ಪಠ್ಯಕ್ರಮ ಸುಧಾರಣೆಗೆ ಸ್ವಾಯತ್ತ ಶೈಕ್ಷಣಿಕ ಪ್ರಾಧಿಕಾರ ಅಗತ್ಯ: ರಾಜ್ಯ ಶಿಕ್ಷಣ ನೀತಿ ಆಯೋಗ ಅಭಿಪ್ರಾಯ

ಸಾಂದರ್ಭಿಕ ಚಿತ್ರ Photo: chatgpt.com
ಬೆಂಗಳೂರು : ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರ ಸಂಬಂಧಿತ ಚಟುವಟಿಕೆಗಳೊಂದಿಗೆ ತೊಡಗಿಸಿಕೊಂಡ ಯಾವುದೇ ಶೈಕ್ಷಣಿಕ ಸಂಸ್ಥೆ ಇಲ್ಲ. ನಿಯತಕಾಲಿಕವಾಗಿ ಪಠ್ಯಕ್ರಮ ಪರಿಷ್ಕರಣೆ ಮತ್ತ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಗಳನ್ನು ರಾಜಕೀಯ ನಾಯಕತ್ವವು ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳು ನಿರ್ವಹಿಸುತ್ತ ಬಂದಿವೆ. ಇದು ಬದಲಾಗಬೇಕು ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಅಭಿಪ್ರಾಯಪಟ್ಟಿದೆ.
ಕರ್ನಾಟಕದಲ್ಲಿ ಪಠ್ಯಕ್ರಮ ಸುಧಾರಣೆಗಾಗಿ ಕೊನೆ ಕ್ರಮ ಕೈಗೊಂಡು ಒಂದೂವರೆ ದಶಕಕ್ಕೂ ಹೆಚ್ಚು ಸಮಯ ಕಳೆದಿದೆ. ಅದನ್ನು ಕೂಡ ಪಠ್ಯಕ್ರಮ, ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು ಮತ್ತು ಶಿಕ್ಷಕರ ದೃಷ್ಟಿಕೋನವನ್ನು ರೂಪಿಸುವ ವ್ಯವಸ್ಥಿತ ರೀತಿಯನ್ನು ಅನುಸರಿಸಿ ಮಾಡಲಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಇಲಾಖೆಯು ಕೆಲಸಗಳನ್ನು ಪೂರೈಸಲು ತಜ್ಞರ ತಾತ್ಕಾಲಿಕ ಸಮಿತಿಗಳನ್ನು ನಿಯೋಜಿಸುತ್ತದೆ. ಇಲಾಖೆ ಅಥವಾ ಹೊರಗಿನ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸುವ ಪದ್ಧತಿಯನ್ನು ಮತ್ತು ಶಾಲಾ ಶಿಕ್ಷಣದ ಆರಂಭಿಕ ಹಂತಗಳಲ್ಲಿ ಸಾರ್ವಜನಿಕ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.
ಸುಖ್ದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ತನ್ನ ವರದಿಗಳನ್ನು ಸಲ್ಲಿಸಿದೆ. ಈ ವರದಿಗಳ ಮೇಲೆ ತಮ್ಮ ಅಭಿಪ್ರಾಯ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಸಂಪುಟದ ಎಲ್ಲಾ ಸದಸ್ಯರಿಗೆ ಸೂಚಿಸಿ ವರದಿ ಕಳಿಸಿದ್ದರು. ಇದಾದ ನಂತರ
ರಾಜಕೀಯ ಬದಲಾವಣೆಗಳಿಂದಾಗಿ ಡಿ.ಕೆ.ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ರಾಜಕೀಯ ಬೆಳವಣಿಗೆಗಳಲ್ಲಿಯೇ ಮುಳುಗಿ ಹೋಗಿರುವ ಸರಕಾರವು ಇನ್ನೂ ಆಯೋಗವು ನೀಡಿದ ವರದಿಗಳತ್ತ ಕಣ್ಣಾಡಿಸಿಲ್ಲ. ಸುಖ್ದೇವ್ ಥೋರಟ್ ನೇತೃತ್ವದ ಆಯೋಗವು ನೀಡಿರುವ ಎಲ್ಲಾ ಸಂಪುಟಗಳ ವರದಿಗಳ ಪ್ರತಿಯು "The-file.in"ಗೆಲಭ್ಯವಾಗಿವೆ.
