮಧ್ಯಮ ವರ್ಗದವರೇ ಇದ್ದಾರೆ ಮತ್ತು ಬೆಂಗಳೂರಲ್ಲಿ ಇಷ್ಟಾದರೂ ಮತದಾನ ನಡೆಯಲು ಅವರೇ ಕಾರಣ. ಇಲ್ಲಿ ಬಿಜೆಪಿಗೆ ಕಾಂಗ್ರೆಸ್‌ಗಿಂತಲೂ ಹೆಚ್ಚು ಮತಗಳು ಬಿದ್ದಿವೆ. ಹೀಗೆ ಫಲಿತಾಂಶದ ಪ್ರದೇಶವಾರು ವಿವರಗಳು ಬಿಜೆಪಿಯು ತನ್ನ ಸಾಮಾಜಿಕ ಬೆಂಬಲದ ನೆಲೆಯನ್ನು ಹೆಚ್ಚೂ ಕಡಿಮೆ ಹಾಗೆಯೇ ಉಳಿಸಿಕೊಂಡಿರುವುದನ್ನೇ ಸಾರಿ ಸಾರಿ ಹೇಳುತ್ತವೆ. ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚಿನ ಮತಗಳು ಈ ಬಾರಿ ಬಿದ್ದಿರಲು ಹಲವಾರು ಕಾರಣಗಳನ್ನು ಈಗಾಗಲೇ ವಿವರಿಸಲಾಗಿದೆ. ಈ ಹೆಚ್ಚುವರಿ ಮತಗಳು ಆಡಳಿತ ವಿರೋಧಿ ಅಲೆಯ ಭಾಗವಾಗಿ ಮತ್ತು ಕಾಂಗ್ರೆಸ್‌ನ ಗ್ಯಾರಂಟಿಗಳು ಮತ್ತು ದಲಿತ ಹಾಗೂ ಮುಸ್ಲಿಮ್ ಸಮುದಾಯಗಳು ಈ ಬಾರಿ ಮೊದಲಿ ಗಿಂತಲೂ ಹೆಚ್ಚು ವೋಟು ಹಾಕಿರುವುದರಿಂದಲೂ ಬಂದಿರಬಹುದು.

ಕಾಂಗ್ರೆಸ್ ಬಡವರ ಮತ್ತು ದಮನಿತರ ರಾಜಕೀಯ ಆಯ್ಕೆಯೇ?
ಇದರಲ್ಲಿ ಹಿಂದುತ್ವದ ಆಕ್ರಮಣ ಹುಟ್ಟಿಸಿರುವ ಆತಂಕದಿಂದಾಗಿ ಮುಸ್ಲಿಮರು ಕಾಂಗ್ರೆಸನ್ನು ರಾಜಕೀಯವಾಗಿ ಆಯ್ಕೆ ಮಾಡಿಕೊಂಡಿರಬಹು ದಾದರೂ ಉಳಿದಂತೆ ಅದಕ್ಕೆ ದಕ್ಕಿರುವ ಬೆಂಬಲ ರಾಜಕೀಯ ಆಯ್ಕೆ ಎನ್ನುವುದಕ್ಕಿಂತ ಈ ಚುನಾವಣೆಯಲ್ಲಿ ಮಾಡಿಕೊಂಡಿರುವ ಕಾರ್ಯತಾಂತ್ರಿಕ ಆಯ್ಕೆ ಅಷ್ಟೇ ಆಗಿರುವ ಸಾಧ್ಯತೆ ಹೆಚ್ಚು. ಉದಾಹರಣೆಗೆ ಒಳಮೀಸಲಾತಿ ವಿಷಯದಲ್ಲಿ ಮುನಿಸಿಕೊಂಡಿರುವ ಬಂಜಾರ ಸಮುದಾಯ ಬಿಜೆಪಿಯನ್ನು ತಿರಸ್ಕರಿಸಿದೆ. ಅದೇ ಕಾರಣಕ್ಕೆ ಮಾದಿಗ ಸಮುದಾಯ ಕೂಡಾ ಬಿಜೆಪಿಯ ಬಗ್ಗೆ ಅಸಮಾಧಾನ ತೋರಿದೆ. ಇದರ ಜೊತೆಗೆ ದಲಿತ ಸಂಘಟನೆಗಳು ತೋರಿದ ಚಾರಿತ್ರಿಕ ಒಗ್ಗಟ್ಟು ಮತ್ತು ಬಿಜೆಪಿಯನ್ನು ತಿರಸ್ಕರಿಸಲು ಸಮುದಾಯದಲ್ಲಿ ಮಾಡಿದ ಪ್ರಚಾರಗಳು ಕಾರಣವಾಗಿವೆ.

