ಪ್ರತಿರೋಧದ 'ಕಾಂಗ್ರೆಸೀಕರಣದ' ಅಪಾಯಗಳು
-

ಭಾಗ-2
ಹಿಂದುತ್ವದ ದಾಳಿ ಹೆಚ್ಚಾಗಬಹುದಾದ ಆತಂಕ
ಈ ಆತಂಕಕ್ಕೆ ಮೂರು ಕಾರಣಗಳಿವೆ. ಮೊದಲನೆಯದು-ಬಿಜೆಪಿಯ ಸಾಮಾಜಿಕ ನೆಲೆ ಗಟ್ಟಿಯಾಗಿಯೇ ಉಳಿದುಕೊಂಡಿರುವುದು. ಎರಡನೆಯದು-ಕಾಂಗ್ರೆಸ್‌ನ ಗೆಲುವಿನ ರಾಜಕೀಯ ಬುನಾದಿ ಗಟ್ಟಿಯಾಗಿಲ್ಲದೇ ಇರುವುದು. ಮೂರನೆಯದು-ಸಂಘಪರಿವಾರದ ಹಿಂದುತ್ವ ದ್ವೇಷ ರಾಜಕಾರಣಕ್ಕೆ ರಾಜಕೀಯ ಸೈದ್ಧಾಂತಿಕ ಮಾನವೀಯ ಪರ್ಯಾಯ ಕೊಡಬಲ್ಲ ಶಕ್ತಿಗಳು ದುರ್ಬಲವಾಗುತ್ತಲೇ ಹೋಗುತ್ತಿರು ವುದು ಮತ್ತು ಆ ಕಾರಣಕ್ಕಾಗಿಯೇ ಕಾಂಗ್ರೆಸ್‌ನ ಮೇಲೆ ಅವಲಂಬಿಸುತ್ತಾ ಕಾಂಗ್ರೆಸೀಕರಣಗೊಳ್ಳುತ್ತಿರುವುದು. ಮೊದಲೆರಡು ಸಂಗತಿಗಳನ್ನು ಈಗಾಗಲೇ ಚರ್ಚಿಸಿದ್ದೇವೆ. ವೂರನೆಯ ಸಂಗತಿಯನ್ನು ಜರೂರಾಗಿ ಮತ್ತು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ಎಡ-ಪ್ರಗತಿಪರ ದೌರ್ಬಲ್ಯ ಮತ್ತು ವೈಫಲ್ಯವೇ ಫ್ಯಾಶಿಸಂ ಬೆಳವಿನ ಗೊಬ್ಬರ
ನಿನ್ನೆಯ ಪಟ್ಟಿ ತೋರಿಸುವಂತೆ ಈ ಚುನಾವಣೆಯ ಮತ್ತೊಂದು ಆತಂಕಕಾರಿ ಫಲಿತಾಂಶ ಎಡ ಹಾಗೂ ಪ್ರಗತಿಪರ ಪಕ್ಷಗಳ ಶೋಚನೀಯ ಸಾಧನೆ. ಮೊದಲಿಗೆ ಪ್ರಧಾನ ಎಡಪಕ್ಷಗಳಲ್ಲಿ ಸಿಪಿಐ ಏಳು ಸ್ಥಾನಗಳಲ್ಲೂ ಮತ್ತು ಸಿಪಿಎಂ ನಾಲ್ಕು ಸ್ಥಾನಗಳಲ್ಲೂ ಸ್ಪರ್ಧಿಸಿದ್ದವು. ಉಳಿದಂತೆ ಸಿಪಿಐ ಕಾಂಗ್ರೆಸ್‌ಗೆ ಬೇಶರತ್ ಬೆಂಬಲವನ್ನೂ, ಸಿಪಿಎಂ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡಕ್ಕೂ ಬೆಂಬಲವನ್ನು ಘೋಷಿಸಿತ್ತು. ಬಾಗೇಪಲ್ಲಿಯಲ್ಲಿ ಜೆಡಿಎಸ್ ಸಿಪಿಎಂ ಪಕ್ಷವನ್ನು ಬೆಂಬಲಿಸಿ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಅಲ್ಲಿ ಸಿಪಿಎಂ ಪಕ್ಷದ ಅತ್ಯಂತ ಜನಪ್ರಿಯ ವೈದ್ಯರಾದ ಡಾ. ಅನಿಲ್ ಗೆಲ್ಲಬೇಕು ಮತ್ತು ಗೆಲ್ಲಬಹುದು ಎಂಬ ಆಶಯವನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಫಲಿತಾಂಶವನ್ನು ನೋಡಿದಾಗ ಎಡಪಕ್ಷಗಳು ಒಟ್ಟಾರೆಯಾಗಿ ಈ ಬಾರಿ ಪಡೆದ ವೋಟು ಶೇ. 0.08 ಮಾತ್ರ.