ಆಯೋಗವು ನೀಡಿರುವ ವರದಿಯ ಅಧ್ಯಾಯ 7ರಲ್ಲಿ ಪಠ್ಯಕ್ರಮ, ಪಠ್ಯಪುಸ್ತಕಗಳು, ಕಲಿಕಾ ಪ್ರಕ್ರಿಯೆ ಮತ್ತು ಕಲಿಕೆಯ ಮೌಲ್ಯಮಾಪನ ಕುರಿತು ಸುದೀರ್ಘವಾಗಿ ಚರ್ಚಿಸಿದೆ. ವಿಶೇಷವಾಗಿ ಪಠ್ಯ ಪುಸ್ತಕ ಪರಿಷ್ಕರಣೆ, ಪಠ್ಯಕ್ರಮ ರಚನೆ, ಪರೀಕ್ಷೆಗಳು ಮತ್ತು ಮೌಲ್ಯಮಾಪನ ಕುರಿತು ವಿಶೇಷ ನೋಟ ಬೀರಿರುವುದು ವರದಿಯಿಂದ ಗೊತ್ತಾಗಿದೆ.
ಪಠ್ಯಕ್ರಮ, ಪಠ್ಯಪುಸ್ತಕಗಳ ಅಭಿವೃದ್ಧಿ ಸಂಸ್ಥೆ ಸ್ಥಾಪನೆಗೆ ಶಿಫಾರಸು: ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಅಭಿವೃದ್ಧಿಯು ನಿರಂತರ ವೃತ್ತಿಪರ ಪ್ರಕ್ರಿಯೆಯಾಗಿದೆ. ಪಠ್ಯಕ್ರಮ ಅಭಿವೃದ್ಧಿಯಂತ ಪ್ರಮುಖ ಶೈಕ್ಷಣಿಕ ಕಾರ್ಯಗಳನ್ನು ಕೈಗೊಳ್ಳಲು ಪಠ್ಯಕ್ರಮ, ಪಠ್ಯಪುಸ್ತಕಗಳು, ಪರೀಕ್ಷೆಗಳು, ಪೂರಕ ಪರಿಕರಗಳು ಮತ್ತು ಶಿಕ್ಷಕರ ವೃತ್ತಿಪರ ಅಭಿವೃದ್ದಿ ಸೇರಿದಂತೆ ಒಟ್ಟಾರೆ ದೃಷ್ಟಿಕೋನ, ವೃತ್ತಿಪರ ಪರಿಣಿತಿ, ಬದ್ಧತೆ, ಹೊಣೆಗಾರಿಕೆ ಮತ್ತು ಸೂಕ್ತ ಸಂಶೋಧನಾ ಅನುಭವ ಮತ್ತು ಸಾಮರ್ಥ್ಯಗಳಿಂದ ಕೂಡಿದ ಸ್ವಾಯತ್ತ ಶೈಕ್ಷಣಿಕ ಪ್ರಾಧಿಕಾರ ಸ್ಥಾಪಿಸಬೇಕು. ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸುವ, ಪರಿಶೀಲಿಸುವ, ಪರಿಷ್ಕರಿಸುವ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಶಿಕ್ಷಣಶಾಸ್ತ್ರ ಮತ್ತು ಮೌಲ್ಯಮಾಪನ ಕ್ರಮಗಳಿಗೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸುವ ಜವಾಬ್ದಾರಿ ಹೊರಬಲ್ಲ ಪಠ್ಯಕ್ರಮ ಮತ್ತ ಪಠ್ಯಪುಸ್ತಕಗಳ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.