ಆದರೆ ಒಳಮೀಸಲಾತಿ ವಿಷಯದಲ್ಲಿ ಎಲ್ಲಾ ಸಮುದಾಯಗಳಿಗೂ ಸಮಾಧಾನಕರವಾಗುವ ಸೂತ್ರವನ್ನು ಸಾಂವಿಧಾನಿಕವಾಗಿ ಸಿದ್ಧಪಡಿಸಿ ಅದರ ಸುತ್ತ ದಲಿತ ಸಮುದಾಯ ಒಂದುಗೂಡದಿದ್ದರೆ ಬಹಳ ಬೇಗ ಈಗ ಕಾಂಗ್ರೆಸ್‌ಗೆ ಬಂದಿರುವ ಸಮುದಾಯಗಳು ಮುನಿಸಿಕೊಳ್ಳಬಹುದು. ಹಾಗೆಯೇ ಗ್ಯಾರಂಟಿಗಳ ಬಗ್ಗೆ ಸರಕಾರ ಚುನಾವಣೆಗೆ ಮುನ್ನ ತೋರಿದ ಬದ್ಧತೆಯನ್ನೇ ಮುಂದಿನ ಐದು ವರ್ಷದಲ್ಲಿ ತೋರದಿದ್ದರೆ ಅದೇ ಕಾಂಗ್ರೆಸ್‌ಗೆ ಮುಳುವಾಗಬಹುದು.
ಹೀಗಾಗಿ ಈ ಹೆಚ್ಚುವರಿ ಮತಗಳು ಕಾಂಗ್ರೆಸನ್ನು ರಾಜಕೀಯ-ಸಿದ್ಧಾಂತದ ನೆಲೆಯಲ್ಲಿ ಆಯ್ಕೆ ಮಾಡಿಕೊಂಡಿಲ್ಲ. ಇದು ತಾತ್ಕಾಲಿಕ ಆಯ್ಕೆ. ಈ ತಾತ್ಕಾಲಿಕತೆಯನ್ನು ಶಾಶ್ವತಗೊಳಿಸಿಕೊಳ್ಳಬಹುದಾದ ರಾಜಕೀಯ-ಸೈದ್ಧಾತಿಕ ದೃಷ್ಟಿ, ಸಂಘಟನಾ ಶಕ್ತಿ ಅಥವಾ ಉದ್ದೇಶವೂ ಕಾಂಗ್ರೆಸ್‌ಗೆ ಇಲ್ಲ.

ಆದ್ದರಿಂದ ಬಿಜೆಪಿಯ ಮೇಲಿನ ಈ ತಾತ್ಕಾಲಿಕ ಮುನಿಸು ಇಲ್ಲವಾದರೆ ಮತ್ತು ಕಾಂಗ್ರೆಸ್‌ನ ಬಗ್ಗೆ ಭರವಸೆ ಇಂಗಿದರೆ ಕಾಂಗ್ರೆಸ್‌ನ ಪರಿಸ್ಥಿತಿ ಕಷ್ಟವಾಗುತ್ತದೆ. ಈ ಬಾರಿ ಚುನಾವಣೆಯಲ್ಲಿ 55 ಕ್ಷೇತ್ರಗಳಲ್ಲಿ ಗೆದ್ದವರು ಸೋತವರಿಗಿಂತ ಕೇವಲ 5-10 ಸಾವಿರ ಮತಗಳಿಂದ ಗೆದ್ದಿದ್ದಾರೆ. ಅದರಲ್ಲಿ 35 ಜನ ಕಾಂಗ್ರೆಸ್ ಅಭ್ಯರ್ಥಿಗಳು ಎಂಬುದನ್ನು ಆರ್ಥ ಮಾಡಿಕೊಂಡರೆ ಕಾಂಗ್ರೆಸ್ ಗೆಲುವಿನ ರಾಜಕೀಯ ಬುನಾದಿ ಎಷ್ಟು ಸೂಕ್ಷ್ಮವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ ಕಾಂಗ್ರೆಸ್‌ನ ಗೆಲುವನ್ನು ಕೋಮುವಾದದ ವಿರುದ್ಧ ಅಥವಾ ಬಿಜೆಪಿಯ ವಿರುದ್ಧ ವ್ಯೆಹತಾಂತ್ರಿಕ ವಿಜಯ ಎಂದೆಲ್ಲಾ ಸಂಭ್ರಮ ಪಡಲು ಕಾರಣವಿಲ್ಲ. ಅವೆಲ್ಲಕ್ಕಿಂತ ಮುಖ್ಯವಾಗಿ ಈ ಚುನಾವಣೆಯ ಫಲಿತಾಂಶವು ಕಾಂಗ್ರೆಸ್‌ಗೆ ಗೆಲುವನ್ನು ತಂದುಕೊಟ್ಟಿದ್ದರೂ ಬಿಜೆಪಿಯ ಕೋಮುವಾದದ ವಿರುದ್ಧದ ಆದೇಶವೆಂದು ಯಾವ ದೃಷ್ಟಿಯಿಂದಲೂ ಹೇಳಲು ಸಾಧ್ಯವಿಲ್ಲ.

