ಬಾಗಲಕೋಟೆ | ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕನಿಂದ ಹಲ್ಲೆ ಆರೋಪ: ಪ್ರಕರಣ ದಾಖಲು

ಬಾಗಲಕೋಟೆ : ಬುದ್ಧಿಮಾಂದ್ಯ ಬಾಲಕನ ಮೇಲೆ ಬೆಲ್ಟ್, ಪ್ಲಾಸ್ಟಿಕ್ ಪೈಪ್‌ನಿಂದ ಶಿಕ್ಷಕರೊಬ್ಬರು ಹಲ್ಲೆ ಮಾಡಿರುವ ಘಟನೆ ನವನಗರದಲ್ಲಿ ನಡೆದಿರುವುದು ವರದಿಯಾಗಿದೆ.
ನವನಗರದ ಸೆಕ್ಟರ್ ನಂ.54 ರಲ್ಲಿರುವ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ನೆಲಕ್ಕೆ ಬಿದ್ದು ಹೊರಳಾಡಿದರೂ, ದೀಪಕ್ ರಾಠೋಡ್(16) ಎಂಬ ಬಾಲಕನಿಗೆ ಶಿಕ್ಷಕ ಬಿಡದೇ ಥಳಿಸಿದ್ದಾನೆೆ ಎಂಬ ಆರೋಪ ಕೇಳಿಬಂದಿದೆ.
ಶಿಕ್ಷಕ ಅಕ್ಷಯ್ ಇಂದುಳ್ಕೂರ್ ಹಲ್ಲೆ ಮಾಡಿರುವ ಆರೋಪಿ ಎಂದು ಹೇಳಲಾಗುತ್ತಿದೆ. ಹಲ್ಲೆ ವೇಳೆ ಬಾಲಕ ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ ಸಹ ಮಾಡಿರುವ ಆರೋಪವೂ ಕೇಳಿ ಬಂದಿದೆ. ಈ ಘಟನೆಯಿಂದಾಗಿ ಬುದ್ಧಿಮಾಂದ್ಯ ಕೇಂದ್ರದ ಮುಂದೆ ಪಾಲಕರು ಜಮಾಯಿಸಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯು ಪೊಲೀಸ್ ಠಾಣೆ ಮೆಟ್ಟಲು ಏರಿದ್ದರಿಂದ ಸ್ಥಳಕ್ಕೆ ಪೊಲೀಸರು, ಆಗಮಿಸಿ ವಿಚಾರಣೆ ನಡೆಸಿದರು.
ಇಂತಹ ಘಟನೆಯಿಂದಾಗಿ ಶಾಲೆಯು ಅನಧಿಕೃತವಾಗಿ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಮಧ್ಯೆ ನಾವು ಏನು ತಪ್ಪು ಮಾಡಿಲ್ಲ, ಖಾರದ ಪುಡಿ ಎರಚಿಲ್ಲ, ಅಲ್ಲಿನ ಮಕ್ಕಳೇ ಖಾರ ಪುಡಿ ಎರಚಿದ್ದಾರೆ ಎಂದು ಶಿಕ್ಷಕ ಅಕ್ಷಯ್ ಹಾಗೂ ಪತ್ನಿ ಆನಂದಿ ಸಮಜಾಯಿಷಿ ನೀಡಿದ್ದಾರೆ.
ಈಗಾಗಲೇ ಅಕ್ಷಯ್ ಹಾಗೂ ಅವರ ಪತ್ನಿ ಆನಂದಿ ಊರ್ಫ್ ಮಾಲಿನಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ನವನಗರ ಪೊಲೀಸರು ತಿಳಿಸಿದ್ದಾರೆ.