ಒಂದೂವರೆ ದಶಕದ ಹಿಂದೆಯೇ ಪಠ್ಯಕ್ರಮ ಸುಧಾರಣೆ: ಪಠ್ಯಕ್ರಮ ಸುಧಾರಣೆ ಕುರಿತು ಚರ್ಚಿಸಿರುವ ಆಯೋಗವು ಕೆಸಿಎಫ್ 2007 ಮೀರಿ ಸಾಗುವುದು, ಹೊಸ ದೃಷ್ಟಿಕೋನ, ಆದೇಶ ಮತ್ತು ಬದ್ಧತೆ ಕುರಿತೂ ವಿಶ್ಲೇಷಿಸಿದೆ.
ಛಿದ್ರಗೊಂಡ ಚಟುವಟಿಕೆಯಂತಾದ ಪಠ್ಯಪುಸ್ತಕ ತಯಾರಿಕೆ:
ಪ್ರಸ್ತುತ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ತಯಾರಿಕೆಯು ಡಿಎಸ್ಇಆರ್ಟಿ, ಸಮಗ್ರ ಶಿಕ್ಷಣ, ಪಿಯು ಬೋರ್ಡ್ ಮತ್ತು ಪಠ್ಯ ಪುಸ್ತಕ ಸಂಘವೇ ಮೊದಲಾದ ಬಹು ಸಂಸ್ಥೆಗಳ ಒಳಗೊಳ್ಳುವಿಕೆಯಿಂದ ಒಂದು ಛಿದ್ರಗೊಂಡ ಚಟುವಟಿಕೆಯಂತಾಗಿಬಿಟ್ಟಿದೆ. ಪಠ್ಯಪುಸ್ತಕ ಬರವಣಿಗೆ ಮತ್ತು ಕಲಿಕಾ ಸಾಮಗ್ರಿ ಅಭಿವೃದ್ಧಿಯಲ್ಲಿ ಪೂರ್ವ ಸಿದ್ಧತೆ ಮತ್ತು ನಿರ್ಣಾಯಕ ಪರಿಶೋಧನೆಗಳಾಗಲಿ ವಿಮರ್ಶೆ ಮತ್ತು ಮೌಲ್ಯಮಾಪನಗಳಾಗಲಿ ಇರುವುದು ಅತ್ಯಂತ ವಿರಳ. ಅಷ್ಟೇ ಅಲ್ಲದೇ ಕಾಲೇಜು ಅಥವಾ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ವಿಷಯ ತಜ್ಞರು ವಿವಿಧ ವಿಷಯಗಳ ವಿದ್ಯಾರ್ಥಿಗಳನ್ನು ಆರ್ಥ ಮಾಡಿಕೊಳ್ಳಲು ಸಜ್ಜಾಗಿರುವುದಿಲ್ಲ ಎಂದು ವಿಶ್ಲೇಷಿಸಿದೆ.
ಅನುಭವವೇ ಇರುವುದಿಲ್ಲ: ಅದರಲ್ಲೂ ಮುಖ್ಯವಾಗಿ ಕಲಿಕೆ ಹೇಗೆ ನಡೆಯುತ್ತದೆ ಎಂಬುದಾಗಲೀ, ಪಠ್ಯಕ್ರಮವನ್ನು ಯೋಜಿಸಲು ಅಥವಾ ಉತ್ತಮ ಪಠ್ಯಪುಸ್ತಕಗಳನ್ನು ಬರೆಯಲು ಅಗತ್ಯವಿರುವ ಶಿಕ್ಷಣ ಕ್ಷೇತ್ರದ ಜ್ಞಾನ ಮತ್ತು ಅನುಭವವಾಗಲೀ ಅವರಿಗೆ ಇರುವುದಿಲ್ಲ. ಇದು ಆರಂಭಿಕ ಶ್ರೇಣಿಗಳಿಂದಲೂ ವಯಸ್ಕರಿಗೂ ಕೂಡ ಅರ್ಥೈಯಿಸಿಕೊಳ್ಳಲು ಕಷ್ಟವಾಗುವಂತ, ಗ್ರಹಿಕೆಗೆ ಮೀರಿದ ಪದಗಳು ಮತ್ತು ಮಾಹಿತಿಯಿಂದ ತುಂಬಿರುವ ಪಠ್ಯಪುಸ್ತಕಗಳ ಗುಣಮಟ್ಟದಿಂದ ಈಗಾಗಲೇ ಸ್ಪಷ್ಟವಾಗಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.ಕಾರ್ಯಪಡೆಯ ತ್ವರಿತ ಪರಿಶೀಲನೆಯ ಆಧಾರದ ಮೇಲೆ ಈ ನಿರ್ಣಾಯಕ ಕೆಲಸವನ್ನು ಪೂರೈಸುವ ನಿಟ್ಟಿನಲ್ಲಿ ಶಾಲೆ ಮತ್ತು ವಿಶ್ವವಿದ್ಯಾಲಯಗಳಿಂದ ವಿಷಯಗಳ ಬಗ್ಗೆ ವಿಶೇಷ ಜ್ಞಾನ ಹೊಂದಿರುವ ಆಯ್ದ ಸಂಪನ್ಮೂಲ ಶಿಕ್ಷಕರೊಡನೆ ಸಂವಹನ ಕಾರ್ಯಾಗಾರಗಳನ್ನು ನಡೆಸಿ ಪಠ್ಯಕ್ರಮ, ಪಾಠಗಳು ಮತ್ತು ಪಠ್ಯಪುಸ್ತಕಗಳ ಸಮಗ್ರ ಶೈಕ್ಷಣಿಕ ವಿಮರ್ಶೆ ಮತ್ತು ನವೀಕರಣವನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಆಯೋಗವು ಬಲವಾಗಿ ಶಿಫಾರಸು ಮಾಡಿದೆ.
ಹೊರಗಿನವರಿಂದ ಮೌಲ್ಯಮಾಪನ ಬೇಡ: ಇಲಾಖೆ ಅಥವಾ ಹೊರಗಿನ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಮೌಲ್ಯಮಾಪನ ನಡೆಸುವ ಪದ್ಧತಿಯನ್ನು ಮತ್ತು ಶಾಲಾ ಶಿಕ್ಷಣದ ಆರಂಭಿಕ ಹಂತಗಳಲ್ಲಿ ಸಾರ್ವಜನಿಕ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ. ಈ ಕ್ರಮಗಳು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಹೊರೆಯಾಗುವುದಲ್ಲದೇ ಶಿಕ್ಷಕರ ಸಾಮರ್ಥ್ಯದ ಬಗ್ಗೆ ಅಪ ನಂಬಿಕೆ ಹುಟ್ಟು ಹಾಕಲಿದೆ. ಅವರನ್ನು ಕುಗ್ಗುವಂತೆ ಮಾಡುತ್ತವೆ. ಮತ್ತು ಮಕ್ಕಳನ್ನು ವೈಫಲ್ಯದ ಭಯವನ್ನು ಹುಟ್ಟಿಸುತ್ತವೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗ ಅಭಿಪ್ರಾಯಿಸಿದೆ.
ಪಠ್ಯಕ್ರಮ ರಚನೆಯಲ್ಲಿ ಶಿಕ್ಷಕರು ಭಾಗವಹಿಸಲಿ
ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳ ಅಭಿವೃದ್ಧಿಯಲ್ಲಿ ಉತ್ತಮ ಕ್ರಮಗಳನ್ನು ಅನುಸರಿಸುವ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಮತ್ತು ಅವರನ್ನು ಕೊಡುಗೆ ನೀಡುವವರ ಪಟ್ಟಿಯಲ್ಲಿ ಸೇರಿಸಬೇಕು ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಸಲಹೆ ನೀಡಿದೆ.