ಬಿಜೆಪಿಯ ಕೋಮುವಾದಿ ತಂತ್ರದ ಮೂರು ಹಂತಗಳು ಮತ್ತು ಫಲಿತಾಂಶಗಳು 

ಭಾರತದಲ್ಲಿ ಮತ್ತು ಕರ್ನಾಟಕದಲ್ಲೂ ಸಂಘಪರಿವಾರ ಮತ್ತು ಬಿಜೆಪಿ ಮೂರು ಹಂತಗಳಲ್ಲಿ ತನ್ನ ಸಾಮಾಜಿಕ ಬೆಂಬಲದ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. - ಮೊದಲನೆಯದು ಮಾನ್ಯತೆ ಗಳಿಸಿಕೊಳ್ಳುವ ಹಂತ-ಈ ಹಂತದಲ್ಲಿ ಬಿಜೆಪಿ ತನ್ನ ರಾಜಕೀಯ ಪ್ರಭಾವ ಹೆಚ್ಚಾಗಿ ಇರದ ಕಡೆ ತನ್ನನ್ನು ಸಜ್ಜನರ, ಪ್ರಾಮಾಣಿಕ, ಭ್ರಷ್ಟಾಚಾರ ವಿರೋಧಿ ಪಕ್ಷವೆಂದು ಮಾತ್ರ ಬಿಂಬಿಸಿಕೊಳ್ಳುತ್ತದೆ. ಅದಕ್ಕಾಗಿ ಸಮಾಜದಲ್ಲಿ ಖ್ಯಾತರಾದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆ. ಬೇರೆ ಪಕ್ಷದ ನಾಯಕರನ್ನು ಸೆಳೆಯುತ್ತದೆ. ಪ್ರಾರಂಭದಲ್ಲಿ ಕೋಮುವಾದ ಮಾತಾಡದೆ ಸಂಸ್ಕಾರ, ಸಂಸ್ಕೃತಿ, ದೈವಭಕ್ತಿ ಇತ್ಯಾದಿಗಳ ಮುಸುಕಿನಲ್ಲಿ ತನ್ನ ಹಿಂದೂ ಐಡೆಂಟಿಗೆ ಸಾಮಾಜಿಕ ಮಾನ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಮಾನ್ಯತೆಯೇ ಎರಡನೇ ಹಂತಕ್ಕೆ ದಾರಿ ಮಾಡಿಕೊಡುತ್ತದೆ. -ಎರಡನೇ ಹಂತದಲ್ಲಿ ತನ್ನ ಸಾಮಾಜಿಕ ನೆಲೆಯನ್ನು ಬಳಸಿಕೊಂಡು ಅಸೆಂಬ್ಲಿ ಅಥವಾ ಕೆಳಹಂತದ ಸಂಸ್ಥೆಗಳಲ್ಲಿ, ಸಮಾಜದಲ್ಲಿ ಅಧಿಕಾರವನ್ನು ಗಳಿಸಿಕೊಳ್ಳುತ್ತದೆ. ಆ ರಕ್ಷಣೆಯ ಹಿನ್ನೆಲೆಯಲ್ಲಿ ಸಂಘಪರಿವಾರ ತನ್ನ ಇತರ ಅಂಗಸಂಸ್ಥೆಗಳ ಮೂಲಕ ಮುಸ್ಲಿಮ್ ದ್ವೇಷ, ಹಿಂದೂ ರಾಷ್ಟ್ರ ಸಿದ್ಧಾಂತ ಹರಡತೊಡಗುತ್ತದೆ. ಮುಖ್ಯವಾಹಿನಿ ನಾಯಕರು ಅದಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಸಮರ್ಥನೆ ನೀಡತೊಡಗುತ್ತಾರೆ.