ಬಾಗೇಪಲ್ಲಿಯಲ್ಲಿ ಕಾಂಗ್ರೆಸ್ ಗೆದ್ದರೂ ಈ ಹಿಂದೆ ಕೇವಲ 4,124 ವೋಟುಗಳನ್ನು ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ 62,000ಕ್ಕೂ ಹೆಚ್ಚು ವೋಟುಗಳನ್ನು ಪಡೆದುಕೊಂಡಿದ್ದರೆ ಸಿಪಿಎಂ ಪಕ್ಷ ಕೇವಲ 19,000 ವೋಟುಗಳನ್ನು ಮಾತ್ರ ಪಡೆದುಕೊಂಡಿತು. ಕರ್ನಾಟಕದಲ್ಲಿ ಕಾರ್ಮಿಕ ಚಳವಳಿಯ ಮುಂಚೂಣಿಯಲ್ಲಿದ್ದ ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಸಿಪಿಐ 918 ವೋಟುಗಳನ್ನು ಮತ್ತು ಸಿಪಿಎಂ 1,008 ವೋಟುಗಳನ್ನು ಪಡೆದುಕೊಂಡರೆ ಬಿಜೆಪಿ 30,000 ವೋಟುಗಳನ್ನು ಪಡೆದುಕೊಂಡಿದೆ. ಸಿಪಿಐ ಪಕ್ಷವು ನಿರಂತರವಾಗಿ ಕಾಫಿ ಪ್ಲಾಂಟೇಶನ್ ಕಾರ್ಮಿಕರನ್ನು ಸಂಘಟಿಸುತ್ತಾ ಬಂದಿರುವ ಮೂಡಿಗೆರೆಯಲ್ಲಿ ಕೇವಲ 21,785 ವೋಟುಗಳನ್ನು ಪಡೆದುಕೊಂಡಿದೆ. ಅದೇ ರೀತಿ ಬಹುಜನ ಸಮಾಜ ಪಕ್ಷ ಇಡೀ ರಾಜ್ಯದಲ್ಲಿ ಕೇವಲ ಶೇ. 0.3ರಷ್ಟು ವೋಟುಗಳನ್ನು ಪಡೆದುಕೊಂಡಿದೆ.
ಚುನಾವಣಾ ರಾಜಕಾರಣದಲ್ಲಿ ಜನಪರ್ಯಾಯವಾಗಿ ಮೂಡಿಬಂದ ಈ ಎಲ್ಲಾ ಪಕ್ಷಗಳು ಚುನಾವಣೆಗಳಿಂದ ಚುನಾವಣೆಗೆ ವೋಟುಗಳನ್ನು ಅರ್ಥಾತ್ ಜನಬೆಂಬಲವನ್ನು ಕಳೆದುಕೊಳ್ಳುತ್ತಾ ಹೋಗುತ್ತಿವೆ. ಅದರ ಲಾಭವನ್ನು ಬಿಜೆಪಿ ಪಡೆದುಕೊಳ್ಳುತ್ತಿದೆ. ಈ ಬಲಹೀನತೆಯಿಂದಾಗಿ ಈ ಪಕ್ಷಗಳು ಹಾಗೂ ಹಲವಾರು ಪ್ರಗತಿಪರ ಸಂಘಟನೆಗಳು ಮತ್ತು ಬುದ್ಧಿಜೀವಿಗಳು ಬಿಜೆಪಿಯ ವಿರುದ್ಧ ಕಾಂಗ್ರೆಸ್‌ಗೆ ಬೇಶರತ್ ಬೆಂಬಲ ಕೊಡುವ ವೈರುಧ್ಯವನ್ನು ಎದುರಿಸುತ್ತಿದ್ದಾರೆ. ಆದರೆ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ಕಾರಣಕ್ಕಾಗಿ ಕಾಂಗ್ರೆಸ್ ಸಮರ್ಥನೆ ಮಾಡುವುದು ಆಡಳಿತದ ವಿರುದ್ಧದ ಪ್ರತಿರೋಧ ಸ್ಪೇಸನ್ನು ಸಂಪೂರ್ಣವಾಗಿ ಬಿಜೆಪಿಗೆ ಬಿಟ್ಟುಕೊಟ್ಟಂತಾಗುತ್ತದೆ. ಆದರೆ ಈ ರಾಜಕೀಯ ಧೋರಣೆ ಬರಲಿರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಮತ್ತು ಹಿಂದುತ್ವ ರಾಜಕಾರಣವನ್ನು ಇನ್ನಷ್ಟು ಗಟ್ಟಿಗೊಳಿಸಬಹುದಾದ ಅಪಾಯಕ್ಕೆ ಕುರುಡು ಮತ್ತು ಕಿವುಡಾಗಿಸುವುದಿಲ್ಲವೇ? ಭಾರತದ ಮತ್ತು ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಬಿಜೆಪಿ ಏಕಮಾತ್ರ ಹಾಗೂ ಬಲಿಷ್ಠ ವಿರೋಧ ಪಕ್ಷವಾಗಿದ್ದಾಗಲೆಲ್ಲಾ ಕೋಮುಗಲಭೆಗಳ ಮೂಲಕ, ಸಮಾಜದಲ್ಲಿ ದ್ವೇಷವನ್ನು ಹರಡುವ ಮೂಲಕ, ಕಾಂಗ್ರೆಸ್‌ನ ಮೃದು ಹಿಂದುತ್ವ ನೀತಿಗಳಲ್ಲಿ, ಅದಕ್ಷತೆ ಹಾಗೂ ಮಾಡಿದ ಮತ್ತು ಮಾಡಿರದ ಭ್ರಷ್ಟಾಚಾರಗಳ ವಿರೋಧಗಳಲ್ಲಿ ಆಸರೆಯನ್ನು ಪಡೆದುಕೊಳ್ಳುತ್ತಾ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತಾ ಬಂದಿದೆ.
2009ರಲ್ಲಿ ಲೋಕಸಭೆಯಲ್ಲಿ ಶೇ. 18ರಷ್ಟು ಮತಪ್ರಮಾಣ ಮತ್ತು 116 ಸೀಟುಗಳನ್ನು ಮಾತ್ರ ಪಡೆದುಕೊಂಡು ದೊಡ್ಡ ವಿರೋಧ ಪಕ್ಷವಾಗಿದ್ದ ಬಿಜೆಪಿ, ಕಾಂಗ್ರೆಸ್‌ನ ದೌರ್ಬಲ್ಯಗಳನ್ನು ಬಳಸಿಕೊಂಡು 2014ರಲ್ಲಿ ಶೇ. 31ರಷ್ಟು ಮತಗಳನ್ನು ಮತ್ತು 282 ಸೀಟುಗಳನ್ನು ಪಡೆದುಕೊಂಡು ಅಧಿಕಾರ ವಶಪಡಿಸಿಕೊಂಡಿತು. ಈಗ ಅಧಿಕಾರದಲ್ಲಿದ್ದರೂ ಜನಪರ ವಿರೋಧ ಪಕ್ಷವೆಂಬ ಭ್ರಾಂತಿಯನ್ನು ಮತ್ತು ಹಿಂದುತ್ವದ ವಿಷವನ್ನು ಬಿತ್ತುತ್ತಾ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ಗಿಂತ ಅಪಾರ ಭ್ರಷ್ಟಾಚಾರವನ್ನು ದಿನನಿತ್ಯ ಎಸಗುತ್ತಿದ್ದರೂ ಜನಬೆಂಬಲ ಮುಕ್ಕಾಗದಂತೆ ನೋಡಿಕೊಳ್ಳುತ್ತಿದೆ. ಅದರಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದೇ ಇದ್ದರೂ ಕಾಂಗ್ರೆಸ್ ಅಥವಾ ಕಾಂಗ್ರೆಸ್ ತರಹದ ಪಕ್ಷಗಳನ್ನು ದಾಟಿ ವಿಶ್ವಾಸಾರ್ಹ ಜನಪರ ವಿರೋಧ ಇಲ್ಲದಿರುವುದು ಹಿಂದುತ್ವದ ಯಶಸ್ಸಿಗೆ ಕಾರಣವಾಗಿದೆ. ಕರ್ನಾಟಕದಲ್ಲೂ 1989ರಲ್ಲಿ ಶೇ. 4ರಷ್ಟು ಮತ ಮತ್ತು ನಾಲ್ಕು ಸೀಟುಗಳು ಮಾತ್ರ ಪಡೆದುಕೊಂಡಿದ್ದ ಬಿಜೆಪಿ ವಿರೋಧ ಪಕ್ಷವಾಗಿದ್ದುಕೊಂಡು ಚುನಾವಣೆಯಿಂದ ಚುನಾವಣೆಗೆ ತನ್ನ ಮತಬೆಂಬಲವನ್ನು ಹೆಚ್ಚಿಸಿಕೊಳುತ್ತಾ ಮತ್ತು ಸದೃಡೀೀಕರಿಸಿಕೊಳ್ಳುತ್ತಾ ಶೇ. 36ರಷ್ಟು ವೋಟು ಶೇರು ಪಡೆದುಕೊಂಡಿದೆ.