ಕಳೆದ ಎರಡು ದಶಕಗಳಿಂದ ಮೋದಿ ಮೇನಿಯಾ, ಮೋದಿ ನೇತೃತ್ವದಲ್ಲಿ ಭಾರತಕ್ಕೆ ದಕ್ಕಿರುವ ಸ್ಥಾನಮಾನ ಎಂಬ ಅಪಪ್ರಚಾರಗಳು ಸಹ ಈ ಹಂತದಲ್ಲಿ ಸೇರಿಕೊಳ್ಳುತ್ತದೆ. ಕ್ರಮೇಣ ಪರಿವಾರದ ಹಿಂದೂ ರಾಷ್ಟ್ರ ರಾಜಕಾರಣವನ್ನು, ಮುಸ್ಲಿಮರ ಅನ್ಯೀಕರಣವನ್ನು ಹಾಗೂ ಕಾಲಾಕಾಲಕ್ಕೆ ಸಣ್ಣಪ್ರಮಾಣದ ಕೋಮುಗಲಭೆಯನ್ನು ಎಬ್ಬಿಸುತ್ತಾ ಉಗ್ರಗಾಮಿ ಹಿಂದುತ್ವ ರಾಜಕಾರಣವನ್ನು ಮಾನ್ಯಗೊಳಿಸುವ ಮೂರನೇ ಹಂತಕ್ಕೆ ಸಮಾಜವನ್ನು ಸಜ್ಜುಗೊಳಿಸಲಾಗುತ್ತದೆ. - ಮೂರನೆಯ ಹಂತ ನಾವು ಇಂದು ಉತ್ತರ ಪ್ರದೇಶದಲ್ಲಿ, ಗುಜರಾತಿನಲ್ಲಿ, ಕರಾವಳಿ ಕರ್ನಾಟಕದಲ್ಲಿ ಕಾಣುತ್ತಿರುವ ಹಂತ. ಬಹಿರಂಗ, ಉಗ್ರಗಾಮಿ, ಸಂವಿಧಾನ ಬಾಹಿರ ಹಿಂದುತ್ವ ರಿಪಬ್ಲಿಕ್ ರಾಜಕಾರಣ. ಕರ್ನಾಟಕದ ಬೇರೆಬೇರೆ ಪ್ರದೇಶಗಳು ಸಂಘಪರಿವಾರದ ಮೂರು ಹಂತದ ಈ ಹಿಂದುತ್ವ ರಾಜಕಾರಣ ವಿವಿಧ ಹಂತದಲ್ಲಿವೆ ಮತ್ತು ಆ ಮೂರು ಪ್ರದೇಶಗಳಲ್ಲೂ ಬಿಜೆಪಿ ತನ್ನ ಸಾಮಾಜಿಕ ನೆಲೆಯನ್ನು ದೃಢೀಕರಿಸಿಕೊಳ್ಳುತ್ತಿರುವುದು ಮತ್ತು ವಿಸ್ತರಿಸುತ್ತಿರುವುದು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿತವಾಗಿವೆ. ಕಳೆದ ಐದು ವರ್ಷಗಳಲ್ಲಿ ಕೋಮು ಉದ್ವಿಘ್ನತೆ ಹೆಚ್ಚಿದ್ದ ಉಡುಪಿ, ಶ್ರೀರಂಗಪಟ್ಟಣ, ವಿಜಯಪುರ ಇನ್ನಿತ್ಯಾದಿ ಕ್ಷೇತ್ರಗಳಲ್ಲಿ ಬಿಜೆಪಿ 2018ಕ್ಕಿಂತ ಹತ್ತಾರು ಸಾವಿರ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ.

ಇನ್ನು ಕರಾವಳಿ ಮತ್ತು ಕಿತ್ತೂರು ಕರ್ನಾಟಕದಂತೆ ಮತೀಯ ಧ್ರುವೀಕರಣವಾಗದ ಮತ್ತು ಬಿಜೆಪಿಗೆ ಅಷ್ಟಾಗಿ ಸಾಮಾಜಿಕ ನೆಲೆಯೂ ಇಲ್ಲದ ಪ್ರದೇಶಗಳಲ್ಲಿ ಬಿಜೆಪಿ ಕಳೆದ ಹಲವಾರು ಚುನಾವಣೆಗಳಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಉದಾಹರಣೆಗೆ ಚಿಂತಾಮಣಿ, ಬಾಗೆಪಲ್ಲಿ, ಕೊರಟಗೆರೆ, ಮಧುಗಿರಿ, ಜಮಖಂಡಿಗಳನ್ನು ಉದಾಹರಣೆಯನ್ನಾಗಿ ನೋಡಬಹುದು. ಇನ್ನು ಬಿಜೆಪಿ ಸೋತಿರುವ ಕಿತ್ತೂರು ಕರ್ನಾಟಕ ಪ್ರದೇಶಗಳಲ್ಲಿ ಬಹುಪಾಲು ಕಡೆ ಸೋಲಿನ ಅಂತರ ಹೆಚ್ಚಿಲ್ಲದಿರುವುದನ್ನು ಗಮನಿಸಬಹುದು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಕೊನೇ ನಿಮಿಷದಲ್ಲಿ ವಲಸೆ ಬಂದ ಲಕ್ಷ್ಮಣ ಸವದಿಯವರು 76 ಸಾವಿರ ಮತಗಳಿಂದ ಗೆದ್ದಿದ್ದರೆ ಜಗದೀಶ್ ಶೆಟ್ಟರ್ ಅವರು 33,000 ಮತಗಳ ಅಂತರದಿಂದ ಸೋತಿದ್ದಾರೆ. ಈ ಎಲ್ಲಾ ಫಲಿತಾಂಶಗಳಿಗೆ ಸ್ಥಳೀಯವಾದ ಕೆಲವು ನಿರ್ದಿಷ್ಟ ಕಾರಣಗಳೂ ಇರಬಹುದು. ಆದರೂ ಒಟ್ಟಾರೆಯಾಗಿ ನೋಡಿದಾಗ ಬಿಜೆಪಿಯನ್ನು ಸರಕಾರ ಮಾಡದಂತೆ ತಡೆದದ್ದು ಅತ್ಯಗತ್ಯವಾಗಿದ್ದ ಮತ್ತು ತಾತ್ಕಾಲಿಕ ನಿರಾಳತೆ ತಂದುಕೊಡುವ ವಿಷಯವಾಗಿದ್ದರೂ ಅದು ಹಲವು ಸಜ್ಜನ ಲಿಬರಲ್ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು ಉತ್ಪ್ರೇಕ್ಷಿಸುತ್ತಿರುವಂತೆ ಕೋಮುವಾದದ ಸೋಲು ಅಥವಾ ಬಿಜೆಪಿ ಮುಕ್ತ ಕರ್ನಾಟಕವೂ ಆಗಿಲ್ಲ. ಈ ಅಲ್ಪತೃಪ್ತಿ ಮತ್ತು ಉತ್ಪ್ರೇಕ್ಷಿತ ಸಮಾಧಾನಗಳು ಮತ್ತು ಅದೇ ಭರದಲ್ಲಿ ಈಗ ಆಡಳಿತರೂಢವಾಗಿರುವ ಕಾಂಗ್ರೆಸ್‌ಗೆ ನೀಡುತ್ತಿರುವ ಬೇಶರತ್ ಬೆಂಬಲಗಳು ಅತಿ ಬೇಗನೆ ಬಿಜೆಪಿಯ ಬಲವನ್ನು ಹೆಚ್ಚಿಸಿಬಿಡುವ ಆತಂಕವನ್ನು ಹುಟ್ಟಿಸಿದೆ.
(ನಾಳೆಯ ಸಂಚಿಕೆಗೆ)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top