ಅದೇ ಸಮಯದಲ್ಲಿ ತನ್ನ ಹಿಂದುತ್ವ ರಾಜಕಾರಣವನ್ನು ಸಂಘಪರಿವಾರದ ಅಂಗಸಂಸ್ಥೆಗಳ ಮೂಲಕ ಬೆಳೆಸಿ ಗಟ್ಟಿಪಡಿಸಿಕೊಂಡಿದೆ. ಈ ಹಿಂದುತ್ವವಾದಿ ಸಾಮಾಜಿಕ ನೆಲೆ ಬೆಳೆಯಲು ಕಾಂಗ್ರೆಸ್‌ನ ಮೃದು ಹಿಂದುತ್ವವಾದಿ ನೀತಿಗಳು ಕೂಡ ಕಾರಣವಾಗಿವೆ. ಅರ್ಥಾತ್ ಜನಪರ ಮತ್ತು ವಿಶ್ವಾಸಾರ್ಹ ವಿರೋಧ ಪಕ್ಷದ ಕೊರತೆಯೇ ಬಿಜೆಪಿಯ ಬೆಳವಿಗೆ ಕಾರಣವಾಗಿದೆ. ಮತ್ತೊಂದು ಕಡೆ ಇತಿಹಾಸವನ್ನು ನೋಡಿದರೆ ಜರ್ಮನಿಯಲ್ಲಿ ಹಿಟ್ಲರನ ಮತ್ತು ಇಟಲಿಯಲ್ಲಿ ಮುಸ್ಸೋಲಿನಿಯ ಫ್ಯಾಶಿಸ್ಟ್ ಆಳ್ವಿಕೆಗಳು ಮಾನ್ಯವಾಗಲು ಕಾರಣ ಹಿಂದಿನ ನಡುಪಂಥೀಯ ಆಳ್ವಿಕೆಗಳು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೆ ಮೋಸವೆಸಗಿದ್ದು ಹಾಗೂ ಜನ ಫ್ಯಾಶಿಸ್ಟರನ್ನೇ ನಿಜವಾದ ಪ್ರತಿರೋಧವೆಂದು ಭಾವಿಸಿದ್ದು. ನೈಜ ಪ್ರತಿರೋಧ ಒಡ್ಡುತ್ತಿದ್ದ ಜನಪರ ಕಮ್ಯುನಿಸ್ಟರನ್ನು ಕಗ್ಗೊಲೆ ಮಾಡಿದ್ದು. ಇತ್ತೀಚಿನ ವರ್ಷಗಳಲ್ಲಿ ಟರ್ಕಿಯಲ್ಲಿ ಎರ್ದೊಗಾನ್, ಬ್ರೆಝಿಲ್‌ನಲ್ಲಿ ಬೊಲ್ಸನಾರೊರಂಥವರು ಅಧಿಕಾರಕ್ಕೆ ಬಂದಿದ್ದೇ ಕಾಂಗ್ರೆಸ್‌ನಂಥ ನಡುಪಂಥೀಯ ಅಥವಾ ಎಡಒಲವಿನ ಆದರೆ ನವ ಉದಾರವಾದಿ ಆರ್ಥಿಕತೆಯ ಕಾರ್ಪೊರೇಟ್ ಬಂಡವಾಳಶಾಹಿ ಪರ ನೀತಿಗಳನ್ನು ಅನುಸರಿಸಿದ ಪಕ್ಷಗಳ ಜನದ್ರೋಹದಿಂದಾಗಿ. ಅಂಥ ಸಂದರ್ಭಗಳಲ್ಲಿ ಜನಪರ ವಿರೋಧ ಪಕ್ಷಗಳ ಸ್ವತಂತ್ರ ಅಸ್ತಿತ್ವ ಇಲ್ಲದಿದ್ದುದರಿಂದಲೇ ಫ್ಯಾಶಿಸ್ಟರು ಗಟ್ಟಿಯಾಗಿದ್ದಾರೆ.
ಭಾರತದಲ್ಲಿ ಕಳೆದ ನೂರು ವರ್ಷಗಳಿಂದ ನಿರಂತರವಾಗಿ ದ್ವೇಷ ರಾಜಕಾರಣವನ್ನು ಬಿತ್ತುತ್ತಾ, ಅದರಲ್ಲೂ ಕಳೆದ ಎರಡು ದಶಕಗಳಿಂದ 24 ಗಂಟೆ ಮತ್ತು 365 ದಿನಗಳು ಜನರನ್ನು ಹಲವು ರೀತಿಯಲ್ಲಿ ಪ್ರಭಾವಿಸುತ್ತಾ, ಬಿಜೆಪಿ- ಸಂಘಪರಿವಾರ ಮೇಲ್ವರ್ಗದಲ್ಲಿ ಮಾತ್ರವಲ್ಲದೆ ಬಡವರ್ಗ ಮತ್ತು ದಮನಿತ ಸಮುದಾಯಗಳಲ್ಲೂ ಇತರ ಯಾವುದೇ ಸಂಘಟನೆಗಳಿಗಿಂತ ಹೆಚ್ಚಿನ ನೆಲೆಯನ್ನು ಕಂಡುಕೊಂಡಿದೆ. ಅದನ್ನು ಚುನಾವಣೆಗೆ ಕೆಲವು ದಿನಗಳ ಮುನ್ನ ನಡೆಸುವ ಜನಸಂಪರ್ಕದಿಂದ ಸೋಲಿಸಲು ಸಾಧ್ಯವಿಲ್ಲ. ಅದಕ್ಕೆ ಅಷ್ಟೇ ಆಳವಾದ ಜನಬೆಂಬಲವಿರುವ, ಸಾಮಾಜಿಕ ನೆಲೆಯಿರುವ, ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ವಿರೋಧಿ ತಾತ್ವಿಕತೆ ಇರುವ ಜನಸಂಘರ್ಷದ ಅಗತ್ಯವಿದೆ. ಅದನ್ನು ಇವತ್ತು ನಾಳೆಯೊಳಗೆ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಮನೆಗೆ ಬೆಂಕಿ ಬಿದ್ದಾಗ ನೀರು ಮಿಶ್ರಿತ ಪೆಟ್ರೋಲ್‌ನಿಂದಲೂ ಬೆಂಕಿ ಆರಿಸಲು ಸಾಧ್ಯವಿಲ್ಲ. ಈಗಲಾದರೂ ಬಾವಿಯನ್ನು ತೋಡುವ ಅಗತ್ಯವಿದೆ. ಹಾಗಿಲ್ಲದೆ ಜನರೆದುರು ಜನಪರ ಸಂಘಟನೆಗಳೂ ಸಂದರ್ಭದ ಅನಿವಾರ್ಯತೆಯೆಂಬ ನೆಪದಲ್ಲಿ ಪ್ರತಿರೋಧದ ಸ್ಪೇಸನ್ನು ಸಂಪೂರ್ಣವಾಗಿ ಬಿಜೆಪಿಗೆ ಬಿಟ್ಟುಕೊಟ್ಟು ಕಾಂಗ್ರೆಸ್‌ನ ವಕ್ತಾರರಂತೆ ಕಾಣತೊಡಗಿದರೆ ಬರಲಿರುವ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿಯಾಗಿ ಅಧಿಕಾರಕ್ಕೆ ಮರಳುವುದು ಮಾತ್ರವಲ್ಲದೆ, ಸಂಘಪರಿವಾರದ ಹಿಂದುತ್ವ ರಾಜಕಾರಣ ಬಲಿಯಲು ಈ ಕಾರ್ಯತಂತ್ರವೇ ಕಾರಣವಾಗುತ್ತದೆ. ಪ್ರತಿರೋಧದ ಕಾಂಗ್ರೆಸೀಕರಣವಾಗದಂತೆ ಎಚ್ಚರಿಕೆಯಿಂದಿರುವುದು ಜನಪರ ಆಶಯಗಳ ತುರ್ತು ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.